ನವದೆಹಲಿ: ಕೇಂದ್ರ ಸರಕಾರದ ವಿರುದ್ಧ ಅಖಾಡಕ್ಕೆ ಇಳಿಯಲು ಸಜ್ಜಾದ ವಿರೋಧ ಪಕ್ಷಗಳ ಒಕ್ಕೂಟಕ್ಕೆ ಐಎನ್‌ಡಿಐಎ ಎಂದು ನಾಮಕರಣ ಮಾಡಿದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನ್ಯಾ. ಎಸ್‌ಕೆ ಕೌಲ್ ನೇತೃತ್ವದ ಪೀಠದಲ್ಲಿ 26 ರಾಜಕೀಯ ಪಕ್ಷಗಳ ಮೈತ್ರಿಗೆ ನೀಡಿರುವ INDIA ಹೆಸರನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಯಿತು.
ಈ ವೇಳೆ ಯಾರು ನೀವು? ಆಸಕ್ತಿ ಏನು? ಚುನಾವಣಾ ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಚುನಾವಣಾ ಆಯೋಗಕ್ಕೆ ಹೋಗಿ. ನಿಮಗೆ ಸಂಪೂರ್ಣ ಪ್ರಚಾರ ಬೇಕು ಎಂದು ಅಭಿಪ್ರಾಯಪಟ್ಟು ಚಾಟಿ ಬೀಸಿತು.
ಹೆಸರನ್ನು ಬಳಸುವುದು ನೈತಿಕತೆಗೆ ವಿರುದ್ಧವಾಗಿದೆ ಎಂದು ಅರ್ಜಿದಾರರ ವಾದಕ್ಕೆ ನ್ಯಾ. ಕೌಲ್, ನಾವು ರಾಜಕೀಯದಲ್ಲಿ ನೈತಿಕತೆಯನ್ನು ನಿರ್ಧರಿಸಲು ಹೋಗುವುದಿಲ್ಲ ಎಂದು ಉತ್ತರಿಸಿ ಭಾರತೀಯ ಚುನಾವಣಾ ಆಯೋಗದ ಮುಂದೆ ಅರ್ಜಿಗಳನ್ನು ಸಲ್ಲಿಸಿ ಎಂದು ಸೂಚಿಸಿತು.