ವರ್ತಮಾನ
maapala@gmail.com
ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಐದು ಗ್ಯಾರಂಟಿ ಘೋಷಣೆಗಳನ್ನು ಜಾರಿಗೊಳಿಸಲು ಆದೇಶ ಹೊರಡಿಸುವ ಮೂಲಕ ಕಾಂಗ್ರೆಸ್ ಸರಕಾರ
ನುಡಿದಂತೆ ನಡೆದಿದೆ. ಆದರೆ, ಅವುಗಳನ್ನು ಅನುಷ್ಠಾನಗೊಳಿಸುವುದೇ ದೊಡ್ಡ ಸವಾಲು. ಅದರಲ್ಲೂ ಜನರ ಸಹಕಾರ ಸಿಗದೇ ಇದ್ದರೆ ಸರಕಾರ
ಇಕ್ಕಟ್ಟಿಗೆ ಸಿಲುಕಲೇ ಬೇಕಾಗುತ್ತದೆ ಎಂಬುದು ಶಕ್ತಿ ಯೋಜನೆಯಲ್ಲಿ ಈಗಾಗಲೇ ಸಾಬೀತಾಗಿದೆ.
ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ವಿಚಾರದಲ್ಲಿ ಯಾರೇನೇ ಟೀಕೆ ಮಾಡಲಿ, ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಮಹತ್ವದ ಐದು ಯೋಜನೆಗಳನ್ನು ಜಾರಿಗೊಳಿಸುವುದು ಸಾಧನೆಯೇ ಸರಿ. ಏನೋ ನಾಲ್ಕೈದು ಸಾವಿರ ಕೋಟಿ ರು. ವೆಚ್ಚದ ಯೋಜನೆಗಳಾದರೆ ಪರವಾಗಿಲ್ಲ ಎನ್ನಬಹುದು. ಆದರೆ, ಈಗ ಜಾರಿಗೊಳಿಸಿರುವ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಕನಿಷ್ಠ 60 ಸಾವಿರ ಕೋಟಿಗಿಂತ 80 ಸಾವಿರ ಕೋಟಿ ರು. ವರೆಗೆ ಅನುದಾನ ಬೇಕಾಗುತ್ತದೆ.
ಮೂರು-ಮೂರೂಕಾಲು ಲಕ್ಷ ಕೋಟಿ ರು. ಮೊತ್ತದ ಬಜೆಟ್‌ನಲ್ಲಿ ಸರಕಾರಿ ನೌಕರರ ವೇತನ, ನಿಗದಿತ ಯೋಜನೆ, ಕಾರ್ಯಕ್ರಮಗಳಿಗೆ ಅಗತ್ಯ ಅನುದಾನ ಮೀಸಲಿಟ್ಟು ಹೆಚ್ಚುವರಿಯಾಗಿ 60ರಿಂದ 80 ಸಾವಿರ ಕೋಟಿ ರು. ಹೊಂದಾಣಿಕೆ ಮಾಡುವುದು ಕಷ್ಟದ ಮಾತು. ಅದನ್ನೆಲ್ಲಾ ಬದಿಗಿಟ್ಟು ನುಡಿದಂತೆ ನಡೆಯುತ್ತೇವೆ ಎಂಬ ಮಾತನ್ನು ಸತ್ಯ ಗೊಳಿಸಲು ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಈ ಪೈಕಿ ಒಂದು ಗ್ಯಾರಂಟಿ ಈಗಾಗಲೇ ಅನುಷ್ಠಾನ ವಾಗಿದ್ದು, ಇನ್ನುಳಿದ ನಾಲ್ಕು ಗ್ಯಾರಂಟಿಗಳು ಇನ್ನಷ್ಟೇ ಅನುಷ್ಠಾನವಾಗಬೇಕಾಗಿದೆ.
ಯೋಜನೆಗೆ ಆದೇಶ ಹೊರಡಿಸಿರುವುದರಿಂದ ಅವುಗಳು ಕೂಡ ಅನುಷ್ಠಾನಕ್ಕೆ ಬರುತ್ತದೆ. ಸ್ವಲ್ಪ ವಿಳಂಬವಾಗಬಹುದಷ್ಟೆ. ಸರಕಾರವೇನೋ ಗ್ಯಾರಂಟಿ ಘೋಷಣೆಗಳನ್ನು ಜಾರಿಗೊಳಿಸಲು ಆದೇಶ ಹೊರಡಿಸಿದ್ದಾಯಿತು. ಆದರೆ, ಆದೇಶ ಹೊರಡಿಸಿರುವುದಕ್ಕಿಂತ ದೊಡ್ಡ ಸವಾಲು ಇರುವುದು ಅವುಗಳ ಅನುಷ್ಠಾನದಲ್ಲಿ. ಮಹಿಳೆಯರಿಗೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯದ ಶಕ್ತಿ ಯೋಜನೆ ಅನುಷ್ಠಾನ ಇದಕ್ಕೆ ಉದಾಹರಣೆಯಾಗಿ ಕಣ್ಣ ಮುಂದೆಯೇ ಇದೆ. ಯೋಜನೆ ತಮಗೆ ಬೇಕೋ, ಬೇಡವೋ, ಎಲ್ಲರಿಗೂ ಮುಕ್ತವಾಗಿರುವುದರಿಂದ ಅದನ್ನು ಬಳಸಿ ಕೊಳ್ಳುವಲ್ಲಿ ಎಲ್ಲರೂ ತಾಮುಂದು ಎಂಬಂತೆ ಧಾವಿಸುತ್ತಿದ್ದಾರೆ. ಈ ಹಿಂದೆ ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಕಿಡಿ ಕಾರುತ್ತಿದ್ದವರೂ ಹಳೆಯದನ್ನೆಲ್ಲಾ ಮರೆತು ಶಕ್ತಿ ಯೋಜನೆಯಡಿ ಬಸ್‌ಗಳಲ್ಲಿ ಉಚಿತವಾಗಿ ಓಡಾಡಲು ಪೈಪೋಟಿಗೆ ಬಿದ್ದಿದ್ದಾರೆ.
ಈ ಕಾರಣದಿಂದ ಯೋಜನೆ ಅನುಷ್ಠಾನ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಪ್ರಾಣ ಸಂಕಟ ತಂದಿದೆ. ಬಸ್‌ಗಳಲ್ಲಿ ಪ್ರತಿನಿತ್ಯ ಜಗಳ, ಕಿತ್ತಾಟ ಸಾಮಾನ್ಯ ಎನ್ನುವಂತಾಗಿದೆ. ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಬಲವಾಗಿರುವುದರಿಂದ ಸಣ್ಣ ಪುಟ್ಟ ಸಮಸ್ಯೆಗಳನ್ನೂ ಬೆಟ್ಟದಷ್ಟು ಮಾಡಲಾಗುತ್ತಿದೆ. ಇದರಿಂದ ನಿಜವಾಗಿಯೂ ಪೀಕಲಾಟಕ್ಕೆ ಸಿಲುಕಿರುವುದು ಸಾರಿಗೆ ಸಂಸ್ಥೆ ನಿರ್ವಾಹಕ, ಚಾಲಕರು. ಬಸ್ ಫುಲ್ ರಷ್ ಇದೆ ಎಂಬ ಕಾರಣಕ್ಕೆ ಚಾಲಕ ನಿಲ್ಲಿಸದೇ ಇದ್ದರೆ ಅದನ್ನೇ ದೊಡ್ಡ ವಿಷಯ ಮಾಡಲಾಗುತ್ತಿದೆ. ಚಾಲಕ, ನಿರ್ವಹಕರ ಕಡೆಯಿಂದ ಲೋಪ ಇಲ್ಲದೇ ಇದ್ದರೂ ಪ್ರಯಾಣಿಕರ ತಪ್ಪಿಗೆ ಅವರನ್ನು ಗುರಿ ಮಾಡಿ ರಂಪಾಟ ಮಾಡಲಾಗುತ್ತಿದೆ.
ಇನ್ನು ಸದ್ಯದಲ್ಲೇ ಜಾರಿಯಾಗಬೇಕಾದ ಇನ್ನೂ ಮೂರು ಗ್ಯಾರಂಟಿಗಳಾದ ಗೃಹ ಬಳಕೆದಾರರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ಮನೆ ಯಜಮಾನಿಗೆ ಮಾಸಿಕ 2 ಸಾವಿರ ರು. ಸಹಾಯಧನ ನೀಡುವ ಗೃಹಲಕ್ಷ್ಮಿ ಮತ್ತು ಬಿಪಿಎಲ್ ಕುಟುಂಬದ ಪ್ರತಿ
ಸದಸ್ಯನಿಗೆ 10 ಕೆ.ಜಿ ಅಕ್ಕಿ ಒದಗಿಸುವ ಅನ್ನಭಾಗ್ಯ ಯೋಜನೆಗಳ ಅನುಷ್ಠಾನ ಇದಕ್ಕಿಂತಲೂ ದೊಡ್ಡ ಸವಾಲನ್ನು ಸರಕಾರದ ಮುಂದೆ ತಂದೊಡ್ಡಿದೆ. ಗೃಹಜ್ಯೋತಿ ಯೋಜನೆ ಆಗಸ್ಟ್ ೧ರಿಂದ (ಜುಲೈ ತಿಂಗಳಲ್ಲಿ ಬಳಕೆಯಾದ ವಿದ್ಯುತ್‌ಗೆ) ಜಾರಿಯಾಗುತ್ತದೆ. ಸುಮಾರು 2.18 ಕೋಟಿ ಗೃಹಬಳಕೆದಾರರು ಇದರ ಅನುಕೂಲ ಪಡೆಯಲು ಅರ್ಹರಿದ್ದಾರೆ.
ಜುಲೈ ತಿಂಗಳಿನಿಂದಲೇ ಯೋಜನೆ ಸಿಗಬೇಕಾದರೆ ಈ ತಿಂಗಳಾಂತ್ಯದೊಳಗೆ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜುಲೈ ತಿಂಗಳ ಬಿಲ್
ಪಾವತಿಸಬೇಕಾಗುತ್ತದೆ. ಆದರೆ, ನೋಂದಣಿ ಪ್ರಕ್ರಿಯೆ ನಡೆಯುವ ವೇಗ ನೋಡಿದರೆ ಶೇ. 25ರಷ್ಟು ಬಳಕೆದಾರರಿಗೂ ಆಗಸ್ಟ್ ತಿಂಗಳಲ್ಲಿ ಇದು ಲಭ್ಯವಾಗುವುದು ಅನುಮಾನ ಎನ್ನುವಂತಾಗಿದೆ. ಪ್ರಕ್ರಿಯೆ ಆರಂಭವಾಗಿ ಆರು ದಿನವಾದರೂ ಇನ್ನೂ ನೋಂದಣಿ ಮಾಡಿಕೊಂಡವರ ಸಂಖ್ಯೆ 25 ಲಕ್ಷ ದಾಟಿಲ್ಲ. ಇದೇ ವೇಗದಲ್ಲಿ ನೋಂದಣಿ ನಡೆದರೆ ಆಗಸ್ಟ್ 15 ಕಳೆದರೂ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇಲ್ಲ. ಹಾಗೆಂದು ಇದರಲ್ಲಿ ಇಲಾಖೆ ಯದ್ದೇ ಲೋಪ ಎಂದು ಹೇಳಲು ಸಾಧ್ಯವಿಲ್ಲ.
ಏಕೆಂದರೆ, ಏಕಕಾಲದಲ್ಲಿ ಲಕ್ಷಾಂತರ ಮಂದಿ ನೋಂದಣಿ ಮಾಡಿಕೊಳ್ಳಲು ಯಾವ ಪೋರ್ಟಲ್‌ನಲ್ಲೂ ಸಾಧ್ಯವಿಲ್ಲ. ಪೋರ್ಟಲ್ ಸಾಮರ್ಥ್ಯವನ್ನು ಎಷ್ಟೇ ಹೆಚ್ಚಿಸಿದರೂ ಜುಲೈ ಅಂತ್ಯದೊಳಗೆ ಎಲ್ಲರೂ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದು. ಇದು ನೋಂದಣಿಯ ವಿಚಾರವಾದರೆ, ಇನ್ನು ವಿದ್ಯುತ್ ಬಿಲ್ ವಿಚಾರದಲ್ಲಿ ಮತ್ತಷ್ಟು ಗೊಂದಲಗಳಾಗುವ ಸಾಧ್ಯತೆ ಇದೆ. 2022-23ನೇ ಸಾಲಿನಲ್ಲಿ ಬಳಕೆಯಾದ ಸರಾಸರಿ ಆಧಾರದ ಮೇಲೆ ಎಷ್ಟು ಉಚಿತ ವಿದ್ಯುತ್ ಎಂಬುದನ್ನು ನಿರ್ಧರಿಸಲಾಗುತ್ತದೆ. ಉದಾಹರಣೆಗೆ ೧೦೦ ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿರುವವರು 110 ಯೂನಿಟ್‌ವರೆಗೆ ಬಳಸಿದರೆ ಮಾತ್ರ ಅವರಿಗೆ ಶೂನ್ಯ ಬಿಲ್ ಬರುತ್ತದೆ. ಆದರೆ, ಅದಕ್ಕಿಂತ ಹೆಚ್ಚು ಯೂನಿಟ್ ಬಳಸಿದರೆ ಅದಕ್ಕೆ ಶುಲ್ಕ ಪಾವತಿಸ ಬೇಕು.
ಇನ್ನು ಹೊಸ ಮನೆ ಕಟ್ಟಿಕೊಳ್ಳುವವರು ೫೪ ಯೂನಿಟ್ ಮಾತ್ರ ಉಚಿತ ವಿದ್ಯುತ್ ಪಡೆಯಲು ಅರ್ಹರು. ಒಂದೊಮ್ಮೆ ವಿದ್ಯುತ್ ಬಳಕೆ 200 ಯೂನಿಟ್ ದಾಟಿದರೆ ಆಗ ಪೂರ್ಣ ಪ್ರಮಾಣದ ಬಿಲ್ ಪಾವತಿಸಬೇಕು. ಈ ಎಲ್ಲವೂ ಅರ್ಹ ಮತ್ತು ಹಾಕಲೇ ಬೇಕಾದಂತಹ ನಿಬಂಧನೆಗಳಾದರೂ ಜನರು ನಿಬಂಧನೆಗಳನ್ನು ಒಪ್ಪಿಕೊಳ್ಳುವುದಿಲ್ಲ. 200 ಯೂನಿಟ್ ಉಚಿತ ಎಂದಿದ್ದೀರಿ. ಅಷ್ಟು ಕೊಡಿ ಎಂದು ಪಟ್ಟುಹಿಡಿಯುತ್ತಾರೆ. ಜನರು ಪಟ್ಟು
ಹಿಡಿಯದಿದ್ದರೂ ಪ್ರತಿಪಕ್ಷದವರು ಅವರು ಸುಮ್ಮನಿರಲು ಬಿಡುವುದಿಲ್ಲ. ಒಂದೊಮ್ಮೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದೆ ಜುಲೈ ತಿಂಗಳ ಬಿಲ್ ಪಾವತಿಸಬೇಕಾದರೆ ಆಗಲೂ ಗಲಾಟೆ ಮಾಡುವುದು ಖಂಡಿತ.
ಹೀಗಾಗಿ ಗೃಹಜ್ಯೋತಿ ಅನುಷ್ಠಾನ ಸರಕಾರದ ಪಾಲಿಗೆ ಕಬ್ಬಿಣದ ಕಡಲೆಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಗೃಹಲಕ್ಷ್ಮೀ ವಿಚಾರದಲ್ಲಿ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಅದರಲ್ಲೂ ಕೂಡು ಕುಟುಂಬಗಳಲ್ಲಿ ಈ ಸಮಸ್ಯೆ ಜಗಳ, ವೈಮನಸ್ಯಕ್ಕೂ ಕಾರಣವಾಗಬಹುದು. ಮನೆ ಯಜಮಾನಿ ಯಾರು ಎಂಬುದನ್ನು ಮನೆಯವರೇ ನಿರ್ಧರಿಸಬೇಕು ಎಂದು ಸರಕಾರ ಹೇಳುತ್ತದೆ. ಒಂದು ಮನೆಯಲ್ಲಿ ಅತ್ತೆ, ಸೊಸೆ ಇದ್ದರೆ ಯಜಮಾನಿಯಾಗಲು ಇಬ್ಬರ ಮಧ್ಯೆ ಪೈಪೋಟಿ ಇರುತ್ತದೆ. ಯಾರಿಗೆ ಯೋಜನೆ ಕೊಟ್ಟರೂ ಇನ್ನೊಬ್ಬರು ಅಸಮಾಧಾನಗೊಳ್ಳುವುದು ಸಹಜ.
ಸರಕಾರಿ ನೌಕರರು, ಪಿಂಚಣಿದಾರರು, ತೆರಗೆ ಪಾವತಿಸುವವರಿಗೆ ಗೃಹಲಕ್ಷ್ಮೀ ಸಿಗವುದಿಲ್ಲ ಎಂದು ಸರಕಾರ ಈಗಾಗಲೇ ಹೇಳಿದೆ. ಪತಿ ತೆರಿಗೆ ಪಾವತಿಸಿದರೆ ಪತ್ನಿಗೆ ಸಿಗುವುದಿಲ್ಲ.
ಆದರೆ, ಮಗ ತೆರಿಗೆ ಪಾವತಿಸಿದರೆ ತಾಯಿಗೆ ಲಭ್ಯವಿದೆ. ಆದರೆ, ತಿಂಗಳಿಗೆ 2000 ರು. ಪುಕ್ಕಟೆ ಸಿಗುತ್ತದೆ ಎಂದರೆ ಅದನ್ನು ಬಿಟ್ಟುಕೊಡಲು ಯಾರೂ ಇಚ್ಛಿಸುವುದಿಲ್ಲ. ಹೀಗಾಗಿ ಯೋಜನೆಗೆ ನೋಂದಣಿ ಆರಂಭವಾಗುತ್ತಿದ್ದಂತೆ ಒಂದೊಂದೇ ಕ್ಯಾತೆಗಳು ಶುರುವಾಗುವುದರಲ್ಲಿ ಯಾವುದೇ
ಅನುಮಾನ ಇಲ್ಲ. ಮೇಲಾಗಿ ಅದಕ್ಕೂ ನೋಂದಣಿ ಕಡ್ಡಾಯವಾಗಿರುವುದರಿಂದ 2 ಕೋಟಿಗೂ ಹೆಚ್ಚು ಜನರು ನೋಂದಣಿಯಾಗಲು ಅನುಕೂಲ ವಾಗುವಂತೆ ಪೋರ್ಟಲ್ ಮೇಲ್ದರ್ಜೆಗೇರಿಸುವುದು ಸರಕಾರಕ್ಕಿರುವ ದೊಡ್ಡ ಸವಾಲು. ಗೃಹಜ್ಯೋತಿ ಯೋಜನೆಯಡಿ ನೋಂದಣಿ ಇನ್ನೂ ನಡೆಯುತ್ತಿರುವಾಗಲೇ ಗೃಹಲಕ್ಷ್ಮೀಗೂ ನೋಂದಣಿ ಆರಂಭವಾದರೆ ಸರ್ವರ್ ಕ್ರ್ಯಾಷ್ ಆಗಿ ಇನ್ನಷ್ಟು ಸಮಸ್ಯೆಗಳಾಗಬಹುದು.
ಉಳಿದಂತೆ ಅನ್ನಭಾಗ್ಯ ಯೋಜನೆಯಂತೂ ಜಾರಿಗೆ ಮುನ್ನವೇ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಅಕ್ಕಿ ಹೊಂದಿಸಲು ಸರಕಾರ ಪರದಾಡು ತ್ತಿದೆ. ಎಫ್ಸಿಐ ಮತ್ತು ಕೇಂದ್ರ ಸರಕಾರ ಹೆಚ್ಚುವರಿ ಅಕ್ಕಿ ನೀಡಲು ಸಾಧ್ಯವೇ ಇಲ್ಲ ಎಂದು ಕೈತೊಳೆದುಕೊಂಡಿವೆ. ಉಳಿದಂತೆ ಕೇಂದ್ರ ಸರಕಾರಿ ಸ್ವಾಮ್ಯದ ಇತರೆ ಸಂಸ್ಥೆಗಳು, ಅನ್ಯ ರಾಜ್ಯಗಳಿಂದ ಅಕ್ಕಿ ತರಿಸಿಕೊಳ್ಳಲು ಸರಕಾರ ಪ್ರಯತ್ನ ಮುಂದುವರಿಸಿದೆ. ಹೇಗೋ ಹರಸಾಹಸ ಮಾಡಿ ತಕ್ಷಣಕ್ಕೆ 10 ಕೆ.ಜಿ. ನೀಡಲು ಬೇಕಾದ ಅಕ್ಕಿ ಸಂಗ್ರಹಿಸಬಹುದು. ಆದರೆ, ಇದು ಕೇವಲ ಒಂದು ತಿಂಗಳು ಅಥವಾ ವರ್ಷಕ್ಕೆ ಸೀಮಿತವಾದ
ಯೋಜನೆಯಲ್ಲ. ನಿರಂತರವಾಗಿ ಮುಂದುವರಿಯುವಂತಹದ್ದು. ಈಗಾಗಲೇ ಕೇಂದ್ರ ಸರಕಾರ ಹೆಚ್ಚುವರಿ ಅಕ್ಕಿ ನಿರಾಕರಿಸಿರುವುದರಿಂದ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಇರುವವರೆಗೆ ಅಕ್ಕಿ ಲಭ್ಯವಾಗುವುದಿಲ್ಲ.
ಹೀಗಾಗಿ ಪ್ರತಿ ತಿಂಗಳೂ ಬೇಕಾದ ಅಕ್ಕಿ ಹೊಂದಿಸುವುದು ಸುಲಭವೇನೂ ಅಲ್ಲ. ಈ ಸವಾಲನ್ನು ಎದುರಿಸುವುದು ಹೇಗೆ ಎಂಬುದು ಜನರಿಗೆ ಮಾತ್ರವಲ್ಲ, ಸರಕಾರಕ್ಕೂ ಪ್ರಶ್ನೆಯಾಗಿಯೇ ಉಳಿದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗ್ಯಾರಂಟಿ ಯೋಜನೆಗೆ ಬೇಕಾದ ಅನುದಾನ ಹೊಂದಾಣಿಕೆ ಮಾಡುವುದು ಸರಕಾರದ ಮುಂದಿರುವ ಅತಿ ದೊಡ್ಡ ಸವಾಲು. ಈ ಸವಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಯಾವ ರೀತಿ ಉತ್ತರಿಸು ತ್ತಾರೆ ಎಂಬುದನ್ನು ಕಾದು ನೋಡಬೇಕು.
ಲಾಸ್ಟ್ ಸಿಪ್: ಹೇಳುವುದು ಎಷ್ಟು ಸುಲಭವೋ, ಮಾಡುವುದು ಅಷ್ಟೇ ಕಷ್ಟ ಎಂಬುದನ್ನು ಗ್ಯಾರಂಟಿ ಯೋಜನೆಗಳಿಂದ ತಿಳಿದುಕೊಳ್ಳಬಹುದು.