ವಿಶ್ಲೇಷಣೆ
ರವೀ ಚಿಕ್ಕನಾಯಕನಹಳ್ಳಿ
ಪೊಲೀಸ್ ಅಧಿಕಾರಿಗಳು ಮೇಲ್ನೋಟಕ್ಕೆ ಸದೃಢರಾಗಿದ್ದರೂ, ಮಾನಸಿಕವಾಗಿ ಗಟ್ಟಿಗರಾಗಿದ್ದರೂ ಕೆಲವೊಂದು ಸಮಯ-ಸಂದರ್ಭಗಳು ಅವರನ್ನೂ ಅಧೀರರನ್ನಾಗಿ ಮಾಡಿಬಿಡುತ್ತವೆ. ಪೊಲೀಸ್ ಅಧಿಕಾರಿಯೊಬ್ಬ ತನ್ನ ಕಾರ್ಯ ವ್ಯಾಪ್ತಿಯಲ್ಲಿ ಬಲು ಉತ್ತಮವಾಗಿಯೇ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದರೂ, ಯಾವುದೋ ಒಂದು ಪ್ರಕರಣ ಅವನನ್ನು ಅಕ್ಷರಶಃ ಬೆದರಿಸಿ ಬಿಟ್ಟಿರುತ್ತದೆ.
‘ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು? ತಿಂದು ನಿನ್ನನ್ನ ಋಣ ತೀರುತಲೆ ಪಯಣ? ಹಿಂದಾಗದೊಂದು ಚಣ, ಮುಂದಕುಂ ಕಾದಿರದು? ಸಂದ ಲೆಕ್ಕವದೆಲ್ಲ- ಮಂಕುತಿಮ್ಮ’ ಎಂದಿದ್ದಾರೆ ಡಿವಿಜಿಯವರು.
ಹೌದು, ಮನುಷ್ಯನ ಜೀವನ ಒಂದು ರೀತಿಯಲ್ಲಿ ನೀರ ಮೇಲಿನ ಗುಳ್ಳೆ; ಇರುವ ತನಕ ಗುಳ್ಳೆ, ಒಡೆದುಹೋದರೆ ಆ ಗುಳ್ಳೆಯೇ ಇರುವುದಿಲ್ಲ. ಎಂಥ ಕಹಿಸತ್ಯವಿದು! ಮನುಷ್ಯ ಜೀವನದಲ್ಲಿ ಹುಟ್ಟು ಆಕಸ್ಮಿಕವಾದರೂ ಸಾವೆಂಬುದು ನಿಶ್ಚಿತವಾದದ್ದು. ಈ ಜನನ-ಮರಣದ ನಡುವಿನ ಪಯಣವೇ ನಮ್ಮ ಜೀವನ. ಆದರೆ ಈ ಪಯಣದಲ್ಲಿ ಅದೆಷ್ಟು ಒತ್ತಡಗಳು, ಅದೆಷ್ಟು ಕಷ್ಟದ ಕ್ಷಣಗಳು! ಒಂದು ಸಣ್ಣಸುಖಕ್ಕಾಗಿ ಕೊನೆವರೆಗೆ ಗೋಳಿ ಡುವ ಈ ಜೀವನ ಒಂದು ರೀತಿಯಲ್ಲಿ ಪಥಭ್ರಾಂತಿಯೇ ಆಗಿದೆ. ಜೀವನ
ನಡೆಸಲೋಸುಗ ನಮ್ಮ ನಮ್ಮಲ್ಲೇ ನಡೆಯುವ ಯುದ್ಧಗಳು, ನಮ್ಮದಲ್ಲದ ತಪ್ಪಿಗೆ ನಡೆವ ಹೊಡೆದಾಟ ಗಳು, ಅದೆಷ್ಟು ಮಾನಸಿಕ ಉದ್ವೇಗ ಮತ್ತು ಒತ್ತಡಗಳು.
ನಿಮಗಿದು ಗೊತ್ತಾ ? ಕ್ಲಿಕ್ ಮಾಡಿ ಓದಿ… ಖಾಸಗಿ ಸಹಭಾಗಿತ್ವದ ಚಿಕಿತ್ಸೆ ಅತ್ಯವಶ್ಯಕ
ಅದೆಷ್ಟು ನೀರವತೆ! ಇತ್ತೀಚಿನ ದಿನಗಳಲ್ಲಂತೂ ಮನುಷ್ಯನ ಬದುಕಿಗೆ ಪಕ್ಕಾ ವ್ಯಾವಹಾರಿಕ ಆಯಾಮವೇ ಸಿಕ್ಕಿಬಿಟ್ಟಿದೆ. ಪ್ರೀತಿ, ಕರುಣೆ, ಭ್ರಾತೃತ್ವ, ಬಾಂಧವ್ಯ, ಕ್ಷಮೆ ಎಂಬ ಪದಗಳು ಆಡುಮಾತಿನಲ್ಲಷ್ಟೇ ಉಳಿದು, ಅವನ್ನು ಪರಿಪಾಲಿಸುವವರ ಸಂಖ್ಯೆ
ಕಡಿಮೆಯಾಗುತ್ತಿದೆ. ಹಣ, ಅಧಿಕಾರ, ಅಂತಸ್ತು, ಮೇಲರಿಮೆಗಳ ತಾಂಡವತೆಯಲ್ಲಿ ಬದುಕು ಸಾಗಿಸುತ್ತಿದ್ದೇವೆ. ‘ಇರುವ ಭಾಗ್ಯವ ನೆನೆದು ಬಾರದೆಂಬುದನು ಬಿಡು, ಹರುಷಕ್ಕದೆಯೆಲೊ ದಾರಿ- ಮಂಕುತಿಮ್ಮ’ ಎಂಬ ಭಾವವು ನಮ್ಮಲ್ಲಿ ಕಡಿಮೆಯಾಗುತ್ತಲೇ ಇದೆ.
ಪ್ರತಿ ದಿನವೂ ಅದಕ್ಕಾಗಿ, ಇದಕ್ಕಾಗಿ, ಮತ್ತೊಂದಕ್ಕಾಗಿ ಅರ್ಥ ವಿರದ ಹೋರಾಟಗಳು. ‘ಈ ಜಗದಲ್ಲಿ ನಾವಷ್ಟೇ ಶಾಶ್ವತ’
ಎಂಬ ಭ್ರಮೆಯ ಮಹಾಯಾನದಲ್ಲೇ ಹೆಜ್ಜೆಹಾಕುತ್ತಿದ್ದೇವೆ. ಇರುವುದರಲ್ಲೇ ಸುಖಿಸುವ ಮನಸ್ಥಿತಿಗಳಿಲ್ಲ, ಇಲ್ಲದ್ದರ ಬಗ್ಗೆಯೇ ನಮ್ಮ ಆಲೋಚನೆ. ಬಯಸಿದ್ದನ್ನು ಏನಾದರೂ ಮಾಡಿ ಪಡೆಯಲೇಬೇಕೆಂಬ ಉನ್ಮಾದ. ಈ ಉನ್ಮಾದದ ಸುಳಿಗೆ ಸಿಕ್ಕಿ ನಮ್ಮ ಆರೋಗ್ಯ, ಮಾನಸಿಕ ಸ್ಥಿತಿ ಹಾಳಾಗುತ್ತಿದೆ. ಈ ಉನ್ಮಾದದಿಂದಾಗಿ ನಮ್ಮಿಂದ ಜರುಗುವ ದ್ರೋಹ, ಆತ್ಮವಂಚನೆಗಳಿಗೆ ಕೂಡ ನಾವೇ ಸಾಕ್ಷಿಗಳಾಗಿದ್ದೇವೆ!
ಅಂದು ಶರಣೆ ಆಯ್ದಕ್ಕಿ ಲಕ್ಕಮ್ಮಳು, ತನ್ನ ಗಂಡ ಆಯ್ದಕ್ಕಿ ಮಾರಯ್ಯನು ಸಿಕ್ಕಿತೆಂದು ಆಯ್ದುತಂದ ಹೆಚ್ಚುವರಿ ಅಕ್ಕಿಯನ್ನು ಸ್ವೀಕರಿಸದೆ, ಅಂದಿಗೆ ಬೇಕಿದ್ದಷ್ಟನ್ನು ಮಾತ್ರವೇ ಉಪಯೋಗಿಸಿಕೊಂಡು ಮಿಕ್ಕಿದ್ದನ್ನು ನಾಳೆಗೆ ಬೇಕೆಂದು ಸಂಗ್ರಹಿಸಿಟ್ಟುಕೊಳ್ಳಲು ನಿರಾಕರಿಸುತ್ತಾ, ‘ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ? ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿ
ಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ? ಈಶ್ವರ ನೊಪ್ಪ. ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ದೂರ ಮಾರಯ್ಯ’ ಎಂದು, ಶರಣರು ಕಾಯಕವನ್ನೇ ನಂಬಿ ಬದುಕುವುದರಿಂದ ನಾಳಿನ ಕಾಯಕ ನಿಲ್ಲಬಾರದೆಂದರೆ ಇಂದು ಯಾವುದನ್ನೂ ಸಂಗ್ರಹಿಸದೆ ಇರುವುದು ಸೂಕ್ತ ಎಂದು ಕಾಯಕಪ್ರಜ್ಞೆಯನ್ನು ಎಚ್ಚರಿಸುತ್ತಾಳೆ.
ಇಂಥ ಸಂಸ್ಕೃತಿ ಮತ್ತು ನೆಲದಿಂದ ಬಂದ ನಾವು ಕಾಯಕತತ್ತ್ವವನ್ನು ಮರೆತು ಸಂಗ್ರಹ ಗುಣವನ್ನು ಅತಿಯಾಗಿ ನಂಬಿರು
ವುದೇ ಇಂದಿನ ಅವಘಡಗಳಿಗೆ ಕಾರಣವಾಗುತ್ತಲಿದೆ. ನಾನು ಪೊಲೀಸ್ ಇಲಾಖೆಯಲ್ಲಿ ೨೯ ವರ್ಷಗಳ ಅನುಭವಿ. ೧೯೯೪ರ ತಂಡದ ಪೊಲೀಸ್ ಅಧಿಕಾರಿಯಾಗಿದ್ದು ನಾನು ಇಲಾಖೆಯೊಳಗಿನ ಅನೇಕ ಸಂದರ್ಭಗಳಿಗೆ ಸಾಕ್ಷಿಯಾಗಿರುವೆ. ಹಿಂದಿನ ಮತ್ತು ಇಂದಿನ ರಾಜಕೀಯ ವ್ಯವಸ್ಥೆಗಳನ್ನೂ ನಾನು ಕಂಡಿರುವುದರಿಂದ ಒಂದಷ್ಟು ವೈಯಕ್ತಿಕ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಬಯಸುವೆ.
ಇತ್ತೀಚಿನ ಕೆಲ ವಿದ್ಯಮಾನಗಳು ಹೀಗೆ ಬರೆಯುವಂತೆ ನನ್ನನ್ನು ಪ್ರೇರೇಪಿಸುತ್ತಿವೆ. ೧೯೯೬-೯೭ನೇ ಸಾಲಿನಲ್ಲಿ ನಮ್ಮ ಬ್ಯಾಚ್‌ಗೆ ಸೇರಿದ ಶೇಷಪ್ಪ ಎಂಬ ಪಿಎಸ್‌ಐರವರು ಬೆಂಗಳೂರು ಗಂಗಮ್ಮನಗುಡಿ ಠಾಣೆಯಲ್ಲಿ ಸೇವೆ ಸಲ್ಲಿಸುವಾಗ ತಮ್ಮ ಸರ್ವೀಸ್ ರಿವಾಲ್ವಾರ್‌ನಿಂದ ಆತ್ಮಹತ್ಯೆ ಮಾಡಿಕೊಂಡರು. ಅಂದು ಅವರು ಅದ್ಯಾವ ಒತ್ತಡಕ್ಕೆ ಗುರಿಯಾಗಿದ್ದರೋ ಏನೋ? ನಮ್ಮ ಬ್ಯಾಚ್‌ನವರೇ ಆದ ಚಂದ್ರಹಾಸ ಲಕ್ಷ್ಮಣ ನಾಯಕ್, ಲಕ್ಷ್ಮಣ ಬಿಡೀಕರ್, ಎಸ್.ಎಂ. ಶಿವಕುಮಾರ್, ನದೀಂ ಉಲ್ಲಾ ಸೇರಿದಂತೆ
ಹಲವರು ಹೃದಯಸ್ತಂಭನಕ್ಕೊಳಗಾಗಿ ಜೀವ ಕಳೆದುಕೊಂಡರು. ಹಾಗೆಯೇ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಶ್ರೀಕಿರಣ್ ಎಂಬ ಪಿಎಸ್‌ಐ ನೇಣಿಗೆ ಕೊರಳೊಡ್ಡಿದರು.
ಕೆ.ಆರ್. ಪುರದಲ್ಲಿ ಕೆಲಸ ಮಾಡುತ್ತಿದ್ದ ನಂದೀಶ್, ಮಂಜುನಾಥ ಗೌಡ, ಚಿತ್ರದುರ್ಗದ ಲಿಂಗರಾಜ್ ಹೀಗೆ ಹಲವಾರು ಅಧಿಕಾರಿಗಳು ಲೋಕಬಿಟ್ಟು ತೆರಳಿದರು. ಕೆಳಹಂತದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲೇ ಈ ಆತ್ಮಹತ್ಯೆಯ ಪರಿಪಾಠ, ಹೃದಯಾಘಾತ ಕಂಡುಬರುವುದೇಕೆ? ಇದಕ್ಕೆ ಎಲ್ಲರಿಂದಲೂ ಸಿಗುವ ಕಟ್ಟಕಡೆಯ ಉತ್ತರವೆಂದರೆ ‘ಒತ್ತಡ’.
ಅಷ್ಟಕ್ಕೂ, ಈ ‘ಒತ್ತಡ’ ಎಂಬುದು ಪೊಲೀಸ್ ಅಧಿಕಾರಿಗಳ ಮೇಲೆಯೇ ಬಹಳ ಬಿರುಸಾಗಿ ಅಪ್ಪಳಿಸುವುದೇಕೆ? ಎಂಬುದು ಯಕ್ಷಪ್ರಶ್ನೆ.
ಮೊದಲಿಗೆ, ಒಬ್ಬ ಪೊಲೀಸ್ ಅಧಿಕಾರಿಯು ಈ ಸಮಾಜದ ಆಸ್ತಿ. ಸಮಾಜದಲ್ಲಿನ ಜನರ ಪ್ರಾಣ, ಮಾನ, ಆಸ್ತಿಗಳ ರಕ್ಷಣೆ ಹಾಗೂ ಸಂವಿಧಾನ ಬದ್ಧವಾದ ಶಾಸನಗಳ ಅನುಷ್ಠಾನಕ್ಕೆ ನೆರವಾಗುವುದು ಆತನ ಪ್ರಮುಖ ಕೆಲಸ. ಸರಕಾರವೊಂದರ ಮುಖವಾಣಿ
ಯಾಗಿಯೇ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಯೊಬ್ಬ, ಈ ನೆಲದ ಕಾನೂನು-ಕಟ್ಟಳೆಗಳ ಅನುಷ್ಠಾನಕ್ಕೆ ಒತ್ತಾಸೆಯಾಗಿ ನಿಂತು ಜನರ ಜೀವ ಮತ್ತು ಆಸ್ತಿಗಳನ್ನು ಉಳಿಸುವಂಥ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾನೆ.
ಹೀಗಾಗಿ, ಈ ಪೊಲೀಸ್ ಅಧಿಕಾರಿಯು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕೆಂದರೆ, ಸಮಾಜವು ಆತನಿಗಿಂತಲೂ ಹೆಚ್ಚು ಮುತುವರ್ಜಿಯಿಂದ ಆ ಅಧಿಕಾರಿಯನ್ನು ಪೋಷಿಸಬೇಕಾಗುತ್ತದೆ. ಇದು ಕೇವಲ ಮಾತಲ್ಲ, ಇಂದು ಇದು ಅನಿವಾರ್ಯವೂ ಆಗಿದೆ. ಎಲ್ಲರನ್ನೂ ರಕ್ಷಿಸುವ ಪೊಲೀಸ್ ಅಧಿಕಾರಿಗೇ ರಕ್ಷಣೆ ಇಲ್ಲವೆಂದರೆ ಈ ಸಮಾಜವನ್ನು ರಕ್ಷಿಸುವವರಾದರೂ ಯಾರು? ಎಂಬ ಪ್ರಶ್ನೆ ಮೂಡುತ್ತದೆ.
ಪೊಲೀಸ್ ಅಧಿಕಾರಿಯೊಬ್ಬ ಒತ್ತಡದಿಂದಲೋ ಮತ್ತಾವುದೋ ಕಾರಣದಿಂದಲೋ ಆತ್ಮಹತ್ಯೆಗೆ ಮುಂದಾಗುತ್ತಾನೆಂದರೆ ಅದೊಂದು ಸಂಕೀರ್ಣ ಸಮಸ್ಯೆಯೇ ಸರಿ. ಇದರಿಂದ ಸಮಾಜಕ್ಕೆ ಆಘಾತಕಾರಿ ಸಂದೇಶ ರವಾನೆಯಾಗುವುದರಲ್ಲಿ ಸಂದೇಹ ವಿಲ್ಲ. ‘ಕಟ್ಟುಮಸ್ತಾದ ದೇಹ, ಸದೃಢ ಬುದ್ಧಿಮತ್ತೆ, ಆಲೋಚನಾ ಸಾಮರ್ಥ್ಯ, ವಿಮರ್ಶಕ ಶಕ್ತಿಯಿದ್ದರೂ ಇವರೇಕೆ ಆತ್ಮಹತ್ಯೆ ಮಾಡಿಕೊಳ್ಳ ಬೇಕು?’ ಎಂದು ಕೆಲವರು ಪ್ರಶ್ನಿಸುವುದಿದೆ. ಪೊಲೀಸ್ ಅಧಿಕಾರಿಗಳು ಮೇಲ್ನೋಟಕ್ಕೆ ಸದೃಢರಾಗಿದ್ದರೂ, ಮಾನ
ಸಿಕವಾಗಿ ಗಟ್ಟಿಗರಾಗಿದ್ದರೂ ಕೆಲವೊಂದು ಸಮಯ- ಸಂದರ್ಭಗಳು ಅವರನ್ನೂ ಅಧೀರರನ್ನಾಗಿ ಮಾಡಿಬಿಡುತ್ತವೆ. ಪೊಲೀಸ್ ಅಧಿಕಾರಿಯೊಬ್ಬ ತನ್ನ ಕಾರ್ಯವ್ಯಾಪ್ತಿಯಲ್ಲಿ ಬಲು ಉತ್ತಮವಾಗಿಯೇ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದರೂ, ಯಾವುದೋ ಒಂದು ಪ್ರಕರಣ ಅವನನ್ನು ಅಕ್ಷರಶಃ ಬೆದರಿಸಿಬಿಟ್ಟಿರುತ್ತದೆ.
ಅಷ್ಟು ದಿನ ಗಳಿಸಿದ ಮಾನ-ಗೌರವಗಳೆಲ್ಲವೂ ಏಕೈಕ ಕಾರಣಕ್ಕೆ ಇಂದೇ ಮಣ್ಣುಪಾಲಾದರೆ, ನಾಳೆ ಜನರಿಗೆ ಮುಖ ತೋರಿಸುವುದು ಹೇಗೆ ಎಂಬ ಖಿನ್ನತೆಗೆ ಒಳಗಾಗುವ ಆತ,ಈ ಜಗತ್ತಿನಿಂದಲೇ ಶಾಶ್ವತವಾಗಿ ಮರೆಯಾಗುವ ಕೃತ್ಯಕ್ಕೆ ಕೈಹಾಕಿ ಬಿಡುತ್ತಾನೆ. ಜತೆಗೆ ಪೊಲೀಸ್ ಅಧಿಕಾರಿಯೊಬ್ಬ ಉತ್ತರದಾಯಿಯಾಗುವುದು ಒಬ್ಬಿಬ್ಬರಿಗಲ್ಲ; ತನ್ನ ಮೇಲಧಿಕಾರಿಗಳು, ತನ್ನ ಸಿಬ್ಬಂದಿವರ್ಗ, ಟಿಪ್ಪಣಿ ಕೊಟ್ಟು ತನ್ನನ್ನು ಪೋಸ್ಟ್ ಮಾಡಿಸಿಕೊಂಡ ರಾಜಕಾರಣಿ, ಈ ಸಮಾಜ, ತನ್ನ ಕುಟುಂಬ, ಪತ್ರಕರ್ತರು ಹೀಗೆ ಸಮಾಜದ ವಿವಿಧ ಸ್ತರಗಳಿಗೆ ಆತ ಉತ್ತರದಾಯಿಯಾಗಿರುತ್ತಾನೆ.
ಹೀಗೆ ಸಮಾಜದ ಎಲ್ಲ ಸ್ತರದವರನ್ನೂ ಚೆಂದವಾಗಿ ನೋಡಿಕೊಂಡು, ಬಳಸಿಕೊಳ್ಳಲು ಆತ ಯಾವಾಗಲೂ ಯತ್ನಿಸುತ್ತಿರುತ್ತಾನೆ. ಆದರೆ ಈ ವ್ಯವಸ್ಥೆಯಲ್ಲಿ ಎಲ್ಲಾದರೊಂದು ಕಡೆ ಬಿರುಕು ಬಂದರೆ, ಅಂಥ ವೇಳೆ ಸದರಿ ಪೊಲೀಸ್ ಅಧಿಕಾರಿ ಅಧೀರನಾಗುತ್ತಾನೆ. ಕೆಲವೊಮ್ಮೆ ಯಂತೂ ಒತ್ತಡವನ್ನು ತಾಳಲಾಗದೆ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಮುಂದಾಗುತ್ತಾನೆ. ಪೊಲೀಸ್ ಅಧಿಕಾರಿಗಳು
ವಿವಿಧ ಕಾರಣಗಳಿಗೆ ಅಽರರಾಗುವುದರ ಜತೆಗೆ ನಾಳೆಗಳ ಬಗ್ಗೆ ಅತಿಯಾಗಿ ಯೋಚಿಸುವ ಪರಿಣಾಮ ಇಂಥ ಅವಘಡಗಳು ಸಂಭವಿಸುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಈ ಎಲ್ಕಕ್ಕೂ ಮಿಗಿಲಾದ ಕಾರಣಗಳು ಬೇರೆಯೇ ಇವೆ. ಅವುಗಳ ಪೈಕಿ ಕೆಲವನ್ನು ಹೇಳಲಾಗದೆ, ಮುಚ್ಚಿಡಲೂ ಆಗದೆ ತೊಳಲಾ ಡುವ ಸಂದರ್ಭಗಳೇ ಜಾಸ್ತಿ ಎನಿಸುತ್ತದೆ. ಇಂದಿನ ವ್ಯವಸ್ಥೆಯಲ್ಲಿ ಅಧಿಕಾರಿಯೊಬ್ಬ ಒಂದು ‘ಪೋಸ್ಟಿಂಗ್’ ತೆಗೆದುಕೊಳ್ಳ ಬೇಕೆಂದರೆ ಹಲವು ರೀತಿಯ ಸರ್ಕಸ್ ಮಾಡಬೇಕು. ಆತ ಹೀಗೆ ಮಾಡುವ ಕಸರತ್ತುಗಳು ಹೇಗಿರುತ್ತವೆಯೆಂದರೆ, ಮತ್ತೊಬ್ಬರಲ್ಲಿ ಹೇಳಿಕೊಳ್ಳಲಾಗದ, ಹಾಗಂತ ಸುಮ್ಮನಿರಲಾಗದ ಒಂದು ತೆರನಾದ ಮಾನಸಿಕ ಅವ್ಯವಸ್ಥೆ ಆವರಿಸಿ ಅವನನ್ನು ಮೂಕನನ್ನಾಗಿ ಸುತ್ತದೆ. ತನ್ನ ಕೆಲಸಕ್ಕಾಗಿ ಆತ ಯಾರನ್ನೋ ಹಿಡಿಯಬೇಕು, ಮತ್ಯಾರ ಮೂಲಕವೋ ಪ್ರಭುತ್ವ ಇರುವವರ ಮಿನಿಟ್ ಹಾಕಿಸಬೇಕು. ಹೀಗೆ ಮಿನಿಟ್ ಪಡೆಯುವಾಗ ನಡೆಯುವ ಒಳಸುಳಿಗಳೇ ಬೇರೆ!
ಅವನ್ನು ಮೀರಿದ ಮೇಲೆ, ಮತ್ಯಾರಾದರೂ ಪೈಪೋಟಿ ನಡೆಸುತ್ತಿದ್ದಾರೆಯೇ ಎಂದು ಎಚ್ಚರವಾಗಿರಬೇಕು, ನಂತರ ಆದೇಶ ಬರುವುದ ಕ್ಕಾಗಿ ಎಲ್ಲೆಲ್ಲೋ ಹಲವು ಬಾರಿ ಎಡತಾಕಬೇಕು. ಹೀಗೆ ಹೋರಾಡಿ ಪೋಸ್ಟಿಂಗ್ ಪಡೆದ ನಂತರ, ಈ ಮೊದಲೇ
ಆತ ಒಳಸುಳಿಗೆ ಬಲಿಯಾಗಿದ್ದಕ್ಕೆ ಆತ ಪ್ರಾಮಾಣಿಕ ನಾಗಿದ್ದರೂ ಮುಂದೆ ಅಪ್ರಾಮಾಣಿಕನಾಗಿ ‘ಈ ಸಮಾಜಕ್ಕೆ ಇವನು ಕಂಟಕ’ ಎಂಬ ಸಂದೇಶ ರವಾನೆಯಾಗುತ್ತದೆ.
ಇಷ್ಟೆಲ್ಲ ಆದ ಮೇಲೆ ಆತನೂ ನಿಸ್ವಾರ್ಥ ಸೇವೆಯ ಇರಾದೆಯಿರದೆ ಬೇರೊಂದು ವ್ಯವಸ್ಥೆಗೆ ಬಲಿಯಾಗಿರುತ್ತಾನೆ, ತನಗೆ ಅರಿವಿಲ್ಲ ದಂತೆ ಅದರ ಬಂದಿಯಾಗಿಬಿಟ್ಟಿರುತ್ತಾನೆ!
ನಿಮಗಿದು ಗೊತ್ತಾ ? ಕ್ಲಿಕ್ ಮಾಡಿ ಓದಿ… ಖಾಸಗಿ ಸಹಭಾಗಿತ್ವದ ಚಿಕಿತ್ಸೆ ಅತ್ಯವಶ್ಯಕ
(ನಾಳಿನ ಸಂಚಿಕೆಗೆ)