Thursday, 12th December 2024

ಖಿನ್ನತೆಯಿಂದ ಹೊರಬರಲು ಉಪಾಯಗಳು

ವಿಶ್ಲೇಷಣೆ -೨

ರವೀ ಚಿಕ್ಕನಾಯಕನಹಳ್ಳಿ

‘ಪೊಲೀಸರಲ್ಲಿಯೇ ಏಕೆ ಈ ಹೃದಯ ಸ್ತಂಭನ?’ ಎಂಬ ಶೀರ್ಷಿಕೆಯಲ್ಲಿ ನಿನ್ನೆ ಸಾದರಪಡಿಸಿದ್ದ ಬರಹದ ಮುಂದುವರಿದ ಭಾಗವನ್ನು ಇಲ್ಲಿ ನೋಡೋಣ.

ಇತ್ತೀಚೆಗೆ ಪೊಲೀಸ್ ಇಲಾಖೆಗೆ ಬರುತ್ತಿರುವ ಅಧಿಕಾರಿಗಳ ಮನಸ್ಥಿತಿಯು ಏಕೋ ಏನೋ ಸ್ವಲ್ಪ ಸುಧಾರಿಸಬೇಕಿದೆ ಎನಿಸುತ್ತದೆ. ಕಾರಣ, ಇಲಾಖೆಗೆ ಬಂದ ಹೊಸತರಲ್ಲಿಯೇ, ತಾವು ಇಲಾಖೆಗೆ ಬರುವುದಕ್ಕೂ ಮುನ್ನ ಕಂಡಿದ್ದ ಕನಸುಗಳನ್ನು ಅವರು ಸಂಪೂರ್ಣ ಮರೆತಿರುತ್ತಾರೆ. ಅಂದರೆ,
ಇಲಾಖೆಗೆ ಸೇರಿಕೊಳ್ಳುವುದಕ್ಕೂ ಮುನ್ನ, ‘ಯಾವ ಪೋಸ್ಟಿಂಗ್ ಆದರೂ ಕೊಡಲಿ ಕೆಲಸ ಮಾಡುತ್ತೇನೆ. ಕಾಯಾ-ವಾಚಾ-ಮನಸಾ ಕರ್ತವ್ಯ ನಿರ್ವಹಿಸುತ್ತೇನೆ’ ಎಂದು ಸಂಕಲ್ಪಿಸಿಕೊಂಡಿದ್ದ ಅಧಿಕಾರಿಗಳು, ಹುದ್ದೆಗೆ ಸೇರ್ಪಡೆಯಾಗುತ್ತಿದ್ದಂತೆ ತಮ್ಮ ಆದರ್ಶಗಳಿಗೆ, ನಿಸ್ವಾರ್ಥ ಬುದ್ಧಿಗೆ ತಿಲಾಂಜಲಿ ನೀಡುತ್ತಾರೆ.

ನಂತರ ತಮಗರಿವಿಲ್ಲದಂತೆ ಸ್ವಾರ್ಥಕ್ಕೆ ಬಲಿಯಾಗಿ, ಕರ್ತವ್ಯ ನಿರ್ವಹಣೆಯಲ್ಲಿ ಬದ್ಧತೆ ತೋರದೆ, ತಾವು ಕೋರುವ ಸ್ಥಳವೇ ಬೇಕೆಂದು ಒಳಸುಳಿಗಳ ಮಾರ್ಗದಲ್ಲಿ ಪಡೆಯಲಿಚ್ಛಿಸಿ, ಪಡೆದ ನಂತರವೂ ತಮ್ಮ ಎಣಿಕೆಯಂತಾಗಲಿಲ್ಲ ಎಂದು ತಮಗೆ ತಾವೇ ಒತ್ತಡಕ್ಕೆ ಬಲಿಯಾಗುತ್ತಾರೆ.
ಅದರ ಪರಿಣಾಮವಾಗಿ ಹೃದಯಸ್ತಂಭನದಂಥ ಅವಘಡ ಗಳು ಜರುಗುತ್ತವೆ. ಇವಕ್ಕೆಲ್ಲ ಕೊನೆಯಾದರೂ ಎಂದು? ಈ ಬಗ್ಗೆ ಆಲೋಚಿಸಿ ಕಾರ್ಯೋನ್ಮುಖರಾಗುವ ಕಾಲಘಟ್ಟವು ಸನ್ನಿಹಿತವಾಗಿದೆ.

ಕೆಲವು ಸ್ನೇಹಿತರು, ನೆಂಟರಿಷ್ಟರು, ಕುಟುಂಬದವರು ಪೊಲೀಸ್ ಅಧಿಕಾರಿಗಳನ್ನು ನೋಡುವುದೇ ಬೇರೊಂದು ದೃಷ್ಟಿಯಲ್ಲಿ. ಪೊಲೀಸ್ ಅಧಿಕಾರಿ ಎಂದರೆ ಹಣವನ್ನು ಪ್ರಿಂಟ್ ಮಾಡುವ ಯಂತ್ರ ಎಂದೇ ಅವರು ಭಾವಿಸಿರುತ್ತಾರೆ. ಪೊಲೀಸರಿಗೆ ಒದಗುವ ಮನೋಹಿಂಸೆಗೆ ಇದೂ ಒಂದು
ಕಾರಣವಾಗಿದೆ. ಪೊಲೀಸ್ ಇಲಾಖೆಯಲ್ಲಿದ್ದಾರೆಂದರೆ ಮುಗಿಯಿತು, ‘ಆತ ಹೇರಳ ಹಣ ಗಳಿಸುತ್ತಾನೆ, ಆಸ್ತಿ-ಪಾಸ್ತಿ ಮಾಡಿರುತ್ತಾನೆ, ಅಂತಸ್ತಿನ ಮೇಲೆ ಅಂತಸ್ತು ಇರುವ ಕಟ್ಟಡವನ್ನು ಕಟ್ಟಿಸಿರುತ್ತಾನೆ’ ಎಂದೇ ಇಂಥವರಲ್ಲಿ ಕೆಲವರು ಗ್ರಹಿಸಿರುತ್ತಾರೆ.

ಅಧಿಕಾರಿಯೊಬ್ಬ ತನ್ನ ಸೇವಾವಧಿಯಲ್ಲಿ ಭ್ರಷ್ಟನಾಗದೆ ಉತ್ತಮ ಅಧಿಕಾರಿಯಾಗಿ ಹೊರಹೊಮ್ಮಿದರೆ, ಉತ್ತಮ ಗುಣ-ನಡತೆ ಹೊಂದಿದವನು ಎಂದು ಹೆಸರಾದರೆ, ‘ಪೊಲೀಸ್ ಇಲಾಖೆಯಲ್ಲಿ ಇರಲು ಇವನು ನಾಲಾಯಕ್ಕು’ ಎಂದು ನಮ್ಮವರೇ ಹಣೆಪಟ್ಟಿ ಅಂಟಿಸಿಬಿಡುತ್ತಾರೆ. ಇಂಥ ನಿದರ್ಶನಗಳಲ್ಲೂ ಪೊಲೀಸ್ ಅಧಿಕಾರಿಗಳು ಒತ್ತಡ ಅನುಭವಿಸುವಲ್ಲಿ ಹಿಂದೆ ಬಿದ್ದಿಲ್ಲ. ಇಂಥ ಹಲವಾರು ಅಂಶಗಳಿಂದ ಕೆಳಹಂತದ ಪೊಲೀಸ್ ಅಧಿಕಾರಿಗಳು ಮಾನಸಿಕ ಖಿನ್ನತೆಗೂ ಒಳಗಾಗುತ್ತಾರೆ. ಇದಕ್ಕಿರುವ ಕಾರಣಗಳು ಪ್ರತ್ಯಕ್ಷವಾಗಿರಬಹುದು ಅಥವಾ ಪರೋಕ್ಷವಾಗಿಯೂ ಇರಬಹುದು. ಹೀಗೆ ಖಿನ್ನತೆಗೆ ಒಳಗಾಗಿ ಪರಿತಪಿಸುತ್ತಿರುವವರಲ್ಲಿ ಕೆಲವು ಸ್ವಯಂಕೃತ ತಪ್ಪುಗಳೂ ಅವರ ಈ ಸ್ಥಿತಿಗೆ ಜತೆಗೂಡಿರುತ್ತವೆ. ಇವುಗಳಿಂದ ಹೊರಬರಲು ಮಾರ್ಗೋಪಾಯಗಳು ಇಲ್ಲವೇ ಇಲ್ಲ ಎಂದೇನಿಲ್ಲ.

ಅವುಗಳಲ್ಲಿ ಕೆಲವು ಹೀಗಿವೆ:

ಅತಿಯಾಸೆ ಪಡದೆ ಇರುವುದರಲ್ಲಿಯೇ ತೃಪ್ತಿಪಡುವುದು. ಅಧಿಕಾರಿ ಎಂಬ ಮೇಲರಿಮೆ ಇಟ್ಟುಕೊಳ್ಳದೆ ತನ್ನ ವ್ಯಾಪ್ತಿ ಏನೆಂದು ಅರಿತುಕೊಂಡು ಕರ್ತವ್ಯ ನಿರ್ವಹಿಸುವುದು. ಯಾರು ಏನೇ ನಿರೀಕ್ಷಣೆ ಮಾಡಿದರೂ ತನ್ನ ಪಾಲಿನ ಕರ್ತವ್ಯವನ್ನು ಬದ್ಧತೆಯಿಂದ ಮಾಡುವುದು. ಕಾರ್ಯಕಾರಿ (ಎಕ್ಸಿಕ್ಯುಟಿವ್) ಹುದ್ದೆ ಮಾತ್ರವೇ ಪೊಲೀಸ್ ಹುದ್ದೆಯಲ್ಲ, ಇಲಾಖೆಯ ಎಲ್ಲ ರೀತಿಯ ನಾನ್ -ಎಕ್ಸಿಕ್ಯುಟಿವ್ ಹುದ್ದೆಗಳೂ ಗೌರವ ತರುವಂಥ
ಹೊಣೆಗಾರಿಕೆಗಳೇ ಎಂಬ ಭಾವ ಮೊಳೆಯಬೇಕು. ನಾನ್ -ಎಕ್ಸಿಕ್ಯುಟಿವ್ ಹುದ್ದೆಯೆಂಬುದು ‘ಕೇವಲ’ ಎಂಬ ಕೀಳರಿಮೆಯನ್ನು ತೆಗೆದುಹಾಕಬೇಕು.
ಸಮಯ ಸಿಕ್ಕಾಗಲೆಲ್ಲ ಆದರ್ಶಮಯಿ ಅಧಿಕಾರಿಗಳು,

ನಾಯಕರು ಮತ್ತು ವ್ಯಕ್ತಿತ್ವಗಳ ಬಗ್ಗೆ ಇರುವ ಕೃತಿಗಳನ್ನು ಓದಿ ಭಾವಪ್ರಪಂಚವನ್ನು ವಿಸ್ತರಿಸಿಕೊಳ್ಳಬೇಕು. ಕುಟುಂಬದವರೊಂದಿಗೆ ದುಂದುವೆಚ್ಚ ಮಾಡದೆ, ಇರುವುದರಲ್ಲಿಯೇ ತೃಪ್ತಿಪಡುವಂಥ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ಹಿರಿಯ ಅಧಿಕಾರಿಗಳೆನಿಸಿಕೊಂಡವರು ಕಿರಿಯ ಅಧಿಕಾರಿ ಗಳನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗಬೇಕು. ರಜೆ ಹಾಗೂ ಇತರೆ ಸವಲತ್ತುಗಳು ಕಟ್ಟಕಡೆಯ ಪೊಲೀಸ್ ಸಿಬ್ಬಂದಿಗೂ ತಲುಪುವಂತೆ ನೋಡಿಕೊಳ್ಳಬೇಕು. ಅಪರಾಧಗಳು ಘಟಿಸಿದಾಗ ಅಧಿಕಾರಿಗಳು ಜನರ ಮುಂದೆ ಕೆಟ್ಟದಾಗಿ ನಡೆದುಕೊಂಡು ‘ಆತನೇ ಅಪರಾಧಿ’ ಎಂಬಂತೆ ಬಿಂಬಿಸುವ ಮನಸ್ಥಿತಿಯನ್ನು ಹೋಗಲಾಡಿಸಬೇಕು.

ಇಲಾಖೆಗೆ ಸೇರುವ ಮೊದಲು ಇದ್ದ ಮನಸ್ಥಿತಿಯೇ ಇಲಾಖೆಗೆ ಸೇರಿದ ನಂತರವೂ ಇರಬೇಕು. ‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ
ತತ್ತ್ವವನ್ನು ಪಾಲಿಸುತ್ತಾ ಕರ್ತವ್ಯವನ್ನು ನಿರ್ವಹಿಸಬೇಕು. ಕಾರ್ಯಕಾರಿ ಹುದ್ದೆಯಲ್ಲಿದ್ದವರಷ್ಟೇ ಯೋಗ್ಯರು ಮತ್ತು ಶ್ರೇಷ್ಠರು ಎಂಬ ಚಿತ್ತಸ್ಥಿತಿಯನ್ನು ತೊಡೆದುಹಾಕಿ, ಪಾಲಿಗೆ ಬಂದ ಕೆಲಸವನ್ನೇ ಗೌರವಯುತವಾಗಿ ನಿರ್ವಹಿಸುತ್ತಾ ಕಾಯಕಯೋಗಿಗಳಾಗಬೇಕು. ಪೊಲೀಸರೂ ನಮ್ಮವರೇ ಎಂದು ಸಮಾಜವು ಒಪ್ಪಿಕೊಂಡು ಅವರನ್ನು ಗೌರವಿಸಬೇಕು. ಪೊಲೀಸ್ ಇಲಾಖೆಯೂ ಸರಕಾರದ ಒಂದು ಇಲಾಖೆಯೇ. ನಾನು ನೋಡಿದ ಹಾಗೆ, ಇತರೆ ಇಲಾಖೆಗಳ ವಿರುದ್ಧ ಜನರು ಪ್ರತಿಭಟನೆ ಮಾಡುವಾಗ ಆ ಇಲಾಖಾ ಅಧಿಕಾರಿಗಳು ಮೌನವಾಗಿರುತ್ತಾರೆ.

ಆಗ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು, ಶಿಸ್ತನ್ನು ಕಾಪಾಡುವ ನಿಟ್ಟಿನಲ್ಲಿ ಅಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿರುತ್ತಾರೆ, ಅಷ್ಟೇ. ಆದರೆ ಜನರ ಪ್ರತಿಭಟನೆಯ ಕೋಪ ಕೊನೆಗೆ ಹಾಯುವುದು ಪೊಲೀಸರ ಮೇಲೆಯೇ! ಹೀಗಾಗಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಸಂಘರ್ಷವೇ ಏರ್ಪಡುತ್ತದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲೆಂದು ಪೊಲೀಸ್ ಸಿಬ್ಬಂದಿ ತಮ್ಮ ಕುಟುಂಬ, ತಿಂಡಿ-ಊಟ, ನಿದ್ರೆ ಬಿಟ್ಟು ಬೀದಿಯಲ್ಲಿಯೇ ಕಾರ್ಯನಿರ್ವಹಿಸಬೇಕಾಗುತ್ತದೆ.

ಆದರೆ, ಅರಣ್ಯ, ಅಬಕಾರಿ, ಗಣಿ, ಇಂಧನ, ಕಂದಾಯ ಹೀಗೆ ವಿವಿಧ ಇಲಾಖೆಗಳು ಇದ್ದರೂ ಜನರ ನಿರೀಕ್ಷೆಯು ಪೊಲೀಸ್ ಇಲಾಖೆಯ ಮೇಲೆಯೇ ಇರುತ್ತದೆ. ಎಲ್ಲಾ ಜವಾಬ್ದಾರಿಯು ಪೊಲೀಸರದ್ದೇ ಎಂಬುದೇ ನಮ್ಮ ಬಹುತೇಕ ಜನರ ಗ್ರಹಿಕೆ. ಇಂಥ ಮಾನಸಿಕತೆಯೇ ಪೊಲೀಸರ ಮೇಲಿನ ಒತ್ತಡಕ್ಕೆ ಕಾರಣವಾಗುತ್ತದೆ. ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಅಂಶಗಳಿವೆ, ಹಲವಾರು ಮಾತುಗಳಿವೆ.

ಸದ್ಯಕ್ಕಿಷ್ಟು ಸಾಕು. ಮುಗಿಸುವ ಮುನ್ನ ಒಂದು ಮಾತು: ‘ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು? ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ?
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? ಮುಷ್ಟಿ ಪಿಷ್ಟವು ತಾನೆ? ಮಂಕುತಿಮ್ಮ’ ಎಂಬ ಡಿವಿಜಿಯವರ ಮಾತನ್ನು ಮನಗಂಡು, ತಂತಮ್ಮ ಪಾಲಿನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದರೆ ಯಾರೂ ಆತ್ಮಹತ್ಯೆಯ ಮೊರೆಹೋಗಬೇಕಾಗಿ ಬರುವುದಿಲ್ಲ, ಅಂಥವರಿಗೆ ಹೃದಯ ಸ್ತಂಭನವೂ ಜರುಗುವುದಿಲ್ಲ..