ವಿಶ್ಲೇಷಣೆ
ಡಾ.ಜಗದೀಶ್ ಮಾನೆ
ಮೂರು ವರ್ಷಗಳ ಹಿಂದೆ, ಆರ್ಮೇನಿಯಾದ ‘ನಗೊರ್ನೋ ಕರಾಬಕ್’ ಪ್ರದೇಶವನ್ನು ವಶಪಡಿಸಿಕೊಳ್ಳಲು ಅಜರ್ಬೈಜಾನ್ ರಾಷ್ಟ್ರವು ಆರ್ಮೇನಿಯಾದ ಮೇಲೆ ಯುದ್ಧ ಮಾಡಿತ್ತು. ಪಾಕಿಸ್ತಾನ ಮತ್ತು ಟರ್ಕಿ ಸೇನೆಗಳ ನೆರವು, ಇಸ್ರೇಲ್ನ ಆಯುಧಗಳ ಬಲದೊಂದಿಗೆ ಆರ್ಮೇನಿಯಾವನ್ನು ಸೋಲಿಸಿ ಸದರಿ ಪ್ರದೇಶವನ್ನು ತನ್ನ ವಶಮಾಡಿಕೊಂಡಿತ್ತು.
ಬಳಿಕ ಯುದ್ಧ ನಿಲ್ಲಬೇಕಿತ್ತು. ಆದರೆ ದುರಾಸೆಗೆ ಬಿದ್ದ ಅಜರ್ಬೈಜಾನ್, ಮೆಗ್ರಿಫಿಜ್ ಎಂಬ ಆರ್ಮೇನಿಯಾದ ಮತ್ತೊಂದು ಪ್ರದೇಶದ ಮೇಲೂ ಕಣ್ಣುಹಾಕಿದೆ. ಅಂದು ಕೊಂಡಂತೆಯೇ ಆ ಪ್ರದೇಶವನ್ನೂ ವಶಪಡಿಸಿಕೊಂಡು ಬಿಟ್ಟರೆ, ಆರ್ಮೇನಿಯಾಗೆ ಸುತ್ತಲೂ ಶತ್ರುಗಳೇ ಆವರಿಕೊಂಡಂತಾಗುತ್ತದೆ.
ಆರ್ಮೇನಿಯಾದ ಮಿತ್ರರಾಷ್ಟ್ರ ಇರಾನ್ ಕೂಡ ಪಕ್ಕದಲ್ಲಿಯೇ ಇದ್ದು ಆರ್ಮೇನಿಯಾದ ಮೆಗ್ರಿಫಿಜ್ ಪ್ರದೇಶ ದೊಂದಿಗೆ ಗಡಿ ಹಂಚಿಕೊಂಡಿದೆ. ಇದೇ ಕಾರಣಕ್ಕಾಗಿ ಈ ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ನಿಲ್ಲಿಸುವುದು ಅಜರ್ಬೈಜಾನ್ ಉದ್ದೇಶ. ಹಿಂದೊಮ್ಮೆ ಈ ಎರಡೂ ರಾಷ್ಟ್ರಗಳು ಸೋವಿಯತ್ ಒಕ್ಕೂಟದ ಭಾಗವೇ ಆಗಿದ್ದವು. ಒಕ್ಕೂಟ ಒಡೆದ ನಂತರ ಜನಸಂಖ್ಯೆಯನ್ನಾಧರಿಸಿ ಅವು ಬೇರೆ ಬೇರೆಯಾದವು. ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರದೇಶ ಆರ್ಮೇನಿಯಾ ಆದರೆ, ಮುಸ್ಲಿಮರ ಬಾಹುಳ್ಯದ ಪ್ರದೇಶ ಅಜರ್ಬೈಜಾನ್ ದೇಶವಾಯಿತು. ಹೀಗೆ ಜನಾಂಗಗಳ ಆಧಾರದ ಮೇಲೆ ಅವು ಬೇರ್ಪಟ್ಟವು.
ಆದರೆ, ಆರ್ಮೇನಿಯಾದಲ್ಲಿ ಅಜರ್ಬೈಜಾನ್ಗೆ ಸೇರಿದ ಒಂದಷ್ಟು ಪ್ರದೇಶವಿದ್ದರೆ, ಇತ್ತ ಅಜರ್ಬೈಜಾನ್ನಲ್ಲೂ ಆರ್ಮೇನಿಯಾಗೆ ಸೇರಿದ ಒಂದಷ್ಟು ಭೂಭಾಗಗಳಿವೆ. ಹೀಗೆ ಅವೈಜ್ಞಾನಿಕವಾದ ಗಡಿವಿಂಗಡಣೆಯ ಕಾರಣ ದಿಂದಾಗಿ ಅಲ್ಲಿ ಪದೇಪದೆ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಆರ್ಮೇನಿಯಾದ ‘ನಕ್ಸ್ ಚೀವನ್’ ಪ್ರದೇಶ ಅಜರ್ಬೈಜಾನ್ ಗೆ ಸೇರುತ್ತದೆ; ಆದರೆ ಅಲ್ಲಿಗೆ ನೇರವಾದ ರಸ್ತೆಯಿಲ್ಲವಾದ್ದರಿಂದ ಅಜರ್ಬೈಜಾನ್ನವರು ಅಲ್ಲಿಗೆ ಹೋಗಬೇಕೆಂದರೆ ಸುತ್ತಿಕೊಂಡೇ ಹೋಗಬೇಕು.
ಆರ್ಮೇನಿಯಾದ ಮೆಗ್ರಿಕಾರಿಡಾರ್ ಪ್ರದೇಶದ ಮಾರ್ಗವಾಗಿಯೇ ಭಾರತದ ಯುದ್ಧಸಾಮಗ್ರಿಗಳು ಆರ್ಮೇನಿಯಾಗೆ ಸರಬರಾಜಾಗುತ್ತಿವೆ. ಈ ಪ್ರದೇಶವನ್ನು
ವಶಪಡಿಸಿಕೊಂಡು ಆ ಮಾರ್ಗವನ್ನೇ ಬಂದ್ ಮಾಡುವ ಹುನ್ನಾರ ಅಜರ್ಬೈಜಾನ್ ದೇಶದ್ದು; ಹೀಗೆ ಮಾಡುವುದರಿಂದ ಆರ್ಮೇನಿಯಾದೊಂದಿಗಿನ ಇರಾನ್ ಹಾಗೂ ಭಾರತದ ಸಂಪರ್ಕ ಕಡಿತವಾಗುತ್ತದೆ ಎಂಬುದು ಅಜರ್ಬೈಜಾನ್ನ ಲೆಕ್ಕಾಚಾರ. ಹೀಗೆ ಯಾವಾಗ ಬೇಕಾದರೂ ಯುದ್ಧ ಭುಗಿಲೇಳುವ ಸನ್ನಿವೇಶ ವಿರುವುದರಿಂದ ಆರ್ಮೇನಿಯಾ ಮತ್ತು ಅಜರ್ಬೈಜಾನ್ ತಮ್ಮ ಶಸಾಗಾರವನ್ನು ಭರ್ತಿಮಾಡಿ ಕೊಳ್ಳುತ್ತಿವೆ.
ಪಾಕಿಸ್ತಾನ ಮತ್ತು ಟರ್ಕಿಯ ಜತೆ ಅಜರ್ಬೈಜಾನ್ ಮೈತ್ರಿ ಮಾಡಿಕೊಂಡಿದೆ, ಹೀಗಾಗಿ ಭಾರತವು ಆರ್ಮೇನಿಯಾದ ಬೆನ್ನಿಗೆ ನಿಂತಿದೆ. ಪಾಕಿಸ್ತಾನ-ಟರ್ಕಿ-ಅಜರ್ಬೈಜಾನ್ ಕೂಟವು ಯಾವತ್ತಿಗೂ ಭಾರತದ ವಿರೋಽ. ಅಜರ್ಬೈಜಾನ್ ದೇಶವು ಮೆಗ್ರಿಕಾರಿಡಾರ್ ಪ್ರದೇಶವನ್ನು ವಶಪಡಿಸಿಕೊಂಡು ಆ ಭಾಗದಲ್ಲಿ ಮತ್ತಷ್ಟು ಬಲಶಾಲಿಯಾದರೆ, ಅದನ್ನು ಸಂಪರ್ಕಿಸುವ ರಸ್ತೆಮಾರ್ಗದ ಮೇಲೆ ಅಜರ್ಬೈಜಾನ್ ಮಾತ್ರವಲ್ಲದೆ ಪಾಕಿಸ್ತಾನ ಹಾಗೂ ಟರ್ಕಿ ದೇಶಗಳ ಹಿಡಿತವೂ
ಮತ್ತಷ್ಟು ಗಟ್ಟಿಯಾಗುತ್ತದೆ. ಒಂದೊಮ್ಮೆ ಹೀಗಾದರೆ, ಚೀನಾ ಕೂಡ ಅಲ್ಲಿಗೆ ಕಾಲಿಡುವ ಸಾಧ್ಯತೆ ಹೆಚ್ಚು ಮತ್ತು ಈ ಬೆಳವಣಿಗೆ ಭಾರತದ ಪಾಲಿಗೆ ಒಳ್ಳೆಯದಲ್ಲ. ಅಜರ್ಬೈಜಾನ್, ಪಾಕಿಸ್ತಾನ ಮತ್ತು ಟರ್ಕಿ ಈ ಮೂರೂ ‘ಸುನ್ನಿ’ ದೇಶಗಳು ಒಗ್ಗೂಡುವುದು ‘ಶಿಯಾ’ ರಾಷ್ಟ್ರಗಳ ಪಾಲಿಗೂ ಅಪಾಯ.
ಹೀಗಾಗಿ ಇರಾನ್ ಕೂಡ ಇದನ್ನು ಸಹಿಸಿಕೊಳ್ಳುವುದಿಲ್ಲ. ಏಕೆಂದರೆ, ರಷ್ಯಾದ ಮೂಲಕ ಯುರೋಪನ್ನು ಸಂಪರ್ಕಿಸಲು ಇರಾನ್ಗೆ ಇರುವ ದಾರಿಯನ್ನು ಇದು ಮುಚ್ಚುತ್ತದೆ. ಹಾಗಾಗಿ ಭಾರತ, ಇರಾನ್ ಮತ್ತು ಆರ್ಮೇನಿಯಾ ರಾಷ್ಟ್ರ ಗಳು ಜಂಟಿಕೂಟವನ್ನು ರಚಿಸಿಕೊಂಡಿವೆ. ಈ ಹಿಂದೆ ರಷ್ಯಾ ಕೂಡ ಆರ್ಮೇನಿಯಾ ದೊಂದಿಗೆ ಸೇನಾ ಒಪ್ಪಂದ ಮಾಡಿಕೊಂಡು ತನ್ನ ಸೇನೆಯನ್ನು ಅಲ್ಲಿ ನಿಯೋಜಿಸಿತ್ತು. ಸದ್ಯಕ್ಕೆ ಉಕ್ರೇನ್ನೊಂದಿಗೆ ರಷ್ಯಾ ಯುದ್ಧದಲ್ಲಿ ತೊಡಗಿರುವುದರಿಂದ ಅದು ಆರ್ಮೇನಿಯಾಕ್ಕೆ ನೆರವಾಗುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಇದೇ ಸಮಯವೆಂದುಕೊಂಡು ಅಜರ್ಬೈಜಾನ್ ಯುದ್ಧಕ್ಕೆ ಸನ್ನದ್ಧವಾಗುತ್ತಿದೆ.
ಇದನ್ನರಿತ ಆರ್ಮೇನಿಯಾ ಭಾರತದ ನೆರವು ಕೋರಿದೆ ಹಾಗೂ ನಮ್ಮಿಂದ ಯುದ್ಧಸಾಮಗ್ರಿಗಳನ್ನು ಖರೀದಿಸುತ್ತಿದೆ. ಕಳೆದ ವರ್ಷ ಭಾರತ ಮತ್ತು ಆರ್ಮೇನಿ ಯಾದ ನಡುವೆ ೪೦೦ ಬಿಲಿಯನ್ ಡಾಲರ್ ಮೌಲ್ಯದ ಶಸಾಸ ಖರೀದಿಯ ಒಪ್ಪಂದ ವಾಗಿತ್ತು. ಅದರ ಪ್ರಕಾರ ಭಾರತವು ‘ಪಿನಾಕ’ ರಾಕೆಟ್ ಲಾಂಚರ್ ಗಳು, ‘ಸ್ವಾತಿ’ ರೆಡಾರ್ಗಳು ಮತ್ತು ಟ್ಯಾಂಕ್ -ನಿರೋಧಕ ಕ್ಷಿಪಣಿಗಳನ್ನು ಆರ್ಮೇನಿಯಾಕ್ಕೆ ಕಳುಹಿಸಿದೆ. ಪಿನಾಕಾ ಲಾಂಚರ್ ಬಹಳ ಬಲಿಷ್ಠವಾಗಿದ್ದು ಏಕಕಾಲಕ್ಕೆ ೧೨ ಕ್ಷಿಪಣಿಗಳನ್ನು ಬೇರೆ ಬೇರೆ ದಿಕ್ಕುಗಳಿಗೆ ಉಡಾಯಿಸಬಲ್ಲದು.
ಇದು ಶೂಟ್ ಆಂಡ್ ಸ್ಕೂಟ್ ಮಾದರಿಯ ಲಾಂಚರ್ ಆಗಿದ್ದು, ೪೪ ಸೆಕೆಂಡುಗಳಲ್ಲಿ ಕ್ಷಿಪಣಿಗಳನ್ನು ಒಂದೇ ಬಾರಿಗೆ ಉಡಾಯಿಸಿ ನಂತರ ಮತ್ತೊಂದು ಸ್ಥಳಕ್ಕೆ ಹೋಗುತ್ತದೆ. ಹೀಗಾಗಿ ಶತ್ರುಗಳ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ತನ್ನನ್ನು ಕಾಪಾಡಿಕೊಳ್ಳಬಲ್ಲ ಸಾಮರ್ಥ್ಯ ಇದಕ್ಕಿದೆ. ಪಿನಾಕಾ ಉಡಾಯಿಸುವ ಕ್ಷಿಪಣಿಗಳಿಗೆ ಒಂದು ಕಿ.ಮೀ. ಸುತ್ತ ಮುತ್ತಲಿನ ಪ್ರದೇಶವನ್ನು ಧ್ವಂಸಮಾಡುವ ಸಾಮರ್ಥ್ಯವಿದ್ದು, ಗಡಿಗೆ ಸಮೀಪವಿರುವ ಶತ್ರುಸ್ಥಾವರಗಳು, ಶಸ್ತ್ರಾಸ್ತ್ರಕೋಠಿ
ಗಳು, ಮಿಲಿಟರಿ ಸಜ್ಜಿಕೆಗಳು ಮತ್ತು ಏರ್ಸ್ಟ್ರಿಪ್ಗಳನ್ನು ಇವು ನಿಖರವಾಗಿ ನಾಶಮಾಡಬಲ್ಲವು. ಇಂಥ ಲಾಂಚರ್ಗಳು ಆರ್ಮೇನಿಯಾದ ಪಾಲಾಗುತ್ತಿರುವು ದರಿಂದ ಅಜರ್ಬೈ ಜಾನ್ಗೆ ಆತಂಕ ಶುರುವಾಗಿದೆ.
ಹೀಗಾಗಿ ಅದು, ‘ನೀವು ನಿಮ್ಮ ಅಲಿಪ್ತ ನೀತಿಯನ್ನೇ ಅನುಸರಿಸಿ, ದಯವಿಟ್ಟು ಅದನ್ನು ಉಲ್ಲಂಘಿಸಬೇಡಿ. ನಿಮ್ಮ ವಿದೇಶಾಂಗ ನೀತಿಯ ಪ್ರಕಾರ ಆರ್ಮೇನಿ ಯಾಕ್ಕೆ ನೀವು ಶಸ್ತ್ರಾಸ್ತ್ರ ಮಾಡುವುದು ಸರಿಯಲ್ಲ. ಇದರಿಂದಾಗಿ ಎರಡು ರಾಷ್ಟ್ರಗಳ ಶಾಂತಿ ಮಾತುಕತೆಗೆ ಭಂಗ ವಾಗುತ್ತದೆ ಮತ್ತು ಶಾಂತಿಯನ್ನು ನೀವೇ ಕದಡಿದಂತಾಗುತ್ತದೆ’ಎಂದು ಭಾರತವನ್ನು ಗೋಗರೆಯುತ್ತಿದೆ. ಭಾರತದ ವಿದೇಶಾಂಗ ನೀತಿ ಹೀಗೇ ಇರಬೇಕು ಎಂಬುದನ್ನು ಬೇರೆ ದೇಶಗಳು ನಮಗೆ ಹೇಳುವ ಅಗತ್ಯವಿಲ್ಲ. ಕಳೆದ ಕೆಲ ವರ್ಷಗಳವರೆಗೆ ಭಾರತ ಅಂಥ ವಿದೇಶಾಂಗ ನೀತಿಯನ್ನೇ ಹೊಂದಿತ್ತು ಎನ್ನಿ. ಆದರೀಗ ಕಾಲ ಬದಲಾಗಿದ್ದು, ಭಾರತ ತನ್ನ ಹಳೆಯ ಅಲಿಪ್ತನೀತಿಯನ್ನು ಬದಲಿಸಿಕೊಂಡಿದೆ.
ಅದನ್ನು ಯಾವಾಗ, ಹೇಗೆ, ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಮಾತ್ರ ಬಳಸಿಕೊಂಡು, ಉಳಿದಂತೆ ತನ್ನ ಲಾಭದ ನಿರ್ಧಾರಗಳನ್ನೇ ಭಾರತ ಕೈಗೊಳ್ಳು ತ್ತಿದೆ ಮತ್ತು ವಿದೇಶಾಂಗ ನೀತಿಗಳಲ್ಲಿ ‘ಡೈನಮಿಕ್’ ಎನ್ನಬಹುದಾದ ಬದಲಾವಣೆಗಳನ್ನು ತಂದಿದೆ. ಭಾರತದ ಮಿತ್ರರಾಷ್ಟ್ರವಾಗಿರುವ ಆರ್ಮೇನಿಯಾ, ಕಾಶ್ಮೀರದ ವಿಷಯ ದಲ್ಲಿ ಎಂದಿನಿಂದಲೂ ಭಾರತದ ಪರವಾಗಿಯೇ ನಿಂತಿದೆ. ಹಾಗಾಗಿ ಅದರ ಜತೆಗಿನ ನಂಟು ಭಾರತಕ್ಕೆ ಬಹುಮುಖ್ಯ. ಭಾರತವು ರಫ್ತುದಾರ ರಾಷ್ಟ್ರ ಎಂದು ಕರೆಸಿಕೊಳ್ಳ ಬೇಕಾದರೆ, ಮಿತ್ರಕೂಟದ ರಾಷ್ಟ್ರಗಳಿಗೆ ತನ್ನ ಶಸ್ತ್ರಾಸ್ತ್ರಗಳನ್ನು ಮಾರುವುದು ಸಹಜ. ಆದರೆ, ‘ಆರ್ಮೇನಿಯಾಕ್ಕೆ ನೀವು ಶಸ್ತ್ರಾಸ್ತ್ರ ಗಳನ್ನು ಕೊಟ್ಟರೆ, ನಮ್ಮಿಬ್ಬರ ನಡುವಿನ ಶಾಂತಿ ಮಾತುಕತೆಗೆ ಭಂಗವಾಗುತ್ತದೆ’ ಅನ್ನೋದು ಅಜರ್ಬೈಜಾನ್ನ ಅಳಲು.
ಶಾಂತಿ ಮಾತುಕತೆ ಮಾಡಿಕೊಳ್ಳುತ್ತೇವೆ ಎನ್ನುವ ಅಜರ್ಬೈಜಾನ್, ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿ ಟರ್ಕಿ ಹಾಗೂ ಇಸ್ರೇಲ್ ಜತೆ ಭಾರಿ ಒಪ್ಪಂದ ಮಾಡಿ ಕೊಂಡಿದೆ. ಕಳೆದ ಬಾರಿಯ ಯುದ್ಧದಲ್ಲಿ ಅದು ಇಸ್ರೇಲ್ನಿಂದ ಡ್ರೋನ್ಗಳನ್ನು ಖರೀದಿಸಿದ್ದು ಇದಕ್ಕೊಂದು ಉದಾಹರಣೆ. ಹೀಗಿರುವಾಗ, ತಾನು ಮಾತ್ರ ಶಸ್ತ್ರಾಸ್ತ್ರಗಳನ್ನು ಖರೀದಿಸ ಬಹುದು, ಆದರೆ ಆರ್ಮೇನಿಯಾ ಅಂಥ ಖರೀದಿಗೆ ಮುಂದಾಗಬಾರದು ಮತ್ತು ಭಾರತವು ಅದಕ್ಕೆ ಮಾರಾಟ ಮಾಡಬಾರದು ಅಂದರೆ ಹೇಗೆ? ಇಬ್ಬರು ಪಕ್ಷಸ್ಥರಲ್ಲಿ ಒಬ್ಬ ಬಲಿಷ್ಠನಾಗಿದ್ದು, ಇನ್ನೊಬ್ಬ ಬಲಹೀನನಾದರೆ ಅಲ್ಲಿ ಯಾವ ರೀತಿಯ ಶಾಂತಿಸಂಧಾನ ಆಗುವುದಕ್ಕೆ ಸಾಧ್ಯ? ಹೀಗಾಗಿ
ಭಾರತವು ಆರ್ಮೇನಿಯಾಕ್ಕೆ ಬಲ ತುಂಬುತ್ತಿರುವುದರಲ್ಲಿ ತಪ್ಪೇನಿಲ್ಲ.