Friday, 22nd November 2024

ಕಂದಕಕ್ಕೆ ಬಿದ್ದ ಬೊಲೆರೋ ಕಾರು: ಒಂಬತ್ತು ಸಾವು

ಪಿಥೋರಗಢ: ಬೊಲೆರೋ ಕಾರೊಂದು 600 ಮೀಟರ್ ಆಳದ ಕಂದಕಕ್ಕೆ ಉರುಳಿ ಒಂಬತ್ತು ಮಂದಿ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ನಡೆದಿದೆ.

ಮೃತರೆಲ್ಲರೂ ಕೋಕಿಲಾ ದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದರು.

“ಬಾಗೇಶ್ವರ ಜಿಲ್ಲೆಯ ಸಾಮಾ ಗ್ರಾಮದ ಒಟ್ಟು 11 ಜನರು ಕಾರಿನಲ್ಲಿ ಮುನ್ಸಿಯಾರಿ ಬ್ಲಾಕ್‌ನ ಹೊಕ್ರಾದಲ್ಲಿರುವ ಕೋಕಿಲಾ ದೇವಿ ದೇವಸ್ಥಾನಕ್ಕೆ ಪ್ರಯಾಣಿಸುತ್ತಿದ್ದರು. ಹೊಕ್ರಾ ಸಮೀಪ ಕಾರು ಕಂದಕಕ್ಕೆ ಬಿದ್ದಿದೆ. ಇದರಿಂದ 11 ಪೈಕಿ 9 ಮಂದಿ ಮೃತಪಟ್ಟಿದ್ದಾರೆ. ಮತ್ತಿಬ್ಬರು ತೀವ್ರವಾಗಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದಾರೆ” ಎಂದು ಇನ್ಸ್‌ಪೆಕ್ಟರ್ ಜನರಲ್ (ಐಜಿ) ಕುಮಾವ್ನ್ ನಿಲೇಶ್ ಆನಂದ್ ಭರ್ನೆ ಹೇಳಿದರು.

ದುರ್ಗಮ ಕಂದಕಕ್ಕೆ ಕಾರು ಉರುಳುತ್ತಿದ್ದಾಗ ಕಾರಿನಲ್ಲಿದ್ದವರು ಜೀವಭಯದಿಂದ ಕಿರುಚಾಡಿದ್ದಾರೆ. ಸಮೀಪದ ಗ್ರಾಮಗಳ ಜನರು ತಮ್ಮ ಕೆಲಸ ಬಿಟ್ಟು ಘಟನಾ ಸ್ಥಳದೆಡೆಗೆ ಓಡಿ ಬಂದಿದ್ದಾರೆ. ಅಷ್ಟರಲ್ಲಾಗಲೇ ಕಾರು ಕಂದಕಕ್ಕೆ ಬಿದ್ದಿತ್ತು. ಮೃತದೇಹಗಳು ಕಂದಕದ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿ ಯಾಗಿರುವುದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ.

ರಸ್ತೆ ಮಧ್ಯೆ ಇಳಿಜಾರಿನ ಕಾರಣ ಚಾಲಕನಿಗೆ ಕಾರು ನಿಭಾಯಿಸಲು ಸಾಧ್ಯವಾಗದೆ ಕಮರಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ಸೂಚಿಸಿದ್ದಾರೆ.