ನವದೆಹಲಿ: ಸದನದ ವಿಶೇಷ ಅಧಿವೇಶನ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ ಉಪರಾಷ್ಟ್ರಪತಿ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ ಕರ್ ಅವರು ಭಾನುವಾರ ಹೊಸ ಸಂಸತ್ತಿನ ಕಟ್ಟಡದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದರು.
ಸೋಮವಾರದಿಂದ ಪ್ರಾರಂಭವಾಗುವ ಐದು ದಿನಗಳ ಸಂಸತ್ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ ಧ್ವಜಾರೋಹಣ ಸಮಾರಂಭವು ನಡೆಯಿತು.
ವಿಶೇಷ ಅಧಿವೇಶನದಲ್ಲಿ ಸಂಸತ್ತಿನ ಕಲಾಪಗಳನ್ನು ಹಳೆಯದರಿಂದ ಹೊಸ ಸಂಸತ್ತಿನ ಕಟ್ಟಡಕ್ಕೆ ಬದಲಾಯಿಸ ಬಹುದು.
ಮೇ 28 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಹೊಸ ಸಂಸತ್ತಿನ ಕಟ್ಟಡದ “ಗಜ ದ್ವಾರ”ದ ಮೇಲೆ ಜಗದೀಪ್ ಧನ್ ಕರ್ ಧ್ವಜಾರೋಹಣ ಮಾಡಿದರು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರಾದ ವಿ ಮುರಳೀಧರನ್, ಪಿಯೂಷ್ ಗೋಯಲ್, ಅರ್ಜುನ್ ರಾಮ್ ಮೇಘವಾಲ್, ಕಾಂಗ್ರೆಸ್ ಸಂಸದರಾದ ಅಧೀರ್ ರಂಜನ್ ಚೌಧರಿ ಮತ್ತು ಪ್ರಮೋದ್ ತಿವಾರಿ ಇತರರು ನೂತನ ಸಂಸತ್ ಭವನದಲ್ಲಿ ಧ್ವಜಾರೋಹಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಧ್ವಜಾರೋಹಣ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಮೇಲ್ಮನೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗೈರು ಹಾಜರಾಗಿದ್ದರು.