Sunday, 24th November 2024

ಮೋದಿ ಅಮೆರಿಕ ಭೇಟಿ, ಮತ್ತಿತರ ವಿಚಾರಗಳು

ಶಿಶಿರ ಕಾಲ

shishirh@gmail.com

ಮೋದಿಯವರನ್ನು ಜೋ ಬೈಡನ್ ಈ ಪ್ರಮಾಣದಲ್ಲಿ ಸ್ವಾಗತಿಸಿ ಬರಮಾಡಿಕೊಳ್ಳುತ್ತಾರೆ ಅಂತ ನಾನೆಂದೂ ಎಣಿಸಿರಲಿಲ್ಲ. ಮೋದಿ ಬರ್ತಾರೆ, ವಿಮಾನದ ಮೆಟ್ಟಿಲಲ್ಲಿ ನಿಂತು ಕೈಬೀಸೋದು, ಮೆಟ್ಟಿಲು ಇಳಿಯೋದು, ಅಲ್ಲೊಂದಿಷ್ಟು ಕರಿ ಕಾರುಗಳ ಸರತಿ ಸಾಲು, ಕೈಕುಲುಕೋದು, ಅಪ್ಪಿಕೊಳ್ಳೋದು, ಬೆನ್ನು ತಟ್ಟೋದು, ವೈಟ್ ಹೌಸ್‌ನಲ್ಲಿ ಒಂದಿಷ್ಟು ಫೋಟೋಸ್, ಅಲ್ಲೆಲ್ಲೋ ಮೈದಾನದಲ್ಲಿ ಭರ್ಜರಿ ಸಂಖ್ಯೆಯಲ್ಲಿರುವ ಎನ್‌ಆರ್‌ಐಗಳು, ಅಲ್ಲೊಂದು ಭಾಷಣ, ಮೆಚ್ಚಿಸಿ ಅವಕಾಶ ಗಿಟ್ಟಿಸಲು ಸಾಲಿನಲ್ಲಿ ಬಂದು ನಿಲ್ಲುವ ದೊಡ್ಡ ಕಂಪನಿಯ ಸಿಇಒಗಳು, ವೈಟ್ ಹೌಸ್‌ನೊಳಗೆ ಹೊಕ್ಕು ಒಂದಿಷ್ಟು ಸಹಿ ಹಾಕಿ, ಗೌಪ್ಯ ಒಪ್ಪಂದ ಗಳನ್ನೂ ಮಾಡಿಕೊಂಡು ಹೋಗುತ್ತಾರೆ ಅಂದುಕೊಂಡಿದ್ದೆ.

ಮೋದಿ ಯಾವುದೇ ದೇಶಕ್ಕೆ ಹೋದರೂ ಇವೊಂದಿಷ್ಟು ಕಾರ್ಯಕ್ರಮಗಳು ಇರುತ್ತವೆ ಎನ್ನುವುದು ನೋಡಿ ನೋಡಿ ಅಭ್ಯಾಸ ವಾಗಿಬಿಟ್ಟಿದೆ ಬಿಡಿ. ಇವು ಮೋದಿಯವರ ವಿದೇಶ ಪ್ರಯಾಣದ ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸೀಜರ್. ಅವರು ಆಸ್ಟ್ರೇಲಿಯಾಕ್ಕೆ ಹೋಗಲಿ, ಸಮೀಪದ ಬಡದೇಶ ಪಪುವಾ ನ್ಯೂಗಿನಿಗೆ ಹೋಗಲಿ, ಬಹುತೇಕ ಇದೇ ತೆರನಾದ ಕಾರ್ಯಕ್ರಮಗಳು. ಆಮೇಲೆ ಅವರು ಬಂದು ತಿಂಗಳು ಕಳೆದರೂ ಎಲ್ಲಿ ನೋಡಿದರಲ್ಲಿ ಮೋದಿಯವರನ್ನು ಹುಲಿ-ಸಿಂಹಗಳಿಗೆ ಹೋಲಿಸುವ ವಿಡಿಯೋಗಳು ಇಂಟರ್ನೆಟ್ಟಿನಲ್ಲೆಲ್ಲ.

ಇವನ್ನೆಲ್ಲ ಚಾಲ್ತಿಯಲ್ಲಿಟ್ಟು ಪ್ರತಿಯೊಬ್ಬರಿಗೂ ಮುಟ್ಟಿಸುವ, ನೆನಪಿಸುವ ಒಂದು ವ್ಯವಸ್ಥೆ. ಈ ವ್ಯವಸ್ಥೆಯ ಭಾಗವಾಗಿ ಅವರ ಅಭಿಮಾನಿಗಳು, ದೇಶಪ್ರೇಮಿಗಳು ಮತ್ತು ಬಿಜೆಪಿ ಐಟಿ ಸೆಲ್. ಈ ಸಲ ಬೈಡನ್ ಸರಕಾರ ಮತ್ತು ಅಮೆರಿಕ, ಭಾರತವನ್ನು ಸ್ವಾಗತಿಸಿದ ರೀತಿ ಮಾತ್ರ ವಿಭಿನ್ನ ಮತ್ತು ಅಭೂತಪೂರ್ವ ವಿಶೇಷ. ಇದು ತೋರಿಕೆಗೆ ನಡೆದ ಸ್ವಾಗತ ಅಥವಾ ಕಾರ್ಯ ಕ್ರಮವನ್ನು ಮಾತ್ರ ಗಮನದಲ್ಲಿರಿಸಿಕೊಂಡು ಹೇಳುತ್ತಿಲ್ಲ.

ಅದರ ಜತೆ ಇನ್ನೊಂದಿಷ್ಟು ಹಿನ್ನೆಲೆಯ ಗ್ರಹಿಕೆಯಿಂದ ಹೇಳುತ್ತಿದ್ದೇನೆ. ನಿಮಗೆಲ್ಲ ಗೊತ್ತೇ ಇದೆ, ನರೇಂದ್ರ ಮೋದಿಯವರು
ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸ್ವಲ್ಪ ಜಾಸ್ತಿಯೇ ಹತ್ತಿರವಾದವರು. ಹಿಂದಿನ ಸಲ ಮೋದಿ ಅಮೆರಿಕಕ್ಕೆ ಬಂದಾಗ ಅದಾಗಲೇ ಟ್ರಂಪ್ ಎರಡನೇ ಬಾರಿ ಅಧ್ಯಕ್ಷ ಸ್ಥಾನದ ಸ್ಪರ್ಧೆಯ ತಯಾರಿಯಲ್ಲಿದ್ದರು. ಚುನಾವಣಾ ಪ್ರಚಾರ ಶುರುವಾಗಿ ಯಾಗಿತ್ತು. ಸಾಮಾನ್ಯವಾಗಿ ಚುನಾವಣೆ ಹತ್ತಿರವಿದ್ದಾಗ, ಬರುವ ಅನ್ಯದೇಶದ ನಾಯಕರು ಅಧ್ಯಕ್ಷರ ಜತೆ ಜಾಸ್ತಿ ಮಡಿವಂತಿಕೆ ಯಿಂದಲೇ ವ್ಯವಹರಿಸುತ್ತಾರೆ.

ಒಂದೊಮ್ಮೆ ಇಂದಿನ ಅಧ್ಯಕ್ಷ ಸೋತು ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ, ಆಗಲೂ ದೇಶದ ಸಂಬಂಧ ಹಾಳಾಗಬಾರದಲ್ಲ?! ಆದರೆ ಆಗ ಮೋದಿ ಒಂದೆರಡು ಕಡೆ ಅಧ್ಯಕ್ಷ ಟ್ರಂಪ್ ಅವರನ್ನು, ಜಿಯೋ ಪಾಲಿಟಿಕ್ಸ್ ಮರ್ಯಾದೆಯನ್ನೂ ಮೀರಿ ಹೊಗಳಿ ದ್ದರು. ಅವರ ಅಂದಿನ ನಡೆಯನ್ನು ನೋಡಿ ಮುಂದಿನ ಬಾರಿಯೂ ಟ್ರಂಪ್ ಆರಿಸಿ ಬರುವುದು ಪಕ್ಕಾ ಎಂದೇ ಅನ್ನಿಸುತ್ತಿತ್ತು. ಅಲ್ಲದೆ ಆಗ ಬೈಡನ್ ಕೂಡ ಮೋದಿಯ ಮೇಲೆ ಆಗೀಗ ಅಧಿಕ ಪ್ರಸಂಗದ ಮಾತುಗಳನ್ನು ಆಡುತ್ತಲೇ ಇದ್ದರು. NRC, CAA, ಕಾಶ್ಮೀರ, ಕೃಷಿಕರ ಪ್ರತಿಭಟನೆ ಈ ಎಲ್ಲ ವಿಚಾರಗಳನ್ನು ವಿರೋಧಿಸಿದ್ದು ಇದೇ ಬೈಡನ್.

ಇಂಥದಕ್ಕೆಲ್ಲ ಟ್ರಂಪ್ ಮೋದಿಯನ್ನು ಬೆಂಬಲಿಸಿದ್ದರು. ೨೦೧೯ರಲ್ಲಿ ಮೋದಿ ಇಲ್ಲಿನ ಟೆಕ್ಸಾಸ್‌ನಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಹೋದರಲ್ಲ, ಅದಾದ ಒಂದು ತಿಂಗಳಲ್ಲಿ ಕಾಶ್ಮೀರದ ಆರ್ಟಿಕಲ್ ೩೭೦ರ ರದ್ದತಿ ಮಾಡಿದ್ದು. ಅದಾದ ನಂತರ ಇದೆಲ್ಲವನ್ನು ಕಂಡೂ ಕಾಣದಂತೆ ಟ್ರಂಪ್ ಮತ್ತು ಅಮೆರಿಕ ಇದ್ದದ್ದು, ನಂತರ ಕೆಲವೇ ತಿಂಗಳಲ್ಲಿ ಟ್ರಂಪ್ ಭಾರತಕ್ಕೆ ಬಂದು ಸ್ಟೇಡಿಯಂ ತುಂಬ ಮಾತಾಡಿದ್ದು, ಹೆಸರುಗಳನ್ನು ಅಪಭ್ರಂಶ ಮಾಡಿದ್ದು. ಇವೆಲ್ಲವನ್ನು ಈಗ ನೆನೆಸಿ ಕೊಂಡರೆ, ಆರ್ಟಿಕಲ್ ರದ್ದತಿಗೆ ಟ್ರಂಪ್ ಸಂಪೂರ್ಣ ಬೆಂಬಲವಿತ್ತು ಎಂದೇ ಗ್ರಹಿಸಬೇಕು.

ಆದರೆ ಬೈಡನ್ ಜತೆಗಿನ ಮೋದಿಯ ಸಂಬಂಧ ಅಂಥದ್ದಲ್ಲ, ಅಷ್ಟು ವೈಯಕ್ತಿಕವೂ ಅಲ್ಲ. ಅಲ್ಲದೆ, ಭಾರತದ ಮೂಲದವರೇ ಎಂದು ಭಾರತೀಯರನ್ನು ಕಂಡಾಗಲಷ್ಟೇ ನೆನಪಿಸಿಕೊಳ್ಳುವ ಕಮಲಾ ಹ್ಯಾರಿಸ್ ಅವರೂ ಭಾರತದ ರಾಜತಾಂತ್ರಿಕ ವಿಚಾರಕ್ಕೆ ಬಂದಾಗ ಅಡ್ಡಗಾಲು ಹಾಕಿದ್ದೇ ಹೆಚ್ಚು. ಕಮಲಾ ಯಾವತ್ತೂ ಪಾಕಿಸ್ತಾನದ ವಕಾಲತ್ತು ವಹಿಸಿಕೊಂಡದ್ದೇ ಜಾಸ್ತಿ. ಹಾಗಿರುವಾಗ ಇಂಥ ಸ್ವಾಗತ ಅನಿರೀಕ್ಷಿತವೇ ಸರಿ. ಹಾಗಾದರೆ ಇದೆಲ್ಲದಕ್ಕೆ ಕೇವಲ ಮೋದಿಯ ಚರಿಷ್ಮಾ, ಖ್ಯಾತಿ ಇತ್ಯಾದಿ ಕಾರಣವೇ? ಮೋದಿ
ಇಂದು ಜಾಗತಿಕವಾಗಿ ಫೇಮಸ್ ನಿಜ, ಆದರೆ ಫೇಮಸ್ ಆದವರಿಗೆಲ್ಲ ವೈಟ್ ಹೌಸ್ ಹೀಗೆ ಸತ್ಕರಿಸುವುದಿಲ್ಲವಲ್ಲ.

Read E-Paper click here
ಇದೆಲ್ಲ ಮೋದಿಯೇ ಖುದ್ದು ಹೇಳಿಸಿ ಮಾಡಿಸಿಕೊಂಡದ್ದು ಎನ್ನುವವರೂ ಇದ್ದಾರೆ. ನಾನ್ಸೆನ್ಸ್. ಅವರ ಜತೆ ವಾದವೇ ಇಲ್ಲ. ಅಮೆರಿಕದ ಮೀಡಿಯಾಗಳಂತೂ ಭಾರತದ ಸುದ್ದಿ ಮಾಡುವುದು ಏನಾದರೊಂದು ಕೆಟ್ಟ ಘಟನೆಯಾದಾಗ ಮಾತ್ರ. ಭಾರತದ ಬಗ್ಗೆ ಎಳ್ಳಿನಷ್ಟಾದರೂ ಒಳ್ಳೆಯದನ್ನು ತೋರಿಸಿ, ಹೇಳಿ ಇಲ್ಲಿನ ಮೀಡಿಯಾಗಳಿಗೆ ಅಭ್ಯಾಸವಿಲ್ಲ. ‘ಭಾರತದಲ್ಲಿ ಡೆಮಾಕ್ರಸಿ
ಅಳಿವಿನಲ್ಲಿದೆ’ ಎಂದು ದಿನ ಬೆಳಗಾದರೆ ಬೊಂಬಡಾ ಹೊಡೆದುಕೊಳ್ಳುತ್ತಿರುತ್ತವೆ. ಇದು ನರೇಂದ್ರ ಮೋದಿ ೨೦೧೩ರಲ್ಲಿ
ಪ್ರಧಾನಿ ಅಭ್ಯರ್ಥಿಯೆಂದು ಬಿಜೆಪಿ ಘೋಷಿಸಿದಾಗಿನಿಂದ ನಡೆದುಕೊಂಡು ಬಂದಿದೆ. ಇಲ್ಲಿನ ವಿರೋಧಿಸುವ ಮೀಡಿಯಾ,
ಅಧ್ಯಕ್ಷ ಉಪಾಧ್ಯಕ್ಷೆಯರ ವಿರೋಧದ ನಿಲುವುಗಳು, ಇವೆಲ್ಲದರ ಹಿನ್ನೆಲೆಯಲ್ಲಿ ಇಂಥ ಸ್ವಾಗತ!

ಇಂಥ ಸಮಯದಲ್ಲಿ, ಪ್ರಜಾಪ್ರಭುತ್ವವೇ ಸಾಯುತ್ತಿದೆ ಎಂದು ಇಲ್ಲಿನ ಮೀಡಿಯಾ ಹಗಲಿರುಳು ಹೇಳುತ್ತಿರುವಾಗ, ಬೈಡನ್ ಆಡಳಿತ ಈ ಭೆಟ್ಟಿಯನ್ನು ‘ಜಗತ್ತಿನ ಎರಡು ಅತ್ಯಂತ ಹಳೆಯ, ಗಟ್ಟಿ ಪ್ರಜಾಪ್ರಭುತ್ವದ ಭೇಟಿ’ ಎಂದಿದ್ದಾದರೂ ಏಕೆ? ಹಾಗಾದರೆ ಇಂಥ ಸ್ವಾಗತ ಸತ್ಕಾರಗಳ ಕಾರಣ ಭಾರತ ವೆಂಬ ದೇಶ ಇಂದಿನ ಜಗತ್ತಿನಲ್ಲಿ ಅನಿವಾರ್ಯವಾದದ್ದೇ? ಮೋದಿ ಬರುವುದಕ್ಕಿಂತ ಹಿಂದಿನ ವಾರದ ಲಂಡನ್ನಿನ ‘ಎಕನಾಮಿಸ್ಟ್’ ಪತ್ರಿಕೆಯನ್ನು ನೋಡಿದಾಗ ಆಶ್ಚರ್ಯವಾಗಿತ್ತು. ಆ ಪತ್ರಿಕೆ ಹಿಂದೆಂದೂ ಒಬ್ಬ ದೇಶದ ನಾಯಕ ಇಂಗ್ಲೆಂಡ್ ಅಲ್ಲದ ಅನ್ಯದೇಶಕ್ಕೆ ಹೋಗುವುದನ್ನು ಇಷ್ಟು ವೈಭವೀಕರಿಸಿದ್ದು ನಾನು ಕಂಡಿಲ್ಲ.

ಮುಖಪುಟದಲ್ಲಿ ಬೈಡನ್ ಹುಲಿಯೊಂದನ್ನು ಹಿಡಿದುಕೊಂಡಿರುವ ರೇಖಾಚಿತ್ರ. ಹುಲಿ ಎಂದರೆ ಭಾರತ ಎಂಬುದಿಲ್ಲಿ ಸೂಚ್ಯ. ಮೇಲ್ಗಡೆ ‘America’s New Best Friend. Why India is indispensable’ (ಅಮೆರಿಕದ ಹೊಸ ಆಪ್ತ ಗೆಳೆಯ. ಭಾರತ ಏಕೆ ತೀರಾ ಅವಶ್ಯಕ) ಎಂಬ ತಲೆಬರಹ. ಭಾರತದ ಮತ್ತು ಈ ಭೆಟ್ಟಿಯ ಬಗೆಗಿನ ಲೇಖನಗಳೇ ಅರ್ಧಕ್ಕರ್ಧ ಪತ್ರಿಕೆಯನು ತುಂಬಿದ್ದವು. ಭಾರತ ಅದೇಕೆ ಅನಿವಾರ್ಯ ಎಂಬುದರ ಸುತ್ತಲೇ ಸಮಗ್ರ ವರದಿಯನ್ನು ಹೆಣೆಯಲಾಗಿತ್ತು. ಈ ಸಲದ ಮೋದಿಯವರ ಭೆಟ್ಟಿ ಅವರ ಮೊದಲ US State Visit. ಸ್ಟೇಟ್ ವಿಸಿಟ್ ಎಂದರೆ ಅದು ಅಮೆರಿಕದ ಅಧ್ಯಕ್ಷರೇ ಆಹ್ವಾನಿಸಿ ಅನ್ಯದೇಶದ ನಾಯಕರು ಅತಿಥಿಗಳಾಗಿ ಬರುವ ಪದ್ಧತಿ. ಯುಎಸ್ ಸ್ಟೇಟ್ ವಿಸಿಟ್‌ಗೆ ಕರೆಯುವುದೆಂದರೆ ಅದು ಯಾವುದೇ ವಾದ ಅಥವಾ ವಿವಾದದ ಪರಿಹಾರಕ್ಕೆ ಅಥವಾ ಹೊಂದಾಣಿಕೆಗೆ ಆಗಿರುವುದಿಲ್ಲ.

ಬದಲಿಗೆ ಅದು ಅಮೆರಿಕದ ಅಧ್ಯಕ್ಷರು ಇನ್ನೊಂದು ದೇಶದ ಜತೆಗಿನ ಪರಸ್ಪರ ಸಂಬಂಧವನ್ನು ಗುರುತಿಸಿ ಸಂಭ್ರಮಿಸಲು ಆಹ್ವಾ ನಿಸುವ ಕಾರ್ಯಕ್ರಮ. ೨೧ ಗುಂಡುಗಳ ಸ್ವಾಗತ, ವೈಟ್ ಹೌಸ್‌ನಲ್ಲಿ ವೈಟ್ ಟೈ (ವಿಶೇಷ) ಊಟೋಪಚಾರ, ಆಮೇಲೆ ಧ್ವಜ ಸಮಾರಂಭ, ಅಲ್ಲಿನ ಸಂಸತ್ತನ್ನು ಉದ್ದೇಶಿಸಿ (ಎರಡನೇ ಬಾರಿ) ಮಾತನಾಡುವುದು ಇವೆಲ್ಲ ಎಲ್ಲ ಬೇರೆ ದೇಶದ ನಾಯಕರು ಅಮೆರಿಕಕ್ಕೆ ಬಂದಾಗಲೆಲ್ಲ ನಡೆಯುವುದಲ್ಲ. ಇದು ಬಂದವರಿಗೆಲ್ಲ ಸಿಗುವ ಸ್ವಾಗತವಲ್ಲ. ಪಾಕಿಸ್ತಾನದ ಪ್ರಧಾನಿ ಬಂದಾಗ ಅದು ಸ್ಟೇಟ್ ವಿಸಿಟ್ ಆಗಿರಲಿಲ್ಲ.

ಬದಲಿಗೆ ಒಂದು ಭೆಟ್ಟಿಯಾಗಿತ್ತು ಅಷ್ಟೆ. ಆಗೇನು ಅಧ್ಯಕ್ಷರು ಸ್ವಾಗತಿಸಲಿಕ್ಕೆ ಬಂದು ನಿಂತಿರಲಿಲ್ಲ. ಹಾಗಂತ ಬೈಡನ್ ಅಮೆರಿಕಕ್ಕೆ ಬೇಕಾದಷ್ಟು ಸ್ನೇಹಿತ ರಾಷ್ಟ್ರಗಳಿವೆ, ಸಂಭ್ರಮಿಸಲಿಕ್ಕೆ ಬೇಕಾದಷ್ಟು ಒಳ್ಳೆಯ ಸಂಬಂಧಗಳಿವೆ. ಆದರೆ ಬೈಡನ್ ಅಧ್ಯಕ್ಷರಾದ ಇಲ್ಲಿಯವರೆಗೆ ಈ ರೀತಿ ಆಹ್ವಾನಿಸಿದ್ದು ಇನ್ನಿಬ್ಬರು ರಾಷ್ಟ್ರನಾಯಕರನ್ನು ಮಾತ್ರ, ಮೋದಿ ಮೂರನೆಯವರು. ಮೋದಿಗೆ ಅಮೆರಿಕ ವೀಸಾ ತಿರಸ್ಕರಿಸುವಾಗ ಬೈಡನ್ ಅಲ್ಲಿನ ಉಪಾಧ್ಯಕ್ಷರಾಗಿದ್ದರು ಎಂಬುದನ್ನೂ ನೆನಪಿಸಿಕೊಳ್ಳಬೇಕು. ಅದೇ ಬೈಡನ್ ಈಗ ಅಧ್ಯಕ್ಷ. ಅವರ ಈ ಸ್ವಾಗತವನ್ನು ಇಲ್ಲಿನ ಭಾರತವನ್ನು ಕಂಡರಾಗದ ಪತ್ರಿಕೆ- ಟಿವಿಗಳು ‘ಇಷ್ಟು ಸಂಭ್ರಮದ ಸ್ವಾಗತವನ್ನು ನಾವು ಹಿಂದೆ ಕಂಡದ್ದು ಅಮೆರಿಕಕ್ಕೆ ಪೋಪ್ ಬಂದಾಗ’ ಎಂದು ಹೇಳುತ್ತಿವೆಯೆಂದರೆ ಬಾಕಿಯದೆಲ್ಲಾ ನಿಮ್ಮ ಅಂದಾಜಿಗೆ.

ಸಂಭ್ರಮದಲ್ಲಂತೂ ಇದು ಅಭೂತಪೂರ್ವ. ಮೊದಲನೆಯದಾಗಿ ಭಾರತ ಇಂದು ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆ. ಇದನ್ನು ಅಂಕಿ-ಅಂಶಗಳೇ ಹೇಳುವುದರಿಂದ ಅನುಮಾನವಿಲ್ಲ. ಈಗಂತೂ ಜಗತ್ತಿನ ಐದನೇ ಸ್ಥಾನ. ಇದೇ ವೇಗದಲ್ಲಿ ಬೆಳೆದರೆ ೨೦೨೮ರಲ್ಲಿ ಜಪಾನ್ ಮತ್ತು ಜರ್ಮನಿಯ ಆರ್ಥಿಕತೆಯನ್ನು ಭಾರತ ಹಿಂದಕ್ಕೆ ಹಾಕುವುದು ನಿಶ್ಚಿತ. ಆಗ ಅಮೆರಿಕ
ಮತ್ತು ಚೀನಾ ನಂತರದ ಆರ್ಥಿಕತೆ ಭಾರತದ್ದಾಗುತ್ತದೆ. ಎಲ್ಲಿಲ್ಲದ ವೇಗದಲ್ಲಿ ಬೆಳೆಯುತ್ತಿರುವ ರಾಷ್ಟ್ರ ಭಾರತ.

ಇಂದು ಅಮೆರಿಕದ ಯುದ್ಧ ಸಲಕರಣೆಗಳು, ವಿಮಾನ, ಕೋಕಾಕೋಲಾದಿಂದ ಹಿಡಿದು ಐಫೋನ್ ಜೋಡಣೆ ಮತ್ತು ಮಾರಾಟ, ಐಟಿ ಹೀಗೆ ಬಹುತೇಕ ವ್ಯವಹಾರಗಳಿಗೆ ಭಾರತವು ಅಮೆರಿಕಕ್ಕೆ ಅನಿವಾರ್ಯ. ಭಾರತ ಖಂಡಿತವಾಗಿ ಅಮೆರಿಕಕ್ಕೆ ಒಂದೊಳ್ಳೆ ಮಾರ್ಕೆಟ್. ಅಲ್ಲದೆ ಈಗಂತೂ ಪಾಕಿಸ್ತಾನದ ಜತೆಗಿನ ಅಮೆರಿಕದ ಸಂಬಂಧ ಹಳಸಿ ಆಗಿದೆ. ಇದು ಟ್ರಂಪ್ ಮತ್ತು ಮೋದಿಯವರ ಕಾಲದಲ್ಲಿ, ಒಳ್ಳೆಯ ಸಂಬಂಧದಿಂದ ಆಗಿದ್ದು. ಟ್ರಂಪ್‌ಗೆ ಮೊದಲಿನಿಂದ ಪಾಕಿಸ್ತಾನದ ಬಣ್ಣದ ಅರಿವಿತ್ತು.

ಪಾಕಿಸ್ತಾನ ಬಿಟ್ಟು ಭಾರತದ ಕೈ ಹಿಡಿಯುವುದು ಅಮೆರಿಕಕ್ಕೆ ಅನಿವಾರ್ಯವೂ ಆಗಿತ್ತು, ಬಿಡಿ. ಒಟ್ಟಾರೆ, ‘ಏಷ್ಯಾ ಎಂದರೆ ಅಲ್ಲಿ ಅಮೆರಿಕದ ಸ್ನೇಹಿತ ಭಾರತ’ ಎನ್ನುವ ಸಂದೇಶವನ್ನು ಜಗತ್ತಿಗೇ ಸಾರುವ ಅನಿವಾರ್ಯತೆ ಅಮೆರಿಕಕ್ಕೆ ಬಂದೊದಗಿ ಬಹುಕಾಲ
ಆದಂತಿದೆ. ಇಂದು ಪ್ರಪಂಚದ ಯಾವುದೇ ಗಟ್ಟಿ ರಾಷ್ಟ್ರಕ್ಕೆ ಹೋಗಿ. ಅಲ್ಲಿ ದಿನಗಳೆದಂತೆ ಭಾರತೀಯ ಮೂಲದವರ ಪ್ರಾಬಲ್ಯ
ಹೆಚ್ಚುತ್ತಿದೆ. ಅಮೆರಿಕದಲ್ಲಂತೂ ಇಲ್ಲಿನ ಅದೆಷ್ಟೋ ದೊಡ್ಡ ವ್ಯವಹಾರಗಳನ್ನು ನಿಭಾಯಿಸುವವರೇ ಭಾರತೀಯ ಮೂಲ
ದವರು.

ಗೂಗಲ್, ಐಬಿಎಂ, ಮೈಕ್ರೋಸಾಫ್ಟ್ ಮೊದಲಾದ ಕಂಪನಿಗಳ ಮುಖ್ಯಸ್ಥರಷ್ಟೇ ಅಲ್ಲ, ಇಲ್ಲಿ ಬಹುತೇಕ ಎಲ್ಲ ದೊಡ್ಡ ಮತ್ತು ಮಧ್ಯಮ ಗಾತ್ರದ ಕಂಪನಿಗಳಲ್ಲಿ ಮುಖ್ಯಸ್ಥರಾಗಿ ಭಾರತೀಯ ಮೂಲದವರೇ ಇದ್ದಾರೆ. ಅಷ್ಟೇ ಅಲ್ಲ, ಶಿಕ್ಷಣ ಕ್ಷೇತ್ರಕ್ಕೆ ಬಂದರೆ ಶ್ರೇಷ್ಠ ಪ್ರಾಧ್ಯಾಪಕರಲ್ಲಿ ಭಾರತೀಯ ಮೂಲದವರೇ ಜಾಸ್ತಿ. ಅಮೆರಿಕದ ಐದು ಅತ್ಯುನ್ನತ ಬಿಸಿನೆಸ್ ಸ್ಕೂಲ್‌ಗಳಲ್ಲಿ ಮೂರರ ಮುಖ್ಯಸ್ಥರು ಭಾರತೀಯ ಮೂಲದವರು.

ಇಲ್ಲಿನ ವೈದ್ಯರು, ವಿಜ್ಞಾನಿಗಳಲ್ಲಿ ಭಾರತೀಯ ಮೂಲದವರು ಬಹುಸಂಖ್ಯಾತರು. ಹೀಗೆ ಭಾರತ ಮೂಲದವರ ಸಂಖ್ಯೆಯ ಪ್ರಮಾಣ ಶೇ.೧.೫ಕ್ಕಿಂತ ಕಡಿಮೆಯಿದ್ದರೂ ಬಹಳ ಪ್ರಭಾವಿ ವರ್ಗ ಇದು. ಅಮೆರಿಕದಲ್ಲಿ ಭಾರತೀಯರೆಂದರೆ ಕಲಿತವರು,
ದುಡಿಮೆ ಒಳ್ಳೆಯದಿರುವವರು. ಏಕೆಂದರೆ ಅಮೆರಿಕನ್ ಪ್ರಜೆಯ ಸರಾಸರಿ ಸಂಬಳಕ್ಕಿಂತ ದುಪ್ಪಟ್ಟು ಸರಾಸರಿಯಲ್ಲಿ ಇಲ್ಲಿನ ಭಾರತೀಯರು ದುಡಿಯುತ್ತಾರೆ. ಇದು ಖಂಡಿತ ವಾಗಿ ಅಲ್ಲಲ್ಲಿ ಅಸೂಯೆಗೆ ಕಾರಣವಾಗಿದ್ದರೂ ಅಮೆರಿಕನ್ನರಿಗೆ ಭಾರತ ದೇಶ, ಭಾರತೀಯರೆಂದರೆ ಹೆಚ್ಚಿನ ಗೌರವ ವಿದೆ. ಭಾರತದವರನ್ನು ಮೆಚ್ಚುವವರು ಇಲ್ಲಿ ಶೇ. ೭೦ರಷ್ಟಿದ್ದರೆ ಚೀನಾದವರನ್ನು ಮೆಚ್ಚುವವರ ಸಂಖ್ಯೆ ಕೇವಲ ಶೇ.೧೫. ಇದು ಇಲ್ಲಿನ ಪಾಪ್ಯುಲರ್ ವೋಟಿಂಗ್‌ನ ಅಂಕಿ-ಅಂಶ.

ಖಂಡಿತವಾಗಿ ಭಾರತದ ಗೌರವವನ್ನು ಹೆಚ್ಚಿಸಲು ಅನಿವಾಸಿಗಳ ಕಾರಣವನ್ನೂ ಪರಿಗಣಿಸದೇ ಇರುವಂತಿಲ್ಲ. ಇವರೆಲ್ಲರೂ ಅಮೆರಿಕದ ಭಾರತದ ಅನಿವಾರ್ಯತೆಗೆ ಪರೋಕ್ಷವಾಗಿ, ರಾಜಕೀಯವಾಗಿ ಕಾರಣರೇ. ಇದೆಲ್ಲದಕ್ಕಿಂತ ಹೆಚ್ಚಿನ ಇನ್ನೊಂದು ಅನಿವಾರ್ಯತೆ ಇದೆ. ಅದು ಚೀನಾ. ವಾಷಿಂಗ್ಟನ್‌ನಲ್ಲಿರುವ ಅಮೆರಿಕದ ಹಲವು ನಾಯಕರು ಭಾರತವನ್ನು ಚೀನಾ ಹಿನ್ನೆಲೆ ಯಲ್ಲಿಯೇ ನೋಡುವುದು. ಚೀನಾವನ್ನು ಹದ್ದುಬಸ್ತಿನಲ್ಲಿಡಬೇಕೆಂದರೆ ಭಾರತವನ್ನು ಬೆಂಬಲಿಸಲೇಬೇಕು,  ಲಿಂಗಿಸಲೇಬೇಕು.

ಅಲ್ಲದೆ ಭಾರತ ಮತ್ತು ಚೀನಾ ಗಡಿವಿವಾದ ಹಿಂದಿನಿಂದ ನಡೆದುಕೊಂಡು ಬಂದದ್ದು. ಭಾರತ ಮತ್ತು ಚೀನಾ ಗಡಿಯಲ್ಲಿ ಸೈನಿಕರು ಮುಂದೆ ಹಿಂದೆ ಬಂದು ಹೊಡೆದಾಡು ವುದು ಸ್ವಾತಂತ್ರ್ಯ ಬಂದಾಗಿನಿಂದಲೂ ಇದೆ. ಮಾಕಿಂಗ್‌ಗೆ ಒಂದು ಬೇಲಿಯೂ ಇಲ್ಲದ ಅತ್ಯಂತ ಉದ್ದದ ಗಡಿ ಸದ್ಯ ಭಾರತ-ಚೀನಾದ್ದು. ೨೦೨೦ರಲ್ಲಿ ಸೈನಿಕರ ಗುದ್ದಾಟವಾಯ್ತಲ್ಲ,ಅಲ್ಲಿಂದ ಮುಂದೆ ಈ ಸಂಬಂಧ ಇನ್ನಷ್ಟು ಹಾಳಾಗಿದೆ. ಹೀಗಿರುವಾಗ ಮತ್ತು ಅಮೆರಿಕಕ್ಕೂ ಚೀನಾ ವಿರೋಧಿಯಾಗಿರುವಾಗ ಸಹಜವಾಗಿ ‘ದುಷ್ಮನ್ ಕಾ ದುಷ್ಮನ್’ ಅಮೆರಿಕ ಮತ್ತು ಭಾರತ ಹತ್ತಿರವಾಗುತ್ತಿವೆ.

ಈಗಂತೂ ಭಾರತಕ್ಕೆ ಜನಸಂಖ್ಯೆಯಲ್ಲಿ ಮೊದಲ ಸ್ಥಾನ. ಸದ್ಯದಲ್ಲಿಯೇ ಮೂರನೇ ದೊಡ್ಡ ಆರ್ಥಿಕತೆ. ಹೀಗಾಗಿ ಚೀನಾ ಬೆಳೆಯಲು, ಏಷ್ಯಾದಲ್ಲಿ ಶಕ್ತಿಶಾಲಿಯಾಗಲು ಅವಕಾಶ ಕೊಡಬಾರದ ಅವಶ್ಯಕತೆ ಭಾರತಕ್ಕೂ ಅಮೆರಿಕಕ್ಕೂ ಇದೆ. ಇಬ್ಬರಿಗೂ ಅದು ಬೇಕು. ಈ ಕಾರಣಕ್ಕೇ ಉಕ್ರೇನ್ ಯುದ್ಧಕಾಲದ ಮಧ್ಯೆಯೂ ಭಾರತವು ಅಮೆರಿಕದ ಬದ್ಧವೈರಿ ರಷ್ಯಾದಿಂದ ಕಚ್ಚಾತೈಲ
ಖರೀದಿಸಿದರೂ ಅದನ್ನು ಒಪ್ಪಿಕೊಳ್ಳಲಾಯಿತು. ಇದೇ ಈಗೊಂದು ದಶಕದ ಹಿಂದೆ ನಡೆದಿದ್ದಿದ್ದರೆ, ಭಾರತದ ಮೇಲೆ ಅಮೆರಿಕ ಆರ್ಥಿಕ ನಿರ್ಬಂಧ ಹೇರಿ, ಸಾಕೋ ಸಾಕು ಮಾಡಿ ಬಿಡುತ್ತಿತ್ತು.

ಪೋಖ್ರಾನ್ ಪರಮಾಣು ಪರೀಕ್ಷೆ ಸಮಯದಲ್ಲಿ ಅಮೆರಿಕ ಕೊಟ್ಟ ಕಷ್ಟವನ್ನು ಮರೆಯಲಾದೀತೇ? ಒಟ್ಟಾರೆ, ನಾವಂದುಕೊಂಡ ದ್ದಕ್ಕಿಂತ ದೊಡ್ಡ ಜಿಯೋ ಪೊಲಿಟಿಕಲ್ ವಿಶೇಷ ಘಟನೆ ಮೋದಿಯವರು ಅಮೆರಿಕಕ್ಕೆ ಬಂದು ಹೋಗಿದ್ದು, ಅಮೆರಿಕ ಈ ಪರಿಯಲ್ಲಿ ಭಾರತವನ್ನು, ಇಲ್ಲಿನ ಪ್ರಧಾನಿಯನ್ನು ಗೌರವಿಸಿ ಸತ್ಕರಿಸಿದ್ದು. ಇದು ಖಂಡಿತವಾಗಿ ಒಂದು ಐತಿಹಾಸಿಕ ಮೈಲಿ ಗಲ್ಲಂತೂ ಹೌದು. ಕೆಲವರು ಇದೆಲ್ಲದರ ಶ್ರೇಯವನ್ನು ಮೋದಿಯವರಿಗೆ, ಅವರ ಚರಿಷ್ಮಾಗೆ ಕೊಡಬಹುದು. ಇನ್ನು ಕೆಲವರ ಪ್ರಕಾರ ಈ ಮರ್ಯಾದೆ ಮೋದಿಯವರಿಗಲ್ಲ, ಭಾರತಕ್ಕೆ. ಮತ್ತೆ ಕೆಲವರ ಪ್ರಕಾರ ಇದು ಭಾರತಕ್ಕೆ ಸಂದ ಗೌರವ ನಿಜ, ಆದರೆ ಅಂಥ ಸ್ಥಿತಿಗೆ ಭಾರತವನ್ನು ಕೊಂಡೊಯ್ದವರು ಮೋದಿ, ಹಾಗಾಗಿ ಅವರಿಗೆ ಕ್ರೆಡಿಟ್ಟು. ಮತ್ತೊಂದು ವರ್ಗದ ಪ್ರಕಾರ ಇದೆಲ್ಲದಕ್ಕೆ ಚೀನಾ, ರಷ್ಯಾ ಕಾರಣ; ಅವರ ಹೆಡೆ ಮುರಿಯಬೇಕೆಂದರೆ ಭಾರತವನ್ನು ತನ್ನ ಪಾರ್ಟಿಗೆ ತೆಗೆದುಕೊಳ್ಳಬೇಕೆಂಬ ಅಮೆ
ರಿಕದ ಅನಿವಾರ್ಯತೆ. ಮಗದೊಬ್ಬರ ಪ್ರಕಾರ, ಭಾರತ ಸದ್ಯ ದಲ್ಲೇ ಚೀನಾ ನಂತರದ ಆರ್ಥಿಕತೆಯಾಗಲಿಕ್ಕಿದೆ, ಇದು ಅಮೆರಿಕದ ಅವಕಾಶವನ್ನು ಬಳಸಿಕೊಳ್ಳುವ ಬುದ್ಧಿ.

ಹಾಗಾಗಿ ಇದೆಲ್ಲದರ ಕ್ರೆಡಿಟ್ ಅನ್ನು ನಾವೆಲ್ಲ ಸೇರಿ ಜನಸಂಖ್ಯೆ ಹೆಚ್ಚಿಸಿದ್ದೇ ಕಾರಣವೆಂದು ನಮಗೆ ನಾವೇ ಧನ್ಯವಾದ ಸಮರ್ಪಿ
ಸಿಕೊಳ್ಳಬಹುದು. ಒಟ್ಟಾರೆ ಯಾವ ಕಾರಣವೂ ಅಲ್ಲವೆನ್ನು ವಂತಿಲ್ಲ. ಕಾರಣವೇನೇ ಇರಲಿ, ಭಾರತ ಸೂಪರ್ ಪವರ್ ಆಗುತ್ತಿರುವುದಂತೂ ಈ ಭೇಟಿಯ ಘಟನೆಯಿಂದ ಸ್ಪಷ್ಟ, ದೃಗ್ಗೋಚರ. ಆ ಹೆಮ್ಮೆಪಡುವಾಗ ಕಾರಣ ಕಟ್ಟಿಕೊಂಡು ಏನಾಗ ಬೇಕಾಗಿದೆ? ಮೋದಿಗೆ ಸಿಕ್ಕ ಸ್ವಾಗತ ಭಾರತಕ್ಕೆ ಸಿಕ್ಕಿದ್ದೇ ಅಲ್ಲದೆ ಇನ್ನೇನು? ಸಂಭ್ರಮಿಸುವಾಗ ಸಂಭ್ರಮಿಸಬೇಕು ಅಷ್ಟೆ!