Sunday, 24th November 2024

ಎನ್’ಡಿಎ, ಇಂಡಿಯಾ ಗೊಂದಲದಲ್ಲಿ ಜೆಡಿಎಸ್

ಅಶ್ವತ್ಥಕಟ್ಟೆ

ranjith.hoskere@gmail.com

ಹಾಗೆ ನೋಡಿದರೆ, ‘ಇಂಡಿಯ’ ಮತ್ತು ‘ಎನ್‌ಡಿಎ’ದಲ್ಲಿನ ಹಲವು ಪಕ್ಷಗಳಿಗಿಂತ ಜೆಡಿಎಸ್ ಬಲಿಷ್ಠವಾಗಿಯೇ ಇದೆ. ಅದರಲ್ಲೂ ರಾಜ್ಯದ ಹಳೇ ಮೈಸೂರು ಭಾಗದಲ್ಲಿ ಕೊಂಚ ಬೆಂಬಲ ಸಿಕ್ಕಿದರೆ ನಾಲ್ಕೈದು ಸ್ಥಾನಗಳನ್ನು ಗೆಲ್ಲುವುದಕ್ಕೆ ಬೇಕಾದ ತಯಾರಿಯನ್ನು ಜೆಡಿಎಸ್ ಮಾಡಿಕೊಳ್ಳಬಹುದು.

‘ಮಹಾಸಂಗ್ರಾಮ’ ಎಂದೇ ಬಿಂಬಿತವಾಗಿರುವ ಲೋಕಸಭಾ ಚುನಾವಣೆ ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದ್ದು, ಆರೇಳು ತಿಂಗಳು ಮೊದಲೇ ರಾಜಕೀಯ ವಲಯದಲ್ಲಿ ಈ ಸಂಬಂಧದ ಸಿದ್ಧತಾಕಾರ್ಯ ಶುರುವಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿಯನ್ನು ಮಣಿಸಲು ಒಂದೆಡೆ ‘ಇಂಡಿಯ’ ಮೈತ್ರಿಕೂಟ ಒಂದಾಗಿ ಸಜ್ಜಾಗಿದ್ದರೆ, ಮತ್ತೊಂದೆಡೆ ಬಿಜೆಪಿ ತನ್ನ ಮಿತ್ರಪಡೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಾಲು ಸಾಲು ಸಭೆ ನಡೆಸುತ್ತಿದೆ.

ಈ ಮಧ್ಯೆ, ‘ಇಂಡಿಯ’ ಮತ್ತು ‘ಎನ್‌ಡಿಎ’ ನಡುವೆ ಯಾವುದನ್ನು ಆಯ್ಕೆಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿ ಸಿಲುಕಿದೆ ಕರ್ನಾಟಕದ ಪ್ರಾದೇಶಿಕ ಪಕ್ಷವಾಗಿರುವ ಜಾತ್ಯತೀತ ಜನತಾದಳ! ಹೌದು, ಈ ಬಾರಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅಸ್ತಿತ್ವದ ಆತಂಕದಲ್ಲಿರುವ ಜೆಡಿಎಸ್, ಒಂದು ಪಕ್ಷದೊಂದಿಗೆ ಹೋಗಲೇಬೇಕಾದ ಅನಿವಾರ್ಯತೆ ಯಲ್ಲಿ ಸಿಲುಕಿದೆಯೇ ಎನ್ನುವ ಅನುಮಾನಗಳಿವೆ. ಈ ಹಿಂದೆ ಸ್ಪರ್ಧಿಸಿದ ರೀತಿಯಲ್ಲಿ ಸ್ವತಂತ್ರವಾಗಿ ಸ್ಪಽಸುವ ಶಕ್ತಿಯನ್ನು ಅದು ಉಳಿಸಿಕೊಳ್ಳದೇ ಇರುವುದರಿಂದ ಯಾವುದಾದರೂ ಒಂದು ಮೈತ್ರಿಕೂಟದೊಂದಿಗೆ ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎನ್ನುವ ಮಾತನ್ನು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.

ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಜತೆ ಜೆಡಿಎಸ್ ಗುರುತಿಸಿಕೊಳ್ಳುವುದು ಬಹುತೇಕ ನಿಶ್ಚಿತ ಎನ್ನುವ ಮಾತುಗಳು ರಾಜಕೀಯ
ವಲಯದಲ್ಲಿ ಕೇಳಿಬಂದರೂ, ಅಂತಿಮವಾಗಿ ‘ಕರೆ’ ಬರಲಿಲ್ಲ ಎನ್ನುವ ಕಾರಣಕ್ಕೆ ಎನ್‌ಡಿಎ ಸಭೆಯಲ್ಲಿ ಭಾಗವಹಿಸದೇ ‘ನ್ಯೂಟ್ರಲ್’ ಪಕ್ಷಗಳ ಸಾಲಿನಲ್ಲಿ ಜೆಡಿಎಸ್ ನಿಂತಿದೆ. ಹಾಗೆ ನೋಡಿದರೆ, ೨೦೧೯ರಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನದಲ್ಲಿ ಜೆಡಿಎಸ್ ಗುರುತಿಸಿಕೊಂಡಿತ್ತು. ಇದಕ್ಕೆ ಸರಿಯಾಗಿ ಆ ಸಮಯದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವಿದ್ದುದರಿಂದ ಸೀಟು ಹಂಚಿಕೆಯ ಸೂತ್ರದೊಂದಿಗೆ ಲೋಕಸಭಾ ಚುನಾವಣೆ ಯನ್ನು ಎದುರಿಸಲಾಯಿತು.

ಆದರೆ ಸ್ವತಃ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ನ ೮ ಅಭ್ಯರ್ಥಿಗಳು ಸೋತರೆ, ಹಾಸನದ ಪ್ರಜ್ವಲ್ ರೇವಣ್ಣ ಮಾತ್ರ ಗೆಲುವು ಸಾಽಸಿದರು. ಇದಾದ ಕೆಲವೇ ತಿಂಗಳಲ್ಲಿ ಸಮ್ಮಿಶ್ರ ಸರಕಾರ ಪತನಗೊಂಡಿದ್ದು
ಜಗಜ್ಜಾಹೀರು. ಬಳಿಕ ಜೆಡಿಎಸ್ ನಾಯಕರಿಗೆ ಸಿಕ್ಕ ಸ್ಪಷ್ಟ ಸಂದೇಶವೆಂದರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ನೊಂದಿಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡರೆ, ಪಕ್ಷದ ಅಸ್ತಿತ್ವಕ್ಕೆ ಹೊಡೆತ ಬೀಳುವುದು ನಿಶ್ಚಿತ ಎಂಬುದು.

ಆದರೆ, ಇತ್ತೀಚೆಗೆ ಜೆಡಿಎಸ್‌ಗೆ ಕಾಡಿದ ಮತ್ತೊಂದು ಆತಂಕವೆಂದರೆ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅದ್ಭುತ ಸಾಧನೆ ಮಾಡಿದರೂ, ಲೋಕಸಭಾ ಚುನಾವಣೆಯಲ್ಲಿ ಇದು ಮರುಕಳಿಸುತ್ತದೆ ಎನ್ನುವ ಯಾವ ನಂಬಿಕೆಯೂ ಇಲ್ಲ ಎಂಬುದು. ಈಗಾಗಲೇ ಬರುತ್ತಿರುವ ಹಲವು ಸಮೀಕ್ಷೆಗಳಲ್ಲಿ, ‘ಬಿಜೆಪಿಯ ಸ್ಥಾನ ಕುಸಿದರೂ ಮೂರನೇ ಬಾರಿ ಬಿಜೆಪಿ ನೇತೃತ್ವದಲ್ಲಿ ಸರಕಾರ ಸ್ಥಾಪಿಸುವುದಕ್ಕೆ ಯಾವುದೇ ಸಮಸ್ಯೆಯಿಲ್ಲ’ ಎನ್ನುವುದು ಸ್ಪಷ್ಟವಾಗಿದೆ. ಈ ಕಾರಣಕ್ಕಾಗಿಯೇ, ಜನರ ‘ವೇವ್’ ಇರುವ ಬಿಜೆಪಿ ಯೊಂದಿಗೆ ಗುರುತಿಸಿಕೊಳ್ಳಬೇಕು ಎನ್ನುವ ಲೆಕ್ಕಾಚಾರವನ್ನು ಜೆಡಿಎಸ್ ನಾಯಕರು ಹಾಕಿಕೊಂಡಿದ್ದರು. ಇದರೊಂದಿಗೆ ಜೆಡಿಎಸ್ ವರಿಷ್ಠ ದೇವೇಗೌಡರು ಬಿಜೆಪಿ ವರಿಷ್ಠರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಕುಮಾರ ಸ್ವಾಮಿ ಅವರು ‘ಶತ್ರುವಿನ ಶತ್ರು ಮಿತ್ರ’ ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರೊಂದಿಗೆ ಸೇರಿಕೊಂಡಿದ್ದರು.

ಈ ಬಾರಿಯ ವಿಧಾನಸಭಾ ಚುನಾವಣೆಯ ಸಮಯದಲ್ಲಿಯೂ ಜೆಡಿಎಸ್, ಬಿಜೆಪಿ ಪರಸ್ಪರ ಕಿತ್ತಾಡಿಕೊಂಡಿದ್ದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದೇ ಹೆಚ್ಚು. ಇನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಬಳಿಕ ನಡೆದ ಅಧಿವೇಶನದಲ್ಲಿಯೂ ‘ಬಿಜೆಪಿ-ಜೆಡಿಎಸ್ ಭಾಯಿ ಭಾಯಿ’ ಎಂಬ ವರ್ತನೆಯು ಚುನಾವಣಾಪೂರ್ವ ಮೈತ್ರಿಯ ಮಾತಿಗೆ ಇನ್ನಷ್ಟು ಪುಷ್ಟಿ ನೀಡಿತ್ತು. ಆದರೆ ಬಿಜೆಪಿಯು, ಎನ್‌ಡಿಎ ಕೂಟದ ಪಕ್ಷಗಳಿಗೆ ಹಾಗೂ ಹೊಸದಾಗಿ ಸೇರಿಸಿಕೊಳ್ಳಲು ಬಯಸುವ ಪಕ್ಷಗಳಿಗೆ ಆಹ್ವಾನ ನೀಡಿ ಆಯೋಜಿಸಿದ್ದ ಸಭೆಗೆ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೆಹಲಿ ಬಿಜೆಪಿ ನಾಯಕರಿಂದ ಕರೆ ಬಂದಿದ್ದು, ಅವರು ಭಾಗವಹಿಸಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಅಂತಿಮ ಕ್ಷಣದಲ್ಲಿ ಈ ರೀತಿಯ ಯಾವುದೇ ಕರೆ ಬಂದಿಲ್ಲ ಎನ್ನುವ ಮೂಲಕ ಎನ್‌ಡಿಎಯ ಭಾಗವಾಗಲು ‘ಕಾಲ ಪಕ್ವ’ವಾಗಿಲ್ಲ ಎನ್ನುವ ಸಂದೇಶ ರವಾನೆಯಾಯಿತು.

ಎನ್‌ಡಿಎಗೆ ಜೆಡಿಎಸ್ ಸೇರಿಸಿಕೊಳ್ಳಲು ಬಿಜೆಪಿ ಹಿಂದೇಟು ಹಾಕಿದ ಕೂಡಲೇ, ‘ಇಂಡಿಯ’ ಜತೆ ಗುರುತಿಸಿ ಕೊಳ್ಳಲು ಮೇಲೆ ಹೇಳಿದಂತೆ ಅಸ್ತಿತ್ವದ ಸಮಸ್ಯೆ ಯಿರುವುದ ರಿಂದ ಜೆಡಿಎಸ್ ವರಿಷ್ಠ ದೇವೇಗೌಡರು ‘ತಟಸ್ಥ’ ನೀತಿ ಯನ್ನು ಘೋಷಿಸಿದರು. ಹಾಗೆ ನೋಡಿದರೆ, ‘ಇಂಡಿಯ’ ಹಾಗೂ ‘ಎನ್‌ಡಿಎ’ ದಲ್ಲಿರುವ ಹಲವು ಪಕ್ಷಗಳಿಗಿಂತ ಜೆಡಿಎಸ್ ಬಲಿಷ್ಠವಾಗಿಯೇ ಇದೆ. ಅದರಲ್ಲಿಯೂ ಕರ್ನಾಟಕದ ಹಳೇ ಮೈಸೂರು ಭಾಗದಲ್ಲಿ ಕೊಂಚ ಸಪೋರ್ಟ್ ಸಿಕ್ಕಿದರೆ ನಾಲ್ಕೈದು ಸ್ಥಾನಗಳನ್ನು ಗೆಲ್ಲುವು ದಕ್ಕೆ ಬೇಕಾದ ತಯಾರಿಯನ್ನು ಜೆಡಿಎಸ್ ಮಾಡಿಕೊಳ್ಳಬಹುದು.

ಬಿಜೆಪಿಯೊಂದಿಗೆ ಹೋಗುವುದಕ್ಕೂ ಜೆಡಿಎಸ್ ವಿಧಿಸಿದ್ದ ಷರತ್ತು ಗಳೂ ಇವೇ ಆಗಿದ್ದವು. ಬಿಜೆಪಿಯೊಂದಿಗೆ ದೋಸ್ತಿ ಮಾಡಿಕೊಳ್ಳಲು ಕುಮಾರಸ್ವಾಮಿ
ಸೇರಿದಂತೆ ಹಲವು ನಾಯಕರು ‘ಉತ್ಸುಕತೆ’ ತೋರಿದ್ದರು. ಆದರೆ ಬಿಜೆಪಿಯೊಂದಿಗೆ ಹೋಗುವ ಪ್ರಸ್ತಾಪ ದೇವೇಗೌಡರಿಗೆ ಅಷ್ಟಾಗಿ ಹಿಡಿಸಿಲ್ಲ. ಅದಕ್ಕೆ ಕಾರಣವೂ
ಸರಳವಾಗಿದೆ. ಎನ್‌ಡಿಎದಲ್ಲಿ ಅಽಕೃತವಾಗಿ ಗುರುತಿಸಿ ಕೊಂಡರೆ, ಜೆಡಿಎಸ್‌ಗೆ ಹೆಚ್ಚು ಕಿಮ್ಮತ್ತು ಸಿಗುವುದಿಲ್ಲ. ಪ್ರಾದೇಶಿಕವಾಗಿಯೂ ಇಷ್ಟು ದಿನ ಬಿಜೆಪಿಯ
ತತ್ತ್ವ-ಸಿದ್ಧಾಂತಗಳ ವಿರುದ್ಧ ಹೋರಾಡಿಕೊಂಡು ಬಂದು, ಇದೀಗ ಏಕಾಏಕಿ ಮೈತ್ರಿಯೆಂದರೆ ಮತದಾರರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ.

ಜಾತ್ಯತೀತ ಪರಿಕಲ್ಪನೆಯಲ್ಲಿ ತನ್ನ ಅಸ್ಮಿತೆ ಉಳಿಸಿಕೊಂಡಿರುವ ಜೆಡಿಎಸ್ ಇದೀಗ ಬಿಜೆಪಿಯೊಂದಿಗೆ ಹೋದರೆ, ಅಲ್ಪಸಂಖ್ಯಾತರು, ದಲಿತರ ಬಹುದೊಡ್ಡ ಮತಬ್ಯಾಂಕ್ ಜೆಡಿಎಸ್‌ನ ಕೈಬಿಟ್ಟು ಕಾಂಗ್ರೆಸ್ ನೊಂದಿಗೆ ಹೋಗುವ ಸಾಧ್ಯತೆಯಿದೆ. ಈಗಾಗಲೇ ಸಾಂಪ್ರದಾಯಿಕ ಮತಗಳನ್ನು ಕಳೆದುಕೊಂಡು ಸಂಕಷ್ಟ
ದಲ್ಲಿರುವ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಸೇರಿದರೆ ಮತಗಳಿಕೆ ಪ್ರಮಾಣ ಇನ್ನಷ್ಟು ಇಳಿಮುಖವಾಗುವ ಸಾಧ್ಯತೆಯಿದೆ. ಈ ಚುನಾವಣೆಯಲ್ಲಿ ಬಿಜೆಪಿ ಯೊಂದಿಗೆ ಸೀಟ್ ಶೇರಿಂಗ್ ಮಾಡಿಕೊಂಡರೆ ಎರಡರಿಂದ ಮೂರು ಸ್ಥಾನವನ್ನು ಗೆದ್ದುಕೊಂಡು ಬರುವ ಸಾಧ್ಯತೆಗಳಿವೆ. ಅದು ಜೆಡಿಎಸ್ ಬಲದ ಮೇಲೆ ಎನ್ನುವುದಕ್ಕಿಂತ ಬಿಜೆಪಿಯೊಂದಿಗೆ ಹೋಗಿದ್ದಕ್ಕೆ ಎನ್ನುವ ಸಂದೇಶ ರವಾನೆಯಾಗುತ್ತದೆ. ಆದರೆ ಮುಂದಿನ ಚುನಾವಣೆ ವೇಳೆಗೆ ಕರ್ನಾಟಕದಲ್ಲಿ ಜೆಡಿಎಸ್
ಸಂಘಟನೆಯನ್ನು ಸಂಪೂರ್ಣ ಕಳೆದುಹೋಗುವಂತೆ ಬಿಜೆಪಿ ಮಾಡುವುದು ನಿಶ್ಚಿತ. ಆದ್ದರಿಂದ ಈ ಬಾರಿಯ ಮೈತ್ರಿ ಜೆಡಿಎಸ್‌ಗೆ ಅನಿವಾರ್ಯವಿದ್ದರೂ, ಬಿಜೆಪಿಯಿಂದಲೇ ಆಹ್ವಾನ ಬರಲಿ ಎನ್ನುವ ಆಲೋಚನೆಯಲ್ಲಿ ಜೆಡಿಎಸ್ ಇರುವುದು ಖಚಿತ.

ಆದರೆ ಕರ್ನಾಟಕದ ಬಿಜೆಪಿ ಮಟ್ಟಿಗೆ ನೋಡುವುದಾದರೆ, ಜೆಡಿಎಸ್‌ನೊಂದಿಗಿನ ಮೈತ್ರಿ ಅನಿವಾರ್ಯ. ಮೈತ್ರಿ ಮಾತುಗಳು ಆರಂಭಗೊಂಡ ದಿನಗಳಲ್ಲಿ ಬಿಜೆಪಿಯ ವರಿಷ್ಠರು ಮೈತ್ರಿಗಿಂತ ವಿಲೀನದ ಚರ್ಚೆಯನ್ನೇ ಜೆಡಿಎಸ್ ವರಿಷ್ಠರ ಮುಂದಿಟ್ಟಿದ್ದಾರೆ. ಆದರೆ ಇದನ್ನು ದೇವೇಗೌಡರು ಬಿಲ್‌ಕುಲ್ ಒಪ್ಪಿಲ್ಲ ಎನ್ನುವುದು ಸ್ಪಷ್ಟ. ಆದ್ದರಿಂದ ಮೈತ್ರಿಯ ಆಫರ್ ಅನ್ನು ಮುಂದಿಟ್ಟಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಕೆಲವು ಲಾಭಗಳಿವೆ. ಪ್ರಮುಖವಾಗಿ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿದರೆ, ಜೆಡಿಎಸ್ ನೊಂದಿಗೆ ದಶಕಗಳಿಂದ ಇರುವ ಒಕ್ಕಲಿಗರ ಮತಗಳನ್ನು
ತನ್ನತ್ತ ಸೆಳೆಯುವುದು ಒಂದು ವಿಷಯವಾದರೆ, ಈವರೆಗೆ ಹಳೇ ಮೈಸೂರು ಭಾಗದಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ಬಿಜೆಪಿಯ ಸಂಘಟನೆ ‘ಚಿಗುರು’ ಒಡೆದಿಲ್ಲ.

ಆದ್ದರಿಂದ ಜೆಡಿಎಸ್ ಅನ್ನು ಬಳಸಿಕೊಂಡು ಸಂಘಟನೆಗೆ ಬಲ ತುಂಬುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿತ್ತು. ಇದರೊಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಠಿಣ ಎನಿಸುವ ಮಂಡ್ಯ, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರದಂಥ ಐದಾರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಮೂಲಕ ಎನ್‌ಡಿಎ ಸಂಖ್ಯಾಬಲ ವನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರವನ್ನು ಹಾಕಿಕೊಂಡಿತ್ತು. ಆದರೆ ಬಿಜೆಪಿ ಹಾಗೂ ಜೆಡಿಎಸ್ ಹಾಕಿಕೊಂಡಿದ್ದ ಲೆಕ್ಕಾಚಾರಗಳಲ್ಲಿ ಪಾಸಿಟಿವ್ ಜತೆ ಕೆಲ ನೆಗೆಟಿವ್ ಅಂಶಗಳೂ ಸೇರಿಕೊಂಡಿದ್ದು, ಮೈತ್ರಿಯ ಮಾತುಕತೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದರೆ ತಪ್ಪಾಗುವುದಿಲ್ಲ. ಪ್ರಮುಖವಾಗಿ ಬಿಜೆಪಿಯೊಂದಿಗೆ ಜೆಡಿಎಸ್ ಹೋದರೆ, ಮೊದಲೇ ಹೇಳಿದಂತೆ ‘ಜಾತ್ಯತೀತ’ ಲೆಬಲ್ ಅನ್ನು ಕೆಳಗೆ ಇಳಿಸಬೇಕಾಗುತ್ತದೆ.
ಇನ್ನು ಬಿಜೆಪಿ ಒಂದು ವೇಳೆ ಜೆಡಿಎಸ್ ಅನ್ನು ಜತೆಯಲ್ಲಿ ಸೇರಿಸಿಕೊಂಡರೆ, ಬಿಹಾರದಲ್ಲಿ ಜೆಡಿಯುವಿನ ನಿತೀಶ್ ಕುಮಾರ್ ರೀತಿ ಕುಮಾರಸ್ವಾಮಿ ಅವರು ಬೆಳೆದುಬಿಡುವ ಆತಂಕವಿದೆ.

ಸದ್ಯಕ್ಕೆ ಕರ್ನಾಟಕ ಬಿಜೆಪಿಯಲ್ಲಿ ಹೇಳಿಕೊಳ್ಳುವ ನಾಯಕತ್ವವಿಲ್ಲದಿರುವುದು ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಲು ಕಾರಣ ಎನ್ನಲಾಗಿದೆ. ಈ ಎಲ್ಲ ಸಾಧಕ-ಬಾಧಕಗಳಿಗಿಂತ ಮುಖ್ಯವಾಗಿ ಕರ್ನಾಟಕದಲ್ಲಿ ತ್ರಿಕೋನ ಸ್ಪರ್ಧೆಯಿದೆ. ಆದ್ದರಿಂದ ಮೂರು ಪಕ್ಷಗಳು ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು, ಕೆಲವೊಂದು
ಸೀಟುಗಳನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಇದರೊಂದಿಗೆ ತತ್ತ್ವ-ಸಿದ್ಧಾಂತದ ವಿಷಯದಲ್ಲಿಯೂ ಸಮಸ್ಯೆಯಿರುವುದರಿಂದಯಾರೊಂದಿಗೆ ಯಾರೇ ಮೈತ್ರಿ ಮಾಡಿ
ಕೊಂಡರೂ ಕೆಲವೊಂದು ಕ್ಷೇತ್ರ ಬಿಟ್ಟುಕೊಡುವ ಸಮಸ್ಯೆ ತಲೆದೋರು ವುದು ನಿಶ್ಚಿತ. ಆ ಕಾರಣಕ್ಕಾಗಿಯೇ, ಮೈತ್ರಿಯ ವಿಷಯದಲ್ಲಿ ಈಗಲೂ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಹಾಗೆ ನೋಡಿದರೆ, ಲೋಕಸಭಾ ಚುನಾವಣೆಯಲ್ಲಿ ‘ಎನ್‌ಡಿಎ’ ಅಥವಾ ‘ಇಂಡಿಯ’ ಜತೆ ಸೇರಲೇಬೇಕು ಎನ್ನುವ ಲಿಖಿತ ನಿಯಮವೇನೂ ಇರಲಿಲ್ಲ. ಹಲವು ಪ್ರಾದೇಶಿಕ ಪಕ್ಷಗಳು ಜೆಡಿಎಸ್ ರೀತಿಯಲ್ಲಿಯೇ ಸ್ವತಂತ್ರ ವಾಗಿ ಸ್ಪಽಸುವ ಲೆಕ್ಕಾಚಾರದಲ್ಲಿವೆ. ‘ಎನ್‌ಡಿಎ’ ಜತೆ ೩೮ ಪಕ್ಷಗಳು, ‘ಇಂಡಿಯ’ ಜತೆ ೨೬ ಪಕ್ಷಗಳು ಕಾಣಿಸಿಕೊಂಡಿವೆ. ಈ ಎರಡನ್ನೂ ಮೀರಿ ತಟಸ್ಥವಾಗಿ ಹಲವು ಪಕ್ಷಗಳಿವೆ. ಪ್ರಮುಖವಾಗಿ ಕರ್ನಾಟಕದಲ್ಲಿ ಜೆಡಿಎಸ್, ಉತ್ತರ ಪ್ರದೇಶ ಭಾಗದಲ್ಲಿ ಬಹುಜನ ಸಮಾಜ ಪಕ್ಷ, ಬಿಜು ಜನತಾದಳ, ವೈಎಸ್‌ಆರ್ ಕಾಂಗ್ರೆಸ್, ಓವೈಸಿ, ರಾಷ್ಟ್ರೀಯ ಲೋಕದಳ ಸೇರಿದಂತೆ ೧೨ಕ್ಕೂ ಹೆಚ್ಚು ಪಕ್ಷಗಳು ತಟಸ್ಥವಾಗಿವೆ. ಈ ಎಲ್ಲ
ಪಕ್ಷಗಳೂ, ತಟಸ್ಥ ನೀತಿಯ ಮೊರೆಹೋಗಿರುವುದಕ್ಕೆ, ಬಿಜೆಪಿಯೊಂದಿಗೆ ಗುರುತಿಸಿಕೊಂಡರೆ ಪಕ್ಷದ ಮತಗಳನ್ನು ಕಳೆದುಕೊಳ್ಳುತ್ತೇವೆ. ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದರೆ ‘ಭವಿಷ್ಯ’ವಿಲ್ಲ ಎನ್ನುವ ಕಾರಣವಲ್ಲದೇ ಮತ್ತೇನು ಇಲ್ಲ ಎನ್ನುವುದು ಸ್ಪಷ್ಟ.

ಆದರೆ ಲೋಕಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿರುವ ಜೆಡಿಎಸ್‌ಗೆ ಇದೀಗ ‘ಅತ್ತ ದರಿ, ಇತ್ತ ಪುಲಿ’ ಎನ್ನುವ ಪರಿಸ್ಥಿತಿ ಎದುರಾಗಿದೆ ಎಂದರೆ ತಪ್ಪಾಗು ವುದಿಲ್ಲ. ಆ ಕಾರಣಕ್ಕಾಗಿಯೆ ದೇವೇಗೌಡರು ಸ್ವತಂತ್ರ ಸ್ಪರ್ಧೆಯ ಮಾತುಗಳನ್ನು ಆಡುತ್ತಿದ್ದರೆ, ಕುಮಾರಸ್ವಾಮಿ ಅವರು ‘ಮೌನ’ಕ್ಕೆ ಶರಣಾಗಿ ಕೊನೆಯ ತನಕ ಕಾದು ನೋಡುವ ತಂತ್ರ ಅನುಸರಿಸುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಈಗಲೂ ಜೆಡಿಎಸ್-ಬಿಜೆಪಿಯ ಮೈತ್ರಿಯ ಬಾಗಿಲು ಶಾಶ್ವತವಾಗಿ ಮುಚ್ಚಿಲ್ಲ. ಚುನಾವಣೆಯ ತನಕ ಆಗ ಬಹುದಾದ ರಾಜಕೀಯ ತಲ್ಲಣಗಳನ್ನು ನೋಡಿಕೊಂಡು ಜೆಡಿಎಸ್‌ನೊಂದಿಗೆ ಬಿಜೆಪಿ ಮುಂದಿನ ಹೆಜ್ಜೆಯಿಡಲಿದೆ ಎನ್ನುವುದು ಸ್ಪಷ್ಟ. ಆದರೆ ಆ ಹೊತ್ತಿನವರೆಗೆ ಕಾಯಬೇಕೇ? ಇಲ್ಲದಿದ್ದರೆ ಆಗಿದ್ದು ಆಯಿತು ಎಂದು ಕಾಂಗ್ರೆಸ್‌ನೊಂದಿಗೆ ಸೇರಿಕೊಂಡು ‘ಇಂಡಿಯ’ವನ್ನು ಬಲಪಡಿಸಬೇಕೇ ಅಥವಾ ಸ್ವಂತ ಬಲದಲ್ಲಿ ಬಂದಷ್ಟು ಬರಲಿ ಎಂದು ಏಕಾಂಗಿ ಸ್ಪರ್ಧೆ ಮಾಡಬೇಕೇ? ಎನ್ನುವ ಗೊಂದಲದಲ್ಲಿ ಜೆಡಿಎಸ್ ಇರುವುದಂತೂ ಸತ್ಯ.