Friday, 22nd November 2024

ಸ್ವಚ್ಛತೆಯ ಕೊರತೆ, ಬರಬಹುದು ಕಜ್ಜಿತುರಿಕೆ

ನಮ್ಮ ಪೂರ್ವಜರು ನಾನಾ ಕಾಯಿಲೆಗಳಿಂದ ನರಳುತ್ತಿದ್ದರು. ಅವುಗಳಲ್ಲಿ ಚರ್ಮಕಾಯಿಲೆಗಳು ಮುಖ್ಯವಾಗಿದ್ದವು. ಅದರಲ್ಲೂ ಕಜ್ಜಿ ಅಥವಾ ತುರಿಕಜ್ಜಿ ಸಾಮಾನ್ಯವಾಗಿತ್ತು. ತುರಿಕಜ್ಜಿಗೆ ಕಾರಣ ಒಂದು ಜೀವಿ ಎನ್ನುವ ವಿಚಾರ ನಮಗೆ ತಿಳಿದಿರಲಿಲ್ಲ. ಜೀವಿಗಳು ಮನುಷ್ಯನ ಶರೀರದ ಮೇಲೆ ವಾಸಿಸುತ್ತವೆ. ಅವನ ಒಡಲಿನಲ್ಲಿ ಆಶ್ರಯ-ಆಹಾರ ಪಡೆದು ಅಲ್ಲಿಯೇ ತಮ್ಮ ಸಂಸಾರ ವರ್ಧಿಸುತ್ತಾ, ಕಾಯಿಲೆಗಳನ್ನು ಉಂಟುಮಾಡುತ್ತವೆ ಎಂಬ ವಿಚಾರ ಮೊದಲ ಬಾರಿಗೆ ತುರಿಕಜ್ಜಿಯ ಕಾಯಿಲೆಯ ಅಧ್ಯಯನದಲ್ಲಿ ಕಂಡುಬಂದಿತು. ಸೂಜಿಮೊನೆ ಗಾತ್ರದ ನುಸಿಯೊಂದು ಕಜ್ಜಿಗೆ ಕಾರಣ ಎನ್ನುವ ವಿಚಾರ ತಿಳಿದಾಗ ಮನುಕುಲ ಬೆರಗಾಯಿತು. ಇದರೊಡನೆ, ನಮ್ಮ ಶರೀರದ ಮೇಲ್ಮೈ ಮೇಲೆ ವಾಸಿಸುವ ಬಾಹ್ಯಾಪರಾವಲಂಬಿ ಜೀವಿಗಳ ಅಧ್ಯಯನದ ಹೊಸ ಹೊಸ ವಿಜ್ಞಾನ ಶಾಖೆ, ಬಾಹ್ಯಾಪರಾವಲಂಬಿ ವಿಜ್ಞಾನವು (ಎಕ್ಟೋಪ್ಯಾರಾಸೈಟಾಲಜಿ) ರೂಪು ಗೊಂಡಿತು ಎಂದರೆ ತಪ್ಪಾಗಲಾರದು.

ಕಜ್ಜಿ ಅಥವಾ ತುರಿಕಜ್ಜಿ ಒಂದು ಅನಾದಿಕಾಲದ ಕಾಯಿಲೆ. ಇದು ಈಜಿಪ್ಷಿಯನ್ ಸಂಸ್ಕೃತಿಯ ಕಾಲದಲ್ಲಿ ಪರಿಚಿತವಾಗಿತ್ತು. ಕಜ್ಜಿಗೆ ತುತ್ತಾದ ಮಮ್ಮಿಗಳನ್ನು ಇಂದಿಗೂ ನೋಡ ಬಹುದು. ಅವರಿಗೆ ಈ ಕಾಯಿಲೆ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ತಿಳಿದಿರಲಿಲ್ಲ. ಹಾಗಾಗಿ ಅವರು ಚಿಕಿತ್ಸೆಯಿಲ್ಲದೆ ಮರಣಿಸುವುದು ಅನಿವಾರ್ಯವಾಗಿತ್ತು. ಅರಿಸ್ಟಾಟಲ್ ಕಜ್ಜಿಯನ್ನು ಗಮನಿಸಿದ್ದ. ಕಜ್ಜಿಯು ತಲೆದೋರಲು ಶರೀರದಲ್ಲಿ ಹರಿಯುವ ೪ ರಸಗಳಲ್ಲಿ (ಹ್ಯೂಮರ್ಸ್) ಸಂಭವಿಸುವ ಏರುಪೇರೇ ಕಾರಣವೆಂದ. ಜತೆಗೆ ಕಜ್ಜಿ ಗುಳ್ಳೆಯನ್ನು ಒಡೆದಾಗ, ಹೊರಬರುವ ‘ಹೇನು’ ಕಜ್ಜಿಯನ್ನುಂಟು ಮಾಡುತ್ತದೆ ಎಂಬುದು ಅವನ ವಿಚಾರವಾಗಿತ್ತು. ಮರಗಳಲ್ಲಿ ವಾಸಿಸುವ ‘ಅಕಾರಿ’ ಎಂಬ ನುಸಿಯ ಹೆಸರನ್ನೇ ಈ ‘ಹೇನು’ವಿಗೆ ನೀಡಿದ. ವಾಸ್ತವದಲ್ಲಿ ಇದು ‘ಹೇನು’ ಅಲ್ಲ. ಹೇನು ಒಂದು ಕೀಟ (ಇನ್‌ಸೆಕ್ಟ್). ಇದು ಮೈಟ್. ಜೇಡನ ಜಾತಿಗೆ ಸೇರಿದ ಅರಾಕ್ನಿಡ್. ಕನ್ನಡದಲ್ಲಿ ಕಜ್ಜಿನುಸಿಯೆನ್ನಬಹುದು. ರೋಮನ್ ವಿಶ್ವಕೋಶ ಹಾಗೂ ವೈದ್ಯಕೀಯ ಬರಹಗಳ ಲೇಖಕ ಔಲಸ್ ಕಾರ್ನೀಲಿಯಸ್ ಸೆಲ್ಸಸ್ ಈ ಚರ್ಮಕಾಯಿಲೆಗೆ ‘ಸ್ಕೇಬಿಸ್’ ಎಂಬ ಹೆಸರು ನೀಡಿದ. ‘ಸ್ಕೇಬರ್’ ಎಂದರೆ ‘ಕೆರೆಯುವುದು’ ಎಂದರ್ಥ. ಕಜ್ಜಿಯ ಪ್ರಮುಖ ಲಕ್ಷಣ ತುರಿಕೆ. ಹಾಗಾಗಿ ಸೆಲ್ಸಸ್ ಈ ಕಾಯಿಲೆಯನ್ನು ಸ್ಕೇಬಿಸ್ ಎಂದ. ಅರಬ್ ವೈದ್ಯ ಇಬ್ನ್ ಜ಼ುಹ್ರ್ ಮೊದಲ ಬಾರಿಗೆ ಕಜ್ಜಿಯ ಸ್ವರೂಪವನ್ನು ವಿವರಿಸಿದ. ಮಧ್ಯ ಯುಗದ ಅರಬ್ ಹಾಗೂ ಯುರೋಪಿಯನ್ ವೈದ್ಯರು ಕಜ್ಜಿಯ ಬಗ್ಗೆ ತಮ್ಮದೇ ವಿವರಣೆ ನೀಡಿರುವುದನ್ನು ಕಾಣಬಹುದು. ಫ್ರೆಂಚರು ಇದನ್ನು ‘ಗೇಲ್’ ಎಂದರೆ ಬ್ರಿಟಿಷರು ‘ಇಟ್ಚ್’ ಎಂದರು. ಜರ್ಮನ್ನರು ‘ಕ್ರಾಟ್ಜ್’ ಎಂದು  ನಾಮಕರಣ ಮಾಡಿದರು. ಈ ಕಾಯಿಲೆ ಶ್ರೀಮಂತರಲ್ಲಿ ಅಪರೂಪಕ್ಕೆ ಕಂಡುಬರುತ್ತಿದ್ದರೂ ಬಡವರಲ್ಲಿ ಸಾಮಾನ್ಯವಾಗಿತ್ತು. ಮೊದಲನೆಯ ನೆಪೋಲಿಯನ್ ತನ್ನ ಜೀವಮಾನ ಪೂರ್ತಿ ಕಜ್ಜಿಯಿಂದ ನರಳಿದ. ೧೭ನೇ ಶತಮಾನದ ಯುರೋಪ್ ಪರಿವರ್ತನೆಯ ಯುಗದಲ್ಲಿತ್ತು. ಹಳತು-ಹೊಸತು ಒಟ್ಟೊಟ್ಟಿಗೆ ನಡೆಯುತ್ತಾ, ಆಗಾಗ್ಗೆ ಘರ್ಷಣೆಗೆ ಒಳಗಾಗುತ್ತಾ, ಸಾಮಾನ್ಯವಾಗಿ ದುರಂತದಲ್ಲಿ ಕೊನೆಗೊಳ್ಳುತ್ತಿತ್ತು. ಚರ್ಚ್ ಸರ್ವಶಕ್ತವಾಗಿತ್ತು. ಅರಸ ಚರ್ಚಿನ ಕೈಗೊಂಬೆಯಾಗಿದ್ದ. ಹಾಗಾಗಿ ಗೆಲೆಲಿಯೊನಂತೆ ಟೊಮಾಸೊ ಕಂಪಾನೆಲ್ಲನೂ ಚರ್ಚಿನ ನಿರ್ಬಂಧನಕ್ಕೆ ಒಳಗಾಗಿ ಗೃಹಬಂಧನದಲ್ಲಿ ಉಳಿದ.

ಜಿಯಾರ್ಡೋನೊ ಬ್ರೂನೊವನ್ನು ೪ ರಸ್ತೆಗಳು ಕೂಡುವಲ್ಲಿ ಬಹಿರಂಗವಾಗಿ ಸುಟ್ಟರು. ಕ್ಯಾರವಾಜಿಯೊ ಗಡಿಪಾರಾದ, ಬೆರ್ನೀನಿ ಮುಂತಾದವರ ವೈಜ್ಞಾನಿಕ ಮುನ್ನಡೆಯ ಕೆಲಸಗಳನ್ನು ಚರ್ಚ್ ಉಗ್ರವಾಗಿ ತುಳಿಯಿತು. ‘ಜೀವಿಗಳು ಸ್ವಯಂಜನಿಸುತ್ತವೆ’ ಎಂಬ ತಿರುಳಿನ ಒಂದು ಸಿದ್ಧಾಂತ ಅಂದಿನ ದಿನಗಳಲ್ಲಿ ಪ್ರಚಲಿತದಲ್ಲಿತ್ತು. ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಜೀವಿಗಳಿಂದಲೇ ಮತ್ತೊಂದು ಜೀವಿ ಹುಟ್ಟುತ್ತದೆ ಎನ್ನುವುದು ೨ನೇ ಸಿದ್ಧಾಂತ. ಮೊದಲ ಸಿದ್ಧಾಂತಕ್ಕೆ ಚರ್ಚಿನ ಬೆಂಬಲವಿತ್ತು. ೨ನೇ ಸಿದ್ಧಾಂತವನ್ನು ಅದು ಉಗ್ರವಾಗಿ ಪ್ರತಿಭಟಿಸುತ್ತಿತ್ತು. ಆಗ ಫ್ರಾನ್ಸೆಸ್ಕೊ ರೆಡಿ ಒಂದು ದಿಟ್ಟ ಪ್ರಯೋಗ ಕೈಗೊಂಡ. ಕೊಳೆತ ಮಾಂಸವನ್ನು ಗಾಳಿಗೆ ತೆರೆದಿಟ್ಟರೆ ಮಾತ್ರ ನೊಣಗಳು ಅದರ ಮೇಲೆ ಕುಳಿತು, ಮೊಟ್ಟೆಯಿಟ್ಟು ಮರಿ ಮಾಡುತ್ತವೆ; ಮಾಂಸವನ್ನು ಗಾಳಿ/ನೊಣಗಳ ಸಂಪರ್ಕಕ್ಕೆ ಬರದ ಹಾಗೆ ರಕ್ಷಿಸಿಟ್ಟರೆ, ಕೊಳೆತ ಮಾಂಸದಲ್ಲಿ ನೊಣ ಸ್ವಯಂಜನಿಸುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದ. ಫ್ರಾನ್ಸೆಸ್ಕೋ ರೆಡಿಗೆ ಇಬ್ಬರು ಶಿಷ್ಯರು. ಮೊದಲನೆಯನು ಜಿಯೋವನ್ನಿ ಕೋಸಿಮೊ ಬೋನಮೊ ನೌಕಾದಳದಲ್ಲಿದ್ದ ಓರ್ವ ಇಟಾಲಿಯನ್ ವೈದ್ಯ. ಡಯಾಸಿಂಟೊ ಡೆಸ್ಟಿನಿ ಎಂಬ ವಿಜ್ಞಾನಿ ಔಷಧಾಗಾರವನ್ನು ನಡೆಸುತ್ತಿದ್ದ. ಅಂದಿನ ಬುದ್ಧಿ ಜೀವಿಗಳು ಇಲ್ಲಿ ನಿಯತವಾಗಿ ಸೇರಿ ಚರ್ಚಿಸುತ್ತಿದ್ದರು.

ಇಟಲಿಯೋ ಲಿವೋರ್ನೊ ನಗರ. ಅಲ್ಲಿ ಸಾರ್ವಜನಿಕ ಸ್ನಾನದ ಕೊಳ. ಬೋನಮೊ ಮತ್ತು ಡೆಸ್ಟಿನಿ ಅಲ್ಲಿ ಕಜ್ಜಿಪೀಡಿತ ಮಹಿಳೆ, ಮಕ್ಕಳನ್ನು ಗಮನಿಸಿ ಅಧ್ಯಯನ ಮಾಡಿ, ತಮ್ಮದೇ ಚಿಕಿತ್ಸೆ ನೀಡಿದರು. ಈ ಬಗ್ಗೆ ಜುಲೈ ೧೮, ೧೬೮೭ರಂದು ಪತ್ರ ಬರೆದು ಫ್ರಾನ್ಸೆಸ್ಕೋ ರೆಡಿಗೆ ಕಳುಹಿಸಿಕೊಟ್ಟರು. ಅದರ ಸಾರಾಂಶ ಹೀಗಿತ್ತು: ‘ಬಡ ಹೆಂಗಸರು, ಮಕ್ಕಳು ಕಜ್ಜಿಯಿಂದ ನರಳುತ್ತಿರುವುದನ್ನು ನೋಡಿದೆ. ಅವರ ಮೇಲೆ ಕರುಣೆಯುಕ್ಕಿತು. ಆ ತಾಯಂದಿರು ಮಕ್ಕಳ ಕಜ್ಜಿಗುಳ್ಳೆಗಳನ್ನು ಸೂಜಿಯಿಂದ ಚುಚ್ಚಿ ಒಡೆದಾಗ ಅದರಿಂದ ನೀರು ಬರುತ್ತಿತ್ತು. ಜತೆಗೆ ಬೆಳ್ಳನೆಯ ದುಂಡನೆಯ ವಸ್ತು. ಅದನ್ನೆತ್ತಿ ಹೆಬ್ಬೆರಳ ಉಗುರಿನ ಮೇಲಿಟ್ಟುಕೊಂಡು, ಮತ್ತೊಂದು ಹೆಬ್ಬೆರಳ ಉಗುರಿನಿಂದ ಛಟೀರನೆ ಒತ್ತಿ ಕೊಲ್ಲುತ್ತಿದ್ದರು. ನಾನು ಕೂಡಲೇ ಕಜ್ಜಿ ಪೀಡಿತನೊಬ್ಬನನ್ನು ಭೇಟಿಯಾಗಿ ಎಲ್ಲಿ ತುರಿಕೆಯಾಗುತ್ತಿದೆ ಎಂದು ಕೇಳಿದೆ. ಅವನು ತೋರಿಸಿದ ಗುಳ್ಳೆಯನ್ನು ಸೂಜಿಯಿಂದ ಚುಚ್ಚಿ ನೀರನ್ನು ತೆಗೆದೆ.

ನೋಡಲು ಕಷ್ಟವಾಗುವಷ್ಟು ಪುಟ್ಟಗಿನ ಬಿಳಿಯ ರಚನೆ ಹೊರಬಂತು. ಅದನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದೆ. ಅದೊಂದು ಜೀವಂತ ಪುಟ್ಟ ಆಮೆಯಂಥ ರಚನೆಯಾಗಿತ್ತು. ಮೈ ಬೆಳ್ಳಗಿದ್ದರೆ ಬೆನ್ನು ಮಾತ್ರ ತುಸು ಕಪ್ಪಗಿತ್ತು. ಅದಕ್ಕೆ ೬ ಕಾಲುಗಳಿದ್ದವು. ಸ್ಪಷ್ಟವಾಗಿ ಕಾಣುತ್ತಿದ್ದ ಅದರ ತಲೆಯಿಂದ ನವಿರಾದ ಕೂದಲಿನಂಥ ರಚನೆಗಳು ಹೊರಬಂದಿದ್ದವು. ಬಾಯಿಯ ಬಳಿ ಕೊಂಬಿನಂಥ ೨ ರಚನೆಗಳಿದ್ದವು. ಇದು ಚುರುಕಾಗಿ ಚಲಿಸುತ್ತಿತ್ತು’ ಎಂದು ತಾನು ಕಂಡ ಜೀವಿಯನ್ನು ವರ್ಣಿಸಿದ. ಬೋನೊಮೊ ಕಜ್ಜಿಗೆ ಕಾರಣವಾದ ನುಸಿಯ ಮರಿಹುಳುವನ್ನು ಸೊಗಸಾಗಿ ವರ್ಣಿಸಿದ್ದ. ವಯಸ್ಕ ನುಸಿಗೆ ೮ ಕಾಲುಗಳಿರುವುದರಿಂದ ಬೋನೊಮೊ ಮರಿಹುಳುವನ್ನು ಮೊದಲ ಬಾರಿಗೆ ನಿಖರವಾಗಿ ವಿವರಿಸಿದ್ದ. ಬೋನೊಮೊ ಇಷ್ಟಕ್ಕೆ ತೃಪ್ತನಾಗಲಿಲ್ಲ. ಎಲ್ಲ ಬಣ್ಣಗಳ ಚರ್ಮದವರು, ಹಿರಿಯರು, ಮಕ್ಕಳು, ಬಡವರು, ಶ್ರೀಮಂತರು, ಗಂಡಸರು -ಹೆಂಗಸರನ್ನು ಪರೀಕ್ಷಿಸಿ ಎಲ್ಲರ ಕಜ್ಜಿ ಗುಳ್ಳೆಗಳನ್ನು ಒಡೆದು ಅಧ್ಯಯನ ಮಾಡಿ ಹೀಗೆಂದ: ‘ನೀರುಗುಳ್ಳೆಗಳನ್ನು ಒಡೆದು ನೋಡುವಾಗ ಕೆಲವದರಲ್ಲಿ ಆ ಜೀವಿಗಳು ಇರುತ್ತಿರಲಿಲ್ಲ. ಆದರೆ ಅವು ಚರ್ಮದ ಮಡಿಕೆಗಳ ನಡುವೆ ಓಡುವುದನ್ನು ಕಂಡೆ. ಅವು ತಮ್ಮ ಬಲವಾದ ತಲೆ ಮತ್ತು ದವಡೆಯಿಂದ ಚರ್ಮದಲ್ಲಿ ರಂಧ್ರ ಕೊರೆದು ಒಳನುಗ್ಗಿ ತಿನ್ನುತ್ತಿದ್ದವು.

ನಂತರ ಅಲ್ಲಿ ಒಂದು ನೀರುಗುಳ್ಳೆ ರೂಪುಗೊಳ್ಳುತ್ತಿತ್ತು. ಆಮೇಲೆ ಅದು ಮತ್ತೊಂದು ಕಡೆ ನುಗ್ಗಿ ಕಚ್ಚಿ ಸುರಂಗ ಕೊರೆಯುತ್ತಿತ್ತು. ಅಲ್ಲಿಯೂ ನೀರುಗುಳ್ಳೆ ರೂಪುಗೊಳ್ಳುತ್ತಿತ್ತು. ಹೀಗೆ ಹತ್ತಿರಹತ್ತಿರವೇ ಹಲವು ನೀರುಗುಳ್ಳೆಗಳನ್ನು ರೂಪಿಸುತ್ತಿದ್ದವು. ಒಮ್ಮೆ ನಾನೊಂದು ಜೀವಿಯನ್ನು ಸೂಕ್ಷ್ಮದರ್ಶಕದಡಿ ನೋಡುತ್ತಿದ್ದಾಗ ಒಂದು ಜೀವಿ ತನ್ನ ಒಡಲ ಹಿಂಭಾಗದಿಂದ ಬಿಳಿಯ, ಬಹುಪಾಲು ಪಾರದರ್ಶಕವಾದ ಅನಾನಸು
ಬೀಜಾಕೃತಿಯ ಮೊಟ್ಟೆಗಳನ್ನು ಇಡುತ್ತಿದ್ದುದನ್ನು ಕಂಡೆ. ಎಲ್ಲ ಜೀವಿಗಳಂತೆ ಇವುಗಳಲ್ಲಿಯೂ ಗಂಡು-ಹೆಣ್ಣು ಇರಬೇಕು. ಅವುಗಳ ಮಿಲನದಿಂದ ಮೊಟ್ಟೆ ರೂಪುಗೊಳ್ಳುತ್ತಿರಬೇಕು. ನಾನು ಅವುಗಳ ಬಾಹ್ಯಲಕ್ಷಣ ಆಧರಿಸಿ ಯಾವುದು ಗಂಡು? ಯಾವುದು ಹೆಣ್ಣು ಎಂದು ಗುರುತಿಸಲಾರದವನಾದೆ. ಅವುಗಳ ಮಿಲನವನ್ನು ನೋಡಲಿಲ್ಲ. ಆದರೆ ಅವು ಖಂಡಿತ ಮಿಲನದ ಮೂಲಕ ಸಂತಾನವರ್ಧನೆ ಮಾಡುತ್ತಿದ್ದವು ಎಂಬುದನ್ನು ಬಲ್ಲೆ’.

ಬೋನೊಮೊ, ತನ್ನ ಗುರು ರೆಡಿ ನಡೆಸುತ್ತಿದ್ದ ಪ್ರಯೋಗಕ್ಕೆ ಪುರಾವೆ ಒದಗಿಸಿದ. ಇಲ್ಲಿ ಹೆಣ್ಣು ನುಸಿಯು ನೇರವಾಗಿ ಮೊಟ್ಟೆ ಇಡುತ್ತಿದ್ದುದನ್ನು ನೋಡಿದ್ದ. ಹಾಗಾಗಿ ಸ್ವಯಂಜನನ ಸಿದ್ಧಾಂತ ಹುಸಿಯೆಂದು ನಿರೂಪಗೊಳಿಸುವುದರ ಜತೆಗೆ ಅರಿಸ್ಟಾಟಲ್, ಗ್ಯಾಲನ್ ಮುಂತಾದವರು ಮಾನ್ಯ ಮಾಡಿದ್ದ ರಸಗಳ ಏರುಪೇರಿನ ಸಿದ್ಧಾಂತಕ್ಕೂ ಹುರುಳಿಲ್ಲವೆಂದ. ಕಜ್ಜಿಗೆ ಕಾರಣ ಅಕಾರಿ ಎಂಬ ನುಸಿಯೇ ಕಾರಣವೆಂದು ಸಾರಿದ.
ಬೋನೊಮೊ ತನ್ನ ಪತ್ರದಲ್ಲಿ ಅಕಾರಿಯು ಒಬ್ಬರಿಂದ ಒಬ್ಬರಿಗೆ ಸಂಸರ್ಗದಿಂದ ಹರಡುತ್ತದೆ ಎಂದ. ಅಕಾರಿ ನುಸಿಯು ಬಟ್ಟೆಗಳಿಗೆ ಹಾಗೂ ರೋಗಿ ಬಳಸುವ ವಸ್ತುಗಳಿಗೆ ಅಂಟಿಕೊಂಡು, ಅಲ್ಲಿಂದ ಇತರರಿಗೆ ಹರಡುತ್ತದೆಯೆಂದ. ಮನುಷ್ಯರ ದೇಹದ ಹೊರಗೆ ಈ ಅಕಾರಿ ನುಸಿ ಸುಮಾರು ೩ ದಿನ ಬದುಕಬಲ್ಲುದು ಎಂದ. ಅಷ್ಟರಲ್ಲೇ ಅದು ಹೊಸ ಅತಿಥೇಯನನ್ನು ಹುಡುಕಿಕೊಳ್ಳಬೇಕಿತ್ತು. ಇಲ್ಲದಿದ್ದರೆ ಅದು ಸಾಯುವುದು ಅನಿವಾರ್ಯವಾಗುತ್ತಿತ್ತು. ಬೋನೊಮೊ, ಕ್ಷಾರಲವಣಗಳನ್ನು ಬೆರೆಸಿದ ನೀರಿನಿಂದ ಸ್ನಾನವನ್ನು ಮಾಡಿದರೆ ಕಜ್ಜಿ ನಿಯಂತ್ರಣಕ್ಕೆ ಬರುತ್ತದೆಯೆಂದ. ನಂತರ ಗಂಧಕ, ಪಾದರಸ ಲವಣಗಳಿಂದ ಮಾಡಿದ
ಲೇಪನಗಳನ್ನು ಹಚ್ಚಬೇಕೆಂದ. ತುರಿಕೆ ಸಂಪೂರ್ಣ ನಿಂತಮೇಲೂ ಲೇಪನ ಹಚ್ಚುವುದನ್ನು ಮುಂದುವರಿಸಬೇಕೆಂದ.

ಹೊಟ್ಟೆಗೆ ಯಾವುದೇ ಔಷಧ ತೆಗೆದುಕೊಳ್ಳುವುದರ ಮೂಲಕ ಕಜ್ಜಿಯ ನಿಯಂತ್ರಣವಾಗುವುದಿಲ್ಲ. ಸ್ಥಾನಿಕ ಚಿಕಿತ್ಸೆಯೇ ಮುಖ್ಯವೆಂದ. ಬೋನೊಮೊನ ಪತ್ರವನ್ನು ರೆಡಿ ತನ್ನ ಪುಸ್ತಕವೊಂದರಲ್ಲಿ ಪ್ರಕಟಿಸಿದ. ಅಂದಿನ ಪೋಪಿನ ವೈದ್ಯ ಜಿಯೋ ವನ್ನಿ ಮೇರಿಯ ಲ್ಯಾನ್ಸೀಸಿ ಬೋನೊಮೊ ಜತೆ ವಾಗ್ವಾದಕ್ಕಿಳಿದ. ಲ್ಯಾನ್ಸೀಸಿ ವಾದದಂತೆ ಕಜ್ಜಿಗೆ ಕಾರಣ, ಪ್ರಾಚೀನ ಗ್ರೀಕರು ವಾದಿಸಿದಂತೆ ಶರೀರ ರಸಗಳ ಏರುಪೇರು! ‘ಬೋನೊಮೊ ಅಕಾರಿಯನ್ನು ಕಜ್ಜಿಯ ಹುಣ್ಣಿನಲ್ಲಿ ಕಂಡಿರಬಹುದು. ಆದರೆ ಕೇವಲ ಅಕಾರಿಯಿಂದ ಕಜ್ಜಿ ಬರಲು ಸಾಧ್ಯವಿಲ್ಲ. ಅಕಾರಿಯು ಪ್ರವರ್ಧಮಾನಕ್ಕೆ ಅಗತ್ಯವಾದ ಪರಿಸರವನ್ನು ರಸಗಳ ಏರುಪೇರು ಒದಗಿಸಿಕೊಡುತ್ತದೆ’
ಎಂದು ವಾದಿಸಿದ. ಯಾರೆಷ್ಟೇ ವಿವರಿಸಿದರೂ ಈತ ಒಪ್ಪದೆ ಉಗ್ರವಾಗಿ ಪ್ರತಿವಾದಿಸುತ್ತಿದ್ದ. ಕೊನೆಗೆ ಬೋನೊಮೊ ಹಿತೈಷಿಗಳು ವಿನಾಕಾರಣ ಪೋಪಿನ ವೈದ್ಯನನ್ನು ಎದುರು ಹಾಕಿಕೊಳ್ಳಬೇಡ. ಅಧಿಕಾರದಲ್ಲಿರುವ ಅವನಿಂದ ವೃಥಾ ತೊಂದರೆಗಳನ್ನೇಕೆ ಅನುಭವಿಸಬೇಕು? ನಿನ್ನ ವಾದ ನಿಲ್ಲಿಸು. ಕಾಲವು ಸತ್ಯವನ್ನು ಬಯಲುಮಾಡುತ್ತದೆ ಎಂದು ಸಮಾಧಾನಿಸಿದರು.

ಕಜ್ಜಿಗೆ ಕಾರಣವಾದ ನುಸಿಯನ್ನು ಈಗ ಸಾರ್ಕಾಪ್ಟೆಸ್ ಸ್ಕೇಬೈ ಹೋಮಿನಿಸ್ ಎನ್ನುತ್ತೇವೆ. ಈ ಆಧುನಿಕ ಯುಗದಲ್ಲೂ ಪ್ರತಿವರ್ಷ ಸುಮಾರು ೨೦೦ ದಶಲಕ್ಷ ಜನ ಈ ಚರ್ಮ ರೋಗಕ್ಕೆ ತುತ್ತಾಗುತ್ತಾರೆ ಎಂದರೆ ನಂಬಲು ಕಷ್ಟವಾಗುತ್ತದೆ. ವೈಯುಕ್ತಿಕ ಸ್ವಚ್ಛತೆಯ ಕೊರತೆ ಮತ್ತು ಕಜ್ಜಿ ಪೀಡಿತರ ದೈಹಿಕ ಸಂಸರ್ಗ, ಅವರು ಬಳಸಿದ ಹಾಸಿಗೆ ಬಟ್ಟೆ, ಬಾಚಣಿಗೆ, ಟವಲುಗಳನ್ನು ಹಂಚಿಕೊಳ್ಳುವುದರಿಂದ ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕಜ್ಜಿಯನ್ನು ಸಂಪೂರ್ಣ ಗುಣ ಪಡಿಸಬಲ್ಲ ಔಷಧಗಳು ಇಂದು ಸಾಕಷ್ಟಿವೆ. ಆದರೆ ಕಜ್ಜಿ ಮನುಷ್ಯನನ್ನು ಬಿಟ್ಟಿಲ್ಲ. ಮನುಷ್ಯನು ಸ್ವಚ್ಛತೆಯ ಪಾಠವನ್ನು ನೊಣದಿಂದ ಕಲಿತ ದಿನ ಬಹುಶಃ ಕಜ್ಜಿ ಪೂರ್ಣ
ತೊಲಗಬಹುದು.