Saturday, 23rd November 2024

ಶಾಶ್ವತ ಎನ್‌ಐಎ ಕಚೇರಿ ಸ್ಥಾಪನೆಗೆ ಶಾ ಒಪ್ಪಿಗೆ: ಸಂಸದ ತೇಜಸ್ವಿ ಸೂರ್ಯ

ನವದೆಹಲಿ: ಬೆಂಗಳೂರಿನಲ್ಲಿ ಶಾಶ್ವತ ಎನ್‌ಐಎ ಕಚೇರಿ ಸ್ಥಾಪನೆಯ ಕುರಿತಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, ಗೃಹ ಸಚಿವ ಅಮಿತ್ ಶಾ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ, ಡಿ.ಜೆ. ಹಳ್ಳಿ ಹಾಗೂ ಕೆ.ಜೆ.‌ಹಳ್ಳಿಗಳಲ್ಲಿ ಇತ್ತೀಚೆಗೆ ಗಲಭೆ ನಡದಿರುವ ಹಾಗೂ ಈ ಹಿಂದೆ ರಾಜ್ಯದಲ್ಲಿ ಅನೇಕ ಉಗ್ರ ಸಂಘಟನೆಗಳ ದಾಳಿಯ ಹಿನ್ನೆಲೆಯಲ್ಲಿ ಸೂಕ್ತ ತನಿಖೆಗಾಗಿ ಈ ಕಚೇರಿ ಆರಂಭಿಸು ವಂತೆ ಸಲ್ಲಿಸಿದ ಮನವಿಗೆ ಕೇಂದ್ರ ಸ್ಪಂದಿಸಿದೆ ಎಂದರು.

ಕಳೆದ ಕೆಲವು ವರ್ಷಗಳಿಂದ ಬೆಂಗಳೂರು ಉಗ್ರ ಚಟುವಟಿಕೆಗಳ ತಾಣವಾಗುತ್ತಿದೆ. ಎನ್​ಐಎ ಇತ್ತೀಚೆಗೆ ನಗರದಲ್ಲಿ ದಾಳಿ ನಡೆಸಿ ಹಲವರನ್ನು ಬಂಧಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಅನೇಕ ಸ್ಲೀಪರ್ ಸೆಲ್​ಗಳನ್ನು ಎನ್​ಐಎ ವಿಫಲಗೊಳಿಸಿದೆ. ಹೀಗಾಗಿ ಎನ್​ಐಎ ವಿಭಾಗೀಯ ಕಚೇರಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಬೇಕು ಎಂದು ಗೃಹ ಸಚಿವ ಅಮಿತ್ ಷಾ ಅವರನ್ನು ಆಗ್ರಹಿಸಿದ್ದೆ. ಮನವಿಯನ್ನೂ ಮಾಡಿದ್ದೆ ಎಂದು ತೇಜಸ್ವಿ ಸೂರ್ಯ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಶೀಘ್ರವೇ ಎನ್​ಐಎ ವಿಭಾಗೀಯ ಕಚೇರಿ ಬೆಂಗಳೂರಿನಲ್ಲಿ ಸ್ಥಾಪನೆ ಆಗಲಿದೆ ಎಂಬ ಭರವಸೆಯನ್ನೂ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ. ಅನೇಕ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಉಗ್ರರನ್ನು, ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಎನ್‌ಐಎ ಶಾಶ್ವತ ಕಚೇರಿಯ ಅಗತ್ಯ ಇದೆ ಎಂಬುದನ್ನು ಸಚಿವರಿಗೆ‌ ಮನವರಿಕೆ‌ ಮಾಡಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ‌ಗೋವಿಂದರಾಜ‌ ನಗರದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪಿಸುವಂತೆಯೂ ಮನವಿ‌ ಸಲ್ಲಿಸಲಾಗಿದ್ದು ಕೇಂದ್ರವು ಈಡೇರಿಸುವ ಭರವಸೆ‌ ನೀಡಿದೆ. ಯುವ‌ ಮೋರ್ಚಾ ಅಧ್ಯಕ್ಷ ಸ್ಥಾನದ ನಿರೀಕ್ಷೆ‌ ಇರಲಿಲ್ಲ. ಪ್ರಧಾನಿ ಮೋದಿ ಹಾಗೂ ಪಕ್ಷದ ‌ಅಧ್ಯಕ್ಷ‌ ಜೆ.ಪಿ. ನಡ್ಡಾ ಅವರು ಯುವಕರಿಗೆ ಸ್ಥಾನಮಾನದೊಂದಿಗೆ ಅಧಿಕಾರ‌ ನೀಡಿರುವುದು ಅಭಿನಂದನೀಯ‌ ಎಂದು ಅವರು ಹೇಳಿದರು.