Thursday, 12th December 2024

ಚೀನಾಕ್ಕೆ ಮುಳುವಾಗುತ್ತಿರುವ ಟ್ಯಾಂಗ್ ಪಿಂಗ್ ಮಂತ್ರ

ವಿಶ್ಲೇಷಣೆ

ಮಹಾದೇವ ಬಸರಕೋಡ

ಒಂದು ಬಾರಿ ಸಮುದ್ರದ ದೊಡ್ಡ ತೊರೆಯೊಂದು ದಡಕ್ಕೆ ಬಂದು ಅಪ್ಪಳಿಸಿದಾಗ ಬಹಳಷ್ಟು ಮೀನುಗಳು ದಡಕ್ಕೆ ಬಂದು ಬಿದ್ದವು. ಬಹಳಷ್ಟು ಮೀನುಗಾರರು ಮೀನು ಹಿಡಿಯಲೆಂದು ಸಮುದ್ರದತ್ತ ಧಾವಿಸುತ್ತಿದ್ದರು. ಆಗಾಗ ಬರುವ ಇಂಥ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬುದು ಅವರೆಲ್ಲರ ನಿರ್ಧಾರವಾಗಿತ್ತು. ಒಬ್ಬ ಮೀನುಗಾರ ಮಾತ್ರ ಇದಾವುದನ್ನೂ ಗಮನಿಸದೇ ಸಮುದ್ರದ ತಟದಲ್ಲಿ ಹುಕ್ಕಾ ಸೇದುತ್ತ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ.

ಅಲ್ಲಿಯೇ ಇದ್ದ ಯುವ ಮೀನುಗಾರನೊಬ್ಬ ಇವನನ್ನು ಗಮನಿಸಿ, ಎಲ್ಲರೂ ಮೀನು ಹಿಡಿಯಲು ಆತುರಾತುರ ವಾಗಿ ಹೋಗುತ್ತಿರುವ ಸಂದರ್ಭದಲ್ಲಿ ಇವನು ಅದಾವುದನ್ನೂ ಗಮನಿಸದೆ ಕುಳಿತಿರುವುದನ್ನು ನೋಡಿ ಒಂದು ಕ್ಷಣ ಆಶ್ಚರ್ಯಗೊಂಡ. ಅವನನ್ನು ತದೇಕ ಚಿತ್ತದಿಂದ ಗಮನಿಸಿದ. ಅವನಿಗೆ ಮೀನುಗಳ ವಿಷಯ ಗೊತ್ತಿರ ಲಿಕ್ಕಿಲ್ಲ ಎಂದು ಭಾವಿಸಿ ಅವನಿಗೆ ‘ಇಂದು ಹೇರಳ ವಾಗಿ ಮೀನುಗಳು ಸಿಗುತ್ತಿವೆ. ನಿನಗೆ ವಿಷಯ ತಿಳಿದಿಲ್ಲವೇ? ಅಲ್ಲಿ ನೋಡು ಎಲ್ಲರೂ ಮೀನು ಹಿಡಿಯಲು ಧಾವಿಸುತ್ತಿದ್ದಾರೆ’ ಎಂದ. ಹುಕ್ಕಾ ಸೇದುತ್ತಿದ್ದವ ‘ನನಗೆ ವಿಷಯ ತಿಳಿದೆ’ ಎಂದ ನಿರ್ಲಿಪ್ತ ಭಾವದಲ್ಲಿ. ‘ನಿನಗೆ ಮೀನು ಬೇಡವೇ?’ ಎಂದು ಆ ಯುವಕ ಮತ್ತೆ ಪ್ರಶ್ನಿಸಿದ್ದಕ್ಕೆ, ‘ಬೇಕು. ಇವತ್ತಿಗೆ ಬೇಕಾಗುವಷ್ಟು ನನ್ನ ಬಳಿ ಇದೆ’ ಎಂದ ಆ ನಿರ್ಲಿಪ್ತಜೀವಿ.

‘ಇರಬಹುದು, ಆದರೆ ಇಂಥ ಅವಕಾಶ ಸಿಕ್ಕುವುದು ಅಪರೂಪ. ಮುಂದಿನ ದಿನಗಳಿಗೆಂದು ಇನ್ನಷ್ಟು ಮೀನುಗಳನ್ನು ಹಿಡಿದು ಸಂಗ್ರಹಿಸಿ ಇಟ್ಟುಕೊಳ್ಳಬಹು ದಲ್ಲವೇ?’ ಎಂಬುದು ಯುವಕ ಮರುಪ್ರಶ್ನೆಯಾಗಿತ್ತು. ಹುಕ್ಕಾ ಹೊಗೆಯನ್ನೊಮ್ಮೆ ಬಿಟ್ಟ ಆತ, ‘ಹಾಗೆ ಸಂಗ್ರಹಿಸಿ ಏನು ಮಾಡುವುದು? ಎಂದು ಕೇಳಿದ. ‘ಇದೇನು ಹೀಗೆ ಕೇಳುತ್ತಿರುವೆ? ಅವುಗಳನ್ನು ಮಾರಿ ಬಹಳಷ್ಟು ಹಣ ಸಂಪಾದಿಸಿ ಶ್ರೀಮಂತನಾಗ ಬಹುದು. ಸಂತೋಷದಿಂದ ಇರಬಹುದು, ಅಲ್ಲವೇ?’ ಎಂದು ಸಿಡುಕಿ ನಿಂದ ಉತ್ತರಿಸಿದ ಯುವಕ. ಅದಕ್ಕೆ ಆ ನಿರ್ಲಿಪ್ತಜೀವಿ, ‘ನಿಜ! ನಾನು ಈಗ ಮಾಡುತ್ತಿರುವುದು ಕೂಡ ಅದನ್ನೇ. ಹುಕ್ಕಾ ಸೇದುತ್ತ ಸಂತೋಷ ಅನುಭವಿಸು
ತ್ತಲೇ ಇದ್ದೇನೆ’ ಎಂದ!

ಸೃಷ್ಟಿಯ ಚಕ್ರದಲ್ಲಿ ಬಹುತೇಕ ಪ್ರಾಣಿಗಳು ತಮ್ಮ ಹಸಿವು ಹಿಂಗುವವರೆಗೆ ಆಹಾರ, ಅಗತ್ಯವಿರುವವರೆಗೂ ಆಶ್ರಯ ಪಡೆಯಲು ಪ್ರಯತ್ನಿಸುತ್ತವೆ, ಹೋರಾಟ
ಮಾಡುತ್ತವೆ. ಹಸಿವು ನೀಗಿದ ನಂತರ ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವ ಹುಚ್ಚು ಸಾಹಸಕ್ಕೆ ಅವು ಕೈ ಹಾಕುವುದಿಲ್ಲ. ಆದರೆ ಮನುಷ್ಯ ಮಾತ್ರ ಇವಕ್ಕಿಂತ ತುಂಬ ಭಿನ್ನ. ಅದೆಷ್ಟೇ ಕೊಟ್ಟರೂ ‘ಇನ್ನೂ ಬೇಕು’ ಎನ್ನುವ ತುಡಿತ. ಇದೇ ಕಾರಣಕ್ಕಾಗಿಯೇ ಇನ್ನಿಲ್ಲದ ಧಾವಂತ, ತಲ್ಲಣ, ಒತ್ತಡದ ಬದುಕು. ಅದಕ್ಕಾಗಿ ಏನೆಲ್ಲ ಕಸರತ್ತು, ನಿತ್ಯವೂ ಹೋರಾಟ, ಬಗೆಬಗೆಯ ನಾಟಕ. ಇಹದ ಬದುಕನ್ನು ನೆಮ್ಮದಿಯಿಂದ ಸಾಗಿಸುವುದನ್ನು ಬಿಟ್ಟು ಸುಖಾಸುಮ್ಮನೆ ಸಂಕೀರ್ಣಗೊಳಿಸಿ ಕೊಳ್ಳುವುದು, ಕೊನೆಗೊಮ್ಮೆ ಏನೂ ಮಾಡಲಾಗದ ಸ್ಥಿತಿಯಲ್ಲಿ ವಾಸ್ತವಿಕತೆಯ ಅರಿವಾದಾಗ ಮತ್ತದೇ ನಿರಾಸೆ.

ಅಂತೆಯೇ ಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನವೊಂದರಲ್ಲಿ ‘ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ’ ಎನ್ನುವಂತೆ ಚಿಂತೆಗೆ ಕೊನೆಯೇ ಇಲ್ಲ ಎಂದು ಹೇಳಿದ್ದಾರೆ. ಇದೀಗ ಚೀನಾದಲ್ಲಿ ಸಮಾಜದ ಒಂದು ವರ್ಗಕ್ಕೆ ಇದರ ಅರಿವು ಆದಂತಿದೆ. ಅಲ್ಲಿಯ ಯುವಜನತೆ ತಮಗೆ ಮದುವೆ, ಮಕ್ಕಳು ಸೇರಿದಂತೆ ಇನ್ನಾವುದೇ ಐಷಾರಾಮಿ ಬದುಕು ಬೇಡವೇ ಬೇಡ ಎಂದು ಹೇಳುತ್ತಿದ್ದಾರೆ. ಭ್ರಮಾತ್ಮಕ ಲೋಕವನ್ನು ತೊರೆದು ನೈಜ ಸಂತಸ, ಸಮೃದ್ಧಿ, ನೆಮ್ಮದಿಯನ್ನು ಅರಸುತ್ತಿದ್ದಾರೆ. ದೇಹ ಮತ್ತು ಮನಸ್ಸನ್ನು ಅನಗತ್ಯ ಒತ್ತಡದಿಂದ ಹೊರತರುವುದು ತೀರಾ ಅಗತ್ಯ ಎಂಬುದನ್ನು ಅವರೀಗ ಅರಿತಿದ್ದಾರೆ.

ಯಂತ್ರದಂತೆ ನಿತ್ಯವೂ ದುಡಿಯುತ್ತ, ಅಗತ್ಯಗಳ ಬೆನ್ನುಹತ್ತಿ ಅನಗತ್ಯ ಗೊಂದಲಗಳನ್ನು ಹೆಗಲೇರಿಸಿಕೊಂಡು ಓಡುವ ಪರಿಪಾಠಕ್ಕೆ ಅವರು ಬ್ರೇಕ್ ಹಾಕತೊಡಗಿದ್ದಾರೆ. ಕೊಳ್ಳುಬಾಕ ಸಂಸ್ಕೃತಿ ಮತ್ತು ಸಂಗ್ರಹಣಾ ಪ್ರವೃತ್ತಿಗೆ ಕಡಿವಾಣ ಹಾಕಲು ಹಾತೊರೆಯುತ್ತಿದ್ದಾರೆ. ಇರುವುದರಲ್ಲಿಯೇ ತೃಪ್ತಿಯನ್ನು
ಕಾಣಬೇಕು ಎಂಬುದು ಅವರ ಬಲವಾದ ವಾದವಾಗಿದೆ. ಒಟ್ಟಿನಲ್ಲಿ ವಿಶ್ರಾಂತಿಯಿಲ್ಲದ ಬದುಕು ಅವರಿಗೆ ಬೇಡವಾಗಿದೆ. ಭೌತಿಕ ಸಂಪತ್ತಿಗಿಂತ ನೆಮ್ಮದಿಯ ಬದುಕು ಮುಖ್ಯ ವೆಂಬ ಮಾತನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿರುವ ಅವರೆಲ್ಲ ಬಹುತೇಕ ‘ಟ್ಯಾಂಗ್ ಪಿಂಗ್’ ತಂತ್ರಕ್ಕೆ ಮೊರೆ ಹೋಗಿದ್ದಾರೆ. (ಟ್ಯಾಂಗ್ ಪಿಂಗ್ ಎಂಬುದು ಚೀನಿ ಗ್ರಾಮ್ಯಪದ.

ಸಮಾಜದ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಕಾಣಬರುವ ಅತಿಯಾದ ಕೆಲಸ ಮತ್ತು ಅದರ ನೆರವೇರಿಕೆಗೆಂದು ಹೇರಲಾಗುವ ಒತ್ತಡಗಳನ್ನು ವೈಯಕ್ತಿಕವಾಗಿ
ನಿರಾಕರಿಸುವಿಕೆಯನ್ನು ‘ಟ್ಯಾಂಗ್ ಪಿಂಗ್’ ತಂತ್ರ ಎನ್ನಲಾಗುತ್ತದೆ. ಈ ಮಾರ್ಗವನ್ನು ಅಪ್ಪಿಕೊಳ್ಳುವವರಿಗೆ, ಕಾರ್ಯ ಕ್ಷೇತ್ರದಲ್ಲಿನ ಅಥವಾ ಹೊಣೆಗಾರಿಕೆಯ ನಿರ್ವಹಣೆಯಲ್ಲಿನ ಯಾವುದೇ ತೆರನಾದ ಒತ್ತಡ ಅಥವಾ ಹೊಡೆತ ಗಳಿಂದ ಹೊರಬರುವುದು ಆಯ್ಕೆಯಾಗಿರುತ್ತದೆ. ಬಯಕೆಗಳನ್ನು ತಗ್ಗಿಸಿಕೊಳ್ಳುವುದು, ಜೀವನದ ಕಡೆಗೆ ಹೆಚ್ಚು ಅಸಡ್ಡೆಯ ವರ್ತನೆ ಹೊಮ್ಮಿಸುವುದು ಈ ತಂತ್ರದ ಭಾಗವಾಗಿರುತ್ತದೆ).

ಯುವಕರ ಇಂಥದೊಂದು ಉದಾಸೀನತೆಯ ನಿಲುವು, ಅನಪೇಕ್ಷಿತ ಬದಲಾವಣೆ ಅಲ್ಲಿನ ಸರಕಾರವನ್ನು ತೀವ್ರವಾಗಿ ಕಂಗೆಡಿಸಿದೆ. ಇದು ಸಹಜ ಕೂಡ. ಚೀನಾದ
ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಯುವಕರನ್ನು ಅವರ ಮೊದಲಿನ ಸ್ಥಿತಿಗೆ ತರುವ ಪ್ರಯತ್ನದಲ್ಲಿ ತೊಡಗಿದ್ದಾರೆ. ‘ಯುವಕರೇ, ನೀವೇ ದೇಶದ ಬಹುದೊಡ್ಡ ಸಂಪನ್ಮೂಲ. ನಿಮ್ಮ ಯೋಚನೆಗಳನ್ನು ವಿಸ್ತಾರಗೊಳಿಸಿ. ನಿಮ್ಮ ಅಪಾರ ವಾದ ಪ್ರತಿಭೆಯನ್ನು ಮತ್ತು ಮಾನವ ಸಂಪನ್ಮೂಲವನ್ನು ದೇಶದ ಅಭಿವೃದ್ಧಿಗಾಗಿ ವಿನಿಯೋಗಿಸಿ’ ಎಂದೆಲ್ಲ ಪ್ರೋತ್ಸಾಹದ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಯುವಕರು ಮಾತ್ರ ಈ ಮಾತುಗಳೆಡೆಗೆ ಅಷ್ಟಾಗಿ ಗಮನ ಹರಿಸದೆ ಮತ್ತೆ
ಮತ್ತೆ ‘ಟಾಂಗ್ ಪಿಂಗ್’ ಮಂತ್ರವನ್ನೆ ಜಪಿಸುತ್ತಿದ್ದಾರೆ.

ಚೀನಾದಲ್ಲಿ ಸಂಚಲನ ಮೂಡಿಸಿರುವ ಇಂಥದೊಂದು ಬದಲಾವಣೆಗೆ ಕಾರಣಗಳನ್ನು ಹುಡುಕುವುದು ಕಷ್ಟದ ಕೆಲಸವೇನಲ್ಲ. ‘ದೇಶದ ಸಂಪನ್ಮೂಲವನ್ನು ತೀವ್ರಗತಿಯಲ್ಲಿ ಹೆಚ್ಚಿಸಬೇಕು. ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶ ಎನಿಸಿಕೊಳ್ಳುವುದರ ಕಡೆಗೆ ದಾಪುಗಾಲು ಹಾಕುವಂತಾಗಲು ಜನರು ಹೆಚ್ಚು ಹೆಚ್ಚು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ದೇಶದೆಡೆಗೆ ಬಂಡವಾಳದ ಹೊಳೆಯೇ ಹರಿಯಬೇಕು. ಜಗತ್ತಿನ ಪ್ರಬಲ ರಾಷ್ಟ್ರವಾಗಿ ತಾನು ಹೊರಹೊಮ್ಮಲೇಬೇಕು. ಜಗತ್ತಿನ ಇತರ ದೇಶಗಳ ಮೇಲೆ ತಾನು ಹಿಡಿತ ಸಾಧಿಸಲು ಅನುವು ಮಾಡಿಕೊಡುವ ಎಲ್ಲ ಪ್ರಯತ್ನಗಳನ್ನು ಪಟ್ಟುಬಿಡದೆ ಕೈಗೊಳ್ಳಬೇಕು. ಇಂಥ ಸಾಧನೆ ನೆರವೇರಬೇಕೆಂದರೆ ಆರ್ಥಿಕತೆಯನ್ನು ಬಲಿಷ್ಠಗೊಳಿಸಿಕೊಳ್ಳುವುದೇ ಏಕೈಕ ಮಾರ್ಗ’ ಎಂಬುದು ಚೀನಾ ಹಾಕಿಕೊಂಡಿರುವ ಅಲಿಖಿತ ನಿಯಮ.

ಶತಾಯಗತಾಯ ಇದನ್ನು ಕಾರ್ಯ ಗತಗೊಳಿಸಬೇಕು ಎಂಬ ಧಾವಂತವು ಚೀನಾದಲ್ಲಿ ಅಂತರ್ಗತವಾಗಿರುವುದು ಜಗತ್ತಿಗೆ ಅಪರಿಚಿತ ಸಂಗತಿಯೇನಲ್ಲ. ಇಂಥ ಧೋರಣೆಯಿಂದಾಗಿ ಚೀನಾದಲ್ಲಿ ಉಳ್ಳವರು ಹಾಗೂ ಇಲ್ಲದವರ ನಡುವಿನ ಕಂದಕವು ತೀರಾ ದೊಡ್ಡದಾಗುತ್ತಲೇ ಇತ್ತು. ಯುವಜನತೆಯ ಮೇಲೆ ವಿಪರೀತವಾದ ಕೆಲಸದ ಹೊರೆ ಸೃಷ್ಟಿಯಾಗುತ್ತಲೇ ಇತ್ತು. ಕೇವಲ ಲಾಭವನ್ನಷ್ಟೇ ದೇಶದ ಬಹುದೊಡ್ಡ ಗುರಿಯಾಗಿಸಿ ಕೊಂಡು, ಕಾರ್ಮಿಕರ ದುಃಖ-ದುಮ್ಮಾನಗಳಿಗೆ ಕಿವಿ
ಗೊಡದೆ ಅವರನ್ನು ಇನ್ನಷ್ಟು ದುಡಿಮೆಗೆ ದೂಡುವ ಪ್ರಯತ್ನಗಳನ್ನು ಚೀನಾ ನಿರಂತರವಾಗಿ ಜಾರಿಯಲ್ಲಿ ಇರಿಸಿತ್ತು. ಈ ಪರಿಪಾಠದಿಂದಾಗಿ ಶಿಕ್ಷಣ ಸೇರಿದಂತೆ
ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಪ್ರಬಲ ಪೈಪೋಟಿ ಏರ್ಪಟ್ಟು, ಸಾಮಾನ್ಯ ಜನರು ಅಸಂಗತ ಒತ್ತಡವನ್ನು ನಿತ್ಯವೂ ಅನುಭವಿಸುತ್ತಿದ್ದರು. ಇಂಥ ಅವ್ಯವಸ್ಥೆಯ
ವಿರುದ್ಧ ಚೀನಾದ ಯುವಪೀಳಿಗೆಯು ಆಗಾಗ ದನಿಯೆತ್ತುತ್ತಿದ್ದರೂ ಫಲಿತಾಂಶ ಬಹುತೇಕ ಶೂನ್ಯವೇ ಆಗಿತ್ತು.

ಈ ಎಲ್ಲ ತುಮುಲಗಳ ಒಟ್ಟಾರೆ ಪರಿಣಾಮವಾಗಿ ಹೊರ ಹೊಮ್ಮಿದ್ದೇ ‘ಟ್ಯಾಂಗ್ ಪಿಂಗ್’ ತಂತ್ರ. ವೈಯಕ್ತಿಕ ಬದುಕು ಅಥವಾ ಅಧ್ಯಾತ್ಮದ ನೆಲೆಯಲ್ಲಿ ಅಥವಾ ವಯಸಾದವರಲ್ಲಿ ‘ಟ್ಯಾಂಗ್ ಪಿಂಗ್’ನಂಥ ಬೆಳವಣಿಗೆಯಾದರೆ ಅದನ್ನು ಸಮರ್ಥಿಸಬಹುದಾದರೂ, ಯಾವುದೇ ದೇಶದ ಒಟ್ಟಾರೆ ಭವಿಷ್ಯ ಮತ್ತು ಹಿತದೃಷ್ಟಿ
ಯಿಂದ ಇಂಥದೊಂದು ಬೆಳವಣಿಗೆ ನಿಜಕ್ಕೂ ಅಪೇಕ್ಷಣೀ ಯವಲ್ಲ. ಇದು ದೇಶದ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು ನೀಡಬಲ್ಲದು. ಇಂಥ ಬೆಳವಣಿಗೆಯಿಂದಾಗಿ ಅಭಿವೃದ್ಧಿಯ ಪಥದಲ್ಲಿ ತೀರಾ ಹಿನ್ನಡೆಯಾಗುವ ಸಾಧ್ಯತೆಯನ್ನೂ ತಳ್ಳಿ ಹಾಕಲಾಗುವುದಿಲ್ಲ. ಆದರೆ, ‘ಅತಿಯಾದರೆ ಅಮೃತವೂ ವಿಷ’ ಎಂಬ ಮಾತನ್ನು ಚೀನಾದಲ್ಲಿನ ಈ ಬೆಳವಣಿಗೆ ಮತ್ತೊಮ್ಮೆ ಸಾಕ್ಷೀಕರಿಸಿದೆ.

ತಾತ್ತ್ವಿಕ ನೆಲೆಗಟ್ಟಿಲ್ಲದ ವಿಸ್ತರಣಾ ಪ್ರಕ್ರಿಯೆಯು ಅರಾಜಕತೆಯನ್ನು ಸೃಷ್ಟಿಸಬಲ್ಲದು. ಹೀಗಾಗಿ ನಾವೆಲ್ಲರೂ ಇಂಥದೊಂದು ಬೆಳವಣಿಗೆ ಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಇಲ್ಲದೆ ಹೋದರೆ, ಜಗತ್ತಿನಾದ್ಯಂತ ಮುಂದೊಮ್ಮೆ ‘ಟ್ಯಾಂಗ್ ಪಿಂಗ್’ ಮಂತ್ರ ಘಂಟಾಘೋಷವಾಗಿ ಮೊಳಗಬಹುದು. ಚಲನಶೀಲ ಸಾಧ್ಯತೆಯೂ, ತಾತ್ತ್ವಿಕ ಖಚಿತೆಯೂ ಇರುವಂಥ ಕ್ರಮಗಳನ್ನು ಈ ಇಕ್ಕಟ್ಟಿನಲ್ಲಿಯೇ ನಾವೆಲ್ಲ ಕಟ್ಟಿಕೊಳ್ಳಬೇಕಿದೆ. ಅವು ದೇಶದ ಪ್ರಗತಿಗೆ ಪೂರಕವಾಗುವುದು ಮಾತ್ರವಲ್ಲದೆ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವಂತಾಗುವುದರ ಕಡೆಗೂ ನಾವೆಲ್ಲ ಗಮನಹರಿಸಬೇಕಾಗಿದೆ.

ಜನಸಾಮಾನ್ಯರ ನಿತ್ಯದ ಬದುಕಿನ ಅಗತ್ಯಗಳನ್ನು ಪೂರೈಸಬಲ್ಲಂಥ ಅವಕಾಶಗಳನ್ನು ಮತ್ತಷ್ಟು ಹಿಗ್ಗಸಬೇಕಿದೆ. ಅನಪೇಕ್ಷಿತ ಬೆಳವಣಿಗೆಗೆ ಕಾರಣವಾಗುವ ಹತ್ತಾರು ತೊಡಕುಗಳನ್ನು ಶ್ರದ್ಧೆಯಿಂದ ಪರಾಮರ್ಶಿಸಿ ಅವನ್ನು ತೆಗೆದುಹಾಕಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಯಾವುದೂ ಅತಿಯಾಗದೆ ಸಮತೋಲನ
ಮತ್ತು ಸಮಚಿತ್ತದಿಂದ ಒಟ್ಟಾರೆ ವ್ಯವಸ್ಥೆಯನ್ನು ಮರು ಸೃಷ್ಟಿಸಬೇಕಿದೆ.