Monday, 25th November 2024

ಎದ್ದು ನಿಂತ ಸ್ಯಾಂಡಲ್‌ವುಡ್; ಗೆದ್ದು ಬೀಗುತ್ತಿವೆ 3 ಚಿತ್ರಗಳು

ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್‌ನ ಅನೇಕ ಚಿತ್ರಗಳು ವರ್ಷ ಮೊದಲಾರ್ಧದಲ್ಲಿ ಬ್ಲಾಕ್‌ಬಸ್ಟರ್ ಟ್ಯಾಗ್ ಕಟ್ಟಿಕೊಂಡಿದ್ದವು.

ಆದರೆ ಕನ್ನಡ ಚಿತ್ರರಂಗದ ಯಾವ ಚಿತ್ರವೂ ಸಹ ಇಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಹೊಯ್ಸಳ ಸೇರಿದಂತೆ ಒಂದೆರಡು ಚಿತ್ರಗಳು ಕಥೆಯ ವಿಚಾರವಾಗಿ ತುಸು ಸದ್ದು ಮಾಡಿದ್ದು ಬಿಟ್ಟರೆ ಪರ ಭಾಷೆಯ ಸಿನಿಮಾಗಳ ಹಾಗೆ ದೊಡ್ಡ ಮಟ್ಟದ ಯಶಸ್ಸನ್ನು ಕನ್ನಡದ ಉಳಿದ ಯಾವ ಚಿತ್ರಗಳೂ ಸಹ ಗಳಿಸಲು ಆಗಿರಲಿಲ್ಲ.

ಕಳೆದ ವರ್ಷ ಸಾಲು ಸಾಲು ನೂರು ಕೋಟಿ ಗಳಿಕೆ ಮಾಡಿದ ಸಿನಿಮಾಗಳನ್ನು ನೀಡಿದ್ದ ಕನ್ನಡ ಚಿತ್ರರಂಗ ಈ ವರ್ಷ ಇಷ್ಟರ ಮಟ್ಟಿಗೆ ಮಂಕಾಗಿತ್ತು. ಆದರೆ ಈ ಬೇಸರವನ್ನು ವರ್ಷದ ದ್ವಿತೀಯಾರ್ಧ ಆರಂಭವಾಗುತ್ತಿದ್ದಂತೆ ಹೋಗಲಾಡಿಸಿವೆ ಈ ತಿಂಗಳು ಬಿಡುಗಡೆಗೊಂಡಿರುವ ಈ ಮೂರು ಕನ್ನಡ ಸಿನಿಮಾಗಳು.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಕೌಸಲ್ಯಾ ಸುಪ್ರಜಾ ರಾಮ ಹಾಗೂ ಆಚಾರ್ಯ ಅಂಡ್ ಕೋ ಚಿತ್ರಗಳು ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಮಾಡಿ ಉತ್ತಮ ಬುಕಿಂಗ್ ಪಡೆದುಕೊಳ್ಳುತ್ತಿವೆ. ಒಂದೆಡೆ ಹಾಲಿ ವುಡ್‌ನ ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳು ಬೆಂಗಳೂರಿನಲ್ಲಿ ಹೆಚ್ಚಿನ ಪ್ರದರ್ಶನಗಳನ್ನು ಗಿಟ್ಟಿಸಿ ಕೊಂಡು ಬಿಡುಗಡೆಯಾದರೂ ಸಹ ಕನ್ನಡದ ಈ ಚಿತ್ರಗಳು ಒಳ್ಳೆಯ ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಬಿಡುಗಡೆಯ ಮೊದಲ ದಿನದಿಂದಲೂ ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳಿಗೆ ಪೈಪೋಟಿ ನೀಡುತ್ತಾ ಬಂದಿದ್ದು, ಬಿಡುಗಡೆಗೊಂಡ ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಕಾಂಬಿನೇಶನ್‌ನ ಕೌಸಲ್ಯಾ ಸುಪ್ರಜಾ ರಾಮ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣದ ಆಚಾರ್ಯ ಅಂಡ್ ಕೋ ಚಿತ್ರಗಳೂ ಸಹ ಅದೇ ರೀತಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿವೆ.