ಕರಾಚಿ: ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಲು ಸಜ್ಜಾಗಿದ್ದ ಪಾಕಿಸ್ತಾನ ತಂಡಕ್ಕೆ ಭಾರತ ವೀಸಾ ನೀಡಿದೆ. ಈ ಮೂಲಕ ಈ ವಿಚಾರವಾಗಿದ್ದ ಗೊಂದಲ ಅಂತ್ಯವಾಗಿದೆ.
ಪಾಕಿಸ್ತಾನ ತಂಡಕ್ಕೆ ವೀಸಾ ವಿತರಣೆಯಾಗಿರುವ ವಿಚಾರವನ್ನು ಐಸಿಸಿ ಕೂಡ ಖಚಿತಪಡಿಸಿದೆ ಎನ್ನಲಾಗಿದೆ. ಹೀಗಾಗಿ ಸೆಪ್ಟೆಂಬರ್ 27ರಂದು ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ವೀಸಾ ವಿಚಾರವಾಗಿ ಪತ್ರವನ್ನು ಪಡೆದಿದ್ದು ವೀಸಾ ನೀಡುವುದು ತಡವಾಗಿರುವ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಗಮನಸೆಳೆಯುವ ಪ್ರಯತ್ನ ನಡೆಸಿತ್ತು. ಅಲ್ಲದೆ ವೀಸಾ ನೀಡಲು ತಡವಾಗಿರುವ ಹಿನ್ನೆಲೆಯಲ್ಲಿ ಇದು ತನ್ನ ವಿಶ್ವಕಪ್ ಸಿದ್ಧತೆಗೂ ಹಿನ್ನಡೆಯಾಗಲಿದೆ ಎನ್ನುವ ಕಳವಳವನ್ನು ಕೂಡ ವ್ಯಕ್ತಪಡಿಸಿತ್ತು.
ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಪಾಕಿಸ್ತಾನ ತಂಡ ಸೆಪ್ಟೆಂಬರ್ 25ರಂದು ದುಬೈಗೆ ಪ್ರಯಾಣ ಬೆಳೆಸಿ ಅಲ್ಲಿ ವಿಶ್ವಕಪ್‌ಗೆ ಎರಡು ದಿನಗಳ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗಿಯಾಗಬೇಕಾಗಿತ್ತು. ಸೆಪ್ಟೆಂಬರ್ 27ರಂದು ದುಬೈನಿಂದ ಭಾರತಕ್ಕೆ ಪ್ರಯಾಣ ನಡೆಸಬೇಕಾಗಿತ್ತು.
ಇನ್ನು ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭವಾಗಲಿದ್ದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಆದರೆ ಅಭ್ಯಾಸ ಪಂದ್ಯಗಳು ಸೆಪ್ಟೆಂಬರ್ 9ರಿಂದಲೇ ನಡೆಯಲಿದ್ದು ಟೂರ್ನಿಗೆ ಸಿದ್ಧತೆಯನ್ನು ನಡೆಸಿಕೊಳ್ಳಲಿದೆ.
ಪಾಕಿಸ್ತಾನ ವಿಶ್ವಕಪ್ ತಂಡ ಹೀಗಿದೆ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪ ನಾಯಕ), ಮುಹಮ್ಮದ್ ರಿಜ್ವಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಸೌದ್ ಶಕೀಲ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಮುಹಮ್ಮದ್ ನವಾಜ್, ಮುಹಮ್ಮದ್ ವಾಸಿಮ್ ಜೂನಿಯರ್, ಅಘಾ ಸಲ್ಮಾನ್, ಶಾಹೀನ್ ಶಾ ಅಫ್ರಿದಿ, ಒಸಾಮಾ ಮಿರ್.