ಮೂರ್ತಿ ಪೂಜೆ
ಜೆಡಿಎಸ್ ಜತೆ ಕೈ ಜೋಡಿಸುವುದರಿಂದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್-ವಿರೋಧಿ ಮತಗಳು ಕನ್‌ಸಾಲಿಡೇಟ್ ಆಗುತ್ತವೆ. ಪರಿಣಾಮವಾಗಿ ಬಿಜೆಪಿಗೆ ಕನಿಷ್ಠಪಕ್ಷ ೨೨, ಜೆಡಿಎಸ್‌ಗೆ ಏನಿಲ್ಲವೆಂದರೂ ೩ ಕ್ಷೇತ್ರಗಳಲ್ಲಿ ಗೆಲುವು ಗ್ಯಾರಂಟಿ ಎಂಬುದು ಮೋದಿ-ಶಾ ಜೋಡಿಯ ಸದ್ಯದ ಲೆಕ್ಕಾಚಾರ.
ಬಿಜೆಪಿ ಜತೆಗಿನ ಮೈತ್ರಿಗೆ ಸಂಬಂಧಿಸಿದಂತೆ ಫೈನಲ್ ಸೆಟ್ಲ್‌ಮೆಂಟಿಗಾಗಿ ಮಾಜಿ ಪ್ರಧಾನಿ ದೇವೇಗೌಡರು ದಿಲ್ಲಿಗೆ ಹೋಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಒಗ್ಗೂಡಿ ಹೋಗುವ ವಿಷಯದಲ್ಲಿ ಉಭಯ ಪಕ್ಷಗಳ ನಾಯಕರು ಒಂದು ತೀರ್ಮಾನಕ್ಕೆ ಬಂದಿದ್ದರೂ ಕೆಲವು ಅನುಮಾನಗಳನ್ನು ಬಗೆಹರಿಸಿಕೊಳ್ಳುವುದಷ್ಟೇ ಬಾಕಿ ಉಳಿದಿದೆ. ಅಂದ ಹಾಗೆ ಚುನಾವಣೆಯಲ್ಲಿ ಒಗ್ಗೂಡಿ ಕಣಕ್ಕಿಳಿದರೆ ಎರಡು ಪಕ್ಷಗಳು ಸೇರಿ ೨೫ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬುದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಂಬಿಕೆ.
೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಫಲಿತಾಂಶ ಉಲ್ಟಾ ಆಯಿತು. ಅವತ್ತು ಕಾಂಗ್ರೆಸ್ಸಿಗೆ ಯಾವ ರೀತಿಯ ಹೊಡೆತ ಬಿತ್ತೋ, ಅದೇ ರೀತಿಯ ಹೊಡೆತ ಬಿಜೆಪಿಗೆ ಬೀಳುತ್ತದೆ ಅಂತ ಕಣಿಶಾಸಜ್ಞರು ಹೇಳುತ್ತಿದ್ದರೂ ವಾಸ್ತವ ಸ್ಥಿತಿ ಹಾಗಿಲ್ಲ. ಮೂಲತಃ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ಶಕ್ತಿಗಳೇನಿವೆ, ಅವು ಯಾವತ್ತೂ ಕಾಂಗ್ರೆಸ್-ವಿರೋಧಿ ಶಕ್ತಿಗಳ ಜತೆ ನಿಲ್ಲುತ್ತವೆ. ಜನತಾ ಪರಿವಾರ ರಾಜ್ಯದಲ್ಲಿ ಹಲವು ದಶಕಗಳ ಕಾಲ ಉಚ್ಛ್ರಾಯ ಸ್ಥಿತಿಯಲ್ಲಿದ್ದುದಕ್ಕೆ ಇದು ಮುಖ್ಯ ಕಾರಣ. ಯಾವಾಗ ಇದನ್ನು ಅರ್ಥಮಾಡಿಕೊಳ್ಳದೆ ಜೆಡಿಎಸ್ ನಾಯಕರು ಕಾಂಗ್ರೆಸ್ ಜತೆ ಮೈತ್ರಿ ಮಾಡಿ ಕೊಂಡರೋ, ಆಗ ಚೆನ್ನಾಗಿ ಹೊಡೆತ ತಿಂದರು. ಆದರೆ ಜೆಡಿಎಸ್ ಪಕ್ಷದ ಶಕ್ತಿ ಬಿಜೆಪಿ ಜತೆ ಸೇರಿದರೆ ಅದು ಡೆಡ್ಲಿ ಕಾಂಬಿನೇ ಶನ್ ಆಗುತ್ತದೆ.
ಅರ್ಥಾತ್, ಈ ಹಿಂದೆ ಯಾವ ಶಕ್ತಿಗಳು ಜನತಾ ಪರಿವಾರದ ಬೆನ್ನಿಗೆ ನಿಂತಿದ್ದವೋ, ಅವೇ ಶಕ್ತಿಗಳು ಬಿಜೆಪಿ-ಜೆಡಿಎಸ್ ಮೈತ್ರಿಯ ಮೂಲಕ ಪುನಃ ಕೈಜೋಡಿ ಸುತ್ತವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಡ್ಡಡ್ಡ ಮಲಗಿಸುತ್ತವೆ ಎಂಬುದು ಮೋದಿ- ಅಮಿತ್ ಶಾ ಕೈಲಿರುವ ರಿಪೋರ್ಟು. ಈ ರಿಪೋರ್ಟು ಬಂದ ನಂತರವೇ ಅವರು ಜೆಡಿಎಸ್ ಜತೆಗಿನ ಮೈತ್ರಿ ಕುರಿತಂತೆ ದೇವೇಗೌಡರ ಜತೆ ಮಾತನಾಡಿದ್ದು. ಈ ಮಾತುಕತೆಯ ಸಂದರ್ಭದಲ್ಲಿ ಅವರು ದೇವೇಗೌಡರ ಮುಂದೆ ಒಂದು ಪ್ರಸ್ತಾಪವಿಟ್ಟರಂತೆ: ‘ಇವತ್ತು ಬಿಜೆಪಿ- ಜೆಡಿಎಸ್ ಮಧ್ಯೆ ಮೈತ್ರಿ ಮಾಡಿಕೊಳ್ಳುವುದೇನೋ ಸರಿ. ಆದರೆ ಮತ್ತೊಮ್ಮೆ ಯೋಚಿಸಿ. ಮೈತ್ರಿಯ ಬದಲು ಜೆಡಿಎಸ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿದರೆ ಕಾಂಗ್ರೆಸ್ -ವಿರೋಧಿ ಶಕ್ತಿಗಳು ಸಾಲಿಡ್ಡಾಗಿ ನಿಲ್ಲಲು ಸಾಧ್ಯವಾಗುತ್ತದೆ.
ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ವಿಧಾನಸಭೆಯ ಪ್ರತಿಪಕ್ಷ ನಾಯಕರಾದರೆ ಕಾಂಗ್ರೆಸ್ ಸರಕಾರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಎದುರಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಕುಮಾರಸ್ವಾಮಿ ಪ್ರತಿಪಕ್ಷ ನಾಯಕರಾದರು ಎಂದುಕೊಳ್ಳಿ, ನಾಳೆ ರಾಜಕೀಯ ಸ್ಥಿತ್ಯಂತರಗಳ ಮಧ್ಯೆ ಮತ್ತೊಮ್ಮೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗುವುದು ಸುಲಭ’ ಎಂದಿದ್ದಾರೆ. ಆದರೆ ವಿಲೀನದ ಮಾತಿಗೆ ಅಷ್ಟಾಗಿ ಆಸಕ್ತಿ ತೋರದ ಗೌಡರು, ‘ವಿಲೀನದ ವಿಷಯದಲ್ಲಿ
ಒಂದು ಸಮಸ್ಯೆ ಇದೆ. ಅದೆಂದರೆ ಒಂದು ಸಲ ವಿಲೀನ ಅಂತಾದರೆ ಭವಿಷ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಬರುವ ದಲಿತ ಮತಗಳು ಕಡಿಮೆಯಾಗುತ್ತವೆ. ಹೀಗಾಗಿ ನಾವು ಸೆಕ್ಯುಲರ್
ಐಡೆಂಟಿಟಿಯನ್ನು ಇಟ್ಟುಕೊಂಡು ಮುಂದುವರಿದರೆ ದಲಿತ ಮತಬ್ಯಾಂಕಿನಲ್ಲಿ ಪಾಲು ಸಿಗುತ್ತದೆ. ಹೀಗಾಗಿ ಅದು ಹೆಚ್ಚು ಅನುಕೂಲ’ ಎಂದಿದ್ದಾರೆ. ಹೀಗೆ ವಿಲೀನದ ವಿಷಯದಲ್ಲಿ ಅವರು ಆಸಕ್ತಿ ತೋರಿಸದೆ ಇದ್ದರೂ ಮೈತ್ರಿಗೆ ಸಂಬಂಧಿಸಿದ ಫೈನಲ್ ಸೆಟ್ಲ್‌ಮೆಂಟಿನ ಸಂದರ್ಭದಲ್ಲಿ ಅದು ಮತ್ತೆ ಚರ್ಚೆಗೆ ಬರಲಿದೆ. ಅಂದ ಹಾಗೆ, ಜೆಡಿಎಸ್ ಜತೆ ಮೈತ್ರಿ ಸಾಽಸಿದರೆ ಬಿಜೆಪಿಗೆ ಮಿನಿಮಮ್ ೨೨, ಜೆಡಿಎಸ್ ಪಕ್ಷಕ್ಕೆ ಮಿನಿಮಮ್ ೩ ಕ್ಷೇತ್ರಗಳಲ್ಲಿ ಗೆಲುವು ಗ್ಯಾರಂಟಿ ಎಂಬುದು ಮೋದಿ-ಶಾ
ಜೋಡಿಯ ಸದ್ಯದ ಲೆಕ್ಕಾಚಾರ. ಜೆಡಿಎಸ್ ಜತೆ ಕೈ ಜೋಡಿಸುವುದರಿಂದ ಬೆಂಗಳೂರು ಉತ್ತರ, ಮೈಸೂರು, ಮಂಡ್ಯ, ತುಮಕೂರು, ಬೀದರ್, ರಾಯಚೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್-ವಿರೋಧಿ ಮತಗಳು ಕನ್‌ಸಾಲಿಡೇಟ್ ಆಗುತ್ತವೆ. ಪರಿಣಾಮವಾಗಿ ಇಂತಲ್ಲೆಲ್ಲ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ಸುಲಭ ವಾಗುತ್ತದೆ ಎಂಬುದು ಅವರ ಯೋಚನೆ. ಈ ಮಧ್ಯೆ ಲೋಕಸಭಾ ಚುನಾವಣೆಯಲ್ಲಿ ತನಗೆ ೭ ಸೀಟುಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್ ಹೇಳಿದ್ದರೂ ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಇಲ್ಲವೇ ಬೆಂಗಳೂರು ಉತ್ತರ ಕ್ಷೇತ್ರಗಳನ್ನು ಬಿಟ್ಟುಕೊಡಬಹುದು ಎಂಬುದು ಬಿಜೆಪಿ ವರಿಷ್ಠರ ಯೋಚನೆ.
ಬಿಎಸ್‌ವೈಗೆ ನಡ್ಡಾ ಹೇಳಿದ್ದೇನು?
ಹೀಗೆ ಕರ್ನಾಟಕದಲ್ಲಿ ಜೆಡಿಎಸ್ ಜತೆ ಮೈತ್ರಿ ಸಾಧಿಸುವುದೇನೋ ಸರಿ. ಆದರೆ ಅದು ಸರಿಯಾಗಿ ವರ್ಕ್‌ಔಟ್ ಆಗಬೇಕು ಎಂದರೆ ಮಾಜಿ ಸಿಎಂ ಯಡಿಯೂರಪ್ಪ ಮನಃಪೂರ್ವಕವಾಗಿ ಕೆಲಸ ಮಾಡಬೇಕು ಎಂಬುದು ಬಿಜೆಪಿ ವರಿಷ್ಠರಿಗೆ ಕನ್ ಫರ್ಮ್ ಆಗಿದೆ. ಹೀಗಾಗಿ ಕಳೆದ ವಾರ ದಿಲ್ಲಿಗೆ ಬಂದ ಅವರ ಜತೆ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ‘ಪಾರ್ಲಿಮೆಂಟ್ ಚುನಾವಣೆ ಯಲ್ಲಿ ನಿಮ್ಮ ಗರಿಷ್ಠ ಶಕ್ತಿ ಬಳಕೆಯಾಗಬೇಕು’ ಅಂತ ಹೇಳಿದ್ದಾರಂತೆ. ಅರ್ಥಾತ್, ಕರ್ನಾಟಕದ ಲಿಂಗಾಯತ ಮತಬ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಬಿಜೆಪಿಯನ್ನು ಬೆಂಬಲಿಸುವಂತಾಗಬೇಕು ಎಂಬುದು ನಡ್ಡಾ ಇಂಗಿತ. ಈ ಸಂದರ್ಭದಲ್ಲಿ ಯಡಿಯೂರಪ್ಪ ಕೂಡಾ, ‘ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ಏನೋ ಆಗಿಹೋಯಿತು. ಆದರೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಇದು ಪುನರಾವರ್ತನೆ ಆಗುವುದಿಲ್ಲ’
ಎಂದಿದ್ದಾರೆ. ಅವರ ಪ್ರಕಾರ, ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ಲಿಂಗಾಯತರು ಕಾಂಗ್ರೆಸ್ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಿರಬಹುದು. ಆದರೆ ನಾಲ್ಕೇ ತಿಂಗಳಲ್ಲಿ ಅವರಿಗೆ ಭ್ರಮನಿರಸನವಾಗಿದೆ. ಯಾಕೆಂದರೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರಿಗೆ ಪವರ್ ಫುಲ್ ಜಾಗ ಸಿಕ್ಕಿಲ್ಲ. ಲಿಂಗಾಯತರಿಗೆ ಕನಿಷ್ಠಪಕ್ಷ ಡಿಸಿಎಂ ಹುದ್ದೆ ಯಾದರೂ ಸಿಗುತ್ತದೆ ಎಂಬ ಲೆಕ್ಕಾಚಾರ ಇದ್ದರೂ ಅದು ಹುಸಿಯಾಗಿದೆ.
ಈ ಮಧ್ಯೆ ಮುಂದಿನ ಸಿಎಂ ಹುದ್ದೆಗೆ ಒಕ್ಕಲಿಗ ಸಮುದಾಯದ ಡಿಕೆಶಿ ಹೆಸರು ಕೇಳಿಬರುತ್ತಿದ್ದರೆ, ಅದೇ ಕಾಲಕ್ಕೆ ದಲಿತ ಸಮುದಾಯದ ಪರಮೇಶ್ವರ್ ಅವರನ್ನು ಮೇಲಕ್ಕೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಅರ್ಥಾತ್, ಭವಿಷ್ಯದಲ್ಲಿ ಒಕ್ಕಲಿಗ ಇಲ್ಲವೇ ದಲಿತರು ಮುಖ್ಯಮಂತ್ರಿ ಹುದ್ದೆಗೇರಬಹುದೇ ಹೊರತು ಲಿಂಗಾಯತರ ಹೆಸರು ಅಲ್ಲಿ ಬೋರ್ಡಿಗೂ ಇಲ್ಲ. ಈ ಮಧ್ಯೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಸಮಾಧಾನಿತ ಶಾಸಕರ ಪಡೆಯೊಂದು ಎದ್ದು ನಿಂತಿದೆಯಲ್ಲ, ಇದರಲ್ಲಿ ಬಹುತೇಕರು ಲಿಂಗಾಯತರು. ಹೀಗಾಗಿ ಈ ಅಂಶಗಳೆಲ್ಲ ಸೇರಿ ಲಿಂಗಾಯತ ಶಕ್ತಿ ಪುನಃ ಬಿಜೆಪಿಯ ಕಡೆ ತಿರುಗಿ ನೋಡಲಿದೆ. ಅಷ್ಟಾದರೆ ಸಾಕು, ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಬಂಪರ್ ಗೆಲುವು ಗ್ಯಾರಂಟಿ ಎಂಬುದು ಯಡಿಯೂರಪ್ಪ ಲೆಕ್ಕಾಚಾರ.
ಈ ಮಧ್ಯೆ, ಪುತ್ರರಾದ ರಾಘವೇಂದ್ರ ಮತ್ತು ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ಪ್ರಶ್ನೆಯೂ ಇರುವುದರಿಂದ ಯಡಿಯೂರಪ್ಪ ಗರಿಗರಿಯಾಗಿ ಎದ್ದು
ನಿಲ್ಲಲು ಬಯಸಿದ್ದಾರೆ. ಈ ಎಲ್ಲದರಷ್ಟೇ ಮುಖ್ಯವಾಗಿ, ಕರ್ನಾಟಕದಲ್ಲಿ ಕಳೆದ ಬಾರಿಗಿಂತ ಬಿಜೆಪಿಗೆ ಆರೇಳು ಸೀಟುಗಳು ಕಡಿಮೆಯಾದರೆ ಅದನ್ನು ಸರಿಹೊಂದಿಸಿಕೊಳ್ಳಲು ಪಕ್ಷಕ್ಕೆ ಬೇರೆ ಮೂಲಗಳಿವೆ. ಆದರೆ ಕರ್ನಾಟಕದಲ್ಲಾಗುವ ಕೊರತೆಯಿಂದ ಮೋದಿ-ಶಾ ಜೋಡಿಗೆ ನಮ್ಮ ಮೇಲಿರುವ ನಂಬಿಕೆ ಹೊರಟೇಹೋಗುತ್ತದೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂಬುದು ಯಡಿಯೂರಪ್ಪ ಯೋಚನೆ.
ಮೈತಿಯಿಂದ ಕೈಗೆ ಬಲ?
ಇಂಟರೆಸ್ಟಿಂಗ್ ವಿಷಯವೆಂದರೆ ಬಿಜೆಪಿ-ಜೆಡಿಎಸ್ ನಡುವಣ ಮೈತ್ರಿ ಕೈಗೆ ಬಲ ನೀಡಲಿದೆ ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿರುವುದು. ಜೆಡಿಎಸ್ ಜತೆಗಿನ ಮೈತ್ರಿಗಾಗಿ ಇವತ್ತು ಹೆಚ್ಚಿನ ತ್ಯಾಗ ಮಾಡಬೇಕಿರುವುದು ಬಿಜೆಪಿ. ಉದಾಹರಣೆಗೆ ನೋಡುವುದಾದರೆ ಇವತ್ತು ಜೆಡಿಎಸ್ ನಾಯಕರು ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಯಾವ ಕ್ಷೇತ್ರಗಳನ್ನು ತಮಗಾಗಿ ಕೇಳುತ್ತಿದ್ದಾರೋ, ಅಲ್ಲೆಲ್ಲ ಬಿಜೆಪಿಯ ಸಂಸದರಿದ್ದಾರೆ. ಹೀಗಾಗಿ ಬಲವಂತವಾಗಿ ಇಂಥ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಬಂಡಾಯ ಶುರುವಾಗುತ್ತದೆ ಮತ್ತು ಇಂಥ ಬಂಡಾಯ ಕಾಂಗ್ರೆಸ್ಸಿನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದು ಈ ನಾಯಕರ
ಲೆಕ್ಕಾಚಾರ. ಇದೇ ರೀತಿ ಹಾಸನ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದರಿಂದ ಮಾಜಿ ಶಾಸಕರಾದ ಪ್ರೀತಮ್ ಗೌಡ ಸೇರಿದಂತೆ ಕಮಲ ಪಾಳಯದ ಹಲವರಿಗೆ ನೆಲೆಯೇ ಕುಸಿದು ಹೋದಂತಾಗುತ್ತದೆ. ಹೀಗಾಗಿ ಅವರೆಲ್ಲ ಉಲ್ಟಾ ಹೊಡೆಯುತ್ತಾರೆ ಎಂಬುದು ಅವರ ಮಾತು.
ಬಾಂಬು ಹಾಕಿದರು ಸಚಿವ ರಾಜಣ್ಣ
ಈ ಮಧ್ಯೆ ಕಾಂಗ್ರೆಸ್ ಪಾಳಯದಲ್ಲಿ ಸಚಿವ ಕೆ.ಎನ್. ರಾಜಣ್ಣ ಬಾಂಬು ಉಡಾಯಿಸಿದ್ದಾರೆ. ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷಕ್ಕೆ ಶಕ್ತಿ ಸಿಗಬೇಕು
ಎಂದರೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಇನ್ನೂ ಮೂರು ಮಂದಿ ಉಪಮುಖ್ಯಮಂತ್ರಿಗಳಾಗಬೇಕು ಎಂಬುದು ರಾಜಣ್ಣ ಅವರ ಒತ್ತಾಯ. ಈಗ ಒಕ್ಕಲಿಗ
ನಾಯಕ ಡಿಕೆಶಿ ಉಪಮುಖ್ಯಮಂತ್ರಿಯಾಗಿದ್ದಾರೆ. ಆದರೆ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಲಿಂಗಾಯತರು, ದಲಿತರು ಮತ್ತು ಮುಸ್ಲಿಮರ ಷೇರು ದೊಡ್ಡದು. ಹೀಗಾಗಿ ಅವರಿಗೂ ಡಿಸಿಎಂ ಹುದ್ದೆ ಕೊಡಬೇಕು ಎಂದಿರುವ ಸಚಿವ ರಾಜಣ್ಣ, ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ದಿಲ್ಲಿಗೆ ಹೋಗಲು ನಿರ್ಧರಿಸಿದ್ದಾರೆ.
ಸೋನಿಯಾಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲಿರುವ ರಾಜಣ್ಣ ‘ಫಾಕ್ಟ್ ಅಂಡ್ ಫಿಗರ್’ ಏನು ಅಂತ ಅವರಿಗೆ ವಿವರಿಸಲಿದ್ದಾರಂತೆ. ಆದರೆ ಯಾವಾಗ ಅವರು ಈ ಕೂಗು ಹಾಕಿದರೋ, ಕಾಂಗ್ರೆಸ್ ಪಾಳಯದಲ್ಲಿ ‘ಇದು ಡಿಸಿಎಂ ಡಿಕೆಶಿಗೆ ಗುನ್ನ ಹಾಕುವ ಟೆಕ್ನಿಕ್ಕು’ ಎಂಬ ಮಾತು ಕೇಳಿಬರುತ್ತಿದೆ. ಅಗಲೇ ಅವರ ಡಿಸಿಎಂಗಿರಿಗೆ ಪ್ರತಿಸ್ಪರ್ಧಿಗಳು ಹುಟ್ಟಿಕೊಳ್ಳುತ್ತಿದ್ದಾರೆ ಎಂದರೆ ಮುಂದೆ ಸಿಎಂ ಹುದ್ದೆಗೇರುವ ಸಮಯ ಬಂದಾಗ ಇನ್ನಷ್ಟು ಪವರ್ ಫುಲ್ಲಾಗಿ ಅವರನ್ನು ವಿರೋಽಸುವವರು ಮೇಲೇಳಲಿದ್ದಾರೆ ಎಂದೇ ಅರ್ಥ ಅನ್ನುವುದು ಕೆಲ ನಾಯಕರ ವ್ಯಾಖ್ಯಾನ.