ನವದೆಹಲಿ: ರಾಷ್ಟ್ರೀಯ ಭದ್ರತಾ ದಳ (ಎನ್ಐಎ) ಅಧಿಕಾರಿಗಳು ಲಾರೆನ್ಸ್ ಬಾಂಬಿಹಾ ಮತ್ತು ಅರ್ಶ್ ಡಲ್ಲಾ ಗ್ಯಾಂಗ್‌ಗಳ ಸಹಚರರಿಗೆ ಸಂಬಂಧಪಟ್ಟ ಪ್ರದೇಶಗಳಲ್ಲಿ ಬುಧವಾರ ದಾಳಿ ನಡೆಸಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಸುಮಾರು 51 ಸ್ಥಳಗಳಲ್ಲಿ ದಾಳಿ ನಡೆಯು ತ್ತಿದೆ. ಭಯೋತ್ಪಾದಕರು, ದರೋಡೆಕೋರರು ಮತ್ತು ಡ್ರಗ್ ಡೀಲರ್‌ಗಳ ನಡುವಿನ ಸಂಬಂಧ ಕೊನೆಗೊಳಿಸಲು ತನಿಖಾ ದಳ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಮತ್ತು ಭಾರತದ ನಡುವೆ ಉದ್ವಿಗ್ನತೆಯ ಮಧ್ಯೆಯೇ ಎನ್ಐಎ ವಿವಿಧೆಡೆ ರೈಡ್ ಮಾಡಿದೆ. ಎನ್ಐಎ ತಂಡ ಪಂಜಾಬ್ನಲ್ಲಿ ಗರಿಷ್ಠ 31 ಸ್ಥಳಗಳಲ್ಲಿ ಹುಡುಕಾಟ ನಡೆಸುತ್ತಿದೆ.
ರಾಜಸ್ಥಾನದ 13 ಸ್ಥಳಗಳಲ್ಲಿ, ಹರಿಯಾಣದಲ್ಲಿ 4, ಉತ್ತರಾಖಂಡದಲ್ಲಿ 2, ದೆಹಲಿ-ಎನ್ಸಿಆರ್ ಮತ್ತು ಯುಪಿಯಲ್ಲಿ ತಲಾ 1 ಸ್ಥಳಗಳಲ್ಲಿ ದಾಳಿ ನಡೆಸಿದೆ. ವಿದೇಶದಲ್ಲಿ ನೆಲೆಸಿರುವ ಖಲಿಸ್ತಾನಿಗಳು ಮತ್ತು ಇತರರು ಹವಾಲಾ ದಂಧೆಯ ಮೂಲಕ ಭಾರತ ದಲ್ಲಿರುವವರಿಗೆ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ವಿತರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.