Sunday, 15th December 2024

ಭಾಷಾಂತರ ಎಂಬ ಭಾವಸೇತು

ತನ್ನಿಮಿತ್ತ

ನಿವೇದಿತಾ ಎಚ್.

ವಸುಧೈವ ಕುಟುಂಬಕಂ’ ಎನ್ನುವ ಆಶಯವನ್ನು ಅನುವಾದವು ನಿಜ ಮಾಡುತ್ತಿದೆ. ಎಲ್ಲ ಜ್ಞಾನಶಾಖೆಗಳಲ್ಲಿ ದೊರಕು ತ್ತಿರುವ ಯಾವುದೇ ಭಾಷೆಯ ಜ್ಞಾನಭಂಡಾರವನ್ನು ನಮ್ಮ ನಮ್ಮ ಭಾಷೆಯಲ್ಲಿ ಓದಲು ಅನುಕೂಲವಾಗುತ್ತಿರುವುದು ಅನುವಾದದಿಂದ.

ಸೆಪ್ಟೆಂಬರ್ ೩೦ ಅಂತಾರಾಷ್ಟ್ರೀಯ ಅನುವಾದ ದಿನ. ಇದು ‘ಅನುವಾದದ ಪಿತಾಮಹ’ ಎಂದೇ ಹೇಳಲಾಗುವ ಸಂತ ಜೆರೋಮ್ ನಿಧನರಾದ ದಿನ. ಬಹುಭಾಷಾ ವಿದ್ವಾಂಸ ರಾಗಿದ್ದ ಜೆರೋಮ್, ಬೈಬಲ್‌ನ ಹೊಸ ಒಡಂಬಡಿಕೆಯನ್ನು ಗ್ರೀಕ್ ಭಾಷೆಯಿಂದ ಲ್ಯಾಟಿನ್‌ಗೆ ಅನುವಾದಿಸಿದರು. ಅಲ್ಲದೆ ಹೀಬ್ರೂ ಭಾಷೆಯಲ್ಲಿದ್ದ ಕ್ರಿಸ್ತನ ಸುವಾರ್ತೆ ಯನ್ನು ಗ್ರೀಕ್ ಭಾಷೆಗೆ ಅನುವಾದಿಸಿದರು. ಹೀಗೆ ಅನುವಾದದ ಕಾರ್ಯಕ್ಕೆ ಅಡಿಪಾಯ ವಿಟ್ಟ ಸಂತ ಜೆರೋಮ್ ಸ್ವರ್ಗಸ್ಥರಾದ ದಿನವನ್ನೇ ಅನುವಾದ ದಿನಾಚರಣೆಗೆ ಮೀಸಲಿಟ್ಟಿರುವುದು ಅನ್ವರ್ಥಕ.

ಪ್ರಪಂಚದ ಎಲ್ಲ ರಾಷ್ಟ್ರಗಳ ಒಳಿತಿಗಾಗಿ ಎಲ್ಲರೊಡ ಗೂಡಿ ಕೆಲಸ ಮಾಡುವ ವಿಶ್ವ ಸಂಸ್ಥೆಯಲ್ಲಿ ಅನುವಾದದ ಮಹತ್ವ ಹೇಳತೀರದ್ದು. ಅಲ್ಲದೆ, ದೇಶ-ಭಾಷೆಗಳ ಗಡಿ ಮೀರಿ ಒಂದು ಉತ್ತಮ ಗುರಿಸಾಧನೆಗಾಗಿ ಕೆಲಸ ಮಾಡುವಾಗ ಭಾಷೆ ಸೇತುವೆ ಯಾಗಬೇಕೇ ಹೊರತು ತೊಡಕಾಗಬಾರದು. ವಿಶ್ವದಲ್ಲಿ ಸಹಜೀವನ ನಡೆಸುತ್ತಿರುವ ನಾವೆಲ್ಲರೂ ಪರಸ್ಪರರ ಸಂಸ್ಕೃತಿ-ಪರಂಪರೆಗಳನ್ನು ಅರಿತು ಗೌರವಿಸಲು ಭಾಷೆ ದಾರಿಯಾಗಬೇಕು.

ಅಭಿವೃದ್ಧಿಯಲ್ಲಿ ಕೈಜೋಡಿಸಿ ಪ್ರಗತಿಶೀಲ ರಾಗಲು ಆಲೋಚನೆಗಳನ್ನು ಹಂಚಿಕೊಳ್ಳಬೇಕು. ಭೂಗೋಳದ ಉಳಿವಿಗಾಗಿ ಇರುವ ಉಪಾಯಗಳನ್ನು ಚರ್ಚಿಸಲು ಎಲ್ಲರೂ ಮುಂದೆ ಬರಬೇಕು. ಈ ಎಲ್ಲ ಆಶಯಗಳು ಈಡೇರಬೇಕಾದರೆ ಭಾಷೆಯ ತಿಳಿವಳಿಕೆ ಅಗತ್ಯ. ಇದನ್ನು ಮನಗಂಡು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಅನುವಾದ ದಿನವನ್ನು ಆಚರಿಸಿಕೊಂಡು ಬಂದಿದೆ. ತನ್ಮೂಲಕ ಭಾಷೆಯ ಬಹುತ್ವವನ್ನು ಗೌರವಿಸುತ್ತಿದೆ.

ಈ ರಾಜನೈತಿಕ ಕಾರಣಗಳಲ್ಲದೆ, ‘ವಸುಧೈವ ಕುಟುಂಬಕಂ’ ಎನ್ನುವ ಆಶಯ ವನ್ನು ಅನುವಾದವು ಬಹಳಷ್ಟು ಮಟ್ಟಿಗೆ ನಿಜ ಮಾಡುತ್ತಿದೆ. ಇಂದು ಪ್ರಪಂಚದಲ್ಲಿನ ಎಲ್ಲ ಜ್ಞಾನಶಾಖೆಗಳಲ್ಲಿ ದೊರಕುತ್ತಿರುವ ಯಾವುದೇ ಭಾಷೆಯಲ್ಲಿರುವ ಜ್ಞಾನ ಭಂಡಾರ ವನ್ನು ನಮ್ಮ ನಮ್ಮ ಭಾಷೆಯಲ್ಲಿ ಓದಲು ಅನುಕೂಲವಾಗುತ್ತಿರುವುದು ಅನುವಾದದಿಂದ. ವಿಜ್ಞಾನ ಕ್ಷೇತ್ರದಲ್ಲಿ ಯಾವ
ದೇಶದಲ್ಲಿ ಏನೇ ಹೊಸ ಆವಿಷ್ಕಾರವಾದರೂ, ಅದು ವಿಶ್ವದ ಉಪಯೋಗಕ್ಕೆ ದೊರೆಯುವಂತಾಗುವುದು ಅನುವಾದದ ಮೂಲಕ.

ಇಂದು ಎಲ್ಲ ವಿಷಯಗಳ ಪುಸ್ತಕಗಳು ಆಯಾ ದೇಶ- ರಾಜ್ಯಗಳ ಸ್ಥಳೀಯ ಭಾಷೆಯಲ್ಲಿ ಓದಲು ಸಿಗುತ್ತವೆ. ಒಂದೇ ಭಾಷೆಯ ಸಾರ್ವಭೌಮತ್ವ ಪ್ರಪಂಚದಲ್ಲಿರುವ ನೂರಾರು ಭಾಷೆಗಳ ಅಸ್ತಿತ್ವಕ್ಕೆ ಸಂಚಕಾರ ತರುವಂಥ ವಿಷಯ. ಅನುವಾದ ತನ್ಮೂಲಕ ಭಾಷೆಗಳ ಉಳಿವಿಗೆ ಸಹಾಯಕ. ನವರಸಗಳನ್ನು ಅನುಭವಿಸಬಲ್ಲ ಜೀವಿ ಯೆಂದರೆ ಮನುಷ್ಯ ಮಾತ್ರ. ಸಂಗೀತಕ್ಕೆ ಭಾಷೆಯ ಗೊಡವೆಯಿಲ್ಲದಿದ್ದರೂ, ಸಾಹ್ಯಿದ ಆಸ್ವಾದನೆಗೆ ಭಾಷೆ ತಡೆಯಾಗಬಲ್ಲದು. ಆದರೆ ಅನುವಾದದ ಪ್ರಕ್ರಿಯೆ ದೇಶವಿದೇಶಗಳ
ಸಾಹಿತ್ಯ ಕೃತಿಗಳನ್ನು ನಮ್ಮ ಮನೆಯಂಗಳಕ್ಕೆ ತಂದುನೀಡಿದೆ.

ಇಂಗ್ಲಿಷ್, ಗ್ರೀಕ್, ರಷ್ಯನ್, ಸ್ಪ್ಯಾನಿಷ್, ಜರ್ಮನ್, ಅರೇಬಿಕ್ ಇತ್ಯಾದಿ ಭಾಷೆಗಳ ಕೃತಿಗಳನ್ನು ನಾವು ನಮ್ಮ ನಮ್ಮ ಭಾಷೆಗಳಲ್ಲಿ ಓದುವ ಅನುಕೂಲ ಅನುವಾದದಿಂದ. ಅಲ್ಲದೆ, ಇತರೆ ಭಾರತೀಯ ಭಾಷೆಗಳ ಅತ್ಯುತ್ತಮ ಕೃತಿಗಳನ್ನು ನಾವು ಕನ್ನಡದಲ್ಲಿಯೇ ಓದುವಂತಾದುದು, ಅನುವಾದವೆಂಬುದು ವ್ಯಾಪಕವಾಗಿರುವುದರಿಂದಲೇ. ಕನ್ನಡದ ಹಲವು ಉತ್ಕೃಷ್ಟ ಕೃತಿಗಳು ಇಂದು ಇತರೆ ಭಾರತೀಯ ಭಾಷೆಗಳಲ್ಲದೆ, ವಿದೇಶಿ ಭಾಷೆಗಳಿಗೂ ಅನುವಾದವಾಗಿರುವುದು ನಮ್ಮ ಕಣ್ಣಮುಂದಿದೆ.

‘ಸರಸ್ವತಿ ಸಮ್ಮಾನ್’ ಪುರಸ್ಕೃತ ಎಸ್.ಎಲ್. ಭೈರಪ್ಪನವರನ್ನು ಇಂದು ಭಾರತೀಯರೆಲ್ಲರೂ ‘ನಮ್ಮ ಭಾಷೆಯ ವರೇ’ ಇವರು ಎಂದುಕೊಳ್ಳುವ ಮಟ್ಟಿಗೆ ಪ್ರೀತಿಸುವುದನ್ನು ಸಾಧ್ಯವಾಗಿಸಿರುವುದು ಅನುವಾದ. ಕನ್ನಡದ ರಾಘವಾಂಕ ಇಂಗ್ಲಿಷರಿಗೂ ಪರಿಚಯವಾಗಿರುವುದು ವನಮಾಲ ವಿಶ್ವನಾಥರಂಥ ಅನುವಾದಕರಿಂದ. ಈ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ತುಂಬಾ ಕೆಲಸ ಮಾಡುತ್ತಿದೆ. ಈ ಸಾಹಿತ್ಯ ಕೃತಿಗಳ ಕೊಡು-ಕೊಳ್ಳುವಿಕೆ ನಮ್ಮನ್ನು ಸಂವೇದನಾಶೀಲರ ನ್ನಾಗಿಸುತ್ತಿದೆ. ‘ಅಭಿನವ ಕಾಳಿದಾಸ’ ಎಂದೇ ಹೆಸರಾಗಿದ್ದ ಬಸಪ್ಪ ಶಾಸ್ತ್ರಿಗಳು, ಕಾಳಿದಾಸ, ಕ್ಷೇಮೇಂದ್ರ ಮತ್ತು ಷೇಕ್ಸ್ ಪಿಯರ್‌ನ ಕೃತಿಗಳನ್ನು ಅಂದೇ
ಕನ್ನಡೀಕರಿಸಿದ್ದರು.

ಬಿಎಂಶ್ರೀ ಅವರ ‘ಇಂಗ್ಲಿಷ್ ಗೀತೆಗಳು’ ಕೃತಿಯಿಂದ ಅನುವಾದ ಪ್ರಕಾರವು ಕನ್ನಡ ಸಾಹಿತ್ಯದಲ್ಲಿ ಬಿರುಸು ಪಡೆದುಕೊಂಡಿತು
ಎನ್ನಬಹುದು. ಡಾ. ಪ್ರಧಾನ್ ಗುರುದತ್ತ, ಬಿ.ಸಿ. ರಾಮಚಂದ್ರ ಶರ್ಮ, ಒ.ಎಲ್. ನಾಗಭೂಷಣಸ್ವಾಮಿ, ಲಕ್ಷ್ಮೀ ನಾರಾಯಣ ಭಟ್ಟ, ದೇಜಗೌ, ಚಂದ್ರಕಾಂತ ಪೋಕಳೆ ಹೀಗೆ ಶ್ರೇಷ್ಠ ಅನುವಾದಕರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಅಕಾಡೆಮಿ ಅನುವಾದಕ್ಕೆಂದೇ ಪ್ರಶಸ್ತಿ ಕೊಡ ಮಾಡುತ್ತಿರುವುದು, ಅನುವಾದ ಸಾಹಿತ್ಯ ವೆಷ್ಟು ಗಂಭೀರ ಕ್ರಿಯೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ.

೨೦೨೩ರ ಅಂತಾರಾಷ್ಟ್ರೀಯ ಅನುವಾದ ದಿನದ ಘೋಷವಾಕ್ಯ ‘”Unveiling many faces of humanity’. ಅಂದರೆ, ‘ಮಾನವೀ ಯತೆಯ ಹಲವು ಮುಖಗಳ ಅನಾವರಣ’ ಎಂದು. ಇಡೀ ಪ್ರಪಂಚದಲ್ಲಿರುವ ಎಲ್ಲ ಮನುಷ್ಯರೂ ಒಂದೇ ಎಂಬುದನ್ನು ಇದು ಸೂಚ್ಯವಾಗಿ ಹೇಳುತ್ತದೆ. ಈ ಸಂದರ್ಭದಲ್ಲಿ, ಪ್ರಪಂಚವನ್ನು ನಮ್ಮ ಮಡಿಲಿಗೆ ಪುಟಗಳ ಮೂಲಕ ತಂದುಹಾಕುತ್ತಿರುವ ಎಲ್ಲ ಅನುವಾದಕರಿಗೂ ಅಭಿನಂದನೆಗಳು.

(ಲೇಖಕಿ ಇಂಗ್ಲಿಷ್ ಉಪನ್ಯಾಸಕಿ)