Saturday, 23rd November 2024

ಏಷ್ಯನ್ ​ಗೇಮ್ಸ್: ಭಾರತದ ಅಮೋಘ ಗೆಲುವು

ಹ್ಯಾಂಗ್​ಝೌ: ಏಷ್ಯನ್​ ಗೇಮ್ಸ್‌ ವಾಲಿಬಾಲ್‌ ಪಂದ್ಯದಲ್ಲಿ ಭಾರತದ ಪುರುಷರ ತಂಡವು ಹಾಲಿ ರನ್ನರ್‌ಅಪ್ ದಕ್ಷಿಣ ಕೊರಿಯಾವನ್ನು ಮಣಿಸಿ ನಾಕೌಟ್ ಹಂತ ಪ್ರವೇಶಿಸಿತು.

2 ಗಂಟೆ 38 ನಿಮಿಷಗಳ ಕಾಲ ನಡೆದ ಸಿ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ 3-2 ಅಂತರದಿಂದ ಎದುರಾಳಿ ತಂಡವನ್ನು ಸೋಲಿಸಿತು.

ವಾಲಿಬಾಲ್​ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 73ನೇ ಸ್ಥಾನದಲ್ಲಿರುವ ಭಾರತ, 27ನೇ ಶ್ರೇಯಾಂಕದಲ್ಲಿರುವ ಬಲಾಢ್ಯ ದಕ್ಷಿಣ ಕೋರಿಯಾ ವಿರುದ್ಧ 25-27, 29-27, 25-22, 20-25, 17-15 ಅಂತರಗಳಿಂದ ಗೆಲುವಿನ ಕೇಕೆ ಹಾಕಿತು. ಭಾರತದ ಪರ ಅಮಿತ್​ ಗುಲಿಯಾ ಮತ್ತು ಅಶ್ವಲ್​ ರೈ ಅದ್ಭುತ ಪ್ರದರ್ಶನ ತೋರಿ ಉತ್ತಮ ಅಂಕಗಳನ್ನು ಕಲೆಹಾಕುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಮಂಗಳವಾರ ನಡೆದ ಆರಂಭಿಕ ಪಂದ್ಯದಲ್ಲಿ ಭಾರತ ಎದುರಾಳಿ ಕಾಂಬೋಡಿಯಾವನ್ನು 3-0 ಅಂತರದಿಂದ ಸೋಲಿಸಿತ್ತು. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕೊನೆಯದಾಗಿ 1986ರಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ.