Saturday, 23rd November 2024

ಇಟ್ಟಿಗೆ ಇಟ್ಟಾಕ್ಷಣ ಮನೆ ಸಿದ್ಧವಾಗದು!

ಎತ್ತಿನಗಾಡಿಯಲ್ಲಿ ಇಸ್ರೋ ರಾಕೆಟ್ ಸಾಗಿಸುವ ಕಾಲದಲ್ಲಿ ನೆಹರು ಕುಟುಂಬಸ್ಥರು ವಿಮಾನದಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿದ್ದರು. ವಿದೇಶಿ ಜೀವನಶೈಲಿಯ ದಾಸರಾಗಿದ್ದ ನೆಹರು ಐಷಾರಾಮಿ ಜೀವನ ನಡೆಸುತ್ತಿದ್ದ ಕಾಲದಲ್ಲಿ ಬಾಹ್ಯಾಕಾಶ ಸಂಸ್ಥೆಯ ಮಹತ್ವದ ಬಗ್ಗೆ ಚರ್ಚಿಸುವ ಮಂತ್ರಿಗಳೇ ಇರಲಿಲ್ಲ.

‘ಯಶಸ್ಸಿಗೆ ನೂರಾರು ಅಪ್ಪಂದಿರು, ಆದರೆ ಸೋಲು ಮಾತ್ರ ಅನಾಥ’ ಎಂಬ ಗಾದೆಯಿದೆ. ಚಂದ್ರಯಾನ-೨ರ ಕೊನೆಯ ಘಟ್ಟದಲ್ಲಾದ ತಾಂತ್ರಿಕ ದೋಷದಿಂದಾಗಿ ೨೦೧೯ ರಲ್ಲಿ ಚಂದ್ರನಲ್ಲಿ ಲ್ಯಾಂಡರ್ ಸುರಕ್ಷಿತವಾಗಿ ಇಳಿಯಲಾಗಲಿಲ್ಲ. ವಿಜ್ಞಾನವೆಂಬುದು ಪ್ರಯೋಗ, ಅಲ್ಲಿ ಸೋಲೆಂಬುದಿಲ್ಲ. ಪ್ರತಿಯೊಂದು ಅನುಭವವೂ ಮುಂದಿನ ಪ್ರಯೋಗಕ್ಕೆ ಉಪಯೋಗವಾಗುತ್ತದೆ. ಚಂದ್ರಯಾನ-೨ ವಿಫಲವಾದಾಗ ವಿಜ್ಞಾನಿಗಳಿಗೆ ಧೈರ್ಯ ತುಂಬಿ ಸಮರ್ಥ ನಾಯಕ ಎನಿಸಿಕೊಂಡವರು ಪ್ರಧಾನಿ ಮೋದಿ. ತರುವಾಯ ಇಸ್ರೋ ವಿಜ್ಞಾನಿಗಳು ಮುಂದಿನ ಯಾನವನ್ನು ಯಶಸ್ವಿಗೊಳಿಸಲೆಂದು ಹಗಲಿರುಳೂ ದುಡಿದ ಪರಿಣಾಮ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿದಿದೆ. ಈ ಘಟ್ಟವನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ದಕ್ಷಿಣ ಆಫ್ರಿಕಾದಿಂದ ‘ವರ್ಚುವಲ್’ ಆಗಿ ಪಾಲ್ಗೊಂಡಿದ್ದರು. ಲ್ಯಾಂಡರ್ ಇಳಿದಾಕ್ಷಣ ವಿಜ್ಞಾನಿಗಳ ಕರತಾಡನದ ಸದ್ದಿನ ಜತೆ ಪ್ರಧಾನಿಯ ಕರತಾಡನ ತೆರೆಯ ಮೇಲೆ ಕಾಣುತ್ತಿತ್ತು. ಆದರೆ ಇದೇ ವಿಷಯವನ್ನು ದೊಡ್ಡದು ಮಾಡಿ ಕಾಂಗ್ರೆಸ್ ಬೆಂಬಲಿತರು ಮತ್ತು ಎಡಚರರ ಪಟಾಲಂ ಮೋದಿಯವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ದಾಳಿ ಮಾಡಿತು. ಇಸ್ರೋ ವಿಜ್ಞಾನಿಗಳ ಸಾಧನೆಯನ್ನು, ಅವರಿಗೆ ಮೋದಿಯವರು ನೀಡಿದ ಬೆಂಬಲವನ್ನು ಜಗತ್ತೇ ಕೊಂಡಾಡುತ್ತಿದ್ದರೆ, ಕಾಂಗ್ರೆಸ್‌ನ ಐಟಿ ಸೆಲ್ ಕಾರ್ಯಕರ್ತರು ಮಾತ್ರ ನೆಹರುರನ್ನು ಎಳೆತಂದು
ಇಸ್ರೋ ವಿಜ್ಞಾನಿಗಳ ಯಶಸ್ಸಿಗೆ ಜೋಡಿಸಿದರು. ರಾಜ್ ದೀಪ್ ಸರದೇಸಾಯಿ, ಸಾಗರಿಕಾ ಘೋಷ್ ತಮ್ಮ ಟ್ವಿಟರ್ ಖಾತೆಯ ಮೂಲಕ ‘ನೆಹರು ಹುಟ್ಟುಹಾಕಿದ್ದ ಸಂಸ್ಥೆಯಿಂದು ಈ ಸಾಧನೆ ಮಾಡಿದೆ; ಇದರ ಯಶಸ್ಸು ಅವರಿಗೆ ಸಲ್ಲಬೇಕು’ ಎಂದು ಹೇಳುವ ಕೆಲಸಕ್ಕೆ ಕೈಹಾಕಿದ್ದರು. ಮಾರ್ಕೆಟಿಂಗ್ ತಜ್ಞರ ಸಲಹೆಯಂತೆ ಕಾಂಗ್ರೆಸ್ಸಿನ ಟ್ವಿಟರ್ ಖಾತೆಗಳು ಚಿತ್ರವಿಚಿತ್ರ -ಟೋಗಳನ್ನು ಹಂಚಿಕೊಂಡವು.

ಚಂದ್ರಯಾನ-೨ರ ಕೊನೆಗಳಿಗೆಯಲ್ಲಿ ಸಮಸ್ಯೆಯಾದಾಗ ಇಸ್ರೋ ವಿಜ್ಞಾನಿಗಳ ಜತೆ ನಿಲ್ಲಲು ಯೋಗ್ಯತೆಯಿಲ್ಲದವರು, ಯಶಸ್ಸಿನ ಜತೆಗೆ ಮಾತ್ರ ನೆಹರುರನ್ನು ಜೋಡಿಸುತ್ತಿದ್ದಾರೆ. ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋದ ಪ್ರಮುಖ ಕಚೇರಿಯ ಮೂಲಕ ಚಂದ್ರಯಾನ-೩ನ್ನು ನಿಯಂತ್ರಿಸಲಾಗುತ್ತಿತ್ತು. ಆದರೆ ಲ್ಯಾಂಡಿಂಗ್ ದಿನ ಪ್ರಧಾನಿ ದಕ್ಷಿಣ ಆಫ್ರಿಕಾದಿಂದಲೇ ವಿಜ್ಞಾನಿಗಳ ಜತೆಯಾದರೂ, ಪಕ್ಕದಲ್ಲೇ ಇದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಭಾಗಿಯಾಗಲಿಲ್ಲ. ಲಡಾಖ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಸ್ರೋ ವಿಜ್ಞಾನಿಗಳ ಜತೆ ಕಾಣಿಸಲಿಲ್ಲ. ಇವರಿಗೆ ಚಂದ್ರಯಾನ-೩ ಯಶಸ್ವಿಯಾಗುವ ನಂಬಿಕೆ ಇರಲಿಲ್ಲವೆನಿಸುತ್ತದೆ. ಯಶಸ್ವಿಯಾದ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ವಿಜ್ಞಾನಿಗಳನ್ನು ಅಭಿನಂದಿಸಿದರು. ಎತ್ತಿನಗಾಡಿಯಲ್ಲಿ ಇಸ್ರೋ ರಾಕೆಟ್ ಸಾಗಿಸುವ ಕಾಲದಲ್ಲಿ ನೆಹರು ಕುಟುಂಬಸ್ಥರು ವಿಮಾನದಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿದ್ದರು. ವಿದೇಶಿ ಜೀವನಶೈಲಿಯ ದಾಸರಾಗಿದ್ದ ನೆಹರು ಐಷಾರಾಮಿ ಜೀವನ ನಡೆಸುತ್ತಿದ್ದ ಕಾಲದಲ್ಲಿ ಬಾಹ್ಯಾಕಾಶ ಸಂಸ್ಥೆಯ ಮಹತ್ವದ ಬಗ್ಗೆ ಚರ್ಚಿಸುವ ಮಂತ್ರಿಗಳೇ ಇರಲಿಲ್ಲ. ಗುಜರಾತಿನಲ್ಲಿ ವಿಜ್ಞಾನಿ ಡಾ. ವಿಕ್ರಮ್ ಸಾರಾಭಾಯಿ ಕಷ್ಟಪಟ್ಟು ಬಾಹ್ಯಾಕಾಶ ಸಂಸ್ಥೆ ಕಟ್ಟುವ ಕನಸು ಕಾಣುತ್ತಿದ್ದರು. ಅಷ್ಟು ಹೊತ್ತಿಗೆ ಚಂದ್ರನೆಡೆಗೆ ಮಾನವನನ್ನು ಕಳುಹಿಸುವಷ್ಟು ಮುಂದುವರಿದಿತ್ತು ಅಮೆರಿಕ. ಡಾ.ವಿಕ್ರಮ್ ಸಲಹೆಯ ಮೇರೆಗೆ ೧೯೬೨ರಲ್ಲಿ ಬಾಹ್ಯಾಕಾಶ ಸಂಶೋಧನೆಗಾಗಿ ಭಾರತೀಯ ರಾಷ್ಟ್ರೀಯ ಸಮಿತಿಯನ್ನು (INCOSPAR) ಸ್ಥಾಪಿಸಲಾಯಿತು. ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಮೀಸಲಾದ ಸಚಿವಾಲಯವೇ ಇರಲಿಲ್ಲ. INCOSPAR ಎಲ್ಲಾ ಚಟುವಟಿಕೆಗಳು ಪರಮಾಣು ಶಕ್ತಿಯ ನಿರ್ದೇಶನಾಲಯದ ಮೂಲಕವೇ ನಡೆಯಬೇಕಿತ್ತು.

ರಾಕೆಟ್‌ಗಳಲ್ಲಿ ಬಳಸಲಾಗುವ ಪ್ರೊಪೆಲ್ಲಂಟ್‌ಗಳು ಮತ್ತು ಸುಧಾರಿತ ಬೆಳಕಿನ ವಸ್ತುಗಳ ಜ್ಞಾನಕ್ಕೆಂದು ಇಂಡಿಯನ್ ಆರ್ಡಿನೆನ್ಸ್ ಫ್ಯಾಕ್ಟರಿಗಳ ಅಧಿಕಾರಿಗಳನ್ನು ಬಳಸಿಕೊಳ್ಳುವ ಪರಿಸ್ಥಿತಿಯಿತ್ತು. ದೂರದೃಷ್ಟಿಯ ಕೊರತೆಯಿದ್ದ ನೆಹರು ಸರಕಾರಕ್ಕೆ ಬಾಹ್ಯಾಕಾಶ ಸಂಶೋಧನೆಗೆ ಹೆಚ್ಚಿನ ಅನುದಾನ ನೀಡಲಾಗಿರಲಿಲ್ಲ. INCOSPARಗೆ ಸರಕಾರದಿಂದ ಸರಿಯಾಗಿ ಬೆಂಬಲ ಸಿಗದ ಕಾರಣ, ೧೯೬೯ರ ಆಗಸ್ಟ್ ೧೫ರಂದು ಡಾ. ವಿಕ್ರಮ್ ಸಾರಾಭಾಯಿ ನೇತೃತ್ವದಲ್ಲಿ ‘ಇಸ್ರೋ’ ಸಂಸ್ಥೆ ಸ್ಥಾಪನೆಯಾಯಿತು. ಕೃತಕ ಉಪಗ್ರಹ/ಸ್ಯಾಟಲೈಟ್‌ಗಳ ಮಹತ್ವವನ್ನೇ ತಿಳಿಯದ ಕಾಂಗ್ರೆಸ್ ಸರಕಾರ ೧೯೬೨ರಿಂದ ೨೦೧೪ರವರೆಗೆ ಹೆಚ್ಚಿನ ಅವಧಿಯಲ್ಲಿ ಅಧಿಕಾರದಲ್ಲಿತ್ತು. ಆದರೆ ಈ ಅವಧಿಯಲ್ಲಿ ಬಾಹ್ಯಾಕಾಶಕ್ಕೆ ಕಳಿಸಿದ್ದು ಕೇವಲ ೩೫ ವಿದೇಶಿ ಉಪಗ್ರಹಗಳನ್ನು. ಮೋದಿ ಸರಕಾರ ಕಳೆದ ೯ ವರ್ಷಗಳಲ್ಲಿ ೩೮೯ ವಿದೇಶಿ ಉಪಗ್ರಹಗಳನ್ನು ಕಳಿಸಿದೆ. ಅನೇಕರಿಗೆ ಇದರ
ಮಹತ್ವವೇ ತಿಳಿದಿಲ್ಲ. ದಿನನಿತ್ಯದ ಬದುಕಿನಲ್ಲಿ ಬಳಸುವ ಅನೇಕ ತಂತ್ರಜ್ಞಾನಗಳಿಗೆ ಉಪಗ್ರಹದ ಅವಶ್ಯಕತೆಯಿದೆ. ಜೊಮೆಟೊದಲ್ಲಿ ಕೆಲಸ ಮಾಡುವ ಡೆಲಿವರಿಬಾಯ್‌ಗೆ ತಿಂಡಿ ಆರ್ಡರ್ ಮಾಡಿದವರ ಮನೆಯ ವಿಳಾಸ ಹುಡುಕಲು, ಮಳೆಯಿಲ್ಲದೆ ಕಂಗಾಲಾಗಿರುವ ರೈತರ ಜಮೀನುಗಳ ಸರ್ವೆ ನಡೆಸಲು ಉಪಗ್ರಹ ಬೇಕು. ಮುಂದಿನ ೨೪ ಗಂಟೆಯಲ್ಲಿ ಎಲ್ಲೆಲ್ಲಿ ಮಳೆ ಬರುತ್ತದೆಯೆಂಬ ಎಚ್ಚರಿಕೆ ನೀಡಲು, ಹೆಂಗಸರು ಮನೆಯಲ್ಲಿ ದೈನಂದಿನ ಟಿವಿ ಧಾರಾವಾಹಿಗಳನ್ನು ವೀಕ್ಷಿಸಲು, ಸಮುದ್ರದಲ್ಲಿ ಕಾಣೆಯಾದವರನ್ನು ಹುಡುಕಲು ಉಪಗ್ರಹ ಬೇಕೇ ಬೇಕು.

ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ೨೦೧೯ರಲ್ಲಿ ಭಾರತೀಯ ಸೈನಿಕರು ನಡೆಸಿದ ದಾಳಿಯ ಸಾಕ್ಷ್ಯ ಕೇಳಿದ್ದ ಕಾಂಗ್ರೆಸ್ಸಿಗರಿಗೆ ಅದರ ಚಿತ್ರಗಳನ್ನುಒದಗಿಸಿದ್ದು ಉಪಗ್ರಹವೇ. ಕಳೆದ ೯ ವರ್ಷಗಳಲ್ಲಿ ೩೮೯ ವಿದೇಶಿ ಉಪಗ್ರಹಗಳನ್ನು ಉಡಾಯಿಸುವ ಮೂಲಕ ಕೇಂದ್ರ ಸರಕಾರಕ್ಕೆ ೩,೩೦೦ ಕೋಟಿ ರು. ಆದಾಯ ಬಂದಿದೆ. ೨೦೧೭ರ -ಬ್ರುವರಿಯಲ್ಲಿ ಒಂದೇ ಕಾರ್ಯಾಚರಣೆಯಲ್ಲಿ ೧೦೪ ವಿದೇಶಿ ಉಪಗ್ರಹಗಳನ್ನು ಉಡಾಯಿಸಿ ಇಸ್ರೋ ವಿಶ್ವದಾಖಲೆ ಮಾಡಿತ್ತು. ೨೦೧೩-೧೪ ರಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮೀಸಲಿಟ್ಟಿದ್ದ ಹಣ ೫,೬೧೫ ಕೋಟಿ ರು. ಆದರೆ, ೨೦೨೩-೨೪ರಲ್ಲಿ ಮೀಸಲಿಟ್ಟಿರುವುದು ೧೨,೫೪೩ ಕೋಟಿ ರು. ಚಂದ್ರಯಾನ-೩ನ್ನು ಕೇವಲ ೬೦೦ ಕೋಟಿ ರು.ನಲ್ಲಿ ನಿರ್ವಹಿಸಲಾಗಿದೆ. ೨೦೦೪ರ ಮೊದಲು ವರ್ಷಕ್ಕೊಂದು ಉಪಗ್ರಹ ಉಡಾವಣೆಯಾಗುತ್ತಿತ್ತು, ಆದರೆ ಕಳೆದ ೯ ವರ್ಷಗಳಿಂದ ವರ್ಷಕ್ಕೆ ಸುಮಾರು ೫ ಉಪಗ್ರಹ ಉಡಾವಣೆಯಾಗುತ್ತಿವೆ.

ಕಾಂಗ್ರೆಸ್ಸಿಗರು ತಂತ್ರಜ್ಞಾನವನ್ನು ಸರಿಯಾದ ಸಮಯದಲ್ಲಿ ಬಳಸಿದ್ದಿದ್ದರೆ, ಭಾರತವಿಂದು ಮುಂದುವರಿದ ದೇಶಗಳ ಪಟ್ಟಿಯಲ್ಲಿರುತ್ತಿತ್ತು. ಬಾಹ್ಯಾಕಾಶ ಕ್ಷೇತ್ರಕ್ಕೆ ದೂರದೃಷ್ಟಿರಹಿತ ನೆಹರು ಕೊಡುಗೆ ದೊಡ್ಡ ಶೂನ್ಯ. ಇಟ್ಟಿಗೆ ಇಟ್ಟ ಮಾತ್ರಕ್ಕೆ ಮನೆ ಸಿದ್ಧವಾಗುವುದಿಲ್ಲ. ಕಾಂಗ್ರೆಸ್ಸಿನ ಅವಧಿಯಲ್ಲಿ ಶಂಕುಸ್ಥಾಪನೆಯಾಗಿದ್ದ ಹಲವು ಯೋಜನೆಗಳು ಮೋದಿಯವರ ಅವಧಿಯಲ್ಲಿ ಪೂರ್ಣಗೊಂಡಿವೆ. ಅಟಲ್ ಬಿಹಾರಿ ವಾಜಪೇಯಿ
ಪತನದ ನಂತರ ೨೦೦೪ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರಕಾರ, ವಾಜಪೇಯಿ ಅವಧಿಯಲ್ಲಿ ನಿರ್ಮಾಣವಾಗಿ ದೇಶದ ಆರ್ಥಿಕ ಚಿತ್ರಣವನ್ನೇ ಬದಲಿಸಿದ ‘ಸುವರ್ಣ ಚತುಷ್ಪಥ ಹೆದ್ದಾರಿ’ಯ ಅಕ್ಕಪಕ್ಕದಲ್ಲಿ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್‌ರ ದೊಡ್ಡ ಪೋಸ್ಟರ್‌ಗಳನ್ನೇ ಹಾಕಿತ್ತು. ಬೇರೆಯವರ ಒಲೆಯ ಮೇಲೆ ಅಡುಗೆ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಗೀಳು ಕಾಂಗ್ರೆಸ್ಸಿನ ಹುಟ್ಟುಗುಣ. ನೆಹರು ಕಾಲದಿಂದಲೂ ಇದು ನಡೆದುಬಂದಿದೆ. ಕೇರಳದ ಪ್ರತಿಷ್ಠಿತ ವಿಜ್ಞಾನಿ ನಂಬಿ ನಾರಾಯಣನ್‌ರ ಕನಸಿನ ಕೂಸಾಗಿದ್ದ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅಭಿವೃದ್ಧಿಯನ್ನು ಕುಂಠಿತಗೊಳಿಸುವಲ್ಲಿ ಕಾಂಗ್ರೆಸ್
ಮತ್ತು ಕಮ್ಯುನಿಸ್ಟ್ ಪಕ್ಷಗಳು ಯಶಸ್ವಿಯಾಗಿದ್ದವು. ೧೯೯೪ ರಲ್ಲಿ ಅವರ ಮೇಲೆ ‘ಗೂಢಚಾರ’ ಎಂಬ ಆರೋಪ ಹೊರಿಸಿ ಬಂಧಿಸಿ ಜೈಲಿನಲ್ಲಿ ಚಿತ್ರಹಿಂಸೆ ನೀಡಿ ಮಾನಸಿಕವಾಗಿ ಕುಗ್ಗಿಸಲಾಗಿತ್ತು. ಕಾನೂನು ಹೋರಾಟದ ಮೂಲಕ ಆರೋಪ ಮುಕ್ತರಾಗಿ ಹೊರಬಂದಿದ್ದ ಅವರಿಗೆ ೧೯೯೮ರಲ್ಲಿ ನ್ಯಾಯಾಲಯ ಪರಿಹಾರ ನೀಡುವಂತೆ ಸೂಚಿಸಿತ್ತು. ಆದರೆ ಅದು ಅವರ ಕೈತಲುಪಿದ್ದು ೨೦೨೦ರಲ್ಲಿ. ನಂಬಿ ನಾರಾಯಣನ್‌ರ ಬಂಧನದಿಂದಾಗಿ, ಕ್ರಯೋಜೆನಿಕ್ ಎಂಜಿನ್ ಅಂದುಕೊಂಡ ಸಮಯದಲ್ಲಿ ತಯಾರಾಗದೆ ಭಾರತದ ಅಂತರಿಕ್ಷ ಯಾನ ತಡವಾಯಿತು. ಹೀಗೆ ವಿಜ್ಞಾನಿಯೊಬ್ಬರನ್ನು ಹೇಯವಾಗಿ ನಡೆಸಿಕೊಂಡ ಕಾಂಗ್ರೆಸ್, ಚಂದ್ರಯಾನ-೩ರ ಯಶಸ್ಸನ್ನು ತನ್ನ ಹೆಗಲ ಮೇಲೆ ಹೊರಲು ಹವಣಿಸುತ್ತಿದೆ. ಭಾರತದ ೨೬,೦೦೦ ಚ.ಕಿ.ಮೀ. ಭೂಭಾಗವನ್ನು ಚೀನಾಕ್ಕೆ ಅನಾಯಾಸವಾಗಿ ಬಿಟ್ಟುಕೊಟ್ಟ ನೆಹರುರಿಗೆ, ಭೂಭಾಗದ ಮೇಲಿಲ್ಲದ
ಆಸಕ್ತಿ ಬಾಹ್ಯಾಕಾಶದ ಮೇಲೆ ಹೇಗಿರಲು ಸಾಧ್ಯ?

ಇತ್ತೀಚೆಗೆ ಚಂದ್ರನ ಮೇಲೆ ಲ್ಯಾಂಡ್ ಆಗದೆ ಕ್ರ್ಯಾಶ್ ಆದ ರಷ್ಯಾದ ‘ಲೂನಾ-೨೫’ ಯೋಜನೆಯ ವೆಚ್ಚ ಸುಮಾರು ೧,೬೦೦ ಕೋಟಿ ರು. ಆದರೆ ಇಸ್ರೋದ ಚಂದ್ರಯಾನ-೩ಕ್ಕೆ ತಗುಲಿದ ವೆಚ್ಚ ೬೦೦ ಕೋಟಿ ರು. ಸಂಪೂರ್ಣ ದೇಸಿ ನಿರ್ಮಿತ ಕಚ್ಚಾವಸ್ತುಗಳನ್ನು ಬಳಸಿರುವುದರಿಂದ ನಮ್ಮ ಯಾನದ ವೆಚ್ಚ ಕಡಿಮೆಯಾಗಿದೆ. ವಿಜ್ಞಾನ-ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ತಾಳ್ಮೆ ಯಿಂದ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸಲಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಹೀಗೆ ಮಾಡುವುದಿಲ್ಲ. ತನಗೆ ಬೇಕಿರುವ ಬಿಡಿಭಾಗಗಳ ವಿಶೇಷತೆಗಳನ್ನು ನೀಡುತ್ತದೆ, ಅದಕ್ಕೆ ತಕ್ಕಂತೆ ಹೆಚ್ಚಿನ ಖರ್ಚಿನಲ್ಲಿ ಪೂರೈಕೆದಾರರು ಅವನ್ನು ತಯಾರಿಸಿ ನೀಡುತ್ತಾರೆ. ಇಂಥ ವಸ್ತುಗಳನ್ನು ನಾಸಾ ೭-೮ ಬಾರಿ ಗುಣಮಟ್ಟದ ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ. ಆದರೆ ಇಸ್ರೋ ವಿಜ್ಞಾನಿಗಳಿಗೆ ೨-೩ ಬಾರಿಯ ಗುಣಮಟ್ಟದ ಪರಿಶೀಲನೆಯಲ್ಲಿ ದೃಢಪಡಿಸುವ ಸಾಮರ್ಥ್ಯವಿದೆ. ರಾಕೆಟ್ ವೇಗ ಹೆಚ್ಚಿಸಲು ರಷ್ಯಾ ಬೂಸ್ಟರ್ ಅಳವಡಿಸಿದ್ದರ ಪರಿಣಾಮ ಅಧಿಕ ಖರ್ಚಾಗಿತ್ತು. ಇಸ್ರೋ ವಿಜ್ಞಾನಿಗಳ ಕಡಿಮೆ ಖರ್ಚಿನ ಲ್ಯಾಂಡರ್-ರೋವರ್ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಲು ಜಗತ್ತಿನ ಇತರ ದೇಶಗಳು ಇಸ್ರೋ ಸಂಸ್ಥೆಗೆ ನೂರಾರು ಕೋಟಿ ರು. ಹಣವನ್ನು ನೀಡಬೇಕಾಗುತ್ತದೆ. ಚಂದ್ರನ ಮೇಲೆ ‘ವಿಕ್ರಮ್’ ಲ್ಯಾಂಡ್ ಆದ ನಂತರದಲ್ಲಿ ಇಸ್ರೋಗೆ ದೊರಕುವ ನೂರಾರು ಟೆರಾಬೈಟ್‌ನಷ್ಟು ಮಾಹಿತಿ ಗಳನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳುವುದರಿಂದ ಕೋಟ್ಯಂತರ ರು. ಆದಾಯವನ್ನು ನಿರೀಕ್ಷಿಸಬಹುದು.

ಚಂದ್ರಯಾನ-೩ರ ಯಶಸ್ಸು ದಾಖಲಿಸಿರುವ ಇಸ್ರೋದ ಮೂಲರೂವಾರಿ ಡಾ. ವಿಕ್ರಮ್ ಸಾರಾಭಾಯಿ. ೧೯೬೯ರಲ್ಲಿ ಇಸ್ರೋ ಸ್ಥಾಪನೆಯಾದ ನಂತರ ಪ್ರಮುಖ ಸಂಶೋಧನೆ ಯಲ್ಲಿ ತೊಡಗಿಸಿಕೊಂಡಿದ್ದ ಅವರು ೧೯೭೧ರ ಡಿಸೆಂಬರ್ ೩೧ರಂದು ಕೇರಳದ ತಮ್ಮ ನೆಚ್ಚಿನ ಹೋಟೆಲ್ ರೂಮಿನಲ್ಲಿ ಇದ್ದಕ್ಕಿದ್ದಂತೆ ನಿಧನರಾದರು. ಅವರು ಸಂಚರಿಸುತ್ತಿದ್ದಂಥ ವಿಮಾನ/ರೈಲುಗಳ ಅಕ್ಕಪಕ್ಕದ ಸೀಟುಗಳನ್ನು ಸಾರ್ವಜನಿಕರಿಗೆ ನೀಡುತ್ತಿರಲಿಲ್ಲದಷ್ಟು ಭದ್ರತೆಯನ್ನು ಅವರಿಗೆ ಒದಗಿಸಲಾಗಿತ್ತು. ಇಷ್ಟಿದ್ದರೂ ಅವರ ಸಾವಿನ ತನಿಖೆಯನ್ನು ಅಂದಿನ ಇಂದಿರಾ ಗಾಂಧಿ ಸರಕಾರ ಮಾಡಿಸಲಿಲ್ಲ. ಚಂದ್ರನ ಮೇಲಿಳಿದ ಲ್ಯಾಂಡರ್‌ಗೆ ಅವರ ಸ್ಮರಣಾರ್ಥ ‘ವಿಕ್ರಮ್’ ಎಂದು ಹೆಸರಿಡಲಾಗಿದೆ. ಇಸ್ರೋ ವಿಜ್ಞಾನಿಗಳ ಈ ಸಾಧನೆಯ ಹಿಂದೆ ೪ ವರ್ಷಗಳ ಕಠಿಣ ಪರಿಶ್ರಮವಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಬಲ್ಯ ಮತ್ತಷ್ಟು ಹೆಚ್ಚಿದೆ.