Sunday, 15th December 2024

ಪ್ರದೀಪ್ ಈಶ್ವರ‍್ ಎಂಬ ಬಾಹುಬಲಿಯ ಕತೆ

ಮೂರ್ತಿಪೂಜೆ

ಇದು ರಾಜ್ಯ ರಾಜಕಾರಣದ ಬಾಹುಬಲಿಯ ಕತೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮುಖ್ಯಮಂತ್ರಿ ಹುದ್ದೆಗೇರುವ ಕನಸು ಕಾಣುತ್ತಿದ್ದ
ಡಾ.ಸುಧಾಕರ್ ಅವರನ್ನು ಸೋಲಿಸಿದ ಆಂಗ್ರಿ ಯಂಗ್ ಮ್ಯಾನ್ ಪ್ರದೀಪ್ ಈಶ್ವರ್ ಅವರ ರೋಚಕ ವೃತ್ತಾಂತ. ಅಂದ ಹಾಗೆ ೨೦೧೮ರಲ್ಲಿ ಅಸ್ತಿತ್ವಕ್ಕೆ ಬಂದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರಕಾರವನ್ನು ಆಪರೇಷನ್ ಕಮಲದ ಮೂಲಕ ಯಡಿಯೂ ರಪ್ಪ ಉರುಳಿಸಿದರಲ್ಲ? ಆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಅವರೊಂದಿಗೆ ಹೋದ ಚಿಕ್ಕಬಳ್ಳಾಪುರದ ಶಾಸಕ ಡಾ.ಸುಧಾಕರ್ ಮಂತ್ರಿಯಾದರು.

ಹೀಗೆ ಮಂತ್ರಿಯಾಗಿದ್ದಷ್ಟೇ ಅಲ್ಲ, ತಮ್ಮ ಕೆಪ್ಯಾಸಿಟಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಪ್ತ ವಲಯಕ್ಕೆ ಸೇರುವ ಮಟ್ಟಕ್ಕೆ ಬೆಳೆದರು. ಮುಂದೆ ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದ ನಂತರ ಬಂದ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಡಿಸಿಎಂ ಹುದ್ದೆಗೆ ಟವೆಲ್ಲು ಹಾಕುವ ರೇಂಜಿಗೆ ಸುಧಾಕರ್ ತಲುಪಿದ್ದರು ಎಂಬುದು ಅವರ ಕೆಪ್ಯಾಸಿಟಿಗೆ ಸಾಕ್ಷಿ. ಬೊಮ್ಮಾಯಿ ಇರುವವರೆಗೆ ಅದು ಸಾಧ್ಯ ವಾಗಲಿಲ್ಲ ಎಂಬುದು ಬೇರೆ ಮಾತು. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹದಿನೈದು ವಿಧಾನಸಭಾ ಕ್ಷೇತ್ರಗಳ ಪೈಕಿ ಮಿನಿಮಮ್ ಹತ್ತರಲ್ಲಿ ಬಿಜೆಪಿ ಕ್ಯಾಂಡಿಡೇಟುಗಳನ್ನು ಗೆಲ್ಲಿಸಲು ಸುಧಾಕರ್ ಬ್ಲೂ ಪ್ರಿಂಟು ರೆಡಿ ಮಾಡಿದ್ದರು.

ಈ ರೀತಿ ಸುಧಾಕರ್ ತಮ್ಮ ಕೈಗಳನ್ನು ಚಾಚಿದ ಪರಿ ಹೇಗಿತ್ತೆಂದರೆ, ಅದರ ಪವರ್ ಕಂಡು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಬಹುತೇಕ ಕಾಂಗ್ರೆಸ್ ನಾಯಕರು ಬೆಚ್ಚಿ ಬಿದ್ದಿದ್ದರು. ಅಷ್ಟೇ ಅಲ್ಲ, ಡಾ.ಸುಧಾಕರ್ ಅವರ ವಿರುದ್ಧ ಎಲ್ಲೂ ಧ್ವನಿ ಎತ್ತಬೇಡಿ. ಹಾಗೇನಾದರೂ ಮಾಡಿದರೆ ನೀವಾಗಿಯೇ ನಿಮ್ಮ ಕ್ಷೇತ್ರಕ್ಕೆ ಆನೆ ನುಗ್ಗಿಸಿಕೊಂಡು ನಾಶವಾಗುತ್ತೀರಿ ಎಂದು ಪಿಸುಗುಟ್ಟುವ ರೇಂಜಿನಲ್ಲಿ ಹೆದರಿಕೆ ಹುಟ್ಟಿಸಿದ್ದರು. ಸುಧಾಕರ್ ಹುಟ್ಟಿಸಿದ ಈ ಹೆದರಿಕೆ ಹೇಗಿತ್ತು ಎಂದರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಘಟಾನುಘಟಿ ಕಾಂಗ್ರೆಸ್ ನಾಯಕರೆಲ್ಲ, ‘ರೀ ಹೇಗಾದರೂ ಮಾಡಿ ಈ ಸುಧಾಕರ್ ಅವರನ್ನು ಕಟ್ಟಿಹಾಕಬೇಕು ಕಣ್ರೀ.

ಇದು ಸಾಧ್ಯವಾಗದೆ ಹೋದರೆ ನಿಮ್ಮ ಭಾಗದಲ್ಲಿ ಕಾಂಗ್ರೆಸ್ ಕುಸಿದುಹೋದಂತೆಯೇ ಲೆಕ್ಕ’ ಎಂದು ಸ್ಥಳೀಯ ನಾಯಕರೆದುರು ಆತಂಕ ವ್ಯಕ್ತಪಡಿಸಿದ್ದರಂತೆ.
ಇಂಥ ಆತಂಕದ ನಡುವೆ ಅರಿಭಯಂಕರ ಡಾ.ಸುಧಾಕರ್ ಅವರನ್ನು ಕಟ್ಟಿಹಾಕಬಲ್ಲ ಕ್ಯಾಂಡಿಡೇಟನ್ನು ಹುಡುಕಿ ಎಂದವರು ಹೇಳಿದರೂ, ಸ್ಥಳೀಯ ಕಾಂಗ್ರೆಸ್ ನಾಯಕರ ಕಣ್ಣಿಗೆ ಯಾವೊಬ್ಬ ಕ್ಯಾಂಡಿಡೇಟೂ ಕಾಣಿಸಿಲ್ಲ. ಒಂದು ಹಂತದಲ್ಲಿ ವಿನಯ್ ಶ್ಯಾಮ್ ಎಂಬುವವರನ್ನು ತೋರಿಸಿದ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ, ‘ಇವರು ಕ್ಯಾಂಡಿಡೇಟ್ ಆದರೆ ಸುಧಾಕರ್ ಅವರನ್ನು ಕಟ್ಟಿ ಹಾಕಬಹುದು’ ಎಂದು ತೋರಿಸಿದರಂತೆ. ಆದರೆ ಅವರನ್ನು ಕ್ಯಾಂಡಿಡೇಟು ಮಾಡುವ ವಿಷಯದಲ್ಲಿ ಪಕ್ಷದ ಬಹುತೇಕ ನಾಯಕರು ಸಹಮತ ವ್ಯಕ್ತಪಡಿಸಲಿಲ್ಲ.

ಸರಿ, ಹೀಗಿರುವಾಗಲೇ ಆ ಭಾಗದಲ್ಲಿ ನಡೆದ ಸಭೆಯೊಂದರಲ್ಲಿ ಚಿಂತಾಮಣಿಯ ಕಾಂಗ್ರೆಸ್ ನಾಯಕ ಡಾ. ಎಂ.ಸಿ.ಸುಧಾಕರ್ (ಈಗ ಸಚಿವರು) ಅವರು ಸಚಿವ ಡಾ.ಸುಧಾಕರ್ ಅವರ ವಿರುದ್ಧ ಗುಡುಗಿದ್ದಾರೆ. ಇದು ಸಹಜವಾಗಿಯೇ ಡಾ. ಸುಧಾಕರ್ ಅವರ ಕಣ್ಣು ಕೆಂಪಾಗುವಂತೆ ಮಾಡಿದೆ. ಅಷ್ಟೇ ಅಲ್ಲ, ಎಂ.ಸಿ. ಸುಧಾಕರ್ ವಿರುದ್ಧ ಕಿಡಿ ಕಾರುವಂತೆ ಮಾಡಿದೆ. ಯಾವಾಗ ಈ ಬೆಳವಣಿಗೆ ನಡೆಯಿತೋ? ಇದಾದ ನಂತರ ಡಾ.ಸುಧಾಕರ್ ಅವರ ವಿರುದ್ಧ ಪ್ರಬಲ ಅಸ್ತ್ರ ತಯಾರಿಸಲು ಎಂ.ಸಿ. ಸುಧಾಕರ್ ತೀರ್ಮಾನಿಸಿದ್ದಾರೆ.

ಅಷ್ಟೊತ್ತಿಗೆ ಸರಿಯಾಗಿ ರಾಜ್ಯದ ಕಾಂಗ್ರೆಸ್ ನಾಯಕರೂ, ಡಾ.ಸುಧಾಕರ್ ಅವರನ್ನು ಕಟ್ಟಿಹಾಕಬಲ್ಲ ಕ್ಯಾಂಡಿಡೇಟನ್ನು ಹುಡುಕಲು ಎಂ.ಸಿ. ಸುಧಾಕರ್ ಅವರಿಗೆ ಸುಪಾರಿ ಕೊಟ್ಟಿದ್ದಾರೆ. ಯಾವಾಗ ತಮ್ಮ ಕೈಗೆ ಈ ಸುಪಾರಿ ಬಂತೋ?ಆಗಿನಿಂದ ಹುಡುಕಾಟ ಆರಂಭಿಸಿದ ಎಂ.ಸಿ. ಸುಧಾಕರ್ ಅವರಿಗೆ ಸೂಟಬಲ್ ಕ್ಯಾಂಡಿ ಡೇಟು ಸಿಕ್ಕಿಲ್ಲ. ಆದರೆ ಕಳೆದ ವರ್ಷ ತಮ್ಮ ಹುಟ್ಟು ಹಬ್ಬವನ್ನು ಅವರು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಒಬ್ಬ ಯುವಕ ಅವರನ್ನು ಭೇಟಿಯಾಗಿ ಶುಭ ಕೋರಿದ ರಂತೆ. ಆ ಯುವಕನನ್ನು ನೋಡಿದ್ದೇ ತಡ, ಎಂ.ಸಿ.ಸುಧಾಕರ್ ಅವರ ತಲೆಗೆ ಮಿಂಚು ಹೊಡೆದಂತಾಗಿದೆ. ಈ ಯುವಕನ ಬಗ್ಗೆ ಒಂದಷ್ಟು ಮಾಹಿತಿ ಬೇರೆ ಇತ್ತಲ್ಲ?ಹೀಗಾಗಿಯೇ ಆತನ ಬಳಿ, ‘ನೀನೇಕೆ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಆಗಿ ಸ್ಪರ್ಧಿಸಬಾರದು’ ಎಂದಿದ್ದಾರೆ. ಅಂದ ಹಾಗೆ ಆ ಯುವಕನ ಹೆಸರು- ಪ್ರದೀಪ್ ಈಶ್ವರ್.

ಅಷ್ಟೊತ್ತಿಗಾಗಲೇ ಈ ಯುವಕ ಪ್ರದೀಪ್ ಈಶ್ವರ್ ಅವರು ಡಾ.ಸುಧಾಕರ್ ಅವರ ಹೊಡೆತಕ್ಕೆ ಸಿಲುಕಿ ಹಲವು ಬವಣೆಗಳನ್ನು ಎದುರಿಸಿದ್ದರಲ್ಲ? ಹೀಗಾಗಿ ಎಂ.ಸಿ.
ಸುಧಾಕರ್ ಅವರ ಮಾತು ಕೇಳುತ್ತಲೇ ಹೌಹಾರಿ, ‘ಅಯ್ಯೋ ಬೇಡ ಸರ್, ಈಗಾಗಲೇ ಅವರು ನನಗೆ ಸಾಕಷ್ಟು ಹಿಂಸೆ ಕೊಟ್ಟಿದ್ದಾರೆ. ಈಗಾಗಲೇ ಜೈಲು ಬೇರೆ ಸೇರಿ ಬಂದಿದ್ದೇನೆ’ ಎಂದರಂತೆ. ಇಷ್ಟಾದರೂ ಎಂ.ಸಿ. ಸುಧಾಕರ್ ಒತ್ತಾಯ ಮಾಡಿದಾಗ, ‘ಸರ್, ಹೇಗೋ ಕಷ್ಟಪಟ್ಟು ಇನ್‌ಸ್ಟಿಟ್ಯೂಟ್ ಕಟ್ಟಿ ಬೆಳೆಸಿದ್ದೇನೆ. ನಾಳೆ ಚುನಾವಣೆಯಲ್ಲಿ ಅವರ ವಿರುದ್ಧ ಸ್ಪರ್ಧಿಸಿ ಸೋತರೆ ಅವನ್ನೆಲ್ಲ ಮುಚ್ಚಿಸಿಬಿಡುತ್ತಾರೆ. ನನಗೆ ರಕ್ಷಣೆಯೇ ಇಲ್ಲದಂತಾಗುತ್ತದೆ. ಅದೇ ರೀತಿ ಅವರ ವಿರುದ್ಧ
ಸ್ಪಽಸಲು ನನ್ನ ಬಳಿ ಹಣಬಲವೂ ಇಲ್ಲ’ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಆದರೆ ಪಟ್ಟು ಬಿಡದ ಎಂ.ಸಿ. ಸುಧಾಕರ್ ಅವರು, ‘ಯಾರೇನೇ ಮಾಡಿದರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಒಂದು ವೇಳೆ ನೀವು ಸೋತರೂ
ನಿಮಗೆ ತೊಂದರೆಯಾಗದಂತೆ ನಾನು ರಕ್ಷಣೆ ಕೊಡಿಸುತ್ತೇನೆ’  ಎಂದು ಭರವಸೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ‘ಈ ಬಗ್ಗೆ ಇವತ್ತೇ ನಿಮ್ಮ ಉತ್ತರ ಬೇಡ, ಎರಡು ದಿನ ಟೈಮು ತೆಗೆದುಕೊಂಡು ಹೇಳಿ’ ಎಂದಿದ್ದಾರೆ. ಸರಿ, ಇದಾಗಿ ಎರಡು ದಿನ ಕಳೆದ ನಂತರ ಪ್ರದೀಪ್ ಈಶ್ವರ್ ಪುನಃ ಎಂ.ಸಿ. ಸುಧಾಕರ್ ಅವರನ್ನು ಸಂಪರ್ಕಿಸಿ, ‘ಯಸ್, ನಾನು ರೆಡಿ’ ಎಂದರಂತೆ. ಯಾವಾಗ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿತೋ? ಇದಾದ ನಂತರ ಮಾಜಿ ವಿಧಾನಸಭಾಧ್ಯಕ್ಷರಾದ, ಶ್ರೀನಿವಾಸಪುರದ ರಮೇಶ್ ಕುಮಾರ್ ಅವರಿಗೆ ಎಂ.ಸಿ. ಸುಧಾಕರ್ ವಿಷಯ ಹೇಳಿದ್ದಾರೆ.

ಅಷ್ಟೇ ಅಲ್ಲ, ಪ್ರದೀಪ್ ಈಶ್ವರ್ ಅವರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಹೇಗೆ ಲಾಭವಾಗಬಹುದು ಎಂಬ ಲೆಕ್ಕಾಚಾರವನ್ನು ವಿವರಿಸಿದ್ದಾರೆ: ‘ಹೇಗಿದ್ದರೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಲಿಜ ಸಮುದಾಯದ ಪವರ್ರು ಜಾಸ್ತಿ. ಪ್ರದೀಪ್ ಈಶ್ವರ್ ಅವರು ಈ ಸಮುದಾಯಕ್ಕೆ ಸೇರಿದವರು. ನಾಳೆ ಬಿಜೆಪಿ ಕ್ಯಾಂಡಿಡೇಟ್ ಆಗಿ ಸ್ಪಽಸಲಿರುವ ಡಾ.ಸುಧಾಕರ್ ಅವರು ಒಕ್ಕಲಿಗರು. ಜೆಡಿಎಸ್ ಕೂಡಾ ಒಕ್ಕಲಿಗರನ್ನೇ ಕಣಕ್ಕಿಳಿಸುವುದರಿಂದ ಸಹಜವಾಗಿಯೇ ಒಕ್ಕಲಿಗರ ವೋಟು ಡಿವೈಡ್ ಆಗುತ್ತದೆ. ಅದೇ ಕಾಲಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಬಲಿಜ, ಕುರುಬ, ಮುಸ್ಲಿಂ ಮತ್ತು ಪರಿಶಿಷ್ಟ ಮತಗಳು ಕನ್ ಸಾಲಿಡೇಟ್ ಆಗಿ, ನಮ್ಮ ಕ್ಯಾಂಡಿಡೇಟು ಗೆಲ್ಲುವುದು
ಗ್ಯಾರಂಟಿ’ ಎಂದು ಅವರು ವಿವರಿಸಿದಾಗ ರಮೇಶ್ ಕುಮಾರ್ ಅವರು ಖುಷಿಯಿಂದ ‘ಯಸ್’ ಎಂದರಂತೆ.

ಇದಾದ ನಂತರ ಪ್ರದೀಪ್ ಈಶ್ವರ್ ಅವರನ್ನು ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡುವ ಬಗ್ಗೆ ಎಂ.ಸಿ. ಸುಧಾಕರ್ ಅವರು ಸಿದ್ದರಾಮಯ್ಯ ಅವರಿಗೆ ತಿಳಿಸಿದಾಗ, ‘ಗುಡ್, ಚಿಕ್ಕಬಳ್ಳಾಪುರದಲ್ಲಿ ನಮಗೆ ಒಳ್ಳೆ ಕ್ಯಾಂಡಿಡೇಟು ಸಿಕ್ಕರಲ್ಲ? ಒಳ್ಳೆಯದು. ಹೇಗಾದರೂ ಮಾಡಿ ಆ ಸುಧಾಕರ್ ಗೆಲ್ಲದಂತೆ ನೋಡಿಕೊಳ್ಳಿ’ ಎಂದಿದ್ದಾರೆ. ಇಷ್ಟಾದ ನಂತರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸುರ್ಜೇವಾಲ ಮತ್ತು ಹೈಕಮಾಂಡ್‌ನ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್ ಅವರಿಗೆ ವಿಷಯ ಹೇಳಿದಾಗ, ಎಲ್ಲ ಮಾಹಿತಿ ಪಡೆದ ಅವರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಆದರೆ ಅಷ್ಟರಲ್ಲೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು, ಪ್ರದೀಪ್ ಈಶ್ವರ್ ಅವರು ಡಾ.ಸುಧಾಕರ್ ಮತ್ತಿತರ ನಾಯಕರ ಜತೆಗಿದ್ದ ಫೋಟೋ
ತೋರಿಸಿ, ‘ರೀ ಈ ಪ್ರದೀಪ್ ಈಶ್ವರ್ ಹೇಳಿ ಕೇಳಿ ಡಾ. ಸುಧಾಕರ್ ಅವರ ಕ್ಯಾಂಡಿಡೇಟು. ಇವತ್ತು ನಮ್ಮ ಪಕ್ಷದ ಕಡೆ ಅವರನ್ನು ಕಳಿಸಿ ಟಿಕೆಟ್ ಕೊಡಿಸುವುದು, ನಿರಾಯಾಸವಾಗಿ ಗೆಲ್ಲುವುದು ಡಾ.ಸುಧಾಕರ್ ಅವರ ತಂತ್ರ’ ಎಂದರಂತೆ. ಹೀಗೆ ಹೇಳಿದ ನಾಯಕರಿಗೆ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವವೂ ಇತ್ತಲ್ಲ? ಹೀಗಾಗಿ ಅವರ ಮಾತು ಕೇಳಿದ ಸುರ್ಜೇವಾಲಾ ಪುನಃ ವಿವರಣೆ ಕೇಳಿದ್ದಾರೆ. ಆಗ ಎಂ.ಸಿ. ಸುಧಾಕರ್ ಅವರು, ‘ಸಾರ್, ಪ್ರದೀಪ್ ಈಶ್ವರ್ ಅವರು ಇನ್‌ಸ್ಟಿಟ್ಯೂಟ್ ಕಟ್ಟಿದ್ದಾರೆ. ಹೀಗಾಗಿ ಅವರು ಹಲವು ನಾಯಕರನ್ನು ಭೇಟಿ ಮಾಡಿರಬಹುದು. ಹಾಗಂತ ಅವರು ಡಾ.ಸುಧಾಕರ್ ಕಡೆಯವರು ಎಂದರ್ಥವಲ್ಲ’ ಎಂದು
ಸಮಜಾಯಿಷಿ ನೀಡಿದ್ದಾರೆ.

ಮುಂದೆ ಇಂಥ ಬಿಕ್ಕಟ್ಟುಗಳನ್ನೆಲ್ಲ ದಾಟಿಕೊಂಡು ರಾಹುಲ್ ಗಾಂಧಿ ಅವರ ಸಮ್ಮತಿಯೊಂದಿಗೆ ಪ್ರದೀಪ್ ಈಶ್ವರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಾಗ ಆಟ ಶುರುವಾಗಿದೆ. ತಮ್ಮ ಎದುರು ಸ್ಪರ್ಧಿಸಿದ ಕ್ಯಾಂಡಿಡೇಟನ್ನು ನೋಡಿ ಡಾ.ಸುಧಾಕರ್ ಅವರು, ‘ರೀ, ನಾನು ಡಾಕ್ಟರು, ಆತ ಆ-ರಾಲ್ ಪಿಯುಸಿ’ ಎಂದಾಗ ಪ್ರದೀಪ್ ಈಶ್ವರ್ ಥೇಟು ತೆಲುಗು ಫಿಲಂ ಹೀರೋನಂತೆ, ‘ರೀ, ಅವರು ಡಾಕ್ಟರ್ ಆದರೆ, ನಾನು ಡಾಕ್ಟರುಗಳನ್ನು ತಯಾರಿಸುವ ಫ್ಯಾಕ್ಟರಿ’ ಎಂದು ತಿರುಗೇಟು
ಕೊಟ್ಟಿದ್ದಾರೆ. ಅವರು ಹೀಗೆ ತಿರುಗೇಟು ಕೊಡುವ ಕಾಲಕ್ಕೆ ಫೀಲ್ಡಿಗಿಳಿದ ಎಂ.ಸಿ. ಸುಧಾಕರ್ ಅವರು ಕೂಡ ಸಚಿವ ಡಾ.ಸುಧಾಕರ್ ಅವರ ವಿರುದ್ಧ ದೊಡ್ಡ ಆರೋಪ ಪಟ್ಟಿಯನ್ನೇ ಬಿಡುಗಡೆ ಮಾಡಿ ಗುಡುಗಿ ‘ಆಪರೇಷನ್ ಚಿಕ್ಕಬಳ್ಳಾಪುರ’ಕ್ಕೆ ಚಾಲನೆ ನೀಡಿದ್ದಾರೆ.

ಈ ಮಧ್ಯೆಯೂ ಹಲವರು ಎಂ.ಸಿ. ಸುಧಾಕರ್ ಅವರಿಗೆ ಫೋನು ಮಾಡಿ, ‘ಸರ್, ನೀವು ಆರಿಸಿರುವ ಕ್ಯಾಂಡಿಡೇಟು ಭಾಷಣ ಮಾಡುವಾಗ ತೋಳು ಮೇಲೇರಿಸಿ
ಮಾತನಾಡುತ್ತಾರೆ, ಸೊಂಟದ ಮೇಲೆ ಕೈ ಇಟ್ಟುಕೊಳ್ಳುತ್ತಾರೆ’ ಅಂತ ಪ್ರದೀಪ್ ಈಶ್ವರ್ ಅವರ ಬಾಡಿ ಲಾಂಗ್ವೇಜಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆಗೆಲ್ಲ ಎಂ.ಸಿ.ಸುಧಾಕರ್, ‘ಅವರು ಮಕ್ಕಳಿಗೆ ಪಾಠ ಮಾಡುವಾಗ ಹೀಗೆ ಮಾಡುವುದು ಕಾಮನ್’ ಎನ್ನುತ್ತಿದ್ದರಾದರೂ, ಮತ್ತೊಂದು ಕಡೆಯಿಂದ ಪ್ರದೀಪ್ ಈಶ್ವರ್ ಅವರಿಗೆ ಟಿಪ್ಸು ಕೊಡುತ್ತಾ ಹೋಗುತ್ತಿದ್ದರು.

‘ಯಾವುದನ್ನು ಹಣ ಖರೀದಿ ಮಾಡಲು ಸಾಧ್ಯವಿಲ್ಲವೋ? ಅದನ್ನು ಹೃದಯ ಖರೀದಿಸುತ್ತದೆ’ ಎಂದು ಹುರುಪು ತುಂಬುತ್ತಿದ್ದರು. ಅಷ್ಟೇ ಅಲ್ಲ, ‘ಪ್ರದೀಪ್ ಈಶ್ವರ್ ಅವರು ಜೈಲು ಸೇರಿದಾಗ ಅವರ ಪರ ವಾದ ಮಾಡಲೂ ವಕೀಲರ ಕೊರತೆಯಾಗುವಂತೆ ಮಾಡಿದವರು ಯಾರು? ಆ ಸಂದರ್ಭದಲ್ಲಿ ಬೇಸತ್ತು ಜೈಲಿನಲ್ಲಿ ನೀವು ಉಪವಾಸ ಸತ್ಯಾಗ್ರಹ ಮಾಡಿದ್ದು ಹೇಗಿತ್ತು? ಇದನ್ನು ಕಂಡ ಜೈಲರುಗಳು ನ್ಯಾಯಾಲಯಕ್ಕೆ ಆ ಬಗ್ಗೆ ವಿವರಿಸಿದಾಗ ನ್ಯಾಯಾಧೀಶರು ನಿಮಗೆ ಬೇಲ್ ಕೊಟ್ಟು ಕಳಿಸಿದ್ದು ಹೇಗೆ? ಎಂಬ ಬಗ್ಗೆ ಜನರಿಗೆ ವಿವರಿಸುತ್ತಾ ಹೋಗಿ, ಅವರ ಮನಸ್ಸು ಗೆಲ್ಲುತ್ತೀರಿ’ ಎಂದಿದ್ದಾರೆ.

ಪರಿಣಾಮ? ನೋಡ ನೋಡುತ್ತಿದ್ದಂತೆಯೇ ಅರಿಭಯಂಕರ ಡಾ.ಸುಧಾಕರ್ ಅವರ ಸುತ್ತಲಿನ ಪ್ರಭಾವಳಿ ಸಿನಿಮಾ ಪೋಸ್ಟರಿನಂತೆ ಕಳಚಿ ಬೀಳುತ್ತಾ, ಪ್ರದೀಪ್ ಈಶ್ವರ್ ಅವರ ಇಮೇಜು ಕಟೌಟಿನಂತೆ ಜನರ ಮನಸ್ಸಿನಲ್ಲಿ ನೆಲೆಯಾಗತೊಡಗಿತು. ಯಾವಾಗ ಹೀಗೆ ಪರಿಸ್ಥಿತಿ ಬದಲಾಯಿತೋ? ಆಗ ಜೆಡಿಎಸ್ ಪಕ್ಷದ ಬಹುತೇಕ ಸ್ಥಳೀಯ ನಾಯಕರು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಚುನಾವಣೆಯಲ್ಲಿ ಡಾ.ಸುಧಾಕರ್ ಅವರ ವಿರುದ್ಧ ಯಾರು ಗೆಲ್ಲುತ್ತಾರೋ? ಅವರ ಜತೆ ನಿಲ್ಲಬೇಕು ಅಂತ ನಾವು ಕಾಂಗ್ರೆಸ್ ನಾಯಕರ ಜತೆ ಮಾತನಾಡಿಕೊಂಡಿದ್ದೇವೆ.

ನಮ್ಮ ಕ್ಯಾಂಡಿಡೇಟು ಗೆಲ್ಲುವುದಾದರೆ ಕಾಂಗ್ರೆಸ್ ಪಕ್ಷ ನಮಗೆ ಬೆಂಬಲ ಕೊಡಬೇಕು, ಕಾಂಗ್ರೆಸ್ ಪಕ್ಷ ಗೆಲ್ಲುವುದಾದರೆ ನಾವು ಅವರಿಗೆ ಬೆಂಬಲ ಕೊಡಬೇಕು ಅನ್ನುವುದು ಈ ನಿರ್ಧಾರ. ಅದರ ಪ್ರಕಾರ, ಈ ಚುನಾವಣೆಯಲ್ಲಿ ಡಾ.ಸುಧಾಕರ್ ಅವರನ್ನು ಕಾಂಗ್ರೆಸ್ ಕ್ಯಾಂಡಿಡೇಟ್ ಪ್ರದೀಪ್ ಈಶ್ವರ್ ಅಲುಗಾಡಿಸುತ್ತಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ನಾವು ಅವರ ಬೆಂಬಲಕ್ಕೆ ನಿಲ್ಲೋಣ ಎಂದು ಈ ನಾಯಕರು ಮಾತನಾಡಿಕೊಂಡ ಮೇಲೆ ಜೆಡಿಎಸ್ ಪಕ್ಷದ ಬಹುತೇಕ ಮತಗಳು ಪ್ರದೀಪ್ ಈಶ್ವರ್ ಅವರಿಗೆ ಶಿಫ್ಟಾಗಿವೆ.

ಪರಿಣಾಮ? ಕರ್ನಾಟಕದ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ಡಾ.ಸುಧಾಕರ್ ಚುನಾವಣೆಯಲ್ಲಿ ಸೋತಿದ್ದಾರೆ. ಅದೇ ಕಾಲಕ್ಕೆ ಕರ್ನಾಟಕದ ಜನರಿಗೆ
ಅನಾಮಧೇಯರಂತಿದ್ದ ಪ್ರದೀಪ್ ಈಶ್ವರ್ ಡಿಟ್ಟೋ ಬಾಹುಬಲಿಯಂತೆ ಮೇಲೆದ್ದು ವಿಧಾನಸಭೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.