Sunday, 24th November 2024

ವಿಚಿತ್ರ ಬಂಧನದಲ್ಲಿ ಮಹಾ ಘಟ !

ಅಶ್ವತ್ಥಕಟ್ಟೆ

ranjith.hoskere@gmail.com

ಲೋಕಸಭಾ ಚುನಾವಣೆಯಲ್ಲಿ ತ್ರಿಕೂಟಗಳ ಆಧಾರದಲ್ಲಿಯೇ ಚುನಾವಣೆಗೆ ಹೋಗುವುದು ಹೊಸತಲ್ಲ. ಎನ್‌ಡಿಎ, ಯುಪಿಎ ಹಾಗೂ ತೃತೀಯ ರಂಗದ ಮೈತ್ರಿ ಕೂಟಗಳು ಹಲವು ದಶಕಗಳಿಂದ ಚುನಾವಣೆಯನ್ನು ಎದುರಿಸುತ್ತಿವೆ. ಆದರೆ ಈ ಬಾರಿ ಯುಪಿಎ, ತೃತೀಯ ರಂಗದ ಸಮ್ಮಿಶ್ರಣವಾಗಿ ಮಹಾಘಟ ಬಂಧನಕ್ಕೆ ವೇದಿಕೆ ಸಜ್ಜಾಗುತ್ತಿದೆ. ಈ ವೇದಿಕೆಯಲ್ಲಿ ಕಾಂಗ್ರೆಸ್ ಪ್ರಮುಖವಾಗಿ ಕಾಣಿಸಿಕೊಂಡಿದೆ. ಆದರೆ ಮೈತ್ರಿಗಿಂತ ಕಾಂಗ್ರೆಸ್ ಸ್ವಂತವಾಗಿ ಚುನಾವಣೆಗೆ ಹೋಗಿದ್ದರೆ ಲೇಸಿತ್ತೇ ಎನ್ನುವ ಮಾತುಗಳು ಈಗೀಗ ಶುರುವಾಗುತ್ತಿದೆ.

ಒಂದು ಕಾಲದಲ್ಲಿ ಇಡೀ ದೇಶ ಆಳಿದ್ದ ಕಾಂಗ್ರೆಸ್ ಕಳೆದ ಒಂದು ದಶಕದಿಂದ ಅಸ್ತಿತ್ವ ಉಳಿಸಿಕೊಳ್ಳುವ ಹಂತ ಬಂದು ನಿಂತಿದೆ. ಭಾರತವೆಂದರೆ ಕಾಂಗ್ರೆಸ್, ಇಂಡಿಯಾ ಎಂದರೆ ಇಂದಿರಾ ಎನ್ನುವ ಪರಿಸ್ಥಿತಿ ಹೋಗಿ, ಮಿತ್ರಪಕ್ಷಗಳ ಕೂಟದಲ್ಲಿ ಬೇಕಿದ್ದರೆ ಬಂದು ಸೇರಲು ಎನ್ನುವ ಹಂತಕ್ಕೆ ಕಾಂಗ್ರೆಸ್ ಅಧಃಪತನ ಕಂಡಿದೆ. ಇಷ್ಟಾದರೂ ರಾಷ್ಟ್ರದಲ್ಲಿ ಕಾಂಗ್ರೆಸ್‌ನೊಂದಿಗೆ ಈಗಲೂ ‘ಸಾಂಪ್ರದಾಯಿಕ ಮತ’ ದಾರರ ಸಂಖ್ಯೆ ಕಡಿಮೆಯಾಗಿಲ್ಲ ಹೀಗಿರುವಾಗ, ಮಹಾ ಘಟಬಂಧನದೊಂದಿಗೆ ಅತ್ತು ಕರೆದು ಹೋಗುವುದಕ್ಕಿಂತ ಸ್ವಂತವಾಗಿ ಸ್ಪರ್ಧಿಸ ಬಹುದಾಗಿತ್ತು ಎನ್ನುವ ಮಾತುಗಳು ಕಾಂಗ್ರೆಸ್ ಪಾಳಿಯಲ್ಲಿ ಶುರುವಾಗಿದೆ.

ಹಾಗೇ ನೋಡಿದರೆ, ೨೦೦೮ರವರೆಗೆ ಯುಪಿಎ ಮೈತ್ರಿ ಯೊಂದಿಗೆ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿತ್ತ. ಆ ಎಲ್ಲ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷೀಯ ಸ್ಥಿತಿ ಯಲ್ಲಿ ಇರುತ್ತಿತ್ತು. ಕಾಂಗ್ರೆಸ್‌ನೊಂದಿಗೆ ಪ್ರಾದೇಶಿಕ ಪಕ್ಷಗಳು ಸೇರಿಕೊಂಡು ಚುನಾವಣೆ ಎದುರಿಸಿ, ಆಡಳಿತ ಅಥವಾ ಪ್ರತಿಪಕ್ಷ ಸ್ಥಾನದಲ್ಲಿ ಕೂರುತ್ತಿತ್ತು. ಈ ಎಲ್ಲ ಸಮಯ ದಲ್ಲಿಯೂ ಕಾಂಗ್ರೆಸ್ ವರಿಷ್ಠರು ಹೇಳಿದ ಮಾತೇ ಅಂತಿಮ ಎನ್ನುವ ಸ್ಥಿತಿಯಿತ್ತು. ೨೦೧೯ರ ಚುನಾವಣೆಯಲ್ಲಿಯೂ ಇದೇ ಪರಿಸ್ಥಿತಿಯಿತ್ತು. ಆಗಲೂ ಯುಪಿಎ ಬದಲಿಗೆ ಮಹಾಘಟಬಂಧನವನ್ನು ಮಾಡಿಕೊಂಡಿದ್ದರೂ ಕಾಂಗ್ರೆಸ್ ‘ಲೀಡ್’ ತೆಗೆದುಕೊಂಡಿತ್ತು.

ಆದರೆ ೨೦೧೯ರ ಹೀನಾಯ ಸೋಲಿನಿಂದ, ಈ ಬಾರಿ ಕಾಂಗ್ರೆಸ್‌ಗೆ ನಾಯಕತ್ವದ ಕೊಡಲು ಘಟಬಂಧನದ ಮಿತ್ರಪಕ್ಷಗಳು ಹಿಂದೇಟು ಹಾಕುತ್ತಿವೆ. ಇಷ್ಟಾದರೂ,
ಕಾಂಗ್ರೆಸ್ ನಾಯಕರೇ ‘ಯಾರದ್ದೇ ನಾಯಕತ್ವವಾಗಲಿ, ಮೋದಿ ಸೋಲಲಿ’ ಎನ್ನುವ ಮನಃಸ್ಥಿತಿಯಲ್ಲಿ ಇತರೆ ಪ್ರಾದೇಶಿಕ ಪಕ್ಷಗಳ ಹಿಂದೆ ಬೀಳುವ ಸ್ಥಿತಿ ಎದುರಾಗಿರುವುದು ಕಾಂಗ್ರೆಸ್ ಪಾಲಿಗೆ ಬಹುದೊಡ್ಡ ಹಿನ್ನಡೆ ಎನ್ನುವ ವಿಶ್ಲೇಷಣೆಗಳು ಶುರುವಾಗಿದೆ. ಹೌದು, ಕಾಂಗ್ರೆಸ್ ವರಿಷ್ಠರು ಮಹಾಮೈತ್ರಿಗೆ ‘ಷರತ್ತಿ’
ಲ್ಲದೇ ಒಪ್ಪಿಕೊಂಡಿರುವುದಕ್ಕೆ ಹಲವು ಕಾರಣಗಳಿರಬಹುದು. ಆದರೆ ಈ ರೀತಿ ಒಪ್ಪಿಕೊಳ್ಳುವ ಮೂಲಕ, ಐತಿಹಾಸಿಕ ಪಕ್ಷವೊಂದು ತನ್ನ ಬಲವನ್ನೇ ಮರೆಯು ತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸ್ವಂತ ಬಲದಲ್ಲಿ ಅಧಿಕಾರದ ಗದ್ದುಗೆ ಏರುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ. ಆದರೆ, ಕನಿಷ್ಠ ತನ್ನ ತನವನ್ನಾದರೂ ಉಳಿಸಿಕೊಳ್ಳಬಹುದು ಎನ್ನುವ ಮಾತುಗಳು ಶುರುವಾಗಿದೆ.

ಹಾಗೇ ನೋಡಿದರೆ ಕಳೆದ ಐದಾರು ವರ್ಷದಿಂದ ರಾಷ್ಟ್ರ ರಾಜಕಾರಣದಲ್ಲಿ ಆಗಾಗ್ಗೆ ಕೇಳಿಬರುತ್ತಿರುವ ಈ ಮಹಾ ಘಟಬಂಧನ ವಿಚಿತ್ರ ರೀತಿಯ ಮೈತ್ರಿ ಎಂದರೆ ತಪ್ಪಾಗುವುದಿಲ್ಲ. ಆದರೆ ಈ ಮೈತ್ರಿಯ ಏಕೈಕ ಮೂಲ ಉದ್ದೇಶ ವೆಂದರೆ, ಮೋದಿ ಹಾಗೂ ಬಿಜೆಪಿಯನ್ನು ಮಣಿಸುವುದಾಗಿದೆ. ಆ ಕಾರಣಕ್ಕಾಗಿಯೇ, ಹಲವು ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದರೂ, ಆ ಎಲ್ಲವನ್ನು ಬದಿಗಿಟ್ಟು ರಾಷ್ಟ್ರ ಹಲವು ಪಕ್ಷಗಳು ಒಂದಾಗಿವೆ. ಈ ಮೈತ್ರಿಯಲ್ಲಿ ಕಾಂಗ್ರೆಸ್ ಹೊರತುಪಡಿಸಿದರೆ, ಇನ್ನುಳಿದ ಬಹುತೇಕ ಪಕ್ಷಗಳು ಪ್ರಾದೇಶಿಕ ಪಕ್ಷಗಳು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಈ ಮಹಾಮೈತ್ರಿಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರಿಗಿಂತ ಹೆಚ್ಚು ಉತ್ಸಾಹವನ್ನು ತೋರಿರುವುದು ರಾಹುಲ್ ಗಾಂಧಿ ಹಾಗೂ ಇಂದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್, ಇದೀಗ ಮೈತ್ರಿಯ ಆಸರೆಯೊಂದಿಗೆ ಎಲ್ಲ ರಾಜ್ಯಗಳಲ್ಲಿಯೂ ತನ್ನ ಅಸ್ವಿತ್ಥವನ್ನು ‘ಮರು ಸ್ಥಾಪಿಸುವ’ ಲೆಕ್ಕಾಚಾರದಲ್ಲಿದೆ. ಆದರೆ ಹಲವು ಕಾಂಗ್ರೆಸ್ ನಾಯಕರ ಪ್ರಕಾರ, ಈ ರೀತಿ ಅಸ್ವಿತ್ಥ ಮರುಸ್ಥಾಪಿಸುವ ಉತ್ಸಾಹದಲ್ಲಿ, ಸ್ವಂತ ಬಲದಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲುವ ಅವಕಾಶ ಕಳೆದುಕೊಳ್ಳುವ ಸಾಧ್ಯತೆಯಿದೆ.

ಇದರೊಂದಿಗೆ ಕಾಂಗ್ರೆಸ್‌ಗೆ ಪೂರಕ ವಾತಾವರಣವಿರುವ ರಾಜ್ಯಗಳಲ್ಲಿಯೂ ‘ಸೀಟು ಹಂಚಿಕೆ’ಯ ನೆಪದಲ್ಲಿ ಮೈತ್ರಿ ಪಕ್ಷಗಳಿಗೆ ಕ್ಷೇತ್ರ ಬಿಟ್ಟುಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ರೀತಿ ಒಮ್ಮೆ ಕ್ಷೇತ್ರ ಬಿಟ್ಟುಕೊಟ್ಟ ಬಳಿಕ ಆ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಗೆದ್ದರೂ, ಸೋತರು ಕಾಂಗ್ರೆಸ್‌ನ ಸಂಘಟನೆ
ನೆಲಕಚ್ಚುವುದು ನಿಶ್ಚಿತ ಎನ್ನುವ ಆತಂಕ ಹಲವರಲ್ಲಿದೆ. ಇನ್ನು ಈಗಾಗಲೇ ಸಾಲು ಸಾಲು ಸೋಲುಗಳಿಂದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ತೀರಾ ಕೆಟ್ಟ ಫಲಿತಾಂಶದೊಂದಿಗೆ ಕೈಕಟ್ಟಿ ಕುಳಿತಿದೆ. ಇದರೊಂದಿಗೆ ರಾಹುಲ್ ಗಾಂಧಿ ಅವರು ಅಧ್ಯಕ್ಷರಾದ ಬಳಿಕ ಸತತ ಎರಡು ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ, ಸಂಘಟನೆ ವಿಷಯದಲ್ಲಿ ಸೊರಗಿರುವುದು ನಿಜ.

ಆದರೆ ಕರ್ನಾಟಕ ಸೇರಿದಂತೆ ಹಲವು ರಾಜ್ಯದಲ್ಲಿ ಈಗಲೂ ಕಾಂಗ್ರೆಸ್ ಸಂಘಟನೆ ಉತ್ತಮ ರೀತಿಯಲ್ಲಿದ್ದು, ಆ ರಾಜ್ಯಗಳಲ್ಲಿ ಈ ಬಾರಿ ಕಾಂಗ್ರೆಸ್‌ಗೆ ‘ಪ್ಲಸ್’ ಆಗುವ ಸಾಧ್ಯತೆಯೇ ಹೆಚ್ಚಿತ್ತು. ಇದೀಗ ಮಹಾಘಟಬಂಧನದಿಂದ ಉತ್ತಮ ಸಂಘಟನೆಯಿರುವ ರಾಜ್ಯಗಳಲ್ಲಿಯೂ ‘ಸೀಟು ಹಂಚಿಕೆ’ಯ ನೆಪದಲ್ಲಿ ಕೆಲವೊಂದು ಕ್ಷೇತ್ರಗಳನ್ನು ಬಿಟ್ಟುಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.

ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಕೇರಳ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಲೂ ಸ್ವಂತ ಬಲದಲ್ಲಿ ಚುನಾವಣೆ ಎದುರಿಸಿದರೆ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಆದರೆ ಮಹಾಘಟಬಂಧನದೊಂದಿಗೆ ಹೋದರೆ, ಮತ ಧ್ರುವೀಕರಣ ಲೆಕ್ಕಾಚಾರ ಆಚೀಚೆ ಯಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ, ಬಿಹಾರದಲ್ಲಿ ಜೆಡಿಯು, ಕರ್ನಾಟಕ, ಪಂಜಾಬ್‌ನಲ್ಲಿ ಆಮ್
ಆದ್ಮಿ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವುದರಿಂದ, ಗೆಲ್ಲುವ ಸಾಧ್ಯತೆಗಿಂತ ಹೆಚ್ಚಾಗಿ ಪ್ರತಿಪಕ್ಷ ಬಿಜೆಪಿಗೆ ಮತ ಧ್ರುವೀ ಕರಣಕ್ಕೆ ಸಹಾಯ ಮಾಡಿದಂತಾಗುತ್ತದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಕರ್ನಾಟಕ ಸೇರಿದಂತೆ ದೇಶದ ನಾಲ್ಕು ರಾಜ್ಯಗಳಲ್ಲಿ ಸ್ವಾತಂತ್ರ್ಯವಾಗಿ ಕಾಂಗ್ರೆಸ್ ಅಧಿಕಾರವನ್ನು ನಡೆಸುತ್ತಿದೆ. ಈ ನಾಲ್ಕು ರಾಜ್ಯಗಳಲ್ಲಿಯೇ ಸುಮಾರು ೬೮ರಿಂದ ೭೦ ಲೋಕಸಭಾ ಸೀಟುಗಳಿವೆ. ಇನ್ನು ಅಧಿಕೃತ ಪ್ರತಿಪಕ್ಷವಾಗಿ ನಾಲ್ಕು ರಾಜ್ಯಗಳಲ್ಲಿದ್ದು, ಅಲ್ಲಿ ಸುಮಾರು ೫೭ ರಿಂದ ೬೦ ಲೋಕಸಭಾ ಕ್ಷೇತ್ರಗಳಿವೆ. ಇನ್ನುಳಿದಂತೆ ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ಗೆ ಪೂರಕವಾಗಿರುವ ೭೦ರಿಂದ ೯೦ ಕ್ಷೇತ್ರಗಳಿವೆ ಎನ್ನುವ ಲೆಕ್ಕಾಚಾರವಿದೆ. ಈ ಎಲ್ಲ ಕ್ಷೇತ್ರಗಳಲ್ಲಿಯೂ
ಕಾಂಗ್ರೆಸ್ ಗೆಲ್ಲುತ್ತದೆ ಎನ್ನುವುದಕ್ಕಿಂತ ‘ಮೈತ್ರಿ’ಯ ಅನಿವಾರ್ಯತೆಯಿಲ್ಲ. ಆದರೀಗ ಘಟಬಂಧನದಲ್ಲಿ ಸಿಲುಕಿರುವುದರಿಂದ ಕಾಂಗ್ರೆಸ್‌ನ ಸಂಘಟನೆಯಿರುವ ಈ ರಾಜ್ಯಗಳಲ್ಲಿ ಕೆಲವೊಂದು ಕ್ಷೇತ್ರವನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡಬೇಕಾಗುತ್ತದೆ.

ಹಿಂದಿನ ಕಾಂಗ್ರೆಸ್ ಆಗಿದ್ದರೆ, ಸೀಟು ಬಿಟ್ಟು ಕೊಟ್ಟರೂ, ಪಕ್ಷದ ಸಂಘಟನೆ ಹಾಗೂ ಛರಿಸ್ಮ ಉಳಿಸಿಕೊಳ್ಳುವುದು ದೊಡ್ಡ ವಿಷಯವಾಗಿರಲಿಲ್ಲ. ಆದರೀಗ, ಛಾಪ
ಮಾಸಿರುವುದರಿಂದ ಸಂಘಟನೆಯಿರುವ ಕ್ಷೇತ್ರವನ್ನು ಒಮ್ಮೆ ಬಿಟ್ಟುಕೊಟ್ಟರೆ ಇನ್ನೆಂದು ಏಳಲು ಸಾಧ್ಯವಾಗದ ಆತಂಕ ಹಲವು ಕಾಂಗ್ರೆಸಿಗರಲ್ಲಿದೆ. ಈ ನಡುವೆ ಮತ್ತೊಂದು ಸಮಸ್ಯೆ ಎಂದರೆ ಮೊದಲೇ ಹೇಳಿದಂತೆ ಮಹಾಘಟಬಂಧನದಲ್ಲಿರುವ ಪಕ್ಷಗಳು ಪ್ರಾದೇಶಿಕ ಪಕ್ಷಗಳಾಗಿವೆ. ಒಂದೇ ರಾಜ್ಯದಲ್ಲಿ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳು ಈ ಮಿತ್ರಪಾಳೆಯದಲ್ಲಿವೆ. ಈ ಎರಡರೊಂದಿಗೆ ಕಾಂಗ್ರೆಸ್ ಸಹ ಇರುವುದರಿಂದ, ಸೀಟು ಹಂಚಿಕೆ ವಿಷಯದಲ್ಲಿ ಗೊಂದಲವಾಗುವುದು ನಿಶ್ಚಿತ. ಈ ಹಿಂದಿನ ಯುಪಿಎ ಅವಧಿಯಲ್ಲಾದರೆ, ಕಾಂಗ್ರೆಸ್ ಅಧಿನಾಯಕಿ ಹೇಳಿದ ಮಾತಿಗೆ ಒಪ್ಪಿಕೊಂಡು ಮಿತ್ರಪಕ್ಷಗಳು ಹೋಗುತ್ತಿದ್ದವು.

ಆದರೀಗ, ಆ ರೀತಿಯ ‘ಕಮ್ಯಾಡಿಂಗ್’ ಸ್ಥಿತಿಯಲ್ಲಿ ಕಾಂಗ್ರೆಸ್ ಉಳಿದಿಲ್ಲ. ಆದ್ದರಿಂದ ಈ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ತನ್ನ ಕೆಲವೊಂದು ಸೀಟುಗಳನ್ನು
ಕಳೆದುಕೊಂಡರೂ ಅಚ್ಚರಿಯಿಲ್ಲ ಎನ್ನುವ ಅನುಮಾನಗಳು ಶುರುವಾಗಿದೆ. ಈ ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಿರುವ ಅಂಶವೆಂದರೆ, ಕಾಂಗ್ರೆಸ್ ನೇತೃತ್ವದಲ್ಲಿ ಬಿಜೆಪಿಯೇತರ ಪಕ್ಷಗಳು ಒಂದಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆ ಬಿಜೆಪಿ ನಾಯಕರೂ ಅಲರ್ಟ್ ಆಗಿದ್ದು, ಎನ್‌ಡಿಎ ಕೂಟವನ್ನು
ಗಟ್ಟಿಗೊಳಿಸಿಕೊಳ್ಳುವುದರೊಂದಿಗೆ ವಿಸ್ತರಿಸುವ ಪ್ರಯತ್ನವನ್ನು ಮಾಡುತ್ತಿದೆ.

ಮಹಾಘಟಬಂಧನದಲ್ಲಿ ‘ನಾಯಕತ್ವದ’ ಕೊರತೆಯಿರುವುದರಿಂದ ಸಹಜವಾಗಿಯೇ ತಟಸ್ಥವಾಗಿರುವ ಹಲವು ಪಕ್ಷಗಳು ಎನ್‌ಡಿಎಯತ್ತ ವಾಲುತ್ತಿದೆ. ಇದೇ ಕಾರಣಕ್ಕಾಗಿ ಮೈತ್ರಿಕೂಟಕ್ಕೆ ಠಕ್ಕರ್ ಕೊಡುವ ಉದ್ದೇಶದಿಂದಲೇ, ಮಂಗಳವಾರ ಬಿಜೆಪಿ ಎನ್‌ಡಿಎ ಸಭೆಯನ್ನು ಕರೆದಿದೆ. ಹಾಗೇ ನೋಡಿದರೆ, ಎನ್‌ಡಿಎ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಅಥವಾ ನಾಯಕತ್ವದ ಕೊರತೆಯಿಲ್ಲ. ಆದರೆ ಇದಕ್ಕೆ ತತ್ವಿರುದ್ಧ ಎನ್ನುವಂತೆ ಮಹಾಮೈತ್ರಿಯ ನಾಯಕತ್ವ ವನ್ನು ಕಾಂಗ್ರೆಸ್ ನೀಡಲು ಮಹಾಘಟಬಂಧನದ ಬಹುತೇಕ ನಾಯಕರು ಮೂಗು ಮುರಿಯುತ್ತಿದ್ದಾರೆ. ಆದ್ದರಿಂದ ಸಹಜವಾಗಿಯೇ, ಸ್ವಾತಂತ್ರ್ಯಪೂರ್ವ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್‌ಗೆ ‘ಅಸ್ವಿತ್ಥ’ಕ್ಕೆ ಹೊಡೆತ ಬೀಳುವುದು ನಿಶ್ಚಿತ ಎನ್ನಬಹುದು.

ಹಾಗೆಂದು, ೨೦೧೯ರ ಇದೇ ಮಹಾಘಟಬಂಧನದ ನೇತೃತ್ವವಹಿಸಿದ್ದ ಕಾಂಗ್ರೆಸ್, ಕಳಪೆ ಪ್ರದರ್ಶನ ನೀಡಿದ್ದರಿಂದ ಇದೀಗ ತನ್ನ ನೇತೃತ್ವದಲ್ಲಿಯೇ ಚುನಾ
ವಣೆಗೆ ಧುಮುಕಬೇಕು ಎಂದು ಕ್ಲೇಮ್ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗೆಂದು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೇ ಚುನಾವಣೆಗೆ ಹೋಗಿ ಕನಿಷ್ಠ ನೂರು ಸೀಟು ಪಡೆದುಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲವಾಗಿದೆ. ಅಂದ ಮಾತ್ರಕ್ಕೆ ಮಹಾಮೈತ್ರಿಯೊಂದಿಗೆ ಚುನಾವಣೆಗೆ ಹೋದರೆ, ‘ಐಡೆಂಟಿಟಿ ಕ್ರೈಸಿಸ್’ ಎದುರಿಸುವ ಆತಂಕ ಎದುರಾಗಿದೆ. ಈ ಎರಡನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕು ಎನ್ನುವ ಗೊಂದಲದಲ್ಲಿಯೇ ಕಾಂಗ್ರೆಸ್‌ನ ಹಲವು ನಾಯಕರಿದ್ದಾರೆ. ಈ
ಎಲ್ಲವನ್ನು ಮೀರಿ ಮಹಾಘಟಬಂಧನ, ಚುನಾವಣೆ ಮುಗಿಯುವ ಗಟ್ಟಿಯಾಗಿಯೇ ಇರುವುದೇ ಅಥವಾ ಈಗಾಗಲೇ ಶುರುವಾಗಿ ‘ಆಂತರಿಕ ಕಿತ್ತಾಟ’ದಿಂದ ತಂತ್ರ-ಪ್ರತಿತಂತ್ರದ ಸಭೆಗಿಂತ ಹೆಚ್ಚಾಗಿ ‘ಸಂಧಾನ’ ಸಭೆಯಲ್ಲಿಯೇ ಸಮಯ ಹೋಗುವುದೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ಈ ಎಲ್ಲ ಸೂತ್ರಗಳ ನಡುವೆ ಮೊದಲ ದಿನದಿಂದಲೂ ಏಳುತ್ತಿರುವ ಮೂಲ ಪ್ರಶ್ನೆಯೆಂದರೆ, ಮಿತ್ರಪಕ್ಷಗಳ ಪ್ರಧಾನಿ ಅಭ್ಯರ್ಥಿಯನ್ನಾಗಿ ಯಾರನ್ನು ಮುನ್ನಲೆಗೆ ಬಿಡ
ಬೇಕು ಎನ್ನುವುದಾಗಿದೆ. ೨೦೧೯ರಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣೆ ನಡೆಸಿ, ಮಕಾಡೆ ಮಲಗಿದ ಬಳಿಕ ಹಲವು ಮಿತ್ರಪಕ್ಷಗಳಿಗೆ ಕಾಂಗ್ರೆಸ್‌ಯೇತರ ಪ್ರಧಾನಿ ಎನ್ನುವ ಪ್ರಸ್ತಾಪವನ್ನು ಮುಂದಿಡುತ್ತಿದೆ. ಇದಕ್ಕೆ ಸರಿಯಾಗಿ, ಮಾನ ಹಾನಿ ಮೊಕದ್ದಮೆಯ ಪ್ರಕರಣದಲ್ಲಿ ಎರಡು ವರ್ಷ ಅನರ್ಹತೆಗೆ ಒಳಗಾಗಿರುವು ದರಿಂದ, ೨೦೨೪ರ ಚುನಾವಣೆ ಯಲ್ಲಿ ರಾಹುಲ್ ಸ್ಪಽಸಲು ಸಾಧ್ಯವಿಲ್ಲ.

ಆದ್ದರಿಂದ ಇದೀಗ ಪ್ರಧಾನಿ ಅಭ್ಯರ್ಥಿ ಯಾರಾದರೂ ಆಗಲಿ ಎನ್ನುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ ಕಾಂಗ್ರೆಸ್ ನಾಯಕರ ಏಕಮೇವ ಅಜೆಂಡಾವೆಂದರೆ ‘ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಏರಬಾರದು’ ಎನ್ನುವುದು ಮಾತ್ರ ಆಗಿದೆ. ಆದ್ದರಿಂದ ಸ್ವಂತ ಬಲದಲ್ಲಿ ಚುನಾವಣೆ ಹೋಗುವುದು ಸೂಕ್ತ ಎನ್ನುವುದು ಹಲವು ನಾಯಕರ ಅಭಿಪ್ರಾಯವಾಗಿದ್ದರೂ, ‘ಮಹಾ ಘಟಬಂಧನ’ದ ಎಲ್ಲ ಬಂಧನವನ್ನು ಒಪ್ಪಿಕೊಂಡು ಕಾಂಗ್ರೆಸ್ ಮುಂದು ವರಿಯುವ ತೀರ್ಮಾನಕ್ಕೆ ಬಂದಿದೆಯೇ ಎನ್ನುವ ಅನುಮಾನ ಕಾಂಗ್ರೆಸ್ ನಾಯಕರಲ್ಲಿಯೇ ಶುರುವಾಗಿದೆ.