Saturday, 23rd November 2024

1.38 ಕೋಟಿ ರೂ. ಆದಾಯ ತೆರಿಗೆ ಕಟ್ಟುವಂತೆ ಮಹಾಬಲೇಶ್ವರ ದೇವಸ್ಥಾನಕ್ಕೆ ನೋಟೀಸು

ಕಾರವಾರ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಭಾರತೀಯ ಆದಾಯ ತೆರಿಗೆ ಇಲಾಖೆ ಬಾಕಿ ಇರುವ 1.38 ಕೋಟಿ ರೂ ಆದಾಯ ತೆರಿಗೆ ಕಟ್ಟುವಂತೆ ನೋಟಿಸ್ ಜಾರಿ ಮಾಡಿದೆ.

ಜುಲೈ 14ರಂದು ಆದಾಯ ತೆರಿಗೆ ಇಲಾಖೆಯು ಮಹಾಬಲೇಶ್ವರ ದೇವಾಲಯಕ್ಕೆ ನೋಟಿಸ್ ಜಾರಿಗೊಳಿಸಿದ್ದು, 2015- 16ನೇ ಸಾಲಿನ ಆದಾಯ ತೆರಿಗೆ ಬಾಕಿ ಉಳಿದಿರುವು ದಾಗಿ ತಿಳಿಸಿದೆ.

ದೇವಾಲಯದ ಆಡಳಿತ ಮಂಡಳಿ ಆದಾಯ ತೆರಿಗೆ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅದರಂತೆ ಶೇ 80ರಷ್ಟು (1,10,60,928) ತೆರಿಗೆಗೆ ನೀಡಿದ ತಡೆಯಂತೆ ಶೇ 20ರಷ್ಟನ್ನು ಪಾವತಿಸಿ ಐದು ದಿನಗಳೊಳಗೆ ಪಾವತಿ ಚಲನ್ ಸಲ್ಲಿಸಲು ಸೂಚಿಸಿದೆ. ಒಂದು ವೇಳೆ, ಪಾವತಿಸದೇ ಇದ್ದಲ್ಲಿ ಆದಾಯ ತೆರಿಗೆ ಕಾಯ್ದೆ- 221ರ ಅನ್ವಯ ದಂಡ ಪಾವತಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಿದೆ.

ಇನ್ನು ಈ ಹಿಂದೆ ಮುಜರಾಯಿ ಇಲಾಖೆ ನೋಡಿಕೊಳ್ಳುತ್ತಿದ್ದ ಆಡಳಿತವನ್ನು 2008ರಲ್ಲಿ ಸರ್ಕಾರ ರಾಮಚಂದ್ರಾಪುರ ಮಠಕ್ಕೆ ವಹಿಸಿತ್ತು. ಅಂದಿನಿಂದ ನ್ಯಾಯಾಲಯದಲ್ಲಿ ಮಠದ ವಿರೋಧಿ ಬಣಗಳ ಕೇಸು, ವಾದ- ವಿವಾದ ಇತ್ಯಾದಿಗಳು ನಡೆದು ಕೊನೆಗೆ 2018 ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು ದೇವಸ್ಥಾನದ ನಿರ್ವಹಣೆಯನ್ನು ಸರಕಾರದಿಂದ ನೇಮಕ ಮಾಡಲಾದ ಸಮಿತಿಗೆ ವಹಿಸುವಂತೆ ಆದೇಶ ನೀಡಿತ್ತು. ಅದರಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದಲ್ಲಿ ಸಮಿತಿ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳುತ್ತಿದೆ.

ಸದ್ಯ ಆದಾಯ ತೆರಿಗೆ ಇಲಾಖೆ ನೋಟಿಸ್‌ನಲ್ಲಿ ತಿಳಿಸಿರುವಂತೆ 2015-16ನೇ ಸಾಲಿನ ಅವಧಿಯಲ್ಲಿ ದೇವಸ್ಥಾನ ಶ್ರೀರಾಮಚಂದ್ರಾ ಪುರ ಮಠದ ಆಡಳಿತದಲ್ಲಿತ್ತು.