ದಾಸ್ ಕ್ಯಾಪಿಟಲ್
dascapital1205@gmail.com
ಸಂನ್ಯಾಸಿಯಾಗಿ, ಶಿಕ್ಷಣ ಚಿಂತಕರಾಗಿ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಹಭಾಗಿತ್ವದ ಎಚ್ಚರದೊಂದಿಗೆ ಆರೋಗ್ಯ,
ಲಿಂಗ ಸಮಾನತೆ, ಸೆಕ್ಯುಲರ್ ಮನೋಭಾವ, ಬೌದ್ಧಿಕ ಆಕಾಂಕ್ಷೆ ಮತ್ತು ಆರ್ಥಿಕ ಪ್ರಗತಿ, ವಿನಿಯೋಗತ್ವದ ತಾತ್ತ್ವಿಕ ಪರಿಕಲ್ಪನೆ ಮುಂತಾದ ಆಕೃತಿಗಳಿಂದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳನ್ನು ಸಂಪನ್ನಗೊಳಿಸಿದವರು ಉಡುಪಿ ಶ್ರೀ ಅದಮಾರು ಮಠದ ಶ್ರೀ ವಿಬುಧೇಶ ತೀರ್ಥ ಶ್ರೀಪಾದರು.
ನೋ ಡೌಟ್, ರಾಷ್ಟ್ರ ಎಲ್ಲಕ್ಕಿಂತಲೂ ದೊಡ್ಡದೆಂಬುದು ಅವರ ಪ್ರಖರ ಮಾತು. ತಾನು ಕಟ್ಟಿ ಬೆಳೆಸಿದ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಗಳು ರಾಷ್ಟ್ರದ ಸಂಪನ್ಮೂಲಗಳೆಂದೇ ಯಾವತ್ತೂ ಭಾವಿಸಿದ್ದ ಶ್ರೀಗಳ ಶೈಕ್ಷಣಿಕ ಪರಿಕಲ್ಪನೆಗಳು ರಾಷ್ಟ್ರೀಯತೆಯನ್ನು ಹೊರತುಪಡಿಸಿಲ್ಲ. ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಅನಿವಾರ್ಯತೆ ಮತ್ತು ಮಹತ್ವದ ಬಗ್ಗೆ ಸರಕಾರಗಳು ಇತ್ತೀಚೆಗೆ ಎಚ್ಚರ ಗೊಂಡು ಮುಂದಡಿಯಿಟ್ಟಿವೆ.
ಆದರೆ, ಸುಮಾರು ೫೦ ವರ್ಷಗಳ ಹಿಂದೆಯೇ, ‘ಇಂಗ್ಲಿಷ್ ಜ್ಞಾನವಾಹಿನಿ, ಜಗತ್ತಿನ ಜ್ಞಾನವನ್ನು ನಮ್ಮ ಮಕ್ಕಳು ಪಡೆಯಬೇಕು, ಸಮಕಾಲೀನ ಜಗತ್ತಿನೊಂದಿಗೆ ನಮ್ಮ ಮಕ್ಕಳು ಸ್ಪಽಸಬೇಕು. ಅದಕ್ಕೆ ಇಂಗ್ಲಿಷ್ ಬೇಕೇ ಬೇಕು’ ಎಂದು ಶ್ರೀಗಳು ನಂಬಿದ್ದರು. ಹಾಗೆ ನೋಡಿದರೆ ಅವರಿಗೆ ಇಂಗ್ಲಿಷಿನ ಹುಚ್ಚು ಹಿಡಿದದ್ದು ಹೀಗೆ: ವಿಬುಧೇಶ ತೀರ್ಥರ ಪೂರ್ವಾಶ್ರಮದ ಇಂಗ್ಲಿಷ್ ಟೀಚರು ರೋಕಿ ಫೆರ್ನಾಂಡಿಸ್ (ಆಸ್ಕರ್ -ರ್ನಾಂಡಿಸ್ ಅವರ ತಂದೆ). ರೋಕಿ ಅವರ ಅಚ್ಚುಮೆಚ್ಚಿನ ಶಿಷ್ಯರು ವಿಬುಧೇಶ ತೀರ್ಥರು. ಗುರುಗಳ ಬಗ್ಗೆ ಶ್ರೀಗಳು ಆಡಿದ ಮಾತು: His English was
superb. The entire Oxford Dictionary was on the tip of his tongue. ರೋಕಿ ಅವರ ಇಂಗ್ಲಿಷ್ ಪ್ರಭಾವ ಶ್ರೀಗಳ ಮೇಲೆ ತುಂಬಾನೇ ಆಗಿರುವುದು ನಾಲ್ಕಾರು ಸಲ ನನ್ನರಿವಿಗೆ ಬಂದಿದೆ.
ಖುದ್ದು ಶ್ರೀಗಳೇ ಅವರ ಇಂಗ್ಲಿಷ್ ಬಗ್ಗೆ ಮಾತಾಡಿದ್ದರು! ಆರಂಭದಲ್ಲಿ ತಾನೂ ಬಟ್ಲರ್ ಇಂಗ್ಲಿಷನ್ನೇ ಮಾತಾಡುತ್ತಿದ್ದೆ ಅಂತ ಒಮ್ಮೆ ತಮಾಷೆಗೆ ಹೇಳಿದ್ದರು. ಹಾಗೇಕಂದರು ಅಂತ ನಾನು ಆಲೋಚಿಸಿದಾಗ ೪ ದಿನ ಬಿಟ್ಟು ಅರ್ಥವಾಗಿತ್ತು. ಯಾಕೆಂದರೆ, ಎದುರಿಗಿರುವ ಯಾವುದೇ ಶಿಕ್ಷಕರು ಇಂಗ್ಲಿಷಿನಲ್ಲಿ ಮಾತಾಡುವಾಗ ತಡವರಿಸುತ್ತಿದ್ದರೆ ಅವರಿಗೆ ಆತ್ಮವಿಶ್ವಾಸ, ಧೈರ್ಯ ತುಂಬು ವುದಕ್ಕಾಗಿ! ಅವರ ಪ್ರಕಾರ, ಯಾವುದೇ ಶಿಕ್ಷಣದ ಉದ್ದೇಶ ಮತ್ತು ಗುರಿ ಮಗುವಿನ ಆತ್ಮವಿಶ್ವಾಸವನ್ನು ವೃದ್ಧಿಸಿ ಅಂತರಂಗ-ಬಹಿರಂಗಗಳನ್ನು ಸಮೃದ್ಧಗೊಳಿಸುವುದು.
ಯಾವ ವಿ.ವಿ.ಯಲ್ಲೂ ಪದವಿ, ಡಾಕ್ಟರೇಟ್ ಪಡೆಯದ, ಶೈಕ್ಷಣಿಕ ಮನೋವಿಜ್ಞಾನವನ್ನು ಓದಿಲ್ಲದ, ಸ್ವಾಧ್ಯಾಯ ಮತ್ತು ಜೀವನಾನುಭವವನ್ನೇ ಪ್ರಾಯೋಗಿಕವಾಗಿ ಸಾಂದರ್ಭಿಕವಾಗಿ ಬಳಸಿಕೊಳ್ಳುತ್ತಾ ಜೀವನಿಷ್ಠಮೌಲ್ಯಗಳನ್ನಾಗಿ ತನ್ನರಿವಿನೊಳಗೆ ಉತ್ಪತ್ತಿ ಮಾಡಿಕೊಂಡ ಶ್ರೀಗಳ ಶಿಕ್ಷಣದ ಪರಿಕಲ್ಪನೆಯಿದು. ಇದರಿಂದ ಪ್ರತಿಯೊಂದು ಕ್ರಿಯೆಗೂ ತಕ್ಷಣಕ್ಕೆ ಪ್ರತಿಕ್ರಿಯಿಸಲು ಅವರಿಗೆ ಸಾಧ್ಯವಾಗಿತ್ತು.
ಇಂಗ್ಲಿಷ್ ಶಿಕ್ಷಣವು ಭವಿಷ್ಯದ ಭಾರತವನ್ನು ಗಟ್ಟಿಯಾಗಿ ಕಟ್ಟಿಕೊಡಬಲ್ಲದೆಂದು ಶ್ರೀಗಳು ನಂಬಿದ್ದರೂ ಕೇವಲ ಸಾಕ್ಷರತೆಯನ್ನು ಹೆಚ್ಚಿಸುವ ಉದ್ದೇಶ ಮತ್ತು ಗುರಿ ಅವರ ದಲ್ಲ. ಕೇವಲ ಸಾಕ್ಷರತೆಯ ಕ್ರಮದಲ್ಲಿ ಅವರು ಶೈಕ್ಷಣಿಕ ಪ್ರಗತಿಯನ್ನು ನಿರ್ಧರಿಸು ತ್ತಿರಲಿಲ್ಲ. ವಿದ್ಯಾರ್ಥಿಗಳ ಜ್ಞಾನದ ಸಮಗ್ರತೆ-ಸಮೃದ್ಧತೆಯನ್ನು ನಿರೀಕ್ಷಿಸುತ್ತಿದ್ದರು. ಪಠ್ಯಕ್ಕೆ ನೀಡುವ ಮಹತ್ವವನ್ನು ಕ್ರೀಡೆ, ಟೈಲರಿಂಗ್‌ನಂಥ ಪಠ್ಯೇತರ ಬಾಬತ್ತುಗಳಿಗೂ ನೀಡಿದ್ದರು. ಪಠ್ಯೇತರ ಚಟುವಟಿಕೆಗಳು ಪಠ್ಯಕ್ಕೆ ಪೂರಕವಾಗಿರಬೇಕೆಂಬ ಅವರ ಪರಿಕಲ್ಪನೆಗಳಲ್ಲಿ ಬಹುದೊಡ್ಡ ಕನಸಿತ್ತು. ಅದರಲ್ಲೂ ಇಂಗ್ಲಿಷೇ ಇತ್ತು. ಬ್ರಿಟಿಷ್ ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ಭಿನ್ನವಾದ
ಪ್ರಜಾಪ್ರಭುತ್ವ ಅದೂ ಸಂಪೂರ್ಣವಾಗಿ ಭಾರತೀಯತೆಯ ಚಿಂತನೆಯದ್ದಾಗಿರಬೇಕು ಎಂದಿದ್ದರು. ತಾಂತ್ರಿಕ, ವೃತ್ತಿಪರ
ಶಿಕ್ಷಣವನ್ನೂ ಗಂಭೀರವಾಗಿ ಆಲೋಚಿಸಿದ್ದರು. ಆದರೆ ಪ್ರಾಥಮಿಕ ಶಿಕ್ಷಣವೇ ಎಲ್ಲದಕ್ಕೂ ಮೂಲ. ಉನ್ನತ ವ್ಯಾಸಂಗಕ್ಕೆ ಬೇಕಾದ ಈ ಮೂಲಬೇರನ್ನು ಭದ್ರಗೊಳಿಸುವುದರೆಡೆಗೇ ಅವರು ಗಮನ ನೀಡಿದರು.
ವಾಸ್ತವವನ್ನು ಅರ್ಥೈಸಿಕೊಳ್ಳುವ ಅವರ ಸಾಮರ್ಥ್ಯ ಅದ್ಭುತವಾಗಿತ್ತು. ತಮ್ಮ ಮಿತಿಯನ್ನೆಂದೂ ಮೀರಲಿಲ್ಲವಾದ್ದರಿಂದ ತಾಂತ್ರಿಕ ಶಿಕ್ಷಣಕ್ಕೆ ಒಲವಿದ್ದರೂ ಅವರು ಕೈಹಾಕಲಿಲ್ಲ. ದೇಶದ ಭವಿಷ್ಯ ನಿರ್ಧರಿಸುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೇ ಒತ್ತುಕೊಟ್ಟರು. ಸ್ವಾತಂತ್ರ್ಯೋತ್ತರದ ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ಬೆಂಬಲಿಸಿದರು. ತರಗತಿಯಲ್ಲಿ ಟೇಬಲ್ ಇರಬಾರದು,
ಸಣ್ಣ ತರಗತಿಗಳಿಗೆ ಶಿಕ್ಷಕರು ಕೋಲು-ಸ್ಕೇಲು ಒಯ್ಯಬಾರದು, ಅನಿವಾರ್ಯವಿದ್ದಾಗಲೂ ಸ್ಕೇಲನ್ನು ತೋರಿಸಿ ಪಾಠ ಮಾಡಬಾರದು, ಫ್ರೀ ಇದ್ದಾಗ ಶಿಕ್ಷಕರು ಹರಟು ವಂತಿಲ್ಲ. ಮುಂದಿನ ತರಗತಿಗೆ ಪಾಠ ಸಂಬಂಧಿತ ಸಿದ್ಧತೆಗಾಗಿ ಲೈಬ್ರರಿಗೆ ಹೋಗಬೇಕು, ಹೆಚ್ಚಿನ ಜ್ಞಾನಾರ್ಜನೆಗೆ ಏನಾದರೂ ಓದುತ್ತಲೇ ಇರಬೇಕು. ಇಂಗ್ಲಿಷಲ್ಲೇ ಮಾತಾಡಬೇಕು.
ಬರಲ್ಲ ಎಂದಾಗ ಸಿಟ್ಟಾಗುತ್ತಿದ್ದರು. ಆದರೆ ಆ ಸಿಟ್ಟಿನಲ್ಲೂ ಇಂಗ್ಲಿಷನ್ನು ಕಲಿಯಲಿಯೆಂಬ ಕಾಳಜಿಯಿತ್ತು. ಮಕ್ಕಳೂ
ಇಂಗ್ಲಿಷಲ್ಲೇ ಮಾತಾಡಬೇಕು, ಆಟ-ಊಟದ ವೇಳೆಯೂ. ಇದರಿಂದ ಮಕ್ಕಳಿಗೆಲ್ಲಾ ಇರಿಸು ಮುರುಸಾಗುತ್ತಿತ್ತು. ಪರ ಮತ್ತು ಅಪರ ಎರಡೂ ವಿದ್ಯೆಗಳನ್ನು ನನಸು ಮಾಡುವ ಸಾಹಸ ಪ್ರವೃತ್ತಿ ಅವರಲ್ಲಿ ಸಂವರ್ಧನೆಯಾಗುತ್ತಲೇ ಹೋದದ್ದು ದೈವಾನುಗ್ರಹವೇ ಸರಿ! ತಮ್ಮ ವಿದ್ಯಾಸಂಸ್ಥೆಗಳಲ್ಲಿ ದುಡಿಯುವವರಲ್ಲಿ ಶ್ರೀಗಳು ಅಸೀಮ ಉತ್ಸಾಹವನ್ನು ನಿರೀಕ್ಷಿಸುತ್ತಿದ್ದರು, ಕನಸು ಕಾಣುವಲ್ಲಿ
ಮೇಲ್ಪಂಕ್ತಿಯಾದರು.
‘ಇಡಿಯ ಮಾನವ ಜನಾಂಗವನ್ನೇ ತಮ್ಮ ಪುಟ್ಟ ತೋಳುಗಳಿಂದ ತಬ್ಬಬೇಕೆಂದು ಅವರು ಕನಸು ಕಂಡವರು’ ಎಂದು ಬನ್ನಂಜೆ ಗೋವಿಂದಾಚಾರ್ಯರು ಹೇಳಿದ್ದುಂಟು. ದೊಡ್ಡ ಯತಿಗಳನ್ನು ಹತ್ತಿರದಿಂದ ನೋಡುವುದು ಕುತೂಹಲಕರವೂ ಆಸಕ್ತಿದಾಯಕವೂ ಹೌದು. ಎಷ್ಟೋ ಸ್ವಾಮೀಜಿಗಳ ಬಳಿ ಇದು ಸುಲಭವಾಗಿ ಸಾಧ್ಯವಾಗುವುದೇ ಇಲ್ಲ. ಆದರೆ ಉಡುಪಿಯ ಅಷ್ಟಮಠದ ಸ್ವಾಮೀಜಿಗಳು ಜನರಿಗೆ ಸುಲಭದಲ್ಲಿ ನೋಡುವಷ್ಟು ಹತ್ತಿರ! ಯಾವುದೇ ವೇಳೆ ಭೇಟಿಯಾಗಬಹುದು! ಉಡುಪಿಯ
ಯತಿಗಳ್ಯಾರೂ ‘ಜಗದ್ಗುರು’ ಎಂಬಂತೆ ವರ್ತಿಸಿಲ್ಲ, ಅದನ್ನು ನಾಮಧೇಯದ ಹಿಂದೆ ಸೇರಿಸಿಕೊಂಡಿಲ್ಲ.
ಶ್ರೀಗಳ ರಾಷ್ಟ್ರೀಯ ಚಿಂತನೆಯಲ್ಲಿ ಸ್ವಾರ್ಥವಿರಲಿಲ್ಲ. ಬೆಂಗಳೂರಿನ ದೊಡ್ಡಗುಬ್ಬಿಯಲ್ಲಿ ಹರಿಜನರಿಗೆ ಕಾಲನಿ ಮಾಡಿಸಿ
ಉದ್ಯೋಗ ನೀಡಿದರು. ತಮ್ಮ ಶಾಲೆಗಳಲ್ಲಿ ಓದಿಸಿದರು. ಒಮ್ಮೆ ಈ ಕೇರಿಗೆ ಹೋಗಿದ್ದಾಗ ಶಾಲೆ ತಪ್ಪಿಸಿ ಆಡುತ್ತಿದ್ದ ಹುಡುಗನನ್ನು ಕರೆದು, ‘ಯಾಕೆ ಮಗು, ಶಾಲೆಗೆ ಹೋಗಿಲ್ಲ?’ ಎಂದರು. ಹುಡುಗ, ‘ಮನೆಯಲ್ಲಿ ಸ್ವಲ್ಪ ಕೆಲ್ಸ ಇತ್ತು. ಅಪ್ಪ ಹೋಗಬೇಡಾಂದ’ ಎಂದ. ಆಗ ಶ್ರೀಗಳು, ‘ನೋಡು, ನಾಳೆ ನೀನು ದೊಡ್ಡವನಾಗಿ ನಿನಗೊಬ್ಬ ಹೆಂಡತಿ ಬರ್ತಾಳೆ. ಅವಳು ತವರಿಂದ ನಿನಗೊಮ್ಮೆ ಒಂದು ಓಲೆ ಹಾಕ್ತಾಳೆ.
ನೀನು ಶಾಲೆ ತಪ್ಪಿಸಿ ಹೀಗೆ ಓದು ಕಲಿಯದೆ ದಡ್ಡನಾಗಿರ‍್ತೀಯ, ಹೆಂಡತಿಯ ಓಲೆ ಓದಲಿಕ್ಕೆ ಬರೋಲ್ಲ! ಆಗೇನು ಮಾಡ್ತೀಯಾ? ಪಕ್ಕದ ಮನೆಗೆ ಹೋಗಿ ‘ನನ್ನ ಹೆಣ್ತಿ ಓಲೆ ಬರೆದವ್ಳೆ, ಒಸಿ ಓದಿ ಹೇಳಿ’ ಅಂತೀಯಾ? ನಾಚಿಕೆಗೇಡು ಅಲ್ವಾ? ಆದ್ದರಿಂದ ನಿನ್ನ ಹೆಣ್ತಿ ಓಲೆ ಓದಲಿಕ್ಕಾದರೂ ನೀನು ಓದು ಬರಹ ಕಲಿಯಬೇಕು, ಅಲ್ವಾ? ಅದರಿಂದ ಶಾಲೆ ತಪ್ಪಿಸಬಾರದಪ್ಪಾ, ನಾಳೆಯಿಂದ ತಪ್ಪದೆ ಹೋಗು, ಓದಿ ಜಾಣನಾಗು’ ಎಂದರು.
ದಲಿತರ ಮಕ್ಕಳ ವಿದ್ಯಾಭ್ಯಾಸದ ಬಗೆಗೆ ಶ್ರೀಗಳಲ್ಲಿದ್ದ ಅಪಾರ ಕಾಳಜಿಯಿದು. ಇನ್ನೊಂದು ಪ್ರಸಂಗ: ಕಸಿ ಮಾವಿನ ಸಸಿ ತರಿಸಿ ಆ ದಲಿತರ, ಬಡವರ ಕೇರಿಯ ಮಂದಿಗೆಲ್ಲ ಹಂಚಿ ‘ಇದನ್ನು ನಿಮ್ಮ ತೋಟದಲ್ಲಿ ನೆಟ್ಟು ನೀರೆರೆದು ಬೆಳೆಸಿ, ಈ ದೇಶದ ಶ್ರೀಮಂತರ ಮಕ್ಕಳು ತಿನ್ನುವ ಹಣ್ಣನ್ನು ನಿಮ್ಮ ಮಕ್ಕಳೂ ತಿನ್ನುವಂತಾಗಬೇಕು ಎನ್ನುವುದು ನನ್ನಾಸೆ’ ಎಂದರು.
ಶಿಕ್ಷಣದ ವಿಷಯದಲ್ಲಿ ಆಧುನಿಕ ದೃಷ್ಟಿಕೋನ ಶ್ರೀಗಳದ್ದು. ಅವರ ಕನ್ವಿಕ್ಷನ್ ಎಲ್ಲಕ್ಕಿಂತಲೂ ದೊಡ್ಡದು. ಕೆಲಸ ಮಾಡುತ್ತಲೇ ಸಂಜೆಯ ಬಿಡುವಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜನ್ನು ಆರಂಭಿಸಿದ್ದು ಬಡವರ ಓದು ಅರ್ಧಕ್ಕೇ ನಿಲ್ಲಬಾರದೆಂಬ ಉದ್ದೇಶದಿಂದ ೧೯೬೬ರಲ್ಲಿ! ಹಳ್ಳಿಯೊಂದರಲ್ಲಿ ಆರಂಭಿಸಿದ ಶಾಲೆಗೆ ಪರಿಶಿಷ್ಟ ವರ್ಗದ ಮಕ್ಕಳು ಬರಲು ಹಿಂದೇಟು ಹಾಕಿದಾಗ ಶ್ರೀಗಳು ಅವರ ಮನೆಗಳಿಗೇ ಹೋಗಿ ಮಕ್ಕಳನ್ನು ಕೈಹಿಡಿದು ಕರೆತಂದರು.
ಸುಮಾರು ೫೦ ವರ್ಷಗಳ ಹಿಂದೆಯೇ ಇಂಗ್ಲಿಷ್ ಶಿಕ್ಷಣದ ಅನಿವಾರ್ಯತೆಯನ್ನು ಮನಗಂಡು ದೇಶವ್ಯಾಪಿ ೩೪ ಪೂರ್ಣಪ್ರಜ್ಞ ವಿದ್ಯಾಲಯಗಳನ್ನು ಕಟ್ಟಿದರು. ಸರಕಾರ ಇತ್ತೀಚಿನ ವರ್ಷಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಅಗತ್ಯವನ್ನು ಮನಗಂಡು ಅಂಥ ತರಗತಿಗಳನ್ನು ಜಾರಿಗೊಳಿಸಿದೆ. ಕೆಲವೆಡೆ ಯಶಸ್ಸನ್ನೂ ಕಂಡಿದೆ. ಅನೇಕ ಸಂಘ ಸಂಸ್ಥೆಗಳು, ಚಾರಿಟಬಲ್ ಟ್ರಸ್ಟ್ ಗಳು,
ಮಠಮಾನ್ಯಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನವು ಇಂಗ್ಲಿಷ್ ಮಾಧ್ಯಮದವೇ ಆಗಿವೆಯೆಂಬುದು ಗೊತ್ತಿರುವಂಥದ್ದೇ!
‘ಕನ್ನಡ ಕನ್ನಡ’ ಅಂತ ಯಾರೆಷ್ಟೇ ಅಭಿಮಾನ ಪ್ರೀತಿ ಅಭಿವ್ಯಕ್ತಿಸಿದರೂ ತಮ್ಮ ಮಕ್ಕಳನ್ನು ಕಳಿಸುವುದು ಸರಕಾರಿ ಶಾಲೆಗಳಿ ಗಲ್ಲ, ಮೇಲೆ ಹೇಳಿದ ಶಿಕ್ಷಣ ಸಂಸ್ಥೆಗಳಿಗೇ ಎಂಬುದು ಬಹಿರಂಗ ಸತ್ಯ! ಸಂನ್ಯಾಸಿಯಾಗಿ ಬದುಕನ್ನು ಬಹುಕಾಲ ಕಳೆದರೂ ಭವಿಷ್ಯತ್ತಿನ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಇಂಗ್ಲಿಷಿನ ಅಗತ್ಯದ ಬಗ್ಗೆ ಅಂದೇ ಸ್ಪಷ್ಟ ಅರಿವನ್ನು ಶ್ರೀಗಳು ಹೊಂದಿದ್ದರು. ಇದನ್ನು ದೂರದೃಷ್ಟಿ ಎನ್ನುವುದೇ ಸೂಕ್ತ. ಯಾರಿಗೆ ಸರಿಹೊತ್ತಿನ ಬೆಳವಣಿಗೆಯಲ್ಲಿ ಇಂಥ ದೂರದೃಷ್ಟಿಯಿರುತ್ತದೋ ಅಂಥವರಿಗೆ ವರ್ಷಗಳ ಮುಂದಿನ ದಿನಗಳು ಗೋಚರಿಸುತ್ತವೆ ಎಂಬುದನ್ನು ೨೦೦೯ರಲ್ಲಿ ನಮ್ಮನ್ನಗಲಿದ ಶ್ರೀ ವಿಬುಧೇಶ ತೀರ್ಥ ಶ್ರೀಪಾದರಲ್ಲಿ ಯಥೇಚ್ಛವಾಗಿ ಕಾಣಬಹುದಿತ್ತು.
ಭೌತಿಕವಾಗಿ ಅವರಿಲ್ಲ; ಆದರೆ, ಅಧುನಿಕ ಶಿಕ್ಷಣಕ್ಕೆ ಬೇಕಾದ ಅವರ ಆಧುನಿಕ ದೃಷ್ಟಿಕೋನ ಮುಂದೆಯೂ ಮೇಲ್ಪಂಕ್ತಿಯಾಗೇ ಎಲ್ಲ ಕಾಲಕ್ಕೂ ಸಲ್ಲುತ್ತದೆ! ಒಂದು ಜೀವದ ಸ್ಮರಣೆ ಇದಕ್ಕಿಂತಲೂ ದೊಡ್ದದಾಗಿ ಕಾಡುವುದುಂಟೆ?