Sunday, 24th November 2024

ಕುಟುಂಬ ಮೀರಿ ಪಕ್ಷ ಸಂಘಟನೆ ಸಾಧ್ಯವೇ ?

ಅಶ್ವತ್ಥಕಟ್ಟೆ

ranjith.hoskere@gmail.com

ಕೆಲ ವರ್ಷದ ಹಿಂದೆ ಹಿರಿಯ ರಾಜಕಾರಣಿ ನಾಣಯ್ಯ ಅವರೊಂದಿಗೆ ಮಾತನಾಡುವಾಗ, ‘ರಾಮಕೃಷ್ಣ ಹೆಗಡೆ ಮತ್ತು ಎಚ್.ಡಿ. ದೇವೇಗೌಡರ ನಡುವೆ
ಭಿನ್ನಾಭಿಪ್ರಾಯ ಬಾರದೇ, ಜನತಾದಳ ಹೋಳಾಗದೇ ಇದ್ದಿದ್ದರೆ ಇಂದು ಕರ್ನಾಟಕದಲ್ಲಿ ಬಿಜೆಪಿಗೆ ಜಾಗವೇ ಇರುತ್ತಿರಲಿಲ್ಲ’ ಎಂದಿದ್ದರು. ಪಕ್ಷ ಹೋಳಾದ ಬಳಿಕ ಕುಟುಂಬವನ್ನು ಮೀರಿ ದೇವೇಗೌಡರು ಆಲೋಚಿಸಿದ್ದಿದ್ದರೆ, ಜೆಡಿಎಸ್‌ಗೆ ಇಂದಿನ ಪರಿಸ್ಥಿತಿ ಬರುತ್ತಿಲ್ಲ ಎನ್ನುವುದು ಈಗ ಜೆಡಿಎಸ್‌ನಲ್ಲೇ ಇರುವವರ ಹಾಗೂ ಅಲ್ಲಿಂದ ಹೊರಬಂದಿರುವವರ ಅಭಿಪ್ರಾಯ.

ದೇಶದ ಬಹುತೇಕ ಪ್ರಾದೇಶಿಕ ಪಕ್ಷಗಳು ಯಾವುದೋ ಒಂದು ಕುಟುಂಬದ ಲೇಬಲ್‌ನಲ್ಲಿಯೇ ಅಸ್ತಿತ್ವ ಕಂಡುಕೊಂಡಿವೆ. ಆದರೆ ಕರ್ನಾಟಕದಲ್ಲಿ ಜೆಡಿಎಸ್ ನಡೆದುಕೊಂಡ ರೀತಿ ನೋಡಿದರೆ, ಪಕ್ಷ ಸಂಘಟನೆಗಿಂತ ಅದು ಕುಟುಂಬವನ್ನೇ ಕೇಂದ್ರೀಕರಿಸಿದ ರೀತಿಯಲ್ಲಿತ್ತು. ಪಕ್ಷ ಉತ್ತುಂಗದಿಂದ ಕೆಳಗೆ ಬೀಳಲು ಕಾರಣವೂ ಇದೇ ಆಗಿತ್ತು. ಅದರಲ್ಲೂ ಕಳೆದ ೧೦ ವರ್ಷದ ಅವಧಿಯಲ್ಲಿ ಜೆಡಿಎಸ್ ವರ್ತಿಸಿದ ರೀತಿಯು ಕಟ್ಟಾ ಜೆಡಿಎಸ್ ಕಾರ್ಯಕರ್ತರೇ ವಿರೋಽಸುವ ರೀತಿಯಲ್ಲಿತ್ತು. ಈ ಕುಟುಂಬ ರಾಜಕಾರಣದ ವರ್ತುಲದಿಂದಲೇ, ರಾಜ್ಯ ದೆಲ್ಲೆಡೆ ಕುಮಾರಸ್ವಾಮಿ ಹಾಗೂ ದೇವೇಗೌಡರು ಹೋದ ಕಾರ್ಯಕ್ರಮಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿದರೂ, ಅವ್ಯಾವುದೂ ‘ವೋಟ್’ ಆಗಿ ಪರಿವರ್ತನೆಯಾಗುತ್ತಿಲ್ಲ ಎನ್ನುವುದು ಈ ವಿಧಾನಸಭಾ ಚುನಾವಣೆ ಯಲ್ಲಿ ಸ್ಪಷ್ಟವಾಗಿದೆ. ೨೦೧೩ರಲ್ಲಿ ವಿಧಾನಸಭೆಯಲ್ಲಿ ೪೦ಕ್ಕೂ ಹೆಚ್ಚು ಸ್ಥಾನ ಹೊಂದಿದ್ದ ಜೆಡಿಎಸ್ ೨೦೨೩ರ ವೇಳೆಗೆ ೧೯ ಸ್ಥಾನಕ್ಕೆ ಕುಸಿದಿದೆ.

ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ, ನಾಯಕತ್ವದ ಕೊರತೆ, ಎರಡನೇ ಹಂತದ ನಾಯಕರ ಕೊರತೆ, ಕಾರ್ಯ ಕರ್ತರಲ್ಲಿ ಪಕ್ಷದ ಹಾಗೂ ಪಕ್ಷದ ನಾಯಕರ ಮೇಲೆ ಕುಂದಿರುವ ವಿಶ್ವಾಸ ಸೇರಿದಂತೆ ಹಲವಾರು ಕಾರಣಗಳು ಸಿಗುತ್ತವೆ. ಆದರೆ ಈ ಎಲ್ಲದಕ್ಕೂ ಮೂಲ ಕಾರಣ ‘ಕುಟುಂಬ ರಾಜಕಾರಣ’ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಹಾಗೆ ನೋಡಿದರೆ, ಕುಟುಂಬ ರಾಜಕಾರಣ ಕೇವಲ ಜೆಡಿಎಸ್‌ಗೆ ಸೀಮಿತವಾಗಿಲ್ಲ. ಬಹುತೇಕ ರಾಜಕೀಯ ಪಕ್ಷಗಳಲ್ಲಿ ಉನ್ನತ ನಾಯಕರು ತಮ್ಮ ಮಕ್ಕಳನ್ನು ಅಥವಾ ಕುಟುಂಬದವ ರನ್ನು ಸಕ್ರಿಯ ರಾಜಕಾರಣಕ್ಕೆ ಕರೆತರಲು ಯತ್ನಿಸಿದ್ದಿದೆ. ಅದರಲ್ಲಿ ಅನೇಕರು ಯಶಸ್ವಿಯೂ ಆಗಿದ್ದಾರೆ.

ಆದರೆ ಕುಟುಂಬ ರಾಜಕಾರಣದ ಮಾತು ಬಂದಾಗಲೆಲ್ಲ ಜೆಡಿಎಸ್ ಹೆಸರು ದೊಡ್ಡ ಪ್ರಮಾಣದಲ್ಲಿ ಮುನ್ನೆಲೆಗೆ ಬರುವುದು, ರಾಜಕಾರಣದೊಳಗೆ ಸೇರಿಸಿಕೊಂಡಿ ರುವ ಕುಟುಂಬದ ಸದಸ್ಯರ ‘ಸಂಖ್ಯೆ’ಯ ಕಾರಣಕ್ಕೆ. ದೇವೇಗೌಡರ ‘ಫಸ್ಟ್ ಸರ್ಕಲ್’ ಪರಿಽಯಲ್ಲಿಯೇ, ದೇವೇಗೌಡರು ರಾಜ್ಯಸಭಾ ಸದಸ್ಯರು, ಕುಮಾರಸ್ವಾಮಿ ಮುಖ್ಯಮಂತ್ರಿ, ಎಚ್.ಡಿ. ರೇವಣ್ಣ ಸಚಿವರು, ಅನಿತಾ ಕುಮಾರಸ್ವಾಮಿ ಶಾಸಕಿ, ಪ್ರಜ್ವಲ್ ರೇವಣ್ಣ ಸಂಸದ, ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು. ಇವರನ್ನು ಹೊರತುಪಡಿಸಿ, ಬೀಗರು, ಸಂಬಂಽಗಳೆಂದು ಕನಿಷ್ಠ ಎಂಟರಿಂದ ಹತ್ತು ಶಾಸಕರಿದ್ದರು. ಸಮ್ಮಿಶ್ರ ಸರಕಾರದ ಬಳಿಕ ವಿಧಾನಪರಿಷತ್ ಸದಸ್ಯರಾಗಿ ಸೂರಜ್ ರೇವಣ್ಣರ ಆಯ್ಕೆಯೂ ಅನೇಕ ನಿಷ್ಠಾವಂತ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಯಿತು ಎಂದರೆ ತಪ್ಪಾಗುವುದಿಲ್ಲ.

ಇದನ್ನು ಹೊರತುಪಡಿಸಿದರೆ, ಜೆಡಿಎಸ್ ಅನ್ನು ಪ್ರಾದೇಶಿಕ ಪಕ್ಷವಾಗಿ ಈಗಲೂ ರಾಜ್ಯದ ಜನರು ಒಪ್ಪಿಕೊಂಡಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ತನ್ನ ಪ್ರಭಾವ ಹೊಂದಿದ್ದರೂ, ಉತ್ತರ ಕರ್ನಾಟಕದಲ್ಲಿಯೂ ದೇವೇಗೌಡರು ಕೃಷ್ಣ ಮೇಲ್ದಂಡೆ ಯೋಜನೆ ವಿಷಯದಲ್ಲಿ, ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿ ಯಾಗಿದ್ದಾಗ ಬೆಳಗಾವಿ ಯಲ್ಲಿ ಕನ್ನಡದ ಹೋರಾಟದ ವಿಷಯದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳ ಬಗ್ಗೆ ಅಲ್ಲಿನ ಜನರಿಗೆ ಜೆಡಿಎಸ್ ಮೇಲೆ ‘ವಿಶೇಷ ಪ್ರೀತಿ’ಯಿದೆ. ಆದರೆ ಕುಟುಂಬ ರಾಜಕಾರಣ ಹಾಗೂ ಸಂಘಟನೆಯ ಸಮಸ್ಯೆಯಿಂದ ದಿನದಿಂದ ದಿನಕ್ಕೆ ಜೆಡಿಎಸ್ ಪ್ರಭಾವ ತಗ್ಗುತ್ತಿದೆಯೇ ಎನ್ನುವ ಅನುಮಾನ ಗಳು ಶುರುವಾಗಿವೆ. ಈ ಕಾರಣಕ್ಕಾಗಿಯೇ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷವನ್ನು ‘ಕುಟುಂಬ’ದ ಪ್ರಭಾವಳಿಯಿಂದ ಹೊರತಂದು ಕಾರ್ಯಕರ್ತರ ಪಕ್ಷವ ನ್ನಾಗಿ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

ಕುಟುಂಬ ರಾಜಕಾರಣದ ಟೀಕೆಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ಬಾರಿ ವಿಧಾನಸಭಾ ಚುನಾವಣೆಯ ಟಿಕೆಟ್ ಘೋಷಣೆಯ ವೇಳೆ ಕುಮಾರಸ್ವಾಮಿ ಹಲವು ‘ರಿಸ್ಕ್’ ಗಳನ್ನು ತೆಗೆದುಕೊಂಡರು. ಪ್ರಮುಖವಾಗಿ, ಹಾಸನದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ದೇವೇಗೌಡರ ಹಿರಿಯ ಪುತ್ರ ರೇವಣ್ಣರವರ ಪತ್ನಿ ಭವಾನಿ ಪಟ್ಟು ಹಿಡಿದರೂ ಟಿಕೆಟ್ ಅನ್ನು ಸ್ಪಷ್ಟವಾಗಿ ನಿರಾಕರಿಸಿದರು; ಈ ವಿಷಯದಲ್ಲಿ ಮನೆಯಲ್ಲಿ ದೊಡ್ಡ ಬಿರುಕು ಉಂಟಾದರೂ ಆ ಎಲ್ಲವನ್ನೂ ಮೀರಿ ಭವಾನಿ ಬದಲು ಸಾಮಾನ್ಯ ಕಾರ್ಯಕರ್ತ ಸ್ವರೂಪ್‌ಗೆ ಟಿಕೆಟ್ ನೀಡಿದರು. ಅನಿತಾ ಕುಮಾರಸ್ವಾಮಿ ಅವರ ಟಿಕೆಟ್ ಅನ್ನು ನಿಖಿಲ್‌ಗೆ ನೀಡುವ ಮೂಲಕ ಕುಟುಂಬ ದಿಂದ ಸ್ಪರ್ಧಿ
ಸುವವರ ‘ಸಂಖ್ಯೆ’ಯನ್ನು ಕೊಂಚ ತಗ್ಗಿಸಿದರು.

ಇದೀಗ ಮುಂದಿನ ಲೋಕಸಭೆಗೆ ಹಾಸನದ ಟಿಕೆಟ್ ಅನ್ನು ಕುಟುಂಬದ ಹೊರಗಿನವರಿಗೆ ಕೊಡಿಸುವ ಮಾತುಗಳನ್ನು ಹೇಳಿಕೊಂಡಿದ್ದಾರೆ (ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗ ಲಿದೆ ಎನ್ನುವುದು ಬೇರೆ ವಿಚಾರ). ಈ ಮೂಲಕ, ತಮ್ಮದು ದೇವೇಗೌಡರ ಕುಟುಂಬಕ್ಕೆ ಸೀಮಿತವಾಗಿರುವ ಪಕ್ಷ ವಲ್ಲ, ಕಾರ್ಯಕರ್ತರಿಂದ ಗಟ್ಟಿಯಾಗಿ ರುವ ಪಕ್ಷ, ಕಾರ್ಯಕರ್ತರಿಗೆ ಹೆಚ್ಚಿನ ಒತ್ತು ನೀಡುವ ಪಕ್ಷ ಎನ್ನುವ ಸಂದೇಶವನ್ನು ರವಾನಿಸುವ ಯತ್ನವನ್ನು ಆರಂಭಿಸಿದ್ದಾರೆ. ‘ಕೆಟ್ಟ ಮೇಲೆ ಬುದ್ಧಿ ಬಂತು’ ಎನ್ನುವಂತೆ ಪಕ್ಷದಲ್ಲಿನ ಕುಟುಂಬ ರಾಜಕಾರಣದ ಹೊರೆಯನ್ನು ನೋಡಲಾಗದೇ ಸಾಂಪ್ರದಾಯಿಕ ಮತಗಳು ಹಾಗೂ ನಿಷ್ಠಾವಂತ ಕಾರ್ಯಕರ್ತರು ‘ಡೈಲ್ಯೂಟ್’ ಆದ ಬಳಿಕ ಈ ವಿಷಯದಲ್ಲಿ ಕುಮಾರಸ್ವಾಮಿ ಎಚ್ಚೆತ್ತುಕೊಂಡಿದ್ದಾರೆ. ಆದರೆ ಈಗಲೂ ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ಪಕ್ಷವನ್ನು ಬಲಿಷ್ಠ
ಪ್ರಾದೇಶಿಕ ಪಕ್ಷವನ್ನಾಗಿ ಮಾಡುವ ಉತ್ಸಾಹದಲ್ಲಿದ್ದಾರೆ ಕುಮಾರಸ್ವಾಮಿ. ಈ ಕಾರಣಕ್ಕಾಗಿಯೇ, ವಿಧಾನಸಭೆಯಲ್ಲಿ ೧೯ ಸ್ಥಾನಕ್ಕೆ ಕುಸಿದು ‘ಕಿಂಗ್‌ಮೇಕರ್’ ಆಗದೇ ಮೂರನೇ ಸ್ಥಾನದಲ್ಲಿ ಕೂತಿದ್ದರೂ ಮೊದಲ ದಿನದಿಂದಲೇ ಪಕ್ಷ ಸಂಘಟನೆಗೆ ಒತ್ತುನೀಡುವ ಮಾತುಗಳನ್ನು ಕುಮಾರಸ್ವಾಮಿ ಆಡಿದರು. ಅದಕ್ಕೆ ಪೂರಕವಾಗಿಯೇ ಸಂಘಟನೆಯ ಕೆಲಸ ವನ್ನು ಆರಂಭಿಸಿದರು.

ಪಕ್ಷದ ಪುನಶ್ಚೇತನ ಕಾರ್ಯದ ಭಾಗವಾಗಿ ಇದೀಗ ಕೋರ್ ಕಮಿಟಿಯನ್ನು ಸಿದ್ಧಪಡಿಸಿದ್ದು, ಈ ಸಮಿತಿಯೇ ಮುಂದಿನ ದಿನದಲ್ಲಿ ಜೆಡಿಎಸ್‌ನ ಪ್ರಮುಖ ತೀರ್ಮಾನವನ್ನು ಸಿದ್ಧಪಡಿಸಿ ವರಿಷ್ಠರ ಬಳಿ ತೆಗೆದುಕೊಂಡು ಹೋಗುವುದು ಎನ್ನುವ ಲೆಕ್ಕಾಚಾರಗಳು ಆರಂಭವಾಗಿವೆ. ಆರಂಭದಲ್ಲಿ ಈ ಕಮಿಟಿಯ ನೇತೃತ್ವವನ್ನು ಎಚ್.ಡಿ. ದೇವೇಗೌಡರ ಕುಟುಂಬದ ಯಾರಾದರೊಬ್ಬರು ಹೊರುತ್ತಾರೆ ಎನ್ನುವ ಮಾತಿತ್ತು. ಆದರೆ ಇದೀಗ, ಈ ಜವಾಬ್ದಾರಿಯನ್ನು ಜಿ.ಟಿ. ದೇವೇಗೌಡರ ಹೆಗಲಿಗೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಮೂಲಗಳ ಪ್ರಕಾರ ಈ ಸಮಿತಿ ದೇವೇಗೌಡರ ಕುಟುಂಬದ ‘ನೆರಳಿನಲ್ಲಿಯೇ’ ನಡೆದರೂ, ನೇರವಾಗಿ ಯಾರೊಬ್ಬರೂ ಇರುವುದಿಲ್ಲ ಎನ್ನಲಾಗುತ್ತಿದೆ.

ಒಂದು ವೇಳೆ ಕುಮಾರಸ್ವಾಮಿ ಅವರ ಪುನಶ್ಚೇತನ ಯೋಜನೆ ಫಲ ನೀಡಿದರೆ, ಕರ್ನಾಟಕದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಮತ್ತೊಮ್ಮೆ ಜೆಡಿಎಸ್ ಹೊರ
ಹೊಮ್ಮುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಜನತಾದಳ ಹೋಳಾಗುವ ಮೊದಲು ಕಾಂಗ್ರೆಸ್‌ನೊಂದಿಗೆ ಪೈಪೋಟಿಗೆ ಬಿದ್ದು ಅಧಿಕಾರವನ್ನು ಹಿಡಿದಿತ್ತು. ಜನತಾದಳ ಹೋಳಾದ ಬಳಿಕವೂ, ಜೆಡಿಎಸ್ ‘ಕಿಂಗ್‌ಮೇಕರ್’ ಆಗಿಯೇ ಕಾಣಿಸಿಕೊಂಡಿತ್ತು. ಇದೀಗ ಹಳೇ ಮೈಸೂರು ಭಾಗದಲ್ಲಿ ಹಿಡಿತ ತಪ್ಪಿ, ಇದರ ಲಾಭವನ್ನು ಕಾಂಗ್ರೆಸ್ ಪಡೆಯುತ್ತಿರುವುದರಿಂದ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಆದರೆ ರಾಜಕೀಯ ತಜ್ಞರ ಪ್ರಕಾರ, ಈಗಲೂ ಕರ್ನಾಟಕಕ್ಕೆ ಮೂರನೇ ಪ್ರಬಲ ಪಕ್ಷದ ಅಗತ್ಯವಿದೆ.

ಅದರಲ್ಲಿಯೂ ರಾಷ್ಟ್ರೀಯ ಪಕ್ಷಗಳ ಹಿಡಿತ ದಿಂದ ರಾಜ್ಯವನ್ನು ತಪ್ಪಿಸುವುದಕ್ಕೆ ಜೆಡಿಎಸ್‌ಗೆ ಮಾತ್ರ ಶಕ್ತಿ ಯಿರುವುದು. ರಾಷ್ಟ್ರೀಯ ಪಕ್ಷಗಳು ಏನೇ ಹೇಳಿದರೂ,
ಇಡೀ ದೇಶದ ದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳುವುದ ರಿಂದ, ರಾಜ್ಯದ ವಿಷಯ ಬಂದಾಗ ಅನ್ಯಾಯವಾಗುವ ಸಾಧ್ಯತೆಗಳು ದಟ್ಟವಾಗಿರುತ್ತವೆ. ದಕ್ಷಿಣ ಕರ್ನಾಟಕದ ಬಹುತೇಕ ರಾಜ್ಯಗಳನ್ನು ಆಳುತ್ತಿರುವುದು ಪ್ರಾದೇಶಿಕ ಪಕ್ಷಗಳೇ ಆಗಿರುವುದರಿಂದ, ಕರ್ನಾಟಕದಲ್ಲಿಯೂ ಇದರ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ. ಆದರೆ ಜೆಡಿಎಸ್ ಈ ಸ್ಥಾನವನ್ನು ತುಂಬಲು ಕುಟುಂಬ ಆಧಾರಿತ ತೀರ್ಮಾನವನ್ನು ಹಾಗೂ ಒಂದು ಪ್ರದೇಶಕ್ಕೆ ಸೀಮಿತಗೊಂಡು ಸಂಘಟನೆ ಮಾಡುವುದನ್ನು ನಿಲ್ಲಿಸಬೇಕು ಎನ್ನುವ ಅಭಿಪ್ರಾಯಗಳಿವೆ. ಈಗ ಕುಮಾರಸ್ವಾಮಿ ಆರಂಭಿಸಿರುವ ಪುನಶ್ಚೇತನ ಕಾರ್ಯ ಇದಕ್ಕೆ ಪೂರಕವಾಗಿಯೇ ಇದೆ ಎನ್ನುವ
ಮಾತುಗಳು ಕೇಳಿಬರುತ್ತಿವೆ.

ಆದರೆ ಜೆಡಿಎಸ್‌ಗಿರುವ ಬಹುದೊಡ್ಡ ಸವಾಲು ಎಂದರೆ ‘ನಾಯಕತ್ವ’. ಈಗ ದೇವೇಗೌಡರ ನೇತೃತ್ವದಲ್ಲಿ ಪಕ್ಷ ನಡೆಯುತ್ತಿದ್ದು, ಕುಮಾರಸ್ವಾಮಿ ಅವರ ಉತ್ತರಾಧಿ
ಕಾರಿ ಯಂತೆ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಇಬ್ಬರ ಹೆಸರನ್ನು ಹೊರತು ಪಡಿಸಿದರೆ ಇನ್ನುಳಿದ ನಾಯಕರು ಎನಿಸಿ ಕೊಂಡವರು ತಮ್ಮ ಕ್ಷೇತ್ರ ಅಥವಾ ಜಿಲ್ಲೆಗೆ ಮಾತ್ರ ಸೀಮಿತ ವಾಗಿದ್ದು, ರಾಜ್ಯಾದ್ಯಂತ ವರ್ಚಸ್ಸನ್ನು ಹೊಂದಿಲ್ಲ. ಸ್ವತಃ ಮಾಜಿ ಸಚಿವ ಎಚ್.ಡಿ. ರೇವಣ್ಣ ತಮ್ಮ ಹಿಡಿತವನ್ನು ಹಾಸನದಾಚೆ ಸಾಧಿಸಿಲ್ಲ.
ಇದರೊಂದಿಗೆ ಎರಡನೇ ಹಂತದಲ್ಲಿ ಯಾರೆಲ್ಲ ನಾಯಕರಿದ್ದಾರೆ ಎನ್ನುವ ಪ್ರಶ್ನೆಗೆ ಜೆಡಿಎಸ್‌ನಿಂದ ಉತ್ತರವಿಲ್ಲ. ಪ್ರಜ್ವಲ್ ರೇವಣ್ಣ ಆರಂಭದಲ್ಲಿ ಭರವಸೆ ಮೂಡಿಸಿದರೂ, ಇದೀಗ ಹಿಂದೆ ಬಿದ್ದಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ಅವರ ಸಾಲು ಸಾಲು ಸೋಲಿ ನಿಂದಾಗಿ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿಲ್ಲ.

ಆದ್ದರಿಂದ ಮುಂದಿನ ಐದು ವರ್ಷಕ್ಕೆ ಎದುರಾಗ ಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿ ಕೊಂಡು, ಈಗಿನಿಂದಲೇ ಸಂಘಟನೆ ಆರಂಭಿಸಬೇಕಾದ ಅನಿವಾರ್ಯತೆ ಪಕ್ಷಕ್ಕಿದೆ. ಕುಟುಂಬವನ್ನು ಹೊರಗಿಟ್ಟು ಪಕ್ಷ ಸಂಘಟನೆ ಮಾಡಬೇಕು ಎಂದ ಮಾತ್ರಕ್ಕೆ ಸಂಪೂರ್ಣವಾಗಿ ಎಲ್ಲರನ್ನೂ ಹೊರಗಿ
ಡುವುದು ಕಷ್ಟದ ವಿಷಯ. ವರಿಷ್ಠರ ಕುಟುಂಬವನ್ನು ಒಳ ಗೊಂಡಿರುವ ಹಲವು ಪ್ರಾದೇಶಿಕ ಪಕ್ಷಗಳು ನಮ್ಮ ಮುಂದಿವೆ. ಆದರೆ ಎಷ್ಟು ಪ್ರಮಾಣದಲ್ಲಿ ಕುಟುಂಬಸ್ಥ ರನ್ನು ಮುನ್ನೆಲೆಗೆ ಬಿಡಬೇಕು? ಸಂಘಟನೆಯಲ್ಲಿ ತೊಡಗಿರುವ ಕಾರ್ಯಕರ್ತ ರಿಗೆ ಏನೆಲ್ಲ ಕೊಡಬೇಕು? ಎನ್ನುವ ವಿಷಯದಲ್ಲಿ ಪಕ್ಷವನ್ನು ಮುನ್ನಡೆಸುವ  ವರಿಷ್ಠರಿಗೆ ಸ್ಪಷ್ಟತೆ ಇರಬೇಕು. ೨೦೨೩ರಲ್ಲಿ ಹೀನಾಯ ಹಿನ್ನಡೆ ಅನುಭವಿಸಿದ ಬಳಿಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇದರ ಸ್ಪಷ್ಟತೆಯಿದೆ ಎನ್ನುವ ವಿಶ್ವಾಸ ಕಾರ್ಯಕರ್ತರದ್ದು. ಆದರೆ ಮುಂದೇನಾಗಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕು!