Wednesday, 4th December 2024

ಎಚ್ ಡಿಕೆಗೆ ಕೆಲಸ ಇಲ್ಲ, ಜ್ಞಾನೇಂದ್ರಗೆ ಬುದ್ದಿ ಇಲ್ಲ: ತಂಗಡಗಿ

ಕೊಪ್ಪಳ: ಮಾಜಿ ಸಿಎಂ ಕುಮಾರಸ್ವಾಮಿಗೆ ಕೆಲಸ ಇಲ್ಲ. ಆರಗ ಜ್ಞಾನೇಂದ್ರ ಅವರಿಗೆ ಬುದ್ಧಿ ಇಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದರು.‌ ಕುಮಾರಸ್ವಾಮಿ ಅವರು ಈ‌ ಬಾರಿ ಬಿಜೆಪಿಗೆ ಹಚ್ಚು ಸೀಟ್ ಬಂದರೂ ನಾನೇ, ಕಾಂಗ್ರೆಸ್ ಆ ಕಡೆ ಬಂದ್ರೂ ನಾನೇ ಸಿಎಂ ಅಂದುಕೊಂಡಿದ್ದರು. ಆದರೆ, ರಾಜ್ಯದ ಜನ ಸ್ಪಷ್ಟ ಬಹುಮತ ನೀಡುವ ಮೂಲಕ ಅವರನ್ನು ತಿರಸ್ಕರಿಸಿದ್ದಾರೆ. ಅದಕ್ಕೆ ಅವರು ಸ್ವಲ್ಪ ಟೆಂಕ್ಷನ್ ಆಗಿ, ಸರಕಾರದ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಖರ್ಗೆ ಬಣ್ಣದ ಬಗ್ಗೆ ಮಾತನಾಡಿದ ಜ್ಞಾನೇಂದ್ರ ಅವರ ಬುದ್ಧಿ ಭ್ರಮಣೆ ಆಗಿದೆ. ಈ ಭಾಗಕ್ಕೆ ಖರ್ಗೆ ಕೊಡುಗೆ ಏನು ಎಂಬುದು ಗೊತ್ತಿಲ್ಲದೇ ಮಾತನಾಡಿದ್ದಾರೆ. ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ತಿರುಗೇಟು ನೀಡಿದರು.

ಜ್ಞಾನೇಂದ್ರ ಮಾತಿನಿಂದ ಇಡೀ ಕಲ್ಯಾಣ ಕರ್ನಾಟಕದ ಜನರಿಗೆ ಅಪಮಾನ ಆಗಿದೆ. ಆರಗ ಈ ಭಾಗದ ಜನರಿ ಕ್ಷಮೆ ಕೇಳಬೇಕು. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸ್ವಾಭಿಮಾನ ಇದ್ದರೆ, ಬಿಜೆಪಿ ಅವರು ಈ ಭಾಗದಲ್ಲಿ ಓಡಾಡದಂತೆ ಮಾಡಬೇಕು. ಮೋದಿ ಅಂತಾ ಹೆಸರು ಹೇಳಿದ್ದಕ್ಕೆ ರಾಹುಲ್ ಗಾಂಧಿ ಅವರ ಸಂಸತ್ ಸ್ಥಾನ ಅನರ್ಹ ಮಾಡಿದ್ದರು. ಈಗ ಇವರ ಮೇಲೆ ಕೇಸ್ ಹಾಕಲಿ ಎಂದು ಸವಾಲು ಹಾಕಿದರು.

ಯಾವ ಶಾಸಕರು, ಮಂತ್ರಿಗಳು ಲೋಕಸಭೆಗೆ ಸ್ಪರ್ಧೆ ಮಾಡಬೇಕು ಎಂದು ಹೈಕಮಾಂಡ್ ಹೇಳಿಲ್ಲ.‌ ಈ ಬಗ್ಗೆ ‌ದೆಹಲಿ ಸಭೆಯಲ್ಲಿ ಚರ್ಚೆ ಆಗಿಲ್ಲ. ಅಂಥ ಪರಿಸ್ಥಿತಿ ಇನ್ನು ಬಂದಿಲ್ಲ. ಒಂದೊಮ್ಮೆ ಪಕ್ಷ ಸೂಚಿಸಿದ ಕೆಲಸ ಮಾಡಲು ಸಿದ್ಧ. ರಾಹುಲ್ ಗಾಂಧಿ ಸಂಸತ್ ಸ್ಥಾನ ಅನರ್ಹ ಮಾಡಿದ್ದನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ್ದು, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಬಂದಿದೆ.‌ ಬಿಜೆಪಿಯ ದ್ವೇಷ ರಾಜಕಾರಣ ಅವರಿಗೆ ಅರಿವಾಗಿದೆ ಎಂದರು.

ಕಾಲುವೆಗೆ ನೀರು ಬಿಡುಗಡೆ ಮಾಡಿಸದೇ ಸಚಿವ ಶಿವರಾಜ ತಂಗಡಗಿ ಮುಂಬೈ, ದೆಹಲಿ ತಿರುಗುತ್ತಿದ್ದಾರೆ ಎಂಬ ಮಾಜಿ ಶಾಸಕ ಬಸವರಾಜ ದಡೆಸುಗೂರ ಹೇಳಿಕೆ ಪ್ರತಿಕ್ರಿಯೆ ನೀಡಿ, ನಾನು ರೆಸಾರ್ಟ್, ಲಾಡ್ಜ್‌ನಲ್ಲಿ ಮಲಗಲು ಹೋಗಿಲ್ಲ. ನಾನು ಶಾಸಕನ ಜೊತೆ ಮಂತ್ರಿ ಆಗಿ ಕೆಲಸ ಮಾಡುತ್ತಿದ್ದೇನೆ. ಮುಂಬೈ, ದೆಹಲಿಗೆ ನಾನು ನನ್ನ ಕೆಲಸ‌ ನಿಮಿತ್ತ ಹೋಗಿದ್ದೇನೆ. ದಡೆಸುಗೂರ ಬಸವರಾಜ ಮೊದಲು ಚನ್ನಾಗಿ ಕನ್ನಡ ಮಾತನಾಡಲಿ.‌ ತಂಗಡಗಿಗೆ ಬುದ್ಧಿ ಹೇಳುವು ಅಗತ್ಯ ಇಲ್ಲ. ಶಿವರಾಜ ತಂಗಡಗಿಗೆ ಬುದ್ದಿ ಹೇಳಲು ಕನಕಗಿರಿ ಜನರು ಇದ್ದಾರೆ ಎಂದು ತಿರುಗೇಟು ನೀಡಿದರು.

ಅಚ್ಚುಕಟ್ಟು ವ್ಯಾಪ್ತಿಯ ರೈತರು ಆತಂಕ ಪಡುವ ಅಗತ್ಯ ಇಲ್ಲ. ಕುಡಿವ ನೀರಿಗೆ ಮಾತ್ರ ನೀರು ಬಿಡುಗಡೆ ಮಾಡಿದ್ದೇವೆ ಎಂಬ ಭಾವನೆ ತಪ್ಪು. ಹಂತ ಹಂತವಾಗಿ ಕಾಲುವೆಗೆ ನೀರಿನ ಪ್ರಮಾಣ ಹೆಚ್ಚಿಸಲಾಗುತ್ತದೆ. ಎರಡೂ ಬೆಳೆಗೆ ನೀರು ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಿರಿಯರೆಲ್ಲ ಮಂತ್ರಿ ಆಗಿದ್ದಾರೆ ಎಂಬ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಹಿರಿಯರು. ಅವರು ಹತಾಶರಾರುವ ಪ್ರಶ್ನೆಯೇ ಇಲ್ಲ. ಅವರು ರಾಜಕಾರಣ ಮಾಡುವಾಗ ನಾವು ಕಾಲೇಜು ಓದುತ್ತಿದ್ದೆವು. ಅವರ ಸಲಹೆ- ಸಹಕಾರ ಪಡೆದು ನಾವು ಕೆಲಸ ಮಾಡುತ್ತೇವೆ ಎಂದರು.

ಗ್ಯಾರಂಟಿ ಯೋಜನೆಗೆ ಎಸ್ಸಿಪಿ/ ಟಿಎಸ್ಪಿಯ ಅನುದಾನ ಬಳಕೆ ಕುರಿತು ಪ್ರತಿಕ್ರಿಯಿಸಿ, ಈ ಕಾನೂನು ತಂದಿದ್ದೇ ನಾವು. ನಮಗೆ ದಲಿತರ ಶ್ರೇಯೋಭಿವೃದ್ಧಿ ಮಾಡುವುದು ಗೊತ್ತಿದೆ. ನಾವು ಬಿಜೆಪಿಗರಂತೆ ಮೆಟ್ರೋ ಕಾಮಗಾರಿಗೆ ಎಸ್ಸಿ/ ಎಸ್ಟಿ ಅನುದಾನ ಬಳಕೆ ಮಾಡಿಕೊಂಡಿಲ್ಲ. ಬದಲಾಗಿ ಬಡವರ ಕಲ್ಯಾಣದ ಯೋಜನೆಗೆ ಬಳಸುತ್ತಿದ್ದೇವೆ ಎಂದು ‌ಸಮರ್ಥಿಸಿಕೊಂಡರು.