ನವದೆಹಲಿ: ಅಮೃತ್ ಯೋಜನೆಯಡಿ ದೇಶದ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು.
ಈ ಮೂಲಕ ಆಧುನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಒತ್ತು ನೀಡಲಾಯಿತು. ದೇಶದ ಜನರಿಗೆ ರೈಲ್ವೇ ಆದ್ಯತೆಯ ಸಾರಿಗೆಯಾಗಿದೆ ಎಂದು ಪ್ರಧಾನಿ ಹೇಳಿದರು.
ರೈಲ್ವೆ ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರ ಒತ್ತು ನೀಡುತ್ತಿದ್ದು, ಅದರಂತೆ ದೇಶಾದ್ಯಂತ 1309 ನಿಲ್ದಾಣಗಳ ಪುನರಾಭಿವೃದ್ಧಿಗಾಗಿ ಅಮೃತ್ ಭಾರತ್ ಸ್ಟೇಷನ್ ಯೋಜನೆ ಜಾರಿಗೊಳಿಸಲಾಗಿದೆ. ಭಾರತವು ಈಗ ಅಭಿವೃದ್ಧಿಯ ಗುರಿಯತ್ತ ಸಾಗುತ್ತಿದೆ. ಹೊಸ ಶಕ್ತಿ, ಹೊಸ ಸ್ಫೂರ್ತಿ, ಹೊಸ ಸಂಕಲ್ಪಗಳನ್ನು ಹೊಂದಿದೆ. ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಅಮೃತ್ ಯೋಜನೆಯ ಭಾಗವಾಗಿ 508 ನಿಲ್ದಾಣಗಳ ಪುನರಾಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, ಇವುಗಳನ್ನು 24,470 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ಅಭಿವೃದ್ಧಿಗೊಳಿಸಲಾಗುವುದು. ಈ ನಿಲ್ದಾಣಗಳನ್ನು ಎರಡು ನಗರಗಳನ್ನು ಸಂದಿಸುವಂತೆ ‘ನಗರ ಕೇಂದ್ರಿತ’ವಾಗಿ ಅಭಿವೃದ್ಧಿಪಡಿಸಲು ಯೋಜನೆ ಸಿದ್ಧಪಡಿಸ ಲಾಗಿದೆ.
ನವೀಕರಣಕ್ಕೆ ಚಾಲನೆ ಸಿಕ್ಕಿರುವ 508 ನಿಲ್ದಾಣಗಳು ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿವೆ. ಈ ಪೈಕಿ ಉತ್ತರ ಪ್ರದೇಶದಲ್ಲಿ 55, ರಾಜಸ್ಥಾನದಲ್ಲಿ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 32, ಅಸ್ಸೋಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್ನಲ್ಲಿ 22, ಗುಜರಾತ್ನಲ್ಲಿ 21, ತೆಲಂಗಾಣದಲ್ಲಿ 21, ಜಾರ್ಖಂಡ್ನಲ್ಲಿ 20, ಆಂಧ್ರಪ್ರದೇಶದಲ್ಲಿ 18, ತಮಿಳುನಾಡಿನ 18, ಹರಿಯಾಣದ 15, ಕರ್ನಾಟಕದ 13 ನಿಲ್ದಾಣಗಳು ನವೀಕರಣ ಯೋಜನೆಗೆ ಒಳಪಟ್ಟಿರುತ್ತವೆ