ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್
ಈ ಜಗತ್ತಿನಲ್ಲಿ ಜನಿಸಿದ ನಮಗೆಲ್ಲರಿಗೂ ದಿನಕಳೆದಂತೆ ವಯಸ್ಸಾಗುತ್ತಾ ಹೋಗುತ್ತದೆ. ಹಾಗಾಗಿ ಪ್ರತಿಯೊಂದು ಜೀವಿಗೂ ವಯಸ್ಸಾಗುವುದು ಅನಿವಾರ್ಯ. ಆದರೆ ಕೆಲವರಿಗೆ ಈ ವಯಸ್ಸಾಗುವಿಕೆಯ ಬಗ್ಗೆ ವಿಪರೀತ ಹೆದರಿಕೆ. ಮುಖ್ಯ ಕಾರಣ ಎಂದರೆ ತಮಗೆ ಬೇಗ ಮರಣ ಬರುತ್ತದೆ ಎಂಬ ಭಯ. ಹಾಗಾಗಿ ಈ ವಯಸ್ಸಾಗುವ ಬಗೆಗೆ ಜನಸಾಮಾನ್ಯರಲ್ಲಿ ಹಲವು ಬಗೆಯ ತಪ್ಪು ಕಲ್ಪನೆಗಳು ಮನೆ ಮಾಡಿವೆ. ಅವುಗಳಲ್ಲಿ ಕೆಲವು ಮುಖ್ಯವಾದವುಗಳ ಬಗ್ಗೆೆ ಚರ್ಚಿಸಲು ಪ್ರಯತ್ನಿಸುತ್ತೇನೆ.
300,000 ವರ್ಷಗಳ ಹಿಂದೆ ಈಗಿರುವ ಆಧುನಿಕ ಮಾನವ ಸಂತತಿ ಚಿಂಪಾಂಜಿಯಿಂದ ಬೇರೆ ಆಗಿ ಮನುಷ್ಯ ಪ್ರತ್ಯೇಕಿಸಲ್ಪಟ್ಟ ಎನ್ನಲಾಗುತ್ತದೆ. ಆ ನಂತರ ಮಾನವ ಬದುಕುವ ಕಾಲ ಅಥವಾ ಅವಧಿ ಅಥವಾ ಆತನ ಆಯುಷ್ಯ ಸುಮಾರು ಎರಡರಷ್ಟು ಜಾಸ್ತಿ ಯಾಗಿದೆ ಎನ್ನಬಹುದು. ಇತ್ತೀಚಿನ ಕಾಲವನ್ನು ಗಮನಿಸಿದರೆ ಕಳೆದ 200 ವರ್ಷಗಳಲ್ಲಿ ಮಾನವನ ಆಯುಷ್ಯ ಮೊದಲಿಗಿಂತ ಪುನಃ ಜಾಸ್ತಿಯಾಗಿದೆ. ಮತ್ತೆ ಎರಡು ಪಟ್ಟು ಹೆಚ್ಚಾಗಿದೆ ಎನ್ನುತ್ತಾರೆ ವೈದ್ಯ ವಿಜ್ಞಾನಿಗಳು. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಂದಾಜಿನ ಪ್ರಕಾರ, 2000 – 2050ರ ಈ ಅವಧಿಯಲ್ಲಿ 60 ವರ್ಷ ಮತ್ತು ಆ ನಂತರ ವಯಸ್ಸಿನ ಮನುಷ್ಯರ ಸಂಖ್ಯೆ ಸುಮಾರು ಶೇ.11ರಿಂದ ಶೇ.22ರಷ್ಟು ಜಾಸ್ತಿಯಾಗಿದೆ.
ವಯಸ್ಸಾಗುವ ಬಗ್ಗೆ ಇರುವ ಸಾಮಾನ್ಯ ತಪ್ಪು ಕಲ್ಪನೆಗಳು :
1. ವಯಸ್ಸಾದ ಹಾಗೆ ದೇಹವು ತೀವ್ರವಾಗಿ ಶಿಥಿಲವಾಗುತ್ತದೆ. ಇದು ಸಂಪೂರ್ಣವಾಗಿ ಸತ್ಯವಲ್ಲ. ನಮಗೆ ವಯಸ್ಸಾದ ಹಾಗೆ ದೇಹವು ನಿಧಾನವಾಗಿ ಕುಂದುತ್ತಾ ಬರುವುದು ಹೌದಾದರೂ ಸಂಪೂರ್ಣವಾಗಿ ಹಾಳಾಗಿ ಬಿಡುವುದಿಲ್ಲ. ನಾವು ಮನಸ್ಸು ಮಾಡಿದರೆ ದೇಹವು ಕುಂದುವುದನ್ನು ನಿಧಾನಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಒಂದು ಹೇಳಿಕೆಯ ಪ್ರಕಾರ ದೈಹಿಕ ಕೆಲಸ
ಜಾಸ್ತಿ ಮಾಡುವುದರಿಂದ ಮತ್ತು ಸೂಕ್ತ ರೀತಿಯ ಆಹಾರ ತೆಗೆದುಕೊಳ್ಳುವುದರಿಂದ ವಯಸ್ಸಾಗುವಿಕೆಯ ಹಲವು ಸಮಸ್ಯೆ ಗಳನ್ನು ನಿಭಾಯಿಸಬಹುದು. ಈ ಸಮಸ್ಯೆಗಳಲ್ಲಿ ಮುಖ್ಯವಾದವುಗಳೆಂದರೆ ಶಕ್ತಿ ಕುಂದುವುದು, ದೇಹದಲ್ಲಿ ಕೊಬ್ಬಿನ ಅಂಶ
ಜಾಸ್ತಿಯಾಗುವುದು, ರಕ್ತದೊತ್ತಡ ಹೆಚ್ಚಾಗುವುದು ಮತ್ತು ಮೂಳೆಯ ಸಾಂದ್ರತೆ (Bone Density) ಕಡಿಮೆಯಾಗುವುದು.
ಒಂದು ಸಂಶೋಧನೆಯ ಪ್ರಕಾರ ದೇಹವು ಸೊರಗುತ್ತದೆ ಎಂದು ನಿರೀಕ್ಷೆ ಮಾಡುವವರಲ್ಲಿ ಅವರ ದೇಹ ನಿಜವಾಗಲೂ ಸೊರಗುತ್ತದೆ ಅಥವಾ ಕುಂದುತ್ತದೆ. ಒಂದು ಅಧ್ಯಯನದಲ್ಲಿ ವಿಜ್ಞಾನಿಗಳು 148 ಜನರಲ್ಲಿ ಅವರ ವಯಸ್ಸಾಗುವಿಕೆ, ಜೀವನ
ಕ್ರಮ, ಮತ್ತು ಆರೋಗ್ಯದ ಅವರ ನಿರೀಕ್ಷೆ – ಇವುಗಳನ್ನು ಅಧ್ಯಯನ ಮಾಡಿದರು.
ವಯಸ್ಸಾಗುವ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವುದೇ ಅವರ ಜೀವನ ಶೈಲಿಯನ್ನು ದೈಹಿಕವಾಗಿ ಸರಿ ಇಟ್ಟುಕೊಳ್ಳುವುದು ಮತ್ತು ಅವರ ಅವರ ಆರೋಗ್ಯದ ವಿಚಾರದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ವಯಸ್ಸಾಗುತ್ತಾ ಹೋದ ಹಾಗೆ ಸ್ವಲ್ಪ ಪ್ರಮಾಣದ ದೈಹಿಕ ಕ್ಷಮತೆ ಕುಂದುವುದು ಹೌದಾದರೂ ಅದರ ಬಗ್ಗೆ ಸರಿಯಾದ ನಿರೀಕ್ಷೆ ಇಟ್ಟುಕೊಂಡು ಜೀವನ ಶೈಲಿ ರೂಪಿಸಿಕೊಂಡರೆ ಅವರ
ಜೀವನದ ಸಂಧ್ಯಾ ಕಾಲದಲ್ಲಿ ಸರಿಯಾದ ದೈಹಿಕ ಆರೋಗ್ಯ ಹೊಂದಬಹುದು. ಇನ್ನೊಂದು ಹಿಂದಿನ ಅಧ್ಯಯನದಲ್ಲಿ 429 ಜನರಲ್ಲಿ ಅಧ್ಯಯನ ಕೈಗೊಳ್ಳಲಾಗಿತ್ತು. ವಯಸ್ಸಾಗುವಿಕೆಯ ಬಗ್ಗೆ ಕಡಿಮೆ ನಿರೀಕ್ಷೆ ಇಟ್ಟುಕೊಂಡವರಲ್ಲಿ ಹೆಚ್ಚಿನವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರದೆ ಅಗತ್ಯವಿದ್ದಾಗ ವೈದ್ಯಕೀಯ ಸೇವೆ ಹೊಂದಲಿಲ್ಲ ಎನ್ನುತ್ತದೆ ಈ ಅಧ್ಯಯನ. ಇನ್ನೊಂದು ಅಧ್ಯಯನದ ಪ್ರಕಾರ ಮಧ್ಯ ವಯಸ್ಸು ಕಳೆದ ವ್ಯಕ್ತಿಗಳು ತಮ್ಮ ವಯಸ್ಸಾಗುವಿಕೆಯ ಬಗ್ಗೆ ಏನು ನಿರೀಕ್ಷೆ ಇಟ್ಟು ಕೊಂಡಿದ್ದಾರೆ ಎಂದು ನೋಡಲಾಯಿತು.
ವಯಸ್ಸಾಗುವಿಕೆಯ ಬಗ್ಗೆ ಧನಾತ್ಮಕ ನಿರೀಕ್ಷೆ ಇಟ್ಟುಕೊಂಡ ವ್ಯಕ್ತಿಗಳು ಆ ತರಹದ ನಿರೀಕ್ಷೆ ಇಟ್ಟುಕೊಳ್ಳದ ವ್ಯಕ್ತಿಗಳಿಗಿಂತ 7.5 ವರ್ಷಗಳಷ್ಟು ಜಾಸ್ತಿ ಬದುಕಿದ್ದರು. ಒಟ್ಟಿನಲ್ಲಿ ಹೇಳುವುದಾದರೆ ಇಳಿ ವಯಸ್ಸಿನಲ್ಲೂ ಚಟುವಟಿಕೆಯಿಂದ ಇರುವುದು, ಸರಿಯಾದ ಆಹಾರ ಕ್ರಮ, ಧನಾತ್ಮಕ ಚಿಂತನೆ ಇವುಗಳಿಂದ ಇಳಿ ವಯಸ್ಸಿನಲ್ಲಿ ದೇಹ ಕುಂದುವುದನ್ನು ನಿಧಾನಿಸಬಹುದು.
2. ವಯಸ್ಸಾದ ವ್ಯಕ್ತಿಗಳು ದೈಹಿಕ ವ್ಯಾಯಾಮ ಮಾಡಬಾರದು: ಮೇಲೆ ತಿಳಿಸಿದಂತೆ ಇದು ಸಂಪೂರ್ಣ ಸತ್ಯವಾದ ಮಾತಲ್ಲ. ನ್ಯೂರೋಸೈಕಾಲಜಿಯ ಒಂದು ಲೇಖನದ ರೀತ್ಯಾ ಹೆಚ್ಚು ಚಟುವಟಿಕೆಯಿಂದ ಇದ್ದರೆ ಮಾಂಸ ಖಂಡಗಳ ಶಕ್ತಿಯನ್ನು ವೃದ್ಧಿಸಬಹುದು. ಕೊಬ್ಬಿನ ಅಂಶವನ್ನು ಕಡಿಮೆ ಮಾಡಬಹುದು. ಹಾಗೆಯೇ ಮಾನಸಿಕ ಆರೋಗ್ಯವನ್ನೂ ವೃದ್ಧಿಸಬಹುದು. ಒಂದು ವಯಸ್ಸಿನ ನಂತರ ದೈಹಿಕ ವ್ಯಾಯಾಮ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಕೆಲವರು ತಿಳಿದಿದ್ದಾರೆ. ಇದು ಮತ್ತೊಂದು ತಪ್ಪು ತಿಳಿವಳಿಕೆ. ಒಂದು ಅಧ್ಯಯನದಲ್ಲಿ ಸಂಶೋಧಕರು 60-80 ವರ್ಷದವರ 142 ಜನರನ್ನು 42 ವಾರಗಳ ಕಾಲ ತೂಕ ಎತ್ತುವ ವ್ಯಾಯಾಮವನ್ನು ಮಾಡಿಸಿದರು. ಈ ಅವಧಿಯ ಕೊನೆಯಲ್ಲಿ ಅವರ ಮಾಂಸಖಂಡಗಳ ಶಕ್ತಿ, ಮಾಂಸಖಂಡಗಳ ಗಾತ್ರ ಎಲ್ಲವೂ ಜಾಸ್ತಿಯಾಗಿದ್ದವು. ಹಾಗೆಯೇ ನಿಯಮಿತ ವ್ಯಾಯಾಮವು ವಯಸ್ಸಾದವರಲ್ಲಿ ಆಲ್ಜೀಮರ್ಸ್ ಕಾಯಿಲೆ ಬರುವ ಸಾಧ್ಯತೆ ಕಡಿಮೆ ಮಾಡಬಹುದು. 1740 ಜನರಲ್ಲಿ ನಡೆಸಿದ ಅಧ್ಯಯನದಲ್ಲಿ ನಿಯಮಿತ ವ್ಯಾಯಾಮವು
ಚಿತ್ತವೈಕಲ್ಯ (Dementia) ಮತ್ತು ಆಲ್ಜೀಮರ್ಸ್ ಕಾಯಿಲೆ ಬರುವುದನ್ನು ನಿಧಾನಿಸ ಬಹುದು ಎಂದು ತಿಳಿಸಿದೆ.
3. ವಯಸ್ಸಾದ ವ್ಯಕ್ತಿಗಳಿಗೆ ಕಡಿಮೆ (ಅಥವಾ ಜಾಸ್ತಿ) ನಿದ್ರೆ ಸಾಕು: ಕೆಲವು ವ್ಯಕ್ತಿಗಳು ವಯಸ್ಸಾದ ವ್ಯಕ್ತಿಗಳಿಗೆ ಕಡಿಮೆ ನಿದ್ರೆ ಸಾಕು ಎಂದೂ ಮತ್ತೆ ಕೆಲವರು ಜಾಸ್ತಿ ನಿದ್ರೆ ಬೇಕು ಎಂದು ತಿಳಿದಿದ್ದಾರೆ. ಆದರೆ ಇದರಲ್ಲಿ ಹಲವಾರು ವಿಷಯಗಳಿವೆ. ವಯಸ್ಸಾದವರಿಗೆ ನಿದ್ರೆ ಬರುವುದು ಸ್ವಲ್ಪ ತಡವಾಗಿ, ಕೆಲವೊಮ್ಮೆ ಮಧ್ಯ ಮಧ್ಯ ಎಚ್ಚರವಾಗಲೂ ಬಹುದು. ನಿದ್ರೆಯ ಒಂದು ರಿದಂ ಇದೆ. ಅದನ್ನು ಸರ್ಕಾಡಿಯನ್ ರಿದಂ ಅನ್ನುತ್ತಾರೆ. ಅಂದರೆ ನಿಯಮಿತವಾಗಿ ಇಷ್ಟೇ ಹೊತ್ತಿಗೆ ನಿದ್ರೆ ಬರುವುದು. ಇದು ಕೆಲವರಲ್ಲಿ ಬೇರೆ ಬೇರೆ ಕಾರಣಗಳಿಗೆ ವ್ಯತ್ಯಾಸವಾಗುತ್ತಿರುತ್ತದೆ. ಹಾಗಲ್ಲದೆ ಕೆಲವು ಕಾಯಿಲೆಗಳು ಉದಾಹರಣೆಗೆ ಸಂಧಿವಾತದ ಕಾಯಿಲೆ ಆಸ್ಟಿಯೋಆರ್ತರೈಟಿಸ್ ಮತ್ತು ಆಸ್ಟಿಯೊಪೊರೋಸಿಸ್ – ನಿದ್ರೆಯನ್ನು ಹೆಚ್ಚುಕಡಿಮೆ ಮಾಡಬಹುದು. ಅಲ್ಲದೆ ದೀರ್ಘಕಾಲ ಉಸಿರು ಕಟ್ಟುವ ಶ್ವಾಸಕೋಶದ ಕಾಯಿಲೆ ಮತ್ತು ಕಂಜೆಸ್ಟಿವ್ ಹಾರ್ಟ್ ಫೇಲ್ಯೂರ್ – ಇವು ಇದ್ದರೆ ನಿದ್ರೆ ವ್ಯತ್ಯಾಸ ವಾಗುತ್ತದೆ. ಹಾಗಲ್ಲದೇ, ಕೆಲವೊಂದು ಔಷಧಗಳು ನಿದ್ರೆಯನ್ನು ವ್ಯತ್ಯಾಸ ಮಾಡಬಹುದು. ಅಮೆರಿಕದ ಸಿಡಿಸಿ ಪ್ರಕಾರ 61-64 ವರ್ಷದವರಿಗೆ 7-9 ಗಂಟೆ, 65 ಮತ್ತು ನಂತರ 7-8 ಗಂಟೆಗಳ ನಿದ್ರೆ ಅವಶ್ಯಕತೆ ಇದೆ.
4. ಮಹಿಳೆಯರಲ್ಲಿ ಮಾತ್ರ ಮೂಳೆ ಸವೆಯುವ ಕಾಯಿಲೆ ಆಸ್ಟಿಯೊಪೊರೋಸಿಸ್ ಕಾಣಿಸಿಕೊಳ್ಳುತ್ತದೆ: ಆಸ್ಟಿಯೊಪೊರೋಸಿಸ್ ಎಂದರೆ ಇದರಲ್ಲಿ ಮೂಳೆಗಳು ನಿಧಾನವಾಗಿ ಶಕ್ತಿ ಕಳೆದುಕೊಳ್ಳುತ್ತಾ ಬರುತ್ತವೆ. ಕೆಲವರು ಇದು ಮಹಿಳೆಯರಲ್ಲಿ ಮಾತ್ರ ಕಂಡು ಬರುತ್ತದೆ ಎಂದು ತಿಳಿದಿದ್ದಾರೆ. ಇದು ತಪ್ಪು ಕಲ್ಪನೆ. ಇದು ಯಾರಲ್ಲಿಯೂ ಕಂಡು ಬರಬಹುದು. ಯಾವ ವಯಸ್ಸಿ ನವರಲ್ಲೂ ಕಂಡು ಬರಬಹುದು. ಆದರೆ ವಯಸ್ಸಾದವರಲ್ಲಿ, ಮಹಿಳೆಯರಲ್ಲಿ ಹಾಗೂ ಬಿಳಿ ವ್ಯಕ್ತಿಗಳಲ್ಲಿ ಸ್ವಲ್ಪ ಜಾಸ್ತಿ ಕಂಡು ಬರುತ್ತದೆ. ಅಂತಾರಾಷ್ಟ್ರೀಯ ಆಸ್ಟಿಯೊಪೊರೋಸಿಸ್ ಸಂಸ್ಥೆಯ ಪ್ರಕಾರ ಜಗತ್ತಿ ನಾದ್ಯಂತ 50 ವರ್ಷದ ನಂತರ
ಮಹಿಳೆಯರಲ್ಲಿ 3ರಲ್ಲಿ ಒಬ್ಬರಲ್ಲಿ ಕಂಡು ಬರುತ್ತದೆ. ಹಾಗೆಯೇ 5ರಲ್ಲಿ ಒಬ್ಬ ಪುರುಷರಲ್ಲಿ ಆಸ್ಟಿಯೊಪೊರೋಸಿಸ್ ಕಾಣಿಸಿ ಕೊಳ್ಳುವುದೇ ಅಲ್ಲದೆ ಅವರಲ್ಲಿ ಮೂಳೆ ಮುರಿತವೂ ಕಂಡು ಬರುತ್ತದೆ. ಇದನ್ನು ಕಡಿಮೆ ಮಾಡಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು ಎನ್ನುತ್ತಾರೆ ತಜ್ಞರು.
5. ವಯಸ್ಸಾದಂತೆ ಮೆದುಳು ನಿಧಾನವಾಗಿ ಬಿಡುತ್ತದೆ: ಅ) ವಯಸ್ಸಾದ ನಂತರ ಚಿತ್ತವೈಕಲ್ಯ ಬಂದೇ ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಯಸ್ಸಾದಂತೆ ಚಿತ್ತವೈಕಲ್ಯ ಬರುವ ಸಾಧ್ಯತೆ ಜಾಸ್ತಿಯಾಗುತ್ತಾ ಹೋಗುತ್ತದೆ. ಆದರೆ ಎಲ್ಲರಲ್ಲಿಯೂ ಇದು ಕಾಣಿಸಿಕೊಳ್ಳುವುದಿಲ್ಲ. ಜಗತ್ತಿನಲ್ಲಿ 60 ವರ್ಷದ ನಂತರದವರಲ್ಲಿ ಶೇ.5-8ರಷ್ಟು ಜನರಲ್ಲಿ ಚಿತ್ತವೈಕಲ್ಯವಿದೆ. ಅದರ ಅರ್ಥ ಈ ವಯಸ್ಸಿನ ಜನರಲ್ಲಿ ಶೇ.92-95ರಷ್ಟು ಜನರಲ್ಲಿ ಈ ಸಮಸ್ಯೆ ಇಲ್ಲ ಅಂತಾಯಿತಲ್ಲ.
ಬ) ವಯಸ್ಸಾದವರಲ್ಲಿ ಗ್ರಹಣ ಶಕ್ತಿ ಕಡಿಮೆ ಆಗುವುದರಿಂದ ಚಿತ್ತವೈಕಲ್ಯ ಬರುತ್ತದೆ. ಹೆಚ್ಚಿನವರು ತಿಳಿದುಕೊಂಡಂತೆ ಗ್ರಹಣ ಶಕ್ತಿ ಕಡಿಮೆಯಾದ ತಕ್ಷಣ ಚಿತ್ತವೈಕಲ್ಯ ಬರುವುದಿಲ್ಲ. ಚಿತ್ತವೈಕಲ್ಯ ಬರುವವರಲ್ಲಿ ಗ್ರಹಣ ಶಕ್ತಿ ಕಡಿಮೆಯಾಗುತ್ತಾ ಬರುವುದು ಹೌದಾದರೂ ಹಾಗೆಂದು ಗ್ರಹಣ ಶಕ್ತಿ ಕಡಿಮೆ ಆದವರಲ್ಲಿ ಎಲ್ಲರಲ್ಲೂ ಚಿತ್ತ ವೈಕಲ್ಯ ಕಾಣಿಸಿಕೊಳ್ಳುವುದಿಲ್ಲ. 71 ವಯಸ್ಸಿಗಿಂತ
ಜಾಸ್ತಿಯಾದವರಲ್ಲಿ ಶೇ.22ರಷ್ಟು ಜನರಲ್ಲಿ ಮೆದುಳಿನ ಗ್ರಹಣ ಶಕ್ತಿ ಕಡಿಮೆಯಾಗುತ್ತದೆ. ಇದರಲ್ಲಿ ಶೇ.11-20ರಷ್ಟು ಜನರು ಚಿತ್ತವೈಕಲ್ಯಕ್ಕೆ ಒಳಗಾಗುತ್ತಾರೆ.
ಕ) ಗ್ರಹಣ ಶಕ್ತಿ ಕುಂದುವುದು ಅನಿವಾರ್ಯ: ಮೇಲಿನ ಎಲ್ಲಾ ಅಂಕಿ ಸಂಖ್ಯೆಗಳು ಹೇಳುವಂತೆ ವಯಸ್ಸಾದಂತೆ ಗ್ರಹಣ ಶಕ್ತಿ ಕುಂದುವುದು ಖಂಡಿತಾ ಅನಿವಾರ್ಯವಲ್ಲ. ಈ ಸಾಧ್ಯತೆಯನ್ನು ಖಂಡಿತಾ ಕಡಿಮೆ ಮಾಡಬಹುದು. 2015ರಲ್ಲಿ ಆಲ್ಜೀಮರ್ಸ್
ಅಸೋಸಿಯೇಷನ್ ಚಿತ್ತವೈಕಲ್ಯ ಮತ್ತು ಗ್ರಹಣ ಶಕ್ತಿ ಕುಂದುವ ಬಗ್ಗೆ ಪುರಾವೆಯನ್ನು ಅಧ್ಯಯನ ಮಾಡಿದರು. ಅವರು ಕೊಟ್ಟ ವರದಿಯಲ್ಲಿ ನಿಯಮಿತವಾದ ದೈಹಿಕ ಚಟುವಟಿಕೆ ಇಟ್ಟುಕೊಳ್ಳುವುದರಿಂದ ಮತ್ತು ಹಲವು ರಿಸ್ಕ್ ಅಂಶಗಳನ್ನು ಅಂಕೆಯಲ್ಲಿಟ್ಟರೆ ಗ್ರಹಣ ಶಕ್ತಿ ಕುಂಠಿತಗೊಳ್ಳುವುದನ್ನು ತಡೆಯಬಹುದು. ಎಂದಿತ್ತು. ಆ ರಿಸ್ಕ್ ಅಂಶಗಳೆಂದರೆ ಡಯಾಬಿಟಿಸ್, ಸ್ಥೂಲಕಾಯ, ಧೂಮಪಾನ, ಏರು ರಕ್ತದೊತ್ತಡ – ಇವುಗಳು.
6. ಈಗ ಧೂಮಪಾನ ಬಿಡುವುದರಿಂದ ಪ್ರಯೋಜನವಿಲ್ಲ: ಧೂಮಪಾನದಲ್ಲಿ ಬಹಳ ವರ್ಷಗಳಿಂದ ತೊಡಗಿ ಕೊಂಡವರು ಇನ್ನು ತಾವು ಧೂಮಪಾನ ತ್ಯಜಿಸಿದರೆ ಪ್ರಯೋಜನವಿಲ್ಲ ಎಂಬ ಭಾವನೆ ಹೊಂದಿದ್ದಾರೆ. ಇದು ತಪ್ಪು ಭಾವನೆ. ಎಷ್ಟು ವರ್ಷ ಗಳಿಂದ ಸಿಗರೇಟ್ ಸೇದುತ್ತಿದ್ದರೂ ಅದನ್ನು ತ್ಯಜಿಸಿದ ನಂತರ ಆರೋಗ್ಯ ಬಹಳ ಸುಧಾರಿಸುತ್ತದೆ. ಕೆಲವು ಪ್ರಯೋಜನಗಳು ತಕ್ಷಣ ಅರಿವಿಗೆ ಬರುತ್ತವೆ, ಮತ್ತೆ ಕೆಲವು ಪ್ರಯೋಜನಗಳು ಬಹಳ ಕಾಲದ ನಂತರ ಗೊತ್ತಾಗುವ ಪ್ರಯೋಜನಗಳು. ಹಾಗಾಗಿ ಯಾವ ಹಂತದಲ್ಲಿಯಾದರೂ ಧೂಮಪಾನ ತ್ಯಜಿಸುವುದು ಒಳ್ಳೆಯದು ಎಂದು ತಜ್ಞರ ಅಭಿಪ್ರಾಯ.
7. ವಯಸ್ಸಾದ ಹಾಗೆ ಲೈಂಗಿಕ ಕ್ರಿಯೆ ಸಾಧ್ಯವೇ ಇಲ್ಲ: ಹೆಚ್ಚಿನವರು ವಯಸ್ಸಾದ ಹಾಗೆ ಲೈಂಗಿಕ ಕ್ರಿಯೆ ಸಾಧ್ಯವೇ ಇಲ್ಲ, ಲೈಂಗಿಕ ಅಂಗಗಳು ನಿಷ್ಕ್ರಿಯವಾಗುತ್ತವೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಇದು ತುಂಬಾ ತಪ್ಪು ಕಲ್ಪನೆ. ಹೌದು ಕೆಲವರಲ್ಲಿ ವಯಸ್ಸಾದ ಮೇಲೆ ನಿಮಿರು ದೌರ್ಬಲ್ಯ ಮತ್ತು ಸ್ತ್ರೀ ಜನನಾಂಗದ ತೇವಾಂಶ ಕಡಿಮೆಯಾಗುವುದು ನಿಜವಾದರೂ ಅವುಗಳನ್ನು ಸೂಕ್ತವಾಗಿ ಪರಿಹರಿಸಬಹುದು. ಇತ್ತೀಚೆಗೆ ಬಳಕೆಗೆ ಬಂದಿರುವ ಮಾತ್ರೆ ಮತ್ತು ತೇವಾಂಶ ಹೆಚ್ಚಿಸುವ ಕ್ರೀಂ ಗಳು ತುಂಬಾ ಜನರಿಗೆ
ಪ್ರಯೋಜನಕ್ಕೆ ಬಂದಿವೆ. ಅಂತಾರಾಷ್ಟ್ರೀಯ ಜರ್ನಲ್ ನಲ್ಲಿ ಪ್ರಕಟವಾದ ಲೇಖನದ ಪ್ರಕಾರ 60 ವರ್ಷದ ನಂತರ 10 ಜನರಲ್ಲಿ ಒಬ್ಬರಲ್ಲಿ ಮಾತ್ರ ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಅಂದರೆ 9 ಜನರಲ್ಲಿ ಇಲ್ಲ. ಲೈಂಗಿಕ ಕ್ರಿಯೆ ಮೊದಲಿಗಿಂತ ಸ್ವಲ್ಪ ನಿಧಾನವಾಗಬಹುದು, ಸ್ವಲ್ಪ ಕಷ್ಟವೂ ಅನಿಸಬಹುದು. ಇದನ್ನು ಸೂಕ್ತವಾಗಿ ಮಾರ್ಪಡಿಸಿಕೊಳ್ಳಬೇಕು. ಕೆಲವರಲ್ಲಿ ವಯಸ್ಸಾದ ಹಾಗೆ ಪುರುಷ ಜನನಾಂಗವು ಸ್ಪ ರ್ಷದ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತದೆ. ಹಾಗಾದಾಗ ಜನನಾಂಗದ ನಿಮಿರುವಿಕೆಯನ್ನು
ದೀರ್ಘಗೊಳಿಸಬಹುದು. ಇದು ಅಂತಹವರಿಗೆ ಧನಾತ್ಮಕವಾಗಿ ಸಹಾಯ ಮಾಡುತ್ತದೆ. ಹೌದು ಕೆಲವರಲ್ಲಿ ವಯಸ್ಸಾದ ಹಾಗೆ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಾ ಬರುತ್ತದೆ. ಇದು ಎಲ್ಲರಲ್ಲಿಯೂ ಆಗಬೇಕೆಂದೇನೂ ಇಲ್ಲ. ಕೊನೆಯದಾಗಿ ಹೇಳುವುದಾದರೆ ವಯಸ್ಸಾಗುವ ಬಗೆಗಿನ ತಪ್ಪು ಕಲ್ಪನೆಗಳ ಬಗ್ಗೆ ದೃಷ್ಟಿ ಹಾಯಿಸಿದರೆ ಹೆಚ್ಚಿನವರು ಇದು ತಮಗೆ ಅನಿವಾರ್ಯ ಎಂಬ ಭಾವನೆ ಯನ್ನು ಆಳವಾಗಿ ಮನದಲ್ಲಿ ಇಟ್ಟುಕೊಂಡಿರುವುದು. ತಮಗೆ ವಯಸ್ಸಾಯಿತು, ಇನ್ನೇನು ತಾನು ಮಣ್ಣು ಸೇರುತ್ತೇನೆ, ಹಾಗಾಗಿ ತನ್ನ ಜೀವನ ಅಸಹನೀಯ, ಬೋರಿಂಗ್, ಹವ್ಯಾಸಗಳನ್ನು ಮರೆತು ಬಿಡುವುದು, ನೋವಿನಿಂದ ತುಂಬಿದೆ ಎಂಬ ಭಾವನೆಯನ್ನು ಹೊಂದಿರುವುದು. ಹೌದು ವಯಸ್ಸಾದ ಮೇಲೆ ಆರೋಗ್ಯ ನಿಧಾನ ಕುಂಠಿತ ಗೊಳ್ಳುತ್ತಾ ಬರುತ್ತದಾದರೂ ಎಲ್ಲರಿಗೂ ಅದು ಸಾರ್ವತ್ರಿಕ ಸತ್ಯ ಎಂದು ಹೇಳಲು ಬರುವುದಿಲ್ಲ.
ಹಾಗಾಗಿ ಈ ವಯಸ್ಸಾಗುವ ಬಗ್ಗೆ ಒಂದು ಧನಾತ್ಮಕ ಮನಸ್ಥಿತಿ ಇಟ್ಟುಕೊಂಡು ಹಾಗೆಯೇ ಅದಕ್ಕೆ ತಕ್ಕುದಾಗಿ ದೈಹಿಕ ಸ್ಥಿತಿಯನ್ನು ಕಾಪಾಡಿಕೊಂಡು ಬರಬೇಕು. ಹಾಗೆಯೇ ಮತ್ತೊಂದು ವಿಚಾರ ಎಂದರೆ ವಯಸ್ಸಾದ ಮೇಲೆ ಹೊಸ ವಿಚಾರ, ಹವ್ಯಾಸಗಳನ್ನು ಕಲಿಯಲು ಸಾಧ್ಯವಿಲ್ಲ ಎಂಬ ಕಲ್ಪನೆ ಹಲವರಲ್ಲಿ ಇದೆ. ಉದಾಹರಣೆಗೆ ಕಂಪ್ಯೂಟರ್ ಮತ್ತು ಇಂಟರ್ನೆಟ್ನಂಥ ಇತ್ತೀಚಿನ
ವಿದ್ಯಮಾನಗಳನ್ನು ಕಲಿಯಲು ಸಾಧ್ಯವಿಲ್ಲ ಎಂದು ಹಲವರು ತಿಳಿದಿದ್ದಾರೆ. ಇದು ಶುದ್ಧ ತಪ್ಪು ಕಲ್ಪನೆ. ಈಗ ತೀರಾ ಅಗತ್ಯ ವಿರುವ ಇವುಗಳನ್ನೆಲ್ಲಾ ಕಲಿಯುವುದರಿಂದ ಮನಸ್ಸು ಹೊಸ ವಿಚಾರದಲ್ಲಿ ತೊಡಗಿಕೊಳ್ಳುತ್ತದೆ. ಹೊಸ ಉತ್ಸಾಹವೂ ಹುಟ್ಟು ತ್ತದೆ.