Sunday, 15th December 2024

ಅದೇ ದೃಶ್ಯ: ಆದರೆ, ಪಾತ್ರಗಳು ಅದಲು ಬದಲು !

ವಿಶ್ಲೇಷಣೆ

ರಮಾನಂದ ಶರ್ಮಾ

ಸದನ ಕದನ, ವಿಪಕ್ಷದವರ ಅತಿರೇಕದ-ಅನುನುಚಿತ ವರ್ತನೆ, ಸದನದ ಬಾವಿಗಿಳಿದು ಪ್ರತಿಭಟನೆ, ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಹರಿದು ತೂರಾಟ, ಉಪ ಸಭಾಧ್ಯಕ್ಷರಿಗೆ ಅಗೌರವ ತೋರಿದ ೧೦ ಜನ ಶಾಸಕರನ್ನು ಅಧಿವೇಶನ ಮುಗಿಯವವರೆಗೆ ಅಮಾನತು, ಸದನದ ಒಳಗಡೆ ಭಾರೀ ಗದ್ದಲ, ತಳ್ಳಾಟ- ನೂಕಾಟ ನಡೆದದ್ದರಿಂದ ಮಾರ್ಷಲ್ ಸಹಿತ ಹಲವರಿಗೆ ಗಾಯ, ಕೆಲವರ ಹೆಸರಿನ ಬಿಗಳು ಮತ್ತು ಗುಂಡಿಗಳು ಕಿತ್ತು ಬಂದವು, ಯತ್ನಾಳ್ ಅಸ್ವಸ್ಥ, ಗಾಲಿ ಖುರ್ಚಿಯಲ್ಲಿ ಹೊರಗೆ ಕಳಿಸಿ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳಿಸಲಾಯಿತು, ಅಶೋಕ್‌ಗೂ ಗಾಯ, ಸ್ಪೀಕರ್ ಕಚೇರಿ ಬಳಿ ಧರಣಿ, ಅಮಾನತ್ ಅದವರನ್ನು ಹೊತ್ತು ಹೊರ ಹಾಕಿದ ಮಾರ್ಷಲ್ ಗಳು, ಬಿ.ಜೆ.ಪಿ ಕೆಂಡ ಮತ್ತು ಸ್ಪೀಕರ್ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್… ಇವು ಗುರುವಾರದ ದಿನಪತ್ರಿಕೆ ಗಳಲ್ಲಿ ಕಂಗೊಳಿಸಿದ ರಾಜ್ಯದ ಎಲ್ಲಾ ದಿನ ಪತ್ರಿಕೆಗಳಲ್ಲಿನ ಹೆಡ್‌ಲೈನ್ಸ್‌ನ ಝಲಕ್.

ಇವೆಲ್ಲವೂ ಬೆಲೆ ಏರಿಕೆ ವಿರುದ್ದ, ಗ್ಯಾರಂಟಿ ಅನುಷ್ಠಾನದಲ್ಲಿನ ವಿಳಂಬ ಮತ್ತು ಅವ್ಯವಸ್ಥೆ, ಹೆಚ್ಚುತ್ತಿರುವ ನಿರುದ್ಯೋಗ , ಹೊಸ ಯೋಜನೆಗಳು ಇಲ್ಲದಿರುವುದು, ಅಪೂರ್ಣಗೊಂಡ ಯೋಜನೆಗಳು, ರಸ್ತೆ ಹೊಂಡಗಳು ಮತ್ತು ಸರಿಯಾಗಿ ವಿಲೇವಾರಿ ಅಗದಿರುವ ತ್ಯಾಜ್ಯ, ರಸ್ತೆ ಅಪಘಾತಗಳು ಮುಂತಾದವುಗಳ ವಿರುದ್ಧದ ಪ್ರತಿಭಟನೆಯಲ್ಲಿ ಇದ್ದಿದ್ದರೆ ಈ ಘಟನೆ ಗಳನ್ನು ಕ್ಷಮಿಸ ಬಹುದಿತ್ತೇನೋ? ಅದರೆ, ಇವೆ ನಡೆದಿದ್ದು ಸರಕಾರದ ಹಿರಿಯ ಅಧಿಕಾರಿ ಗಳನ್ನು ರಾಜಕೀಯ ನಾಯಕರ ಆತಿಥ್ಯಕ್ಕೆ ಬಳಸಿಕೊಂಡಿರುವುದಕ್ಕೆ ಮತ್ತು ತನ್ಮೂಲಕ ನಡೆದು ಬಂದ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಕ್ಕೆ.

ಇದನ್ನು ಓದಿದ ನಾಡಿನ ಪ್ರಜ್ಞಾವಂತರಿಗೆ ಇದು ಸುದ್ದಿ ಎನಿಸಲಿಲ್ಲ. ಇದು ಹಿಂದೆ ಇತ್ತು, ಇಂದು ಇದೆ ಮತ್ತು ನಾಳೆಯೂ ಇರು ತ್ತದೆ ಎಂದು ನಿರ್ಲಿಪ್ತರಾಗಿ ತಮ್ಮ ಕಾರ್ಯದಲ್ಲಿ ಮಗ್ನರಾದರೆ, ಜನಸಾಮಾನ್ಯರು ಈ ಭಾಗ್ಯಕ್ಕೆ ನಾವು ಇವರನ್ನು ಚುನಾವಣೆ ಯಲ್ಲಿ ನಮ್ಮ ಜನಪ್ರತಿನಿಧಿಯಾಗಿ ಆರಿಸಿ ಕಳಿಸಿದ್ದೇವೆಯೇ ಎಂದು ವ್ಯಾಕುಲತೆ ವ್ಯಕ್ತ ಮಾಡುತ್ತಿದ್ದಾರೆ. ಇಂತಹ ಘಟನೆಗಳಿಗೆ ಈ ದೇಶದ ಎಲ್ಲಾ ರಾಜ್ಯಗಳ ವಿಧಾನಮಂಡಲಗಳಲ್ಲಿ, ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಪುಸ್ತಕ ಬರೆಯುವಷ್ಟು ಉದಾಹರಣೆ ಗಳಿವೆ.

ಪ್ರತಿ ಪಕ್ಷಗಳಾದ ಭಾಜಪ ಮತ್ತು ಜಾತ್ಯಾತೀತ ಜನತಾದಳಗಳು ಈ ಘಟನೆ, ಘಟನೆಗೆ ಕಾರಣವಾದ ಕಾಂಗ್ರೆಸ್ ಸರಕಾರದ ಶಿಷ್ಟಾಚಾರ ಉಲ್ಲಂಘನೆಯನ್ನು ವಿರೋಧಿಸಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇಲಾಖಾ ಮುಖ್ಯಸ್ಥ ಹಂತದ ಐಎಎಸ್
ಅಧಿಕಾರಿಗಳನ್ನು ರಾಜಕೀಯ ನಾಯಕರ ಆತಿಥ್ಯಕ್ಕೆ ಬಳಸಿಕೊಂಡಿದ್ದು ಅಕ್ಷಮ್ಯ ಅಪರಾಧ ಮತ್ತು ಇದಕ್ಕೆ ಮುಖ್ಯ ಕಾರ್ಯದರ್ಶಿ ಗಳು ಅವಕಾಶ ನೀಡಿದ್ದು ತಪ್ಪು ಎನ್ನುವುದು ಅವರ ಅರೋಪ. ಈ ನಿಟ್ಟಿನಲ್ಲಿ ರಾಜ್ಯಪಾಲರು ರಾಜ್ಯ ಮುಖ್ಯ ಕಾರ್ಯದರ್ಶಿ ಯಿಂದ ಕಾರಣ ಕೇಳಿ ನೋಟೀಸು ನೀಡಿದ್ದಾರೆ ಎನ್ನಲಾಗುತ್ತದೆ.

ಮುಂದಿನ ಬೆಳವಣಿಗೆ ಮುಖ್ಯ ಕಾರ್ಯದರ್ಶಿಗಳು ನೀಡುವ ಉತ್ತರದ ಮೇಲೆ ಅವಲಂಭಿಸಿದ್ದು, ಶಿಷ್ಟಾಚಾರದ ವಿಷಯವಾಗಿ ದೊಡ್ಡ ಕಾನೂನು ಸಮರ ನಡೆಯುವುದನ್ನು ಅಲ್ಲಗಳೆಯಲಾಗದು. ರಾಜ್ಯ ಸರಕಾರವೂ ಇದನ್ನು ಅಷ್ಟು ಲಘುವಾಗಿ ತೆಗೆದು  ಕೊಳ್ಳುವ ಸಂಭವ ಕಡಿಮೆ. ಇಂಥಹ ಪ್ರಕರಣ ಇದೇ ಮೊದಲಾಗಿದ್ದು, ರಾಜಕೀಯ ಪಡಸಾಲೆಯಲ್ಲಿ ರಾಜ್ಯಪಾಲರು ತೆಗೆದು ಕೊಳ್ಳಬಹುದಾದ ಕ್ರಮದ ಬಗೆಗೆಕುತೂಹಲ ಕಾಣುತ್ತಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಇದೊಂದು ನಿಯಮಾನು ಸರಣೆ, ಔಪಚಾರಿಕತೆ ಎನ್ನಬಹುದು. ಸಂವಿಧಾನಿಕ ಕಾನೂನು ಪಂಡಿತರ ಪ್ರಕಾರ ರಾಜ್ಯಪಾಲರು ಹೆಚ್ಚಿಗೆ ಏನನ್ನೂ ಮಾಡಲಾರರು.

ಗೃಹ ಮಂತ್ರಾಲಯದ ನಿರ್ದೇಶನದ ಮೇರೆಗೆ ಘಟನೆಯ ಗಂಭೀರತೆಯ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಮೇಲುನೋಟಕ್ಕೆ ಸಂವಿಧಾನಕ್ಕೆ ಅಪಚಾರ ಮಾಡುವಂತಹ ಪ್ರಕರಣ ಅನಿಸುವುದಿಲ್ಲ. ಅದರೂ ಬದಲಾದ ರಾಜಕೀಯದ ಸೇಡಿನ ವಾತಾ ವರಣ ದಲ್ಲಿ, ವಿರಾಟ ಸ್ವರೂಪ ಪಡೆಯುವುದನ್ನು ಅಲ್ಲಗಳೆಯಲಾಗದು. ಈ ಹಿಂದೆ ಆಧಿಕಾರದಲ್ಲಿ ಇರುವವರು ಇಂಥಹ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪ ಕೂಡಾ ಇದೆ. ಅಂದು ಇಂಥಹ ಉಲ್ಲಂಘನೆಯಲ್ಲಿ ಭಾಗಿಯಾದವರು ಇಂದು ಅರೋಪ ಮಾಡುತ್ತಿದ್ದಾರೆ ಎನ್ನುವುದರಲ್ಲೂ ಸ್ವಲ್ಪ ತೂಕ ಕಾಣುತ್ತಿದೆ.

ಸರಕಾರದ ಆಧಿಕಾರಿಗಳನ್ನು ರಾಜಕೀಯ ಕರ್ತವ್ಯಕ್ಕೆ ಬಳಸಬಾರದು ಎನ್ನುವುದು ಶಿಷ್ಟಾಚಾರ. ಅದರೂ ಸರಕಾರದ ಸೂಚನೆ ಮತ್ತು ಆದೇಶಗಳನ್ನು ಪಾಲಿಸುವ ಸಂದಿಗ್ದತೆಯನ್ನು ತಳ್ಳಿ ಹಾಕಲಾಗದು ಎನ್ನುವ ಅನಿವಾರ್ಯತೆ ಮತ್ತು ಸತ್ಯವನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅವರನ್ನು ಯಜ್ಞ ಪಶುಗಳನ್ನಾಗಿ ಮಾಡಲಾಗದು. ಅಧಿಕಾರಿಗಳಿಗೆ ತಮ್ಮದಿನ ನಿತ್ಯದ ಕಾರ್ಯದಲ್ಲಿ ಅವರದೇ ಅದ ರೀತಿ-ರಿವಾಜು ಮತ್ತು ನಿಯಮಾವಳಿಗಳು ಇರುತ್ತವೆ ಮತ್ತು ಇದರ ಪ್ರಕಾರ ಅವರು ಕಾರ್ಯ ನಿರ್ವಹಿಸ ಬೇಕಾಗುತ್ತದೆ. ಅದರೆ, ವಾಸ್ತವದಲ್ಲಿ, ಹಲವು ಸಂದರ್ಭಗಳಲ್ಲಿ ಇವುಗಳಿಗೆ ೧೦೦% ಅಂಟಿಕೊಳ್ಳುವುದು ಕಷ್ಟ. ಕೆಲವು ಸಂದರ್ಭ ಗಳಲ್ಲಿ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮವೋ ಅಥವಾ ಸರಕಾರಿ ಕಾರ್ಯಕ್ರಮವೋ ಎಂದು ಗುರುತಿಸಲಾರದಷ್ಟು ಹೇರ್ಲೈನ್ ವ್ಯತ್ಯಾಸ ಇರುತ್ತದೆ. ಸುಪ್ರಿಯಾ ಸುಳೆ, ಲಾಲು ಪ್ರಸಾದರಂಥ ಜಾಮೀನಿನ ಮೇಲೆ ಹೊರಗಿರುವವರಿಗೂ ಐಎಎಸ್ ಅಧಿಕಾರಿಗಳು ಆತಿಥ್ಯ ನೀಡಿದ್ದಾರೆ ಎಂದು ಅರೋಪಿಸಲಾಗಿದ್ದು, ಸುಮಾರು ೪೩% ಸಂಸದರ ವಿರುದ್ದ ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದು ಇವರಲ್ಲಿ ಬಹುತೇಕರು ಜಾಮೀನಿನ ಮೇಲೆ ಇರುವುದನ್ನು ನೋಡಿದಾಗ ಈ ಅರೋಪ ಅರ್ಥ ಕಳೆದುಕೊಳ್ಳುತ್ತದೆ.

ಇದೇ ಮಾನದಂಡವನ್ನು ಚುನಾವಣೆಯಲ್ಲಿ ಟಿಕೆಟ್ ನೀಡುವಾಗ ಏಕೆ ಬಳಕೆ ಮಾಡುತ್ತಿಲ್ಲ ಎನ್ನುವ ಪ್ರಶ್ನೆ ಇಲ್ಲಿ ತಲೆ ಎತ್ತುತ್ತದೆ.
ಈ ಹಿಂದೆ ಭಾಜಪವು ಅಧಿಕಾರದಲ್ಲಿದ್ದಾಗ ಸದನದಲ್ಲಿ ಸಾಕಷ್ಟು ಗಲಾಟೆ, ಗದ್ದಲ, ತಳ್ಳಾಟ, ನೂಕಾಟ, ಅಹೋರಾತ್ರಿ ಧರಣಿ, ಮುಷ್ಕರ ಮತ್ತು ಮಾರ್ಷಲ್‌ಗಳ ಆಗಮನಗಳು ನಡೆದಿದ್ದು, ಅಗ ಭಾಜಪವು ಕಾಂಗ್ರೆಸ್‌ಗೆ ನೈತಿಕತೆಯ ಪಾಠವನ್ನು ಬೋಧಿಸಿತ್ತು ಮತ್ತು ಸಂಸದೀಯ ನಡವಳಿಕೆ ಬಗೆಗೆ ಉದ್ದುದ್ದ ಭಾಷಣ ಬಿಗಿದಿತ್ತು. ಶಾಸಕರು ಸದನದಲ್ಲಿ ತಮ್ಮ ಕರ್ತವ್ಯವನ್ನುಪಾಲಿಸಬೇಕು, ತಮ್ಮನ್ನು ಆರಿಸಿ ಕಳಿಸಿದ ಮತದಾರರಿಗೆ ಮೋಸ ಮಾಡಬಾರದು, ಅವರ ಆಶೆ- ಅಕಾಂಕ್ಷೆಗಳಿಗೆ ಸ್ಪಂದಿಸಬೇಕು ಮತ್ತು ಸದನದ ಕಾರ್ಯ ಕಲಾಪ ಸುಗಮವಾಗಿ ನಡೆಯಲು ಅನುವು ಮಾಡಿಕೊಡ ಬೇಕು ಎಂದೆ ಹಿತವಚನ ಬೋಧಿಸುತ್ತಿದ್ದರು.

ಈಗ ಇದು ಕಾಂಗ್ರೆಸ್ಸಿಗರ ಪಾಳಿ. ದೃಶ್ಯಾವಳಿ ಅದೇ: ಅದರೆ ಪಾತ್ರಗಳ ಅದಲು ಬದಲು ಮಾತ್ರ. ಹಿಂದೆ ಕೇಳಿಸಿಕೊಂಡವರು ಈಗ
ಹೇಳುತ್ತಿzರೆ ಮತ್ತು ಹಿಂದೆ ಹೇಳಿದವರು ಈಗ ಕೇಳಿಸಿಕೊಳ್ಳುತ್ತಿzರೆ. ಇದು ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಒಂದು ಮಹಿಮೆ ಮತ್ತು ವಿಪರ್ಯಾಸ. ಸದನಗಳಲ್ಲಿ ಚರ್ಚೆಯಾಗುವಾಗ, ಅಡಳಿತ ಪಕ್ಷದ ನಿಲುವು ವಿಪಕ್ಷಗಳಿಗೆ ಒಪ್ಪಿಗೆಯಾಗದಿದ್ದಾಗ, ವಿಪಕ್ಷ ದವರ ಸಲಹೆ- ಸೂಚನೆಗಳಿಗೆ ಅಡಳಿತ ಪಕ್ಷ ಸ್ಪಂದಿಸದಿರುವಾಗ ಇಂಥಹ ಗಲಾಟೆ, ತಳ್ಳಾಟ, ಧರಣಿ, ಸಭಾತ್ಯಾಗ ತೀರಾ
ಮಾಮೂಲು.

ವಿಧಾನ ಮಂಡಲಗಳ ಕಲಾಪಗಳ ಇತಿಹಾಸದ ಪುಟಗಳನ್ನು ತಿರುವಿದರೆ ಇಂಥಹ ಭರಪೂರ ಉದಾ ಹರಣೆಗಳು ದೊರಕುತ್ತವೆ. ತಮ್ಮ ಸಲಹೆ- ಸೂಚನೆ, ಅಭಿಪ್ರಾಯಗಳಿಗೆ ಸ್ಪಂದನೆ ದೊರಕುತ್ತಿಲ್ಲ ಎಂದಾಗ ಇಂತಹ ಉದ್ವೇಗ, ಉದ್ರೇಕ, ಸಿಡುಕು ಮತ್ತು ಅಸಹನೆ ಗಗನಕ್ಕೇರುವುದು ಸಾಮಾನ್ಯ. ಅದರೆ, ಅದಕ್ಕೊಂದು ಇತಿ ಮಿತಿ ಇರಬೇಕಾಗುತ್ತದೆ. ಹಾಗೆಯೇ ಬಳಸುವ ಭಾಷೆಯ ಬಗೆಗೂ ಒಂದು ಸಂಯಮದ ಗಡಿ ಇರುತ್ತದೆ. ಸಾರ್ವಜನಿಕ ಸಭೆಯಲ್ಲಿ ಮಾತನಾಡಿದಂತೆ ಅಥವಾ ಪತ್ರಿಕಾಗೋಷ್ಟಿಯಲ್ಲಿ
ಕೊರೆದಂತೆ ಮಾತುಗಳನ್ನು ಹರಿಬಿಡಲಾಗದು.

ಸಂಸದೀಯ ವಾಕ್ಪಟುತ್ವದ ದೃಷ್ಟಿಯಲ್ಲಿ ಕರ್ನಾಟಕದ ಎರಡೂ ಸದನಗಳು ಅಗ್ರಮಾನ್ಯ, ಅದ್ವಿತೀಯ ಮಾತುಗಾರರನ್ನು, ಚ ರ್ಚಾಪಟುಗಳನ್ನು ಕಂಡಿವೆ. ಚನ್ನಬಸಪ್ಪ, ಸಿದ್ದವೀರಪ್ಪ, ಗಾಂಜೀ ವೀರಪ್ಪ, ಎಸ್.ಶಿವಪ್ಪ, ದೇವರಾಜ್ ಅರಸ, ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ಹುಚ್ಚ ಮಾಸ್ತಿಗೌಡ, ದೇವೇಗೌಡ, ಸಮಾಜವಾದಿ ಗೋಪಾಲಗೌಡ, ಕೋಣಂದೂರು ಲಿಂಗಪ್ಪ, ಬಂಗಾರೆಪ್ಪ, ಕಾಗೋಡು ತಿಮ್ಮಪ್ಪ, ಎ.ಕೆ.ಸುಬ್ಬಯ್ಯ, ಎಡಪಂಥೀಯ ಎಮ.ಎಸ್. ಕೃಷ್ಣನ್ ಮುಂತಾದವರ ಹೆಸರನ್ನು ಸದನದ ಕಲಾಪವನ್ನು ದೃಶ್ಯ ಮಾದ್ಯಮದಲ್ಲಿ ನೋಡುವಾಗ ಅಥವಾ ಮಾರನೇ ದಿನ ಪತ್ರಿಕೆಗಳಲ್ಲಿ ಓದುವಾಗ ಕನ್ನಡಿಗರು ಇಂದೂ
ನೆನೆಪಿಸಿಕೊಳ್ಳುತ್ತಾರೆ ಮತ್ತು ಇವರೆ ಎಲ್ಲಿ ಹೋದರು ಎಂದು ವ್ಯಾಕುಲತೆ ವ್ಯಕ್ತಪಡಿಸುತ್ತಾರೆ. ಇವರು ಸದಾ ಅಡಳಿತ ಪಕ್ಷ ತುದಿಗಾಲಿನಲ್ಲಿ ನಿಲ್ಲುವಂತೆ ಮಾತನಾಡುತ್ತಿದ್ದರು.

ಅವರೆಂದೂ ಆಶ್ಲೀಲ, ಅಸಭ್ಯ ಮತ್ತು ಅಸಂಸದೀಯ ಪದಗಳನ್ನು ಬಳಸಲಿಲ್ಲ. ಏರುಧ್ವನಿಯಲ್ಲಿ ಮಾತನಾಡುತ್ತಿದ್ದರು, ಮತ್ತು ಅಪರೂಪವಾಗಿ ಸಭಾತ್ಯಾಗ ಮಾಡುತ್ತಿದ್ದರು ಅಷ್ಟೇ: ಹೇಳಬೇಕಾದುದನ್ನು ನೇರವಾಗಿ, ಸಷ್ಟವಾಗಿ ಯಾವುದೇ ಮುಜುಗರ ಇರಿಸು ಮುರಿಸು ಇಲ್ಲದೇ ಹೇಳುತ್ತಿದ್ದರು. ಆಡಳಿತ ಪಕ್ಷವು ವಿಪಕ್ಷಗಳು ಎತ್ತುವ ವಿಷಯಗಳ ಬಗೆಗೆ, ಅವರು ಹೊರಹಾಕುವ ರಹಸ್ಯ,
ವಿವರಣೆ ಮತ್ತು ವಾಸ್ತವಾಂಶಗಳ ಬಗೆಗೆ ಜಾಗರೂಕರಾಗಿ ರುತ್ತಿದ್ದರು. ಅಡಳಿತ ಪಕ್ಷ, ಮುಖ್ಯವಾಗಿ ಸಂಬಂಧಪಟ್ಟ ಮಂತ್ರಿಗಳು ಸರಿಯಾದ ಮತ್ತು ಸುದೀರ್ಘ ಹೋಮ್ ವರ್ಕ್ ಮಾಡಿಕೊಂಡು ಬರಬೇಕಾಗಿತ್ತು.

ಪ್ರತಿಯೊಂದು ವಿಧೇಯಕವೂ ವಿಸ್ತೃತ ಚರ್ಚೆಗೆ ಒಳಗಾಗುತ್ತಿತ್ತು. ಯಾವ ವಿಧೇಯಕವೂ ಚರ್ಚೆ ಇಲ್ಲದೇ ಅನುಮೋದನೆಯಾಗು
ತ್ತಿರಲಿಲ್ಲ. ದಿನದ ಕೊನೆಗೆ ಚರ್ಚೆಗೆ ಸಾಕಷ್ಟು ಸಮಯ ದೊರಕಲಿಲ್ಲ ಎನ್ನುವ ಕೊರಗು, ಗೊಣಗಾಟ ಕೂಡಾ ಸದಸ್ಯರಿಂದ ಕೇಳುತ್ತಿತ್ತು. ಸದನಗಳು ಸದಾ ಸದಸ್ಯರಿಂದ ತುಂಬಿರುತಿದ್ದು, ಕೋರಂಗಾಗಿ ಕಾಯುವ, ಬೆಲ್ ಮಾಡುವ ಪ್ರಮೇಯಗಳು ವಿರಳ ವಾಗಿತ್ತು. ಸದನಗಳಲ್ಲಿ ಇತ್ತೀಚೆಗೆ ಕಾಣುತ್ತಿರುವ ದೃಶ್ಯಾವಳಿಗಳಿಗೂ ಮತ್ತು ಆ ಕಾಲದ ದೃಶ್ಯಾವಳಿಗಳಿಗೂ ಹೋಲಿಕೆ ಅಸಾದ್ಯ. ಆ ದಿನಗಳಲ್ಲಿ ಗ್ಯಾಲರಿಯಲ್ಲಿ ಇರುವ ಪ್ರತಿಯೊಬ್ಬರೂ ಕಲಾಪದ ಪ್ರತಿಕ್ಷಣವನ್ನು ಅನುಭವಿಸುತ್ತಿದ್ದರು. ಒಂದು ಅಹ್ಲಾದಕರ ನೆನಪನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಅದರೆ, ಇತ್ತೀಚೆಗೆ ಗ್ಯಾಲರಿಯಲ್ಲಿ ಇರುವವರು ಹೇಳುವುದೇ ಬೇರೆ.