Saturday, 23rd November 2024

ಆಗಸ್ಟ್ 12 ರಂದು ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆ

ನವದೆಹಲಿ: ಭಾರತದ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕಣ ರಂಗೇರುತ್ತಿದೆ.

ಇದಕ್ಕೆ ಕಾರಣ ಬ್ರಿಜ್​ ಭೂಷಣ್​ ಸಿಂಗ್​ ಅವರ ಬಣದ ವಿರುದ್ಧವಾಗಿ ಸ್ಪರ್ಧಿಸುತ್ತಿರುವ ಮಹಿಳಾ ಅಭ್ಯರ್ಥಿ. ಕಾಮನ್‌ವೆಲ್ತ್ ಗೇಮ್ಸ್ 2010ರ ಚಾಂಪಿಯನ್ ಅನಿತಾ ಶಿಯೋರಾನ್ ಮತ್ತು ಯುಪಿ ಕುಸ್ತಿ ಸಂಸ್ಥೆಯ ಉಪಾಧ್ಯಕ್ಷ ಸಂಜಯ್ ಸಿಂಗ್ ಕಣದಲ್ಲಿದ್ದಾರೆ.

ಉತ್ತರ ಪ್ರದೇಶ ಕುಸ್ತಿ ಫೆಡರೇಶನ್‌ನ ಉಪಾಧ್ಯಕ್ಷ ಸಂಜಯ್ ಸಿಂಗ್ ಅವರು ಈ ಹಿಂದಿನ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ನಿಕಟವರ್ತಿ. ಆಗಸ್ಟ್ 12 ರಂದು ಚುನಾವಣೆ ನಡೆಯಲಿದ್ದು, ಅನಿತಾ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ. ಅನಿತಾ ಅವರು ಹರಿಯಾಣದವರಾಗಿದ್ದು, ರಾಜ್ಯ ಪೊಲೀಸ್‌ನಲ್ಲಿ ಕೆಲಸ ಮಾಡುತ್ತಿರುವ ಅವರು ಒಡಿಶಾ ಘಟಕದ ಪ್ರತಿನಿಧಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಇಬ್ಬರು ಅಭ್ಯರ್ಥಿಗಳಾದ ಜಮ್ಮು ಮತ್ತು ಕಾಶ್ಮೀರದಿಂದ ದುಶ್ಯಂತ್ ಶರ್ಮಾ ಮತ್ತು ದೆಹಲಿ ಕುಸ್ತಿ ಸಂಸ್ಥೆಯ ಅಧ್ಯಕ್ಷ ಜೈಪ್ರಕಾಶ್ ಸಹ ಬ್ರಿಜ್ ಭೂಷಣ್ ಅವರ ನಿಕಟ ವರ್ತಿಗಳಾಗಿದ್ದು, ಅವರೂ ಕೂಡ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ಇಬ್ಬರೂ ಶನಿವಾರ ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(IOA) ಸ್ಥಾಪಿಸಿದ hoc ಸಮಿತಿ ನಾಮಪತ್ರ ಹಿಂಪಡೆದಿರುವುದನ್ನು ಸ್ಪಷ್ಟಪಡಿಸಿದೆ.

ಚುನಾವಣಾಧಿಕಾರಿ ಹಾಗೂ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಮಹೇಶ್ ಮಿತ್ತಲ್ ಕುಮಾರ್ ಅವರು ಆಗಸ್ಟ್ 7 ರಂದು ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಅದರಲ್ಲಿ ಅಧ್ಯಕ್ಷ (1), ಹಿರಿಯ ಉಪಾಧ್ಯಕ್ಷ (1), ಉಪಾಧ್ಯಕ್ಷ (4), ಪ್ರಧಾನ ಕಾರ್ಯದರ್ಶಿ (1), ಖಜಾಂಚಿ (1), ಜಂಟಿ ಕಾರ್ಯದರ್ಶಿ (2) ಮತ್ತು ಕಾರ್ಯಕಾರಿ ಸದಸ್ಯ (5) ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಲಾಗಿತ್ತು.

ಒಲಿಂಪಿಯನ್ ಜಯಪ್ರಕಾಶ್ ಮೂರು ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದ್ದರು. ನಂತರ ಚಂಡೀಗಢದ ದರ್ಶನ್ ಲಾಲ್ ಮತ್ತು ರೈಲ್ವೆ ಕ್ರೀಡಾ ಪ್ರಚಾರ ಮಂಡಳಿ ಕಾರ್ಯದರ್ಶಿ ಪ್ರೇಮಚಂದ್ ಲೋಚಬ್ ನಡುವೆ ಹಾಗೇ ಖಜಾಂಚಿ ಸ್ಥಾನಕ್ಕೆ ಸತ್ಯಪಾಲ್ ಸಿಂಗ್ ದೇಶ್ವಾಲ್ ಮತ್ತು ಉತ್ತರಾಖಂಡದ ದುಷ್ಯಂತ್ ಶರ್ಮಾ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆ ಇದೆ.

ಮಾಜಿ ಅಧ್ಯಕ್ಷ ಬ್ರಿಜ್​ ಭೂಷಣ್​ ಸಿಂಗ್​ ಬಣದಿಂದ ಎಲ್ಲಾ 15 ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ಪ್ರತಿಭಟನಾನಿರತ ಕುಸ್ತಿ ಪಟುಗಳು ಕೇಂದ್ರ ಸರ್ಕಾರಕ್ಕೆ ಚುನಾವಣೆಯಲ್ಲಿ ಸಿಂಗ್​ ಕುಟುಂಬದಿಂದ ಯಾರು ಸ್ಪರ್ಧಿಸಬಾರದು ಎಂದು ಕೇಳಿಕೊಂಡಿದ್ದರು. ಅದರಂತೆ ಅವರ ಕುಟುಂಬದಿಂದ ಯಾವುದೇ ಅಭ್ಯರ್ಥಿಗಳು ಕಣದಲ್ಲಿಲ್ಲ.