ವಿಚಾರ ವೇದಿಕೆ
ಪ್ರೊ.ಆರ್.ಜಿ.ಹೆಗಡೆ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಯಶಸ್ಸಿನ ನಂತರ ಪಕ್ಷಗಳು ‘ಫ್ರೀಬೀ’ಯನ್ನು ಸಾಮಾಜಿಕ ಬದಲಾವಣೆಯ ಸಾಧನವಾಗಿ ನೋಡದೆ, ಮಕ್ಕಳನ್ನು ಖುಷಿಪಡಿಸಲು ಚಾಕೊಲೇಟ್ ನೀಡುವಂತೆ ಒಂದಕ್ಕಿಂತ ಮುಂದೆ ಇನ್ನೊಂದು ಹೋಗಿ ಘೋಷಿಸಿಬಿಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ‘ಫ್ರೀಬೀ’ ವಿಷಯದಲ್ಲಿ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವ ಅಗತ್ಯವಿದೆ.
ಮೊಟ್ಟಮೊದಲಿಗೆ ಒಂದು ಮಾತು. ‘ಫ್ರೀಬೀ’ಗಳನ್ನು ಅಂದರೆ ಉಚಿತ ಕೊಡುಗೆಗಳನ್ನು ನಾವು ಹಾಸ್ಯಮಾಡ ಬಾರದು. ‘ಬಿಟ್ಟಿ ನೀಡುವಿಕೆ’ ಇತ್ಯಾದಿ ಪರಿಭಾಷೆಯನ್ನು ಬಳಸಬಾರದು. ಬಡತನ ಮತ್ತು ಅಸಹಾಯಕತೆಯ ಕುರಿತು ಅಪಹಾಸ್ಯ ಕೂಡದು, ಹಾಗೆ ಮಾಡುವುದು ಅಮಾನವೀಯತೆ.
ಅರವತ್ತರ, ಅದರ ಹಿಂದಿನ ದಶಕಗಳಲ್ಲಿ ಹಳ್ಳಿಗಳಲ್ಲಿ ಹುಟ್ಟಿದ ಹೆಚ್ಚು-ಕಡಿಮೆ ಎಲ್ಲರಿಗೂ ಬಡತನದ ರುಚಿ ಗೊತ್ತಿದೆ.
ಹೊತ್ತು ಹೊತ್ತಿಗೆ ತುತ್ತಿನ ಕೂಳು ಇಲ್ಲದ, ತಲೆಯ ಮೇಲೆ ಸೂರು ಇರದ, ಕಾಲಿಗೆ ಚಪ್ಪಲಿ ಕೊಳ್ಳಲು, ಹೆಣ್ಣು ಮಕ್ಕಳಿಗೆ ಮೈಮುಚ್ಚುವಂಥ ಬಟ್ಟೆಗಳನ್ನು ಖರೀದಿಸಲು ಕೂಡ ಸಾಧ್ಯವಾಗ ದಿದ್ದಂಥ ಘೋರ ಬಡತನ ಅದಾಗಿತ್ತು. ಅಂಥ ತೀವ್ರ ಬಡತನ ಇಂದು ಇರಲಿಕ್ಕಿಲ್ಲ. ಆದರೆ ಬಡತನವಂತೂ ಇದೆ. ಇಂಥ ಸಂಕಷ್ಟದಿಂದ ಜನರನ್ನು ಹೊರಗೆ ತಂದು ಅವರಿಗೆ ಗೌರವಯುತ ಬದುಕು ದೊರೆಯುವಂತೆ ಮಾಡಬೇಕಾದ್ದು ನಮ್ಮ ಆದ್ಯ ಕರ್ತವ್ಯ. ಅದನ್ನು ಮಾಡಲೇಬೇಕು. ಏಕೆಂದರೆ ದೇಶದ ಮೊದಲ ಗುರಿಯೇ ಜನರ ಕಲ್ಯಾಣ. ಅದೇ ನೈತಿಕತೆ.
ಹಾಗೆಯೇ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಬಡತನದ ಕೂಪದಿಂದ ಬಡವರನ್ನು ಹೊರತರುವುದು ಸಾಮಾಜಿಕ ಮತ್ತು ಆರ್ಥಿಕ ಜಾಣತನ ಕೂಡ. ಸಾಮಾಜಿಕ ಸ್ಥಿರತೆಯ ಸೂತ್ರ ಅದು. ಸುತ್ತಮುತ್ತ ತೀವ್ರ ಬಡತನ ಇಟ್ಟುಕೊಂಡು ಯಾವ ಶ್ರೀಮಂತನೂ ಸುಖದಿಂದ ಬಾಳಲಾಗುವುದಿಲ್ಲ. ಫ್ರೆಂಚ್ ಮತ್ತು ರಷ್ಯನ್ ಕ್ರಾಂತಿಯ ಸಂದರ್ಭಗಳಲ್ಲಿ ಶ್ರೀಮಂತರ ವಿರುದ್ಧ ಎಂಥ ಹಿಂಸೆ ನಡೆಯಿತು ಎಂಬುದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ, ಇಲ್ಲಿ ಇನ್ನೊಂದು ಮುಖ್ಯ ವಿಷಯವಿದೆ. ಇಂದಿನ ‘ಮಾರುಕಟ್ಟೆ ಆರ್ಥಿಕತೆ’ಯಲ್ಲಿ ಅಭಿವೃದ್ಧಿಯಾಗಬೇಕೆಂದರೆ ಜನರು ಖರೀದಿಸಬೇಕು. ಸಾಧಾರಣ ಜನರಿಗೆ ಕೊಳ್ಳುವ ಸಾಮರ್ಥ್ಯ ಬಂದರೆ, ಬಂದಷ್ಟು ಮಾತ್ರ ‘ಸಪ್ಲೈ ಚೈನ್’ ಅಭಿವೃದ್ಧಿಯಾಗುವುದು. ಸರಪಳಿಯ ಭಾಗವಾಗಿ ಜನರಿಗೆ ಉದ್ಯೋಗ ಸಿಗುವುದು. ಹಣದ ಹಂಚಿಕೆಯಾಗಿ ಜನರು ಬಡತನ ದಿಂದ ಹೊರಬರುವರು.
ಜನರು ಬಡತನದ ಕೂಪದಿಂದ ಹೊರಬರತೊಡಗಿ ತಮ್ಮ ಎರಡನೆಯ ಮೂರನೆಯ ಹಂತದ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುತ್ತ ಹೋದಂತೆ, ಅಂದರೆ ಐಷಾರಾಮಿ ವಸ್ತುಗಳನ್ನು ಕೊಳ್ಳಲಾರಂಭಿಸಿದಂತೆ ಮಾರುಕಟ್ಟೆ ವಿಶಾಲವಾಗುತ್ತದೆ. ಹೆಚ್ಚಿನ ದರದ ವಸ್ತುಗಳಿಗೆ ಬೇಡಿಕೆ ಸೃಷ್ಟಿಯಾಗುತ್ತದೆ. ಅವುಗಳ ಮಾರಾಟವಾಗಿ ಸರಕಾರಕ್ಕೂ ಲಾಭ ತರುತ್ತದೆ. ಸರಕು ಮತ್ತು ಸೇವಾತೆರಿಗೆ (ಜಿಎಸ್ಟಿ) ಸಂಗ್ರಹವಾಗಿ ಸರಕಾರಗಳು ಶ್ರೀಮಂತ ವಾಗುತ್ತವೆ. ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚು ಹಣವನ್ನು ತೊಡಗಿಸಲು ಸಾಧ್ಯವಾಗುತ್ತದೆ.
ಹೆಚ್ಚು ಜನರಿಗೆ ಕೆಲಸ ಸಿಗುತ್ತದೆ ಮತ್ತು ಅವರು ಮತ್ತೆ ಹೆಚ್ಚು ಖರ್ಚು ಮಾಡುತ್ತಾರೆ. ಇದರಿಂದಾಗಿ ಆರ್ಥಿಕತೆಯ ಅಭಿವೃದ್ಧಿಯಾಗುತ್ತದೆ. ಇದು ಇಂದಿನ ಆರ್ಥಿಕ ನೀತಿ. ಈ ನೀತಿಯು ವಾಸ್ತವದಲ್ಲಿ, ಚೀನಾ ಮತ್ತು ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ (ಮಾರ್ಕ್ಸ್ವಾದಿ ಸಿದ್ಧಾಂತ ಮತ್ತು ಪರಿಪಾಲನೆಗಿಂತಲೂ ಹೆಚ್ಚು ಪ್ರಮಾಣದಲ್ಲಿ) ನೂರಾರು ಕೋಟಿ ಜನರನ್ನು ಬಡತನದ ಕೂಪದಿಂದ ಹೊರತಂದಿದೆ. ಬಡವರ ಕೈಯಲ್ಲಿ ದುಡ್ಡುಕೊಟ್ಟು ಖರ್ಚು ಮಾಡುವಂತೆ ಪ್ರೇರೇಪಿಸುವುದು ಮಾರುಕಟ್ಟೆ ಆರ್ಥಿಕತೆಯ ಭಾಗ. ಈ ಕಾರಣದಿಂದ ನಾವು ‘ಫ್ರೀಬೀ’ಗಳನ್ನು ಹಾಸ್ಯ ಮಾಡಬಾರದು.
ಇನ್ನೊಂದು ಆಯಾಮದಲ್ಲಿ ಕೂಡ ‘ಫ್ರೀಬೀ’ಗಳಿಗೆ ದೊಡ್ಡ ಮಹತ್ವ ಇದೆ. ಅವು ಬೇಕಿರುವುದು ಬಡವರ ಜೀವನೋಪಾಯದ ಅಗತ್ಯಗಳನ್ನು ಪೂರೈಸಲು ಮಾತ್ರವೇ ಅಲ್ಲ; ಅವರ ಕಲ್ಪನೆಗಳನ್ನು ವಿಸ್ತರಿಸಿ, ಅವರ ಮನಸ್ಸಿನಲ್ಲಿ ಹೊಸ ಹೊಂಗಿರಣಗಳನ್ನು, ಆಸೆ- ಅಭಿಲಾಷೆಗಳನ್ನು ಸೃಷ್ಟಿಸಲು ಕೂಡ ಅವು ಬೇಕು. ತೀವ್ರ ಬಡತನದಲ್ಲಿದ್ದ ಜನರಿಗೆ ಇಂದಿರಾ ಗಾಂಧಿಯವರು ಎಪ್ಪತ್ತರ ದಶಕದಲ್ಲಿ ಸ್ಟೀಲ್ ಪಾತ್ರೆಗಳನ್ನು ನೀಡಿದ್ದರು. ಮನೆಗಳ ಮೂಲೆಗಳನ್ನು ಝಗಝಗಿಸುವಂತೆ ಮಾಡಿದ್ದ ಈ ಪಾತ್ರೆಗಳು ಅವರಿಗೆ ಜೀವನದಲ್ಲಿ ದೊಡ್ಡ ಆಸೆಗಳನ್ನು ಹುಟ್ಟಿಸಿಬಿಟ್ಟಿದ್ದವು.
ಕನಸಿನ ಲೋಕವೊಂದನ್ನು ತೆರೆದಿದ್ದವು. ಅವರ ಜೀವನಕ್ಕೊಂದು ಹೊಸ ಮೋಟಿವೇಷನ್ ಮತ್ತು ಅರ್ಥವನ್ನು ಹುಟ್ಟುಹಾಕಿದ್ದವು. ಹಾಗೆಯೇ ಅವರ ಗುಡಿಸಲುಗಳಲ್ಲಿ ಅಂದು ತೂಗಾಡಿದ ಒಂದು ‘ಭಾಗ್ಯಜ್ಯೋತಿ ಬಲ್ಬ್’, ನಿಜಕ್ಕೂ ಭಾಗ್ಯದ ಬಾಗಿಲನ್ನು ತೆರೆದಿದ್ದು ಹೌದು. ಅಂಥ ಬಡವರಲ್ಲಿ ಹಲವರು ನಂತರ ಕಷ್ಟಪಟ್ಟು ಕಲಿತರು, ದುಡಿದು ಮೇಲೆ ಬಂದರು. ‘ಫ್ರೀಬೀ’ಗಳು ದೇಶದ ಹಳ್ಳಿಗಳ, ಲಕ್ಷಾಂತರ ಜನರ ಹಣೆಬರಹಗಳನ್ನೇ ಬದಲಿಸಿಬಿಟ್ಟಿ
ರುವುದಕ್ಕೆ ಇವು ಒಂದೆರಡು ಸಾಕ್ಷಿಗಳಷ್ಟೇ.
ಹೀಗಾಗಿ, ಕರ್ನಾಟಕ ಸರಕಾರವು ಇತ್ತೀಚೆಗೆ ಜಾರಿಗೆ ತಂದಿರುವ ‘ಉಚಿತ’ ಯೋಜನೆಗಳನ್ನು ನಾವು ಒಂದು ವಿಶಾಲ ದೃಷ್ಟಿಕೋನದಿಂದ ನೋಡಬೇಕೇ ವಿನಾ, ಅವನ್ನು ಸಾರಾಸಗಟಾಗಿ ಹಾಸ್ಯಮಾಡಬಾರದು. ಉದಾಹರಣೆಗೆ, ಅನುದಿನದ ದುಡಿಮೆಯ ಹೆಚ್ಚಿನ ಭಾಗವನ್ನು ಬಸ್ಸಿನ ಖರ್ಚಿಗೇ ವಿನಿಯೋಗಿಸುತ್ತಿದ್ದ ಮಹಿಳೆಯರ ಬದುಕನ್ನು ‘ಶಕ್ತಿ’ ಯೋಜನೆ ಬದಲಿಸಿದೆ. ಬಿ.ಪಿ. ಗುಳಿಗೆ ತೆಗೆದುಕೊಳ್ಳಲು ಕೂಡ ದುಡ್ಡಿಲ್ಲದ ಮಹಿಳೆ ಯರಿಗೆ, ತಿಂಗಳಿಗೆ ಎರಡು ಸಾವಿರ ರುಪಾಯಿ ನೀಡುವ ‘ಭಾಗ್ಯಲಕ್ಷ್ಮಿ’ ಯೋಜನೆ ಖಂಡಿತ ಸಹಾಯ ಮಾಡುತ್ತದೆ. ಸದಾ ಆರ್ಥಿಕ ಬಿಕ್ಕಟ್ಟಿನಲ್ಲಿಯೇ ಬದುಕುವ ಬಡವರಿಗೆ ತಲಾ ೧೦ ಕೆ.ಜಿ. ಅಕ್ಕಿಯು ದೊಡ್ಡ ಪ್ರಮಾಣದಲ್ಲಿ ಮಾನಸಿಕ ತಲ್ಲಣದಿಂದ ಬಿಡುಗಡೆ ಮಾಡಬಲ್ಲದು. ಊಟ ಮಾಡಿ ಹೆಚ್ಚು ಉಳಿದ(ರೆ) ನಾಲ್ಕಾರು ಕೆ.ಜಿ. ಅಕ್ಕಿಯನ್ನು ಮಾರಾಟ ಮಾಡಿ ಹಣ ಪಡೆದುಕೊಳ್ಳುತ್ತಾರೆ ಎಂದು ಕೂಡ ಇಟ್ಟುಕೊಳ್ಳಿ. ಮಾರಲಿ ಬಿಡಿ! ಕೈಯಲ್ಲಿ ಓಡಾಡುವ ನಾಲ್ಕು ಹೆಚ್ಚುವರಿ ಕಾಸು ಅವರ ಜೀವನದಲ್ಲಿ ಉತ್ಸಾಹ ತುಂಬಿಬಿಡಬಹುದು.
ಅಂಥ ಉತ್ಸಾಹಕ್ಕೆ ಆ ಕುಟುಂಬಗಳ ಶಿಕ್ಷಣ, ಮಾನಸಿಕ-ದೈಹಿಕ ಆರೋಗ್ಯ ಇತ್ಯಾದಿಗಳನ್ನು ಸಂಪೂರ್ಣವಾಗಿ ಬದಲಾಯಿಸಿಬಿಡುವ ಶಕ್ತಿಯಿದೆ. ದಟ್ಟವಾದ ಮಾನಸಿಕ ಖಿನ್ನತೆಯಿಂದ ಅವರನ್ನು ಅದು ಹೊರಗೆ ತಂದುಬಿಡಬಹುದು. ಹಾಗೆಯೇ ‘ಸ್ಟೈಫಂಡ್’ ಎಂಬುದು ಪದವೀಧರ ನಿರುದ್ಯೋಗಿ
ಗಳಲ್ಲಿ ಹೊಸ ಉತ್ಸಾಹ, ಆತ್ಮವಿಶ್ವಾಸವನ್ನು ತುಂಬಿಬಿಡಬಹುದು. ಈ ಕಾರಣಗಳಿಂದ ನಾವು ಸದರಿ ‘ಗ್ಯಾರಂಟಿ’ಗಳನ್ನು, ‘ಫ್ರೀಬೀ’ಗಳನ್ನು ಸಾರಾಸಗಟಾಗಿ ಹಾಸ್ಯಮಾಡುವುದು ಬೇಡ.
ಆದರೆ ಸಮಸ್ಯೆ ಬರುವುದು ಎಲ್ಲಿ ಗೊತ್ತೇ? ‘ಫ್ರೀಬೀ’ ನೀಡುವಿಕೆಯನ್ನು ನಾವು ಒಂದು ವಿವೇಕಪೂರ್ಣ ರಾಷ್ಟ್ರೀಯ ನೀತಿಯ ಭಾಗವಾಗಿಸದೆ, ಕೇವಲ ಒಂದು ರಾಜಕೀಯ ಕಾರ್ಯ ಸೂಚಿಯ ಅಂಗವಾಗಿ ಬಳಸಿದಾಗ. ಅತಿಯಾದ ಸಮಾಜವಾದ ಅಪಾಯಕಾರಿ. ಅದು ಆರ್ಥಿಕ ಅಶಿಸ್ತಿಗೆ ಎಡೆಮಾಡಿ ಕೊಡುತ್ತದೆ. ಸೋವಿಯತ್ ಒಕ್ಕೂಟದ ಕಥೆ ಏನಾಯಿತು ನೆನಪಿಸಿಕೊಳ್ಳಿ. ಆರ್ಥಿಕ ಅಶಿಸ್ತಿನಿಂದಾಗಿ ಇಂದು ಪಾಕಿಸ್ತಾನ ಮತ್ತು ಶ್ರೀಲಂಕಾ
ದೇಶಗಳಿಗೆ ಏನಾಗಿದೆ ನೋಡಿ! ಹಾಗಾಗಿ ನಾವು ಎಚ್ಚರದಿಂದಿರಬೇಕು ಹಾಗೂ ಮೇಲೆ ಉಲ್ಲೇಖಿಸಿದ ಅಂಶಗಳ ಹಿನ್ನೆಲೆಯಲ್ಲಿ ಪಕ್ಷಗಳು ತಮ್ಮ ರಾಜಕೀಯ ಒತ್ತಡಗಳನ್ನು ಬದಿಗಿಟ್ಟು ‘ಫ್ರೀಬೀ’ ಕುರಿತಾದ ರಾಷ್ಟ್ರೀಯ ಸಾಮಾಜಿಕ, ಆರ್ಥಿಕ ನೀತಿಯನ್ನು ರೂಪಿಸಬೇಕಿದೆ.
ಈ ನಿಟ್ಟಿನಲ್ಲಿ ಮುಖ್ಯವಾಗಿ ಈ ಕೆಳಗಿನ ಅಂಶಗಳನ್ನು ಮರುವ್ಯಾಖ್ಯಾನಿಸಿ, ಮರುಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಬೇಕಿದೆ: ೧. ಬಡತನ ರೇಖೆಗಿಂತ ಕೆಳಗಿರುವಿಕೆ (ಬಿಪಿಎಲ್) ಎಂದರೇನು? ಸಮಕಾಲೀನವಾಗಿ/ವಾರ್ಷಿಕವಾಗಿ ಎಷ್ಟು ಉತ್ಪನ್ನ ಹೊಂದಿರುವರನ್ನು ಬಡತನದ ರೇಖೆಯ ಕೆಳಗಿನವರು ಎಂದು ಗುರುತಿಸಬೇಕು? ಇಂಥ ವ್ಯವಸ್ಥೆ ನಿರೂಪಿಸುವುದು ಬಹಳ ಕಷ್ಟವೇನಲ್ಲ. ಇದಕ್ಕೆ ಬೇಕಾಗುವ ದತ್ತಾಂಶಗಳು ನಮ್ಮ ಆರ್ಥಿಕ, ಸಾಮಾಜಿಕ ಜನಗಣತಿಗಳಲ್ಲಿವೆ. ಅವನ್ನು ಸಮರ್ಪಕವಾಗಿ ಬಳಸಿದರೆ ಬಿಪಿಎಲ್ ಅನ್ನು ವ್ಯಾಖ್ಯಾನಿಸುವುದು ಬಹಳ ಕಷ್ಟವೇನಲ್ಲ.
೨. ಬಿಪಿಎಲ್ ಕಾರ್ಡ್ ನೀಡುವಾಗ ಸೋರಿಕೆಯಾಗದ ರೀತಿಯಲ್ಲಿ ಯಾವ ರೀತಿಯ ಕಟ್ಟುನಿಟ್ಟಾದ, ಗಟ್ಟಿಮುಟ್ಟಾದ, ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಬೇಕು? ಹೇಗೆ ರೂಪಿಸಬೇಕು? ಬಿಪಿಎಲ್ ವ್ಯಾಖ್ಯಾನ ಮಾಡಿ ಪಟ್ಟಿ ಪರಿಷ್ಕರಿಸಿಕೊಂಡರೆ, ‘ಫ್ರೀಬೀ’ಗಳನ್ನು ಜವಾಬ್ದಾರಿಯುತವಾಗಿ ಕೊಡುವ
ವಿಷಯದಲ್ಲಿನ ನಮ್ಮ ಕಾರ್ಯಭಾರ ಅರ್ಧ ಮುಗಿದ ಹಾಗೆ.
೩. ಎಂಥವನ್ನು ‘ಫ್ರೀಬೀ’ಗಳೆಂದು ಕೊಡಬೇಕು? ಎಂಬುದು ಮುಂದಿನ ಪ್ರಶ್ನೆ. ಇಲ್ಲಿ ಸ್ಪಷ್ಟವಾಗಿ ಹೇಳುವುದಾದರೆ, ‘ಫ್ರೀಬೀ’ ಗಳು ಜೀವನೋ ಪಾಯಕ್ಕೆ ಸಂಬಂಧಿಸಿರಬೇಕು, ಐಷಾರಾಮಿ ವಸ್ತುಗಳನ್ನು ನೀಡುವಂತಾಗಬಾರದು. ಉದಾಹರಣೆಗೆ, ೨೦-೨೫ ಕಿ.ಮೀ. ವ್ಯಾಪ್ತಿಯಲ್ಲಿ ಉಚಿತ ಸಾರಿಗೆ ಸೌಲಭ್ಯವನ್ನು ನೀಡಬಹುದೇ ಹೊರತು, ಬೆಂಗಳೂರಿನಿಂದ ಬೀದರ್ವರೆಗಿನ ಪ್ರಯಾಣಕ್ಕೆ ಈ ಸೌಲಭ್ಯವನ್ನು ನೀಡುವಂತಾಗ ಬಾರದು. ಹಸಿರು ಕಾರ್ಡ್ಗೆ ೧೦೦ ಯುನಿಟ್ನಷ್ಟು ವಿದ್ಯುತ್ ಅನ್ನು ಉಚಿತವಾಗಿ ನೀಡಬಹುದೇ ಹೊರತು, ೨೦೦ ಯುನಿಟ್ ಅಲ್ಲ.
೪. ಬಿಪಿಎಲ್ ಸ್ತರದಿಂದ ತುಸುವೇ ಮೇಲಿರುವ ಬಡವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಹೇಗೆ? ಎಂಬ ಮತ್ತೊಂದು ಪ್ರಶ್ನೆ ಇಲ್ಲಿ ಉದ್ಭವಿಸಬಹುದು. ಅದಕ್ಕಾಗಿ ನಾವು ‘ಹಳದಿ ಕಾರ್ಡ್’ ರೂಪಿಸಬಹುದು. ಈ ವರ್ಗಕ್ಕೆ ಸೇರುವವರು ಕಡುಬಡವರಲ್ಲ, ಹಾಗಂತ ಶ್ರೀಮಂತರೂ ಅಲ್ಲ. ಬಿಪಿಎಲ್ ಕಾರ್ಡುದಾರರಿಗೆ ನೀಡುವ ಸೌಲಭ್ಯದ ಅರ್ಧದಷ್ಟನ್ನು ಇವರಿಗೆ ಉಚಿತವಾಗಿ ನೀಡಬಹುದು.
೫. ತೆರಿಗೆ ಪಾವತಿಸುವ ವರ್ಗಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ. ಅವರು ದೇಶದ್ರೋಹಿಗಳಲ್ಲ. ಹಾಗಾಗಿ, ಅವರು ಕಷ್ಟಪಟ್ಟು ಗಳಿಸಿ ತೆರಿಗೆ ಯಾಗಿ ಪಾವತಿಸಿದ್ದನ್ನು ಎಗರಿಸಿ ಬಡವರಿಗೆ ಹಂಚುತ್ತೇವೆ ಎನ್ನುವುದು ಸರಿಯಲ್ಲ. ಬಹುಶಃ ಈ ದಿಸೆಯಲ್ಲಿ ಇನ್ನೂ ಎರಡು ಆರ್ಥಿಕ ವರ್ಗಗಳನ್ನು, ಅಂದರೆ ಅನುಕೂಲಸ್ಥ ಮತ್ತು ಶ್ರೀಮಂತ ಎಂಬ ಸ್ತರದ ಕಾರ್ಡುಗಳನ್ನು (ಸದ್ಯಕ್ಕೆ ಕೆಂಪು ಮತ್ತು ನೀಲಿ ಎಂದು
ಕರೆಯೋಣ) ಸೃಷ್ಟಿಸಬಹುದು. ಇವರು ಕಡಿಮೆ ಮತ್ತು ಹೆಚ್ಚು ತೆರಿಗೆ ಪಾವತಿದಾರರ ವರ್ಗಕ್ಕೆ ಸೇರುವವರು. ಗಮನಿಸಿ, ಈ ಎರಡೂ ವರ್ಗಗಳು ಸರಕಾರಕ್ಕೆ ೩ ರೀತಿಯ ತೆರಿಗೆ ನೀಡುತ್ತಿವೆ.
ಅವೆಂದರೆ, ಪ್ರತ್ಯಕ್ಷ ತೆರಿಗೆ, ಪರೋಕ್ಷ ತೆರಿಗೆ ಮತ್ತು ಉಳಿತಾಯದ ಮೇಲಿನ ತೆರಿಗೆ. ಈ ವರ್ಗದವರ ದುಡಿತದ ಶೇ. ೬೦ರಷ್ಟು ಭಾಗ ತೆರಿಗೆಯ ರೂಪದಲ್ಲಿ ಸರಕಾರಕ್ಕೆ ಮರಳಿ ಬರುತ್ತದೆ. ಬಹುಶಃ ಈ ವರ್ಗಗಳನ್ನು ಗೌರವಿಸುವ ವಿಧಾನವೆಂದರೆ, ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಆರೋಗ್ಯ ರಕ್ಷಣೆಗಾಗಿ ಅವರಿಗೆ ವಿಶೇಷ ರಿಯಾಯತಿ ಗಳನ್ನು ಸೃಷ್ಟಿಸುವುದು.
‘ಫ್ರೀಬೀ’ಗಳನ್ನು ನೀಡುವ ವಿಚಾರದಲ್ಲಿ ನಾವು ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಮುಖ್ಯವಾಗಿ, ಫಲಾನುಭವಿಗಳು ಯಾರು? ಅವರಿಗೆ ನಿಜಕ್ಕೂ ಸಹಾಯದ ಅಗತ್ಯವಿದೆಯೇ? ಏನು, ಎಷ್ಟು ಮತ್ತು ಯಾಕೆ ಕೊಡಬೇಕು? ಎಷ್ಟು ಕಾಲಾವಧಿವರೆಗೆ? ಇತ್ಯಾದಿ. ಇಂದು ಎದುರಾಗಿರುವ ಸಮಸ್ಯೆ ಯೆಂದರೆ, ಫಲಾನುಭವಿಗಳನ್ನು ಗುರುತಿಸುವ ವ್ಯವಸ್ಥೆಗಳು ಕುಸಿದುಹೋಗಿ, ‘ಫ್ರೀಬೀ’ಗಳು ಯಕ್ಷಗಾನ ಬಯಲಾಟದಂತೆ ಪುಕ್ಕಟೆಯಾಗಿ ಬಿಟ್ಟಿರುವುದು.
ಲಭ್ಯ ಮಾಹಿತಿಯ ಪ್ರಕಾರ, ರಾಜ್ಯದ ಸುಮಾರು ಶೇ.೭೦ರಿಂದ ೮೦ರಷ್ಟು ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿರುವಂಥವು. ವ್ಯಂಗ್ಯವೆಂದರೆ, ದೇಶದಲ್ಲಿ ಅತಿಹೆಚ್ಚು ಜಿಎಸ್ಟಿ ನೀಡುವ ರಾಜ್ಯ ಕರ್ನಾಟಕ. ಅಷ್ಟೊಂದು ಸಂಖ್ಯೆಯಲ್ಲಿ ಬಡವರಿರುವ ನಮ್ಮ ರಾಜ್ಯ ದೊಡ್ಡ ಪ್ರಮಾಣದಲ್ಲಿ ಜಿಎಸ್ಟಿ
ಪಾವತಿಸುವುದು ಹೇಗೆ? ನೀತಿಯ ಕೊರತೆಯಿಂದಾಗಿಯೇ ಸಮಸ್ಯೆಗಳು ಸೃಷ್ಟಿಯಾಗಿರುವುದು.
ಉದಾಹರಣೆಗೆ, ದುಡಿಮೆಗೆ ಹೋಗುವ ಕಾರ್ಮಿಕ ಅಥವಾ ಮಹಿಳೆಯರಿಗೆ ಪ್ರಾದೇಶಿಕವಾಗಿ ೨೫-೩೦ ಕಿ.ಮೀ. ವ್ಯಾಪ್ತಿಯೊಳಗೆ ಉಚಿತ ಸಾರಿಗೆ ಅಗತ್ಯವಾದುದು, ಅರ್ಥ ಪೂರ್ಣವಾದುದು ಕೂಡ. ಅದರಿಂದ ಮಾರುಕಟ್ಟೆಯ ಬೆಳವಣಿಗೆಗೂ ಸಹಾಯವಾಗುತ್ತದೆ. ಸಮಸ್ಯೆ ಬರುವುದು ಬೀದರ್ನಿಂದ ಬೆಂಗಳೂರಿಗೆ ಪ್ರಯಾಣ ಉಚಿತವಾದಾಗ. ಹಾಗೆಯೇ ಬಡವರಿಗೆ ಉಚಿತ ವಿದ್ಯುತ್ ನೀಡಿಕೆ ಸರಿ. ಆದರೆ ೨೦೦ ಯುನಿಟ್? ಇವನ್ನೆಲ್ಲ ನೀಡಲು ಸರಕಾರಕ್ಕೆ ಶಕ್ತಿ ಇದೆಯೇ ಇಲ್ಲವೇ ಎಂಬ ವಿಷಯ ಬೇರೆ. ಸರಕಾರದ ಆದಾಯದ ಮೂಲ ಗಳು ಅಥವಾ ಬಹುಶಃ ಹೊಸ ಆದಾಯದ ಮೂಲಗಳಿಂದ (ಅಂದರೆ, ಅಕ್ರಮ-ಸಕ್ರಮ, ರಿಜಿಸ್ಟ್ರೇಷನ್ ಮೌಲ್ಯವನ್ನು ಹೆಚ್ಚಿಸುವಿಕೆ, ಆಸ್ತಿ ಕರವನ್ನು ಹೆಚ್ಚಿಸುವಿಕೆ ಇತ್ಯಾದಿಗಳಿಂದ) ಬಂದ ಹಣವನ್ನು ಸದ್ಯ ನೀಡಿಬಿಡಬಹುದು ಕೂಡ.
ಆದರೆ, ಒಪ್ಪಿಕೊಳ್ಳಲೇಬೇಕಾದ ವಿಷಯವೆಂದರೆ, ಹಣವು ಅನವಶ್ಯಕವಾಗಿ ‘ಫ್ರೀಬೀ’ಗಳಿಗೇ ಖರ್ಚಾಗಿಹೋದರೆ, ಅಭಿವೃದ್ಧಿ ಕಾರ್ಯಗಳಿಗೆ, ಶಿಕ್ಷಣ, ಆರೋಗ್ಯ, ರಸ್ತೆಗಳು, ಕುಡಿಯುವ ನೀರು ಮತ್ತು ಜಾಗತಿಕ ಗುಣಮಟ್ಟದ ಇತರ ಮೂಲಭೂತ ಸೌಕರ್ಯಗಳ ಸೃಷ್ಟಿಗೆ ಹಣ ಒದಗಿಸಲು ಸಾಧ್ಯ ವಾಗುವುದಿಲ್ಲ. ಜಾಗತಿಕವಾಗಿ ತಲೆಯೆತ್ತಿ ನಿಲ್ಲಲು ಅಗುವುದಿಲ್ಲ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಯಶಸ್ಸಿನ ನಂತರ ಪಕ್ಷಗಳು ‘ಫ್ರೀಬೀ’ಯನ್ನು ಸಾಮಾಜಿಕ ಬದಲಾವಣೆಯ ಒಂದು ಸಾಧನವಾಗಿ ನೋಡದೆ, ಮಕ್ಕಳನ್ನು ಖುಷಿಪಡಿಸಲು ಚಾಕೊಲೇಟ್ ನೀಡುವಂತೆ ಒಂದಕ್ಕಿಂತ ಮುಂದೆ ಇನ್ನೊಂದು ಹೋಗಿ ಘೋಷಿಸಿಬಿಡುವ ಸಾಧ್ಯತೆಯಿರುವುದು ಸದ್ಯದ ಸಮಸ್ಯೆ. ಈ ಹಿನ್ನೆಲೆಯಲ್ಲಿ ‘ಫ್ರೀಬೀ’ ವಿಷಯದಲ್ಲಿ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವ ಅಗತ್ಯವಿದೆ. ಏಕೆಂದರೆ
‘ಫ್ರೀಬೀ’ ಎಂಬುದು ರಾಜಕೀಯ ದಾಳವಾಗಬಾರದು.