Friday, 22nd November 2024

ಈ ಘಮಲಿನ ಮುಂದೆ ಯಾವ ಅಮಲೂ ಇಲ್ಲ!

ವಿದೇಶವಾಸಿ

dhyapaa@gmail.com

ಖಲೀಲ್ ಅವರ ಕಥಕ್ ಶಾಲೆಯಲ್ಲಿ ೩೦ಕ್ಕೂ ಹೆಚ್ಚು ಜನ ನಾಟ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ೫ ವರ್ಷದಲ್ಲಿ ಅವರು ಸುಮಾರು ನೂರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿಗೆ ಕಥಕ್ ಹೇಳಿಕೊಟ್ಟಿದ್ದಾರೆ. ಬಹ್ರೈನ್‌ನಲ್ಲಷ್ಟೇ ಅಲ್ಲದೆ, ಪ್ರತಿ ವರ್ಷ ಜುಲೈ-ಅಗಸ್ಟ್‌ನಲ್ಲಿ ಅಮೆರಿಕಕ್ಕೆ ಹೋಗಿ ಅಲ್ಲಿಯೂ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಿ ಬರುತ್ತಾರೆ.

ಕಲೀಲ್ ಅಲ್‌ಅಶರ್ ಪಕ್ಕಾ ಬಹ್ರೈನ್ ಪ್ರಜೆ! ‘ಹುಡುಕಿದರೆ ದೇವರೂ ಸಿಗುತ್ತಾನೆ’ ಎಂಬ ಮಾತಿದೆ. ಈ ಜಗತ್ತಿನಲ್ಲಿ ಎಲ್ಲವೂ ಸಾಧ್ಯ; ಅದರಲ್ಲೂ ಇಂಥವರನ್ನು ಕಂಡಾಗ ‘ಅಸಾಧ್ಯ’ ಎಂಬ ಮಾತೇ ಇಲ್ಲ ಎಂದು ಆಗಾಗ ಸಾಬೀತಾಗುತ್ತದೆ. ಇಲ್ಲವಾದರೆ ಎಲ್ಲಿಯ ಅರಬರ ರಾಷ್ಟ್ರ ಬಹ್ರೈನ್, ಎಲ್ಲಿಯ ಭಾರತದ ಉತ್ತರ ಪ್ರದೇಶ? ಎಲ್ಲಿಯ ಅರಬ್ಬಿ ಭಾಷೆ, ಎಲ್ಲಿಯ ಭಾರತದ ಸಂಸ್ಕೃತ, ಹಿಂದಿ ಭಾಷೆ? ಕಳೆದ ವಾರದ ಅಂಕಣದಲ್ಲಿ ಕಲೆಗೆ ಯಾವುದೇ ಸೀಮೆಯಿಲ್ಲ, ಕಲೆ ಎಲ್ಲ ನಾಡಿನ ಗಡಿ ಮೀರಿ ಪಯಣಿಸುವಂಥದ್ದು, ಕಲೆ ಎಲ್ಲ ಭಾಷೆಯ ಬೇಲಿ ದಾಟಿ ಹೋಗುವಂಥದ್ದು ಎಂಬುದರ ಕುರಿತಾಗಿ
ಬರೆದಿದ್ದೆ.

ಮುಂಬೈನ ಮೂಲೆಯ ಮರಾಠಿ ಮಕ್ಕಳು ಭಾರತದ ಯಾವುದೇ ಭಾಷೆಯ ‘ಅಆಇಈ’ ಅರಿಯದ ಪಾಶ್ಚಿಮಾತ್ಯ ದೇಶದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ, ಅವರ ಬಿಟ್ಟ ಕಣ್ಣು, ತೆರೆದ ಬಾಯಿ ಮುಚ್ಚದಂತೆ ಪ್ರದರ್ಶನ ನೀಡಿ ಗಮನ ಸೆಳೆಯುತ್ತಾರೆ, ಕಲೆಗೆ ಕಥಕ್‌ನ ‘ಧಾಧಿನ್ ಧಿಧಾ’ ಅಥವಾ ಯಕ್ಷಗಾನದ ‘ತಿತ್ತಿಥೈ’ ತಿಳಿಯದ ಅರಬ್ಬಿಗಳ ಮನಮುಟ್ಟುವುದಾಗಲಿ ಚೆನ್ನಾಗಿ ಗೊತ್ತು ಎಂದೂ ಬರೆದಿದ್ದೆ. ಹಾಗೆ ಬರೆಯಲು ಕಾರಣ ಖಲೀಲ್ ಅಲ್‌ಅಶರ್. ಖಲೀಲ್ ಹುಟ್ಟಿದ್ದು ಕೊಲ್ಲಿ ರಾಷ್ಟ್ರ ಗಳಲ್ಲೇ ಪುಟ್ಟ ದೇಶವಾದ ಬಹ್ರೈನ್‌ನಲ್ಲಿ.

ಹಾಗೆ ನೋಡಿದರೆ ಖಲೀಲ್ ಮನೆಯವರಿಗೂ, ಭಾರತಕ್ಕೂ ದೂರ ದೂರದವರೆಗೆ ಯಾವ ಸಂಬಂಧವೂ ಇಲ್ಲ. ಖಲೀಲ್‌ರ ತಂದೆ ತಾಯಿ, ಪೂರ್ವಜರು, ಎಲ್ಲರೂ ಹುಟ್ಟಿ ಬೆಳೆದದ್ದು ಬಹ್ರೈನ್‌ನಲ್ಲಿಯೇ. ಖಲೀಲ್ ಕೂಡ ಬಹ್ರೈನ್‌ನಲ್ಲಿಯೇ ಹುಟ್ಟಿ, ಹೈಸ್ಕೂಲ್ ವರೆಗಿನ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದರು. ಮುಂದಿನ ಓದಿಗಾಗಿ ಅಮೆರಿಕಕ್ಕೆ ಹೋಗುವುದೆಂದು ನಿರ್ಣಯಿಸಿ, ಅಲ್ಲಿಯ ಕ್ಯಾಲಿಫೋರ್ನಿಯಾಕ್ಕೆ ಪ್ರಯಾಣ ಬೆಳೆಸಿದರು.

ಅಲ್ಲಿಯ ಸ್ಟೇಟ್ ಯುನಿವರ್ಸಿಟಿಯಲ್ಲಿ ರಾಜ್ಯಶಾಸ್ತ್ರ ಮತ್ತು ಧರ್ಮಶಾಲಾದಲ್ಲಿ ಪದವಿ ಪಡೆದರು. ಅಮೆರಿಕದಲ್ಲಿರುವಾಗ ಅವರು ಒಮ್ಮೆ ಕಥಕ್ ನೃತ್ಯ ಪ್ರದರ್ಶನ ನೋಡಲು ಹೋಗಿದ್ದರು. ಅದಕ್ಕೂ ಮೊದಲು ಕಥಕ್ ನೃತ್ಯವನ್ನು ರಂಗದಲ್ಲಿ ನೋಡುವುದು ಬಿಡಿ, ನೃತ್ಯದ ಒಂದು ಫೋಟೋ ಕೂಡ ನೋಡಿರಲಿಲ್ಲ. ಆದರೆ ಮೊದಲ ಪ್ರದರ್ಶನ ನೋಡಿದ ದಿನವೇ ಅದರೆಡೆಗೆ ಆಕರ್ಷಿತರಾದರು. ಅವಕಾಶ ದೊರಕಿದಾಗೆಲ್ಲ ಖಲೀಲ್ ಕಥಕ್ ನೃತ್ಯ ನೋಡಿ ಬರುತ್ತಿದ್ದರು. ಕಥಕ್ ನಾಟ್ಯದ ಉಡುಗೆಗಳು, ಕಾಲ ಹೆಜ್ಜೆ, ಮುಖಭಾವ, ಕೈ ಮತ್ತು ದೇಹದ ಚಲನವಲನಕ್ಕೆ ಅವರು ಮಾರುಹೋಗಿದ್ದರು.
ಕಥಕ್ ಮತ್ತು ತನಗೆ ಯಾವುದೋ ಒಂದು ಅವಿನಾಭಾವ ಸಂಬಂಧವಿದೆ ಎಂದು ಅವರಿಗೆ ಮನದಟ್ಟಾಗಿತ್ತು.

ಒಂದೆಡೆ ಸೆಳೆತ, ಇನ್ನೊಂದೆಡೆ ಏನೋ ಕಸಿವಿಸಿ. ಹುಟ್ಟಿದ ದೇಶ ಬೇರೆ, ಆಚರಿಸುವ ಧರ್ಮ ಬೇರೆ, ಆಡುವ ಭಾಷೆ ಬೇರೆ. ಅದೂ ಅಲ್ಲದೆ, ಒಬ್ಬ
ಗಂಡಾಗಿ ನೃತ್ಯ ಮಾಡುವುದು ಎಂದರೇನು? ಈ ಪ್ರಾಂತ್ಯದಲ್ಲಿ ಜನ ಇನ್ನೂ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಒಂದುವೇಳೆ ತಾನು ಒಪ್ಪಿದರೂ, ಮನೆಯ
ವರು ಒಪ್ಪಬಹುದೆ? ಅಮೆರಿಕಕ್ಕೆ ವಿದ್ಯಾಭ್ಯಾಸಕ್ಕೆಂದು ಕಳಿಸಿದರೆ, ಈತ ಹೆಣ್ಣುಮಕ್ಕಳಂತೆ ನೃತ್ಯ ಮಾಡುವುದನ್ನು ಕಲಿತುಕೊಂಡು ಬಂದ ಎಂದು ತಂದೆ ಮುನಿಸಿಕೊಂಡರೆ? ಅಮ್ಮ, ಸಹೋದರ-ಸಹೋದರಿಯರು ಸಿಟ್ಟು ಮಾಡಿ ಕೊಂಡರೆ? ಬೇಕು-ಬೇಡವಾದ, ಆಗು-ಹೋಗುಗಳ ವಿಚಾರಗಳು ತಲೆಯಲ್ಲಿ ಸುತ್ತುತ್ತಿದ್ದವು. ಈ ಗೊಂದಲಗಳ ನಡುವೆಯೇ, ಖಲೀಲ್ ಕಥಕ್ ಎಂಬ ಸುಂಟರಗಾಳಿಯ ಸುಳಿಯ ಒಳಗೆ ಸಿಲುಕಿಕೊಂಡಾಗಿತ್ತು. ಕಲೆಯ ಘಮಲಿನ ಮುಂದೆ ಯಾವ ಅಮಲು ಅಲ್ಲವೇ? ಆಗ ಅವರಿಗೆ ಭೇಟಿಯಾದದ್ದು ಅಮೆರಿಕದಲ್ಲೇ ವಾಸಿಸುತ್ತಿದ್ದ ಭಾರತೀಯ ಮೂಲದ ಕಥಕ್ ನಾಟ್ಯಗುರು ಶ್ರೀಮತಿ ಪ್ರಾಚಿ ದೀಕ್ಷಿತ್.

ಖಲೀಲ್ ೨೦೦೮ರಲ್ಲಿ ಪ್ರಾಚಿಯವರನ್ನು ಗುರುವಾಗಿ ಸ್ವೀಕರಿಸಿ, ಕಥಕ್ ಕಲಿಯಲು ಆರಂಭಿಸಿದರು. ಓದು ಮುಗಿದ ನಂತರ ನೋಡಿಕೊಳ್ಳಲು ಅವರದ್ದೇ ಕುಟುಂಬದ ರಿಯಲ್ ಎಸ್ಟೇಟ್ ವ್ಯವಹಾರವಿತ್ತು. ಅದರ ನಡುವೆಯೇ ಆಗಾಗ ಅಮೆರಿಕಕ್ಕೆ ಹೋಗಿ ನೃತ್ಯ ಕಲಿತು ಬರುತ್ತಿದ್ದರು. ಮನೆಯಲ್ಲಿ ಒಬ್ಬರೇ ಇರುವಾಗ ನಾಟ್ಯಾಭ್ಯಾಸ ಮಾಡುತ್ತಿದ್ದರು. ಅವರು ಅಹಮದಾಬಾದ್‌ನ ಅನರ್ತ್ ಫೌಂಡೇಶನ್‌ನಲ್ಲಿ ಮೌಲಿಕ್ ಶಾ ಮತ್ತು ಇಶಿರಾ ಪಾರಿಖ್ ಬಳಿ ಅಪಾರ ತರಬೇತಿ ಪಡೆದರು.

ಪುಣೆಯ ಭಾರತಿ ವಿದ್ಯಾಪೀಠ ವಿಶ್ವವಿದ್ಯಾಲಯದಿಂದ ಕಥಕ್ ನೃತ್ಯದಲ್ಲಿ ಎಂಎ ಸ್ನಾತಕೋತ್ತರ ಪದವಿಯನ್ನೂ ಪಡೆದರು. ಅಲಹಾಬಾದ್‌ನ ಪ್ರಯಾಗ್ ಸಂಗೀತ ಸಮಿತಿಯಿಂದ ಸಂಗೀತ ಪ್ರಭಾಕರ್ ಮತ್ತು ಪ್ರಾಚೀನ ಕಲಾ ಕೇಂದ್ರದಿಂದ ಸಂಗೀತ ವಿಶಾರದ್ (೪ನೇ ವರ್ಷ) ಪೂರ್ಣ ಗೊಳಿಸಿದ್ದಾರೆ. ಖಲೀಲ್ ಈಗಲೂ ಗುರು ಮುರಳಿ ಮೋಹನ್ ಕಲ್ವಕಲ್ವ ಅವರಲ್ಲಿ ಕಥಕ್ ತರಬೇತಿಯನ್ನು ಮುಂದುವರಿಸುತ್ತಿದ್ದಾರೆ. ಖಲೀಲ್ ಕಥಕ್ ಸೆಳೆತಕ್ಕೆ ಒಳಗಾಗಿದ್ದದ್ದರಿಂದ ಹಿಡಿದು ನೃತ್ಯಾಭ್ಯಾಸ ಆರಂಭಿಸಿ ಸುಮಾರು ಹತ್ತು ವರ್ಷದವರೆಗೂ ಮನೆಯಲ್ಲಿ ಹೇಳಿರಲಿಲ್ಲ.

ಕೊನೆಗೆ ಒಂದು ದಿನ ಅನಿವಾರ್ಯವಾಗಿ ಹೇಳಬೇಕಾಯಿತು. ಈ ನಡುವೆ ಅವರ ರಂಗಪ್ರವೇಶ ಆಗಿ, ಅಮೆರಿಕದಲ್ಲಿ, ಭಾರತದಲ್ಲಿ ಕೆಲವು ಪ್ರದರ್ಶನ ಗಳನ್ನು ಪ್ರಸ್ತುತಪಡಿಸಿದ್ದರು. ಅವರನ್ನು ಜನರು ಮೆಚ್ಚಿಕೊಳ್ಳಲು ಆರಂಭಿಸಿದ್ದರು. ಹೆಚ್ಚು ಹೆಚ್ಚು ಪ್ರದರ್ಶನ ನೀಡುವಂತೆ ಒತ್ತಾಯಿಸುತ್ತಿದ್ದರು. ಅವರಿಗೆ ಬಹ್ರೈನ್‌ನಲ್ಲಿಯೋ ಪ್ರದರ್ಶನ ನೀಡಬೇಕೆಂಬ ಬಯಕೆ ಉತ್ಕಟವಾಗಿತ್ತು. ಆಗ ಮೊದಲು ಅಮ್ಮನಿಗೆ ಹೇಳಿದರು. ಅವರು ಎಣಿಸಿದಂತೆಯೇ ಮನೆಯಲ್ಲಿ ಮೊದಲು ಸ್ವಲ್ಪ ಅಸಮಾಧಾನವಿತ್ತು. ಆದರೆ ಅವರ ಒಂದು ಪ್ರದರ್ಶನ ಮತ್ತು ಪ್ರೇಕ್ಷಕರ ಸಕಾರಾತ್ಮಕ ಪ್ರತಿಕ್ರಿಯೆ ಕಂಡು ಮನೆಯವರೂ ದಂಗಾಗಿದ್ದರು.

ಅಂದಿನಿಂದ ತಾಯಿಯೂ ಅವರ ಬೆನ್ನಿಗೆ ನಿಂತರು. ಖಲೀಲ್ ೨೦೧೮ರಲ್ಲಿ ಬಹ್ರೈನ್‌ನಲ್ಲಿ ತತ್ಕಾರ್ ಸ್ಕೂ ಲ್ ಆಫ್ ಕಥಕ್ ಆರಂಭಿಸಿದರು. ಕಳೆದ ವಾರ ತತ್ಕಾರ್ ಶಾಲೆಯ ವಾರ್ಷಿಕೋತ್ಸವದ ಕುರಿತು ಬರೆದಿದ್ದೆನಲ್ಲ, ಅದು ಐದನೆಯ ವಾರ್ಷಿಕೋತ್ಸವದ ಕಾರ್ಯಕ್ರಮ. ಅದನ್ನು ನೋಡಿದವರಾ
ರಿಗೂ ಇದು ಒಬ್ಬ ಅನ್ಯದೇಶೀಯ ಆಯೋಜಿಸಿದ ಕಾರ್ಯಕ್ರಮ ಎಂದು ಅನಿಸಲೇ ಇಲ್ಲ. ಅದರಲ್ಲಿ ಸಂಸ್ಕೃತದ ಶ್ಲೋಕಗಳಿದ್ದವು, ಹಿಂದಿಯ ಪದ್ಯಗಳಿ
ದ್ದವು, ಭಾರತೀಯ ಹಬ್ಬವಾದ ಹೋಳಿಯ ಚಿತ್ರಣವಿತ್ತು.

ಖಲೀಲ್ ಖುದ್ದು ಶಿವನ ಸ್ತುತಿಯನ್ನೇ ಪ್ರಧಾನವಾಗಿಟ್ಟುಕೊಂಡು ನೃತ್ಯ ಮಾಡಿದರು. ಅವರ ನೃತ್ಯ ನೋಡಿ ಭಾರತೀಯರಂತೂ ಸಂತೋಷ ಪಡುವುದು ಸಹಜವೇ; ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಬಹ್ರೈನ್ ದೇಶದ ಅರಬ್ ಪ್ರಜೆಗಳೂ ಮಾರುಹೋಗಿದ್ದರು. ಹ್ಞಾ, ಪ್ರೇಕ್ಷಕರ ಆ ಗುಂಪಿನಲ್ಲಿ ಅವರ ಅಮ್ಮನೂ ಇದ್ದರು. ಖಲೀಲ್ ಅವರ ತತ್ಕಾರ್ ಕಥಕ್ ಶಾಲೆಯಲ್ಲಿ ಮೂವತ್ತಕ್ಕೂ ಹೆಚ್ಚು ಜನ ನಾಟ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ಐದು ವರ್ಷದಲ್ಲಿ ಅವರು ತಮ್ಮ ಸಂಸ್ಥೆಯ ಮೂಲಕ ಸುಮಾರು ನೂರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿಗೆ ಕಥಕ್ ಹೇಳಿಕೊಟ್ಟಿದ್ದಾರೆ.

ಬಹ್ರೈನ್‌ನಲ್ಲಷ್ಟೇ ಅಲ್ಲದೆ, ಪ್ರತಿ ವರ್ಷ ಜುಲೈ-ಅಗಸ್ಟ್‌ನಲ್ಲಿ ಅಮೆರಿಕಕ್ಕೆ ಹೋಗಿ, ಗುರು ಪ್ರಾಚಿ ದೀಕ್ಷಿತ್ ಜತೆ ಸೇರಿ ಅಲ್ಲಿಯೂ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಿ ಬರುತ್ತಾರೆ. ಅವರೇ ಹೇಳುವ ಪ್ರಕಾರ, ಕೊಲ್ಲಿ ರಾಷ್ಟ್ರಗಳಲ್ಲಿ ಆ ಎರಡು ತಿಂಗಳು ಹೇಗೆಂದರೂ ರಜೆ ಇರುವುದರಿಂದ ಅಮೆರಿಕಕ್ಕೆ ಹೋಗಿ ನೃತ್ಯ ಕಲಿಸುತ್ತಾರೆ. ಈ ಲೇಖನ ಬರೆಯುವಾಗಲೂ ಅವರು ಲಾಸ್ ಏಂಜಲೀಸ್‌ನಲ್ಲಿ ತಮ್ಮ ಗುರುವಿನ ಕೆಲವು ಶಿಷ್ಯಂದಿರ ರಂಗಪ್ರವೇಶದ
ಸಿದ್ಧತೆಯಲ್ಲಿದ್ದಾರೆ. ಇನ್ನು ಎರಡು ತಿಂಗಳು ಅಲ್ಲೇ ಮುಕ್ಕಾಂ! ಈ ಪ್ರಕ್ರಿಯೆಯಲ್ಲಿ ಅವರಿಗೆ ಕೆಲವೊಮ್ಮೆ ಕಿಸೆ ಖರ್ಚಿಗೆ ಹಣ ಸಿಗುತ್ತದೆ, ಕೆಲವೊಮ್ಮೆ ಕಿಸೆಯಿಂದಲೇ ಖರ್ಚಾಗುತ್ತದೆ. ಆದರೆ ತಾವು ಆರಾಧಿಸುವ ಕಥಕ್ ನೃತ್ಯದ ಮುಂದೆ ಅದೆಲ್ಲ ಯಾವ ಲೆಕ್ಕ?!

ಖಲೀಲ್ ಈಗಾಗಲೇ ಭಾರತ, ಬಹ್ರೈನ್ ಸೇರಿದಂತೆ, ಬ್ರಿಟನ್, ಡೆನ್ಮಾರ್ಕ್, ಜಪಾನ್, ತೈವಾನ್ ಮೊದಲಾದ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಬಹ್ರೈನ್ ಮತ್ತು ಅಮೆರಿಕದಲ್ಲಿ ಪ್ರತಿ ವರ್ಷ, ಹಲವು ಕಾರ್ಯಕ್ರಮ ನೀಡುತ್ತಿದ್ದಾರೆ. ಬಹ್ರೈನ್, ಅಮೆರಿಕ ಅಂತೂ ಆಯಿತು, ಲಂಡನ್, ಫ್ರಾನ್ಸ್, ಜಪಾನ್ ಮತ್ತು ಡೆನ್ಮಾರ್ಕ್‌ನಲ್ಲಿ ಶಿಷ್ಯವರ್ಗವನ್ನೂ ಹೊಂದಿದ್ದಾರೆ. ಎಲ್ಲರಲ್ಲೂ ಇರುವಂತೆ ನನ್ನಲ್ಲೂ ಒಂದು ಪ್ರಶ್ನೆ ಸ್ವಾಭಾವಿಕವಾಗಿಯೇ ಇತ್ತು. ಹುಟ್ಟಿದ್ದು, ಬೆಳೆದಿದ್ದು, ಈಗ ಆಚರಿಸುತ್ತಿರುವುದು ಎಲ್ಲವೂ ಇಸ್ಲಾಂ ಧರ್ಮ.

ಹಾಗಿರುವಾಗ ಭಾರತದ ಸಂಸ್ಕೃತ ಶ್ಲೋಕಗಳು, ಹಿಂದೂ ದೇವರ ಸ್ತುತಿ, ಸಭಾ ನಮಸ್ಕಾರ, ಗುರುವಂದನೆ, ಗುರುವಿನ ಚರಣ ಸ್ಪರ್ಶ ಇವೆಲ್ಲ ಹೇಗೆ ಸಾಧ್ಯ? ಅದನ್ನು ಅವರ ಬಳಿ ಕೇಳಿದಾಗ ಸುಂದರವಾಗಿ ಉತ್ತರಿಸಿದ್ದರು ಖಲೀಲ್. ಅವರ ಪ್ರಕಾರ, ‘ಭಾರತ ಅತ್ಯಂತ ಶ್ರೀಮಂತವಾದ ಸಂಸ್ಕೃತಿ ಯನ್ನು ಹೊಂದಿರುವ ದೇಶ. ಅನೇಕ ಕಲಾಪ್ರಕಾರಗಳ ಉಗಮಸ್ಥಾನ ಭಾರತ. ಅಷ್ಟೇ ಶ್ರದ್ಧೆ, ಪ್ರೀತಿ ಮತ್ತು ಭಕ್ತಿಯಿಂದ ಅದನ್ನು ಕಾಪಾಡಿಕೊಂಡು, ಬೆಳೆಸಿಕೊಂಡು ಬಂದ ದೇಶ ಭಾರತ. ನಾವು ಇಲ್ಲಿ ಗೌರವಿಸುವುದು, ಆದರಿಸು ವುದು ಕಲೆಯನ್ನು. ಯಾವ ಕಲೆಯೂ ನಿಮ್ಮ ಧರ್ಮವನ್ನು ಬಿಡಿ ಎಂದು ಹೇಳುವುದಿಲ್ಲ.

ಆದ್ದರಿಂದ ಧರ್ಮ ಯಾವತ್ತೂ ನಮ್ಮ ಮತ್ತು ಕಲೆಯ ನಡುವಿನ ಗೋಡೆಯಾಗುವುದಿಲ್ಲ, ಆಗಲೂಬಾರದು. ನಾನು ಭಾರತದ ಕಲೆಯನ್ನು
ಪ್ರೀತಿಸುವುದರಿಂದ ಅಲ್ಲಿ ಬರುವ ದೇವರನ್ನು ಸ್ತುತಿಸುತ್ತೇನೆ, ಅದಕ್ಕೆ ಅಭಿನಯಿಸುತ್ತೇನೆ. ಭಾರತದ ‘ಗುರು-ಶಿಷ್ಯ’ ಪರಂಪರೆಯನ್ನು ಗೌರವಿಸು ವುದರಿಂದ ಗುರುವಿನ ಚರಣಕ್ಕೆರಗು ತ್ತೇನೆ. ಒಮ್ಮೆ ಹಿಂತಿರುಗಿ ನೋಡಿದರೆ, ಭಾರತದಲ್ಲಿ ಇಸ್ಲಾಂ ಧರ್ಮ ಪಾಲಿಸುವ ಎಷ್ಟು ಜನ ಕಲಾವಿದರಿದ್ದರು ಎಂದು ಯಾರಿಗಾದರೂ ಅರ್ಥವಾಗುತ್ತದೆ.

ಈಗಲೂ ಭಾರತದ ಕಲಾ ಪರಂಪರೆಯನ್ನು ಆರಾಧಿಸುವ, ಅಭ್ಯಾಸ ಮಾಡುವ ಇಸ್ಲಾಂ ಧರ್ಮದ ಕಲಾವಿದರು ಸಾಕಷ್ಟು ಜನರಿದ್ದಾರೆ’. ಅವರ ವಿಚಾರದಲ್ಲಿ ಸ್ಪಷ್ಟತೆಯಿದೆ ಅನ್ನಿಸಿತು. ಖಲೀಲ್ ಒಬ್ಬ ಸುರದ್ರೂಪಿ ಯುವಕ. ಸುಂದರ ಮೈಕಟ್ಟು, ತಕ್ಕಂತೆ ಮುಖದಲ್ಲೂ ಲಕ್ಷಣ. ಮನಸ್ಸು
ಮಾಡಿದ್ದರೆ ರೂಪದರ್ಶಿಯಾಗಿ ಕೆಲಸ ಮಾಡಬಹುದಿತ್ತು. ಅಥವಾ ಸಿನಿಮಾಕ್ಕೆ ಸೇರಬಹುದಾಗಿತ್ತು. ಆದರೆ ಅವರನ್ನು ಸೆಳೆದದ್ದು ಭಾರತದ ನೃತ್ಯಕಲೆ.ಅದೂ ಇತ್ತೀಚಿನ ಬಾಲಿವುಡ್, ಟಾಲಿವುಡ್ ಅಲ್ಲ, ಶಾಸ್ತ್ರೀ ನೃತ್ಯ! ನಿಜ, ಈ ಅರಬ್ಬಿಯನ್ನು ಸೆಳೆದದ್ದು ಭಾರತದ ಎಂಟು ಪುರಾತನ ಶಾಸ್ತ್ರೀಯ ನಾಟ್ಯಗಳಲ್ಲಿ ಒಂದಾದ ಕಥಕ್. ಈ ನಾಟ್ಯಶಾಸ್ತ್ರ ಕ್ರಿಸ್ತ ಪೂರ್ವ ಐದು ನೂರು ವರ್ಷಗಳ ಹಿಂದೆ ಉಗಮವಾಯಿತು ಎಂಬ ಮಾತಿದೆ. ಅಂದಿನ ಇಂದಿನವರೆಗೆ ಈ ಕಲೆ ಜೀವಂತವಾಗಿದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಮಾತ್ರ ಇದಕ್ಕೆ ಸ್ವಲ್ಪ ಪ್ರಮಾಣದ ಕುಂದು ಉಂಟಾಗಿತ್ತು. ನಂತರ ಪುನಃ ತನ್ನ ಸೊಗಡನ್ನು ಅದು ಕಂಡುಕೊಂಡಿದೆ, ಖಲೀಲ್ ರಂಥವರನ್ನು ಆಕರ್ಷಿಸುತ್ತಿದೆ ಎಂದರೆ ಅದು ಭಾರತದ ಕಲೆಯಲ್ಲಿರುವ ತಾಕತ್ತು.

ಎಲ್ಲಕ್ಕಿಂತ ಹೆಚ್ಚಾಗಿ ಅನ್ಯದೇಶೀಯರೊಬ್ಬರು ಭಾರತದ ಕಲೆಯನ್ನು ವಿದೇಶಿ ನೆಲದಲ್ಲಿ ಭಾರತೀಯರಿಗೇ ಹೇಳಿಕೊಡುತ್ತಿದ್ದಾರಲ್ಲ, ಇದಕ್ಕಿಂತ
ಇನ್ನೇನು ಬೇಕು? ನನ್ನ ಪ್ರಕಾರ ಖಲೀಲ್ ಭಾರತದ ಕಲೆಯ ರಾಯಭಾರಿಗಳಲ್ಲಿ ಒಬ್ಬರು. ಖಲೀಲ್ ಅಲ್‌ಅಶರ್‌ಗೆ ಒಂದು ಮೆಚ್ಚುಗೆಯ,
ಅಕ್ಕರೆಯ, ಪ್ರೀತಿಪೂರ್ವಕ, ಹೃದಯಸ್ಪರ್ಶಿ ಸಲಾಮ್!