Sunday, 24th November 2024

ಬದಲಾದದ್ದು ಹೆಸರು ಮಾತ್ರ, DNA ಅಲ್ಲ !

ವೀಕೆಂಡ್ ವಿತ್ ಮೋಹನ್

camohanbn@gmail.com

ಲೋಕಸಭಾ ಚುನಾವಣೆ ಹತ್ತಿರ ವಾಗುತ್ತಿದ್ದಂತೆ ಮೋದಿಯವರ ವಿರುದ್ಧ ಅತೃಪ್ತ ಆತ್ಮ ಗಳೆಲ್ಲಾ ಒಂದಾಗುತ್ತಿರುವ ದೃಶ್ಯ ಸಾಮಾನ್ಯವಾಗಿ ಬಿಟ್ಟಿದೆ. ಮೋದಿಯನ್ನು ಹಣಿಯಲು ಪ್ರತಿನಿತ್ಯ ಒಂದಿಲ್ಲೊಂದು ಸಂಚು ಹೂಡುತ್ತಿರುವ ವಿರೋಧಿಗಳು ನಾಲ್ಕೂ ದಿಕ್ಕಿನಲ್ಲೂ ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ನೆಹರುರ ವಂಶಪಾರಂಪರಿಕ ಅಧಿಕಾರ ಅನುಭವಿಸಿಕೊಂಡು ಬಂದ ಕಾಂಗ್ರೆಸ್, ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡುವ ೩ನೇ ಯತ್ನಕ್ಕೆ ಕೈಹಾಕಿದೆ. ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ, ಮಾರ್ಕೆಟಿಂಗ್ ಸಲಹೆಗಾರರ ಸಲಹೆಯ ಮೇರೆಗೆ ತಮ್ಮ ಮಹಾ ಮೈತ್ರಿಕೂಟದ ಹೆಸರು ಬದಲಿಸಿ ಮೋದಿ-ವಿರೋಧಿಗಳು ಒಂದಾಗಿದ್ದಾರೆ. ರಾಜೀವ್ ಗಾಂಧಿ ಯವರ ಪರಮಾಪ್ತ ಸ್ಯಾಮ್ ಪಿತ್ರೋಡ ವಿದೇಶಗಳಲ್ಲಿ ತಮ್ಮ ಗೆಳೆಯನ ಮಗನ ಇಮೇಜ್ ಬದಲಿಸಲು ಕೋಟಿಗಟ್ಟಲೆ ಹಣ ಸುರಿಯು ತ್ತಿದ್ದರೆ, ಇತ್ತ ಭಾರತದಲ್ಲಿ ರಾಹುಲ್ ಇಮೇಜ್ ಬದಲಿಸಲು ಸೋನಿಯಾರ ಸುತ್ತ ಸುತ್ತುತ್ತಿದ್ದಂಥ ಗ್ರಹಗಳೆಲ್ಲವೂ ಹಣ ಸುರಿಯುತ್ತಿವೆ.

ಕಳ್ಳರೆಲ್ಲರೂ ಸೇರಿ ದರೋಡೆಗೆಂದು ರೂಪಿಸಿದ ತಂಡದ ಹೆಸರನ್ನು ‘ಪೊಲೀಸ್’ ಎಂದು ಕರೆದಂತಾಗಿದೆ ವಿಪಕ್ಷಗಳ ಒಕ್ಕೂಟದ ಕಥೆ. ಭಾರತದ ರಾಜಕಾರಣದ ಇತಿಹಾಸವನ್ನು ಗಮನಿಸಿದರೆ, ಗಟ್ಟಿ ನಾಯಕತ್ವ ಇರುವ ಪಕ್ಷಗಳೇ ಅಧಿಕಾರಕ್ಕೆ ಬಂದಿವೆ. ನಾಯಕತ್ವದ ಕೊರತೆಯಿರುವ ಪಕ್ಷಕ್ಕೆ ಮತದಾರರು ಮನ್ನಣೆ ನೀಡಿರುವ ಉದಾಹರಣೆಗಳು ಬೆರಳೆಣಿಕೆಯಷ್ಟು. ಸರಳ ಗಣಿತದ ಮೂಲಕ ವಿಪಕ್ಷಗಳ ಮತಗಳಿಕೆಯನ್ನು ಕೂಡಿಸಿದಷ್ಟು ಸುಲಭದಲ್ಲಿ ನೆಲಮಟ್ಟದಲ್ಲಿ ಮತಗಳು ವರ್ಗಾವಣೆಯಾಗುವುದಿಲ್ಲ. ಕರ್ನಾಟಕವನ್ನು ಗೆದ್ದು ಇಡೀ ದೇಶವನ್ನೇ ಗೆದ್ದಿರುವಂತೆ ಮೆರೆಯುತ್ತಿರುವ ಕಾಂಗ್ರೆಸ್ಸಿಗ ರಿಗೂ ಇದು ಗೊತ್ತಿದ್ದರೂ ಪ್ರಯತ್ನ ಮಾಡಲೇಬೇಕಲ್ಲ.

ರಾಹುಲ್ ಕೃತಕವಾಗಿ ಸೃಷ್ಟಿಯಾಗಿರುವ ರಾಜಕಾರಣಿ, ತಮ್ಮ ಕುಟುಂಬದ ಇತರ ನಾಯಕರಿಗಿದ್ದಂಥ ಸಾಮಾನ್ಯ ರಾಜಕೀಯದ ಅರಿವೂ ಇವರಿಗಿಲ್ಲ. ವಿಪಕ್ಷಗಳ ಒಕ್ಕೂಟದ ಹೆಸರು ಬದಲಾಗಿರಬಹುದು, ಆದರೆ ಅದರ ಪಕ್ಷಗಳ ನಾಯಕರ ಡಿಎನ್‌ಎ ಬದಲಾ ಗುವುದಿಲ್ಲ. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಲು ಕುತಂತ್ರ ನಡೆಸುತ್ತಿರುವ ಪ್ರತ್ಯೇಕತಾವಾದಿಗಳ ಪರವಾಗಿ ನಿಲ್ಲುತ್ತಾ
ಬಂದಿರುವ ಒಮರ್ ಅಬ್ದುಲ್ಲಾ, ಕಾಶ್ಮೀರಕ್ಕಿದ್ದ ಪ್ರತ್ಯೇಕ ಸಂವಿಧಾನವನ್ನು ಬೆಂಬಲಿಸಿಕೊಂಡು ಬಂದ ಮೆಹಬೂಬ ಮುಫ್ತಿ ಇವರ ಡಿಎನ್‌ಎಗಳು ಬದಲಾಗುವುದಿಲ್ಲ. ಮುಫ್ತಿ ಮತ್ತು ಅಬ್ದುಲ್ಲಾ ಕುಟುಂಬದವರು ಪ್ರತ್ಯೇಕತಾವಾದಿಗಳ ಪರ ನಿಂತು ರಾಜಕಾರಣ ಮಾಡುತ್ತಾ ಬಂದವರು.

ಇಂದು ಮೋದಿಯನ್ನು ಮಣಿಸಲು ‘ಇಂಡಿಯ’ ಹೆಸರಲ್ಲಿ ಒಂದಾದ ತಕ್ಷಣ ಅವರಲ್ಲಿರುವ ಭಾರತ-ವಿರೋಧಿ ಮನಸ್ಥಿತಿ ಬದಲಾ
ಗುವುದಿಲ್ಲ. ಮೋದಿ-ವಿರೋಧಿ ಒಕ್ಕೂಟದಲ್ಲಿರುವ ಪ್ರತಿಯೊಬ್ಬರ ಬಯೋಡೇಟಾ ನೋಡಿದರೆ, ಭಾರತದ ಖಜಾನೆಯನ್ನು ಲೂಟಿಮಾಡಿರುವ ಭ್ರಷ್ಟ ಸಾಧನೆಗಳೇ ಸಿಗುತ್ತವೆ. ತಮಿಳುನಾಡಿನಲ್ಲಿ ದ್ರಾವಿಡ ಚಳವಳಿ ನೆಪದಲ್ಲಿ ರಾಜಕೀಯ ಮಾಡುತ್ತಿರುವ ಡಿಎಂಕೆ ಪಕ್ಷದ ಸ್ಟಾಲಿನ್, ತಮ್ಮ ತಂದೆ ಕರುಣಾನಿಧಿ ಕಾಲದಿಂದಲೂ ಭ್ರಷ್ಟಾಚಾರದಲ್ಲಿ ಮುಳುಗೆದ್ದವರು.

ಕರುಣಾನಿಧಿ ಮಗಳು ಕನಿಮೋಳಿ ೨ಜಿ ತರಂಗಾಂತರ ಹಂಚಿಕೆಯ ೨ ಲಕ್ಷ ಕೋಟಿ ಹಗರಣದಲ್ಲಿ ಸಿಲುಕಿದ್ದವರಾದರೆ, ಮಗ ರಾಜ ಕೂಡ ಇದೇ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಜಾಮೀನಿನ ಮೇಲೆ ಹೊರಗಿದ್ದಾರೆ. ತಮಿಳುನಾಡು ರಾಜಕೀಯಕ್ಕೆ ಅಣ್ಣಾಮಲೈ ಪದಾರ್ಪಣೆಯಾದ ನಂತರ ಸ್ಟಾಲಿನ್ ಆಡಳಿತಾವಧಿಯ ಸಾವಿರಾರು ಕೋಟಿ ರು. ಭ್ರಷ್ಟಾಚಾರ ಬಯಲಾಗಿದೆ. ರಾಜ್ಯದ ವಿತ್ತ ಸಚಿವರ ಮೇಲೆ ಹಗರಣದ ಆರೋಪವಿದ್ದರೆ, ಮತ್ತೊಬ್ಬ ಸಚಿವ ಸೆಂಥಿಲ್ ಬಾಲಾಜಿಯನ್ನು ತನಿಖಾ ಸಂಸ್ಥೆಗಳು ಬಂಧಿಸಿ ವಿಚಾರಣೆ ನಡೆಸುತ್ತಿವೆ.

ಇಂಥ ಅಗಾಧ ಭ್ರಷ್ಟಾಚಾರದ ಹೊರೆಹೊತ್ತು ನಡೆಯುತ್ತಿರುವ ಡಿಎಂಕೆಯ ಡಿಎನ್‌ಎ ಬದಲಾಗಲು ಸಾಧ್ಯವಿಲ್ಲ. ದಕ್ಷಿಣ ಭಾರತವನ್ನು ಬೇರೆಯದ್ದೇ ದೇಶಮಾಡಿ ಎಂಬ ಬೇಡಿಕೆಯಿಟ್ಟಿದ್ದ ಡಿಎಂಕೆಯ ಸ್ಟಾಲಿನ್, ‘ಇಂಡಿಯ’ ಹೆಸರಲ್ಲಿ ಮೋದಿ ವಿರುದ್ಧ ರಾಜಕೀಯ ಮಾಡಹೊರಟಿರುವುದು, ಹೆಸರು ಬದಲಾದರೆ ಡಿಎನ್‌ಎ ಬದಲಾಗದು ಎಂಬುದಕ್ಕೆ ಸಾಕ್ಷಿ.

ಕುಟುಂಬ ರಾಜಕಾರಣವನ್ನೇ ಧ್ಯೇಯವಾಗಿಸಿಕೊಂಡಿರುವ ನೆಹರು ವಂಶದ ಸೋನಿಯಾ ಮತ್ತು ರಾಹುಲ್, ‘ನ್ಯಾಷನಲ್ ಹೆರಾಲ್ಡ್’ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಸೈನಿಕರ ಹೆಸರಲ್ಲಿ ಸುಮಾರು ೨೦,೦೦೦ ಕೋಟಿ ರು. ಹಗರಣದಲ್ಲಿ ಭಾಗಿಯಾಗಿರುವ ಅಮ್ಮ-ಮಗ ತಮ್ಮ ಗುಂಪಿನ ಹೆಸರು ಬದಲಿಸಿದ್ದರೂ, ತಮ್ಮ ಕುಟುಂಬಕ್ಕಂಟಿರುವ ಹಗರಣವೆಂಬ ಡಿಎನ್‌ಎ ಯನ್ನು ಬದಲಿಸಲಾಗದು.

ಸೂಕ್ಷ್ಮವಾಗಿ ಗಮನಿಸಿದರೆ ಯುಪಿಎ ೧ ಮತ್ತು ೨ರ ಪ್ರಮುಖ ಉದ್ದೇಶವೇ ಭ್ರಷ್ಟಾಚಾರವಾಗಿತ್ತು; ಕೇಂದ್ರದಲ್ಲಿ ಸೋನಿಯಾರಿಗೆ ಸಂಪೂರ್ಣ ಬೆಂಬಲ ನೀಡಿದರೆ ತಾವು ಮಾಡುವ ಹಗರಣಗಳಲ್ಲಿ ಕಾಂಗ್ರೆಸ್ ತಲೆಹಾಕದು ಎಂಬ ಅಂಶ ಕಾಂಗ್ರೆಸ್ಸೇತರ ಪಕ್ಷಗಳಿಗೆ ಸ್ಪಷ್ಟವಾಗಿತ್ತು. ನೆಹರು ಕಾಲದ ಜೀಪ್ ಹಗರಣದಿಂದ ಹಿಡಿದು ಸೋನಿಯಾರ ಕಾಲದ ೧೦ ವರ್ಷದ ಹಗರಣಗಳ ಸರಮಾಲೆಯೇ ಇದೆ. ಹೆಸರು ಬದಲಾದಾಕ್ಷಣ, ನೆಹರು ಕುಟುಂಬದ ಡಿಎನ್ ಎಯಲ್ಲಿರುವ ಚೀನಿ-ಪ್ರೇಮ, ಕಾಶ್ಮೀರಕ್ಕೆ ನೀಡಿದ್ದ ಪ್ರತ್ಯೇಕ
ಸಂವಿಧಾನದ ಉದ್ದೇಶ, ಕ್ರೈಸ್ತ ಮಿಷನರಿಗಳ ಮೇಲಿನ ಸೋನಿಯಾರ ಪ್ರೇಮ ಹಾಗೂ ಕಾಂಗ್ರೆಸ್‌ನ ಡಿಎನ್ ಎಯಲ್ಲಿರುವ ಅಲ್ಪಸಂಖ್ಯಾತರ ಓಲೈಕೆ ಬದಲಾಗುತ್ತದೆಯೇ? ಭಾರತವನ್ನು ತುಂಡುತುಂಡು ಮಾಡುತ್ತೇವೆಂದವರ ಪರವಾಗಿ ನಿಂತಿದ್ದವರು ಇಂದು ‘ಇಂಡಿಯ’ ಹೆಸರಲ್ಲಿ ಒಂದಾಗುತ್ತಿದ್ದೇವೆಂದು ಹೇಳುತ್ತ ಮೋದಿ ವಿರುದ್ಧ ನಿಂತಿದ್ದಾರೆ. ಇದು ಹಾಸ್ಯಾಸ್ಪದ ಸಂಗತಿ.

ಪಶ್ಚಿಮ ಬಂಗಾಳದ ರಕ್ತಸಿಕ್ತ ರಾಜಕಾರಣವನ್ನು ರಾಜಾರೋಷವಾಗಿ ಬೆಂಬಲಿಸಿಕೊಂಡು ಬಂದಿರುವ ಮಮತಾ ಬ್ಯಾನರ್ಜಿ ಯವರ ಡಿಎನ್‌ಎ ಅಕ್ರಮ ವಲಸಿಗರ ಓಲೈಕೆ. ಭಾರತದ ಗಡಿಯೊಳಗೆ ಅಕ್ರಮವಾಗಿ ನುಗ್ಗಿ ಬಂಗಾಳದಲ್ಲಿ ಸೇರಿರುವ ರೋಹಿಂಗ್ಯಾ ಗಳ ಪರ ನಿಂತಿರುವ ‘ದೀದಿ’ಯ ಓಲೈಕೆಯ ಡಿಎನ್‌ಎ, ಮೋದಿ-ವಿರೋಧಿ ಒಕ್ಕೂಟದ ಹೆಸರು ಬದಲಿಸಿದಾಕ್ಷಣ ಬದಲಾಗುವು ದಿಲ್ಲ. ಪಶ್ಚಿಮ ಬಂಗಾಳ ಒಂದು ಶಾಪಗ್ರಸ್ತ ರಾಜ್ಯವೆಂದರೆ ತಪ್ಪಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಈ ರಾಜ್ಯ, ಸ್ವಾತಂತ್ರ್ಯಾನಂತರ ಕಮ್ಯುನಿಸ್ಟರ ಕೈಗೆ ಸಿಕ್ಕು ೩೦ ವರ್ಷ ಕಾಲ ಅಭಿವೃದ್ಧಿಯನ್ನೇ ಕಂಡಿರಲಿಲ್ಲ.

ಸುಭಾಷ್ ಚಂದ್ರ ಬೋಸ್‌ರಂಥ ವೀರಸೇನಾನಿ, ಸ್ವಾಮಿ ವಿವೇಕಾನಂದರಂಥ ಶ್ರೇಷ್ಠ ಸಂತ, ಜಗದೀಶ್‌ಚಂದ್ರ ಬೋಸರಂಥ ಖ್ಯಾತ
ವಿಜ್ಞಾನಿ, ರಾಷ್ಟ್ರಗೀತೆ ಬರೆದ ರವೀಂದ್ರನಾಥ ಟ್ಯಾಗೋರ್, ವಂದೇ ಮಾತರಂ ಬರೆದ ಬಂಕಿಮಚಂದ್ರ ಚಟರ್ಜಿಯವರ ರಾಜ್ಯ ವಿದು. ಹುಟ್ಟಿನಿಂದಲೇ ಸ್ವಾತಂತ್ರ್ಯವೀರರ ಡಿಎನ್‌ಎ ಪಡೆದಿರುವ ಈ ರಾಜ್ಯದಲ್ಲೀಗ ರೋಹಿಂಗ್ಯಾಗಳದ್ದೇ ರಾಜ್ಯಭಾರ. ಓಲೈಕೆ ರಾಜಕಾರಣದ ಡಿಎನ್‌ಎ ಹೊಂದಿರುವ ಮಮತಾ, ಜಾತ್ಯತೀತ ಭಾರತಕ್ಕಾಗಿ ಬದಲಾಗಲು ಸಾಧ್ಯವಿಲ್ಲ.

ಬಿಹಾರದಲ್ಲಿ ಹಸುವಿನ ಮೇವಿನಲ್ಲೂ ಹಗರಣ ನಡೆಸಿ, ೯೦ರ ದಶಕದಲ್ಲೇ ನೂರಾರು ಕೋಟಿ ರು. ಲೂಟಿ ಮಾಡಿದ ಲಾಲು ಯಾದವ್, ಮೋದಿ-ವಿರೋಧಿ ಗುಂಪಿನ ಸದಸ್ಯ. ಅಧಿಕಾರದಲ್ಲಿದ್ದಾಗ ಬಿಹಾರವನ್ನು ಗೂಂಡಾರಾಜ್ಯವಾಗಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಗೂಂಡಾ ಸಂಸ್ಕೃತಿಯು ಲಾಲು ಯಾದವರ ಡಿಎನ್‌ಎ; ಬಿಹಾರವೆಂದರೆ ಭಯಪಡುವಂಥ ಪರಿಸ್ಥಿತಿ ನಿರ್ಮಿಸಿದ್ದ ಲಾಲು, ಮೋದಿಯನ್ನು ಮಣಿಸಲು ವಿರೋಧಿಗಳ ಗುಂಪಿನ ಹೆಸರು ಬದಲಿಸಿದರೆ ಅವರ ಡಿಎನ್‌ಎ ಬದಲಾಗುವುದೇ? ಅವರ ಕುಟುಂಬ ರಾಜಕಾರಣ ಬದಲಾಗುವುದೇ? ಹುಲಿಯ ಹಾಲು ಕುಡಿದು ಇಲಿಯಂತಾಗಿರುವ ಸ್ಥಿತಿ ಮಹಾರಾಷ್ಟ್ರದ ಉದ್ಧವ್ ಠಾಕ್ರೆಯದ್ದು.

ಹಿಂದುತ್ವವನ್ನೇ ಡಿಎನ್‌ಎ ಆಗಿಸಿಕೊಂಡಿದ್ದ ಬಾಳಾಸಾಹೇಬ್ ಠಾಕ್ರೆ, ಜೀವನದುದ್ದಕ್ಕೂ ಸೋನಿಯಾರನ್ನು ವಿರೋಧಿಸಿಕೊಂಡು ಬಂದ ರಾಜಕಾರಣಿ. ತಮ್ಮ ತಂದೆ ವಿರೋಧಿಸಿಕೊಂಡು ಬಂದ ನಿಲುವುಗಳ ಪರವಾಗಿ ನಿಂತು ಕಾಂಗ್ರೆಸ್ಸಿನ ಜತೆಗೆ ಅಧಿಕಾರ ನಡೆಸಿದ ಉದ್ಧವ್ ಠಾಕ್ರೆಯನ್ನು ಶಿವಸೇನೆಯ ಮುಕ್ಕಾಲು ಶಾಸಕರೇ ದೂರವಿಟ್ಟುಬಿಟ್ಟರು. ಬಾಳಾ ಸಾಹೇಬ್‌ರ ಸಿದ್ಧಾಂತವನ್ನು ಬೆಂಬಲಿಸಿಕೊಂಡು ಬಂದ ಶಿವಸೇನಾ ಕಾರ್ಯಕರ್ತರ ಡಿಎನ್‌ಎ ಎಂದೂ ಬದಲಾಗುವುದಿಲ್ಲ.

ಸ್ವಾತಂತ್ರ್ಯಪೂರ್ವದಿಂದಲೂ ಭಾರತ-ವಿರೋಧಿ ನಿಲುವುಗಳೇ ಕಮ್ಯುನಿಸ್ಟರ ಮೂಲ ಡಿಎನ್‌ಎ. ಒಂದು ಕಾಲ ದಲ್ಲಿ ರಷ್ಯಾದ ಕಮ್ಯುನಿಸ್ಟ್ ನೀತಿಯನ್ನು ಬೆಂಬಲಿಸಿ ಈಗ ಚೀನಿಯರನ್ನು ಬೆಂಬಲಿಸುತ್ತಿರುವುದು ಕಮ್ಯುನಿಸ್ಟರ ಡಿಎನ್‌ಎ. ಚೀನಾದ ಬೆಂಬಲಕ್ಕೆ ನಿಲ್ಲುವ ಕಮ್ಯುನಿಸ್ಟರು ಮೋದಿಯನ್ನು ಮಣಿಸಲು ‘ಇಂಡಿಯ’ ಒಕ್ಕೂಟ ಸೇರಿರುವುದು ಹಾಸ್ಯಾಸ್ಪದ. ಇವರು ತಮ್ಮ ಒಕ್ಕೂಟದ ಹೆಸರನ್ನು ಬದಲಿಸಿದಾಕ್ಷಣ ಇವರ ಡಿಎನ್‌ಎಯಲ್ಲಿರುವ ಭಾರತ- ವಿರೋಧಿ ಧೋರಣೆಗಳು ಬದಲಾಗುವುದಿಲ್ಲ.

ಅತ್ತ ಕೇರಳದಲ್ಲಿ ಕಾಂಗ್ರೆಸ್ ವಿರುದ್ಧ ಚುನಾವಣೆಗೆ ನಿಲ್ಲುವ ಕಮ್ಯುನಿಸ್ಟರು, ಕೇಂದ್ರದಲ್ಲಿ ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ.
ಪಶ್ಚಿಮ ಬಂಗಾಳದ ಪಂಚಾಯಿತಿ ಚುನಾವಣೆಯಲ್ಲಿ ಮಮತಾರ ವಿರುದ್ಧ ನಿಂತಿದ್ದ ಕಮ್ಯುನಿಸ್ಟರು ಕೇಂದ್ರದಲ್ಲಿ ಅವರ ಪರವಾಗಿ ನಿಲ್ಲುತ್ತಾರಂತೆ. ಮೋದಿ ವಿರೋಧಿಗಳ ಸ್ಥಿತಿ ಹೇಗಾಗಿದೆಯೆಂದರೆ, ತಮ್ಮ ರಾಜ್ಯಗಳಲ್ಲಿ ಅವರು ವಿರೋಧಿಸುವ ಪಕ್ಷವು ಕೇಂದ್ರದಲ್ಲಿ ಅವರ ಮಿತ್ರನಾಗುತ್ತದೆ.

ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಕೇಸಿನಲ್ಲಿ ಸಿಲುಕಿರುವ ಶಿಬು ಸೊರೇನ್ ಈ ‘ಮಹಾಭ್ರಷ್ಟಬಂಧನ’ದ ಮತ್ತೊಬ್ಬ ನಾಯಕ. ಹೆಸರು ದಲಿಸಿಕೊಂಡಾಕ್ಷಣ ದೇಶವನ್ನೇ ಗೆದ್ದುಬಿಡಬಹುದೆಂಬ ಮೆಯಲ್ಲಿರುವ ಮೋದಿ ವಿರೋಧಿಗಳು, ದೇಶದ ಜನರ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಜಿಎಸ್‌ಟಿ ಹಂಚಿಕೆ ವಿಷಯದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಹೆಚ್ಚು
ಸಂಪಾದಿಸಿದರೆ, ಉತ್ತರದ ರಾಜ್ಯಗಳಿಗೆ ಹೆಚ್ಚಿನ ಹಂಚಿಕೆಯಾಗುತ್ತಿದೆಯೆಂಬ ರಾಜಕಾರಣ ಮಾಡುವ ಕರ್ನಾಟಕ ಕಾಂಗ್ರೆಸ್, ಇತ್ತೀಚೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರರಿಗೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಕೆಂಪುಹಾಸಿನ ಸ್ವಾಗತ ಕೋರಿತ್ತು.

ತಮಿಳುನಾಡಿನ ಸ್ಟಾಲಿನ್ ಕೂಡ ಈ ಪ್ರಶ್ನೆಗಳಿಗೆ  ಉತ್ತರಿಸಬೇಕಿದೆ. ಉತ್ತರ ಭಾರತದ ನಾಯಕರೊಂದಿಗೆ ಫೋಟೋ ತೆಗೆಸಿ ಕೊಂಡಾಕ್ಷಣ ಅವರ ಡಿಎನ್‌ಎ ಬದಲಾಗದು. ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯಾಗುತ್ತಿದೆ ಎಂದು ಬೊಬ್ಬಿರಿಯುವ ಸ್ಟಾಲಿನ್, ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಹಿಂದಿ ಮಾತಾಡುವ ಲಾಲು ಯಾದವರ ಕೈಕುಲುಕಿದ್ದರು, ದೆಹಲಿಯ ಅರವಿಂದ್ ಕೇಜ್ರಿವಾಲರ ಜತೆ ಫೋಟೋಗೆ ಪೋಸ್ ಕೊಟ್ಟಿದ್ದರು. ಒಕ್ಕೂಟ ವ್ಯವಸ್ಥೆಯ ಸರಿಯಾದ ಕಲ್ಪನೆಯಿಲ್ಲದೆ, ಕೇವಲ ರಾಜಕೀಯಕ್ಕಾಗಿ ‘ಮೋದಿ ಯನ್ನು ಮಣಿಸಲು ಒಂದಾಗುತ್ತೇವೆ’ ಎನ್ನುವವರ ಮೂಲ ಡಿಎನ್‌ಎ ಬದಲಾಗುವುದಿಲ್ಲ.

ತಮ್ಮ ರಾಜ್ಯಗಳ ಚುನಾವಣಾ ಸಂದರ್ಭದಲ್ಲಿ ತಾವು ವಿರೋಽಸುವವರ ಜತೆಯಲ್ಲೇ ಕೇಂದ್ರದಲ್ಲಿ ಇಂಥವರು ದಾಗುವುದನ್ನು
ಮತದಾರರು ಗಮನಿಸಿದ್ದಾರೆ. ಅಷ್ಟಕ್ಕೂ, ‘ಮಹಾಭ್ರಷ್ಟಬಂಧನ’ದಲ್ಲಿರುವ ಭ್ರಷ್ಟರು ನಿಂತಿರುವುದು ಯಾರ ವಿರುದ್ಧ? ತಮ್ಮ ೨೨ ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಹೊಂದಿರದ ಮೋದಿಯವರ ವಿರುದ್ಧ! ತಮ್ಮ ಕುಟುಂಬವನ್ನು ರಾಜ ಕಾರಣ ದಿಂದ ದೂರವಿಟ್ಟಿರುವ ಮೋದಿಯವರ ವಿರುದ್ಧ, ಕುಟುಂಬವನ್ನೇ ರಾಜಕೀಯ ಮಾಡಿಕೊಂಡಿರುವ ಪಕ್ಷಗಳ ನಾಯಕರು ನಿಂತಿದ್ದಾರೆ. ಇವರುಗಳ ಒಕ್ಕೂಟಹೆಸರು ಬದಲಾಗಿರಬಹುದು; ಆದರೆ ಇವರ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಭಾರತ-ವಿರೋದಿ ನೀತಿಯ ‘ಡಿಎನ್‌ಎ’ ಮಾತ್ರ ಬದಲಾಗುವುದಿಲ್ಲ!