Sunday, 15th December 2024

ಜಿಎಸ್‌ಟಿ: ಸ್ವಚ್ಛ ಆರ್ಥಿಕತೆಯ ಬೂಸ್ಟರ್ ಡೋಸ್

ಸಮರ್ಥನೆ

ಪ್ರಕಾಶ್ ಶೇಷರಾಘವಾಚಾರ್‌

ಜಿಎಸ್‌ಟಿ ಅಳವಡಿಕೆಯ ಆರಂಭದಲ್ಲಿ ಅನೇಕ ಸಮಸ್ಯೆಗಳು ಎದುರಾದವು. ಆದರೆ ಸರಕಾರವು ಉದ್ಯಮಿಗಳು ಮತ್ತು ತೆರಿಗೆ ವಿಶೇಷಜ್ಞರ ಜತೆ ನಿರಂತರ ಸಮಾಲೋಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿತು. ಈ ಬದಲಾವಣೆಗಳಿಂದ ಸರಳ-ಸುಲಭ ಕಾರ್ಯವಿಧಾನಗಳು ಚಾಲ್ತಿಗೆ ಬಂದು ವ್ಯಾಪಾರಸ್ಥರ ತಲೆನೋವು ಕಡಿಮೆಯಾಗಿದೆ.

ಜುಲೈ ೧ರಂದು ಜಿಎಸ್‌ಟಿ ದಿನವೆಂದು ಆಚರಿಸಲಾಗುತ್ತದೆ. ಮೋದಿ ಸರಕಾರವು ೨೦೧೭ರ ಜುಲೈ ೧ರಂದು ದೇಶದಲ್ಲಿ ನೂತನ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಪದ್ಧತಿ ಯನ್ನು ಜಾರಿಗೊಳಿಸಿತು. ಸ್ವಾತಂತ್ರ್ಯಾನಂತರದ ಈ ಅತಿದೊಡ್ಡ ಮತ್ತು ದಿಟ್ಟ ಮಾರಾಟ ತೆರಿಗೆ ಸುಧಾರಣೆಯು, ಹಳೆಯ ವ್ಯಾಟ್ ಮತ್ತು ಸೇವಾ ತೆರಿಗೆ ಅಬಕಾರಿ ಸುಂಕ ಸಂಗ್ರಹವನ್ನು ಇತಿಹಾಸಕ್ಕೆ ಸೇರಿಸಿತು. ತನ್ಮೂಲಕ ದೇಶಾದ್ಯಂತ ಏಕೀಕೃತ ಜಿಎಸ್‌ಟಿ ಪದ್ಧತಿಯ ಅಳವಡಿಕೆಯಾಯಿತು.

ಜಿಎಸ್‌ಟಿ ಜಾರಿಯು ೧೭ ಸ್ಥಳೀಯ ತೆರಿಗೆ, ಅಬಕಾರಿ ತೆರಿಗೆ, ಸೇವಾ ತೆರಿಗೆ, ವ್ಯಾಟ್, ಆಕ್ಟ್ರಾಯ್, ಪ್ರವೇಶ ತೆರಿಗೆ ಹಾಗೂ ೧೩ ಸೆಸ್‌ಗಳನ್ನು ಒಮ್ಮೆಗೇ ಆಪೋಶನ ತೆಗೆದು ಕೊಂಡಿದೆ. ವ್ಯವಸ್ಥೆಯಲ್ಲಿ ಹೊಸತನ ಮತ್ತು ಮಹತ್ತರ ಸುಧಾರಣೆ ತರುವಲ್ಲಿ ಹಿಂಜರಿ ಯುವುದಿಲ್ಲ ಎಂಬುದನ್ನು ಮೋದಿಯವರು ಪದೇಪದೆ ಸಾಬೀತುಪಡಿಸಿದ್ದಾರೆ.

ಸರ್ಜಿಕಲ್ ಸ್ಟ್ರೈಕ್, ನೋಟು ಅಮಾನ್ಯೀಕರಣ, ೩೭೦ನೇ ವಿಧಿಯ ರದ್ದತಿ ಮತ್ತು ನೂತನ ಸಂಸತ್ ಭವನ ನಿರ್ಮಾಣ ಈ ಎಲ್ಲ ತೀರ್ಮಾನಗಳಲ್ಲೂ ಪ್ರಬಲ ರಾಜಕೀಯ ಇಚ್ಛಾಶಕ್ತಿ ಯನ್ನು ಕಾಣಬಹುದು. ಜಿಎಸ್‌ಟಿ ಪದ್ಧತಿಯ ಅಳವಡಿಕೆಯ ನಿರ್ಧಾರ ಕೈಗೊಳ್ಳುವಾಗಲೂ ಜನಪ್ರಿಯತೆಯ ಹಿಂದೆ ಹೋಗದೆ, ದೇಶದ ಹಿತಕ್ಕೆ ಆದ್ಯತೆ ನೀಡಿ, ‘ಔಷಧಿ ಕಹಿಯಾದರೂ, ಆರೋಗ್ಯ ಸುಧಾರಣೆ ಅನಿವಾರ್ಯ’ ಎಂದು ದೇಶದ ಆರ್ಥಿಕತೆಯನ್ನು ಸ್ವಚ್ಛಗೊಳಿಸಲು ಜಿಎಸ್‌ಟಿ ಎಂಬ ಬೂಸ್ಟರ್ ಡೋಸ್ ಕೊಟ್ಟ ಮೋದಿಯವರು, ಆರಂಭಿಕ ಹಿನ್ನಡೆ-ಟೀಕೆ ಗಳನ್ನು ಸಮರ್ಥವಾಗಿ ಎದುರಿಸಿದರು ಮತ್ತು ತಪ್ಪುಗಳನ್ನು ಸರಿಪಡಿಸಿ ವ್ಯವಸ್ಥೆಯನ್ನು ಸ್ಥಿರಗೊಳಿಸಿದರು.

ಆದರೆ ಜಿಎಸ್‌ಟಿ ಜಾರಿಯಾದಂದಿನಿಂದಲೂ ಅದರ ವಿರುದ್ಧ ಅಪಪ್ರಚಾರ ಜೋರಾಗಿ ನಡೆಯುತ್ತಿದೆ. ‘ಜಿಎಸ್‌ಟಿ ಎಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ರಾಹುಲ್ ಗಾಂಧಿಯವರು ಕೇವಲ ವಾಗಿ ವಾಗ್ದಾಳಿ ಮಾಡಿದರೆ, ಜಿಎಸ್‌ಟಿ ಕಾಯ್ದೆಯನ್ನು ಸದನದಲ್ಲಿ ಅವಿರೋಧವಾಗಿ ಅನುಮೋದಿಸಿ ಹೊರಬಂದು ಟೀಕೆ ಮಾಡಿದವರಿಗೇನೂ ಕಮ್ಮಿಯಿಲ್ಲ! ಗುಜರಾತ್ ಮುಖ್ಯಮಂತ್ರಿಯಾಗಿ
ದ್ದಾಗ ಮೋದಿಯವರು ಜಿಎಸ್‌ಟಿ ಜಾರಿಗೆ ವಿರೋಧಿಸಿದ್ದರು ಎಂಬುದು ಅವರ ವಿರೋಧಿಗಳ ಆಕ್ಷೇಪ. ಇದಕ್ಕೆ ಮೋದಿಯವರು, ‘ಜಿಎಸ್ ಟಿಯಿಂದ ಉತ್ಪಾದನಾ ಚಟುವಟಿಕೆಯ ರಾಜ್ಯ ಗಳಿಗೆ ತೊಂದರೆಯಾಗುತ್ತಿತ್ತು, ಅದನ್ನು ಬಗೆಹರಿಸಲು ಅಂದಿನ ಯುಪಿಎ ಸರಕಾರ ಯತ್ನಿಸಲಿಲ್ಲ.

ಆದರೆ ನಾವು ಆ ಸಮಸ್ಯೆಗಳನ್ನು ಬಗೆಹರಿಸಿ ಜಿಎಸ್‌ಟಿ ಜಾರಿಮಾಡಿದ್ದೇವೆ’ ಎಂದು ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಂದಿನ ಜಿಎಸ್‌ಟಿ ಸಮಾಲೋಚನಾ ಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕೃಷ್ಣ ಬೈರೇಗೌಡರು, ಜಿಎಸ್‌ಟಿ ಜಾರಿಗೆ ಬಂದಾಗ ಅದನ್ನು ಮುಕ್ತಕಂಠದಿಂದ ಪ್ರಶಂಸಿಸಿ ಸ್ವಾಗತಿಸಿದರು; ಆದರೆ ಅವರ ಹೈಕಮಾಂಡ್ ಜಿಎಸ್‌ಟಿ ವಿರುದ್ಧ ಧ್ವನಿ ತೆಗೆದ ಕಾರಣ ಮರುದಿನವೇ ತಮ್ಮ ವರಸೆ ಬದಲಾಯಿಸಿ ಮುಜುಗರಕ್ಕೆ ಒಳಗಾದರು.

ಜಿಎಸ್‌ಟಿ ಕುರಿತಾದ ಸಮಸ್ತ ನಿರ್ಧಾರಗಳನ್ನು ಕೈಗೊಳ್ಳುವುದು ಜಿಎಸ್‌ಟಿ ಕೌನ್ಸಿಲ್; ಕೇಂದ್ರ ಅಥವಾ ರಾಜ್ಯ ಸರಕಾರಗಳಿಗೆ ಈ ವಿಷಯದಲ್ಲಿ ಅಧಿಕಾರವಿಲ್ಲ. ಜಿಎಸ್‌ಟಿ ಕೌನ್ಸಿಲ್‌ನಲ್ಲಿ, ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಮತ್ತು ಅದರ ಸದಸ್ಯರು ಯಾವುದೇ ಬದಲಾವಣೆ ಅಥವಾ ನಿರ್ಧಾರ ಕೈಗೊಳ್ಳುವ ಮುನ್ನ ಅಲ್ಲಿ ವ್ಯಾಪಕ ಚರ್ಚೆಯಾಗಿ ಅನುಮೋದನೆ ಪಡೆಯಬೇಕಾಗುತ್ತದೆ. ಕೇಂದ್ರ ಸರಕಾರಕ್ಕೂ ಏಕಮುಖವಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ.

ವಿಶ್ವದಲ್ಲಿ ೧೬೦ ರಾಷ್ಟ್ರಗಳು ಜಿಎಸ್‌ಟಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಇದು ಆರ್ಥಿಕ ಚಟುವಟಿಕೆಗೆ ಪೂರಕವಾಗಿದೆ, ಸುಗಮ ವ್ಯಾಪಾರ- ವಹಿವಾಟಿಗೆ ಅನುಕೂಲಕರವಾಗಿದೆ. ಹಿಂದಿನ ತೆರಿಗೆ ಪದ್ಧತಿಗಳಿಗೆ ಹೋಲಿಸಿದರೆ ಜಿಎಸ್‌ಟಿಯಿಂದಾಗಿ
ಬಳಕೆದಾರರಿಗೆ ತೆರಿಗೆಯಲ್ಲಿ ಉಳಿತಾಯವಾಗುತ್ತಿದೆ. ಕಂಪನಿಗಳ ವಾರ್ಷಿಕ ವಹಿವಾಟು ೪೦ ಲಕ್ಷ ರು. ಮತ್ತು ಸೇವಾ ಪೂರೈಕೆಯ ವಹಿವಾಟು ೨೦ ಲಕ್ಷ ರು. ದಾಟಿದಾಗ ಅಂಥವರು ಜಿಎಸ್‌ಟಿಯಡಿ ನೋಂದಾಯಿಸಿಕೊಳ್ಳ ಬೇಕಾಗುತ್ತದೆ. ವಾರ್ಷಿಕ ವಹಿವಾಟು ೧೦ ಕೋಟಿ ರು. ದಾಟಿದಲ್ಲಿ ಅಂಥವರೆಲ್ಲರೂ ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ‘ಇ-ಇನ್‌ವಾಯ್ಸ್’ ಮೂಲಕವೇ ವ್ಯವಹರಿಸ ಬೇಕಾಗುತ್ತದೆ.

ಜಿಎಸ್‌ಟಿಯಲ್ಲಿ ಅಳವಡಿಕೆಯಾಗಿರುವ ಶ್ರೇಷ್ಠ ತಂತ್ರಜ್ಞಾನವು ವಿಶ್ವದ ಇತರೆ ಮುಂದುವರಿದ ರಾಷ್ಟ್ರಗಳಲ್ಲಿರುವ ತಂತ್ರಜ್ಞಾನ ಗಳಿಗೆ ಸಮನಾಗಿದೆ. ವ್ಯಾಪಾರಸ್ಥರು ದಿನನಿತ್ಯ ತೆರಿಗೆ ಕಚೇರಿಗೆ ಎಡತಾಕುವುದು ಇಲ್ಲವಾಗಿ, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ
ದಂತಾಗಿದೆ. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಅಧಿಕಾರಿಗಳು ಮಾಹಿತಿ ವಿನಿಮಯ ಮಾಡಿಕೊಳ್ಳುವ ಕಾರಣದಿಂದ ಪ್ರಾಮಾಣಿಕ ತೆರಿಗೆದಾರರಿಗೆ ಒಳಿತಾಗಿದೆ. ಜಿಎಸ್‌ಟಿ ಪದ್ಧತಿಯು ತೆರಿಗೆ ಸೋರಿಕೆಯನ್ನು ಬಹುತೇಕ ತಡೆದಿದ್ದು, ಅಂತಿಮ ಮಾರಾಟಗಾರ ಮತ್ತು ಬಳಕೆದಾರರ ಹಂತಗಳಲ್ಲಿ ಮಾತ್ರ ತೆರಿಗೆ ವಂಚನೆ ನಡೆಯುತ್ತಿದೆ.

ಜಿಎಸ್‌ಟಿ ಜಾರಿಯಾದ ತರುವಾಯ ದೇಶವ್ಯಾಪಿ ಏಕಮುಖ ತೆರಿಗೆಯು ಅನ್ವಯವಾಗುತ್ತಿದೆ. ಇದರಿಂದಾಗಿ ಪದಾರ್ಥಗಳ ಬೆಲೆಯಲ್ಲಿ ರಾಜ್ಯ ದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತಿಲ್ಲ. ‘ಒಂದು ದೇಶ, ಒಂದು ತೆರಿಗೆ’ ಪದ್ಧತಿಯ ಅಳವಡಿಕೆಯಲ್ಲಿ ದೇಶ ಯಶಸ್ವಿಯಾಗಿದೆ. ಜಿಎಸ್‌ಟಿ ಪದ್ಧತಿಯು ಆನ್‌ಲೈನ್ ಮಾರಾಟಗಾರರಿಗೆ ಬಹುದೊಡ್ಡ ವರವಾಗಿದೆ. ದೇಶದೆಲ್ಲೆಡೆ ಒಂದೇ ತೆರನಾದ ತೆರಿಗೆ ಇರುವ ಕಾರಣ, ವಿವಿಧ ರಾಜ್ಯಗಳಲ್ಲಿ ಉಗ್ರಾಣ ತೆರೆದು ಕ್ಷಿಪ್ರವಾಗಿ ಪದಾರ್ಥಗಳನ್ನು ಸರಬರಾಜು ಮಾಡುವುದು ಅವರಿಗೆ ಸಾಧ್ಯವಾಗುತ್ತಿದೆ. ಇ- ಕಾಮರ್ಸ್ ಬೆಳವಣಿಗೆಯಲ್ಲೂ ಜಿಎಸ್‌ಟಿ ಮಹತ್ತರ ಪಾತ್ರ ವಹಿಸಿದೆ.

ಜಿಎಸ್‌ಟಿ ಸಂಪೂರ್ಣ ತಂತ್ರಜ್ಞಾನಾಧಾರಿತ ವೇದಿಕೆಯಾಗಿರುವುದರಿಂದ ವಂಚನೆಗೆ ಆಸ್ಪದವಿಲ್ಲ. ಇನ್‌ಪುಟ್ ಕ್ರೆಡಿಟ್ ಪಡೆಯಲು ಒಂದು ಖರೀದಿಯು ಮತ್ತೊಬ್ಬರ ಖರೀದಿಯೊಂದಿಗೆ ಜೋಡಣೆಯಾಗಿರುತ್ತದೆ. ಹೀಗಾಗಿ ಮಾರಾಟವನ್ನು ಮುಚ್ಚಿ
ಹಾಕಿ ತೆರಿಗೆ ವಂಚಿಸಲು ಕಷ್ಟಸಾಧ್ಯ. ತಂತ್ರ ಜ್ಞಾನದ ಮೂಲಕ ಆನ್‌ಲೈನ್‌ನಲ್ಲಿ ಅನುಸರಣೆ (ಟಞmಜಿZ ಛಿo) ಮಾಡುವ ಕಾರಣ ಹೆಚ್ಚಿನ ಪಾರದರ್ಶಕತೆಯಿದ್ದು ಇದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ.

ಜಿಎಸ್‌ಟಿಯು ಮೌಲ್ಯವರ್ಧಿತ ತೆರಿಗೆಯಾಗಿರುವುದರಿಂದ ಬಳಕೆದಾರ-ಸ್ನೇಹಿ ಆಗಿದೆ. ಜಿಎಸ್ ಟಿಯು ಒಂದು ಪದಾರ್ಥಕ್ಕೆ ಹಲವು ಹಂತದಲ್ಲಿ ವಿಧಿಸಿದ ತೆರಿಗೆಯ ಮೇಲೆ ತೆರಿಗೆ ಲೆಕ್ಕ  ಹಾಕುವುದಿಲ್ಲ; ಬದಲಿಗೆ ಆ ಹಂತದಲ್ಲಿ ಮಾಡುವ ಹೆಚ್ಚಳದ ಮೇಲೆ ಮಾತ್ರ ತೆರಿಗೆ ಲೆಕ್ಕವಾಗುತ್ತದೆ. ಹಿಂದಿನ ವ್ಯಾಟ್ ಪದ್ಧತಿಗೆ ಹೋಲಿಸಿದರೆ ಬಹುತೇಕ ಪದಾರ್ಥಗಳ ಬೆಲೆಯಲ್ಲಿ ಇಳಿಕೆಯಾಗಿದೆ. ದೇಶಾ
ದ್ಯಂತ ೧.೪ ಕೋಟಿ ಕಂಪನಿಗಳು ಮತ್ತು ವ್ಯಾಪಾರಸ್ಥರು ಜಿಎಸ್‌ಟಿಯಲ್ಲಿ ನೋಂದಣಿ ಮಾಡಿಸಿದ್ದಾರೆ. ಜಿಎಸ್‌ಟಿ ಮೂಲಕ ಅಸಂಘಟಿತ ವ್ಯಾಪಾರ ವಲಯವನ್ನು ನಿಯಂತ್ರಿಸಲು ಸಾಧ್ಯವಾಗಿ, ಅಧಿಕೃತ ವಹಿವಾಟುಗಳು ಹೆಚ್ಚಾಗಿ ನಿರೀಕ್ಷೆಯಂತೆ
ಆರ್ಥಿಕ ರಂಗವು ಸ್ವಚ್ಛವಾಗುತ್ತಿದೆ.

ಜಿಎಸ್‌ಟಿ ಅಳವಡಿಕೆಯ ಆರಂಭದಲ್ಲಿ ಹಲವಾರು ಸಮಸ್ಯೆಗಳು ಎದುರಾದವು. ಆದರೆ ಸರಕಾರವು ಉದ್ಯಮಿಗಳು ಮತ್ತು ತೆರಿಗೆ
ವಿಶೇಷಜ್ಞರ ಜತೆ ನಿರಂತರವಾಗಿ ಸಮಾಲೋಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿತು. ಈ ಬದಲಾವಣೆಗಳಿಂದ ಸರಳ ಮತ್ತು ಸುಲಭ ಕಾರ್ಯವಿಧಾನಗಳು ಚಾಲ್ತಿಗೆ ಬಂದು ವ್ಯಾಪಾರಸ್ಥರ ತಲೆನೋವು ಕಡಿಮೆಯಾಗಿದೆ. ‘ಇ-ವೇ ಬಿಲ್’ ಪದ್ಧತಿಯ ಕಾರಣ, ಜಿಎಸ್‌ಟಿ ಸಂಗ್ರಹಿಸಿ ಕಟ್ಟದಿರಲು ಅಸಾಧ್ಯವಾಗಿದೆ.

ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುತ್ತಿರುವ ಕಾರಣ, ನಕಲಿ ಬಿಲ್ ಮಾಡುವವರು ಮತ್ತು ವಂಚಿಸಿ ಇನ್‌ಪುಟ್ ಕ್ರೆಡಿಟ್ ಪಡೆಯುತ್ತಿರುವವರನ್ನು ಪತ್ತೆಹಚ್ಚಿ ಶಿಕ್ಷಿಸಲಾಗುತ್ತಿದೆ. ಈವರೆಗೆ ಸಾವಿರಾರು ಕೋಟಿ ವಂಚನೆಯನ್ನು ಪತ್ತೆಮಾಡಿ
ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಮಾರಾಟಗಾರರು ಒಮ್ಮೆ ಜಿಎಸ್‌ಟಿ ವಿಧಿಸಿ ಬಿಲ್ ಹಾಕಿದ ಮೇಲೆ ತಿಂಗಳ ಕೊನೆಯಲ್ಲಿ ಕೊಂಡವರಿಂದ ಅವರಿಗೆ ಹಣ ಬಾರದಿದ್ದರೂ ಅವರು ಹಣ ಕಟ್ಟಬೇಕಾಗುತ್ತದೆ; ಇದು ವ್ಯಾಪಾರಸ್ಥರಿಗೆ ದೊಡ್ಡ
ಹೊರೆಯಾಗಿದೆ. ಆದರೆ ಸರಕುಸಾಗಣೆ ವಲಯಕ್ಕೆ ಜಿಎಸ್‌ಟಿಯಿಂದ ಅಪಾರ ಅನುಕೂಲವಾಗಿದೆ.

ರಾಜ್ಯದೊಳಗಿನ ಚೆಕ್‌ಪೋಸ್ಟ್ ಮತ್ತು ಅಂತಾರಾಜ್ಯ ಚೆಕ್‌ಪೋಸ್ಟ್‌ಗಳು ಇಲ್ಲದಿರುವುದರಿಂದ ಸಾಗಣೆ ಸಮಯವು ಶೇ. ೨೦ರಷ್ಟು ತಗ್ಗಿದೆ ಹಾಗೂ ಸರಕುಗಳ ತ್ವರಿತ ವಿತರಣೆ ಸಾಧ್ಯವಾಗಿದೆ. ‘ಇ-ವೇ ಬಿಲ್’ ನಿಂದಾಗಿ ಹಲವಾರು ದಾಖಲೆಗಳು ಬೇಡವಾಗಿ
ತಡೆರಹಿತ ಸಾಗಣೆ ಸುಲಭವಾಗಿದೆ ಮತ್ತು ಚೆಕ್ ಪೋಸ್ಟ್ ಇಲ್ಲದ ಕಾರಣ ಭ್ರಷ್ಟಾಚಾರ ಕಡಿಮೆಯಾಗಿದೆ.

ಈ ಮೊದಲು ಪ್ರತಿ ರಾಜ್ಯದಲ್ಲೂ ಗೋದಾಮುಗಳನ್ನು ತೆರೆಯಬೇಕಿತ್ತು; ಆದರೀಗ ಒಂದು ಕೇಂದ್ರ ಮಾಡಿಕೊಂಡು ಸರಬರಾಜು ಮಾಡಬಹುದಾಗಿದ್ದು ಇದರಿಂದ ಕಂಪನಿಗಳಿಗೆ ಉಳಿತಾಯವಾಗುತ್ತಿದೆ. ದೇಶದಲ್ಲಿ ನಾಗಪುರ, ಗುವಾಹಟಿ, ಭಿವಂಡಿ ಮತ್ತು
ನೆಲಮಂಗಲ ಸರಕು ಸಾಗಣೆಯ ಕೇಂದ್ರಗಳಾಗುತ್ತಿವೆ. ಜಿಎಸ್‌ಟಿಯಿಂದಾಗಿ ಕೆಲವು ಪದಾರ್ಥಗಳ ತೆರಿಗೆಯಲ್ಲಿ ಏರಿಕೆ ಯಾಗಿದ್ದರೂ, ಒಟ್ಟಾರೆಯಾಗಿ ನೋಡಿದಾಗ ಬಹುತೇಕ ಪದಾರ್ಥಗಳ ತೆರಿಗೆಯಲ್ಲಿ ಇಳಿಕೆಯಾಗಿದೆ. ಕಟುಸತ್ಯವೇನೆಂದರೆ, ಈ
ಮೊದಲು ಶೇ. ೭೦ರಷ್ಟು ಮಾರಾಟವು ಬಿಲ್ ಇಲ್ಲದೆ ನಡೆಯುತ್ತಿದ್ದ ಕಾರಣ ಪದಾರ್ಥಗಳು ಕಡಿಮೆ ಬೆಲೆಗೆ ದೊರೆಯುತ್ತಿದ್ದವು.

ಆದರೀಗ ಜಿಎಸ್‌ಟಿ ವಿಧಿಸುವುದು ಕಡ್ಡಾಯವಾಗಿರುವುದರಿಂದ ಜನರಿಗೆ ತೆರಿಗೆಯ ಬಿಸಿ ತಾಗಿದೆ. ೪೦ ಲಕ್ಷ ರು. ಒಳಗೆ ವಹಿವಾಟು ಇರುವವರು ಜಿಎಸ್‌ಟಿ ಕಟ್ಟುವಂತಿಲ್ಲ; ಆದರೆ ಅನೇಕರು ಜನರಿಂದ ಜಿಎಸ್‌ಟಿ ವಸೂಲು ಮಾಡುತ್ತಿದ್ದಾರೆ. ಆದರೆ ಆನ್‌ಲೈನ್‌ ನಲ್ಲಿ ಹಣ ಪಾವತಿಯಾದರೆ ಅವರು ಅದರ ಲೆಕ್ಕವನ್ನು ಕೊಡಲೇಬೇಕು. ಆದ್ದರಿಂದ ಹೋಟೆಲ್ ಮತ್ತು ಸಣ್ಣ ವ್ಯಾಪಾರಸ್ಥರಿಗೆ ಜನರು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಪಾವತಿಸುವುದರಿಂದ ಸೋರಿಕೆ ತಡೆಯಬಹುದು. ಡೆಲಾಯ್ಟ್ ಲೆಕ್ಕ ಪರಿಶೋಧನಾ ಸಂಸ್ಥೆಯು ಜಿಎಸ್‌ಟಿ ಜಾರಿಯ ಬಗ್ಗೆ ಕೈಗೊಂಡ ಸಮೀಕ್ಷೆಯಲ್ಲಿ, ‘ಜಿಎಸ್‌ಟಿಯು ವ್ಯಾಪಾರ ವೃದ್ಧಿಗೆ ಸಹಾಯಕವಾಗಿದೆ’ ಎಂದು ಶೇ. ೯೦ರಷ್ಟು ಕೈಗಾರಿಕೋದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಜಿಎಸ್‌ಟಿಯು SGST ಮತ್ತು ಇಎಖS ಎಂಬ ಎರಡು ಭಾಗವಾಗಿ ಸಂಗ್ರಹವಾಗುತ್ತದೆ. ರಾಜ್ಯ ಮತ್ತು ಕೇಂದ್ರದ ಪಾಲು ನೇರವಾಗಿ ಅವರವರ ಖಾತೆಗೆ ಹೋಗುತ್ತದೆ. ರಾಜ್ಯದ ಜಿಎಸ್‌ಟಿ ಹಣವನ್ನು ಕೇಂದ್ರ ಕೊಡುತ್ತಿಲ್ಲ ಎಂಬುದು ಮಾಹಿತಿಯ ಕೊರತೆಯಿಂದ ಹೊಮ್ಮಿರುವ ಮತ್ತು ರಾಜಕೀಯ ಪ್ರೇರಿತವಾಗಿರುವ ಆರೋಪವಷ್ಟೇ. ೨೦೧೭ರ ಜುಲೈನಲ್ಲಿ ಜಿಎಸ್‌ಟಿ ಜಾರಿಯಾದಾಗ, ೯೦,೦೦೦ ಕೋಟಿ ರು. ಸಂಗ್ರಹವಾಗಿತ್ತು; ೨೦೨೩ರ ಮೇ ತಿಂಗಳಿನಲ್ಲಿ ೧,೫೦,೦೦೦ ಕೋಟಿ ರು. ಸಂಗ್ರಹವಾಗಿದೆ. ಜಿಎಸ್‌ಟಿಯ ಕಾರಣ ಕಪ್ಪುಹಣದ ಉತ್ಪತ್ತಿ ಹತೋಟಿಗೆ ಬಂದು ಅಧಿಕೃತ ಆರ್ಥಿಕ ಚಟುವಟಿಕೆಯು ಹೆಚ್ಚಾಗುತ್ತಿದೆ. ತೆರಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ- ಮುಕ್ತ ವ್ಯವಸ್ಥೆ ಇರುವುದರಿಂದಾಗಿ ಮಾರಾಟ ತೆರಿಗೆ ಕ್ಷೇತ್ರದಲ್ಲಿ ಜಿಎಸ್‌ಟಿಯು ಆರ್ಥಿಕ ಶಿಸ್ತನ್ನು ತಂದಿದೆ.