ಚರ್ಚಾವೇದಿಕೆ
ನರೇಂದ್ರ ಎಸ್ ಗಂಗೊಳ್ಳಿ
ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು ಎನ್ನುವಾಗ ಈ ದೇಶದಲ್ಲಿ ಎಲ್ಲರಿಗೂ ಅನ್ವಯಿಸುವಂಥ ಏಕರೂಪಿ ಕಾನೂನೂ ಇರಲೇಬೇಕು. ಸಂವಿಧಾನದ ರಾಜ್ಯನೀತಿ ನಿರ್ದೇಶಕ ತತ್ತ್ವಗಳ ೪೪ನೇ ಪರಿಚ್ಛೇದದ ನಾಲ್ಕನೇ ಭಾಗವು ಇಂಥ ನೀತಿಸಂಹಿತೆಯು ಭಾರತದಾದ್ಯಂತ ಜಾರಿ ಗೊಳ್ಳಬೇಕು ಎನ್ನುವ ಖಚಿತವಾದ ಅಭಿಪ್ರಾಯವನ್ನು ಹೊಂದಿದೆ.
ಒಂದು ಸುಂದರವಾದ ಸಮಾಜದ ರಚನೆ ಎನ್ನುವುದು ಕುಲ, ನೆಲ, ಬಲ, ಜಾತಿ, ಧರ್ಮಗಳ ಹಂಗನ್ನು ಮೀರಿದ ಸಮಾನತೆಯನ್ನು ಸೌಹಾರ್ದವನ್ನು ನಿರೀಕ್ಷಿಸುತ್ತದೆ. ಅಂಥದ್ದೊಂದು ಸಮಾಜದ ನಿರ್ಮಾಣದಲ್ಲಿ ಒಂದು ದೇಶದ ನಿವಾಸಿಯಾದವನಿಗೆ ತನ್ನ ವೈಯಕ್ತಿಕ, ಧಾರ್ಮಿಕ, ಸಾಮಾಜಿಕ, ಕುಲ, ನೆಲ, ಲಿಂಗ, ಪಂಗಡ, ಆಚಾರ ವಿಚಾರಗಳಿಗಿಂತ ದೇಶದೆಡೆಗಿನ ಬದ್ಧತೆ ಮತ್ತು ತನ್ನ ತಾಯ್ನೆಲದ ನೀತಿ ನಿಯಮಗಳ ಪಾಲನೆಯೇ ಆದ್ಯತೆ ಯಾಗಬೇಕು.
ಅದು ಅವನ ಪ್ರಾಥಮಿಕ ಜವಾಬ್ದಾರಿಯೂ ಆಗಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನ ಬದ್ಧವಾದ ಸಮಾನತೆಯ ತಳಹದಿಯ ಮೇಲೆ ಶಾಂತಿಯುತ ಸಮಾಜದ ನಿರ್ಮಾಣದಲ್ಲಿ ಏಕರೂಪದ ನಾಗರಿಕ ನೀತಿಸಂಹಿತೆಯ ಜಾರಿಗೊಳಿಸುವಿಕೆ ಅಗತ್ಯವೂ ಅನಿವಾರ್ಯವೂ ಆಗಿದೆ. ಭಾರತ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಹಾಗೆಯೇ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಕೂಡ ನೀಡಿದೆ. ಆದರೆ ಅದನ್ನೇ ಆಧಾರವಾಗಿಟ್ಟುಕೊಂಡು ನಮ್ಮ ದೇಶದ ಸಂವಿಧಾನವನ್ನು ಕಡೆಗಣಿಸಿ ವಿಶೇಷವಾಗಿ ಕೌಟುಂಬಿಕ ಕಾನೂನುಗಳ ವಿಚಾರದಲ್ಲಿ ತಮ್ಮ ವೈಯಕ್ತಿಕ ಮತ್ತು ಧಾರ್ಮಿಕ ಆಚಾರ-ವಿಚಾರಗಳೇ ಮುಖ್ಯ ಎನ್ನುತ್ತಾ ಸಮಾನತೆಯ ಮತ್ತು ಸಂವಿಧಾನದ ಮೂಲಭೂತ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವಂಥ ಪ್ರಕರಣ ಗಳು ಭಾರತದಂಥ ಪ್ರಜಾಪ್ರಭುತ್ವವುಳ್ಳ ಮತ್ತು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದಲ್ಲಿ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವುದು ನಿಜಕ್ಕೂ ವಿಪ ರ್ಯಾಸಕರ ಸಂಗತಿ.
೨೦೧೯ರಲ್ಲಿ ೩೭೦ನೇ ವಿಧಿಯನ್ನು ರದ್ದು ಮಾಡುವವರೆಗೂ ನಮ್ಮ ದೇಶದ್ದೇ ಭಾಗವಾಗಿರುವ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕವಾದ ಸ್ಥಾನಮಾನ ನೀಡುತ್ತಿದ್ದುದು ಸಮಾನತೆಯ ತತ್ತ್ವಗಳಿಗೆ ವಿರುದ್ಧವಾಗಿತ್ತು ಎನ್ನುವುದು ಗಮನಾರ್ಹ. ಕ್ರಿಮಿನಲ್ ಪ್ರಕರಣಗಳನ್ನು ಹೊರತುಪಡಿಸಿ ಭಾರತ ದಲ್ಲಿ ಕೌಟುಂಬಿಕ ಪ್ರಕರಣಗಳಾದ ದಾಂಪತ್ಯ, ವಿವಾಹ ವಿಚ್ಛೇದನ, ಆಸ್ತಿ ಹಂಚಿಕೆ. ಉತ್ತರಾಧಿಕಾರತ್ವ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಇಲ್ಲಿನ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಧರ್ಮದ ಜನರಿಗೆ ಪ್ರತ್ಯೇಕವಾದ ಕಾನೂನುಗಳನ್ನು ಅನುಸರಿಸಲಾಗುತ್ತಿದೆ. ಹಾಗಾಗಿಯೇ ಸಮಾನತೆ ಎನ್ನುವುದು ಮರೀಚಿಕೆಯಾಗಿ ಸಮಾನ ನ್ಯಾಯ ಎನ್ನುವುದು ಎಲ್ಲ ವರ್ಗದವರ ಪಾಲಿಗೆ ಇವತ್ತಿಗೂ ದೊರಕುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ವೈಯಕ್ತಿಕ ಮತ್ತು ಧಾರ್ಮಿಕ ಕಾನೂನುಗಳ ಹೆಸರಿನಲ್ಲಿ ಒಂದು ವರ್ಗದ ಜನರನ್ನು ಅದರಲ್ಲೂ ವಿಶೇಷವಾಗಿ ಸ್ತ್ರೀಯರನ್ನು ನಿರಂತರವಾಗಿ ಶೋಷಣೆಗೆ ಒಳಪಡಿಸುತ್ತಲೇ ಬಂದಿರುವುದನ್ನು ಬಹಳಷ್ಟು ಗಂಭೀರವಾಗಿ ಪರಿಗಣಿಸಬೇಕಿದೆ.
ಮತಾಂತರದ ಅಸವಾಗಿಯೂ ಕೆಲವರು ಈ ಕಾನೂನುಗಳ ಬೆಂಬಲವನ್ನು ಪಡೆದುಕೊಳ್ಳುತ್ತಿರುವುದು ಕಣ್ಣಿಗೆ ಕಾಣುತ್ತಿರುವ ಸತ್ಯ. ಇಂಥ ಪ್ರತ್ಯೇಕ ವಾದ ಕಾನೂನುಗಳು ವರ್ಗ ಸಂಘರ್ಷವನ್ನು ಹುಟ್ಟುಹಾಕುವುದರ ಜತೆಗೆ ಕೋಮು ಸಂಘರ್ಷಗಳಿಗೂ ಕಾರಣವಾಗುತ್ತಿವೆ. ನ್ಯಾಯಾಲಯ ದಲ್ಲಿ ಇದಕ್ಕೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆಯೂ ತೀವ್ರಗತಿಯಲ್ಲಿ ಏರುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ದೇಶದಲ್ಲಿನ ಜನರ ಜಾತಿ, ಧರ್ಮ, ಬುಡಕಟ್ಟು, ಆಚಾರ-ವಿಚಾರಗಳ ಹೊರತಾಗಿಯೂ ಎಲ್ಲರಿಗೂ ಅನ್ವಯಿಸುವಂಥ ಒಂದೇ ವರ್ಗದ ಜಾತ್ಯತೀತ ಪೌರಕಾನೂನುಗಳನ್ನು ಆಡಳಿದಲ್ಲಿ ಜಾರಿಗೆ ತರುವ ಉದ್ದೇಶ ಹೊಂದಿರುವ ಏಕರೂಪದ ನಾಗರಿಕ ನೀತಿಸಂಹಿತೆಯನ್ನು ತರಬೇಕಾಗಿರುವುದು ಈ ದಿನದ ತುರ್ತು ಅಗತ್ಯ.
ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು ಎನ್ನುವಾಗ ಈ ದೇಶದಲ್ಲಿ ಎಲ್ಲರಿಗೂ ಅನ್ವಯಿಸುವಂಥ ಏಕರೂಪಿ ಕಾನೂನೂ ಇರಲೇಬೇಕಾದ್ದು ಎಲ್ಲರೂ ಒಪ್ಪುವಂಥ ಅಂಶ. ಸಂವಿಧಾನದ ರಾಜ್ಯನೀತಿ ನಿರ್ದೇಶಕ ತತ್ತ್ವಗಳ ೪೪ನೇ ಪರಿಚ್ಛೇದದ ನಾಲ್ಕನೇ ಭಾಗವು ಏಕರೂಪದ ನಾಗರಿಕ ನೀತಿಸಂಹಿತೆಯು ಭಾರತದಾದ್ಯಂತ ಜಾರಿಗೊಳ್ಳಬೇಕು ಎನ್ನುವ ಖಚಿತ ಅಭಿಪ್ರಾಯವನ್ನು ಹೊಂದಿದೆ. ಧಾರ್ಮಿಕ ಅಥವಾ ವೈಯಕ್ತಿಕ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಏಕರೂಪಿ ನಾಗರಿಕ ನೀತಿಸಂಹಿತೆಯನ್ನು ವಿರೋಧಿಸುವುದು ಸಮಾನತೆಯನ್ನು ವಿರೋಧಿಸಿದಂತೆ ಮತ್ತು ಅದಕ್ಕಿಂತ ಹೆಚ್ಚಾಗಿ ಸಂವಿಧಾನದ ಆಶಯವನ್ನು ವಿರೋಧಿಸಿದಂತೆ ಎನ್ನುವುದನ್ನು ಎಲ್ಲರೂ ತಿಳಿಯಬೇಕಿದೆ.
ಈ ಹಿಂದೆ ಸರಳಾ ಮುದ್ಗಲ್ ಮತ್ತು ಭಾರತ ಸರಕಾರದ ನಡುವಿನ ಪ್ರಕರಣ, ಶಾಬಾನೋ ಪ್ರಕರಣ, ೨೦೧೯ರಲ್ಲಿ ಗೋವಾದಲ್ಲಿನ ಆಸ್ತಿ ಹಂಚಿಕೆ ಪ್ರಕರಣವೊಂದರ ಸಂಬಂಧಿತ ತೀರ್ಪುಗಳು ಸೇರಿದಂತೆ ಅನೇಕ ಬಾರಿ ಇಲ್ಲಿನ ಸರ್ವೋಚ್ಚ ನ್ಯಾಯಾಲಯವನ್ನೂ ಒಳಗೊಂಡು ವಿವಿಧ ಘನತೆವೆತ್ತ
ನ್ಯಾಯಾಲಯಗಳು ಏಕರೂಪದ ನಾಗರಿಕ ನೀತಿಸಂಹಿತೆ ಯನ್ನು ಜಾರಿಮಾಡುವಂಥ ಆಶಯವನ್ನು ವ್ಯಕ್ತಪಡಿಸಿವೆ. ಹಲವು ಬಾರಿ ಸರಕಾರಗಳಿಗೆ ನಿರ್ದೇಶನವನ್ನೂ ನೀಡಿವೆ. ಈ ದೇಶದ ಬಹುಸಂಖ್ಯಾತ ಜನರು ಕೂಡ ಏಕರೂಪದ ನಾಗರಿಕ ನೀತಿಸಂಹಿತೆಯ ಪರವಾಗಿಯೇ ಇದ್ದಾರೆ. ಇಷ್ಟೆಲ್ಲಾ
ಆಶಯಗಳ ನಡುವೆಯೂ ಈ ನೀತಿಸಂಹಿತೆಯನ್ನು ಜಾರಿಗೆ ತರುವ ವಿಪುಲ ಅವಕಾಶಗಳು ತಾವಾಗಿಯೇ ಒದಗಿಬಂದ ಸಂದರ್ಭದಲ್ಲೂ ನಮ್ಮ ಹಿಂದಿನ ಸರಕಾರಗಳು ಈ ಬಗೆಗೆ ಯಾವುದೇ ಕಾಳಜಿಯನ್ನು ತೋರದೆ ಒಂದು ವರ್ಗದ, ಕೋಮಿನ ಜನರನ್ನು ಒಲೈಸುವಲ್ಲಿ ನಿರತವಾಗಿದ್ದುದು ಖಂಡನೀಯ ಸಂಗತಿ.
ಏಕರೂಪದ ನಾಗರಿಕ ನೀತಿಸಂಹಿತೆ ಜಾರಿಯಲ್ಲಿರುವ ನಮ್ಮ ದೇಶದ ಏಕಮಾತ್ರ ರಾಜ್ಯವಾದ ಗೋವಾವನ್ನು ಮಾದರಿಯಾಗಿ ತೆಗೆದುಕೊಂಡು ಈ ತೆರನಾದ ಸಂಹಿತೆಯ ಪ್ರಯೋಜನಗಳನ್ನು ಮಾರ್ಗದರ್ಶನದ ರೂಪ ದಲ್ಲಿ ಖಂಡಿತ ಅವಲೋಕಿಸಬಹುದಾಗಿದೆ. ನಮ್ಮಲ್ಲಿನ ಹಿಂದಿನ ಹಲವು ಸರಕಾರಗಳು ಬ್ರಿಟಿಷರು ಅನುಸರಿಸಿದ ಒಡೆದು ಆಳುವ ನೀತಿಯ ಮಾನಸಿಕತೆ ಹೊಂದಿದ್ದುದು, ಸ್ವಹಿತಾಸಕ್ತಿಯ ದೃಷ್ಟಿಕೋನದಿಂದ ಧಾರ್ಮಿಕ ಮತ್ತು ವೈಯಕ್ತಿಕ ಕಾನೂನುಗಳನ್ನು ಬಳಸಿಕೊಳ್ಳುವ ನಮ್ಮ ನಡುವಿನ ದುರ್ಮಾರ್ಗಿಗಳ ಪ್ರಯತ್ನ, ಧಾರ್ಮಿಕತೆಯ ಹೆಸರಿನಲ್ಲಿ ಇನ್ನೂ ಹಳೆಯ ಕಂದಾಚಾರದ ಅವೈಜ್ಞಾನಿಕ ಸಂಪ್ರದಾಯ ಗಳಿಗೆ ಬದ್ಧರಾಗಿರುವ ಮತ್ತು ದೇಶಕ್ಕಿಂತ ತಮ್ಮ ಧಾರ್ಮಿಕ ಆಚಾರ-ವಿಚಾರಗಳೇ ಮುಖ್ಯ ಎಂದು ನಂಬಿರುವ ಹಾಗೂ ಬದಲಾವಣೆಯನ್ನು ವಿರೋಧಿಸುವ ನಿರ್ದಿಷ್ಟ ಸಮುದಾಯದ ಜನರ ಕೆಳಮಟ್ಟದ ಮನಸ್ಥಿತಿ, ಏಕರೂಪದ ನಾಗರಿಕ ನೀತಿ ಸಂಹಿತೆಯಂಥ ಅಗತ್ಯ ಕಾನೂನುಗಳನ್ನು ಕೂಡ ಯಾವುದೋ ಧರ್ಮದೊಂದಿಗೆ ತಳುಕುಹಾಕಿ ನೋಡಿ ವಿರೋಧಿಸುವ ಹಲವರ ಕೀಳುಮಟ್ಟದ ಮನಸ್ಥಿತಿ ಇವೇ ಮೊದಲಾದ ಕಾರಣಗಳಿಂದಾಗಿ ನಮ್ಮ ದೇಶದಲ್ಲಿ ಈವರೆಗೂ ಈ ನೀತಿಸಂಹಿತೆಯನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ.
ಈ ದೇಶದ ಪ್ರತಿಯೊಬ್ಬ ನಾಗರಿಕನೂ ಎಚ್ಚೆತ್ತುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಜಾತಿ-ಧರ್ಮ, ಆಚಾರ-ವಿಚಾರ, ಕುಲ-ನೆಲೆಗಳನ್ನೂ ಮೀರಿ ಇಡೀ ದೇಶದ ಜನರನ್ನು ಒಂದೇ ರೀತಿಯ ನ್ಯಾಯಾಂಗ ವ್ಯವಸ್ಥೆಯಡಿ ತರುವ ಕೆಲಸ ಮೊದಲಾಗಬೇಕಿದೆ. ಹಾಗಾದಾಗ ಮಾತ್ರ ಸಮಾನತೆ,
ಸೌಹಾರ್ದ ಎಂಬ ಪರಿಭಾಷೆಗಳಿಗೆ ನಿಜವಾದ ಅರ್ಥ ಬರುತ್ತದೆ. ಧಾರ್ಮಿಕ ಮತ್ತು ವೈಯಕ್ತಿಕ ಕಾನೂನುಗಳ ಹೆಸರಿನಲ್ಲಿ ನಡೆಯುತ್ತಿರುವಂಥ ಶೋಷಣೆ, ವರ್ಗ ಸಂಘರ್ಷ ಎಲ್ಲವನ್ನೂ ತಹ ಬಂದಿಗೆ ತರಲು ಖಂಡಿತಾ ಏಕರೂಪದ ನಾಗರಿಕ ನೀತಿ ಸಂಹಿತೆಯ ಜಾರಿಯಿಂದ ಸಾಧ್ಯವಾಗುತ್ತದೆ.
ದೇಶದ ವಿವಿಧ ಜನರಿಗೆ ಸೇರಿದ ಕೌಟುಂಬಿಕ ಸಮಸ್ಯೆಗಳನ್ನು ಕೂಡ ಈ ನೀತಿಸಂಹಿತೆಯ ಅಡಿಯಲ್ಲಿ ಕ್ಷಿಪ್ರವಾಗಿ ಇತ್ಯರ್ಥಪಡಿಸಲು ಸಾಧ್ಯವಾಗು
ತ್ತದೆ. ‘ಒಂದು ದೇಶ ಒಂದು ಕಾನೂನು’ ಎನ್ನುವುದು ನ್ಯಾಯಾಲಯದಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸುವುದರಲ್ಲಿ ಅನುಮಾನವಿಲ್ಲ. ಒಟ್ಟಿನಲ್ಲಿ ನಮ್ಮ ಭಾರತ ದೇಶದ ಅಖಂಡತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವಲ್ಲಿ ಏಕರೂಪದ ನಾಗರಿಕ ನೀತಿಸಂಹಿತೆ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎನ್ನುವುದು ನಿರ್ವಿವಾದದ ಸಂಗತಿ.
೨೦೧೪ರಿಂದ ನರೇಂದ್ರ ಮೋದಿಯವರ ಅತ್ಯಂತ ಸಮರ್ಥವಾದ ನಾಯಕತ್ವದಡಿಯಲ್ಲಿ ನಮ್ಮ ಭಾರತ ಹೊಸ ಹೊಳಹುಗಳಿಗೆ ತೆರೆದುಕೊಳ್ಳು ತ್ತಿರುವಂಥ ಈ ಕಾಲಘಟ್ಟದಲ್ಲಿ ಯಾವುದೇ ವಿಧ್ವಂಸಕರ, ದೇಶದ್ರೋಹಿಗಳ ಕುಟಿಲತನಕ್ಕೆ ಬಗ್ಗದೆ ಈ ನೀತಿಸಂಹಿತೆಯ ಜಾರಿಯಾಗುವಂಥ ಮಹೋನ್ನತ ಕ್ಷಣಗಳಿಗೆ ಸಾಕ್ಷಿಯಾಗುವ ಆಶಯದಲ್ಲಿದ್ದಾರೆ ರಾಷ್ಟ್ರಭಕ್ತ ಜನರು. ಅವರ ಇಂಥ ನಿರೀಕ್ಷೆಗಳು ಶೀಘ್ರ ಈಡೇರಲಿ ಎನ್ನುವುದು ಹಾರೈಕೆ.