Saturday, 21st September 2024

ಗಾಯನ ಪ್ರಪಂಚದ ಪ್ರಖ್ಯಾತ ಗಾಯಕ

ಅವಲೋಕನ
ಸುರೇಶ ಗುದಗನವರ

ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸಾಧನೆಗೆ ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಗೌರವ ಪ್ರಶಸ್ತಿಗಳು ಹುಡಕಿ ಕೊಂಡು ಬಂದಿದೆ. ಅವರು ಒಟ್ಟು ಆರು ರಾಷ್ಟ್ರ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, 25 ಬಾರಿ ಆಂಧ್ರಪ್ರದೇಶ ಸರಕಾರದ ನಂದಿ ಪ್ರಶಸ್ತಿ, ಹಲವು ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಅಲ್ಲದೇ 4 ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿಯಾಗಿ ದ್ದಾರೆ.

ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇ ಲಿಯೇ ಚಿತ್ರಗಳ
ಹಾಡುಗಳಿಗೆ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಗಾಯನದ ಮೂಲಕ ಪ್ರಪಂಚದಾದ್ಯಂತ ಸಂಗೀತ ಪ್ರೇಮಿಗಳ ಹೃದಯದಲ್ಲಿ
ಮನೆಮಾಡಿರುವ ಭಾರತದ ಹೆಮ್ಮೆಯ, ಸುಪ್ರಸಿದ್ಧ ಹಿನ್ನೆಲೆ ಗಾಯಕ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ. ಅವರು ಹಾಡದೇ
ಇರುವ ಶೈಲಿಯೇ ಇಲ್ಲ. ಅವರು ತಮ್ಮ ಅಭೂತಪೂರ್ವವಾದ ಕಂಠಸಿರಿಯ ಮೂಲಕ ಸಂಗೀತಾಸಕ್ತರ ಹೃದಯ ಸಿಂಹಾಸನ ದಲ್ಲಿ ಆರಾಧ್ಯದೈವವಾಗಿ ನೆಲೆಸಿರುವರು.

ಮೂಲತಃ ಆಂಧ್ರ ಪ್ರದೇಶದವರಾದ ಇವರು 1946ರ ಜೂನ್ 4ರಂದು ಚಿತ್ತೂರಿನ ಕೊನೆಚಮ್ಮ ಪೇಟಾ ಎಂಬಲ್ಲಿ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು. ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ ಎಂಬುದು ಅವರ ಪೂರ್ಣನಾಮ ಇವರ ತಂದೆ ಎಸ್.ಪಿ. ಸಾಂಬವಮೂರ್ತಿ ಮತ್ತು ತಾಯಿ ಕಮಲೇಶ್ವರಿಯವರು. ತಂದೆ ಸಾಂಬವಮೂರ್ತಿಯವರು ಹರಿಕಥಾ ವಿದ್ವಾಂಸರು. ಚೆನೈನಲ್ಲಿ ವಿದ್ಯಾಭ್ಯಾಸ ಮಾಡಿ ಎಂಜಿನಿಯರಿಂಗ್ ಪದವಿ ಪಡೆದರು. ಅವರು ಹಾರ್ಮೋನಿಯಂ, ಕೊಳಲು ಗಳನ್ನು ತಮ್ಮಷ್ಟಕ್ಕೆ ತಾವೇ ನುಡಿಸುತ್ತಿದ್ದರು. ಇವರ ತಂದೆಯವರಿಂದ ಪ್ರೇರಿತರಾಗಿ ಸಂಗೀತವನ್ನು ಅಧ್ಯಯನ ಮಾಡಿದರು. ವಿದ್ಯಾರ್ಥಿಯಾಗಿದ್ದಾಗಲೇ ತಾವೇ ಗೀತೆಯೊಂದನ್ನು ರಚಿಸಿ ಹಾಡಿ, ತೀರ್ಪುಗಾರರಾಗಿದ್ದ ಖ್ಯಾತ ಹಿನ್ನೆಲೆ ಗಾಯಕ ಘಂಟಸಾಲ ಮತ್ತು ಕೋದಂಡಪಾಣಿ ಅವರಿಂದ ಮೆಚ್ಚುಗೆ ಪಡೆದರು ತದನಂತರ ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರದಲ್ಲಿ ಬಾಲಸುಬ್ರಹ್ಮಣ್ಯಂರವರಿಗೆ ಹಾಡಲು ಅವಕಾಶ ನೀಡಿದರು.

ಕಳೆದ ಐದು ದಶಕಗಳಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂರವರು ಕನ್ನಡ, ತಮಿಳು, ತೆಲಗು, ಮಲೆಯಾಳಂ, ಹಿಂದಿ, ತುಳು, ಕೊಂಕಣಿ, ಬೆಂಗಾಲಿ ಸೇರಿದಂತೆ 15ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದಾರೆ. ಅವರು ಚಿತ್ರಗೀತೆ, ಭಕ್ತಿಗೀತೆ, ಭಾವಗೀತೆ, ರಾಷ್ಟ್ರಭಕ್ತಿ ಗೀತೆ ಹೀಗೆ ವಿವಿಧ ಪ್ರಕಾರಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಪ್ರಖ್ಯಾತಿಯಾಗಿದ್ದಾರೆ. ಅಲ್ಲದೇ ಬಾಲ ಸುಬ್ರಹ್ಮಣ್ಯಂರವರು ತಮಿಳು, ತೆಲುಗು ಭಾಷೆಯಲ್ಲಿ ಒಂದೇ ದಿನದಲ್ಲಿ 19 ಗೀತೆಗಳನ್ನು ಹಾಡಿದ್ದರು, ಕನ್ನಡದಲ್ಲಿ
ಒಂದೇ ದಿನ 17 ಗೀತೆಗಳನ್ನು ಹಾಡಿದ್ದಾರೆ.

ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳನ್ನು ಧ್ವನಿ ಮುದ್ರಿಸಿದ್ದರು. ಇದು ಎಸ್.ಪಿ. ಬಾಲಸುಬ್ರಹ್ಮಣ್ಯಂರವರ ಸಾಮರ್ಥ್ಯ ಮತ್ತು
ಅವರಿಗದ್ದ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ. ಕನ್ನಡದಲ್ಲಿ ಅವರು ಮೊದಲು ಹಾಡಿದ್ದು ‘ನಕ್ಕರೆ ಅದೇ ಸ್ವರ್ಗ’ ಎಂಬ ಹಾಸ್ಯ ಪ್ರಧಾನ ಚಿತ್ರದಲ್ಲಿ ಅಳವಡಿಸಿರುವ ‘ಕನಸಿದೋ ನನಸಿದೋ…’ ಗೀತೆಯನ್ನು ನಟ ಅರುಣಕುಮಾರ ಅವರಿಗಾಗಿ ಹಾಡುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ವಿಶೇಷವೆಂದರೆ ಆಗ ಅವರಿಗೆ ಕನ್ನಡದ ಬಗ್ಗೆ ಎಳ್ಳಷ್ಟೂ ಮಾಹಿತಿಇರಲಿಲ್ಲ. ಆ
ಸಿನಿಮಾದ ಸಂಗೀತ ನಿರ್ದೇಶಕರಾದ ರಂಗರಾಯರು ಧೈರ್ಯ ತುಂಬಿ ಹಾಡಿಸಿದ್ದರು. ಇದು ಅವರ ವೃತ್ತಿ ಬದುಕಿನ ಎರಡನೆಯ ಹಾಡು ಎನ್ನುವದು ವಿಶೇಷ.

ಅನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಕನ್ನಡದ ಎಲ್ಲಾ ಪ್ರಮುಖ ನಾಯಕ ನಟರಿಗೆ ಅವರು ಧ್ವನಿಯಾಗಿದ್ದಾರೆ. ಹಿಂದಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳ 120ಕ್ಕೂ ಹೆಚ್ಚು ಮುಂಚೂಣಿ ನಾಯಕನಟರಿಗೆ ಅವರು ಹಾಡಿದ್ದಾರೆ ಎನ್ನುವುದು
ಅಪರೂಪದ ದಾಖಲೆಯೇ ಸರಿ. ಮೂರು ಪೀಳಿಗೆಯ ನಾಯಕ ನಟರಿಗಾಗಿ ಹಾಡಿರುವುದು ಇವರ ಹೆಗ್ಗಳಿಕೆ, ದೇವರಗುಡಿ ಚಲನಚಿತ್ರದ ‘ಮಾಮರವೆಲ್ಲೋ ಕೋಗಿಲೆಯಲ್ಲೋ’, ಹೊಂಬಿಸಿಲು ಚಿತ್ರದ ‘ನೀರ ಬಿಟ್ಟು ನೆಲದ ಮೇಲೆ ಡೋಣಿ ಸಾಗದು’ ಮತ್ತು ಬಂಧನ ಚಿತ್ರದ ‘ನೂರೆಂಟು ನೆನಪು ಎದೆಯಾಳದಿಂದ’, ‘ಎಲ್ಲಿರುವೆ ಮನವ ಕಾಡುವ ರೂಪಸಿಯೇ’ ಮುಂತಾದ ಮಧುರ ಗೀತೆಗಳನ್ನು ಹಾಡಿ ಸಂಗೀತಾಸಕ್ತರ ಹೃದಯವನ್ನು ಕದಿಯುವಲ್ಲಿ ಯಶಸ್ವಿಯಾದರು.

ಅಲ್ಲದೇ ಹಿಂದಿಯಲ್ಲಿ ‘ಏಕ್ ದೂಜೇ ಕೆ ಲಿಯೇ’, ‘ಸಾಜನ್’, ‘ಮೈ ನೇ ಪ್ಯಾರ ಕಿಯಾ’ ಮುಂತಾದ ಚಿತ್ರಗಳಿಗೆ ಹಾಡಿ ಹಿಂದಿ ಚಿತ್ರರಂಗವನ್ನು ತಮ್ಮ ಮೋಡಿಗೆ ಸೆಳೆದುಕೊಂಡರು. ಅವರು ಕರ್ನಾಟಕ ಶಾಸ್ತ್ರೀಯ, ಹಿಂದೂಸ್ಥಾನಿ, ಘಜಲ್, ಪಾಶ್ಚಾತ್ಯ, ಮೆಲೋಡಿ, ಅಬ್ಬರದ ಸ್ಥಾಯಿಯ ಹಾಡುಗಳು, ಅಭಿನಯ, ಸಂಗೀತ ನಿರ್ದೇಶನ, ಚಿತ್ರ ನಿರ್ಮಾಣ, ನಿರ್ದೇಶನ, ಅನೇಕ
ರಿಯಾಲಿಟಿ ಷೋಗಳಿಗೆ ತೀರ್ಪುಗಾರ, ಹೀಗೆ ಗಿನ್ನೆಸ್ ದಾಖಲೆ ನಿರ್ಮಿಸಿದ ಏಕೈಕ ಗಾಯಕರಾಗಿದ್ದಾರೆ. ಗಾಯನವನ್ನು ಮೀರಿದ  ದೊಡ್ಡತನವೆಂದರೆ ಅದು ಅವರಲ್ಲಿನ ಸಂಸ್ಕಾರ, ಸರಳತೆ, ಸದ್ಗುಣ, ವಿಧೇಯತೆಗಳ ಮೇರು ವ್ಯಕ್ತಿತ್ವ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದ ಮೇಲಿನ ಅವರ ಅತೀವ ಪ್ರೇಮ ಹಾಗೂ ಕನ್ನಡಿಗರ ಬಗೆಗಿನ ಸಾಟಿ ಇಲ್ಲದ ಪ್ರೀತಿ, ಹಿಮಾಲಯದೆತ್ತರದಷ್ಟೂ ಮೇರು
ಪ್ರತಿಭೆಯಾದರೂ ಅವರದು ನನಗೇನೂ ಗೊತ್ತಿಲ್ಲ, ನಾನೇನೂ ಕಲಿತಿಲ್ಲ’ ಎಂಬ ವಿನೀತ ಭಾವ.

ನಾನಿನ್ನೂ ಕಲಿಯುತ್ತಿರುವ ವಿದ್ಯಾರ್ಥಿ ಎಂದು ಹೇಳಿಕೊಳ್ಳುವ ಸೌಜನ್ಯ, ನಮ್ರತೆ ಅವರದು. ಅಭಿನಯ ಇವರ ಮತ್ತೊಂದು  ಪ್ರವೃತ್ತಿ. ತಮಿಳಿನ ‘ಕೇಳಡಿ ಕಣ್ಮಣಿ’ ಚಿತ್ರದಿಂದ ಆರಂಭಿಸಿ ಅನೇಕ ಚಲನಚಿತ್ರಗಳಲ್ಲಿ ಹಾಗೂ ಕಿರುತೆರೆ ಧಾರವಾಹಿಗಳಲ್ಲಿ
ಅಭಿನಯಿಸಿದ್ದಾರೆ. ಬಾಳೊಂದು ಚದುರಂಗ, ಕಲ್ಯಾಣೋತ್ಸವ, ಮುದ್ದಿನ ಮಾವ, ಮಾಂಗಲ್ಯಂ ತಂತು ನಾನೇನ, ದೇವದಾಸ, ಮುಂತಾದ ಚಿತ್ರಗಳಲ್ಲಿ ಮತ್ತು ಹಲವು ಭಕ್ತಿ ಪ್ರಧಾನ, ಸಾಮಾಜಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಮುದ್ದಿನ ಮಾವ’
ಸಿನಿಮಾದಲ್ಲಿ ಅವರು ಅಭಿನಯಿಸಿದ ‘ದೀಪಾವಳಿ ದೀಪಾವಳಿ…’ ಗೀತೆಯನ್ನು ಡಾ.ರಾಜಕುಮಾರ ಹಾಡಿದ್ದರು. ಇದೊಂದು ಅಪರೂಪದ ಸನ್ನಿವೇಶವಾಗಿ ದಾಖಲಾಗಿದೆ.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿರ್ವಹಣೆಯಲ್ಲಿ ಮೂಡಿಬರುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮವನ್ನು ಜನರು ಇಂದೂ ಕೂಡ ಮರೆತಿಲ್ಲ. ದೂರದರ್ಶನದಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವಂತೆ, ಇತರ ಭಾಷೆಗಳಲ್ಲೂ
ಇಂತಹದೇ ಕಾರ್ಯಕ್ರಮಗಳನ್ನು ನಡೆಸಿ ಜನಮಾನಸರಾಗಿದ್ದಾರೆ. ಅವರು ಪುಟ್ಟ ಮಕ್ಕಳಿಂದ ಹಿಡಿದು ಸಂಗೀತ ಕ್ಷೇತ್ರದ ದಿಗ್ಗಜಗಳವರೆಗೆ, ಹಿರಿಯರು ಕಿರಿಯರು ಎಲ್ಲರನ್ನೂ ಗೌರವಪೂರ್ಣವಾಗಿ ಕಾಣುವುದು ವಿಶೇಷವಾಗಿದೆ. ಅಂಗವಿಲಕರಿಗಾಗಿ, ದೀನ ದಲಿತರ, ನೊಂದವರ ಅಭಿವೃದ್ಧಿಗಾಗಿ ಆಯೋಜಿಸುವ ಸಂಗೀತ ಕಾರ್ಯಕ್ರಮಗಳಿಗೆ ಅವರು ಸಂಭಾವನೆ ಪಡೆಯದೇ
ಹಾಡಿ, ಪ್ರಚಾರ ಬಯಸದೇ ಹಲವರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸಾಧನೆಗೆ ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಗೌರವ ಪ್ರಶಸ್ತಿಗಳು ಹುಡಕಿಕೊಂಡು ಬಂದಿದೆ. ಅವರು ಒಟ್ಟು ಆರು ರಾಷ್ಟ್ರ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, 25 ಬಾರಿ ಆಂಧ್ರಪ್ರದೇಶ
ಸರಕಾರದ ನಂದಿ ಪ್ರಶಸ್ತಿ, ಹಲವು ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಅಲ್ಲದೇ 4 ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿಯಾಗಿದ್ದಾರೆ. ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮ, ಸ್ವಾತಿ ಮುತ್ಯಂ, ರುದ್ರವೀಣ, ಏಕ್
ದೂಜೇ ಕೇ ಲಿಯೇ ಚಿತ್ರಗಳ ಹಾಡುಗಳಿಗೆ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

ಎಸ್.ಪಿ.ಬಾಲಸುಬ್ರಹ್ಮಣ್ಯಂರವರಿಗೆ ಈಗ 74 ವರ್ಷಗಳು, ಅವರು ಒಬ್ಬ ಗಾಯಕ ಎನ್ನುವ ಕಾರಣದಿಂದ ಪ್ರಖ್ಯಾತರಾಗಿರುವದು ಎಷ್ಟು ನಿಜವೋ, ಅವರ ಸರಳ ಸ್ವಭಾವವು ಕೂಡ ಅವರನ್ನು ಜನಪ್ರಿಯಗೊಳಿಸಿರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವರು ಮೂಲತಃ ಆಂಧ್ರ ದವರಾದರೂ ಅವರನ್ನು ಕನ್ನಡಿಗರಾಗಿಯೇ ಪ್ರೀತಿಯಿಂದ ಕಂಡವರು ನಾವು. ‘ಕನ್ನಡಿಗರು ಕೊಟ್ಟ ಪ್ರೀತಿ,
ವಾತ್ಸಲ್ಯ ಇಡೀ ದೇಶದಲ್ಲಿಯೇ ನನಗೆ ಸಿಕ್ಕಿಲ್ಲ ಇದನ್ನು ನಾನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ‘ನನ್ನ ಮುಂದಿನ ಜನ್ಮ ಅನ್ನೋದು ಇದ್ದರೇ ಕನ್ನಡನಾಡಲ್ಲೇ ಕನ್ನಡಿಗನಾಗಿ ಹುಟ್ಟಿ ಕನ್ನಡದ ಋಣ ತೀರಿಸುವೆ’ ಎಂದು ಸಮಾರಂಭವೊಂದರಲ್ಲಿ ಅವರ ತಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

ಎಲ್ಲರೂ ಪ್ರೀತಿಯಿಂದ ಕರೆಯುವ ಎಸ್.ಪಿ.ಬಿ. ಗಾಯಕರಾಗಿ ನಟರಾಗಿ ಮತ್ತು ಸಂಗೀತ ನಿರ್ದೇಶಕರಾಗಿ ಬಹುಭಾಷೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಸಾಧನೆಗಳು ಅಪೂರ್ವ ಮತ್ತು ಅವರ್ಣನೀಯ. ದೇಶ ಕಂಡ ಶ್ರೇಷ್ಠ ಸಂಗೀತ ದಿಗ್ಗಜನಿಗೆ ಮನಪೂರ್ವಕ ನಮನಗಳು.