Saturday, 14th December 2024

ಜಗತ್ತಿಗೇ ಮಾದರಿಯಾಗಲಿದೆ ಭಾರತೀಯ ಜ್ಞಾನ ವ್ಯವಸ್ಥೆ

ಜ್ಞಾನಗಂಗೆ

ಶಾಂತಿಶ್ರೀ ಧುಲಿಪುಡಿ ಪಂಡಿತ್

ಶಿಕ್ಷಣದಲ್ಲಿ ಸರಕಾರದ ಪಾತ್ರ ಬಹುಮುಖ್ಯ. ಏಕೆಂದರೆ ಈ ವ್ಯವಸ್ಥೆಯಲ್ಲಿರುವ ಸಾಮಾಜಿಕ, ಆರ್ಥಿಕ, ಪ್ರಾದೇಶಿಕ ಅಸಮ ತೋಲನದ ನಿವಾರಣೆ ಸರಕಾರಿ ಶಿಕ್ಷಣ ಸಂಸ್ಥೆಗಳಿಂದ ಮಾತ್ರ ಸಾಧ್ಯ. ಈ ವಿಷಯದಲ್ಲಿ ಖಾಸಗಿ ಸಂಸ್ಥೆಗಳು ಸರಕಾರಿ ಸಂಸ್ಥೆಗಳ ಜಾಗವನ್ನು ತುಂಬಲಾಗದು. ಭಾರತದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅವುಗಳದೇ ಆದ ಸ್ವಾಯತ್ತತೆಯಿದೆ.

ಜಗತ್ತು ಈಗ ಜ್ಞಾನಾಧಾರಿತ ಸಾಮಾಜಿಕ ವ್ಯವಸ್ಥೆಯಾಗಿ ರೂಪುಗೊಳ್ಳುತ್ತಿದೆ. ಇಲ್ಲಿ ಯಾವುದೇ ದೇಶವು ವಿಶ್ವಗುರು ಆಗಬೇಕೆಂದರೆ ಅಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಸುಧಾರಣೆಯಾಗಬೇಕು. ಆ ನಿಟ್ಟಿನಲ್ಲಿ ೨೦೨೦ರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಬಹಳ ಮಹತ್ವದ್ದಾಗಿದೆ. ಅದೊಂದು ವಿಶಿಷ್ಟ ಶೈಕ್ಷಣಿಕ ಚೌಕಟ್ಟು. ಏಕೆಂದರೆ, ಜಗತ್ತು ಹೇಗೆ ಬದಲಾಗುತ್ತದೆಯೋ ಅದಕ್ಕೆ ತಕ್ಕಂತೆ ರೂಪಾಂತರಗೊಳ್ಳುವ ಬಹಳ ವಿಶಿಷ್ಟವಾದ ವ್ಯವಸ್ಥೆ ಅದರಲ್ಲಿದೆ.

ಯಾವುದೇ ವಿಷಯಕ್ಕೆ ಸಂಬಂಧಿಸಿದ ಸ್ಪೆಷಲೈಸೇಷನ್ ಕೋರ್ಸುಗಳನ್ನು ಎನ್‌ಇಪಿ ಸಮಗ್ರವಾಗಿ ನೋಡುತ್ತದೆ. ಬೇರೆ ಬೇರೆ ಜ್ಞಾನಶಾಖೆಗಳ ನಡುವೆ ಅಂತರ್‌ಸಂಬಂಧ ಹೊಂದಿರುವಂಥ ಹಾಗೂ ಬಹುಶಿಸ್ತೀಯ ಕೋರ್ಸುಗಳು ಇದರಲ್ಲಿ ಸೇರಿವೆ. ಅವು
ವಿಜ್ಞಾನ, ತಂತ್ರಜ್ಞಾನ, ಸಾಮಾಜಿಕ ವಿಜ್ಞಾನ, ಮಾನವಿಕ ಶಾಸ್ತ್ರಗಳು ಹಾಗೂ ಭಾಷಾ ವಿಷಯಗಳ ನಡುವೆ ಸಮತೋಲನ ತರುವ ರೀತಿಯಲ್ಲಿ ವಿನ್ಯಾಸಗೊಂಡಿವೆ.

ಸ್ಥಳೀಯ ಹಾಗೂ ಪ್ರಾದೇಶಿಕ ಶಿಕ್ಷಣದಿಂದ ಹಿಡಿದು ರಾಷ್ಟ್ರೀಯ ಹಾಗೂ ಅಂತಾ ರಾಷ್ಟ್ರೀಯ ಶೈಕ್ಷಣಿಕ ಚಟುವಟಿಕೆ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಚಲಿತದಲ್ಲಿರುವ ಶೈಕ್ಷಣಿಕ ವ್ಯವಸ್ಥೆಯ ನಡುವೆ ಅವು ಸಂಬಂಧವೇರ್ಪಡುವಂತೆ ಮಾಡಲಿವೆ. ಶಿಕ್ಷಣ ದಲ್ಲಿ ಯಾವಾಗಲೂ ಸರಕಾರದ ಪಾತ್ರ ಬಹಳ ಮುಖ್ಯ. ಏಕೆಂದರೆ ಶಿಕ್ಷಣ ವ್ಯವಸ್ಥೆಯಲ್ಲಿರುವ ಸಾಮಾಜಿಕ, ಆರ್ಥಿಕ ಹಾಗೂ ಪ್ರಾದೇಶಿಕ ಅಸಮತೋಲನದ ನಿವಾರಣೆ ಸರಕಾರಿ ಶಿಕ್ಷಣ ಸಂಸ್ಥೆಗಳಿಂದ ಮಾತ್ರ ಸಾಧ್ಯ. ಶಿಕ್ಷಣದ ವಿಷಯದಲ್ಲಿ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಯಾವತ್ತೂ ಸರಕಾರಿ ಸಂಸ್ಥೆಗಳ ಜಾಗವನ್ನು ತುಂಬಲು ಸಾಧ್ಯವಿಲ್ಲ.

ಭಾರತದಂಥ ಪ್ರಜಾಪ್ರಭುತ್ವದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅವುಗಳದೇ ಆದ ಸ್ವಾಯತ್ತತೆಯಿದೆ. ಹೀಗಾಗಿ ಶಿಕ್ಷಣ ನೀಡುವ ಹಾಗೂ ಸೃಜನಶೀಲತೆಯನ್ನು ಪೋಷಿಸುವ ಗುರುತರವಾದ ಮತ್ತು ಅನಿವಾರ್ಯವಾದ ಜವಾಬ್ದಾರಿ ನಮ್ಮ ಸರಕಾರಿ ಕೃಪಾ ಪೋಷಿತ ಶಿಕ್ಷಣ ವ್ಯವಸ್ಥೆಯ ಹೆಗಲಿಗೆ ಜೋತುಬಿದ್ದಿದೆ. ಇಂಥ ಚೌಕಟ್ಟಿನೊಳಗೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಂಥ (ಜೆಎನ್‌ಯು) ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗುತ್ತದೆ. ಅಷ್ಟೇ ಅಲ್ಲ, ನಮ್ಮ ನಿರೀಕ್ಷೆಗೆ ತಕ್ಕಂತೆ ದೇಶದ ಶಿಕ್ಷಣ ವ್ಯವಸ್ಥೆ ಬೆಳೆಯಬೇಕು ಮತ್ತು ಸುಧಾರಣೆಯಾಗಬೇಕು ಅಂದರೆ ಜಿಡಿಪಿಯ ಶೇ.೧೦ರಷ್ಟು ಹಣವನ್ನಾದರೂ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸುವ ಅಗತ್ಯವನ್ನು ಇದು ಎತ್ತಿ ತೋರಿಸುತ್ತದೆ.

ಜೆಎನ್‌ಯುನಂಥ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ದೇಶದಲ್ಲಿ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ, ಸೃಜನಶೀಲ ಆವಿಷ್ಕಾರಗಳಿಗೆ ಒತ್ತು ನೀಡುವ ಹಾಗೂ ಮುಕ್ತ, ವೈವಿಧ್ಯಮಯ, ಎಲ್ಲರನ್ನೂ ಒಳಗೊಳ್ಳುವ, ಸುಸ್ಥಿರವಾದ, ಆತ್ಮಗೌರವವುಳ್ಳ ಹಾಗೂ ಸ್ಪರ್ಧಾ ತ್ಮಕ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡುವ ಬಹುದೊಡ್ಡ ಜವಾಬ್ದಾರಿಯಿದೆ. ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಜೆಎನ್‌ಯು ತನ್ನ ಹುಟ್ಟಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ರಾಜಕೀಯದಿಂದ ಹಿಡಿದು ಆಡಳಿತ ಹಾಗೂ ಸಶಸ ಪಡೆಗಳವರೆಗೆ ವಿವಿಧ ಕ್ಷೇತ್ರಗಳಿಗೆ ದೊಡ್ಡ ದೊಡ್ಡ ನಾಯಕರನ್ನು ಜೆಎನ್‌ಯು ಕೊಡುಗೆಯಾಗಿ ನೀಡಿದೆ. ನೊಬೆಲ್ ಪ್ರಶಸ್ತಿ ವಿಜೇತರನ್ನೂ ಇದು ಹುಟ್ಟುಹಾಕಿದೆ.

ಅದಕ್ಕಿಂತ ಹೆಚ್ಚಾಗಿ, ಎಲ್ಲರನ್ನೂ ಒಳಗೊಳ್ಳುವ, ಪ್ರಜಾಸತ್ತಾತ್ಮಕವಾದ ಹಾಗೂ ಸೃಜನಶೀಲವಾದ ಸಮಾಜವನ್ನು ನಿರ್ಮಾಣ
ಮಾಡಲು ಸಾಕಷ್ಟು ಶ್ರಮಿಸಿದೆ. ತನ್ಮೂಲಕ ಸಾರ್ವಜನಿಕ ಚರ್ಚೆ ಹಾಗೂ ನೀತಿ ನಿರೂಪಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಜೆಎನ್‌ಯುದ ಇತಿಹಾಸವೂ ಸೇರಿದಂತೆ ಈ ಸಂಸ್ಥೆಗೆ ಸಂಬಂಧಿಸಿದ ಸಾಕಷ್ಟು ವಿಚಾರಗಳಲ್ಲಿ ನಮಗೆ ಹೆಮ್ಮೆಯಿದೆ. ಅದರ ಜತೆಗೇ, ಈಗ ಎದುರಾಗಿರುವ ಕೆಲವು ಸವಾಲುಗಳನ್ನೂ ನಾವು ಸಮರ್ಥವಾಗಿ ಎದುರಿಸಬೇಕಿದೆ.

ಮೊದಲ ಸವಾಲೆಂದರೆ, ಜೆಎನ್‌ಯು ಸೇರಿದಂತೆ ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳೂ ಇಂದು ತಮ್ಮ ಉತ್ಪಾದಕತೆ ಹಾಗೂ
ಫಲಿತಾಂಶವನ್ನು ವೃದ್ಧಿಸಿಕೊಳ್ಳಲು ಯತ್ನಿಸಬೇಕಾಗಿ ಬಂದಿದೆ. ನಂತರದ ಸವಾಲುಗಳೆಲ್ಲ ಈ ಎರಡು ಅಗತ್ಯಗಳ ಸುತ್ತಲೇ ಗಿರಕಿ ಹೊಡೆಯುತ್ತವೆ. ಜೆಎನ್‌ಯುದ ಮೊದಲ ಆದ್ಯತೆಯೆಂದರೆ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದು. ಅದಕ್ಕಾಗಿ ಸಮಾನತೆ, ವೈವಿಧ್ಯ, ಸ್ಪರ್ಧಾತ್ಮಕತೆಯನ್ನು ಪ್ರತಿಪಾದಿಸುವ ಹಾಗೂ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುವಂಥ ಪ್ರತಿಭೆಗಳನ್ನು ಹುಟ್ಟುಹಾಕಲು ಪ್ರಯತ್ನಿಸುವುದು.

ಜೆಎನ್‌ಯು ಈಗಾಗಲೇ ಅಂಥ ಜಾಗತಿಕ ಮಟ್ಟದ ಪ್ರತಿಭೆಗಳನ್ನು ರೂಪಿಸುತ್ತಿದೆ. ಅವರನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಮುನ್ನಡೆಸುವ ಬಗ್ಗೆ ಈಗ ಯೋಚಿಸಬೇಕಿದೆ. ಇದರಲ್ಲಿ ವಿಫಲವಾದರೆ ಒಂದು ವಿಶ್ವವಿದ್ಯಾಲಯವಾಗಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಯಾಗಿ ಜೆಎನ್‌ಯು ತನ್ನ ಪಾತ್ರವನ್ನು ಸರಿಯಾಗಿ ನಿಭಾಯಿಸಿಲ್ಲ ಎನ್ನಿಸಿಕೊಳ್ಳಬೇಕಾಗುತ್ತದೆ. ಎರಡನೆಯ ಪ್ರಮುಖ ಸವಾಲೆಂದರೆ, ಸಮಾಜದಲ್ಲಿ ಕಡೆಗಣಿಸಲ್ಪಟ್ಟ ಹಾಗೂ ಸರಿಯಾದ ಪ್ರಾತಿನಿಧ್ಯ ಹೊಂದಿಲ್ಲದ ಜನವರ್ಗದ ಧ್ವನಿಯಾಗುವುದು. ಶೋಷಿತ ಹಾಗೂ ಸೌಲಭ್ಯ ವಂಚಿತ ಮಹಿಳೆಯರು ಹಾಗೂ ಜನಸಾಮಾನ್ಯರ ಹಿತ ಕಾಪಾಡಲು ಈಗಾಗಲೇ ಜೆಎನ್‌ಯು ಸಾಕಷ್ಟು ಕೆಲಸ ಮಾಡುತ್ತಿದೆ.

ಅದರ ಮೂಲಕ ಕೇವಲ ‘ನಾರಿಶಕ್ತಿ’ (ಮಹಿಳೆಯರ ನೇತೃತ್ವದಲ್ಲಿ ಅಭಿವೃದ್ಧಿ) ಎಂಬ ಪರಿಕಲ್ಪನೆಗೆ ನೀರೆರೆದು ಪೋಷಿಸುತ್ತಿರುವು ದಷ್ಟೇ ಅಲ್ಲ, ಅದನ್ನು ಮಾಡುವುದು ಹೇಗೆ ಎಂಬುದನ್ನು ಬೇರೆಯವರಿಗೂ ತೋರಿಸಿಕೊಡುತ್ತಿದೆ. ಕಳೆದ ಒಂದೂವರೆ ವರ್ಷ ದಲ್ಲಿ ಜೆಎನ್‌ಯುದ ಬೇರೆ ಬೇರೆ ವಿಭಾಗಗಳಿಗೆ ಮುಖ್ಯಸ್ಥರು ಹಾಗೂ ಡೀನ್‌ಗಳನ್ನಾಗಿ ಸಾಕಷ್ಟು ಮಹಿಳೆಯರನ್ನು ನೇಮಕ ಮಾಡಲಾಗಿದೆ. ಇದೇ ಅವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ಮಹಿಳಾ ವಿದ್ಯಾರ್ಥಿಗಳ ಪ್ರವೇಶಾತಿ ಕೂಡ ಹೆಚ್ಚಾಗಿದೆ. ಇದೊಂದು ಐತಿಹಾಸಿಕ ಬೆಳವಣಿಗೆ. ಸಮಾನತೆ ಹಾಗೂ ಮಹಿಳಾ ಸಬಲೀಕರಣಕ್ಕೆ ಜೆಎನ್‌ಯು ಹೊಂದಿರುವ ಅಸೀಮ ಬದ್ಧತೆಯನ್ನು ಇದು ತೋರಿಸುತ್ತದೆ. ಮೂರನೆಯ ಸವಾಲು ಮೂಲಸೌಕರ್ಯಗಳ ವಿಷಯದಲ್ಲಿ ಇರುವ ಇತಿಮಿತಿಗಳಿಗೆ ಸಂಬಂಧಿಸಿದೆ.

ಜಗತ್ತಿನಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹಣಕಾಸು ಒದಗಿಸುವುದು ಇವತ್ತಿಗೂ ದೊಡ್ಡ ಸಮಸ್ಯೆಯೇ ಆಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಲಭಿಸುವ ಆರ್ಥಿಕ ನೆರವಿನಲ್ಲಿ ಯಾವಾಗಲೂ ಏರಿಳಿತವಾಗುತ್ತಿರುತ್ತದೆ. ಜೆಎನ್‌ಯುಗೂ ಈ ಸಮಸ್ಯೆ ಇದೆ. ಆದರೆ ತಕ್ಕಮಟ್ಟಿಗೆ ಈ ಸಂಸ್ಥೆಯು ತಂತ್ರಜ್ಞಾನ ಆಧಾರಿತ ಹಾಗೂ ಪರ್ಯಾಯ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಮಾರ್ಗವನ್ನು ಕಂಡು ಕೊಂಡಿದೆ. ವಿಶ್ವವಿದ್ಯಾಲಯದ ಆವರಣವನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸುವ ಮೂಲಕ ಜೆಎನ್‌ಯು ನಮ್ಮ
ದೇಶದಲ್ಲೇ ಸಂಪೂರ್ಣ ೫ಜಿ ಸಾಮರ್ಥ್ಯದ ಮೊದಲ ಕ್ಯಾಂಪಸ್ ಎಂಬ ಹೆಗ್ಗಳಿಕೆ ಪಡೆದುಕೊಳ್ಳುವ ಹೊಸ್ತಿಲಿನಲ್ಲಿದೆ.

ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವವನ್ನು ವಿಶ್ವವಿದ್ಯಾಲಯ ಬಳಸಿಕೊಳ್ಳುತ್ತಿದೆ.
ಸ್ಪರ್ಧಾತ್ಮಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ಹಾಗೂ ನಮ್ಮನ್ನು ನಾವೇ ಹೊಸ ಎತ್ತರಕ್ಕೆ ಏರಿಸಿಕೊಳ್ಳಲು ಈ ರೂಪಾಂತ ರವು ನೆರವು ನೀಡುತ್ತಿದೆ. ಹೊಸ ಹೊಸ ದಾರಿಗಳನ್ನು ಸಮರ್ಥವಾಗಿ ಹುಡುಕಿಕೊಳ್ಳುವ ಈ ಗುಣವು ನಮ್ಮನ್ನು ಸಮಕಾಲೀನ ಸಮಸ್ಯೆಗಳನ್ನು ಎದುರಿಸಲು ಸಶಕ್ತವಾಗಿ ಮಾಡುವುದಷ್ಟೇ ಅಲ್ಲ, ಮುಂದೆ ಎದುರಾಗುವ ಸವಾಲುಗಳನ್ನು ಎದುರಿಸುವುದಕ್ಕೂ ಸಜ್ಜುಗೊಳಿಸುತ್ತದೆ.

ನಾಲ್ಕನೆಯ ಸವಾಲೆಂದರೆ ಸಾಂಪ್ರದಾಯಿಕತೆಯನ್ನು ಆಧುನಿಕತೆಯ ಜತೆಗೆ, ಶ್ರೇಷ್ಠತೆಯನ್ನು ಅನುಕಂಪದ ಜತೆಗೆ, ಸಮಾನತೆ ಯನ್ನು ನ್ಯಾಯದ ಜತೆಗೆ, ಒಳಗೊಳ್ಳುವಿಕೆಯನ್ನು ಸಮಗ್ರತೆ ಹಾಗೂ ಸೃಜನಶೀಲತೆಯ ಜತೆಗೆ ಬೆಸೆಯುವುದು. ಭಾರತೀಯ ಜ್ಞಾನ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಮೂಲಕ ಇದನ್ನು ಸಾಧಿಸಲು ಸಾಧ್ಯವಿದೆ. ವಿದ್ಯಾರಣ್ಯ ಇನ್ ಸ್ಟಿಟ್ಯೂಟ್ ಆಫ್ ನಾಲೆಡ್ಜ್ ಆಂಡ್ ಅಡ್ವಾನ್ಸ್‌ಡ್ ಸ್ಟಡೀಸ್ (ವಿಕಾಸ್) ಸಂಸ್ಥೆಯ ಆರಂಭವು ಈ ನಿಟ್ಟಿನಲ್ಲಿ ಜೆಎನ್‌ಯು ಇರಿಸಿರುವ ಮೊದಲ ಹೆಜ್ಜೆ ಯಾಗಿದೆ.

ಭಾರತೀಯ ಭಾಷೆಗಳಿಗೆ ಪ್ರೋತ್ಸಾಹ ನೀಡುವುದೂ ಸೇರಿದಂತೆ ಇದರಡಿ ಸಾಕಷ್ಟು ಉದ್ದೇಶಗಳನ್ನು ಹೊಂದಲಾಗಿದೆ. ಭಾರತೀಯ ಭಾಷೆಗಳು, ಸಂಸ್ಕೃತಿ ಹಾಗೂ ನಾಗರಿಕತೆಗೆ ಸಂಬಂಽಸಿದ ಕಾಲೇಜೊಂದನ್ನು ತೆರೆಯಲು ಜೆಎನ್‌ಯು ಮುಂದಾಗಿದೆ. ಅದರಡಿ ಈಗಾಗಲೇ ತಮಿಳು ಭಾಷೆಯ ಅಧ್ಯಯನಕ್ಕೆ ಜೆಎನ್‌ಯುದಲ್ಲೇ ಒಂದು ಪೀಠ ಸ್ಥಾಪಿಸಲಾಗಿದೆ. ಮುಂದೆ ಅಸ್ಸಾಮಿ, ಒಡಿಯಾ, ಕನ್ನಡ ಹಾಗೂ ಮರಾಠಿ ಭಾಷೆಗಳ ಅಧ್ಯಯನಕ್ಕೂ ಪ್ರತ್ಯೇಕ ಕೇಂದ್ರಗಳನ್ನು ತೆರೆಯಲಾಗುತ್ತದೆ. ದೇಶದಲ್ಲಿ ಈ ಕೆಲಸ
ಮಾಡುತ್ತಿರುವ ಸಂಸ್ಥೆ ಜೆಎನ್‌ಯು ಒಂದೇ ಅಲ್ಲದಿದ್ದರೂ, ಹೊಸ ಶಿಕ್ಷಣ ನೀತಿಯಡಿ ಈ ಪ್ರಯತ್ನಗಳಿಗೆ ನಾಯಕತ್ವವನ್ನು
ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ಮೇಲೆ ಹೇಳಿದ ಸವಾಲುಗಳು ಸುಲಭದ್ದಲ್ಲ. ಆದರೆ ಅವುಗಳನ್ನು ಎದುರಿಸಲು ಸಾಧ್ಯವೇ ಇಲ್ಲ ಎಂದೇನೂ ಇಲ್ಲ. ಈಗಾಗಲೇ ನಮಗೆ ಈ ವಿಷಯದಲ್ಲಿ ಹೊಸ ಆಶಾಕಿರಣವೊಂದು ಲಭಿಸಿದೆ. ಅದೇನೆಂದರೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮಾರ್ಗದರ್ಶಿ ಸೂತ್ರದಲ್ಲಿ ನಮ್ಮ ಚಿಂತನೆಗಳಿಗೆ ಸಾಕಷ್ಟು ಪೂರಕ ಅಂಶಗಳಿವೆ. ಹೊಸ ಶಿಕ್ಷಣ ನೀತಿಯ ವಿಶೇಷ ಏನೆಂದರೆ, ಅದು ಶೈಕ್ಷಣಿಕ ಮೂಲ ಚೌಕಟ್ಟನ್ನು ಮೀರದೆಯೇ ಹೊಸ ಹೊಸ ಬದಲಾವಣೆಗಳನ್ನು ತನ್ನದಾಗಿಸಿಕೊಳ್ಳುವ ಫ್ಲೆಕ್ಸಿಬಿಲಿಟಿಯನ್ನು ಹೊಂದಿದೆ.

ಹೀಗಾಗಿ ೨೦೨೦ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನೇಕ ಅಂಶಗಳನ್ನು ಜೆಎನ್ ಯುದ ೧೫ ಶಿಕ್ಷಣ ಸಂಸ್ಥೆಗಳು, ೧೦ ವಿಶೇಷ ಕೇಂದ್ರಗಳು ಹಾಗೂ ೧೪೦ ನೋಂದಾಯಿತ ರಕ್ಷಣಾ, ಸಂಶೋಧನೆ, ಸಾರಿಗೆ ಹಾಗೂ ಪ್ರವಾಸೋದ್ಯಮ ಕೇಂದ್ರಗಳು ಈಗಾಗಲೇ ಜಾರಿ ಗೊಳಿಸುತ್ತಿವೆ. ಈ ವಿಷಯದಲ್ಲಿ ನಮಗಿರುವ ಬಹುದೊಡ್ಡ ಸವಾಲೆಂದರೆ ಭಾರತದ ಎಲ್ಲಾ ಬೌದ್ಧಿಕ ನಿಲುವುಗಳಿಗೂ ಪ್ರಾಧಾನ್ಯ ನೀಡುವುದು. ಎಲ್ಲಾ ರೀತಿಯ ವಾದಗಳಿಗೂ ನಾವು ಆದ್ಯತೆ ನೀಡಬೇಕು. ಯಾರನ್ನೂ ಕಡೆಗಣಿಸುವಂತಿಲ್ಲ.

ಜಗತ್ತನ್ನು ನೋಡಿ ನಮ್ಮ ಹಾದಿ ಸರಿಯಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳುವುದರ ಬದಲು ಜಗತ್ತೇ ನಮ್ಮನ್ನು ನೋಡಿ ತನ್ನ ದಾರಿಯನ್ನು ಸುಧಾರಣೆ ಮಾಡಿಕೊಳ್ಳುವ ರೀತಿಯಲ್ಲಿ ಶ್ರೇಷ್ಠತೆಯನ್ನು ಸಾಧಿಸುವುದಕ್ಕೆ ನಾವು ಸನ್ನದ್ಧರಾಗು ತ್ತಿದ್ದೇವೆ. ಈ ವಿಷಯದಲ್ಲಿ ನಮ್ಮ ಹಳೆಯ ವಿದ್ಯಾರ್ಥಿಗಳು ಹಾಗೂ ಈ ಹಿಂದಿನ ಸಾಧನೆಗಳ ನೆರವನ್ನು ಪಡೆಯಲು ಚಿಂತನೆ ನಡೆಸಿದ್ದೇವೆ. ಅದರ ಜತೆಜತೆಗೇ ಹೊಸ ಹೊಸ ಕ್ಷೇತ್ರಗಳಿಗೆ ಜೆಎನ್ ಯು ಪ್ರವೇಶ ಪಡೆಯುವಂತೆ ಮತ್ತು ಭಾರತೀಯ ಜ್ಞಾನ
ವ್ಯವಸ್ಥೆಯ ಸುಧಾರಣೆಗೆ ಪ್ರಯತ್ನಗಳು ನಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ.

ಭಾರತೀಯ ನಾಗರಿಕತೆಯು ಮೂಲತಃ ಮಹಿಳಾ ಕೇಂದ್ರಿತ ಹಾಗೂ ಪರಿಸರ ಕೇಂದ್ರಿತ ಬದುಕಿನ ವ್ಯವಸ್ಥೆಯಾಗಿದೆ. ಜೆಎನ್
ಯುದಲ್ಲಿ ನಾವು ಆರು ‘ಡಿ’ಗಳಿಗೆ ಒತ್ತು ನೀಡುತ್ತೇವೆ. ಡೆಮಾಕ್ರೆಸಿ, ಡಿಫರೆನ್ಸ್, ಡಿಬೇಟ್, ಡೈಲಾಗ್, ಡಿಸೆಂಟ್ ಹಾಗೂ  ಡೆವಲಪ್‌ ಮೆಂಟ್ ಈ ವಿಷಯಗಳಲ್ಲಿ ಯಾವತ್ತೂ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಜೆಎನ್‌ಯುದ ಶ್ರೇಷ್ಠ ಮೌಲ್ಯಗಳು ಇವು. ನಮ್ಮಲ್ಲಿ ದೇಶದ ಮೂಲೆಮೂಲೆಗಳಿಂದ ಬಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿದ್ದಾರೆ. ಅವರೆಲ್ಲರೂ ದೇಶದ ಅಭಿವೃದ್ಧಿಗಾಗಿ ಹಾಗೂ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದದ ಸ್ಥಾಪನೆಗಾಗಿ ಕೆಲಸ ಮಾಡುತ್ತಿದ್ದಾರೆ.

ಜೆಎನ್‌ಯುದ ಮೂಲ ಉದ್ದೇಶವೇ ದೇಶದಲ್ಲಿ ನ್ಯಾಯ ಹಾಗೂ ಸಮಾನತೆಯನ್ನು ಪ್ರೋತ್ಸಾಹಿಸುವುದು. ಅದರ ಜತೆಗೆ ಸಂಪ್ರ ದಾಯವನ್ನು ಆಧುನಿಕತೆಯ ಜತೆಗೆ ಬೆಸೆಯುವುದು. ನಿರಂತರತೆ ಹಾಗೂ ಬದಲಾವಣೆಯ ಜತೆಗೆ ಸಾಗುತ್ತಲೇ ವಿಶ್ವಪ್ರಜ್ಞೆ ಯನ್ನು ಪ್ರಾದೇಶಿಕತೆಯೊಂದಿಗೆ ಜೋಡಿಸುವುದು ಹಾಗೂ ಸಿದ್ಧಾಂತ ಮತ್ತು ಆಚರಣೆಗಳ ನಡುವಿನ ಅಂತರವನ್ನು ನಿವಾರಿಸು ವುದು ಕೂಡ ನಮ್ಮ ಉದ್ದೇಶಗಳಾಗಿವೆ. ಈ ಮಹತ್ವಾಕಾಂಕ್ಷಿ ಅಜೆಂಡಾಗಳು ಜೆಎನ್‌ಯುದ ಈವರೆಗಿನ ಪರಂಪರೆಗೆ ಹೊಂದುವು ದಿಲ್ಲ ಎಂದು ಟೀಕಾಕಾರರು ಹೇಳಬಹುದು.

ಆದರೆ ಸಮಕಾಲೀನ ಭಾರತದ ಉನ್ನತ ಧ್ಯೇಯೋದ್ದೇಶಗಳು, ನಿರೀಕ್ಷೆಗಳು, ಬೆಳವಣಿಗೆಯ ದಾರಿ ಹಾಗೂ ಜನರ ಚಿಂತನೆಯ ಗತಿಯನ್ನು ಗಮನಿಸಿದರೆ ನಾವು ಸರಿಯಾದ ಹಾಗೂ ಸಾಧ್ಯವಿರುವ ಮಾರ್ಗದಲ್ಲೇ ಇದ್ದೇವೆ ಎಂಬುದು ಖಚಿತವಾಗುತ್ತದೆ. ನಿಜ, ಈ ಗುರಿಗಳು ಎಷ್ಟು ಸಾಧುವಾಗಿವೆ ಹಾಗೂ ಎಷ್ಟರಮಟ್ಟಿಗೆ ಸಾಧನೆಗೆ ಯೋಗ್ಯವಾಗಿವೆ ಎಂಬುದನ್ನು ಕಾಲವೇ ಹೇಳಬೇಕು. ಅದೇನೇ ಇದ್ದರೂ ನಮ್ಮ ಗುರಿ ಸ್ಪಷ್ಟವಾಗಿದೆ: ಭಾರತದ ಯಶೋಗಾಥೆಗೆ ದೊಡ್ಡ ಕೊಡುಗೆ ನೀಡುವ ಶಿಕ್ಷಣ ಸಂಸ್ಥೆಯಾಗಿ ನಾವು ಬೆಳೆಯಬೇಕು.

ದೇಶವು ಇಂದು ಸೃಜನಶೀಲ ಆವಿಷ್ಕಾರಗಳು, ಎಲ್ಲರನ್ನೂ ಒಳಗೊಳ್ಳುವ ನೀತಿಗಳು, ವೈವಿಧ್ಯತೆ, ಪರಸ್ಪರ ಗೌರವ ಹಾಗೂ
ಜವಾಬ್ದಾರಿಯೊಂದಿಗೆ ಸ್ವಾತಂತ್ರ್ಯದ ಶತಮಾನೋತ್ಸವದತ್ತ ಸಾಗುತ್ತಿರುವ ಹೊತ್ತಿನಲ್ಲಿ ಜೆಎನ್‌ಯು ಕೂಡ ಅದರ ಪಾಲುದಾರ ನಾಗಲು ಬಯಸುವುದು ಸಹಜವೇ ಅಲ್ಲವೇ?

(ಲೇಖಕಿ ಕುಲಪತಿ, ಜವಾಹರಲಾಲ್ ನೆಹರು
ವಿಶ್ವವಿದ್ಯಾಲಯ, ನವದೆಹಲಿ)