ವಿಶ್ಲೇಷಣೆ
ಜಯಶ್ರೀ ಕಾಲ್ಕುಂದ್ರಿ
ಏಕರೂಪ ನಾಗರಿಕ ಸಂಹಿತೆಯಲ್ಲಿ ಬಹುಪತ್ನಿತ್ವದ ವಿಷಯ ಮಾತ್ರವಲ್ಲದೆ, ವಿವಾಹ ವಿಚ್ಛೇದನ, ವಿಚ್ಛೇದನ ಪಡೆಯಲು ಕಾಯುವ ಅವಧಿ, ವಿವಾಹ ಯೋಗ್ಯ ವಯಸ್ಸು, ವಿವಾಹಗಳ ಕಡ್ಡಾಯ ನೋಂದಣಿ, ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ರಕ್ಷಣೆ, ದತ್ತು ಪಾಲಕತ್ವ, ಮಕ್ಕಳ ರಕ್ಷಣೆ, ಉತ್ತರಾಧಿಕಾರ ಮತ್ತು ವಾರಸುದಾರಿಕೆ, ಲಿಂಗ ಸಮಾನತೆ ಮುಂತಾದ ಅನೇಕ ಅಂಶಗಳಿವೆ.
‘ನಮ್ಮ ದೇಶದಲ್ಲಿ ಪ್ರಜಾತಂತ್ರದ ಹೆಸರಿನಲ್ಲಿ, ಅಭಿವೃದ್ಧಿಗಳಿಗೆ ಪೂರಕವಾಗಿರುವ ಯೋಜನೆಗಳು ಮತ್ತು ಯೋಚನೆಗಳನ್ನು ತಡೆಯುವುದು ಒಂಥರಾ ಫ್ಯಾಷನ್ ಆಗಿ ಬಿಟ್ಟಿದೆ. ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಜನಾಭಿಪ್ರಾಯ ಮತ್ತು ಜನಮುಖಿ
ಚಿಂತನೆ ಗಳಿಗೆ ನಾವು ಉಪಯೋಗಿಸುತ್ತಿಲ್ಲ. ರಾಷ್ಟ್ರದ ಹಿತಾಸಕ್ತಿಗಿಂತ ವೈಯಕ್ತಿಕ ಹಿತಾಸಕ್ತಿ ಮುಖ್ಯವಾಗಿಬಿಟ್ಟಿದೆ’ -ಹೀಗೊಂದು ಭಾವನೆ ಪ್ರಜ್ಞಾವಂತ ಮತದಾರರಲ್ಲಿ ಮೂಡುತ್ತಿರುವುದು ವಿಚಾರಾರ್ಹ.
ನಮ್ಮ ದೇಶದ ಆಗಸದಲ್ಲಿ ಮಳೆ ಸುರಿಸುವ ಮೋಡಗಳಿಗಿಂತ ಜಾತಿಯ ಹೆಸರಿನಲ್ಲಿ ಒಡಕು ಮೂಡಿಸುವ ಮೋಡಗಳು ಕವಿದು, ಪ್ರಗತಿಯೆಂಬ ವರ್ಷಧಾರೆಗೆ ಅಡ್ಡಿಯಾಗಿವೆ ಯೆಂಬ ಮಾತಿನಲ್ಲಿ ಹುರುಳಿಲ್ಲದಿಲ್ಲ. ಕಳೆದ ವಾರ, ವಾಹಿನಿಯೊಂದರಲ್ಲಿ ಸಮಾನ ನಾಗರಿಕ ಸಂಹಿತೆಯ ಕುರಿತು ಚರ್ಚೆಯೊಂದು ನಡೆಯುತ್ತಿತ್ತು. ಅದರಲ್ಲಿ ಪಾಲ್ಗೊಂಡಿದ್ದ ರಾಜಕೀಯ ಪಕ್ಷವೊಂದರ ವಕ್ತಾರರು, ‘ಅನ್ಯಧರ್ಮೀಯರು ನಾಲ್ಕು ಮದುವೆಯಾದರೆ ನಿಮಗೇಕೆ ಹೊಟ್ಟೆಯುರಿ? ನೀವು ಸಹ ನಾಲ್ಕು ಬಾರಿ ವಿವಾಹವಾಗಿ.
ಬೇಕಿದ್ದರೆ ನಿಮ್ಮ ಕುಟುಂಬದ ಮಹಿಳೆಯರೂ ನಾಲ್ಕು ಬಾರಿ ಮದುವೆಯಾಗಲಿ. ಇನ್ನೊಬ್ಬರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಕಸಿಯುವುದು ನಿಮಗೆ ಸೂಕ್ತವೆನಿಸದು’ ಎಂದು ಬಾಣಗಳನ್ನು ಎಸೆಯುತ್ತಿದ್ದರು. ಇಷ್ಟು ಮಾತ್ರವಲ್ಲ, ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಮಹಾರಾಜ ದಶರಥ ಹಾಗೂ ಮಹಾರಾಣಿ ದ್ರೌಪದಿಯರ ಉದಾಹರಣೆ ನೀಡಿ ತಮ್ಮ ತರ್ಕವನ್ನು ಸಮರ್ಥಿಸಿಕೊಳ್ಳು
ತ್ತಿದ್ದರು. ಸಮಾನ ನಾಗರಿಕ ಸಂಹಿತೆಯ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಕಚೇರಿಗಳಲ್ಲಿ, ಪಾರ್ಕುಗಳಲ್ಲಿ, ಮನೆ-ಮನೆಗಳಲ್ಲಿ ಈ ವಿಷಯವನ್ನು ಕುರಿತು ಚರ್ಚೆಗಳು ನಡೆದಿವೆ. ಬಹುಪತ್ನಿತ್ವ ಮತ್ತು ನಿಮಿಷಗಳಷ್ಟು ತ್ವರಿತವಾಗಿ ವಿವಾಹ ವಿಚ್ಛೇದನದ ಅಧಿಕಾರಗಳನ್ನು ಹಲವಾರು ದೇಶಗಳಲ್ಲಿ ನೀಡಲಾಗಿಲ್ಲವೆಂಬ ವಿಷಯ ಇಲ್ಲಿ ಗಮನಾರ್ಹ. ಸೌದಿ ಅರೇಬಿಯಾದಲ್ಲಿ, ಮಹಿಳೆಯರು ವಾಹನ ಚಾಲನೆ ಮಾಡುವುದಕ್ಕೆ ಹೇರಲಾಗಿದ್ದ ನಿಷೇಧವನ್ನು
ಹಿಂಪಡೆದಿರುವುದು ನಿಜಕ್ಕೂ ಒಂದು ಒಳ್ಳೆಯ ಬೆಳವಣಿಗೆ.
ಇಡೀ ವಿಶ್ವವೇ ಅಧುನಿಕತೆಯ ಮಂತ್ರವನ್ನು ಜಪಿಸುತ್ತ ಅಭಿವೃದ್ಧಿಯ ದಾರಿಯಲ್ಲಿ ಸಾಗುತ್ತಿರುವಾಗ ನಮ್ಮ ದೇಶದ ಎಲ್ಲಾ ಧರ್ಮೀಯ ಮಹಿಳೆಯರೂ ಮುಂದಡಿಯಿರಿಸಬೇಡವೇ? ಪಾಳೇಗಾರಿಕೆ ಮನೋಭಾವ ಹೊಂದಿರುವ ಪುರುಷರು ಅಭಿಪ್ರಾಯ ಪಡುವಂತೆ ಅಡುಗೆಮನೆ, ಮಕ್ಕಳ ಲಾಲನೆ-ಪಾಲನೆಗಷ್ಟೇ ಮಹಿಳೆ ಮೀಸಲೆಂಬ ಕಾಲ ಬದಲಾಗಿದೆ. ಪುರುಷರಿಗೆ ಮಾತ್ರ ಮೀಸಲಾಗಿದ್ದ ಬಾಹ್ಯಾಕಾಶ, ವಿಜ್ಞಾನ, ಗಗನಯಾನ, ಪರ್ವಾತಾರೋಹಣ ಕ್ಷೇತ್ರಗಳಲ್ಲಿ, ಬಾಕ್ಸಿಂಗ್, ಕ್ರಿಕೆಟ್ನಂಥ ಕ್ರೀಡೆಗಳಲ್ಲಿ ಮಹಿಳೆಯರು ಮಿಂಚುತ್ತಿರುವಾಗ ನಮ್ಮ ದೇಶದ ಮಹಿಳೆಯರಿಗೆ ಸಂಕೋಲೆಗಳೇಕೆ? ‘ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ’ ಎಂಬ ನಲ್ನುಡಿ ಸರ್ವವಿದಿತ.
ಕುಂಟೆಬಿಲ್ಲೆ ಆಡುವ ಪುಟ್ಟ ಬಾಲಕಿಯ ಕಲಿಕೆಯನ್ನೇ ಮೊಟಕುಗೊಳಿಸಿ, ವಿವಾಹವೆಂಬ ಸಂಕೋಲೆ ತೊಡಿಸುವುದು ಎಷ್ಟು ಸರಿ? ದೇಶದ ಎಲ್ಲಾ ಧರ್ಮೀಯರ ಆಚರಣೆ, ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡು, ನಮ್ಮ ಸಂಸ್ಕೃತಿ-ಪರಂಪರೆಗಳನ್ನು ಮುಂದಿಟ್ಟು ಕೊಂಡೇ ಬದಲಾವಣೆಯ ಹಾದಿಯಲ್ಲಿ ಮುನ್ನಡೆಯುವುದು ಆರೋಗ್ಯಕರ ಬೆಳವಣಿಗೆ ಎನಿಸದಿರಲಾರದು. ಎಲ್ಲಾ ಧರ್ಮಗಳಲ್ಲಿ ರುವ ವೈಯಕ್ತಿಕ ಕಾನೂನುಗಳೂ ಧರ್ಮಾಧಾರಿತ ಮಾತ್ರವಲ್ಲ, ಪುರುಷ-ಪ್ರಧಾನವೂ ಹೌದು ಎಂಬ ಮಾತನ್ನು ಅಲ್ಲಗಳೆಯ ಲಾಗದು.
ಪ್ರಶ್ನಿಸದಿದ್ದರೆ ಈ ತೆರನಾದ ಭೇದಭಾವ ಮುಂದುವರಿಯುವುದಿಲ್ಲವೇ? ಹಕ್ಕುಗಳನ್ನು ಧರ್ಮದಿಂದ ಬೇರ್ಪಡಿಸಿ, ಕಾನೂನಿನ ಚೌಕಟ್ಟಿಗೆ ಸೇರಿಸಲು ಸಹಜವಾಗಿ ಪಾಳೇಗಾರ ಮನಸ್ಥಿತಿ ಹೊಂದಿರುವ ಪುರುಷರ ವಿರೋಧವನ್ನು ಎದುರಿಸಬೇಕಾಗುತ್ತದೆ. ವಿಚ್ಛೇದಿತ ಮಹಿಳೆಗೆ ಆಕೆ ಮರುಮದುವೆಯಾಗುವವರೆಗೆ ಆಕೆಯ ಪತಿ ಜೀವನಾಂಶ ನೀಡಲು ಬದ್ಧನಾಗಿರಬೇಕು ಎಂದು
ಪ್ರಕರಣವೊಂದರಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡುವುದರ ಜತೆಗೆ, ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸ ಬೇಕೆಂದು ಆದೇಶಿಸಿತ್ತು.
ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರನ್ನು ನಿರ್ಲಕ್ಷ್ಯಕ್ಕೆ ಗುರಿ ಮಾಡಿ, ದೇಶ ಪ್ರಗತಿಪಥದಲ್ಲಿ ಸಾಗಲು ಸಾಧ್ಯವೇ?
ಬಹುಪತ್ನಿತ್ವ ಒಂದು ಸಾಮಾಜಿಕ ಪಿಡುಗೆನಿಸಿದೆ. ಇನ್ನೊಂದು ಧರ್ಮಕ್ಕೆ ಮತಾಂತರಗೊಂಡು, ದ್ವಿಪತ್ನಿತ್ವದ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಪುರುಷರಿದ್ದಾರೆ. ಮಹಿಳೆ ಮತ್ತು ಮಕ್ಕಳಿಗೆ ಜೀವನಾಂಶ ಕೊಡದೆ ಇನ್ನೊಂದು ಮದುವೆಯಾಗುವುದು ಎಷ್ಟು ಸೂಕ್ತ? ಕೇವಲ ಹಣಕಾಸಿನ ಭದ್ರತೆ ಮಾತ್ರವಲ್ಲ, ಸಾಮಾಜಿಕ ಭದ್ರತೆ, ಕಾನೂನಿನ ಸಮರಕ್ಕೆ ವೆಚ್ಚವಾಗುವ ಹಣ, ಮಕ್ಕಳ ಶಿಕ್ಷಣಕ್ಕಾಗಿ ಹಣ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಿರುವ ವಿಚ್ಛೇದಿತ ಹಾಗೂ ಪರಿತ್ಯಕ್ತ ಮಹಿಳೆ ಅನುಭವಿಸುವ ಯಾತನೆಗಳನ್ನು ಶಬ್ದಗಳಲ್ಲಿ ಹಿಡಿದಿಡಲಾಗದು.
ಸಾಮಾನ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಹರಣದ ಬಗ್ಗೆ ಮಾತನಾಡುವವರು ಇಲ್ಲಿ ಮೌನವಾಗಿರುವುದು
ಪ್ರಶ್ನಾರ್ಹವಲ್ಲವೇ? ಅನ್ಯಧರ್ಮೀಯ ಪುರುಷರು ಎರಡ ನೆಯ ಮದುವೆಯಾದಾಗ, ಮಹಿಳಾ ಸಂಘಟನೆಗಳು ನೊಂದ ಮಹಿಳೆಯ ಪರ ನಿಲ್ಲುವುದಿಲ್ಲ. ಅವಳ ನೆರವಿಗೆ ಮಹಿಳಾ ಸ್ವಾತಂತ್ರ್ಯದ ಬಗ್ಗೆ ಅಬ್ಬರಿಸಿ ಬೊಬ್ಬಿರಿಯುವವರೂ ಜಾಣಮೌನಕ್ಕೆ ಜಾರಿಬಿಡುತ್ತಾರೆ. ಮಹಿಳಾ ಸಂವೇದನೆಯನ್ನು ಬಿಡಿಸಿಡುವ ಪ್ರಯತ್ನದಲ್ಲಿ ಮಹಿಳೆಯೊಬ್ಬರು, ‘ನಮ್ಮ ಧರ್ಮದ ಪುರುಷರು ತುಂಬಾ ಜಾಣರು.
ಮಹಿಳೆಯರ ಬಾಯಿಯಿಂದಲೇ ಸುಲಭವಾಗಿ ಬಹುಪತ್ನಿತ್ವ, ವಿಚ್ಛೇದನ ಮತ್ತು ವಿಚ್ಛೇದಿತ ಮಹಿಳೆಗೆ ತಮಗೆ ಅನುಕೂಲ
ವಾಗುವ ರೀತಿಯಲ್ಲಿ ಜೀವನಾಂಶ ನೀಡುವುದನ್ನು ಸಮರ್ಥಿಸಿಕೊಳ್ಳುವಂತೆ ಮಾಡುತ್ತಾರೆ. ನಮ್ಮ ನಿಯಮ ಗಳಿಂದ ನಾವು ಸಂತೃಪ್ತರಾಗಿದ್ದೇವೆ ಎಂದು ನಮ್ಮ ಮಹಿಳೆ ಯರಿಂದಲೇ ಸಹಿ ಮಾಡಿಸಿದ ಪತ್ರವನ್ನು ತರುತ್ತಾರೆ’ ಎಂದು ಅಭಿಪ್ರಾಯ ಪಡುತ್ತಾರೆ. ಸಂವಿಧಾನ ನೀಡಿರುವ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಈ ವರ್ತನೆಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ, ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಆದೇಶಿಸಿದೆ. ಕೇವಲ ವಿಚ್ಛೇದನ ವಿಷಯಕ್ಕೆ ಮಾತ್ರ ಸೀಮಿತವಾಗಿದ್ದ ಈ ಪ್ರಶ್ನೆಯೊಂದಿಗೆ ಈಗ ಏಕರೂಪ ನಾಗರಿಕ ಸಂಹಿತೆಯೂ ತಳುಕು ಹಾಕಿಕೊಂಡಿರುವುದು ಗಮನಾರ್ಹ.
ಕೇಂದ್ರದ ಕಾನೂನು ಆಯೋಗವೀಗ ಬೇರೆಬೇರೆ ಧರ್ಮದ ಅನುಯಾಯಿಗಳಿಗೆ ಸೇರಿಸಿ ಸಮಸ್ತ ಭಾರತೀಯರಿಗೂ ‘ಏಕರೂಪ ನಾಗರಿಕ ಸಂಹಿತೆ’ಯನ್ನು ಜಾರಿಗೊಳಿಸುವ ಕಾನೂನು ತರಲು ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಆಯೋಗ ಸಿದ್ಧಪಡಿಸಿ ರುವ ಪ್ರಶ್ನಾವಳಿ ಎಲ್ಲಾ ಧರ್ಮದ ಅನುಯಾಯಿಗಳಿಗೂ ಹಕ್ಕು ದೊರಕಿಸಿ ಕೊಡುವುದರಲ್ಲಿ ಯಶಸ್ವಿಯಾಗಬಹುದೇ ಎಂಬುದನ್ನು ಕಾದು ನೋಡಬೇಕು. ಏಕರೂಪ ನಾಗರಿಕ ಸಂಹಿತೆಯನ್ನು ೧೯೪೭ರಲ್ಲಿಯೇ ಸಂವಿಧಾನ ರಚನಾ ಸಮಿತಿ ಯಲ್ಲಿಯೇ ಪ್ರಸ್ತಾಪಿಸಲಾಗಿದ್ದರೂ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಮತ್ತು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆಗಳ
ಕಾರಣವೊಡ್ಡಿ ಜಾರಿಗೆ ತರದಂತೆ ವಿರೋಧ ವ್ಯಕ್ತಪಡಿಸಲಾಯಿತು.
ಯಾವುದೇ ಧಾರ್ಮಿಕ ಆಚರಣೆಗಳೊಂದಿಗೆ ಸೇರಿಕೊಂಡ ಯಾವುದೇ ಜಾತ್ಯತೀತ ಚಟುವಟಿಕೆಗಳಲ್ಲಿ ಅದು ಹಸ್ತಕ್ಷೇಪ ಮಾಡುವುದಿಲ್ಲ, ಬದಲಾಗಿ ಅದಕ್ಕೆ ರಕ್ಷಣೆ ಯಿರುತ್ತದೆಂದರೂ ಚುನಾಯಿತ ಸರಕಾರಗಳು ಈ ಸಂಹಿತೆಯನ್ನು ಜಾರಿಗೊಳಿಸಲು ನಿರಾಸಕ್ತಿಯನ್ನೇ ತೋರಿದವೆನ್ನಬಹುದು. ಸಂವಿಧಾನವನ್ನು ಜಾರಿಗೊಳಿಸಿದ ನಂತರ, ಹಿಂದೂ ಕಾಯ್ದೆಗಳಲ್ಲಿ ಪ್ರಗತಿಪರ ವಿಚಾರಗಳನ್ನು ಅಳ ವಡಿಸಿಕೊಂಡು, ಬಹುಪತ್ನಿತ್ವ, ಬಾಲ್ಯವಿವಾಹಗಳನ್ನು ಶಿಕ್ಷಾರ್ಹವೆಂದು ಪರಿಗಣಿಸುವುದರೊಂದಿಗೆ, ಸ್ತ್ರೀಯರಿಗೂ ಪುರುಷರಿಗೆ ಸಮಾನವಾಗಿ ಹಕ್ಕುಗಳನ್ನು ನೀಡಲಾಯಿತು.
ಪರಸ್ಪರ ಒಪ್ಪಿಗೆಯೊಂದಿಗೆ, ಮಹಿಳೆಯೂ ವಿಚ್ಛೇದನ ಪಡೆಯುವ ಅವಕಾಶವನ್ನೂ ಹಿಂದೂ ವಿವಾಹ ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ ಕಲ್ಪಿಸಲಾಯಿತು. ಕ್ರಿಶ್ಚಿಯನ್ನರ ಕಾನೂನಿಗೂ ೨೦೦೧ರಲ್ಲಿ ಕಾನುನುಗಳಲ್ಲಿ ತಿದ್ದುಪಡಿ ಮಾಡಿ, ಸ್ತ್ರೀ ಪುರುಷರಿಬ್ಬರಿಗೂ ಸಮಾನ ಕಾರಣಗಳಿಗೆ ವಿಚ್ಛೇದನ ಪಡೆಯಲು ಅವಕಾಶ ನೀಡಲಾಯಿತು. ಗೋವಾದಲ್ಲಿ, ಎಲ್ಲಾ ಧರ್ಮಗಳಿಗೂ ಅನ್ವಯವಾಗುವ ಕೌಟುಂಬಿಕ ಕಾನೂನುಗಳು ಮಾತ್ರ ನಾಗರಿಕ ಸಂಹಿತೆಯ ರೂಪದಲ್ಲಿ ಜಾರಿಯಲ್ಲಿರುವುದು ಇಲ್ಲಿ ಉಲ್ಲೇಖನೀಯ.
ಎಲ್ಲಿಯವರೆಗೆ ಧರ್ಮಗಳು ಸ್ವಪ್ರೇರಣೆಯಿಂದ ನಾಗರಿಕ ಸಂಹಿತೆ ಜಾರಿಗೆ ಕಾರ್ಯಪ್ರವೃತ್ತರಾಗುವುದಿಲ್ಲವೋ ಅಲ್ಲಿಯವರೆಗೆ ಕ್ರಮ ಕೈಗೊಳ್ಳುವುದು ಕಷ್ಟಸಾಧ್ಯವೇ ಸರಿಯೆಂದು ಕಾನೂನು ಪಂಡಿತರು ಅಭಿಪ್ರಾಯಪಡುತ್ತಾರೆ. ಏಕರೂಪ ನಾಗರಿಕ ಸಂಹಿತೆಯಲ್ಲಿ ಬಹುಪತ್ನಿತ್ವದ ವಿಷಯ ಮಾತ್ರವಲ್ಲದೆ, ವಿವಾಹ ವಿಚ್ಛೇದನ, ವಿಚ್ಛೇದನ ಪಡೆಯಲು ಕಾಯುವ ಅವಧಿ, ವಿವಾಹ ಯೋಗ್ಯ
ವಯಸ್ಸು, ವಿವಾಹಗಳ ಕಡ್ಡಾಯ ನೋಂದಣಿ, ಅಂತ ರ್ಜಾತಿ ವಿವಾಹವಾದ ದಂಪತಿಗಳಿಗೆ ರಕ್ಷಣೆ, ಮಹಿಳೆಯರಿಗೆ ಆಸ್ತಿಯ ಮೇಲೆ ಹಕ್ಕು, ದತ್ತು ಪಾಲಕತ್ವ, ಮಕ್ಕಳ ರಕ್ಷಣೆ, ಉತ್ತರಾಧಿಕಾರ ಮತ್ತು ವಾರಸುದಾರಿಕೆ, ಲಿಂಗ ಸಮಾನತೆ ಮುಂತಾದ ಅನೇಕ ಅಂಶಗಳಿವೆ.
ವ್ಯಕ್ತಿ ಯಾವುದೇ ಧರ್ಮದ ಅನುಯಾಯಿಯಾಗಿರಲಿ, ಆತ ಭಾರತ ದೇಶದ ಪ್ರಜೆಯಾಗಿದ್ದರೆ, ಜಾತ್ಯತೀತ ಪೌರ ಕಾನೂನುಗಳ ಮೂಲಕ ನಡೆಯುವ ಆಡಳಿತಕ್ಕೆ ಬದ್ಧನಾದರೆ, ನ್ಯಾಯಾಂಗದ ಹೊರೆ ಕಡಿಮೆಯಾಗುವುದೆಂದು ಕಾನೂನು ಪಂಡಿತರು ಅಭಿಪ್ರಾಯ ಪಡುತ್ತಾರೆ. ಇಷ್ಟು ಮಾತ್ರವಲ್ಲ ಸಂವಿಧಾನದಲ್ಲಿ, ಈ ಕಾನೂನನ್ನು ಜಾರಿಗೊಳಿಸುವ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಲಾಗಿರುವುದು ಇಲ್ಲಿ ಗಮನಾರ್ಹ.
ಸಮಾನ ನಾಗರಿಕ ಸಂಹಿತೆ ಜಾರಿಯಾಗುವುದರ ಜತೆಜತೆಗೆ ಅನುಷ್ಠಾನವೂ ಸರಿಯಾದ ರೀತಿಯಲ್ಲಿ ನಡೆಯುವುದೇ ಎಂಬುದು ಇಲ್ಲಿ ವಿಚಾರಾರ್ಹ. ಎಲ್ಲಾ ವ್ಯತ್ಯಾಂಶಗಳನ್ನು ಗಮನದಲ್ಲಿರಿಸಿಕೊಂಡು, ಧರ್ಮ-ಜಾತಿಗಳನ್ನು ಪಕ್ಕಕ್ಕಿರಿಸಿ, ಎಲ್ಲರಿಗೂ ಸರಿ ಹೊಂದುವ, ಪ್ರಗತಿಪರ ವಿಚಾರಗಳನ್ನು ಹೊಂದಿರುವ, ಅಧುನಿಕ ಜಗತ್ತಿಗೆ ಸರಿಹೊಂದುವಂಥ ‘ಹೊಸ ನಾಗರಿಕ ಸಂಹಿತೆ’ ಜಾರಿಯಾಗಬೇಕೆಂಬ ಸದಾಶಯ ಭಾರತೀಯರದು.