Thursday, 12th December 2024

ಶಂಕರ್‌ನಾಗ್‌: ಒಂದು ನೆನಪು

ಸ್ಮರಣೆ

ಪೃಥ್ವಿರಾಜ್

ಶಂಕರ್‌ನಾಗ್ ಎಂದರೆ ನನಗೆ ಮಾತ್ರ ಅಲ್ಲ, ಇಡೀ ಚಲನಚಿತ್ರ ಇಂಡಸ್ಟ್ರಿಗೆ ಒಂದು ರೀತಿಯ ಅಭಿಮಾನ, ಅಕ್ಕರೆ, ನಮ್ಮವನೆಂಬ ಆಪ್ತಭಾವನೆ. ಅವನು ಮಾಡುತ್ತಿದ್ದ ಹೊಸ ಹೊಸ ಪ್ರಯೋಗಗಳು, ನೇರ, ನಡೆ – ನುಡಿ, ನಿರಂತರ ಕ್ರಿಯಾಶೀಲತೆ, ಸೌಹಾರ್ದ ಯುತ ನಡವಳಿಕೆ, ಸದಾ ಸಂತೃಪ್ತಭಾವ, ಎಂತಹ ಸಂದರ್ಭವನ್ನೂ ನಗುನಗುತ್ತಾ ಎದುರಿಸುವ ಸಮಚಿತ್ತತೆ ಆ ಚಿಕ್ಕ ವಯಸ್ಸಿಗೇ ಶಂಕರನಾಗ್‌ನಲ್ಲಿತ್ತು.

ಹಾಗಾಗಿಯೇ ಶಂಕರ್‌ನಾಗ್ ನಾಡಿನಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದ. ಅಂದು 30 ಸೆಪ್ಟೆೆಂಬರ್ 1990. ನಾನು ಮುಂಜಾನೆ ಹಾಲು ತರಲು ಮಲ್ಲೇಶ್ವರಂ 17ನೇ ಕ್ರಾಸ್ ನಂದಿನಿಬೂತ್‌ಗೆ ಹೋಗಿದ್ದೆೆ. ಹಾಲು ಕೊಡುವವನು ನನ್ನನ್ನು ನೋಡಿ ‘ಏನ್ ಸರ್? ನೀವು ಇನ್ನೂ ಇಲ್ಲೇ ಇದೀರಾ? ಶಂಕ್ರಣ್ಣ ಅಪಘಾತದಲ್ಲಿ ಹೋಗ್ಬಿಟ್ರಂತಲ್ಲ. ಅವರ ಬಾಡಿ ಮಧ್ಯಾಹ್ನ ಕಂಟ್ರಿ ಕ್ಲಬ್ ಮನೆಗೆ ಬರತ್ತಂತೆ. ನೀವು ಹೋಗಲ್ವಾ ಸರ್ ?’ಎಂದ.

ನನಗೆ ಸಿಡಿಲು ಬಡಿದಂತಾಯಿತು. ಶಂಕರ್ ನಾಗ್ ಇಲ್ಲ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಗರಬಡಿದವನಂತೆ ಅವಾಕ್ಕಾಗಿ ಎಲ್ಲಾ ಶಕ್ತಿ, ಚೈತನ್ಯ ಕಳೆದುಕೊಂಡವನಂತೆ ನಿಂತುಬಿಟ್ಟೆ. ಹಿಂದಿನ ದಿನವಷ್ಟೇ ಕಂಟ್ರಿಕ್ಲಬ್‌ಗೆ ನನ್ನನ್ನ ಕರೆದಿದ್ದರು. ಆದರೆ ನನಗೆ ರಜೆ ಇಲ್ಲದ ಕಾರಣ ಹೋಗಲಾಗಿರಲಿಲ್ಲ. ಸಾವರಿಸಿಕೊಂಡು ಹೊಸೂರು ರಸ್ತೆಯಲ್ಲಿರುವ ಶಂಕರನ ಕಂಟ್ರಿ ಕ್ಲಬ್ ಕಂ ಮನೆಗೆ ಸ್ಕೂಟರ್‌ನಲ್ಲೆೆ ಹೊರಟೆ. ಸದಾ ಚಟುವಟಿಕೆಯ ತಾಣವಾಗಿ ಗಿಜಿಗುಡುತ್ತಿದ್ದ ಕಂಟ್ರಿಕ್ಲಬ್ ಅಂದು ಸ್ಮಶಾನ ಮೌನಕ್ಕೆ ಶರಣಾಗಿತ್ತು. ಅನಂತ್ ಸೇರಿ ಕೆಲವೇ ಕೆಲವು ಜನ ಮಾತ್ರ ಇದ್ದರು.

ನಾನು ಅಲ್ಲಿ ಹೋಗಿ ಸೇರಿದಾಗ 8 ಘಂಟೆ ಆಗಿತ್ತು. ಒಬ್ಬೊಬ್ಬರಾಗಿ ಕ್ಲಬ್‌ಗೆ ಬರಲು ಆರಂಭಿಸಿದರು. ಸಾವಿರಾರು ಅಭಿಮಾನಿ ಗಳನ್ನು ಗೇಟ್‌ನಲ್ಲೆ ತಡೆಹಿಡಿಯಲು ಪೊಲೀಸರು ಹರ ಸಾಹಸ ಪಟ್ಟರು. ಚಿತ್ರನಟ ವಿಷ್ಣುವರ್ಧನ್ ಭಾರತಿ, ಶ್ರೀನಾಥ್, ರಮೇಶ್ ಭಟ್ ಹೀಗೆ ಎಲ್ಲರೂ ಬಂದಾಯಿತು. ಕಳೆಬರದ ನಿರೀಕ್ಷೆಯಲ್ಲಿ ಎಲ್ಲಾ ಕಾದು ಕುಳಿತೆವು. ಸಂಜೆ 5ರವರೆಗೆ ಕಾದ ಮೇಲೆ ಆಂಬು ಲೆನ್ಸ್‌  ಒಂದಲ್ಲ ಎರಡು ಕಳೆಬರಗಳು ಬಂದವು. ಒಂದು ಶಂಕರ್ ಅವರದ್ದು, ಮತ್ತೊಂದು ಅವರ ಡ್ರೈವರ್ ಮುರುಘ ನದು.

ಡ್ರೈವರ್‌ಗೆ ಕಂಟ್ರಿ ಕ್ಲಬ್ ಗೇಟ್ ಬಳಿಯೇ ಮನೆ ನೀಡಿದ್ದರು ಶಂಕರ್. ಶಂಕರ್ ಶವ ನೋಡುತ್ತಲೇ ನೆರೆದಿದ್ದವರು ದುಃಖ, ಆಕ್ರಂದನ ಮುಗಿಲು ಮುಟ್ಟಿತು. ಶಂಕರನನ್ನು ಪ್ಲೆಟ್ಗಾರಂ ಮೇಲೆ ಹೂವಿನ ಸಿಂಗಾರ ಆಗಿದ್ದ ಜಾಗದಲ್ಲಿ ಮಲಗಿಸಿದರು. ಎಲ್ಲವನ್ನೂ ನೋಡುತ್ತಾ ನಿಂತಿದ್ದ ವಿಷ್ಣುವರ್ಧನ್ ದುಃಖದಿಂದ ‘ಅಮ್ಮಾ ನಂಗೆ ನೋಡಕ್ಕೆ ಆಗ್ತಿಲ್ಲ’ ಎಂದು ದೊಡ್ಡ ಉದ್ಗಾರ ತೆಗೆದು ಶಂಕರನ ಕಾಲು ಮುಟ್ಟಿ ಅಲ್ಲಿಯೇ ಕುಳಿತರು. ಅನಂತ್ ಹತ್ತಿರ ಬಂದು ಅವರನ್ನು ಸಮಾಧಾನ ಪಡಿಸಿದರು. ಸಾವಿರಾರು ಜನ
ಚಿತ್ರರಂಗದ ಗಣ್ಯರು, ರಂಗಭೂಮಿಯ ಒಡನಾಡಿಗಳು, ರಾಜಕೀಯ ಕ್ಷೇತ್ರದ ದಿಗ್ಗಜರು ಬಂದು ಶಂಕರ್‌ನ ಅಂತಿಮ ದರ್ಶನ ಪಡೆದರು. ಡಾ.ರಾಜ್‌ಕುಮಾರ್ ಪರವಾಗಿ ಹೂ ಗುಚ್ಛ ಇಟ್ಟ ಮೇಲೆ ರಾತ್ರಿ 9 ಘಂಟೆಗೆ ಹೊಸೂರು ರಸ್ತೆ ಮಾರ್ಗವಾಗಿ ವಿಲ್ಸನ್ ಗಾರ್ಡನ್ ಚಿತಾಗಾರಕ್ಕೆ ತಲುಪಿತು. ಅಣ್ಣ ಅನಂತನಾಗ್ ಎಲ್ಲಾ ಕರ್ಮಗಳನ್ನು ಮುಗಿಸಿದರು. ಆಸ್ಪತ್ರೆಯಲ್ಲಿ ಅರೆ ಪ್ರಜ್ಞಾವಸ್ಥೆ ಯಲ್ಲಿದ್ದ ಅರುಂಧತಿ ಅವರಿಂದ ಸಂದೇಶ ಬಂತು.

ಪತಿಯ ತಲೆಯ ಕೂದಲ ಮುಂಗುರಳನ್ನು ಕತ್ತರಿಸಿ ತರಬೇಕೆಂದು ಆಕೆ ಕೇಳಿದ್ದರು. ಅವರು ಹೇಳಿದ ಹಾಗೆ ಶಂಕರ್ ಮುಂಗು ರಳನ್ನು ತೆಗೆದು ಕವರ್‌ನಲ್ಲಿ ಇಟ್ಟು ಆಸ್ಪತ್ರೆಗೆ ಕಳುಹಿಸಲಾಯಿತು. ಇಂದಿನ ಬಹು ಭಾಷಾ ನಟ ಪ್ರಕಾಶ್ ರೈ ಸ್ಕೂಟರ್ ‌ನಲ್ಲಿ ಬಂದು ಚಿತಾಗಾರದಲ್ಲಿ ಇರುವ ಸಿಮೆಂಟ್ ಕಂಬಕ್ಕೆ ತಲೆ ಚೆಚ್ಚಿಕೊಂಡು ಗೋಳಾಡಿದರು. ನಾನು ರಾತ್ರಿ 11 ಘಂಟೆಗೆ ಅಲ್ಲಿಂದ
ಹೊರಟು ಮನೆ ಸೇರುವಷ್ಟರಲ್ಲಿ 11:45 ಆಗಿತ್ತು. ನನ್ನ ಅಪ್ಪ ನನ್ನ ಹೆಂಡತಿ ಮತ್ತು ನನ್ನ ಸಹೋದರರಿಗೆ ಇವನು ಹಾಲು ತರಲು ಹೋದವನು ಅಲ್ಲಿಂದಲೇ ಕಂಟ್ರಿ ಕ್ಲಬ್‌ಗೆ ಹೋಗಿದ್ದಾನೆ ಎಂಬ ವಿಷಯ ಹೇಗೋ ತಿಳಿದಿತ್ತು. ತಲೆಗೆ ಸ್ನಾನ ಮಾಡಿ ಬಿಸಿ ಮಾಡಿದ್ದ ಊಟ ತಿನ್ನಲು ಹೋದಾಗ ತುತ್ತು ಒಳಗಿಳಿಯಲಿಲ್ಲ, ಶಂಕರ್‌ನಾಗ್ ಚಿತ್ರಗಳೇ ಕಣ್ಮುಂದೆ ಬಂದಂತಾಗಿ ಹಾಗೇ ಮೇಲೆದ್ದು ಮಲಗಿ ದಾಗ ರಾತ್ರಿ 1:30 ಮೀರಿತ್ತು.

ಈಗ ಶಂಕರ ಇದ್ದಿದ್ದರೆ ಅವನಿಗೆ 65 ವರ್ಷ ಆಗಿರುತ್ತಿತ್ತು. ಸತ್ತಾಗ ಕೇವಲ 33.