Sunday, 15th December 2024

ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದ ಮಕ್ಕಳ ಶವ ಪತ್ತೆ

Raichur News

ಮುಂಬೈ: ಮಹಾರಾಷ್ಟ್ರದ ಮಾರ್ವೆ​ ಬೀಚಿಗೆ ಭಾನುವಾರ ತೆರಳಿದ್ದ ಮೂವರು ಬಾಲಕರು ಸಮುದ್ರದ ಅಲೆಗೆ ಕೊಚ್ಚಿ ಹೋಗಿ ದ್ದರು. ಸೋಮವಾರ ಅವರ ಮೃತದೇಹಗಳು ಪತ್ತೆ ಯಾಗಿವೆ. ಮೃತ ಬಾಲಕರು 12 ರಿಂದ 16  ವರ್ಷದೊಳಗಿನವ ರಾಗಿದ್ದಾರೆ.

ಐವರು ಬಾಲಕರು ಭಾನುವಾರ ಮುಂಬೈನ ಮಾರ್ವೆ ಬೀಚಿಗೆ ತೆರಳಿದ್ದರು. ನೀರಿನಾಟದಲ್ಲಿ ಮೈಮರೆತಿದ್ದ ಹುಡುಗರು ಸೆಳೆತಕ್ಕೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಮಾಹಿತಿ ಸಿಕ್ಕ ತಕ್ಷಣವೇ ಅಗ್ನಿಶಾಮಕ ದಳ ಸಿಬ್ಬಂದಿ, ಕೋಸ್ಟ್​ಗಾರ್ಡ್​, ಪೊಲೀಸರು, ನೌಕಾ ಪಡೆಯ ರಕ್ಷಣಾ ಪಡೆಗಳು ಧಾವಿಸಿ ಬಂದು ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ, ಇನ್ನೂ ಮೂವರು ನಾಪತ್ತೆಯಾಗಿದ್ದರು. ರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರೂ ಎಲ್ಲೂ ಪತ್ತೆಯಾಗಿರಲಿಲ್ಲ.

ರಕ್ಷಣಾ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಸೇರಿದಂತೆ ಹೆಲಿಕಾಪ್ಟರ್​ ಕೂಡ ಬಳಸಲಾಗಿತ್ತು. ಸೋಮವಾರ ಬೆಳಗ್ಗೆ ಬಾಲಕರ ಶವಗಳು ಬೀಚ್​ ಬಳಿ ಸಿಕ್ಕಿವೆ. ಶವಗಳನ್ನು ವಶಕ್ಕೆ ಪಡೆದ ಪೊಲೀಸರು, ಶತಾಬ್ದಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

2 ದಿನಗಳ ಹಿಂದಷ್ಟೇ ಮುಂಬೈನ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಮಹಿಳೆಯೊಬ್ಬರು ಭಾರಿ ಅಲೆಯ ಹೊಡೆತಕ್ಕೆ ಸಿಲುಕಿ ಮಕ್ಕಳು, ಪತಿ ಎದುರೇ ಕೊಚ್ಚಿ ಹೋದ ದುರಂತ ನಡೆದಿತ್ತು. ಬಾಂದ್ರಾದ ಮುಂಬೈನ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ದಂಪತಿ ಬಂಡೆಯ ಮೇಲೆ ಕುಳಿತಿದ್ದರು. ಮಕ್ಕಳು ಆ ಸಂತಸದ ಕ್ಷಣವನ್ನು ಮೊಬೈಲ್​ನಲ್ಲಿ ಸೆರೆಹಿಡಿಯುತ್ತಿದ್ದರು. ಈ ವೇಳೆ  ಅಲೆ ಅಪ್ಪಳಿಸಿ, ಕಣ್ಣು ಮಿಟುಕಿಸುವುದರಲ್ಲಿ ಪತಿ ಜತೆಗಿದ್ದ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು.