Monday, 25th November 2024

ಕೇರಳ ಇನ್ನು ಕೇರಳಂ..!

ತಿರುವನಂತಪುರಂ: ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕೇರಳ ವಿಧಾನಸಭೆ ಬುಧವಾರ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ.
ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸೇರಿಸಲಾದ ಎಲ್ಲಾ ಭಾಷೆಗಳಲ್ಲೂ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯವನ್ನು ಮಲಯಾಳಂನಲ್ಲಿ ‘ಕೇರಳಂ’ ಎಂದು ಕರೆಯುತ್ತಾರೆ. ಆದರೆ ಇತರ ಭಾಷೆಗಳಲ್ಲಿ ಅದು ಇನ್ನೂ ಕೇರಳ ಎಂದು ಇದೆ ಎಂದು ಪಿಣರಾಯಿ ಹೇಳಿದರು. ಸಂವಿಧಾನದ ಮೊದಲ ಶೆಡ್ಯೂಲ್ನಲ್ಲಿ ರಾಜ್ಯದ ಹೆಸರನ್ನು ‘ಕೇರಳ’ ಎಂದು ಪಟ್ಟಿ ಮಾಡಲಾಗಿದೆ. “ಈ ಸದನವು ಸಂವಿಧಾನದ 3ನೇ ಪರಿಚ್ಛೇದದ ಅಡಿಯಲ್ಲಿ ‘ಕೇರಳಂ’ ಎಂದು ತಿದ್ದುಪಡಿ ಮಾಡಲು ಮತ್ತು ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಭಾಷೆಗಳಲ್ಲಿ ‘ಕೇರಳಂ’ ಎಂದು ಮರುನಾಮ ಕರಣ ಮಾಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಸರ್ವಾನುಮತದಿಂದ ವಿನಂತಿಸುತ್ತದೆ” ಎಂದು ವಿಜಯನ್ ಹೇಳಿದರು.
ಸ್ಪೀಕರ್ ಎಎನ್ ಶಂಸೀರ್ ಅವರು, ಸದಸ್ಯರು ಕೈ ಎತ್ತುವ ಮೂಲಕ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ ಎಂದು ಘೋಷಿಸಿದರು.