Sunday, 15th December 2024

ನೊಬೆಲ್ ಪ್ರಶಸ್ತಿ ಪುರಸ್ಕೃತ ಇಂಗ್ಲಿಷ್ ಸಾಹಿತಿಯ ತಾರತಮ್ಯ ನೀತಿ

ಶಶಾಂಕಣ
ಶಶಿಧರ ಹಾಲಾಡಿ

ಅಮೆರಿಕದ ಈಗಿನ ಅಧ್ಯಕ್ಷರ ಹೆಸರನ್ನುನೊಬೆಲ್ ಶಾಂತಿ ಪ್ರಶಸ್ತಿಗೆ ಸೂಚಿಸಿದ್ದಾರೆಂಬ ಸುದ್ದಿ ತಿಳಿದು ತುಸು ಅಚ್ಚರಿಯಾಯಿತು ಜನಾಂಗೀಯ ದ್ವೇಷಕ್ಕೆ ಸಣ್ಣಮಟ್ಟದ ಪ್ರಚೋದನೆ ನೀಡುತ್ತಾ, ದುರಹಂಕಾರದ ಮತ್ತು ಹುಂಬತನ ಮಾತುಗಳನ್ನಾಡಲು ಸ್ವಲ್ಪವೂ ಹಿಂಜರಿಯದ ಡೊನಾಲ್ಡ್‌ ಟ್ರಂಪ್ ಅವರು ಅಂತಹದೊಂದು ಪ್ರಶಸ್ತಿಗೆ ನಿಜಕ್ಕೂ ಅರ್ಹರೆ? ಯಾವ್ಯಾವುದೋ ರಾಜಕೀಯ ಮತ್ತು ರಾಜಕೀಯೇತರ ಕಾರಣಗಳಿಗಾಗಿ ಇದುವರೆಗೆ ಆ ಪ್ರಶಸ್ತಿಗೆ ಭಾಜನರಾದ ಕೆಲವು ಹೆಸರುಗಳನ್ನು ಕಂಡರೆ, ಈ ಆಧುನಿಕ ಜಗತ್ತಿನಲ್ಲಿ ಟ್ರಂಪ್ ರಂತಹವರು ನೊಬೆಲ್ ಪ್ರಶಸ್ತಿ ಪಡೆದುಕೊಳ್ಳುವುದು ಅಸಾಧ್ಯವಲ್ಲ ಎಂದೇ ಅನಿಸುತ್ತದೆ.

ಯುರೋಪಿಯನರು ತಮ್ಮ ಸ್ವಾರ್ಥಕ್ಕಾಗಿ, ಜನಾಂಗೀಯ ತಾರತಮ್ಯದ ಮುಂದುವರಿಕೆಯಾಗಿ, ಮಹಾತ್ಮಾ ಗಾಂಧಿಯವರಿಗೆ ನೊಬೆಲ್ ಶಾಂತಿ ಪುರಸ್ಕಾರ ದೊರಕದಂತೆ ಮಾಡಿದ ಉದಾಹರಣೆ ನಮ್ಮ ಮುಂದಿದೆ. ಮಲಾಲಾಳಂತಹ ಕಿರಿಯಳಿಗೆ ಆ ಪ್ರಶಸ್ತಿಯನ್ನು ನೀಡಿ ತಮ್ಮ ತುತ್ತೂರಿಯನ್ನು ತಾವೇ ಊದಿಕೊಳ್ಳುತ್ತಾರೆ, ಆ ಪ್ರಶಸ್ತಿ ನೀಡಿದವರು. ಅದೆಲ್ಲ ಹೋಗಲಿ, ಕೇವಲ 17
ವರ್ಷ ವಯಸ್ಸಿನ ಗ್ರೆಟಾ ಥನ್‌ಬರ್ಗ್ ಹೆಸರನ್ನು, ಇನ್ನೂ ಆಕೆಯ ಪರಿಸರಪರವಾದ ಚಿಂತನೆಗಳು ಪರಿ ಪಕ್ವವಾಗುವ ಮುನ್ನವೇ, 2019ರ ನೊಬೆಲ್ ಪ್ರಶಸ್ತಿಗೆ ಸೂಚಿಸಲಾಗಿತ್ತು!

ಈ ವರ್ಷ ಆ ಹುಡುಗಿ ಪ್ರಶಸ್ತಿ ಪಡೆದರೂ ಅಚ್ಚರಿ ಇಲ್ಲ. ನೊಬೆಲ್ ಪ್ರಶಸ್ತಿಗೆ ಭಾಜನರಾದವರ ಮತ್ತು ಭಾಜನರಾಗದವರ ಕೆಲವು
ಹೆಸರುಗಳನ್ನು ಕಂಡರೆ, ಅಂತಹ ಪ್ರಶಸ್ತಿಗಳ ಮೇಲಿನ ಗೌರವ ತುಸು ಕಡಿಮೆಯಾಗುವುದಂತೂ ನಿಜ. ಅಷ್ಟಿದ್ದರೂ, ನೊಬೆಲ್ ಪ್ರಶಸ್ತಿ ಎಂದಾಕ್ಷಣ, ಅದಕ್ಕೆ ವಿಶ್ವಮಟ್ಟದ ಒಂದು ಅನನ್ಯ ಪ್ರಭಾವಳಿ ಇರುವುದನ್ನು ಸಹ ನಾವು ಗುರುತಿಸಲೇಬೇಕು.

ಸಖೇದಚ್ಚರಿಯ ವಿಚಾರವೆಂದರೆ, ಹಿಂಸೆಯನ್ನು ಮತ್ತು ದಬ್ಬಾಳಿಕೆಯನ್ನು ಸಮರ್ಥಿಸಿದ ಕೆಲವರಿಗೂ ಸಹ ನೊಬೆಲ್ ಪ್ರಶಸ್ತಿ  ದೊರಕಿದೆ! ಇಂತಹ ಪ್ರಖ್ಯಾತ ವ್ಯಕ್ತಿಗಳ ಪೈಕಿ ನನಗೆ ತಕ್ಷಣ ನೆನಪಾಗುವುದು ಇಂಗ್ಲಿಷ್ ಲೇಖಕ, ಸಾಹಿತಿ ರುಡ್ಯಾರ್ಡ್ ಕಿಪ್ಲಿಂಗ್. ಕವಿತೆ, ಕಾದಂಬರಿ, ಲೇಖನ ಮತ್ತು ಮುಖ್ಯವಾಗಿ ಜಂಗಲ್ ಬುಕ್‌ನ ಮೋಗ್ಲಿಯ ಕಥೆಗಳು ಈ ರೀತಿ ವಿಪುಲ ಸಾಹಿತ್ಯ ಸೃಷ್ಟಿಸಿದ ರುಡ್ಯಾರ್ಡ್ ಕಿಪ್ಲಿಂಗ್‌ನು ಬಹಿರಂಗವಾಗಿ ಜನಾಂಗೀಯ ತಾರತಮ್ಯವನ್ನು, ಬಿಳಿಯರು ಕರಿಯರ ಮೇಲೆ ನಡೆಸಿದ ಹಿಂಸೆಯನ್ನು
ಸಮರ್ಥಿಸಿದ ಸಾಹಿತಿ. ತನ್ನ ಕೃತಿಗಳಲ್ಲಿ ಹಲವು ಬಾರಿ ಆತ ವಸಾಹತುಶಾಹಿ ದಬ್ಬಾಳಿಕೆಯ ಸರಿ ಎಂದಿದ್ದ.

1907ರಲ್ಲಿ ಆತನ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅಂತಹ ಒಂದು ಪ್ರಮುಖ ಗೌರವಕ್ಕೆ ಭಾಜನನಾದ ನಂತರವೂ, ಆತ ತನ್ನ ಜನಾಂಗೀಯ ತಾರತಮ್ಯದ ನೀತಿಯನ್ನು ಮರೆಮಾಚುವುದಿಲ್ಲ. ಎಷ್ಟರ ತನಕ ಎಂದರೆ,
1919ರಲ್ಲಿ ಅಮೃತಸರದ ಜಲಿಯನ್‌ವಾಲಾ ಬಾಗ್ ನಲ್ಲಿ ಬ್ರಿಟಿಷ್ ಅಧಿಕಾರಿ, ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್‌ ಡಯರ್‌ನು ಶಸ್ತ್ರರಹಿತ ಭಾರತೀಯ ನಾಗರಿಕರ ಮೇಲೆ ಗುಂಡು ಹಾರಿಸಿ, ಸುಮಾರು ನಾಲ್ಕು ನೂರು ಜನರನ್ನು ಸಾಯಿಸಿದ ನಂತರ, ಅಂತಹ ಕ್ರೂರ ಮತ್ತು ಅಮಾನವೀಯ ಕೃತ್ಯ ಎಸಗಿದ ಡಯರ್‌ನಿಗೆ ಬ್ರಿಟನ್‌ನಲ್ಲಿ ಬೃಹತ್ ಮೊತ್ತದ ಹಮ್ಮಿಣಿಯನ್ನು ಸಲ್ಲಿಸುವಲ್ಲಿ ರುಡ್ಯಾರ್ಡ್ ಕಿಪ್ಲಿಂಗ್ ಪ್ರಮುಖ ಪಾತ್ರ ವಹಿಸುತ್ತಾನೆ!

ಬ್ರಿಟನ್‌ನಲ್ಲಿದ್ದ ಬಲಪಂಥೀಯರು ಮತ್ತು ಆ ಹತ್ಯಾಕಾಂಡ ಸರಿ ಎಂಬ ಮನೋಭಾವದ ನೂರಾರು ಜನರು ದೇಣಿಗೆ ಸಂಗ್ರಹಿಸಿ, 29,000 ಪೌಂಡ್ ಹಣವನ್ನು ಜನರಲ್ ಡಯರ್‌ನಿಗೆ ನೀಡುತ್ತಾರೆ. ಅದರಲ್ಲಿ 50 ಪೌಂಡ್ ದೇಣಿಗೆ ರುಡ್ಯಾರ್ಡ್ ಕಿಪ್ಲಿಂಗ್‌ನದ್ದು! (ಕಿಪ್ಲಿಂಗ್ನ ಕಾಣಿಕೆ 10 ಪೌಂಡ್ ಎನ್ನುವವರೂ ಇದ್ದಾರೆ). ಜತೆಗೆ, ಆ ದೇಣಿಗೆ ಸಂಗ್ರಹಿಸುವಲ್ಲಿ ಕಿಪ್ಲಿಂಗ್‌ನದ್ದು ಪ್ರಮುಖ ಪಾತ್ರವಿತ್ತು ಮತ್ತು ಆತ ಜನರಲ್ ಡಯರ್‌ನ ಕೃತ್ಯವನ್ನು ಬೆಂಬಲಿಸಿದ್ದ ಎಂಬುದು ಇಲ್ಲಿ ಮುಖ್ಯ. ಮೊದಲ ಬಾರಿ ಇಂಗ್ಲಿಷ್ ಸಾಹಿತ್ಯಕ್ಕಾಗಿ, 1907ರ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಸಾಹಿತಿಯೊಬ್ಬನು ಡಯರ್‌ನಿಗೆ ದೇಣಿಗೆ ನೀಡುತ್ತಿದ್ದಾನೆ ಎಂಬ ಸುದ್ದಿಯೇ, ಅಲ್ಲಿನ ಇತರ ಬಿಳಿಯರನ್ನು ಮತ್ತಷ್ಟು ದೇಣಿಗೆ ನೀಡಲು ಪ್ರೋತ್ಸಾಹಿಸಿರಲೇಬೇಕು. ಹಿಂಸೆಯನ್ನು ಹೀಗೆ ಬಹಿರಂಗವಾಗಿ ಪ್ರತಿಪಾದಿಸಿದ ಈ ನೊಬೆಲ್ ಸಾಹಿತ್ಯ ಪುರಸ್ಕೃತನ ಮನೋಭಾವ ನನಗೆ ಅಚ್ಚರಿ ಎನಿಸುತ್ತಿದೆ.

ಇನ್ನೊಂದು ಅಚ್ಚರಿಯ ವಿಷಯವೆಂದರೆ, ನಾವು ಭಾರತೀಯರು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರವೂ, ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ಹೋದ ನಂತರವೂ, ರುಡ್ಯಾರ್ಡ್ ಕಿಪ್ಲಿಂಗ್‌ನ ಈ ಜನಾಂಗೀಯ ತಾರತಮ್ಯದ ನಡೆಯನ್ನು ಖಡಕ್ಕಾಗಿ  ಖಂಡಿಸಲಿಲ್ಲ! 1919ರಲ್ಲಿ ಜಲಿಯನ್‌ವಾಲಾ ಬಾಗ್ ನಲ್ಲಿ ಗುಂಡು ಹಾರಿಸಿ ನಾಲ್ಕು ನೂರಕ್ಕು ಹೆಚ್ಚು ಅಮಾಯಕರನ್ನು ಸಾಯಿಸಿದ ಡಯರ್‌ನಿಗೆ ಪ್ರೋತ್ಸಾಹ ರೂಪದಲ್ಲಿ ದೇಣಿಗೆ ನೀಡಿದ ರುಡ್ಯಾರ್ಡ್ ಕಿಪ್ಲಿಂಗ್ ನನ್ನು ನಮ್ಮ ಜನರು ಇಂದಿಗೂ ಸಾಕಷ್ಟು ಗೌರವದಿಂದ ನೋಡುತ್ತಿದ್ದಾರೆ ಎಂಬ ವಿಚಾರವನ್ನು ನನ್ನಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಇಂಗ್ಲಿಷ್ ಲೇಖಕನ
ವಿವರಗಳನ್ನು ಸಂಗ್ರಹಿಸುತ್ತಿದ್ದಾಗ ಕಂಡಂತೆ, ನಮ್ಮ ದೇಶದ ಪ್ರಮುಖ ಅಂತರ್ಜಾಲ ಪತ್ರಿಕೆಯೊಂದು ಅವನ ಜೀವನದ ವಿವರಗಳನ್ನು ಪ್ರಕಟಿಸುವಾಗ, ಕಿಪ್ಲಿಂಗ್‌ನ ಈ ಅಮಾನವೀಯ ಮುಖವನ್ನು ಬೆಳಕಿಗೆ ತರುವುದೇ ಇಲ್ಲ! ‘‘ವಿವಾದಾತ್ಮಕ ಹೆಜ್ಜೆ’’ ಇಟ್ಟಿದ್ದಾನೆ ಎಂಬ ಎರಡು ಶಬ್ದಗಳನ್ನು ಬಳಸಿ, ತೇಲಿಸಿ ಬರೆಯುತ್ತಾರೆ. ಅಂದರೆ, ಕಿಪ್ಲಿಂಗ್ ನೀಡಿದ ದೇಣಿಗೆಗೆ ಅವರ ಸಹಮತ ಇದೆ ಎಂದೇ ಅರ್ಥ ಅಲ್ಲವೆ? ನಮ್ಮ ಖ್ಯಾತ ಲೇಖಕ ಖುಷವಂತ್ ಸಿಂಗ್ ಅವರು ಕಿಪ್ಲಿಂಗ್ ಕುರಿತು ಬರೆಯುತ್ತಾ, ಆತನ ‘‘ಇಫ್’’ ಕವನದಲ್ಲಿ ಗೀತೆಯ ಸಂದೇಶ ಅಡಕಗೊಂಡಿದೆ ಎಂದೂ ಬರೆಯುತ್ತಾರೆ.

ನಮ್ಮ ಹಲವು ಪಠ್ಯಗಳಲ್ಲಿ ರುಡ್ಯಾರ್ಡ್ ಕಿಪ್ಲಿಂಗ್‌ನ ಬರಹಗಳನ್ನು ಅಳವಡಿಸಿ, ಆತನನ್ನು ವೈಭವೀಕರಿಸಿದ್ದೇವೆ. ಹಾಗಿದ್ದರೆ, ರುಡ್ಯಾರ್ಡ್ ಕಿಪ್ಲಿಂಗ್‌ನು ದೇಣಿಗೆ ನೀಡುವ ಮೂಲಕ ಆ ಬ್ರಿಟಿಷ್ ಕೊಲೆಗಡುಕನನ್ನು ಬೆಂಬಲಿಸಿದ ಕಾರ್ಯಕ್ಕೆ ಇಂದಿಗೂ ನಮ್ಮ ಸಹಮತ ಇದೆ ಎಂದೇ ಅರ್ಥವಲ್ಲವೆ? ನಿಜ, ರುಡ್ಯಾರ್ಡ್ ಕಿಪ್ಲಿಂಗ್‌ನ ಸಾಹಿತ್ಯವನ್ನು ಮಾತ್ರ ನಾವು ಗೌರವಿಸುತ್ತೇವೆ, ಆತ ದೇಣಿಗೆ ನೀಡಿದ್ದು ಆತನ ವೈಯಕ್ತಿಕ ನಿರ್ಣಯ, ಅದನ್ನು ದೊಡ್ಡದು ಮಾಡುವುದು ಬೇಡ ಈ ಶೈಲಿಯ ಒಂದು ವಾದವನ್ನು ಮುಂದಿಟ್ಟು, ಕಿಪ್ಲಿಂಗ್‌ನನ್ನು ಮುಂದೆಯೂ ಗೌರವದಿಂದ ನೋಡುವುದನ್ನು ಮುಂದುವರಿಸಬಹುದು. ನಮ್ಮ ದೇಶದ ಕೆಲವು ಇಂಗ್ಲಿಷ್ ವೆಬ್‌ಪತ್ರಿಕೆಗಳು ಅದನ್ನೇ ಇಂದಿಗೂ ಮಾಡುತ್ತಿವೆ.

ಒಂದಂತೂ ಸ್ಪಷ್ಟ : ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಬ್ರಿಟಿಷರು ನಮ್ಮ ಮೇಲೆ ನಡೆಸಿದ ದುರಾಡಳಿತವನ್ನು,
ಅವರ ಠಕ್ಕ ಬುದ್ಧಿಯನ್ನು, ಅವರು ಅನುಸರಿಸಿದ ಜನಾಂಗೀಯ ತಾರತಮ್ಯವನ್ನು ನಮ್ಮವರು ಸರಿಯಾಗಿ ಬೆಳಕಿಗೆ ತಂದು ಖಂಡಿಸಲೇ ಇಲ್ಲ! ಬ್ರಿಟಿಷರು ನಮ್ಮ ದೇಶದಲ್ಲಿ ರಸ್ತೆ ನಿರ್ಮಿಸಿದರು, ರೈಲು ಮಾರ್ಗ ಹಾಕಿದರು, ಶಾಲೆ, ಆಸ್ಪತ್ರೆ ಕಟ್ಟಿದರು, ವಿಶ್ವ ಸಾಹಿತ್ಯವನ್ನು ಮತ್ತು ಇಂಗ್ಲಿಷ್ ಭಾಷೆಯನ್ನು ಪರಿಚಯಿಸಿದರು ಎಂಬ, ವಸಾಹತುಶಾಹಿ ಪ್ರೇರಿತ ಬೋಧನೆಯ ಬಹುಪಾಲು ಅಂಶವು, 1947ರ ನಂತರವೂ ಮುಂದುವರಿಯಿತು! ಅದೇಕೋ, ಸ್ವತಂತ್ರ ಭಾರತದ ಮೊದಮೊದಲ ಸರಕಾರಗಳು ಬ್ರಿಟಿಷರ ತಾರತಮ್ಯ ನೀತಿಯನ್ನು ಬೆಳಕಿಗೆ ತರುವ ಬದಲು, ಅವರನ್ನು ಪರೋಕ್ಷವಾಗಿ ಹೊಗಳುವ ಕೆಲಸವನ್ನೂ ಮಾಡಿದಂತೆ ಅನಿಸು ತ್ತಿದೆ.

ರುಡ್ಯಾರ್ಡ್ ಕಿಪ್ಲಿಂಗ್‌ನ ವಿಚಾರವನ್ನೇ ತೆಗೆದುಕೊಂಡರೆ, ಆತನ ಕೃತಿ ‘ಜಂಗಲ್ ಬುಕ್’ ಬಹುಖ್ಯಾತ. ಸಿನಿಮಾ ಮೂಲಕವೂ ಪ್ರಸಿದ್ಧಿ ಗಳಿಸಿದ ಮೋಗ್ಲಿ ಮತ್ತು ಕಾಡಿನ ಕಥೆ ನಿಜಕ್ಕೂ ಅನನ್ಯ. ಭಾರತದಲ್ಲಿ ಜನಿಸಿ, ಕೆಲ ಕಾಲ ಭಾರತದಲ್ಲಿ ವಾಸಿಸಿದ್ದ
ರುಡ್ಯಾರ್ಡ್ ಕಿಪ್ಲಿಂಗ್‌ನದು ವಿಪುಲ ಬರವಣಿಗೆ, ಅನುಭವ. 1865ರಲ್ಲಿ ಮುಂಬಯಿಯಲ್ಲಿ ಜನಿಸಿದ ಇವನನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ಇಂಗ್ಲೆೆಂಡಿಗೆ ಕಳಿಸುತ್ತಾರೆ, ಆತನ ಪೋಷಕರು. ಅಲ್ಲಿಂದಾಚೆ ಅವನ ಜೀವನ ಸದಾ ಚಲನಶೀಲ. 1882ರಲ್ಲಿ ಮುಂಬಯಿಗೆ ವಾಪಸಾಗಿ, ಇಲ್ಲಿನ ಪತ್ರಿಕೆಗಳ ವರದಿಗಾರನಾಗಿ 7 ವರ್ಷ ಕೆಲಸ ಮಾಡಿದ ನಂತರ, 1889ರಲ್ಲಿ ಲಂಡನ್ ಗೆ ಹೋಗುತ್ತಾನೆ. 1892ರಲ್ಲಿ ಅಮೆರಿಕಕ್ಕೆ ಹೋಗಿ, ಸಾಕಷ್ಟು ಸುತ್ತಾಡಿ, ಬರಹದ ಮೂಲಕ ಹಣ ಗಳಿಸಿ, ಇಂಗ್ಲೆೆಂಡಿಗೆ ವಾಪಸಾಗಿ 1897ರಲ್ಲಿ ಸಸೆಕ್ಸ್ ‌‌ನಲ್ಲಿ ಆಸ್ತಿ ಖರೀದಿಸಿ ಖಾಯಂ ಆಗಿ ನೆಲೆಸುತ್ತಾನೆ.

ಈ ನಡುವೆ ಸಾಹಿತ್ಯ ಕೃಷಿ ಮಾಡಿ, ವಿಶಿಷ್ಟ ಕಲ್ಪನಾಶಕ್ತಿಯ ಕೃತಿಗಳನ್ನು ರಚಿಸಿ ಸಾಕಷ್ಟು ಜನಪ್ರಿಯನಾಗಿ, ಪ್ರಮುಖ ಸಾಹಿತಿ ಯಾಗಿ ರೂಪುಗೊಳ್ಳುತ್ತಾನೆ. 1894 ರಲ್ಲಿ ಜಂಗಲ್ ಬುಕ್ ರಚಿಸಿ, ತೋಳಗಳು ಸಾಕುವ ಕಾಡು ಹುಡುಗ ಮೋಗ್ಲಿಯನ್ನು ಸೃಷ್ಟಿಸಿ ಅಪಾರ ಜನರ ಮನ ಸೆಳೆಯುತ್ತಾನೆ. ಭಾರತದ ಕಾಡುಗಳ ಹಿನ್ನೆಲೆ ಹೊಂದಿದ ಈ ಕಥನವು ಇಂದಿಗೂ ಪ್ರಖ್ಯಾತ. ಆದರೆ, ಆತನ ವಸಾಹತುಶಾಹಿ ಸಮರ್ಥನೆಯ ಮನೋಭಾವ ಕೊನೆಯತನಕವೂ ಪ್ರಖರವಾಗಿರುತ್ತದೆ. 1899ರಲ್ಲಿ ಆತ ರಚಿಸಿದ ‘ದ ವೈಟ್ ಮ್ಯಾನ್ಸ್‌ ಬರ್ಡನ್’ ಎಂಬ ಕವನವು ಆತನಿಗೆ ಹೆಸರನ್ನು ಮತ್ತು ಸಣ್ಣ ಮಟ್ಟದ ಕುಖ್ಯಾತಿಯನ್ನೂ ಗಳಿಸಿಕೊಟ್ಟಿತು.

ಜನಾಂಗೀಯ ತಾರತಮ್ಯ ಆಚರಿಸುವ ವಸಾಹತುಶಾಹಿ ಮನೋಸ್ಥಿತಿಯನ್ನು ಈ ಕವನದಲ್ಲಿ ಪ್ರತಿಪಾದಿಸಲಾಗಿದೆ. ಆತನ ಅಭಿಮಾನಿಗಳು ಆ ಕವನದಲ್ಲಿ ತುಸು ವ್ಯಂಗ್ಯ ಧಾಟಿಯನ್ನು ಹುಡುಕಿ, ಸಮರ್ಥಿಸಲು ಯತ್ನಿಸಿದರೂ, ‘ದ ವೈಟ್ ಮ್ಯಾನ್ಸ್‌  ಬರ್ಡನ್’ ಅಂದರೆ ‘ಬಿಳಿ ವ್ಯಕ್ತಿಯ ಹೊಣೆಗಾರಿಕೆ’ ಕವನವು ಸರಳವಾಗಿ, ಸ್ಪಷ್ಟವಾಗಿ ಹೇಳುವುದು ಇಷ್ಟೆ. ದೂರದ ಪೂರ್ವ ದೇಶಗಳಲ್ಲಿರುವ ಕಾಡು ಪ್ರದೇಶದ ಜನರನ್ನು ಉದ್ಧಾರ ಮಾಡಲು ಬಿಳಿಯ ಜನರು ಹೋಗಬೇಕು, ಅವರನ್ನು ಮೇಲಕ್ಕೆತ್ತುವುದು ಬಿಳಿಯನ ಕರ್ತವ್ಯ ಎಂದು. ನಂತರದ ದಶಕಗಳಲ್ಲಿ, ಪ್ರತಿ ವರ್ಷ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೋಗುತ್ತಿದ್ದ ರುಡ್ಯಾರ್ಡ್
ಕಿಪ್ಲಿಂಗ್, ಅಲ್ಲಿ ಕೆಲ ಕಾಲ ತಂಗಿ ವಾಪಸಾಗುತ್ತಿದ್ದ.

ಅಂದು ವರ್ಣಬೇಧ ನೀತಿಯನ್ನು ಬಹಿರಂಗವಾಗಿ ಆಚರಿಸುತ್ತಿದ್ದ, ಕರಿಯ ಜನರನ್ನು ಪ್ರಾಣಿಗಳಂತೆ ಕಾಣುತ್ತಿದ್ದ ದಕ್ಷಿಣ ಆಫ್ರಿಕಾದ ಬಿಳಿ ಜನರ ಆ ವಸಾಹತು, ಕಿಪ್ಲಿಂಗ್‌ನ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದು. ರುಡ್ಯಾರ್ಡ್ ಕಿಪ್ಲಿಂಗ್‌ನಿಗೆ 1907ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪಾರಿತೋಷಕ ದೊರೆತ ಹಿನ್ನೆಲೆಯೂ ಸ್ವಾರಸ್ಯಕರ. 1901ರಲ್ಲಿ ಸ್ಥಾಪನೆಗೊಂಡ ಈ ಪ್ರಶಸ್ತಿಯ ಸಾಹಿತ್ಯ ವಿಭಾಗದಲ್ಲಿ, ಮೊದಲ ಆರು ವರ್ಷಗಳಲ್ಲಿ ಗೌರವಕ್ಕೆ ಭಾಜನರಾದವರು ಎಲ್ಲರೂ ಯುರೋಪಿಯನ್ ಸಾಹಿತಿಗಳು. ಆದರೆ ಅವರ ಪೈಕಿ, ಸೂರ್ಯ ಮುಳುಗದ ಸಾಮ್ರಾಜ್ಯವೆನಿಸಿದ ಇಂಗ್ಲೆೆಂಡ್‌ನವರು ಯಾರೂ ಇಲ್ಲ!

1901ರಲ್ಲಿ ಫ್ರೆಂಚ್ ಸಾಹಿತಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ದೊರಕಿತು. ನಂತರದ ವರ್ಷಗಳಲ್ಲಿ ಜರ್ಮನ್, ಪೋಲಿಷ್, ನಾರ್ವೆ ಯನ್, ಇಟಾಲಿನ್, ಸ್ಪಾನಿಷ್ ಸಾಹಿತಿಗಳು ಆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದರು. ಆ ಪ್ರಶಸ್ತಿ ಸ್ಥಾಪನೆಗೊಂಡ ಆರು ವರ್ಷಗಳ ನಂತರ, ಮೊದಲ ಇಂಗ್ಲಿಷ್ ಸಾಹಿತಿಯಾಗಿ ರುಡ್ಯಾರ್ಡ್ ಕಿಪ್ಲಿಂಗ್ ಆಯ್ಕೆಗೊಂಡ! ವರ್ಣಬೇಧ ನೀತಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದ, ವಸಾಹತು ಶಾಹಿ ಆಡಳಿತದ ಸಮರ್ಥಕನೆನಿಸಿದ ಈ ಸಾಹಿತಿ ಆಯ್ಕೆಗೊಂಡ ಹಿನ್ನೆಲೆಯು, ಅಂದಿನ ಸಾಹಿತ್ಯಕ ರಾಜಕೀಯವನ್ನು ಒಂದೆಡೆ ಬಿಂಬಿಸಿದರೆ, ಇನ್ನೊಂದೆಡೆ, ಇಂಗ್ಲಿಷ್ ಸಾಹಿತ್ಯದ ಅಂದಿನ ಬಡತನವನ್ನೂ ತೋರಿಸು ತ್ತದೆ!

ಇಂದು ಜಗತ್ತಿನ ಎಲ್ಲೆಡೆ ವಿಶೇಷ ಪ್ರಭಾವಳಿಯೊಂದಿಗೆ ಬೃಹದಾಕಾರದಲ್ಲಿ ಬೆಳೆದಿರುವ ಇಂಗ್ಲಿಷ್ ಸಾಹಿತ್ಯಕ್ಕೆ  1906ರ ತನಕ ನೊಬೆಲ್ ಪ್ರಶಸ್ತಿ ದೊರಕಲಿಲ್ಲ ಎಂಬುದೇ ವಿಶೇಷ ಎನಿಸುತ್ತದೆ. ಇದಾಗಿ ಆರೇ ವರ್ಷಗಳಲ್ಲಿ, 1913ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಭಾರತೀಯ ಕಾವ್ಯ ಮತ್ತು ಸಾಹಿತ್ಯವು ಇದೇ ಪ್ರಶಸ್ತಿಗೆ ಭಾಜನವಾಗಿದ್ದು ಮತ್ತೊಂದು ಗಮನಾರ್ಹ ವಿಚಾರ!

1907ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನನಾದ ರುಡ್ಯಾರ್ಡ್ ಕಿಪ್ಲಿಂಗ್, ನಂತರದ ವರ್ಷಗಳಲ್ಲಿ ಹೆಚ್ಚು ಹೆಚ್ಚು ರಾಜಕೀಯ ಸಂದೇಶವುಳ್ಳ ಕೃತಿಗಳನ್ನು ಬರೆದಿದ್ದುಂಟು. ಈ ನಡುವೆ 1910ರಲ್ಲಿ ಆತ ಪ್ರಕಟಿಸಿದ ‘‘ಇಫ್’’ ಕವನವು ಸಾಕಷ್ಟು ಪ್ರಬುದ್ಧ ಮತ್ತು
ಪ್ರಖ್ಯಾಾತ. ಏನೇ ಎದುರಾಗಲಿ, ನಿನ್ನ ಕರ್ತವ್ಯವನ್ನು ಮಾಡುತ್ತಾ ಹೋರಾಟವನ್ನು ಮುಂದುವರಿಸುವ ಎಂಬ ಸಂದೇಶವಿರುವ ಈ ಕನವದ ಕೆಲವು ಸಾಲುಗಳನ್ನು ಸ್ಫೂರ್ತಿದಾಯಕವೆಂದು ಹಲವೆಡೆ ಕೋಟ್ ಮಾಡುವುದುಂಟು. ವಿಂಬಲ್ಡನ್ ಕ್ರೀಡಾಂಗ ಣದಲ್ಲಿ ಈ ಕವನದ ಸಾಲುಗಳನ್ನು ಕೆತ್ತಿಸಲಾಗಿದೆ. ಆದರೆ, ಅದು ಅವನ ಆಶಯ ಮಾತ್ರ. ವಾಸ್ತವತೆಗೆ ಬಂದಾಗ, ಆತ ವಸಾಹತು ಶಾಹಿಯ ಸಮರ್ಥಕ. ಐರ್ಲೆೆಂಡ್ ಸ್ವಾತಂತ್ರ್ಯ ನೀಡಬಾರದೆಂದು ಬಹಿರಂಗ ವಾಗಿ ಹೇಳಿದ್ದ ಕಿಪ್ಲಿಂಗ್, ಭಾರತವನ್ನು ನೋಡು ತ್ತಿದ್ದುದು ಬ್ರಿಟನ್ನ ಪ್ರಮುಖ ವಸಾಹತು ಎಂದೇ. ಆದ್ದರಿಂದಲೇ, 1919ರಲ್ಲಿ ಜನರಲ್ ಡಯರ್‌ನು ಗುಂಡು ಹಾರಿಸಿ, ನಾಲ್ಕು ನೂರಕ್ಕು ಹೆಚ್ಚು ಅಮಾಯಕರನ್ನು ಸಾಯಿಸಿ ದಾಗ, ಅದರಿಂದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಲಾಭವಾಯಿತು ಎಂದೇ ತಿಳಿದಿದ್ದ. ಆ ಹತ್ಯಾಕಾಂಡವು ನಿಧಾನವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಗೊಂಡಾಗ, ಸಣ್ಣ ಶಿಕ್ಷೆಯ ರೂಪದಲ್ಲಿ ಕೊಲೆಗಡುಕ ಡಯರ್‌ನನ್ನು ಇಂಗ್ಲೆೆಂಡಿಗೆ ವಾಪಸು ಕಳಿಸಲಾಯಿತು.

ಹತ್ಯಾಕಾಂಡ ನಡೆಸಿದ್ದ ಡಯರ್‌ನಿಗೆ ಇದರಿಂದ ನಷ್ಟವಾಯಿತೆಂದು ಪ್ರಚುರ ಪಡಿಸಿ, ಇಂಗ್ಲೆೆಂಡಿನ ಮಾರ್ನಿಂಗ್ ಪೋಸ್ಟ್ ಪತ್ರಿಕೆಯು ಹಣ ಸಂಗ್ರಹಿಸಿದಾಗ, ರುಡ್ಯಾರ್ಡ್ ಕಿಪ್ಲಿಂಗ್ ಹೆಮ್ಮೆಯಿಂದ 50 ಪೌಂಡ್ ದೇಣಿಗೆ ನೀಡಿದ್ದ. ಒಟ್ಟು 26,000 ಪೌಂಡ್
ಹಣ ಸಂಗ್ರಹವಾಯಿತು. ಕೆಲವರು ಗುಪ್ತನಾಮದಲ್ಲಿ ದೇಣಿಗೆ ನೀಡಿದ್ದರು, ಅಂದರೆ, ಈ ಕೊಲೆಗಡುಕನಿಗೆ ದೇಣಿಗೆ ನೀಡುವುದು ಸರಿಯಲ್ಲ ಎಂಬ ಸಣ್ಣ ಮಟ್ಟದ ತಪ್ಪಿತಸ್ಥ ಭಾವನೆ ಕೆಲವರಲ್ಲಿತ್ತು!

ಇಂಗ್ಲಿಷ್ ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿ ಪಡೆದ ಈ ಸಾಹಿತಿಯು ಬ್ರಿಟಿಷ್ ಸಾಮ್ರಾಜ್ಯದ ಹೆಮ್ಮೆಯ ಮುಕುಟ, ಸರಿ. ಪ್ರಶಸ್ತಿ ಪಡೆದ ನಂತರವೂ ಆತ ಕೊಲೆ ಗಡುಕ ಡಯರ್‌ನನ್ನು ಸಮರ್ಥಿಸಿದ್ದು, ಬ್ರಿಟಿಷ್ ಆಡಳಿತಗಾರರಿಗೆ ಸರಿಕಂಡಿರಬಹುದು. ಆದರೆ
ನಮಗೆ? ಆ ಇಂಗ್ಲಿಷ್ ಸಾಹಿತಿಯು 400 ಭಾರತೀಯರ ಕೊಲೆಯನ್ನು ಸಮರ್ಥಿಸಿದ್ದ ಎಂಬ ವಿಚಾರವನ್ನು ತಿಳಿದ ನಂತರವೂ, ಸ್ವತಂತ್ರ ಭಾರತದ ಪ್ರಜೆಗಳಾದ ನಾವು ಅವನನ್ನು ಗೌರವದಿಂದ ಕಾಣುವುದು ಎಷ್ಟು ಸರಿ? ಆತ ತನ್ನ ಜೀವನದುದ್ದಕ್ಕೂ ವ್ಯಕ್ತ ಪಡಿಸಿದ ಜನಾಂಗೀಯ ತಾರತಮ್ಯವನ್ನು ಎತ್ತಿ ತೋರಿಸುವದರಲ್ಲಿ ತಪ್ಪಿಲ್ಲ, ಅಲ್ಲವೆ?