ವರ್ತಮಾನ
maapala@gmail.com
ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ಗೆಲುವಿನ ನಗೆ ಬೀರಿದ್ದ ಆಡಳಿತಾರೂಢ ಕಾಂಗ್ರೆಸ್ಗೆ ಅಧಿಕಾರಿಗಳ ವರ್ಗಾವಣೆ ವಿಷಯ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರಿಯಾದ ಪೆಟ್ಟನ್ನೇ ನೀಡಿದೆ. ಪ್ರತಿಪಕ್ಷ ನಾಯಕನಿಲ್ಲದೇ ಇದ್ದರೂ ಸಂಘಟಿತ ಹೋರಾಟದ ಮೂಲಕ ಸರಕಾರ ಗೆದ್ದರೂ ನಾವು ಸೋಲಲು ತಯಾರಿಲ್ಲ ಎಂಬುದನ್ನು ತೋರಿಸಿಕೊಟ್ಟಿವೆ.
ಭರ್ಜರಿ ಬಹುಮತದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾಗುತ್ತಾ ಬಂದಿದೆ. ಕಾಂಗ್ರೆಸ್ಗೆ ಅಧಿಕಾರ ದಕ್ಕಿದ ರೀತಿ ಮತ್ತು ಪ್ರತಿಪಕ್ಷಗಳು ಸೋತ ಪರಿಯನ್ನು ಗಮನಿಸಿದರೆ ಮತ್ತು ನೂತನ ಸರಕಾರ ತನ್ನ ಕೆಲಸ ಆರಂಭಿಸಿದ ವೇಗವನ್ನು ಗಮನಿಸಿದಾಗ ಇನ್ನಿದನ್ನು ನಿಯಂತ್ರಿಸುವುದು ಕಷ್ಟ ಎನ್ನುವ ಪರಿಸ್ಥಿತಿ ಕಾಣಿಸುತ್ತಿತ್ತು. ಕಾಂಗ್ರಸ್ ಚುನಾವಣೆ ವೇಳೆ ಘೋಷಿಸಿದ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಘೋಷಿಸುವ ಮೂಲಕ ನುಡಿದಂತೆ ನಡೆದುಕೊಂಡಿ ದ್ದೇವೆ ಎಂಬುದನ್ನು ಸಾಬೀತುಪಡಿಸಿತ್ತು. ಸೀಮಿತ ಆರ್ಥಿಕ ಪರಿಸ್ಥಿತಿಯ ಮಧ್ಯೆಯೂ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಾಣಿಕೆ ಮಾಡುವ ಭರವಸೆಯೊಂದಿಗೆ ಅವುಗಳನ್ನು ಜಾರಿಗೊಳಿಸಿತ್ತು.
ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸಾರಿಗೆ ಸಂಸ್ಥೆ ಸಾಮಾನ್ಯ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯದ ಶಕ್ತಿ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ಮೂಲಕ ಮಹಿಳೆಯರ ಮನಗೆಲ್ಲುವಲ್ಲಿ ಯಶಸ್ವಿ ಯಾಯಿತು. ಇದರಿಂದ ಕೆಲವೊಂದು ಸಮಸ್ಯೆಗಳು ಎದುರಾದವಾದರೂ ಅದನ್ನು ಕೂಡ ಬಗೆಹರಿಸ ಲಾಯಿತು. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಸಿಗಲಿಲ್ಲ ಎಂಬ ಕಾರಣಕ್ಕೆ ಕೇಂದ್ರದ ವಿರುದ್ಧ ಆರೋಪ ಮಾಡಿತಾದರೂ ಅದರಲ್ಲೇ ಕಾಲ ತಳ್ಳದೆ ಅಕ್ಕಿ ಬದಲು ಫಲಾನುಭವಿ ಗಳಿಗೆ ಅಕ್ಕಿಯ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸುವ ಮೂಲಕ ತಕ್ಕಮಟ್ಟಿಗೆ ಜನರ ಬೆಂಬಲ ಗಳಿಸಿತು.
ಗರಿಷ್ಠ ೨೦೦ ಯೂನಿಟ್ವರೆಗೆ ಉಚಿತ ವಿದ್ಯುತ್ ಕಲ್ಪಿಸುವ ಗೃಹಜ್ಯೋತಿ ಯೋಜನೆ ವಿಚಾರದಲ್ಲೂ ಹೆಚ್ಚು ಸಮಸ್ಯೆ ಯಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇನ್ನೆರಡು ಗಾರಂಟಿಗಳು ಜಾರಿಯಾಗಬೇಕಾಗಿದೆಯಾದರೂ ಈಗಾಗಲೇ ಮೂರು ಯೋಜನೆಗಳು ಜಾರಿಯಾಗಿರುವುದರಿಂದ ಜನರೂ ಸರಕಾರವನ್ನು ನಂಬಿ ಕುಳಿತುಕೊಳ್ಳುವಂತಾಯಿತು. ಗ್ಯಾರಂಟಿ ಯೋಜನೆಗಳಿಗೆ ಸರಕಾರ ಷರತ್ತುಗಳನ್ನು ವಿಧಿಸುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ,
ಅದರಲ್ಲೂ ಮುಖ್ಯವಾಗಿ ಬಿಜೆಪಿ ಸಾಕಷ್ಟು ಹೋರಾಟ ನಡೆಸಿತಾದರೂ ಅದಕ್ಕೆ ನಿರೀಕ್ಷಿತ ಜನಬೆಂಬಲ ಸಿಗಲಿಲ್ಲ.
ಏಕೆಂದರೆ, ಸರಕಾರ ಘೋಷಿಸಿದ ಗ್ಯಾರಂಟಿಗಳ ಪ್ರಯೋಜನ ಅಗತ್ಯ ಇರುವವರಿಗೆ ಸಿಗಲು ಯಾವುದೇ ಸಮಸ್ಯೆ ಇರಲಿಲ್ಲ. ಹೀಗಾಗಿ ಸರಕಾರ ಗೆಲುವು ಸಾಽಸಿತು, ಪ್ರತಿಪಕ್ಷಗಳು ಸೋತು ಹೋದವು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ನಂತರದಲ್ಲಿ ಅವು ಎಚ್ಚೆತ್ತುಕೊಂಡ ರೀತಿ ಮಾತ್ರ ನಿಜಕ್ಕೂ ಮೆಚ್ಚುವಂತಹದ್ದು. ಗ್ಯಾರಂಟಿ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದ ಪ್ರತಿಪಕ್ಷಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ವರ್ಗಾವಣೆ ದಂಧೆ’ ಎಂಬ
ಪ್ರಬಲ ಅಸವನ್ನೇ ನೀಡಿದರು. ಅಷ್ಟೇ ಅಲ್ಲ, ತಮ್ಮಲ್ಲಿ ಅದಕ್ಕೆ ದಾಖಲೆಗಳಿವೆ ಎಂದು ಪೆನ್ ಡ್ರೈವ್ ಒಂದನ್ನು ತೋರಿಸಿದರು. ಇಲಾಖೆಗಳಲ್ಲಿ ವರ್ಗಾವಣೆ ಸಿಂಡಿಕೇಟ್ ಇರುವ ಬಗ್ಗೆ ಮಾಹಿತಿ ನೀಡಿದರು. ಕೃಷಿ ಇಲಾಖೆಯಲ್ಲಿನ ವರ್ಗಾವಣೆ ದರಪಟ್ಟಿಯನ್ನು ಬಿಡುಗಡೆ ಮಾಡಿದರು. ಅಲ್ಲಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಗೆದ್ದು ಬೀಗುತ್ತಿದ್ದ ಸರಕಾರಕ್ಕೆ ಸಣ್ಣ ಮಟ್ಟಿನ ಜರ್ಕ್ ಹೊಡೆದಂತಾಯಿತು. ಕಳೆದ ಕೆಲವು ದಿನಗಳಿಂದ ಈ ವಿಚಾರದಲ್ಲಿ ವಾದ-ಪ್ರತಿವಾದ- ವಿವಾದಗಳು ಮುಂದುವರಿದಿವೆ.
ಸರಕಾರದಲ್ಲಿ ವರ್ಗಾವಣೆ ಪ್ರಕ್ರಿಯೆ ಎಂಬುದು ಸಾಮಾನ್ಯ. ಇದು ಪ್ರತಿ ವರ್ಷ ನಡೆಯುವ ಪ್ರಕ್ರಿಯೆಯೂ ಹೌದು. ಆದರೆ, ಆಡಳಿತ ಪಕ್ಷ ಬದಲಾಗಿ ಹೊಸ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಡೆಯುವ ವರ್ಗಾವಣೆಗೆ ಹೆಚ್ಚು ಮಹತ್ವವಿರುತ್ತದೆ. ಆಡಳಿತ ಪಕ್ಷದವರು ತಮಗೆ ಬೇಕಾದ ಅಧಿಕಾರಿ, ಸಿಬ್ಬಂದಿಯನ್ನು ಹಾಕಿಸಿಕೊಳ್ಳಲು ಇದು ಸಿಗುವ ಪ್ರಥಮ ಅವಕಾಶ. ಅದನ್ನು ಆಡಳಿತ ಪಕ್ಷ ಸಮರ್ಪಕ ವಾಗಿಯೇ ಬಳಸಿಕೊಳ್ಳುತ್ತದೆ. ಮತ್ತೊಂದೆಡೆ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಈ ಸಂದರ್ಭದಲ್ಲಿ ಆಯಕಟ್ಟಿನ ಜಾಗಗಳನ್ನು ಹುಡುಕಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ನಾನಾ ಮಾರ್ಗಗಳನ್ನು ಅನುಭವಿಸುತ್ತಾರೆ. ರಾಜಕೀಯ ಕಾರಣಗಳಿಗಾಗಿ ಹಿಂದಿನ ಸರಕಾರದಲ್ಲಿ ಮೂಲೆ ಸೇರಿದ್ದ ವರನ್ನು ಹೊಸ ಸರಕಾರ ಮುನ್ನಲೆಗೆ ತರುತ್ತದೆ. ಈ ವೇಳೆ ಭ್ರಷ್ಟಾಚಾರ, ಅಕ್ರಮ, ಪಕ್ಷಪಾತ ಮಾಡಿದ ಆರೋಪ ಎದುರಿಸುತ್ತಿರುವ ಅಧಿಕಾರಿಗಳು ಪ್ರಮುಖ ಹುದ್ದೆಗಳನ್ನು ಅಲಂಕರಿಸುವುದೂ ಆಗುತ್ತದೆ.
ತಮಗೆ ಬೇಕಾದವರನ್ನು ಹಾಕಿಸಿಕೊಳ್ಳಲು, ಬೇಡದವರನ್ನು ಕಳುಹಿಸಲು ಶಾಸಕರು ಶಿಫಾರಸು ಪತ್ರಗಳನ್ನು ನೀಡುತ್ತಾರೆ. ಸಚಿವರೂ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವಾಗ ಮೊದಲಿದ್ದ ವರನ್ನು ಹೊರಗೆ ಕಳುಹಿಸಲೇ ಬೇಕಾಗುತ್ತದೆ. ಈ ಪ್ರಕ್ರಿಯೆ ನಡೆಯುವಾಗಲೇ ವರ್ಗಾವಣೆ ಎಂಬುದು ದಂಧೆಯಾಗಿ ಮಾರ್ಪಟ್ಟಿರುವುದು. ಕುಮಾರಸ್ವಾಮಿ ಒದಗಿಸಿದ ವರ್ಗಾವಣೆ ದಂಧೆ ಆರೋಪಕ್ಕೆ ಬಲ ಸಿಗಲು ಮತ್ತೊಂದು ಕಾರಣ, ಆರೋಪ ಹೊತ್ತಿರುವ ಒಂದಿಬ್ಬರು ಅಽಕಾರಿಗಳು ಆಯಕಟ್ಟಿನ ಜಾಗಕ್ಕೆ ಬಂದಿರುವುದು. ಅಽಕಾರ ದುರುಪಯೋಗಪಡಿಸಿಕೊಂಡು ಕಚೇರಿಯಲ್ಲಿ ಸೃಷ್ಟಿಸಿದ ಸುಳ್ಳು ದಾಖಲಾತಿಗಳನ್ನೇ ನೈಜ
ವೆಂದು ನಂಬಿಸಿ ಸರಕಾರಿ ಜಮೀನು ಸೇರಿ ೧೧.೩೮ ಎಕರೆಗೂ ಹೆಚ್ಚು ಜಮೀನನ್ನು ಮಾಜಿ ಸಚಿವ ಶ್ರೀರಾಮುಲು ಅವರ ಹೆಸರಿಗೆ ನೋಂದಣಾ ಮಾಡಿಸಿದ್ದ ಆರೋಪ ಎದುರಿಸುತ್ತಿರುವ ಕೆಎಎಸ್ ಕಿರಿಯ ಶ್ರೇಣಿ ಅಧಿಕಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂಸ್ವಾಧೀನಾಧಿಕಾರಿಯಾಗಿ ನೇಮಿಸಿರುವುದು, ಒಬ್ಬ ಶಾಸಕರು ಸುಮಾರು ೨೦ಕ್ಕೂ ಹೆಚ್ಚು ಪೊಲೀಸರ ವರ್ಗಾವಣೆಗೆ ಶಿಫಾರಸು ಮಾಡಿರುವುದು, ಒಂದು ಉಪವಿಭಾಗಾಧಿಕಾರಿ ಹುದ್ದೆಗೆ ಮೂವರಿಗೆ ಮುಖ್ಯ
ಮಂತ್ರಿ ಶಿಫಾರಸು ಪತ್ರ ನೀಡುವುದು, ೪೦ಕ್ಕೂ ಹೆಚ್ಚು ತಹಸೀಲ್ದಾರ್ಗಳ ವರ್ಗಾವಣೆಗೆ ಸಚಿವರು, ಶಾಸಕರು ಶಿಫಾರಸು ಪತ್ರಗಳನ್ನು ನೀಡಿರುವುದು. ಇಂತಹ ನಡವಳಿಕೆ ಗಳೇ ಈ ಸರಕಾರದ ಮೇಲೆ ವರ್ಗಾವಣೆ ದಂಧೆ ಆರೋಪ ಹೆಚ್ಚು ಪ್ರಬಲವಾಗಿ ಕೇಳಿಬರಲು ಕಾರಣವಾಗಿದೆ.
ಹಾಗೆಂದು ಇದು ನಡೆಯುವುದು ಹೊಸದೇನೂ ಅಲ್ಲ. ಪ್ರತಿ ಬಾರಿ ಹೊಸ ಸರಕಾರ ಬಂದಾಗಲೂ ಈ ಪ್ರಕ್ರಿಯೆ ನಡೆಯುತ್ತದೆ. ದಂಧೆಯೂ ನಡೆಯುತ್ತದೆ. ಆದರೆ, ಈ ಬಾರಿ ದಂಧೆಯ ಕರಾಳ ರೂಪ ಹೊರಬರಲು ಕಾರಣ ಮುಖ್ಯಮಂತ್ರಿಯಾಗಿದ್ದಾಗ ಇಂತಹ ನುಭವಗಳಿಗೆ ಸಾಕ್ಷಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಈ ಕುರಿತಂತೆ ಹದ್ದಿನ ಕಣ್ಣಿಟ್ಟಿದ್ದು. ಅಧಿಕಾರಿ ವಲಯದ ಜತೆ ಈಗಲೂ ನಿಕಟ ಸಂಪರ್ಕ ಹೊಂದಿರುವ ಅವರು, ತಮಗೆ ಬೇಕಾದ ದಾಖಲೆ ಗಳನ್ನು ತರಿಸಿಕೊಂಡು ಅದನ್ನು ಬಹಿರಂಗಪಡಿಸುವ ಮೂಲಕ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಕುಮಾರ ಸ್ವಾಮಿ ಈ ಪರಿ ಸರಕಾರದ ವಿರುದ್ಧ ಮುಗಿಬೀಳಲು ಕಾರಣ
೨೦೧೯ ರಲ್ಲಿ ತಮ್ಮ ನೇತೃತ್ವದ ಮೈತ್ರಿ ಸರಕಾರವನ್ನು ಉರುಳಿ ಸಿದ ಸಿಟ್ಟು. ಆಗ ಸಿದ್ದರಾಮಯ್ಯ ಅವರ ಆಪ್ತ ವಲಯ ದಲ್ಲಿದ್ದವರೇ ರಾಜೀನಾಮೆ ಕೊಟ್ಟು ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾಗಿದ್ದರು.
ಹೀಗಾಗಿ ತಮ್ಮ ಸರಕಾರ ಉರುಳಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಸಿದ್ದರಾಮಯ್ಯ ನೇತೃತ್ವದ ಪ್ರತಿ ಹೆಜ್ಜೆಯ ಮೇಲೂ ಕಣ್ಣಿಟ್ಟಿದ್ದಾರೆ. ಇದರ ಪರಿಣಾಮವೇ ಗ್ಯಾರಂಟಿಗಳಲ್ಲಿ ಗೆದ್ದು ಬೀಗಿದ್ದ ಸರಕಾರ ಈಗ ಸ್ವಲ್ಪ ತಣ್ಣಗಾಗುವಂತಾಗಿದೆ. ಈ ವರ್ಗಾವಣೆ ದಂಧೆಯನ್ನು ಸಾಬೀತುಪಡಿಸಲು ಸಾಧ್ಯವಾಗದೇ ಇರಬಹುದು. ಆದರೆ, ಆ ಮೂಲಕ ಸರಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯೂ ಆಗಿವೆ. ಅತ್ತ ವರ್ಗಾವಣೆ ದಂಧೆ ಕುರಿತ ವಿವಾದ ಹೆಚ್ಚಾಗುತ್ತಿದ್ದರೆ ಅನ್ನಭಾಗ್ಯ ಯೋಜನೆಯಡಿ ಸರಕಾರದ ವಿರುದ್ಧ ಕುಮಾರಸ್ವಾಮಿ ಮತ್ತೊಂದು ಬಾಂಬ್ ಸಿಡಿಸಿದ್ದರು. ಅದು ಬಿಪಿಎಲ್ ಕಾರ್ಡ್ದಾರ ರಿಗಾಗಿ ಕೇಂದ್ರ ಸರಕಾರ ೫ ಕೆ.ಜಿ. ಅಕ್ಕಿ ನೀಡಿದ್ದರೂ ಅದರ ಬದಲು ರಾಜ್ಯ ಸರಕಾರ ಫಲಾನುಭವಿಗಳಿಗೆ ಕಡಿಮೆ ಅಕ್ಕಿ ನೀಡಿ ರಾಗಿ ಮತ್ತು ಜೋಳ
ನೀಡುತ್ತಿರುವುದು. ಇದನ್ನು ಇದೀಗ ಬಿಜೆಪಿ ಸಮರ್ಥ ವಾಗಿಯೇ ಬಳಸಿಕೊಂಡಿದೆ. ಕೇಂದ್ರ ಸರಕಾರ ನೀಡುವ ೫ ಕೆ.ಜಿ. ಅಕ್ಕಿಯಲ್ಲಿ ೨ ಕೆ.ಜಿ. ಕಡಿತಗೊಳಿಸಿ ನೀಡಲಾಗುತ್ತಿದೆ. ೨ ಕೆ.ಜಿ. ರಾಗಿ ಅಥವಾ ಜೋಳ ನೀಡಲಾಗುತ್ತಿದೆ ಎಂದು ಆರೋಪಿಸಿ ಸರಕಾರದ ವಿರುದ್ಧ ಆಂದೋಲನ ನಡೆಸಲು ಮುಂದಾಗಿದೆ.
ಸಕಾಂಗ ಪಕ್ಷದ ನಾಯಕ (ಪ್ರತಿಪಕ್ಷ ನಾಯಕ) ಇಲ್ಲ ಎಂಬ ಕೊರಗು, ಅದರಿಂದ ಎದುರಾದ ಮುಜುಗರವನ್ನು ಬದಿಗಿಟ್ಟು ಸಂಘಟಿತವಾಗಿ ಮುಗಿಬಿದ್ದಿದೆ.
ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಯೋಗ್ಯತೆ ಇಲ್ಲ ಎಂದು ಆಡಳಿತಾರೂಢ ಕಾಂಗ್ರೆಸ್ ಅದೆಷ್ಟೇ ವ್ಯಂಗ್ಯ, ಟೀಕೆ ಗಳನ್ನು ಮಾಡಿದರೂ ಅವುಗಳನ್ನು ಸಂಘಟಿತವಾಗಿ ಎದುರಿ ಸುವ ಮೂಲಕ ನಾಯಕನಿಲ್ಲದಿದ್ದರೂ ನಾವು ಯಾವುದಕ್ಕೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ಸಿದ್ಧಪಡಿಸುವ ಪ್ರತಿ ಅಸವನ್ನೂ ತನ್ನ ಬತ್ತಳಿಕೆಗೆ ತೆಗೆದುಕೊಂಡು ಅದನ್ನು ಸರಕಾರದ ವಿರುದ್ಧ ಪ್ರಯೋಗಿಸುವ ಮೂಲಕ ಸೋತರೂ ಶಕ್ತಿ ಕುಂದಿಲ್ಲ ಎಂದು ಸಾಬೀತುಪಡಿಸುತ್ತಿದೆ. ಆ ಮೂಲಕ ವಿಧಾನಸಭೆ ಚುನಾವಣೆ ಬಳಿಕ ಆಡಳಿತ ಪಕ್ಷ ಗೆದ್ದರೂ ಪ್ರತಿಪಕ್ಷಗಳು ಸೋಲದೆ ಹೋರಾಟ ಮುಂದುವರಿಸಿವೆ.
ಲಾಸ್ಟ್ ಸಿಪ್: ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿಯ ಶಾಸಕರ ನಡೆ ಗಮನಿಸಿದರೆ ಅವರು ಆಡಳಿತ ನಡೆಸುವುದಕ್ಕಿಂತ ಪ್ರತಿಪಕ್ಷವಾಗಿರಲೇ ಸೂಕ್ತ ಎಂಬಂತೆ ಕಾಣಿಸುತ್ತಿದೆ.