ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ರಾಷ್ಟ್ರಪತಿ ಝಕೀರ್ ಹುಸೇನ್ ಅಧಿಕಾರದಲ್ಲಿದ್ದಾಗಲೇ ನಿಧನರಾದ ನಂತರ, ಯಾರನ್ನು ಅವರ ಉತ್ತರಾಧಿಕಾರಿಯನ್ನಾಗಿ ಮಾಡ ಬೇಕು ಎಂಬ ಪ್ರಶ್ನೆ ಎದುರಾಯಿತು. ಕೆಲವರು ವಿ.ವಿ.ಗಿರಿ ಹೆಸರನ್ನು ಹೇಳಿದಾಗ, ಮೊದಲು ವಿರೋಧಿಸಿದವರು ಇಂದಿರಾ ಗಾಂಧಿ ಸಂಪುಟದಲ್ಲಿ ಉಪಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ.
ಅದಕ್ಕೆ ಮೊರಾರ್ಜಿ ಹೇಳಿದ್ದು, ‘ರಾಷ್ಟ್ರಪತಿಯಂಥ ಉನ್ನತ ಹುದ್ದೆಯನ್ನು ಅಲಂಕರಿಸಲು ಗಿರಿ ಯೋಗ್ಯ ಅಭ್ಯರ್ಥಿ ಅಲ್ಲ,
ಅವರು ಎಲ್ಲೆಂದರಲ್ಲಿ ಕುಟುಂಬದ ಸದಸ್ಯರನ್ನೆಲ್ಲ ಕರೆದುಕೊಂಡು ಹೋಗುತ್ತಾರೆ ಮತ್ತು ಬಾಯ್ಬಿಟ್ಟು ಉಡುಗೊರೆ ಕೊಡುವಂತೆ
ಕೇಳುತ್ತಾರೆ ಎಂಬುದು ಜನಜನಿತ. ಇಂಥ ವ್ಯಕ್ತಿ ರಾಷ್ಟ್ರಪತಿ ಭವನದಲ್ಲಿ ಕುಳಿತರೆ ಆ ಹುದ್ದೆಯ ಘನತೆಗೆ ಧಕ್ಕೆೆ ತರಬಹುದು.’
ಆದರೆ ಇಂದಿರಾ ಗಾಂಧಿ ತಮ್ಮ ಹಠ ಸಾಧಿಸಲು ತಮ್ಮ ಪಕ್ಷದ ಅಭ್ಯರ್ಥಿಯನ್ನು ಬಿಟ್ಟು, ಸ್ವತಂತ್ರ ಅಭ್ಯರ್ಥಿಯಾಗಿ ಗಿರಿಯವ ರನ್ನು ನಿಲ್ಲಿಸಿ, ಅವರಿಗೆ ಆತ್ಮಸಾಕ್ಷಿ ಮತ ನೀಡುವಂತೆ ಹೇಳಿ ಗೆಲ್ಲಿಸಿಕೊಂಡು ಬಂದಿದ್ದು ಇತಿಹಾಸ.
ಆ ಉನ್ನತ ಹುದ್ದೆಗೇರಿದ ನಂತರ ಗಿರಿಯವರು ಬದಲಾಗಲಿಲ್ಲ. ತಾವು ಯಾವುದೇ ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳುವಾಗ, ತಮ್ಮ ಶಿಷ್ಟಾಚಾರ ಅಧಿಕಾರಿಗಳ ಮೂಲಕ ಇಂಥ ಐಟಮ್ಮನ್ನೇ ಉಡುಗೊರೆಯಾಗಿ ನೀಡುವಂತೆ ತಾಕೀತು ಮಾಡುತ್ತಿದ್ದರಂತೆ. ಒಮ್ಮೆ ಅವರು ತಿರುಪತಿಗೆ ಹೋದಾಗ, ಅವರಿಗೆ ಚಿನ್ನದ ಸರ ನೀಡಲಾಯಿತು. ಪ್ರತಿ ಸಲ ಹೋದಾಗಲೂ, ಅದನ್ನೇ ಅವರು ಅಪೇಕ್ಷಿಸು ತ್ತಿದ್ದರು. ಅವರು ರಾಷ್ಟ್ರಪತಿಯಾಗಿದ್ದಾಗ, ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಕ್ಕೆ ಹೋಗಿದ್ದರು. ಅಲ್ಲಿ ಅವರಿಗೆ ನೀಡಲು ಬೆಳ್ಳಿಯ ಹರಿವಾಣದಲ್ಲಿ ಚಿನ್ನದ ಚೈನನ್ನು ತಂದಾಗ, ಅದನ್ನು ಕೊರಳಿಗೆ ಹಾಕಿಸಿಕೊಳ್ಳದೇ, ಹರಿವಾಣ ಸಮೇತ ಚೈನನ್ನು ಸ್ವೀಕರಿಸಿದ್ದರು!
ರಾಷ್ಟ್ರಪತಿಗಳನ್ನು ಕರೆಯಿಸಿದಾಗ, ಯಾರಾದರೂ ಉಡುಗೊರೆ ನೀಡಲು ಚೌಕಾಶಿ ಮಾಡುವುದಿಲ್ಲ. ಆದರೆ ಉಡುಗೊರೆ ತೆಗೆದುಕೊಳ್ಳುವ ಗಿರಿಯವರು ಮಾತ್ರ ಚೌಕಾಶಿ ಮಾಡುತ್ತಿದ್ದರು. ಗಿರಿಯವರು ಎಲ್ಲಿಗಾದರೂ ಹೋಗಿ ಬರುವಾಗ, ಮೂಟೆಗಟ್ಟಲೆ ಉಡುಗೊರೆ ಬರುತ್ತಿತ್ತು. ಅದರ ಉಸ್ತುವಾರಿಯನ್ನು ಅವರ ಪತ್ನಿಯೇ ನೋಡಿಕೊಳ್ಳುತ್ತಿದ್ದರು. ಈರುಳ್ಳಿ, ಆಲೂಗಡ್ಡೆ, ಮಾವಿನ ಕಾಯಿ, ಗೇರುಬೀಜ, ಒಣದ್ರಾಕ್ಷಿಗಳನ್ನೆಲ್ಲಾ ರಾಷ್ಟ್ರಪತಿ ಭವನಕ್ಕೆ ತರುತ್ತಿದ್ದರು. ಜೇನುತುಪ್ಪ, ಉಪ್ಪಿನಕಾಯಿಯನ್ನು ಪ್ಯಾಕ್ ಮಾಡಿಸುತ್ತಿದ್ದರು. ತಮ್ಮ ಸಹಾಯಕರ ಮೂಲಕ ಫೋನ್ ಮಾಡಿಸಿ ಈ ಎಲ್ಲಾ ಸಾಮಾನುಗಳನ್ನು ತರಿಸಿಕೊಳ್ಳಲು ರಾಷ್ಟ್ರಪತಿ ಯವರಿಗೆ ಯಾವ ಮುಲಾಜು ಅಡ್ಡ ಬರುತ್ತಿರಲಿಲ್ಲ. ಬೆಂಗಳೂರಿಗೆ ಬಂದಾಗ, ತಮ್ಮ ಕುಟುಂಬದೊಂದಿಗೆ ಸಿನಿಮಾಕ್ಕೂ ಹೋಗು ತ್ತಿದ್ದರು.
ಇಡೀ ಚಿತ್ರಮಂದಿರವನ್ನು ರಾಷ್ಟ್ರಪತಿಯವರಿಗಾಗಿ ಮೀಸಲು ಇಡಬೇಕಾಗುತ್ತಿತ್ತು. ಆದರೆ ಹಣವನ್ನು ಪಾವತಿಸುತ್ತಿರಲಿಲ್ಲ.
ರಾಷ್ಟ್ರಪತಿಯವರು ಬಂದಿದ್ದೇ ತಮ್ಮ ಭಾಗ್ಯ ಎಂದು ಥಿಯೇಟರ್ ಮಾಲೀಕರು ಸಂಭ್ರಮ ಪಡುತ್ತಿದ್ದುದು ಬೇರೆ ಮಾತು.
ದೇಶದ ಉನ್ನತ ಸ್ಥಾನದಲ್ಲಿರುವವರು, ಸಂವಿಧಾನದ ರಕ್ಷಕ ಹುದ್ದೆಯಲ್ಲಿರುವವರು ಈ ರೀತಿ ವರ್ತಿಸಿದರೆ, ಆ ದೇಶದ
ಮರ್ಯಾದೆಯೇ ಮೂರಾಬಟ್ಟೆಯಾಗುತ್ತದೆ. ದೇಶದ ರಾಷ್ಟ್ರಪತಿಯೇ ಬರಗೆಟ್ಟವರಂತೆ ವರ್ತಿಸಿದರೆ, ದೇಶದ ಜನ ತಲೆತಗ್ಗಿಸ ಬೇಕಾಗುತ್ತದೆ. ಹುಟ್ಟಾ ಹೇಗೆಯೇ ಇರಲಿ, ಉನ್ನತ ಹುದ್ದೆಯನ್ನು ಅಲಂಕರಿಸಿದಾಗ, ಅದಕ್ಕೆ ತಕ್ಕುದಾಗಿ, ಗೌರವಯುತವಾಗಿ ನಡೆದುಕೊಳ್ಳಬೇಕಾಗುತ್ತದೆ.
ಇಲ್ಲದಿದ್ದರೆ ಅಂಥವರಿಂದ ದೇಶದ ಮರ್ಯಾದೆ ಮಣ್ಣುಪಾಲಾಗುತ್ತದೆ. ಇಷ್ಟೆಲ್ಲಾ ಹೇಳಲು ಕಾರಣವಿದೆ. ಇದು ನಿಮಗೆ ತೀರಾ ಸಣ್ಣ ವಿಷಯ ಎಂದೆನಿಸಬಹುದು. ಆದರೆ ಈ ಸಣ್ಣ ವಿಷಯವೇ ಇಂದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿ ಇಸ್ರೇಲ್
ತಲೆತಗ್ಗಿಸುವಂತಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದೇ ರೀತಿ ಕ್ಷುಲ್ಲಕವಾಗಿ ನಡೆದುಕೊಂಡು ದೇಶದ ಮಾನ ಹರಾಜು ಹಾಕಿದ್ದಾರೆ. ಒಂದು ದೇಶದ ಪ್ರಧಾನಿ, ಅದರಲ್ಲೂ ಇಸ್ರೇಲಿನಂಥ ಪ್ರಭಾವಿ ರಾಷ್ಟ್ರದ ಪ್ರಧಾನಿ ಈ ರೀತಿ ನಡೆದುಕೊಳ್ಳ ಬಹುದಾ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ.
ಇನ್ನು ಯಾವುದೋ ಆಫ್ರಿಕಾದ ಬಡದೇಶದ ಪ್ರಧಾನಿ ಆ ರೀತಿ ನಡೆದುಕೊಂಡಿದ್ದರೂ ಅದನ್ನು ಸಹಿಸಿಕೊಳ್ಳುವುದು ಕಷ್ಟವೇ.
ಹೀಗಿರುವಾಗ ನೆತನ್ಯಾಹು ನಡೆ ಸಾರ್ವತ್ರಿಕ ಕಟು ಟೀಕೆಗೆ ಗುರಿಯಾಗಿದೆ. ನೆತನ್ಯಾಹು ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತಮ ಸ್ನೇಹಿತರು. ಮೊದಲಿಂದಲೂ ಅಮೆರಿಕ – ಇಸ್ರೇಲ್ ಸಂಬಂಧ ಉತ್ತಮವಾಗಿದೆ. ಹೀಗಾಗಿ ಇಸ್ರೇಲ್ ಪ್ರಧಾನಿ
ಅಮೆರಿಕಕ್ಕೆ ಭೇಟಿ ನೀಡಿದಾಗ ವಿಶೇಷ ಮರ್ಯಾದೆ. ಅದರಲ್ಲೂ ನೆತನ್ಯಾಹು ಬಂದಾಗಲೆಲ್ಲ ಅಧ್ಯಕ್ಷರ ವಿಶೇಷ ಅತಿಥಿಯಾಗಿ,
ಅವರ ಗೆಸ್‌ಟ್ ಹೌಸಿನಲ್ಲಿ ಉಳಿದುಕೊಳ್ಳುತ್ತಾರೆ. ಅಲ್ಲಿ ಉಳಿದುಕೊಂಡ ಗಣ್ಯ ವ್ಯಕ್ತಿಗಳಿಗೆ ಲಾಂಡ್ರಿ ವ್ಯವಸ್ಥೆಯಿದೆ.
ಹಾಗಂತ ಅದೇನು ಬಹಳ ದೊಡ್ಡ ಸಂಗತಿಯೇನಲ್ಲ. ಕಾರ್ಪೊರೇಟ್ ಕಂಪನಿಗಳ ಗೆಸ್‌ಟ್ ಹೌಸಿನಲ್ಲಿಯೂ ಅಂಥ ವ್ಯವಸ್ಥೆ ಯಿರುವಾಗ, ಅಮೆರಿಕ ಅಧ್ಯಕ್ಷರ ಗೆಸ್‌ಟ್ ಹೌಸಿನಲ್ಲಿ ಆ ಸೌಲಭ್ಯವಿದ್ದರೆ ಅದೇನು ದೊಡ್ಡ ವಿಷಯವಲ್ಲ. ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಅಲ್ಲಿ ಉಳಿದುಕೊಂಡಾಗಲೆಲ್ಲ ತಮ್ಮ ಬಟ್ಟೆಗಳನ್ನು ಒಗೆದು, ಇಸ್ತ್ರಿ ಮಾಡಿಸಲು ಲಾಂಡ್ರಿಗೆ ಕೊಡುತ್ತಿದ್ದರು. ಮರುದಿನ ಗೆಸ್‌ಟ್ ಹೌಸ್ ಅಧಿಕಾರಿಗಳು ಗರಿಗರಿ ಇಸ್ತ್ರಿ ಮಾಡಿ ತಂದಿಡುತ್ತಿದ್ದರು. ಅದು ನೆತನ್ಯಾಹು ದಂಪತಿಗಳಿಗೆ ಇಷ್ಟವಾಗಿರ ಬೇಕು. ಮರುದಿನ ಮತ್ತಷ್ಟು ಬಟ್ಟೆಬರೆಗಳನ್ನು ಲಾಂಡ್ರಿಗೆ ಕೊಡುತ್ತಿದ್ದರು.
ಲಾಂಡ್ರಿಯಿರುವುದೇ ಗಣ್ಯರ ಬಟ್ಟೆಗಳನ್ನು ಇಸ್ತ್ರಿ ಮಾಡಲು ತಾನೇ. ಹೀಗಾಗಿ ಎಷ್ಟೇ ಬಟ್ಟೆಗಳನ್ನು ಒಗೆದು, ಇಸ್ತ್ರಿ ಮಾಡುವುದಕ್ಕೆ ಕೊಟ್ಟರೆ, ಗೆಸ್‌ಟ್ ಹೌಸ್ ಅಧಿಕಾರಿಗಳು ಏನೂ ಅನ್ನುತ್ತಿರಲಿಲ್ಲ. ಖುಷಿಯಿಂದಲೇ ಆ ಸೇವೆಯನ್ನು ಮಾಡುತ್ತಿದ್ದರು. ಎಲ್ಲದಕ್ಕೂ ಒಂದು ಮಿತಿಯಿರುತ್ತದಲ್ಲ, ಅದು ಮೀರಿದಾಗಲೇ ಸಮಸ್ಯೆಯಾಗೋದು. ನೆತನ್ಯಾಹು ದಂಪತಿಗಳು ಬರುತ್ತಾರೆ ಅಂದ್ರೆ ಲಾಂಡ್ರಿ ವಿಭಾಗದವರು ಮುಖ ಸಿಂಡರಿಸಿಕೊಳ್ಳಲು ಆರಂಭಿಸಿದರು. ಮೂರ್ನಾಲ್ಕು ದಿನಗಳ ಕಾಲ ಉಳಿದುಕೊಂಡಾಗ, ಹತ್ತಾರು ಬಟ್ಟೆ ಗಳನ್ನು ಕೊಟ್ಟರೆ, ಯಾರೂ ಏನೂ ಅನ್ನುವುದಿಲ್ಲ. ಆದರೆ ಮೂವತ್ತು – ನಲವತ್ತು ಡ್ರೆಸ್‌ಗಳನ್ನು ಕೊಟ್ಟರೆ, ಸಹಜವಾಗಿ ಅದು ಅನಪೇಕ್ಷಿತ ಚರ್ಚೆಗೆ ಕಾರಣವಾಗುತ್ತದೆ.
ಒಮ್ಮೆ ನೆತನ್ಯಾಹು ದಂಪತಿಗಳು ಮೂರು ದಿನ ಅಲ್ಲಿ ಉಳಿದುಕೊಂಡಿದ್ದರು. ಆಗ ಎಂಬತ್ತು ಡ್ರೆಸ್‌ಗಳನ್ನು ಲಾಂಡ್ರಿಗೆ ಕೊಟ್ಟಿ ದ್ದರು. ಈ ಸುದ್ದಿ ಗೆಸ್‌ಟ್ ಹೌಸ್‌ನಿಂದ ಅಮೆರಿಕ ಅಧ್ಯಕ್ಷರ ತನಕ ತಲುಪಿತ್ತು. ಇಂಥ ವಿಷಯಗಳನ್ನು ಚರ್ಚಿಸುವುದೇ ಕ್ಷುಲ್ಲಕ ಎಂದು ಭಾವಿಸಿ, ಯಾರೂ ಹೆಚ್ಚಿನ ಮಹತ್ವ ನೀಡಿರಲಿಲ್ಲ. ತಮ್ಮ ತಮ್ಮಲ್ಲಿ ಮಾತಾಡಿ, ಗೇಲಿ ಮಾಡಿಕೊಂಡು ಸುಮ್ಮನಾಗು ತ್ತಿದ್ದರು. ಕೊನೆ ಕೊನೆಗೆ ನೆತನ್ಯಾಹು ಅಮೆರಿಕಕ್ಕೆ ಬರುವಾಗಲೆಲ್ಲ, ಅಧ್ಯಕ್ಷರ ಗೆಸ್‌ಟ್ ಹೌಸಿನಲ್ಲಿ ಲಾಂಡ್ರಿಗೆ ಕೊಡಲೆಂದೇ ಬಟ್ಟೆಗಳನ್ನು ತರಲಾರಂಭಿಸಿದರು. ಇಸ್ರೇಲ್ ಪ್ರಧಾನಿ ವಿಮಾನದಲ್ಲಿ ಇಪ್ಪತ್ತಕ್ಕೂ ಹೆಚ್ಚು ದೊಡ್ಡ ದೊಡ್ಡ ಸೂಟಕೇಸುಗಳಲ್ಲಿ ತೊಟ್ಟ ಬಟ್ಟೆಗಳು ಬರಲಾರಂಭಿಸಿದಾಗ, ಗೆಸ್‌ಟ್ ಹೌಸ್ ಅಧಿಕಾರಿಗಳ ಹುಬ್ಬೇರಿತು. ಆದರೆ ಇಲ್ಲ ಎಂದು ಹೇಳಲಾಗುವು ದಿಲ್ಲವಲ್ಲ.. ಆ ಎಲ್ಲಾ ಬಟ್ಟೆಗಳನ್ನು ತೊಳೆದು ಇಸ್ತ್ರಿ ಮಾಡಿ ಕೊಡುತ್ತಿದ್ದರು.
2016ರಲ್ಲಿ ಇಸ್ರೇಲ್ ಪ್ರಧಾನಿ ವಿಮಾನದ ಕಾರ್ಗೋದಲ್ಲಿ ಮೂವತ್ತು ಸೂಟಕೇಸುಗಳಲ್ಲಿ ಕೊಳೆಯಾದ ಬಟ್ಟೆಗಳು ಬಂದಾಗ
ಗೆಸ್‌ಟ್ ಹೌಸ್ ಅಧಿಕಾರಿಗಳು ಹೌಹಾರಿ ಹೋದರು. ಗೆಸ್‌ಟ್ ಹೌಸ್ ಅಧಿಕಾರಿಯೊಬ್ಬ ವೈಟ್ ಹೌಸ್ ಪತ್ರಕರ್ತರೊಬ್ಬರಿಗೆ ಈ ವಿಷಯ ತಿಳಿಸಿದ. ನೆತನ್ಯಾಹು ‘ಲಾಂಡ್ರಿ ಪುರಾಣ’ದ ಬಗ್ಗೆ ಆ ಪತ್ರಕರ್ತ ಮಾಹಿತಿ ಹಕ್ಕಿನ ಮೂಲಕ ಹೆಚ್ಚಿನ ವಿವರ ಕೇಳಿದಾಗ, ವಿಷಯ ಅಮೆರಿಕದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಮೂಲಕ, ನೆತನ್ಯಾಹು ಅವರನ್ನು ತಲುಪಿತು.
ಇದರಿಂದ ಕುಪಿತರಾದ ನೆತಾನ್ಯಾಹು ತಮ್ಮ ರಾಯಭಾರ ಕಚೇರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲಿಗೆ ಈ ಪ್ರಕರಣದಿಂದ ನೆತನ್ಯಾಹು ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಅವರು ಅಮೆರಿಕಕ್ಕೆ ಬಂದಾಗಲೆಲ್ಲ ಸೂಟಕೇಸುಗಳಲ್ಲಿ ಲಾಂಡ್ರಿಗೆ ಬಟ್ಟೆಗಳು ಬರುವುದು ಮಾತ್ರ ನಿಲ್ಲಲಿಲ್ಲ. ಅವರ ಪತ್ನಿ ಜತೆಯಲ್ಲಿ ಬರದಿದ್ದಾಗಲೂ, ಅವರ (ಪತ್ನಿ) ಬಟ್ಟೆಗಳು ಬರುತ್ತಿದ್ದವು. ಇದು ಗೆಸ್‌ಟ್ ಹೌಸಿನಲ್ಲಿ ಕೀಳುಮಟ್ಟದ ಚರ್ಚೆಯ ವಿಷಯವಾಯಿತು. ಈ ವಿಷಯ ಅಮೆರಿಕದಲ್ಲಿರುವ ಇಸ್ರೇಲ್ ಪತ್ರಕರ್ತರಿಗೆ ಗೊತ್ತಾದರೂ, ದೇಶದ ಪ್ರಧಾನಿಯ ಮರ್ಯಾದೆ ಮಣ್ಣುಪಾಲಾಗುವುದೆಂದು, ವರದಿ ಮಾಡಲು ಹೋಗಲಿಲ್ಲ.
ಆದರೆ ವೈಟ್ ಹೌಸಿನಲ್ಲಿ ಈ ವಿಷಯ ಅನೇಕರಿಗೆ ಗೊತ್ತಾಗಿತ್ತು. ನೆತನ್ಯಾಹು ಬರುತ್ತಾರೆಂದರೆ, ರಾಜತಾಂತ್ರಿಕರಿಗಿಂತ ಲಾಂಡ್ರಿ
ವಿಭಾಗದವರಿಗೇ ಹೆಚ್ಚು ಕೆಲಸ ಎಂದು ಮಾತಾಡಿಕೊಳ್ಳುವಂತಾಗಿತ್ತು. ಈಗಂತೂ ಈ ವಿಷಯ ಜಗಜ್ಜಾಹೀರು. ಅಮೆರಿಕದ
ಪ್ರಮುಖ ಪತ್ರಿಕೆಗಳು ಮತ್ತು ಟಿವಿ ಚಾನಲ್ಲುಗಳು ಇದನ್ನೇ ಜೋರಾಗಿ ವರದಿ ಮಾಡಿವೆ. ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆಯಂತೂ “Officials say Netanyahu brings his dirty laundry to White House – literally ಎಂಬ ಶೀರ್ಷಿಕೆಯಡಿಯಲ್ಲಿ ಸವಿವರವಾಗಿ ವರದಿ ಮಾಡಿದೆ.
ಈ ಸುದ್ದಿ ಸೋರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ಚರ್ಚೆ ಶುರುವಾದ ಬಳಿಕ, ವೈಟ್ ಹೌಸ್ ಅಧಿಕಾರಿಗಳು ತೇಪೆ ಹಚ್ಚಲು
ಆರಂಭಿಸಿದ್ದಾರೆ. ಅಸಲಿಗೆ ಯಾರು ಸೋರಿಕೆ ಮಾಡಿದ್ದರೋ ಅವರೇ ಈಗ ತೇಪೆ ಹಚ್ಚುತ್ತಿದ್ದಾರೆ. ಇಸ್ರೇಲ್ ರಾಯಭಾರ
ಕಚೇರಿಯ ಅಧಿಕಾರಿಗಳೂ ಈ ಬಗ್ಗೆೆ ಹೇಳಿಕೆ ನೀಡಿ, ಸಮಜಾಯಿಷಿ ನೀಡಿದ್ದಾರೆ. ವೈಟ್ ಹೌಸ್ ಅಧಿಕಾರಿಗಳು ಇಂಥ ಸಣ್ಣ ಸಣ್ಣ ವಿಷಯವನ್ನು ದೊಡ್ಡದು ಮಾಡಬಾರದಿತ್ತು ಎಂದು ಅಮೆರಿಕದಲ್ಲಿರುವ ಇಸ್ರೇಲ್ ರಾಜತಾಂತ್ರಿಕರು ಹೇಳಿದ್ದಾರೆ.
ಆದರೆ ಈಗಂತೂ ವಿಷಯ ಬಹಿರಂಗವಾಗಿ, ಈಗಾಗಲೇ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ನೆತನ್ಯಾಹುಗೆ ಮತ್ತಷ್ಟು ಮುಖಭಂಗವಾಗಿದೆ. ಪ್ರಧಾನಿಯಂಥ ವ್ಯಕ್ತಿ ಕ್ಷುಲ್ಲಕವಾಗಿ ವರ್ತಿಸಿದರೆ, ಹೋಗುವುದು ಅವರ ಮಾನವೊಂದೇ ಅಲ್ಲ, ಅದರಿಂದ ಇಡೀ ದೇಶದ ಜನರೆಲ್ಲ ತಲೆ ತಗ್ಗಿಸಬೇಕಾಗುತ್ತದೆ. ದೇಶದ ಪ್ರಧಾನಿಗೆ ಅದೆಲ್ಲಾ ಯಾವ ಲೆಕ್ಕ? ತಮ್ಮ ದೇಶದಲ್ಲೇ ಬಟ್ಟೆಗಳನ್ನು ಲಾಂಡ್ರಿಗೆ ಕೊಟ್ಟಿದ್ದರೆ, ಸರಕಾರೀ ಖರ್ಚಿನಲ್ಲಿಯೇ ಇಸ್ತ್ರಿ ಮಾಡಿಸಿಕೊಳ್ಳಬಹುದಿತ್ತು.
ತಮ್ಮ ಜೇಬಿನಿಂದ ಖರ್ಚು ಮಾಡಬೇಕಿರಲಿಲ್ಲ. ಅಷ್ಟಕ್ಕೂ ಪ್ರಧಾನಿ ಹುದ್ದೆಯಲ್ಲಿರುವವರಿಗೆ ಅವೆಲ್ಲಾ ಯಾವ ಲೆಕ್ಕ? ಇನ್ನು ಮುಂದೆ ನೆತನ್ಯಾಹು ಗರಿಗರಿ ಬಟ್ಟೆೆ ಧರಿಸಿ ಬಂದರೆ, ಯಾರಾದರೂ ಅವರನ್ನು ಅನುಮಾನದಿಂದ ನೋಡುವುದು ಸಹಜ. ಕನಿಷ್ಠ ಅವರ ವಿರೋಧಿಗಳಾದರೂ ಅವರ ಹಿಂದುಗಡೆಯಾದರೂ ಉಲ್ಲಟ ಮಾತನ್ನಾಡದೇ ಹೋಗುವುದಿಲ್ಲ. ಕೈಯಾರೆ ತಮ್ಮ ಮರ್ಯಾದೆ ಕೆಡಿಸಿಕೊಂಡು, ದೇಶದ ಮಾನ ಕಳೆಯುವುದೆಂದರೆ ಇದೇ. ಇವೆಲ್ಲಾ ಬೇಕಿತ್ತಾ?!
ಹೊಸ ಅಂಕಣಕಾರರ ಕುರಿತು..
ಕಿರಣ್ ಉಪಾಧ್ಯಾಯ (ಬೆಹರೇನ್‌ದಿಂದ) ಮತ್ತು ಶಿಶಿರ ಹೆಗಡೆ (ಅಮೆರಿಕದಿಂದ) ಅಂಕಣಗಳನ್ನು ಆರಂಭಿಸಿದಾಗ, ಇಷ್ಟು ಚೆಂದ ಬರೆಯಬಹುದು ಎಂದು ನಾನು ಅಂದುಕೊಂಡಿರಲಿಲ್ಲ. ಇವರಿಬ್ಬರೂ ನಮ್ಮ ಪತ್ರಿಕೆಯ ಓದುಗರು ಮೆಚ್ಚಿದ ಜನಪ್ರಿಯ ಅಂಕಣಕಾರರು. ಇಬ್ಬರಿಗೂ ತಮ್ಮ ತಮ್ಮ ವೃತ್ತಿಗಳಲ್ಲಿ ಮಾಡಲು ಕೈತುಂಬಾ ಕೆಲಸಗಳಿವೆ. ಆದರೆ ಓದಿನಲ್ಲಿರುವ ಅತೀವ ಆಸಕ್ತಿ ಇಬ್ಬರನ್ನೂ ಬರೆಯಲು ಹಚ್ಚಿದೆ.
ಅಕ್ಷರ ಓದಿ ಓದಿ ಇಬ್ಬರೂ ಈಗ ಅಕ್ಷರಗಳನ್ನು ಕೆತ್ತುವ ಕಾಯಕದಲ್ಲಿ ನಿರತರಾಗಿದ್ದಾರೆ. ಇಬ್ಬರೂ ಅತ್ಯಂತ ಶಿಸ್ತಿನಿಂದ, ಪ್ರೀತಿಯಿಂದ ಅಧ್ಯಯನದಲ್ಲಿ ನಿರತರಾಗಿ, ಸಾಕಷ್ಟು ಮಾಹಿತಿ ಕಲೆ ಹಾಕಿ, ತಮ್ಮ ತಮ್ಮ ಅನುಭವವನ್ನು ಸಮ್ಮಿಳಿತಗೊಳಿಸಿ,
ಸೊಗಸಾದ ನಿರೂಪಣೆ ಮತ್ತು ಭಾಷೆಯಲ್ಲಿ ಬರೆಯುತ್ತಿದ್ದಾರೆ. ವಾರ ವಾರ ಬರೆಯುವುದು ಸುಲಭದ ಕೆಲಸವಲ್ಲ. ಅಕ್ಷರಗಳನ್ನೇ ನೆಚ್ಚಿಕೊಂಡಿರುವ ಪತ್ರಕರ್ತರಿಗೂ ಇದು ಕಷ್ಟವೇ. ಸಂತೆಯಲ್ಲಿ ಮೂರು ಮೊಳ ನೇಯಲಾಗುವುದಿಲ್ಲ. ಹಾಗೆ ಮಾಡಿದರೆ ಓದುಗರ ಮುಂದೆ ಸಿಕ್ಕಿ ಬೀಳಬೇಕಾಗುತ್ತದೆ.
ಓದುಗರು ಅಂಥ ಅಂಕಣಕಾರರನ್ನು ನಿರ್ದಾಕ್ಷಿಣ್ಯವಾಗಿ, ಊಟದಲ್ಲಿ ಸಿಗುವ ಬೇವಿನಸೊಪ್ಪಿನಂತೆ ಪಕ್ಕಕ್ಕಿಡುತ್ತಾರೆ. ವಾರ
ವಾರವೂ ಓದುಗರನ್ನು ಓದಿಸುವುದು ಮತ್ತು ಆ ವಾರಕ್ಕಾಗಿ ಕಾತರಿಸುವಂತೆ ತುದಿಗಾಲ ಮೇಲೆ ನಿಲ್ಲಿಸುವುದು ಎಂಥ ಅಂಕಣ ಕಾರನಿಗಾದರೂ ಸವಾಲೇ ಸರಿ. ಇವರಿಬ್ಬರೂ ಇದನ್ನು ವ್ರತವನ್ನಾಗಿ ಸ್ವೀಕರಿಸಿ, ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ.
ಕರೋನಾ ವೈರಸ್ ಅಮೆರಿಕದಲ್ಲಿ ಕಾಳ್ಗಿಚ್ಚಿನಂತೆ ಹರಡಲಾರಂಭಿಸಿದಾಗ , ಶಿಶಿರ ಹೆಗಡೆ ಸುಮಾರು ಎರಡೂವರೆ ತಿಂಗಳುಗಳ ಕಾಲ, ಪ್ರತಿದಿನವೂ ಬರೆದರು.
ಅಮೆರಿಕದ ಪರಿಸ್ಥಿತಿಯನ್ನು ಕಟ್ಟಿಕೊಟ್ಟರು. ಪ್ರಾಯಶಃ ವೃತ್ತಿನಿರತ ಪತ್ರಕರ್ತರಿಗೆ ಸಹ ಒಂದೇ ವಿಷಯದ ಬಗ್ಗೆೆ ಈ ರೀತಿ ದೈನಂದಿನ ಅಂಕಣ ಬರೆಯುವುದು ಕಷ್ಟ. ಶಿಶಿರ ಹೆಗಡೆ ತಮ್ಮ ಆಫೀಸು ಕೆಲಸದ ನಡುವೆಯೇ ಇದನ್ನೂ ನಿಷ್ಠೆಯಿಂದ ಮಾಡಿದರು. ಆನಂತರ ಈಗ ವಾರದ ಅಂಕಣ ಬರೆಯುತ್ತಿದ್ದಾರೆ. ಪ್ರತಿ ವಾರದ ಅವರ ಅಂಕಣ ಓದಿದವರಿಗೆ ಅವರು ಎಷ್ಟು ಸಿದ್ಧರಾಗಿ ಅಂಕಣ ಬರೆಯುತ್ತಾರೆ ಎಂಬುದು ಗೊತ್ತಾಗುತ್ತದೆ. ಈ ಮಾತು ಕಿರಣ್ ಅವರಿಗೂ ಅನ್ವಯ. ಅವರು ಇರುವುದು ಬೆಹರೇನ್‌ನಲ್ಲಾದರೂ, ಕೆಲಸ ಮಾಡುವುದು ಸೌದಿ ಅರೇಬಿಯಾದಲ್ಲಿ. ಪ್ರತಿ ದಿನ ಆ ಎರಡು ದೇಶಗಳ ನಡುವೆ ಅವರು ಸಂಚರಿಸುತ್ತಾರೆ. ಇದರ ಮಧ್ಯೆ ಈ ಅಂಕಣವನ್ನೂ ಬರೆಯುತ್ತಾರೆ. ಇದೇ ಕಾರಣ ನೀಡಿ, ತನಗೆ ಬರೆಯಲಾಗುವುದಿಲ್ಲ ಎಂದು ಅವರು ಹೇಳಬಹುದಿತ್ತು. ಆದರೆ ಅವರು ತಮ್ಮ ಎರಡು ದಶಕಗಳ ವಿದೇಶವಾಸದ ವಿಸ್ತಾರವಾದ ಅನುಭವವನ್ನು ನಮ್ಮೆಲ್ಲರ ಜತೆ ಹಂಚಿಕೊಳ್ಳುತ್ತಿರುವುದು ಖುಷಿಯ ಸಂಗತಿ.
ಇವರಿಬ್ಬರೂ ತಮ್ಮ ಅಂಕಣಗಳ ಮೂಲಕ ತಾಯ್ನಾಡಿನ ಜತೆ, ಭಾಷೆ ಮತ್ತು ಭಾಷಿಕರ ಜತೆ ನಿತ್ಯ ಅಕ್ಷರ ಸಂವೇದಿಯಾಗಿದ್ದಾರೆ.
ಈಗ ಇವರಿಬ್ಬರನ್ನೂ ವಾರವಾರ ಎದುರು ನೋಡುವ ಓದುಗರು ಹುಟ್ಟುಕೊಂಡಿದ್ದಾರೆ. ಇವರಿಬ್ಬರಿಗೂ ಹಿರಿಯಣ್ಣನಂತಿರುವ ಶ್ರೀವತ್ಸ ಜೋಶಿಯವರಂತೂ ಓದುಗರ ಮಧ್ಯೆೆ ಬೇರು ಬಿಟ್ಟಿದ್ದಾರೆ. ವಿದೇಶಗಳಲ್ಲಿದ್ದೂ ಕನ್ನಡಿಗರನ್ನು ಪ್ರಭಾವಿಸುವ ಇವರ ಅಕ್ಷರ ಸೇವೆ ಅನನ್ಯ. ರಾಷ್ಟ್ರಪತಿ ಜತೆ ಗಂಭೀರ ಚರ್ಚೆ !
ಒಮ್ಮೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಆಗಮಿಸಿ ದ್ದರು. ಅಂದು ಅವರು ಲಿಖಿತ ಭಾಷಣವನ್ನು ಓದದೇ ಆಶುಭಾಷಣ ಮಾಡಿದರು. ಅವರ ಭಾಷಣ ಉದ್ಭೋದಕ ವಾಗಿತ್ತು ಎಂದು ಎಲ್ಲರೂ ಕೊಂಡಾಡಿದರು. ಇಂಗ್ಲೀಷಿನಲ್ಲಿ ಮಾತಾಡಿದರೆ, ಕೇಳುವುದು ಒಂದು ಅನುಪಮ ಅನುಭವ ಎಂಬು ದನ್ನು ಅವರು ಮತ್ತೊಮ್ಮೆ ನಿಜ ಮಾಡಿದ್ದರು. ಆಕ್‌ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಅವರು ಮಾಡಿದ ಭಾಷಣವನ್ನು ಕೇಳಿ ಸ್ವತಃ ಇಂಗ್ಲೀಷಿ ನವರೇ ತಲೆದೂಗಿದ್ದರು.
ಅದು ಅವರ ಪಾಂಡಿತ್ಯ. ಅಂದು ಘಟಿಕೋತ್ಸವ ಭಾಷಣ ಕೇಳಿದವರೆಲ್ಲಾ, ತಮ್ಮ ಜೀವನ ಪಾವನವಾಯಿತು ಎಂದು ಉದ್ಗರಿಸಿದ್ದರಂತೆ. ವಿಶ್ವವಿದ್ಯಾಲಯ ಉಪ ಕುಲಪತಿಗಳಾದ ಡಾ.ಡಿ.ಸಿ.ಪಾವಟೆ ಅವರಲ್ಲಿ ರಾಷ್ಟ್ರಪತಿಯವರನ್ನು ಕರೆಯಿಸಿ
ಧನ್ಯನಾದೆ ಎಂಬ ಭಾವ ತುಂಬಿತ್ತು. ಘಟಿಕೋತ್ಸವ ಕಾರ್ಯಕ್ರಮ ಮುಗಿದ ನಂತರ, ಡಾ.ರಾಧಾಕೃಷ್ಣನ್, ಡಾ.ಪಾವಟೆ ಅವರ ಜತೆ ಒಂದು ಮೂಲೆಯಲ್ಲಿ ಕೆಲ ಹೊತ್ತು ಮಾತಾಡುತ್ತಾ ಕುಳಿದ್ದರು. ಇದನ್ನು ಅಂದಿನ ರಾಜ್ಯಸಭಾ ಸದಸ್ಯರಾದ ಪಾಟೀಲ ಪುಟ್ಟಪ್ಪ ಗಮನಿಸಿದರಂತೆ. ಅಂದು ಆಗಮಿಸಿದ್ದ ಗಣ್ಯರೆಲ್ಲಾ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಕೈಕುಲುಕಲು ಉತ್ಸುಕರಾಗಿದ್ದರು. ಆದರೆ ಡಾ.ರಾಧಾಕೃಷ್ಣನ್ ಮಾತ್ರ ಉಪಕುಲಪತಿಗಳ ಜತೆ ಗಹನ ಮಾತುಕತೆಯಲ್ಲಿ ತಲ್ಲೀನರಾಗಿದ್ದರು.
ರಾಷ್ಟ್ರಪತಿಯವರನ್ನು ಬೀಳ್ಕೊೊಟ್ಟ ನಂತರ ಪಾಟೀಲ ಪುಟ್ಟಪ್ಪನವರು, ‘ಅದೇನು ರಾಷ್ಟ್ರಪತಿ ಅವರ ಜತೆಯಲ್ಲಿ ಅಂಥ
ಗಹನವಾದ ಚರ್ಚೆಯಲ್ಲಿ ತೊಡಗಿದ್ದೀರಿ?’ ಎಂದು ಡಾ.ಪಾವಟೆಯವರನ್ನು ಕೇಳಿದರಂತೆ.
ಆಗ ಡಾ.ಪಾವಟೆಯವರು ಮೆಲುದನಿಯಲ್ಲಿ, ‘ಗಹನ ವಿಚಾರ ಎಲ್ಲಿ ಬಂತು? ತಮ್ಮ ಜಾತಿಗೆ ಸೇರಿದ ಒಬ್ಬ ವ್ಯಕ್ತಿಗೆ ವಿಶ್ವವಿದ್ಯಾಲಯದಲ್ಲಿ ನೌಕರಿಗೆ ಸೇರಿಸಿಕೊಳ್ಳುವುದು ಹೇಗೆ ಎಂದು ಚರ್ಚಿಸುತ್ತಿದ್ದೆವು’ ಎಂದು ಪಾಟೀಲ ಪುಟ್ಟಪ್ಪನವರಿಗೆ
ಹೇಳಿದರಂತೆ. ನೋ ಕಾಮೆಂಟ್‌ಸ್ !