ಚಿತ್ತೂರು ಜಿಲ್ಲೆಯ ರೈತ ಕುಟುಂಬವು ತಮ್ಮ 22 ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದು ಕೈತುಂಬಾ ಆದಾಯ ಗಳಿಸಿದೆ. ಈ ರೈತ ಕುಟುಂಬದವರು ಬೇಸಿಗೆ ನಂತರ ಟೊಮೆಟೊಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಅಂದಾಜಿಸಿ ಕಳೆದ ಎರಡು ವರ್ಷಗಳ ಹಿಂದೆಯೇ ಜೂನ್ ಮತ್ತು ಜುಲೈ ತಿಂಗಳಲ್ಲಿ ಟೊಮೆಟೊ ಬೆಳೆದಿದ್ದರು. ಇದೀಗ ಟೊಮೆ ಟೊ ಬೆಲೆ ದಾಖಲೆಯ ಏರಿಕೆ ಕಂಡಿದ್ದು, ತಿಂಗಳೊಂದರಲ್ಲೇ ಮೂರು ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ.
ರೈತರಾದ ಪಿ.ಚಂದ್ರಮೌಳಿ, ಇವರ ಸಹೋದರ ಮುರಳಿ, ತಾಯಿ ರಾಜಮ್ಮ ಅವರು ಜಿಲ್ಲೆಯ ಸೊಮಲ ತಾಲೂಕಿನ ಕರಕಮಂಡ ಗ್ರಾಮದ ಜಮೀನಿನಲ್ಲಿ ಒಟ್ಟಾಗಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಸ್ವಗ್ರಾಮ ಕರಕಮಂಡದಲ್ಲಿ 12 ಎಕರೆ ಮತ್ತು ಪುಲಿಚೆರ್ಲಾದ ಸುವ್ವಾರಪುವರಿಪಲ್ಲಿ ಗ್ರಾಮದಲ್ಲಿ 20 ಎಕರೆ ಜಮೀನು ಹೊಂದಿದ್ದಾರೆ. ಇಲ್ಲಿ ಕಳೆದ ಹಲವು ವರ್ಷ ಗಳಿಂದ ಟೊಮೆಟೊ ಕೃಷಿ ಮಾಡಿಕೊಂಡು ಬಂದಿದ್ದಾರೆ.
ಹಲವು ವರ್ಷಗಳ ಅನುಭವದ ನಂತರ ಬೇಸಿಗೆಯ ನಂತರ ಟೊಮೆಟೊ ಉತ್ತಮ ಇಳುವರಿ ಮತ್ತು ಬೆಲೆ ಪಡೆಯುವುದನ್ನು ಇವರು ಕಂಡುಕೊಂಡಿದ್ದಾರೆ. ಅಂತೆಯೇ ಎಪ್ರಿಲ್ ತಿಂಗಳಲ್ಲಿ ಟೊಮೆಟೊ ನೆಟ್ಟು ಜೂನ್ ತಿಂಗಳಲ್ಲಿ ಉತ್ತಮ ಇಳುವರಿ ಪಡೆದು ಕೊಂಡಿದ್ದಾರೆ.
ಸಾಹೂ ತಳಿಯ ಟೊಮೆಟೊವನ್ನು ಒಟ್ಟು 22 ಎಕರೆಯಲ್ಲಿ ಬೆಳೆದಿದ್ದಾರೆ.
ಕೋಲಾರ ಮಾರುಕಟ್ಟೆಯಲ್ಲಿ ಸುಮಾರು 15 ಕೆಜಿ ಟೊಮೆಟೊ ಬಾಕ್ಸ್ಗಳು 1000 ದಿಂದ 1500 ರೂಪಾಯಿಗೆ ಮಾರಾಟವಾಗು ತ್ತಿವೆ. ಇದುವರೆಗೆ 40 ಸಾವಿರ ಟೊಮೆಟೊ ಬಾಕ್ಸ್ಗಳನ್ನು ಮಾರಾಟ ಮಾಡಿದ್ದು, 4 ಕೋಟಿ ರೂಪಾಯಿ ಗಳಿಸಿದ್ದಾರೆ.