Sunday, 15th December 2024

ಭಾರತದ ನಾಗಾಲೋಟಕ್ಕೆ ಇದು ಸಕಾಲ

ಅರ್ಥ ವ್ಯಾಪ್ತಿ

ಡಾ.ಜಗದೀಶ ಮಾನೆ

ಚೀನಾದ ಪರಿಸ್ಥಿತಿ ಹೇಗಾಗಿದೆ ಎಂದರೆ, ಚೀನಾ ಇಷ್ಟು ಬೆಳೆದು ನಿಲ್ಲುವುದಕ್ಕೆ ಒಂದು ಕಾಲಕ್ಕೆ ಸಹಕರಿಸಿದ ರಾಷ್ಟ್ರಗಳಿಗೆಲ್ಲ ಇಂದು ಚೀನಾ ಬೇಡವಾಗಿದೆ. ಅದಕ್ಕೊಂದು ಪರ್ಯಾಯ ಶಕ್ತಿಯನ್ನು ಹುಡುಕುತ್ತಿರುವ ಪಶ್ಚಿಮದ ರಾಷ್ಟ್ರಗಳೀಗ ಭಾರತದತ್ತ ಮುಖಮಾಡಿವೆ.

ಇತ್ತೀಚಿನ ವರ್ಷಗಳಲ್ಲಿ ಭಾರತವು ಜಗತ್ತಿನ ಗಮನಾರ್ಹ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ೨೦೨೩ರ ವರ್ಷದ ಲೆಕ್ಕಾಚಾರದಲ್ಲಿ ಅಮೆರಿಕದ ಒಟ್ಟು ಜಿಡಿಪಿ ೨೫ ಟ್ರಿಲಿಯನ್ ಡಾಲರ್ ಇದ್ದರೆ, ೨ನೇ ಸ್ಥಾನದಲ್ಲಿರುವ ಚೀನದ ಜಿಡಿಪಿ ೧೯.೩ ಲಕ್ಷ ಕೋಟಿ ಡಾಲರ್ ನಷ್ಟಿದೆ. ನಂತರದ ಸ್ಥಾನಗಳಲ್ಲಿ ಜಪಾನ್ (೪.೪ ಲಕ್ಷ ಕೋಟಿ
ಡಾಲರ್), ಜರ್ಮನಿ (೪.೩ ಲಕ್ಷ ಕೋಟಿ ಡಾಲರ್) ಹಾಗೂ ಭಾರತ (೩.೬ ಲಕ್ಷ ಕೋಟಿ ಡಾಲರ್) ಇವೆ. ಭಾರತದ ಸದ್ಯದ ಆರ್ಥಿಕ ಬೆಳವಣಿಗೆಯನ್ನು ಗಮನಿಸಿದರೆ, ಕೆಲವೇ ವರ್ಷಗಳಲ್ಲಿ ಜಗತ್ತಿನ ೩ನೇ ಆರ್ಥಿಕ ಶಕ್ತಿಯಾಗಿ ದೇಶ ಹೊರಹೊಮ್ಮುವ ಸಾಧ್ಯತೆಗಳಿವೆ.

ಆದರೆ ಚೀನಾಕ್ಕೆ ಹೋಲಿಸಿದರೆ ಭಾರತ ಸಾಕಷ್ಟು ಹಿಂದಿದೆ. ‘ಜಗತ್ತಿನ ಕಾರ್ಖಾನೆ’ ಎಂದು ಹೆಸರಾಗಿರುವ ಚೀನಾ, ಜಾಗತಿಕ ಬೇಡಿಕೆಗಳನ್ನು ಈಡೇರಿಸುವಲ್ಲಿ ಎಲ್ಲರಿಗಿಂತಲೂ ಮುಂದಿದೆ. ಅಮೆರಿಕದ ಟೆಸ್ಲಾದಿಂದ ಹಿಡಿದು ಯುರೋಪಿನ ಹಲವು ಕಂಪನಿಗಳ ಬ್ರ್ಯಾಂಡ್‌ಗಳವರೆಗಿನದು ಮಾತ್ರವಲ್ಲದೆ ಡೂಪ್ಲಿಕೇಟ್ ಐಟಂ ಗಳನ್ನೂ ಚೀನಾ ತಯಾರಿಸುತ್ತದೆ. ಕಾರಣ ಅಲ್ಲಿ ಗಣನೀಯ ಸಂಖ್ಯೆಯಲ್ಲಿ ಕುಶಲಿಗಳಿದ್ದಾರೆ. ತನ್ನಲ್ಲಿ ಬಂಡವಾಳ ಹೂಡಲು ಜಗತ್ತಿನ ಯಾವುದೇ ಮೂಲೆಯ ಸಂಸ್ಥೆಗಳು ಬಂದರೂ ಅವಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುತ್ತದೆ ಚೀನಾ.

ಅಲ್ಲಿನ ಕಾರ್ಮಿಕರೂ ಕೆಲಸದ ವಿಷಯದಲ್ಲಿ ಸಾಕಷ್ಟು ಬದ್ಧತೆ ಹೊಂದಿರುವುದು ವಿಶೇಷ. ಉತ್ಪಾದನೆಗೆ ಬೇಕಾಗುವ ಕಚ್ಚಾಪದಾರ್ಥಗಳಂತೂ ಅಲ್ಲಿ ಹೇರಳವಾಗಿ ಸಿಗುತ್ತವೆ ಮತ್ತು ಅಲ್ಲಿನ ಪೂರೈಕೆ ಸರಪಳಿ ಚೆನ್ನಾಗಿದೆ. ಅಗತ್ಯ ಮೂಲಸೌಕರ್ಯ ಯೋಜನೆಗಳ ಮೇಲೆ ಚೀನಾ ಸರಕಾರ ಸಾಕಷ್ಟು ಹೂಡಿಕೆ ಮಾಡಿದೆ. ನೀವು
ಯಾವುದೇ ಒಂದು ಉತ್ಪನ್ನ ಮಾದರಿಯನ್ನು ಚೀನಾಕ್ಕೆ ತೆಗೆದುಕೊಂಡು ಹೋಗಿ, ‘ಇಂಥದ್ದೇ ವಸ್ತುಗಳು, ಈ ಪ್ರಮಾಣದಲ್ಲಿ ಇಷ್ಟೇ ಬೆಲೆಯಲ್ಲಿ ನಮಗೆ ಬೇಕು’ ಎಂದರೆ ಚೀನಾದ ಕಾರ್ಖಾನೆಗಳು ನಮ್ಮನ್ನು ನಿರಾಶೆಗೊಳಿಸುವುದಿಲ್ಲ.

ತನ್ನ ಬಳಿ ಬಂದ ಯಾವುದೇ ಗಿರಾಕಿಯನ್ನು ಅವು ವಾಪಸ್ ಕಳಿಸುವುದಿಲ್ಲ. ಹೀಗೆ, ಜಾಗತಿಕ ಕಾರ್ಖಾನೆ ಅಂತ ಕರೆಸಿಕೊಳ್ಳುವ ಮೂಲಕ, ವಿಶ್ವದ ಎಲ್ಲ ವರ್ಗಗಳ
ಬೇಡಿಕೆಗಳನ್ನು ಈಡೇರಿಸಿಕೊಡುತ್ತದೆ ಚೀನಾ. ಇನ್ನು ಭಾರತದಲ್ಲಿ ಕೆಲವೆಡೆ ಸಮಾಜವಾದ-ಸಮತಾವಾದದ ಹೆಸರಲ್ಲಿ ಉಚಿತ ಕೊಡುಗೆಗಳನ್ನು ಕೊಡುತ್ತ, ಜನಗಳು ಸರಕಾರದ ಮುಂದೆ ಕೈಚಾಚಿ ನಿಲ್ಲುವಂಥ ವಾತಾವರಣವನ್ನು ನಮ್ಮ ರಾಜಕೀಯ ನಾಯಕರು ಸೃಷ್ಟಿಸಿದ್ದಾರೆ. ನಮ್ಮವರು, ಯಾರೋ ಹಿಡಿದ
ಮೀನನ್ನು ಇನ್ಯಾರಿಗೋ ಕೊಡುತ್ತಾ ತಾವು ಸಮರ್ಥರು, ಸಾಧಕರು ಅಂತ ಕರೆಸಿಕೊಳ್ಳುತ್ತಿದ್ದರೆ, ಚೀನಾ ತನ್ನ ಜನರಿಗೆ ಮೀನು ಹಿಡಿಯೋದನ್ನೇ ಕಲಿಸಿತು. ತನ್ನ ಜನರಿಗೆ ದುಡಿದು ಉಣ್ಣುವ ಪಾಠ ಹೇಳಿಕೊಡುತ್ತ, ದುಡಿಯವ ಶಕ್ತಿಯ ಜತೆಗೆ ಅವರಿಗೆ ಕೌಶಲವನ್ನೂ ಕಲಿಸಿತು.

ಹೀಗಾಗಿ ಚೀನಾ ಮುಂದುವರಿಯಲು ಹಾಗೂ ಕೇವಲ ಹತ್ತೇ ವರ್ಷಗಳ ಅವಧಿಯಲ್ಲಿ ಜಪಾನ್ ಅನ್ನು ಹಿಂದಿಕ್ಕಿ ಜಗತ್ತಿನ ೨ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಅದು ಹೊರಹೊಮ್ಮಲು ಸಾಧ್ಯವಾಗಿದೆ. ೨೦೧೪ರಲ್ಲಿ ಚೀನಾ ೧೦,೪೭೫ ಬಿಲಿಯನ್ ಡಾಲರ್‌ನಷ್ಟು ಆರ್ಥಿಕತೆ ಹೊಂದಿದ್ದರೆ, ಭಾರತದ ಆರ್ಥಿಕತೆ ೨,೦೩೯ ಬಿಲಿಯನ್ ಡಾಲರ್‌ನಷ್ಟಿತ್ತು. ಇಲ್ಲಿ ಕಾಣುತ್ತಿದ್ದ ಅಂತರ ೭.೭೧ ಲಕ್ಷ ಕೋಟಿ ಡಾಲರ್‌ನಷ್ಟು. ೨೦೨೩ರ ಲೆಕ್ಕಾಚಾರವನ್ನು ನೋಡಿದರೆ, ಭಾರತದ ಜಿಡಿಪಿ ೩.೬ ಲಕ್ಷ ಕೋಟಿ ಡಾಲರ್‌ನಷ್ಟಿದ್ದರೆ, ಚೀನಾದ್ದು ೧೯.೩ ಲಕ್ಷ ಕೋಟಿ ಬಿಲಿಯನ್ ಡಾಲರ್‌ನಷ್ಟಿದೆ. ಇಲ್ಲಿ ಕಾಣುವ ವ್ಯತ್ಯಾಸ ೧೫.೭ ಟ್ರಿಲಿಯನ್ ಡಾಲರ್. ಹೀಗಾಗಿ ಚೀನಾವನ್ನು ಭಾರತ ಹಿಂದಿಕ್ಕಬೇಕಾದರೆ ಚೀನಾಕ್ಕಿಂತ ೧೦ ಪಟ್ಟು ವೇಗದಲ್ಲಿ ಮುನ್ನುಗ್ಗಬೇಕಿದೆ.

ಚೀನಾ ಇಷ್ಟೊಂದು ವೇಗವಾಗಿ ಬೆಳೆಯಲು ಪ್ರಮುಖ ಕಾರಣ, ಅಮೆರಿಕ ಹಾಗೂ ಪಶ್ಚಿಮದ ಇತರ ರಾಷ್ಟ್ರಗಳು ಕೊಟ್ಟಂಥ ನೆರವು. ಇಲ್ಲಿಂದ ಹರಿದುಬಂದ ಬಂಡವಾಳ, ತಂತ್ರಜ್ಞಾನಕ್ಕೆ ಚೀನಾ ಒತ್ತಾಸೆಯಾಗಿ ನಿಂತಿತು. ಚೀನಾದ ಅಗಾಧ ಜನಸಂಖ್ಯೆ ಹಾಗೂ ನೈಸರ್ಗಿಕ ಸಂಪನ್ಮೂಲಗಳೂ ಪೂರಕವಾಗಿ ಬಳಕೆಯಾದವು. ಬಂಡವಾಳಶಾಹಿಗಳಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ಮಾಡಿಕೊಟ್ಟ ಚೀನಾ, ತನ್ನ ಮೂಲಸೌಕರ್ಯಗಳನ್ನು
ಹೆಚ್ಚಿಸಿಕೊಂಡು ನೌಕರರ/ಕಾರ್ಮಿಕರ ವೃತ್ತಿಕೌಶಲಗಳನ್ನು ಬೆಳೆಸುವತ್ತ ಆದ್ಯಗಮನ ನೀಡಿತು. ಪಶ್ಚಿಮ ರಾಷ್ಟ್ರಗಳ ಬಂಡವಾಳ ಚೀನಾದಲ್ಲಿ ಹೂಡಿಕೆಯಾಗಿ ಉತ್ಪನ್ನಗಳು ತಯಾರಾದವು. ಅವನ್ನು ರಫ್ತು ಮಾಡುವ ಮೂಲಕ ಚೀನಾದ ತೆರಿಗೆ ಹಣ ವೃದ್ಧಿಯಾಗುತ್ತಾ ಹೋಯಿತು.

ವಿಶೇಷವಾಗಿ ಚೀನಾದಂಥ ಮುಂದುವರಿದ ರಾಷ್ಟ್ರಗಳಲ್ಲಿ, ಅಲ್ಲಿನ ಶಾಲಾ-ಕಾಲೇಜುಗಳಲ್ಲಿ ಯಾವ ಪಾಠ ಇರಬೇಕು? ಯಾವ ಮಾಧ್ಯಮದಲ್ಲಿ ಕಲಿಸಬೇಕು? ಅದರ ಆಯ್ಕೆ ಸಮಿತಿಯಲ್ಲಿ ಯಾರೆಲ್ಲಾ ಇರಬೇಕು? ಎಂಬೆಲ್ಲ ಚಿಲ್ಲರೆ ಜಗಳ, ಕಿತ್ತಾಟಗಳು ಇರುವುದಿಲ್ಲ. ಬದಲಿಗೆ ಪಠ್ಯದಲ್ಲಿ ಕೌಶಲವನ್ನು ಕಲಿಸುವುದಕ್ಕೆ ಅಲ್ಲಿ ಆದ್ಯತೆ ನೀಡಲಾಗುತ್ತದೆ. ಚೀನಾದಲ್ಲಿ ಯಾವುದೇ ವಸ್ತುವಿನ ಉತ್ಪಾದನೆಗೆ ಬೇಕಾಗುವ ಕಚ್ಚಾವಸ್ತುಗಳು ಅಲ್ಲಿಯೇ ಸಿಗುತ್ತವೆ. ಉದಾಹರಣೆಗೆ, ಔಷಧ ತಯಾರಿಕೆಗೆ ಬೇಕಾಗುವ ‘ಆಕ್ಟಿವ್ ಫಾರ್ಮಾ ಇನ್ ಗ್ರೀಡಿಯಂಟ್ಸ್’ (ಎಪಿಐ) ಚೀನಾದಲ್ಲೇ ಸಿಗುತ್ತವೆ; ಆದರೆ ಭಾರತವು ಜಾಗತಿಕ ಔಷಧ ವಲಯದ ‘ಹಬ್’ ಆಗಿ
ಬದಲಾಗಿದ್ದರೂ, ‘ಎಪಿಐ’ಗಾಗಿ ನಾವು ಚೀನಾವನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯಿದೆ.

ಇದೇ ರೀತಿಯಲ್ಲಿ, ಸೆಮಿಕಂಡಕ್ಟರ್‌ಗಳ ಚಿಪ್ ತಯಾರಿಕೆಗೆ ಬೇಕಾಗುವ ‘ರೇರ್ ಅರ್ಥ್ ಮೆಟೀರಿಯಲ್’ ಚೀನಾದಲ್ಲೇ ಹೇರಳವಾಗಿ ಸಿಗುತ್ತದೆ; ಭಾರತ ಅದನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳಬೇಕು. ಇಂಥ ಸಾಕಷ್ಟು ಸಮಸ್ಯೆಗಳನ್ನು ಭಾರತ ಸರಿಪಡಿಸಿಕೊಳ್ಳಬೇಕು. ಚೀನಾದ ಕೋವಿಡ್ ವೈರಾಣುವಿನ
ಸಮಸ್ಯೆಯ ನಂತರ ಭಾರತವು ಆರ್ಥಿಕ ಬೆಳವಣಿಗೆಯಲ್ಲಿ ಗಣನೀಯ ಸಾಧನೆ ಮಾಡುತ್ತಿದೆ. ಇದು ಹೀಗೆಯೇ ಮುಂದುವರಿಯಬೇಕು ಎಂದಾದಲ್ಲಿ, ಸರಕಾರವು ತನ್ನ ನೀತಿಗಳಲ್ಲಿ ಮತ್ತಷ್ಟು ಮಹತ್ತರ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಬಂಡವಾಳ ಹೂಡಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸುವಿಕೆ, ಕೌಶಲ ಹೆಚ್ಚಿಸುವಿಕೆ ಮಾತ್ರವಲ್ಲದೆ ದುಡಿಯುವುದು ಹೇಗೆ ಎಂಬುದನ್ನು ಭಾರತದ ಜನತೆಗೆ ಕಲಿಸಬೇಕಿದೆ. ಮಾತ್ರವಲ್ಲ, ಗ್ರಾಮೀಣ ಭಾಗದ ಆರ್ಥಿಕತೆಯನ್ನು ಬೆಳೆಸುವುದರ ಕಡೆಗೂ ಗಮನ ಹರಿಸಬೇಕಾದ್ದು ಅತಿಮುಖ್ಯ.

ಆದರೀಗ ಚೀನಾದ ಪರಿಸ್ಥಿತಿ ಹೇಗಾಗಿದೆ ಎಂದರೆ, ಒಂದು ಕಾಲಕ್ಕೆ ಯಾರೆಲ್ಲರ ಸಹಾಯ-ಸಹಕಾರದಿಂದ ಚೀನಾ ಇಷ್ಟು ದೊಡ್ಡಮಟ್ಟದಲ್ಲಿ ಬೆಳೆದು ನಿಲ್ಲುವುದಕ್ಕೆ ಸಾಧ್ಯವಾಯಿತೋ, ಅವರೆಲ್ಲರಿಗೂ ಇಂದು ಚೀನಾ ಬೇಡವಾಗಿದೆ. ಚೀನಾಕ್ಕೊಂದು ಪರ್ಯಾಯ ಶಕ್ತಿಯನ್ನು ಹುಡುಕುವ ನಿಟ್ಟಿನಲ್ಲಿ ಪಶ್ಚಿಮದ ರಾಷ್ಟ್ರಗಳೀಗ ಭಾರತದತ್ತ ಮುಖಮಾಡಿವೆ. ಭಾರತದಲ್ಲಿ ಹೆಚ್ಚಿನ ಯುವಶಕ್ತಿಯಿದೆ, ಬೇಕಾದ ಸಂಪನ್ಮೂಲಗಳಿವೆ. ಇಲ್ಲಿನ ಕಾರ್ಮಿಕ ಶಕ್ತಿಯೂ ಗಣನೀಯವಾಗಿರುವುದು ಪಾಶ್ಚಾತ್ಯರ ಗಮನದಲ್ಲಿದೆ. ಹಾಗಾಗಿ ಭಾರತಕ್ಕೀಗ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹರಿದುಬರಲಿದೆ. ಈಗಾಗಲೇ ಚೀನಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಕಷ್ಟು ಕಂಪನಿಗಳು ಭಾರತಕ್ಕೆ ಬರುತ್ತಿವೆ.

ಅದರಂತೆ ಭಾರತವೀಗ ಸೆಮಿಕಂಡಕ್ಟರ್ ಚಿಪ್‌ಗಳ ತಯಾರಿಕೆಗೆ ಮುಂದಾಗಿದೆ. ಸದ್ಯ ಐಫೋನ್ ತಯಾರಿಕಾ ಘಟಕವಂತೂ ಭಾರತದ ಪಾಲಾಗಿದೆ.
ಇದರಂತೆ ಇನ್ನೂ ಸಾಕಷ್ಟು ಉದ್ಯಮಗಳು ಭಾರತದತ್ತ ಮುಖಮಾಡುತ್ತಿರುವುದು ಹೆಮ್ಮೆಯ ವಿಷಯ. ಕಳೆದ ಮೂರು ವರ್ಷಗಳ ಅವಧಿಯನ್ನು ಗಮನಿಸಿದರೆ, ಜಿಡಿಪಿ ಬೆಳವಣಿಗೆ ವಿಷಯದಲ್ಲಿ ಇಡೀ ಜಗತ್ತಿನಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ. ಮಾತ್ರವಲ್ಲದೆ, ಬೆಳವಣಿಗೆಯ ಶೇಕಡಾವಾರು ಅಂಕಿ-ಅಂಶಗಳಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿದೆ. ಈ ಪರಿಸ್ಥಿತಿ ಹೀಗೇ ಮುಂದುವರಿದರೆ, ಮುಂಬರುವ ೧೨ ವರ್ಷಗಳಲ್ಲಿ ಚೀನಾವನ್ನು ಭಾರತವು ಓವರ್‌ಟೇಕ್ ಮಾಡುವ ಸಾಧ್ಯತೆಗಳು ಹೆಚ್ಚಿವೆ.

(ಲೇಖಕರು ರಾಜ್ಯಶಾಸದ ಪ್ರಾಧ್ಯಾಪಕರು)