ವಿಶ್ಲೇಷಣೆ
ಡಾ.ನಾ.ಮೊಗಸಾಲೆ
‘ಸ್ತ್ರೀ ಸ್ವಾತಂತ್ರ್ಯ ಮತ್ತು ಧರ್ಮಶಾಸ್ತ್ರ’ ಎಂಬ ನನ್ನ ಪ್ರಕಟಿತ ಲೇಖನ ವೊಂದಕ್ಕೆ ಎಂಥ ಪ್ರತಿಕ್ರಿಯೆ ಬರಬಹುದೆಂಬ ಕುತೂಹಲ ದಲ್ಲಿ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿಕೊಂಡೆ. ಆಗ ಕೆಲವರು, ‘ಇದರಲ್ಲಿ ಇಂಥ ವಿಚಾರಗಳಿವೆ ಎಂದು ನಮಗೆ ತಿಳಿದಿರಲಿಲ್ಲ’ ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಅನೇಕರು, ‘ಈ ಕಾಲಕ್ಕೆ ಪ್ರಸ್ತುತವಲ್ಲದ ಇದನ್ನು ನೀವು ಮುನ್ನೆಲೆಗೆ ತರುತ್ತಿರುವುದೇಕೆ?’ ಎಂದು ಪ್ರಶ್ನಿಸಿದರು.
ಹೀಗೆ ಪ್ರಶ್ನಿಸಲು ಒಂದು ಕಾರಣವಿದೆ. ನಮ್ಮ ಸಂವಿಧಾನದ ರೂವಾರಿಯೂ ಅಪರೂ ಪದ ಚಿಂತಕರೂ ಆಗಿದ್ದ ಡಾ. ಅಂಬೇಡ್ಕರ್ ಅವರು ೧೯೨೭ರ ಡಿಸೆಂಬರ್ ೨೫ರಂದು ಸ್ವತಃ ಮುಂದೆ ನಿಂತು ಮನುಧರ್ಮ ಶಾಸ್ತ್ರವನ್ನು ಸುಟ್ಟಿದ್ದಾರೆ ಎಂಬ ಮಾಹಿತಿಯಿದ್ದು, ಈಗಲೂ ಆ ದಿನವನ್ನು ‘ಸ್ಮೃತಿದಹನ್ ದಿವಸ್’ ಎಂದು ದಲಿತರು ಆಚರಿಸುತ್ತಾರೆ ಎಂದು ಕೇಳಿರುವೆ. ಮಹಾನ್ ಚಿಂತಕ ಅಂಬೇಡ್ಕರ್ ಅವರಿಗೆ ಅದರ ಬಗ್ಗೆ ಅಷ್ಟು ಸಿಟ್ಟೇಕೆ? ಎಂಬುದು ಇಂದಿಗೂ ನನಗೆ ಗೊತ್ತಿಲ್ಲ.
‘ಸ್ಮೃತಿದಹನ್ ದಿವಸ್’ ಅನ್ನು ಆಚರಿಸುವವರೂ ಈಗಲೂ ಪ್ರಾಯಃ ಸಾಕಷ್ಟು ಮಂದಿ ಇರಬಹುದಾದರೂ, ಅವರೂ ಮನುಧರ್ಮ ಶಾಸ್ತ್ರವನ್ನು ಪ್ರಾಯಃ ಅಭ್ಯಸಿಸಿರಲಿಕ್ಕಿಲ್ಲ ಎಂದು ನನ್ನ ತರ್ಕ. ಅದೇನಿದ್ದರೂ, ನನ್ನ ಆ ಲೇಖನದಲ್ಲಿ ಆ ಶಾಸ್ತ್ರದ ಧನಾತ್ಮಕ ಮುಖವಾಡವನ್ನಷ್ಟೇ ತೋರಿಸಿದ್ದೇನೆಯೇ ಹೊರತು, ಅದರ ಋಣಾತ್ಮಕ ಮುಖದ ದರ್ಶನ ಮಾಡಿರಲಿಲ್ಲ. ಈಗ ಆ ನೆಲೆಯಲ್ಲಿ ಈ ಲೇಖನ. ಮನುಧರ್ಮ ಶಾಸ್ತ್ರವನ್ನು ನಾನು ಕುತೂಹಲದಲ್ಲಿ ಕೈಗೆತ್ತಿಕೊಂಡದ್ದು. ನ್ಯಾಯಮೂರ್ತಿ ಡಾ. ಮ.ರಾಮಾಜೋಯಿ ಸರ ‘ಮನುಸ್ಮೃತಿಯಲ್ಲಿ ಶಾಶ್ವತ ಜೀವನ ಮೌಲ್ಯಗಳು’ ಎಂಬ ಕೃತಿಯು (ಪ್ರಕಟಣೆ: ಸಪ್ನ ಬುಕ್ ಹೌಸ್, ೨೦೦೫) ಅದರ ಶಿರೋನಾಮೆಯ ಹಾಗೆ ಮನು ಧರ್ಮ ಶಾಸದ ಧನಾತ್ಮಕ ಅಂಶಗಳನ್ನಷ್ಟೆ ತೆರೆದಿಟ್ಟಿದೆ.
ಆ ನೆಲೆಯಲ್ಲಿ ಅದನ್ನು ಓದಿದಾಗ, ಆ ಶಾಸ್ತ್ರದ ಬಗ್ಗೆ ಯಾಕಿಷ್ಟು ಸಿಟ್ಟು? ಅದು ಹೇಗೆ ಜೀವವಿರೋಧಿ? ಎನ್ನುವುದೆಲ್ಲ ನನ್ನನ್ನು ಕಾಡಿತು. ನನ್ನ ಗೆಳೆಯ ಮತ್ತು ಪ್ರಸಿದ್ಧ ಚಿಂತಕ ಡಾ. ಬಿ.ಭಾಸ್ಕರ ರಾವ್ ಅವರೊಂದಿಗೆ ಈಚೆಗೆ ಮಾತನಾಡುವಾಗ ಅವರು, ‘ನಾನು ಮನುಧರ್ಮ ಶಾಸ್ತ್ರದ ಬಗೆಗೇ ಒಂದು ಹೊತ್ತಗೆ ತರುತ್ತಿದ್ದೇನೆ’ ಎಂದಾಗ, ನನಗೆ ಆಶ್ಚರ್ಯವಾಗಿ ‘ಹಾಗಾದರೆ ನಮ್ಮ
‘ಕಾಂತಾವರ ಕನ್ನಡ ಸಂಘ’ದಲ್ಲಿ ಒಂದು ಉಪನ್ಯಾಸ ನೀಡಲು ಸಾಧ್ಯವೇ?’ ಎಂದು ಪ್ರಶ್ನಿಸಿದೆ. ಅವರು ಒಪ್ಪಿದರು.
ಮನುವಿನ ಬಗ್ಗೆ ಮಾತೆತ್ತಿದರೆ ಸಾರ್ವಜನಿಕವಾಗಿ ಬೈಸಿಕೊಳ್ಳಬೇಕೆಂಬ ಆತಂಕ ಮತ್ತು ಭಯದಲ್ಲೇ ನಾನು ಕಾರ್ಕಳದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮತ್ತು ಕಾಂತಾವರ ಕನ್ನಡ ಸಂಘದಿಂದ ಜಂಟಿಯಾಗಿ ಒಂದು ಕಾರ್ಯಕ್ರಮವನ್ನು ನಿಗದಿ ಮಾಡಿದೆ (೧೮ ಜೂನ್ ೨೦೨೨). ತುಂಬ ಗಂಭೀರವಾಗಿ ನಡೆದ ಆ ಕಾರ್ಯಕ್ರಮದಲ್ಲಿ ೫೦ಕ್ಕೂ ಮಿಕ್ಕಿ ಹಿರಿಯರು ಭಾಗವ
ಹಿಸಿದ್ದರು. ಆ ಸಭೆಯಲ್ಲಿ ಭಾಸ್ಕರ ರಾವ್ ಅವರು ಮನುಸ್ಮೃತಿಯ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಸಮಚಿತ್ತದಿಂದ ವಿಶ್ಲೇಷಿಸಿದರು.
Read E-Paper click here
ಭಾಸ್ಕರ ರಾವ್ ಮೂಲತಃ ಉಡುಪಿಯ ವೈದಿಕ ಮನೆತನದವರಾಗಿದ್ದು, ಸಂಸ್ಕೃತವನ್ನು ಬಾಲ್ಯದಲ್ಲೇ ಅಭ್ಯಸಿಸಿ ಆಮೇಲೆ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಮತ್ತೂ ಹೆಚ್ಚಿನ ಶಿಕ್ಷಣ ಪಡೆದವರು. ವಿದೇಶಿ ವಿ.ವಿ.ಗಳಲ್ಲಿನ ೪ ವರ್ಷಗಳ ಬೋಧನೆ ಸೇರಿದಂತೆ ಅವರಿಗೆ ೪೦ ವರ್ಷಗಳ ಇಂಗ್ಲಿಷ್ ಬೋಧನಾನುಭವವೂ ಇದ್ದು, ಅವರಿಗೆ ಮನುಧರ್ಮ ಶಾಸದ ಬಗ್ಗೆ ಇರುವ ಕುತೂಹಲ ಕೇಳುಗರಲ್ಲೂ ಇತ್ತು.
ಮನುಧರ್ಮ ಶಾಸ್ತ್ರವನ್ನು ಒಂದು ‘ಪಠ್ಯ’ ಎನ್ನುವ ರೀತಿಯಲ್ಲಿ ಈಗಾಗಲೇ ಅಧ್ಯಯನ ಮಾಡಿರುವ ಭಾಸ್ಕರ ರಾಯರು, ‘ಯಾವುದೇ ‘ಇಸಂ’ಗೆ ಬದ್ಧನಾಗದೆ ವಸ್ತುನಿಷ್ಠವಾಗಿ ಭಾಷಾಶಾಸ್ತ್ರದ ದೃಷ್ಟಿಯಿಂದ, ಆ ಶಾಸದಲ್ಲಿ ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ರೀತಿಯಲ್ಲಿ ಅಭ್ಯಸಿಸಿದೆ’ ಎನ್ನುತ್ತಾರೆ. ನಮ್ಮ ವೇದ-ಪುರಾಣಗಳು, ಮಹಾಕಾವ್ಯಗಳು, ಭಾಗವತ- ಉಪನಿಷತ್ತುಗಳು ಮನುಷ್ಯನ ನಿಯಂತ್ರಣಕ್ಕೆ ಸಿಗದ ನಮ್ಮ ಸಂಕೀರ್ಣ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾದ ಹಾಗೆ ಈ ಕೃತಿ ಸಹಕರಿಸುತ್ತದೆ ಎನ್ನು ವುದು ಅವರ ನಿಲುವು. ಅದರಲ್ಲಿ ಮಾನವಶಾಸ್ತ್ರೀಯ, ಸಮಾಜಶಾಸ್ತ್ರೀಯ, ಮನೋ ವಿಶ್ಲೇಷಣಾತ್ಮಕ, ಐತಿಹಾಸಿಕ ಹಾಗೂ ಸಾರ್ವತ್ರಿಕ ಸತ್ಯಗಳೂ ಇವೆ ಎಂದು ನಿರ್ಧರಿಸಿರುವ ಅವರು ಆ ನೆಲೆಯಲ್ಲೇ ಇದೀಗ
‘ಮನುಧರ್ಮ ಶಾಸ್ತ್ರ ಒಂದು ವಿಶಿಷ್ಟ ಕೃತಿ’ ಎಂಬ ಹೆಸರಿನಲ್ಲಿ (ಮಂಡ್ಯದ ಪ್ರಕಾಶಕರೊಬ್ಬರಿಂದ) ಅದನ್ನು ಪ್ರಕಟಿಸಲು ಮುಂದಾಗಿದ್ದಾರೆ.
ಸುಮಾರು ೩,೦೦೦ ವರ್ಷಗಳ ಹಿಂದೆ ಬರೆಯಲ್ಪಟ್ಟಿದೆ ಎನ್ನಲಾದ ಮನುಸ್ಮೃತಿಯ ೫೦ಕ್ಕೂ ಹೆಚ್ಚು ತಾಳೆಗರಿ ಪ್ರತಿಗಳು (Manusuripts) ಲಭ್ಯವಿದ್ದರೂ ಅವುಗಳಲ್ಲಿ ಕೆಲವು ಜೀರ್ಣವಾಗಿ ಹೋಗಿವೆಯಂತೆ. ಈಗ ಬಳಕೆಯಲ್ಲಿರುವ ಮನುಸ್ಮೃತಿಯು ‘ಕಲ್ಕತ್ತಾ ಮ್ಯಾನುಸ್ಕ್ರಿಪ್ಟ್’ ಎಂಬ ಹೆಸರಿನಲ್ಲಿದೆ ಎನ್ನಲಾಗಿದೆ. ಕಲ್ಲೂಕ ಭಟ್ಟನ ಭಾಷ್ಯದೊಂದಿಗಿನ ೧೩-೧೫ನೇ ಶತಮಾನದ ಪ್ರತಿ ಲಭ್ಯವಿದ್ದು, ಅದರಲ್ಲಿ ಮಹತ್ವದ ೨೦೮೫ ಶ್ಲೋಕಗಳಿವೆ ಎನ್ನಲಾಗಿದೆ. ಪ್ಯಾಟ್ರಿಕ್ ಬಿಲಿವರ್ ಅದನ್ನು Manus Code of LAW ಎಂದು ಅನುವಾದಿಸಿದ್ದಾರೆ.
ವೆಂಡಿ ಡೊನಿಗರ್ THE LAW OF MANU ಎಂದು ಅದನ್ನು ಅನುವಾದಿಸಿರುವುದು ಲಭ್ಯವಿದೆ. ಡಾ. ಜಿ.ರಾಮಕೃಷ್ಣ ಅವರು ಬರೆದ ‘ವರ್ತಮಾನ: ಚರಿತ್ರೆಯ ಬೆಳಕಿನಲ್ಲಿ ವರ್ತಮಾನದ ಹೆಜ್ಜೆಗಳು’ (ನವಕರ್ನಾಟಕ ಪ್ರಕಾಶನ) ಕೃತಿಯು ಮನುಸ್ಮೃತಿ ಯನ್ನು ಪರಿಚಯಿಸುವ ಒಂದು ಕೃತಿಯಾದರೆ, ಇನ್ನೊಂದು ನ್ಯಾಯಮೂರ್ತಿ ಡಾ. ಮ.ರಾಮಾ ಜೋಯಿಸರ ‘ಮನುಸ್ಮೃತಿ ಯಲ್ಲಿ ಶಾಶ್ವತ ಜೀವನಮೌಲ್ಯಗಳು’ ಎನ್ನುವುದಾಗಿದೆ. ಇವುಗಳ ಪೈಕಿ ಮೊದಲನೆಯದನ್ನು ನಾನು ನೋಡಿಲ್ಲ. ಎರಡನೆಯದು ನನ್ನ ಬಳಿಯಿದೆ. ಪ್ರಾಯಃ ಈ ಎರಡೂ ಕೃತಿಗಳು ಮನುಸ್ಮೃತಿಯ ‘ಸಮಗ್ರತೆ’ಯನ್ನು ತೆರೆದಿಟ್ಟಿಲ್ಲ.
ಭಾಸ್ಕರ ರಾಯರು ಈ ಎರಡರಿಂದ ಭಿನ್ನವಾಗಿ, ಸಮಗ್ರವಾಗಿ, ಯಾವುದೇ ಸಿದ್ಧಾಂತಕ್ಕೆ ಶರಣಾಗದೆ, ಮುಕ್ತಮನಸ್ಸು ಮತ್ತು ತೆರೆದಿಟ್ಟ ಚಿಂತನಾಕ್ರಮದಿಂದ ತಮ್ಮ ಕೃತಿಯನ್ನು ಹೊರತರುತ್ತಿದ್ದಾರೆ. ಮನುಸ್ಮೃತಿಯು ಅನೇಕ ವಿಷಯಗಳನ್ನು ಹೇಗೆ ಒಳ
ಗೊಂಡಿದೆ ಎಂಬುದನ್ನು ನ್ಯಾ. ರಾಮಾಜೋಯಿಸರು ಹೀಗೆ ವರ್ಗೀಕರಿಸಿದ್ದಾರೆ: ೧. ಭಾರತದ ಭೂಭಾಗದ ವಿವರಣೆ; ೨. ಇಚ್ಛೆ ಮಾನವನ ಎಲ್ಲಾ ಚಟುವಟಿಕೆಗಳಿಗೆ ಪ್ರೇರಕಶಕ್ತಿ; ೩. ಮಾನವನ ವರ್ತನೆಗಳಿಗೆ ಕಾರಣಗಳು; ೪. ತೃಪ್ತಿಯೇ ಸಂತೋಷದ ಮೂಲ; ೫. ಧರ್ಮದ ಮೂಲಭೂತ ನಿಯಮಗಳು; ೬. ತ್ರಿವರ್ಗ ಸಿದ್ಧಾಂತ; ೭. ಸೀತ್ವಕ್ಕೆ ಗೌರವ; ೮. ಪತಿ ಪತ್ನಿಯರ ದೈವೀಸಂಬಂಧ;
೯. ಸಮಾಜದಲ್ಲಿ ಗೃಹಸ್ಥಾಶ್ರಮದ ಪಾತ್ರ; ೧೦. ಧರ್ಮವನ್ನೇ ಆಚರಿಸಿ ಅಧರ್ಮವನ್ನು ತ್ಯಜಿಸಿ; ೧೧. ಮಾತಾಪಿತೃಗಳಿಗೆ ಮತ್ತು ವಿದ್ಯಾಗುರುಗಳಿಗೆ ಗೌರವ, ಅವರ ಬಗ್ಗೆ ಕರ್ತವ್ಯ; ೧೨. ವ್ಯವಹಾರ ನಿಯಮಗಳು; ೧೩. ಸಾರ್ವಜನಿಕ ಹಿತಕ್ಕಾಗಿ ಮಾಡಿದ ಮಹತ್ವದ ನಿಯಮಗಳ ಭವ್ಯದೃಶ್ಯ; ೧೪. ರಾಜಧರ್ಮ ಮತ್ತು ರಾಜ್ಯಾಡಳಿತ ನಡೆಸುವವರಿಗೆ ಆಚಾರ ಸಂಹಿತೆ; ೧೫. ಯುದ್ಧ ಸಮಯದಲ್ಲಿ ಅನುಸರಿಬೇಕಾದ ಧರ್ಮ; ೧೬. ಕೊನೆಯಲ್ಲಿ ಉಳಿಯುವುದು ಧರ್ಮವೊಂದೇ.
ಈ ರೀತಿ ನ್ಯಾ. ರಾಮಾಜೋಯಿಸರು ಇಡೀ ಮನುಸ್ಮೃತಿಯನ್ನು ಆಧುನಿಕವಾಗಿ ಹೇಗೆ ವಿಂಗಡಿಸಬಹುದು ಎಂಬುದನ್ನು ಅಚ್ಚು ಕಟ್ಟಾಗಿ ಮಾಡಿದ್ದರೂ, ಅದರಲ್ಲಿನ ವೈರುಧ್ಯದ ಅಂಶಗಳಿಗೆ ಒತ್ತೇ ಕೊಡಲಿಲ್ಲ! ಆದರೆ ಭಾಸ್ಕರ ರಾಯರು ಅದನ್ನು ತೆಗೆದು ಕೊಂಡು ಅದರಲ್ಲಿನ ವೈರುಧ್ಯಗಳು ಆಧುನಿಕ ಕಾಲದಲ್ಲೂ ಹೇಗೆ ಪ್ರಸ್ತುತ ಅನ್ನಿಸಬಹುದು ಎಂಬಂತೆ ದಾಖಲಿಸಿ, ೨೦ ಅಧ್ಯಾಯ ಗಳಲ್ಲಿ ಅವನ್ನು ಅನಾವರಣ ಮಾಡಿದ್ದಾರೆ. ಆದರೆ ಇದು ‘ವೇಗದಲ್ಲಿ’ ಓದುವ ಪಠ್ಯವಲ್ಲ, ನಿಧಾನವಾಗಿ ಓದಿ ಚಿಂತನೆ ನಡೆಸುವ ಕೃತಿ. ಅವರು ಇಡೀ ಪಠ್ಯವನ್ನು ವಿಂಗಡಿಸಿದ ರೀತಿ ಹೀಗಿದೆ: ೧. ಸಮಾಜಶಾಸ್ತ್ರೀಯ ದಾಖಲೆ; ೨. ಬೌದ್ಧಿಕ ವಿಸ್ಮಯ; ೩. ಹೆಣ್ಣಿನ ಅತ್ತ ಇತ್ತ; ೪. ನೈರ್ಮಲ್ಯದ ನಿಯಮ; ೫. ಬೇಡ ಅವಸರದ ತೀರ್ಮಾನ; ೬. ವಿವಾಹ ವ್ಯವಸ್ಥೆ; ೭. ಯಾವಾಗ ಕೂಡಿದರೆ ಯಾವ ಮಗು?; ೮. ಯಾವ ಲೈಂಗಿಕ ಅಪರಾಧಿಗಳಿಗೆ ಯಾವ ಶಿಕ್ಷೆ?; ೯. ತಾಲಿಬಾನ್ ಮಾದರಿ; ೧೦. ಪ್ರತಿಭಟನೆಗೆ ವಿಪುಲ ಅವಕಾಶ; ೧೧. ಮಹಾಪಾತಕಿಗಳು; ೧೨. ಸಸ್ಯಗಳಿಗೂ ಜೀವ ಇದೆ; ೧೩. ಸಾರ್ವಕಾಲಿಕ ಸತ್ಯಗಳ ಸುತ್ತ; ೧೪. ಸಾವು ಯಾಕೆ?; ೧೫. ಮನಸ್ಸಿನ ಮಹತ್ವ; ೧೬. ಆಹಾರ ವಿಹಾರ: ಅಸಹಾಯಕ ಸ್ಥಿತಿ; ೧೭. ಟ್ಯಾಲೆಟ್ಸ್ ಮ್ಯಾನರ‍್ಸ್; ೧೮. ಅತಿಥಿ ಸತ್ಕಾರ; ೧೯. ಅಪದ್ಧರ್ಮ; ೨೦. ಲೇಖಕರ ಕೊನೆಯ ಮಾತು.
ಇವುಗಳಲ್ಲಿ, ಇಂದಿನ ಕಾಲದಲ್ಲಿ ವೈರುಧ್ಯಗಳೆಂದು ಕಾಣಬಹುದಾದ ವಿಷಯಗಳು ಸಾಕಷ್ಟಿವೆ. ಸ್ತ್ರೀಯರ ಕುರಿತಾದ ಮಾತು ಗಳನ್ನೇ ತೆಗೆದುಕೊಳ್ಳುವುದಾದರೆ, ‘ಪ್ರಜನಾರ್ಥಂ ಮಹಾಭಾಗ ಪೂಜಾರ್ಹ ಗೃಹ ದೀಪ್ತಯಃ, ಸೀಯಃ ಶ್ರೀ ಮಶ್ಚಗೇಹೇಷು ನ ವಿಶೇಷೋ ಸ್ತಿ ಕಶ್ಚನ’ (೯-೨೬), ಅಂದರೆ ‘ಮಹಾ ಭಾಗ್ಯವಂತರಾದ ಮನೆಯ ದೀಪಗಳಾದ ಪೂಜಾರ್ಹರಾದ ಈ ಸ್ತ್ರೀಯರು ಸಂತಾನವನ್ನು ಉತ್ಪಾದಿ ಸಲಿಕ್ಕೆಂದೇ ಇರುತ್ತಾರೆ. ಮನೆಯನ್ನು ತುಂಬುವ ಐಶ್ವರ್ಯದಂತೆ ಸ್ತ್ರೀಯರೂ ಮನೆಯನ್ನು ತುಂಬು
ತ್ತಾರೆ.
ಸ್ತ್ರೀ ಹಾಗೂ ಐಶ್ವರ್ಯದಲ್ಲಿ ಭೇದವೇ ಇಲ್ಲ’ ಎಂದರ್ಥ. ಈ ನಿಲುವು ಖಂಡಿತ ಪುರುಷ-ಪ್ರಧಾನ ವ್ಯವಸ್ಥೆಯ ಪ್ರತಿಪಾದನೆ ಮತ್ತು ಸೀಯರನ್ನು ಮನೆ ಯೊಳಗೆ ಬಂದಿಸುವ ಹುನ್ನಾರ ಅಂದರೆ ಅಲ್ಲಗಳೆಯುವುದು ಕಷ್ಟ. ‘ವ್ಯಭಿಚಾರತ್ತು ಭರ್ತುಃ ಸ್ತ್ರೀಲೋಕೇ
ಪ್ರಾಪ್ನೋತಿ ನಿಂದ್ಯತಾಂ, ಶೃಗಾಲಯೋನಿಂ ಚಾಪ್ನೋತಿ ಪಾಪರೋಗೈಶ್ವ ಪೀಡತೇ’ ಅಂದರೆ, ‘ವ್ಯಭಿಚಾರ ಮಾಡುವ ಸೀ ಲೋಕದಲ್ಲಿ ತಿರಸ್ಕೃತಳಾಗುತ್ತಾಳೆ.
ಅಂಥ ಶೀಲಬಿಟ್ಟ ಜಾರೆಯು ಮುಂದೆ ನರಿಯಾಗಿ ಹುಟ್ಟುತ್ತಾಳೆ. ಕುಷ್ಟ ಇತ್ಯಾದಿ ಪಾಪರೋಗಗಳಿಂದ ಪೀಡಿತಳಾಗುತ್ತಾಳೆ’ ಎಂದರ್ಥ. ಇದು ಸೀಯರು ವ್ಯಭಿಚಾರಿಗಳಾದರೆ? ಎಂಬು ದನ್ನು ಹೇಳುತ್ತದೆಯೇ ಹೊರತು, ಪುರುಷರೂ ವ್ಯಭಿಚಾರದಲ್ಲಿ ಸ್ತ್ರೀ ಯರಷ್ಟೇ ಪಾಲುಗಾರ ರಲ್ಲವೇ? ಎನ್ನುವುದನ್ನು ಹೇಳುವುದಿಲ್ಲ. ಪುನ ರ್ಜನ್ಮವನ್ನೇ ಪ್ರಶ್ನಿಸುವ ಈ ಕಾಲದಲ್ಲಿ ವ್ಯಭಿಚಾರಿ
ಸ್ತ್ರೀಯರು ನರಿಯಾಗಿ ಹುಟ್ಟುತ್ತಾರೆ ಎಂದರೆ ನಂಬುವುದು ಹೇಗೆ? ಸ್ತ್ರೀಯನ್ನು ಪೂಜಾರ್ಹಳು ಎಂದವನೇ ಈ ಮಾತನ್ನು ಹೇಳಿದ ಅಂದರೆ ಅದು ಅಸಂಗತವೇ! ‘ಮಾತ್ರಾ ಸ್ಟಸ್ರಾ ದುಹಿತ್ರಾವ ನ ವಿವಿಕ್ತಾಸನೋ ಭವೇತ್, ಬಲವಾಗೀಂದ್ರಯ ಗ್ರಾಮೋ ವಿದ್ವಾಂ ಸನು ಪಿಕರ್ಷತಿ’ ಅಂದರೆ, ‘ತಾಯಿಯೊಡನೆ, ಸೋದರಿಯೊಡನೆ, ಮಗಳೊಡನೆ ನಿರ್ಜನ ಪ್ರದೇಶದಲ್ಲಿ ಗಂಡು ಒಂಟಿಯಾಗಿ ಇರಬಾರದು.
ಏಕೆಂದರೆ ಬಲಿಷ್ಠವಾದ ಇಂದ್ರಿಯಗಳ ಸಮೂಹವು ಎಂಥ ವಿದ್ವಾಂಸರನ್ನೂ ಆಕರ್ಷಿಸುತ್ತದೆ, ತನ್ನೆಡೆಗೆ ಸೆಳೆದುಕೊಳ್ಳುತ್ತದೆ’ ಎಂದರ್ಥ. ಇದು ಹೆಣ್ಣಿನ ಮತ್ತು ಗಂಡಿನ ‘ಶೀಲ’ವನ್ನು ಪ್ರಶ್ನಿಸುವ ವಿಚಾರದಂತೆ ಕಂಡರೂ, ಸುಧೀರ್ ಕಾಕರ್ ಎಂಬುವವರು ‘ಇದು ಭಾರತೀಯ ಸಂಸ್ಕೃತಿಯ ಅಧಿಕೃತ ದೃಷ್ಟಿಕೋನವಾಗತ್ತದೆ’ ಎಂದರೆ, ಭಾಸ್ಕರ ರಾಯರು ‘ಇದು ‘ಈಡಿಪಸ್ ಕಾಂಪ್ಲೆಕ್ಸ್’ ಅನ್ನು ಹೇಳುವ ಹಾಗಿದೆ’ ಎಂದು ಆಶ್ಚರ್ಯ ಸೂಚಿಸುತ್ತಾರೆ!
ಈ ರೀತಿ, ಒಂದೆಡೆ ಹೆಣ್ಣಿನ ಬಗ್ಗೆ ಪ್ರಶಂಸಾತ್ಮಕ ಮಾತು ಗಳು, ಮತ್ತೊಂದೆಡೆ ಅದೇ ಹೆಣ್ಣಿನ ಬಗ್ಗೆ ನಿಂದನಾತ್ಮಕ ಮಾತುಗಳೂ ಸಾಕಷ್ಟಿರುವುದರಿಂದ, ಇದು ಹೀಗೇಕೆ? ಎಂದು ಸ್ವಲ್ಪಮಟ್ಟಿಗೆ ಮನೋವಿಶ್ಲೇಷಣೆಗೂ ತೆರೆದುಕೊ ಳ್ಳಬಲ್ಲುದು ಎಂದು ಭಾಸ್ಕರ ರಾಯರು ಅಭಿಪ್ರಾಯಪಡುತ್ತಾರೆ. ದಾಂಪತ್ಯ ಜೀವನದಲ್ಲಿ ಬಹುಮುಖ್ಯವಾದ ಸಂತಾವನ್ನು ಪಡೆಯುವುದು ಹೇಗೆ? ಯಾವ ದಿನ ಸಂಭೋ ಗಿಸಿದರೆ ಮಕ್ಕಳಾಗುತ್ತವೆ? ಗಂಡು ಅಥವಾ ಹೆಣ್ಣು ಮಗು ಬಯಸುವವರಿಗೆ ಹೆಂಡತಿಯೊಡನೆ ಮೈಥುನಕ್ಕೆ ಯಾವ ದಿನ ಪ್ರಶಸ್ತ? ಇತ್ಯಾದಿ ಮಾಹಿತಿಗಳು ಇದರಲ್ಲಿದ್ದು, ಇವು ಇಂದಿನ ದಿನಗಳಲ್ಲಿ ಅವಾಸ್ತವ ಮತ್ತು ಅವೈಜ್ಞಾನಿಕವೇ ಆಗಿವೆ ಎಂದು ನನಗನ್ನಿಸುತ್ತದೆ.
ಆದರೆ ಆ ದಿನಗಳಲ್ಲಿ ಮನು ಇದನ್ನೂ ಯೋಚಿಸಿದ್ದ(?) ಎನ್ನುವುದು ಮಾತ್ರ ಕುತೂಹಲದ ಸಂಗತಿ. ಅದೇನಿದ್ದರೂ, ಮನು ಸ್ಮೃತಿಯು ಹೆಣ್ಣಿನ ಬಗ್ಗೆ ಎಷ್ಟು ಗೌರವದಿಂದ ಹೇಳುತ್ತದೋ, ಅಷ್ಟೇ ಕ್ರೂರವಾಗಿ ಅಥವಾ ನಾವಿಂದು ಕಲ್ಪಿಸಿಕೊಳ್ಳಲು ಬಾರದಂಥ ‘ತಾಲಿಬಾನ್ ಸಂಸ್ಕೃತಿ’ಯ ಶಿಕ್ಷೆಯನ್ನು ಹೆಣ್ಣಿಗೆ ವಿದಿಸುತ್ತದೆ. ‘ಸಲಿಂಗರತಿಯಲ್ಲಿ ನಿರತರಾದ ಹೆಣ್ಣಿನ ತಲೆ ಬೋಳಿಸಿ
ಬೆರಳು ಕತ್ತರಿಸಿ ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಬೇಕು’ ಎನ್ನುವ ಮನುಸ್ಮೃತಿ, ‘ತನ್ನ ತವರಿನವರು ಧನವಂತರೆಂಬ ಅಹಂಕಾರದಿಂದ ಹೆಣ್ಣು ಗಂಡನ ಮಾತು ಮೀರಿ ವ್ಯಭಿಚಾರಕ್ಕಿಳಿದರೆ, ಆ ದೇಶದ ರಾಜನು ಸಾರ್ವಜನಿಕವಾಗಿ ಅವಳನ್ನು ನಾಯಿಗಳಿಂದ ಕಚ್ಚಿಸಿ ತಿನ್ನಿಸಬೇಕು’ ಎನ್ನುತ್ತದೆ!
ಅದೇ ರೀತಿ, ‘ಆ ಹೆಣ್ಣಿನೊಂದಿಗೆ ವ್ಯಭಿಚಾರ ಮಾಡುವ ವಿಟನನ್ನು ಕಬ್ಬಿಣದ ಮಂಚದ ಮೇಲೆ ಮಲಗಿಸಿ, ಕೆಳಗೆ ಕಟ್ಟಿಗೆಯ ರಾಶಿಯನ್ನಿಟ್ಟು ಬೆಂಕಿಯಲ್ಲಿ ಸುಡಬೇಕು’ ಎಂದೂ ಹೇಳುತ್ತದೆ. ಹೀಗೆ ಮನುಸ್ಮೃತಿಯ ೮ನೇ ಅಧ್ಯಾಯದ ೩೬೭ರಿಂದ ೩೭೧ ರವರೆಗಿನ ಶ್ಲೋಕಗಳಲ್ಲೂ ಇಂಥ ಕಠಿಣ ಶಿಕ್ಷೆಗಳ ನಿರೂಪಣೆಯಿದ್ದು, ಅವು ಕ್ರೂರವೂ ಅವಾಸ್ತವವೂ ಆಗಿ ಕಾಣುತ್ತವೆ. ಕುತೂಹಲದ ಸಂಗತಿಯೆಂದರೆ ಪಶುಸಂಭೋಗವನ್ನು ವಿವರಿಸಿರುವ ಮನುಸ್ಮೃತಿಯು ಅದಕ್ಕೆ ಎಂಥ ಶಿಕ್ಷೆ ವಿಧಿಸಬೇಕು ಎಂಬುದನ್ನೂ ಹೇಳುತ್ತದೆ.
ಹೀಗೆ ಅನೇಕ ವೈರುಧ್ಯಗಳಿಂದ ಕೂಡಿರುವ ಈ ಪಠ್ಯವು ಕೆಲವೆಡೆ ವೈಜ್ಞಾನಿಕ ಚಿಂತನೆಗೆ ಹತ್ತಿರವಾಗಿ, ಇನ್ನೂ ಕೆಲವೆಡೆ ತೀರಾ ಅವೈಜ್ಞಾನಿಕವಾಗಿದ್ದು, ಸುಮಾರು ೩,೦೦೦ ವರ್ಷಗಳ ಹಿಂದಿನ ಜನಜೀವನ ಪದ್ಧತಿ, ರಾಜ್ಯಾಡಳಿತ ಮತ್ತು ಮನುಷ್ಯನ ಮನಸ್ಸನ್ನು ಹೇಗೆ ನಿಯಂತ್ರಿಸುವುದು ಎಂಬುದನ್ನು ಇಂದಿಗೂ ತೆರೆದಿಡುವುದರಿಂದ ಒಂದು ಮಿತಿಯಲ್ಲಿ ಇದು ಓದಬಹುದಾದ/
ಓದಬೇಕಾದ ಪಠ್ಯವೇ ಅನ್ನಬಹುದು. ಸುಮಾರು ೬೮೦-೭೦೦ ವಿಷಯಗಳನ್ನೊಳಗೊಂಡಿರುವ ಈ ಕೃತಿ, ಈ ನೆಲೆಯಲ್ಲೇ ವಿಶಿಷ್ಟವೆನ್ನಬಹುದಾದ ವಿಶ್ವಕೋಶ ವಾಗಿದೆ ಎನ್ನುತ್ತಾರೆ ಭಾಸ್ಕರ ರಾಯರು.
ಆಶ್ಚರ್ಯವೆಂದರೆ ಇದು ಪಾಶ್ಚಿಮಾತ್ಯರ ಹೊಗಳಿಕೆಗೂ ಪಾತ್ರವಾಗಿದೆ. ವೆಂಡಿ ಡೊನಿಗರ್ ಅವರ ಇಂಗ್ಲಿಷ್ ಅನು ವಾದದಲ್ಲಿ ಇದನ್ನು An Extraordinary Encyclopeadia Model of how life should be lived ಎಂದು ಪರಿಚಯಿಸ ಲಾಗಿದೆ. ಇದನ್ನು ಇಂಗ್ಲಿಷ್‌ಗೆ ಅನುವಾದಿಸಿದ ಜರ್ಮನ್ ತತ್ತ್ವಜ್ಞಾನಿ ಫ್ರೀಡ್ರಿಕ್ ಅವರು ಬಹಳ ಖುಷಿಯಲ್ಲಿ Close the Bible and open Manusmruthi ಎಂದು ಹೇಳಿದ ಮಾಹಿತಿಯೂ ಇದೆ.
ಇಷ್ಟೆಲ್ಲ ಹೇಳಿದ ಮೇಲೂ ಮನುಧರ್ಮದ ಬಗ್ಗೆ ನಮಗಿರಬೇಕಾದದ್ದು ಕುತೂಹಲವಷ್ಟೇ ಎಂದು ನನಗನಿಸುತ್ತದೆ. ಆದರೂ ಅದು ಧರ್ಮದ ನಿಷ್ಪತ್ತಿಯ ಕುರಿತು ಮಾಡಿದ ವ್ಯಾಖ್ಯಾನವು ಪರೋಕ್ಷವಾಗಿ ಬಹು ತೇಕ ಧರ್ಮಗಳಿಗೂ (ಜೈನ, ಬೌದ್ಧ ಇತ್ಯಾದಿ ಮತ್ತು ಕ್ರೈಸ್ತ ಹಾಗೂ ಇತರ ಮತಗಳೂ ಕೂಡಾ) ಒಪ್ಪಿತದ ಹಾಗಿದೆ. ಈ ವ್ಯಾಖ್ಯಾನವು, ‘ಧೃತಿಃ ಕ್ಷಮಾ ದಮೋ ಸ್ತೇಯಂ ಶೌಚಮಿನಿಂದ್ರಿಯ ನಿಗ್ರಹಂ, ಽವಿದ್ಯಾ ಸತ್ಯ ಮಕ್ರೋದೋ ದಶಕಂ ಧರ್ಮಲಕ್ಷಣಂ’ (ಮನುಸ್ಮೃತಿ ೬.೯.೨) ಅಂದರೆ, ‘ತೃಪ್ತಿ, ಕ್ಷಮಾಗುಣದ ಪ್ರವೃತ್ತಿ, ಸಂಯಮ, ಇನ್ನೊಬ್ಬರ ಆಸ್ತಿ-ವಸ್ತುಗಳಲ್ಲಿ ಆಸೆಯಿಲ್ಲದಿರುವುದು, ಅಂತರಂಗ-ಬಹಿರಂಗ ಶುದ್ಧಿ, ಇಂದ್ರಿಯ ನಿಗ್ರಹ, ಆತ್ಮಜ್ಞಾನ, ಸತ್ಯಸಂಧತೆ, ಕೋಪರಾಹಿತ್ಯ ಇವು ಧರ್ಮದ ಲಕ್ಷಣಗಳು’ ಎಂಬಂತಿದೆ.
ಇದನ್ನು ನಿರಾಕರಿಸಲಾಗದು. ೧೨ನೇ ಶತಮಾನದ ಮಹಾಮಾನವತಾವಾದಿ ಬಸವಣ್ಣ ಕೂಡ ಈ ವ್ಯಾಖ್ಯಾನಕ್ಕೆ ಋಣಿಯಾಗಿ
ದ್ದಾರೆ ಎಂಬಂತೆ ಈ ವಚನ ಇರುವುದು ಮಾತ್ರ ಆಶ್ಚರ್ಯ: ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡ ಬೇಡ, ತನ್ನ ಬಣ್ಣಿಸಬೇಡ ಇದಿರು ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲಸಂಗಮ ದೇವನೊಲಿಸುವ ಪರಿ’.
ಹೀಗಿದ್ದೂ, ಮನುವಿನ ಹೆಸರು ಎತ್ತಿದಾಕ್ಷಣ ಕೀಳಂದಾಜಿಸುವ ನಮ್ಮ ಬುದ್ಧಿಜೀವಿಗಳು, ರಾಜಕಾರಣಿಗಳು ಮನುಸ್ಮೃತಿಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡುವುದು ಬಿಡಿ, ಓದಿದ್ದೇ ಇರಲಾರದು ಎಂದು ನನ್ನ ಊಹೆ. ಯಾವುದೇ ಪಠ್ಯವನ್ನು ಕಾಲ ದೇಶಕ್ಕೆ ಅನುಗುಣವಾಗಿ ವಿಮರ್ಶಿಸಬೇಕೇ ಹೊರತು, ಈ ಕಾಲಕ್ಕೆ ಹೊಂದುವ ವಿಚಾರಗಳು ಅದರಲ್ಲಿರಬೇಕು ಎನ್ನುವುದು ‘ಸಮಚಿತ್ತ’ದ ಲಕ್ಷಣವಲ್ಲ. ಹಾಗೆಂದು ಇದು ‘ಅಭಿಜಾತ ಕೃತಿ’ ಖಂಡಿತ ಅಲ್ಲ. ಇದನ್ನು ಯಾವ ಕಾಲದಲ್ಲೂ ನಮ್ಮ ಸಂವಿಧಾನದ ಜತೆ ಇಟ್ಟು ವಿಮರ್ಶಿಸಲಾಗದು. ಹಾಗಾಗಿ ಮನುವಾದಿಗಳು ಈ ದೇಶದ ಚುಕ್ಕಾಣಿ ಹಿಡಿದರೆ, ಈಗಿನ ಸಂವಿಧಾನವನ್ನು ಕಿತ್ತೊಗೆದು ಮನುಸ್ಮೃತಿಯನ್ನು ಅಲ್ಲಿಟ್ಟು ಪೂಜಿಸುತ್ತಾರೆ ಎನ್ನುವುದು ಬರೇ ಬೊಗಳೆ ಮಾತಾಗುತ್ತದೆ!
ಇಂಥ ಮನುಧರ್ಮದ ಶಾಸವನ್ನು ಒಬ್ಬನೇ ಬರೆದಿದ್ದಾನೆ ಎನ್ನುವುದನ್ನು ಅನೇಕರು ಒಪ್ಪುವುದಿಲ್ಲ. ಮನ್ವಂತರಗಳು ಇರು ವಂತೆಯೇ ಮನುವಿನ ಹೆಸರಿನಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ‘ಮನುವಾದಿ’ ಗಳು ತಮ್ಮ ಇಷ್ಟದಂತೆ ತಮಗಿಷ್ಟ ವಿರುವ ವಿಚಾರಗಳನ್ನು ಇದರಲ್ಲಿ ತುರುಕಿದ್ದಾರೆ ಎಂಬ ಸಂದೇಹ ಅನೇಕರಲ್ಲಿದೆ. ಇದರಲ್ಲಿ ತಥ್ಯವೂ ಇರಬೇಕು! ಯಾಕೆಂದರೆ ರಾಮಾಯಣದಲ್ಲಿ ಉತ್ತರಕಾಂಡ ಇರುವ ಹಾಗೆ, ಮಹಾ ಭಾರತವು ಅನೇಕ ಪಠ್ಯಗಳಿಗೆ ಒಳಗಾದಂತೆ ಇದರಲ್ಲೂ ಪಠ್ಯಂತರ ಗಳು ಇರುವುದು ಸಹಜ.
ಹಾಗೆಂದು ಇದನ್ನು ಎಲ್ಲೂ ಸಮರ್ಥಿಸಲು ಸಾಧ್ಯವಿಲ್ಲ. ಆದರೆ, ಅದರಲ್ಲಿನ ಕೆಲವು ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತ ಎಂದು ಮಾತ್ರ ಒಪ್ಪಬಹುದು.