Thursday, 12th December 2024

ಒಂದು ದೇಶ, ಒಂದೇ ನಾಗರಿಕ ಸಂಹಿತೆ

ಡಾ.ಮಲ್ಲಿಕಾರ್ಜುನ ಗುಮ್ಮಗೋಳ

ಭಾರತದ ಪ್ರಜೆಗಳಾದ ನಾವು ಎರಡು ಕಾಯ್ದೆ ಇಟ್ಟುಕೊಂಡು ದೇಶವನ್ನು ನಡೆಸಲು ಹೇಗೆ ಸಾಧ್ಯ? ಒಂದೇ ಕುಟುಂಬದಲ್ಲಿ
ಒಬ್ಬನಿಗೆ ಒಂದು ಕಾನೂನು ಮತ್ತೊಬ್ಬನಿಗೆ ಮತ್ತೊಂದು ಕಾನೂನು ಇರುವುದು ಯಾವ ರೀತಿಯ ಸಮಾನತೆ? ಎಂದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಏಕ ರೂಪ ನಾಗರಿಕ ಸಂಹಿತೆಯ ಅಗತ್ಯತೆ ಯ ಕುರಿತು ಗಮನ ಸೆಳೆದಿದ್ದಾರೆ. ಈ ದೇಶದ ಎಲ್ಲ ಪುಜೆಗಳಿಗೆ ಸಮಾನ ಹಕ್ಕುಗಳನ್ನು ಕೊಡಮಾಡಬೇಕು.

ಎಲ್ಲ ಪುಜೆಗಳಿಗೂ ಕಾನೂನು ನಿಯಮ ಗಳು ಒಂದೇ ರೀತಿಯಾಗಿ ಅನ್ವಯಿಸಬೇಕು. ಜಾತಿ, ಮತ, ಸಂಸ್ಕೃತಿ ಆಚರಣೆ ಭಿನ್ನವಾ ಗಿರುವುದು ಈ ದೇಶದ ವೈಶಿಷ್ಟ್ಯ ಆದರೆ ಅದನ್ನೇ ಆಧಾರವಾಗಿಟ್ಟುಕೊಂಡು ವ್ಯಕ್ತಿಗಳ ನಡುವ ಅಸಮಾನತೆ ಸೃಷ್ಟಿಯಾಗ ಬಾರದು. ವಿವಾಹ ಮತ್ತು ವಿಚ್ಛೇದನ, ವಾರಸುದಾರತ್ವ ಆಸ್ತಿಯ ಹಕ್ಕು ಹಾಗೂ ಇನ್ನಿತರ ಕೆಲವು ಕಾಯ್ದೆಗಳು ಮತಧರ್ಮಗಳ ರೀತಿ ರಿವಾಜಿಗೆ ಅನುಗುಣವಾಗಿ ಬೇರೆ ಬೇರೆಯಾ ಗಿವೆ.

ಅಷ್ಟೇ ಏಕೆ ಹೆಣ್ಣು ಗಂಡು ನಡುವೆ ಹಕ್ಕುಗಳು ಅಸಮಾನವಾಗಿವೆ. ಅವು ದೇಶದ ಅಖಂಡತೆ ಮತ್ತು ಏಕತೆಗೆ ತೊಡಕಾಗಬಾರದು. ಏಕರೂಪ ನಾಗರಿಕ ಸಂಹಿತೆ ಎಂದಾ ಕ್ಷಣ ಕೇವಲ ಜಾತಿಮತಗಳ ನಾಗರಿಕರಿಗೆ ಏಕರೂಪ ಕಾನೂನು ಅಷ್ಟೇ ಅಲ್ಲ. ಎಲ್ಲ ಜಾತಿಮತಗಳ ಸ್ತ್ರೀ-ಪುರುಷರಲ್ಲಿಯೂ ಏಕರೂಪ ನಾಗರಿಕ ಹಕ್ಕುಗಳ ಕೊಡಮಾಡಲ್ಪಡಬೇಕು. ಈ ಹಿನ್ನಲೆಯಲ್ಲಿ ಸುಪ್ರೀಮ್ ಕೋರ್ಟ್ ೯/೧/೨೦೨೩ರಂದು ಮಾಡಿದ ಆದೇಶದಲ್ಲಿ, ಗುಜರಾತ ಮತ್ತು ಉತ್ತರಾಖಾಂಡ ಸರಕಾರಗಳು ಜಾರಿಗೆ ತಂದಿರುವ ಏಕರೂಪ ನಾಗರಿಕ ಸಂಹಿತೆಯನ್ನು ಎತ್ತಿ ಹಿಡಿದಿದೆ.

ಧರ್ಮ ಶಾಸ್ತ್ರಗಳು ಹೇಳುತ್ತವೆ ಎನ್ನುವ ಕಾರಣಕ್ಕೆ ಒಬ್ಬ ಗಂಡ ತನ್ನ ಹೆಂಡತಿಗೆ ತನ್ನ ಮನಸಿಗೆ ಬಂದಾಗ ವಿಚ್ಚೇದನ ಕೊಡುವುದು, ತನಗೆ ಇಷ್ಟ ಬಂದಷ್ಟು ಹೆಂಡಿರನ್ನು ಮಾಡಿಕೊಳ್ಳುವುದು, ಸ್ತ್ರೀಗೆ ಜೀವ ನಾಂಶ ಕೊಡದಿರುವುದು, ಆಸ್ತಿಯಲ್ಲಿ ವಾರಸುದಾರಿಕೆಯನ್ನು ನಿರಾಕರಿಸುವುದು, ತನಗೆ ಇಷ್ಟ ಬಂದ ವೇಷಭೂಷಣ ತೊಡುವ, ತನ್ನ ದೇಹ-ಮನಸಿನ ಮುಕ್ತಾನುಭವ ಸ್ವಾತಂತ್ರ‍್ಯ ಹೊಂದುವ, ಇಷ್ಟಬಂದ ಶಿಕ್ಷಣ ಪಡೆವ, ನೃತ್ಯ, ನಾಟಕ, ಕಲೆ, ಸಾಹಿತ್ಯ ಸಂಸ್ಕೃತಿ ಆಚರಣೆಯಲ್ಲಿ ತೊಡಗುವ ಹಕ್ಕುಗಳನ್ನು ಸ್ತ್ರೀಗೆ ನಿರ್ಬಂಧಿಸುವುದು ಸೇರಿದಂತೆ ಲಿಂಗಭೇದವನ್ನು ಪ್ರತಿಪಾದಿಸುವ ಮತೀಯ ನಿಯಮಗಳು ಮಾನವ
ಹಕ್ಕುಗಳಿಗೆ ವಿರುದ್ಧವಾದವುಗಳು. ಆದ್ದರಿಂದ ಇಂತಹ ಅತಾರ್ಕಿಕ ಆಚರಣೆಗಳನ್ನು ಪ್ರತಿಬಂಧಿಸಿ ಸಂವಿಧಾನ ಪೀಠಿಕೆ ಮತ್ತು
ಮೂಲಭೂತ ಹಕ್ಕುಗಳಲ್ಲಿ ಹೇಳಿದಂತೆ ಎಲ್ಲ ಪುಜೆಗಳಿಗೆ ಸಮಾನ ಹಕ್ಕು ಮತ್ತು ನ್ಯಾಯವನ್ನು ಕೊಡುವ ಸಮಾನ ನಾಗರಿಕ
ಸಂಹಿತೆ ಜಾರಿಗೆ ಬರಬೇಕು.

Read E-Paper click here

ಸಮಾನ ನಾಗರಿಕ ಸಂಹಿತೆ ಎಂದಾಕ್ಷಣ ಯಾವುದೇ ಒಂದು ಸಮುದಾಯದ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳ ವಿರುದ್ಧ
ವೆಂದಲ್ಲ. ಮತಧರ್ಮ ಆಚರಣೆಗಳು ಸಂವಿಧಾನ ನೀಡಿದ ಹಕ್ಕು, ಕರ್ತವ್ಯ ಮತ್ತು ನಿರ್ದೇಶನಗಳಿಗೆ ಒಳಪಟ್ಟು ಅನುಸರಿಸ ಲ್ಪಡಬೇಕು. ವೈಯಕ್ತಿಕ ಕಾನೂನು(ಶರಿಯಾ), ಹಿಂದೂ ವಿವಾಹ ಕಾಯ್ದೆ, ಮುಸ್ಲಿಂ ವಿವಾಹ ಕಾಯ್ದೆ ಮುಂತಾದವುಗಳು ಏನ ಇದ್ದರು ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನದಿಂದ ಅವು ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿರಬಾರದು ಎಂದು ಸಂವಿಧಾನ ಕಲಂ ೧೩ ಹೇಳುತ್ತದೆ. ಹಾಗೆಯೇ ಕಲಂ ೧೪ ಸಮಾನತೆಯನ್ನು ಪ್ರತಿಪಾದಿಸಿದರೆ, ಕಲಂ ೧೫ ಧರ್ಮ, ಜಾತಿ, ಜನಾಂಗ, ಲಿಂಗ,
ಜನ್ಮ ಆಧಾರದ ಮೇಲೆ ವ್ಯಕ್ತಿ ವ್ಯಕ್ತಿ ನಡುವ ತಾರತಮ್ಯ ಮಾಡಬಾರದೆಂದು ಹೇಳುತ್ತದೆ.

ಈ ಆಧಾರದ ಮೇಲೆಯೇ ದೇಶದ ಏಕತೆಯ ದೃಷ್ಟಿಯಿಂದ ಏಕ ರೂಪ ಕಾನೂನು ಇರಬೇಕು ಎಂದು ಪನ್ನಾಲಾಲ ಬನ್ನಿಲಾಲ ಪಾಟೀಲ್ ವಿರುದ್ಧ ಆಂದ್ರ ಪ್ರದೇಶ ರಾಜ್ಯ (೧೯೯೬) ಪ್ರಕರಣದಲ್ಲಿ, ಸರಳಾ ಮುದುಗಲ(೧೯೯೫), ಸಾಯಿರಾಬಾನು(೧೯೯೭) ಪ್ರಕರಣಗಳಲ್ಲೂ ಸುಪ್ರೀಂ ಕೋರ್ಟ್ ಇದೇ ರೀತಿ ಅಭಿಪ್ರಾಯ ಪಟ್ಟಿತು.

ಸಂವಿಧಾನ ಅಸ್ತಿತ್ವಕ್ಕೆ ಬಂದು ೭೦ ವರ್ಷಗಳಾದರೂ ಅದರ ಹಲವಾರು ನಿಯಮ ನಿರ್ದೇಶನಗಳನ್ನು ಇದುವರೆಗೂ ಆಚರಣೆಗೆ
ತರಲಾಗಿಲ್ಲ. ಶಾಸಕಾಂಗ ಮಾಡಲಾಗದ ಕೆಲಸ ವನ್ನು ಬಹಳಷ್ಟು ವಿಷಯಗಳಲ್ಲಿ ನ್ಯಾಯಾಂಗ ಮಾಡಿದೆ. ತ್ರಿಪಲ್ ತಲಾಖ್ ವಿಷಯವನ್ನು ಸರ್ವೋಚ್ಛ ನ್ಯಾಯಾಲಯ ರದ್ದುಪಡಿಸಿದೆ. ಶಾಭಾನು(೧೯೮೫) ಪ್ರಕರಣದಲ್ಲಿ ವಿಚ್ಚೇದಿತ ಮಹಿಳೆಗೆ ಗಂಡ ಜೀವನಾಂಶವನ್ನು ನೀಡ ಬೇಕು. ಅವಳು ಗಂಡನ ಆಸ್ತಿಯಲ್ಲಿ ಹಕ್ಕುದಾರ ಳಾಗಿzಳೆ ಎಂದು ತಿಳಿಸಿತು. ಹಿಂದೂ ಮತ್ತು ಮುಸ್ಲಿಂ ಮತಿಯರಲ್ಲಿ ಆಚರಣೆಗಳ ವ್ಯತ್ಯಾಸವಿದೆ.

ಸಹಜ ನ್ಯಾಯ ದೃಷ್ಟಿಯಿಂದ ಜಾತಿ, ಮತ, ಲಿಂಗ ತಾರತಮ್ಯವಿಲ್ಲದ ಎಲ್ಲ ನಾಗರಿಕರಿಗೂ ಅವರಿಗೆ ಸಮಾನವಾದ ಹಕ್ಕು
ನ್ಯಾಯ ದೊರೆಯಬೇಕು ಎಂಬುದನ್ನು ಸಂವಿಧಾನ ಕಲಂ ೪೪ ಪ್ರತಿಪಾಸುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಭೆಯಲ್ಲಿ ೯/೧೨/ ೨೦೨೨ ರಂದು ಕಿರೋಡಿಲಾಲ ಮೀನಾ ಎಂಬ ಸಂಸದರು ಖಾಸಗಿ ಮಸೂದೆ ಮಂಡಿಸಿದ್ದಾರೆ. ಈ ವಿಷಯವು ಸಮವರ್ತಿ ಪಟ್ಟಿಯಲ್ಲಿ ಬರುವುದರಿಂದ ರಾಜ್ಯಗಳೂ ಸಹ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಬಹುದಾಗಿದೆ. ಇಂತಹ ಕಾನೂನನ್ನು
ಗೋವಾ ರಾಜ್ಯದಲ್ಲಿ ಪೋರ್ತೂಗೀಸರು ೧೮೬೯ರಲ್ಲಿಯೇ ಜಾರಿಗೆ ತಂದಿದ್ದಾರೆ.

ಮುಸ್ಲಿಂ ರಾಷ್ಟ್ರಗಳಾದ ಈಜಿಪ್ಟ್, ಇಂಡೋನೇಶಿಯಾ, ಕತಾರ್, ಜೋರ್ಡಾನ್, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ತ್ರಿವಳಿ
ತಲಾಖ್ ಆಚರಣೆಯಲ್ಲಿ ಇಲ್ಲ. ಆದರೆ ಅದು ಭಾರತದಂತಹ ಉದಾರವಾಗಿ ಮುಕ್ತ ಸ್ವಾತಂತ್ರ್ಯವಿರುವ ಪ್ರಜಾ ಪ್ರಭುತ್ವದಲ್ಲಿ
ಜಾರಿಯಲ್ಲಿರುವುದು ಸಖೇದಾಶ್ಚರ್ಯದ ಸಂಗತಿ. ಅಮೇರಿಕ, ಬ್ರಿಟನ, ರಶಿಯಾ, ಚೀನಾದಂತಹ ರಾಷ್ಟ್ರಗಳಲ್ಲಿ ಇರುವ
ನಾಗರಿಕರು ತಮ್ಮ ಮತಧರ್ಮಗಳ ಕಂದಾಚಾರಗಳನ್ನು ಬಿಟ್ಟು ವಿಶ್ವಮಾನವರಾಗಿ ಬದುಕುತ್ತಿದ್ದಾರೆ. ಭಾರತದಲ್ಲಿ ಕೋಮು
ವಾದವನ್ನು ರಾಜಕೀಯ ಕಾರಣಗಳಿಗಾಗಿ ಹಾಗೂ ಓಲೈಕೆಯ ರಾಜಕಾರಣವನ್ನು ಅಧಿಕಾರಕ್ಕಾಗಿ ಮಾಡಲಾಗುತ್ತಿದೆ.

ದೇಶದ ಏಕತೆ, ಭದ್ರತೆ ಮತ್ತು ಅಖಂಡತೆಗಿಂತ ಸ್ವಾರ್ಥ ರಾಜಕಾರಣವೇ ಮುಖ್ಯವಾಗುತ್ತಿದೆ.