Thursday, 12th December 2024

ಲಂಡನ್‌ನಲ್ಲಿ ಕನ್ನಡ ವೈಭವ

ಕನ್ನಡ ಡಿಂಡಿಮ

ಯಗಟಿ ರಘು ನಾಡಿಗ್

ಆಂಗ್ಲರ ನೆಲದಲ್ಲಿ ನೆಲೆಸಿರುವ ಸಾವಿರಾರು ಕನ್ನಡಿಗರಿಗೆ ಎರಡನೆಯ ಮನೆಯೇ ಆಗಿರುವ ‘ಕನ್ನಡ ಬಳಗ’ ೧೯೮೩ರಿಂದಲೂ ವೈವಿಧ್ಯಮಯ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಾ ಕನ್ನಡ ನಾಡಿನ ಅಸ್ಮಿತೆ, ಸಂಸ್ಕೃತಿ, ಪರಂಪರೆಗಳ ಪ್ರವರ್ಧನೆಯಲ್ಲಿ ತೊಡಗಿದೆ.

‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು | ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಅನ್ಯವೆನಲದೇ ಮಿಥ್ಯ’ ಎಂದಿದ್ದಾರೆ ರಾಷ್ಟ್ರಕವಿ ಕುವೆಂಪು.

ಕವಿಗಳ ಈ ಆಶಯಕ್ಕೆ ತಕ್ಕಂತೆ, ವಿದೇಶಿ ನೆಲದಲ್ಲಿದ್ದೂ ತಾಯ್ನೆಲದ ಸೆಳೆತ ದಿಂದ ದೂರಾಗದ ಸಹೃದಯಿಗಳು ಒಬ್ಬಿಬ್ಬರಲ್ಲ, ಸಂಘ-ಸಂಸ್ಥೆಗಳು ಒಂದೆರಡಲ್ಲ. ಇಂಥ ಸಂಸ್ಥೆಗಳ ಪೈಕಿ ಎದ್ದುಕಾಣುವ ಹೆಸರು ಯುನೈಟೆಡ್ ಕಿಂಗ್‌ಡಂನ ‘ಕನ್ನಡ ಬಳಗ’. ಕನ್ನಡ ಸಂಸ್ಕೃತಿ-ಪರಂಪರೆಯನ್ನು ಉಳಿಸಿ ಬೆಳೆಸಿ ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಬಳಗ ನಲವತ್ತರ ಮೈಲಿಗಲ್ಲನ್ನು ತಲುಪಿದ ಸಂಭ್ರಮದಲ್ಲಿದೆ.

ಈ ಸಂಭ್ರಮಾಚರಣೆಗೆಂದು ಸೆಪ್ಟೆಂಬರ್ ೩೦ ಮತ್ತು ಅಕ್ಟೋಬರ್ ೧ರಂದು ಇಂಗ್ಲೆಂಡ್ ರಾಜಧಾನಿ ಲಂಡನ್ ಮಹಾನಗರಿಯ ಬೈರನ್ ಹಾಲ್‌ನಲ್ಲಿ ಬಳಗವು ವಿಶಿಷ್ಟ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಹಮ್ಮಿಕೊಂಡಿದೆ. ಕಳೆದ ನಾಲ್ಕು ದಶಕಗಳಿಂದ ಕಾರ್ಯಾಚರಿಸುತ್ತಿರುವ ಈ ಕನ್ನಡ ಬಳಗದ ಹಾಲಿ ಅಧ್ಯಕ್ಷೆ ಸುಮನಾ ಗಿರೀಶ್. ಕೇವಲ ಕೈಬೆರಳೆಣಿಕೆಯಷ್ಟು ಕನ್ನಡಿಗರಿಂದ ಶುರುವಾಗಿ ‘ವಾಮನ’ ಹೆಜ್ಜೆಯಿಟ್ಟ ಈ ಬಳಗವೀಗ ಬರೋಬ್ಬರಿ ೨೫೦೦ ಉತ್ಸಾಹಿ ಕನ್ನಡಿಗರ ಸದಸ್ಯತ್ವ ಹೊಂದಿ ತ್ರಿವಿಕ್ರಮ ಹೆಜ್ಜೆಯಿಡುತ್ತಿರುವ ಹೆಮ್ಮೆಯ ಸಂಘಟನೆ ಯಾಗಿದೆ ಎಂಬುದು ಗಮನಿಸ ಬೇಕಾದ ಸಂಗತಿ.

ಆಂಗ್ಲರ ನೆಲದಲ್ಲಿ ನೆಲೆಸಿರುವ ಗಣನೀಯ ಸಂಖ್ಯೆಯ ಕನ್ನಡಿಗರಿಗೆ ಅಕ್ಷರಶಃ ಎರಡನೇ ಮನೆಯೇ ಆಗಿರುವ ‘ಕನ್ನಡ ಬಳಗ’ ೧೯೮೩ರಿಂದಲೂ ವಿಶಿಷ್ಟವೂ
ವೈವಿಧ್ಯಮಯವೂ ಆಗಿರುವ ಹಲವು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಾ ಕನ್ನಡ ಭಾಷೆ, ಕನ್ನಡ ನಾಡಿನ ಅಸ್ಮಿತೆ, ಸಂಸ್ಕೃತಿ, ಪರಂಪರೆ, ಸಾಹಿತ್ಯ, ಕಲೆ ಇತ್ಯಾದಿ ಮಗ್ಗುಲುಗಳ ಪ್ರವರ್ಧನೆಯಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಸಂಗತಿ.

ಸಂಭಮಕ್ಕೆ ಸಹೃದಯಿಗಳ ಸಾಕ್ಷಿ
ಕನ್ನಡ ಬಳಗದ ನಾಲ್ಕನೇ ದಶಮಾನೋತ್ಸವು ಭವ್ಯವಾಗಿಯೂ, ಮಹತ್ತರ ವಾಗಿಯೂ ನಡೆಯಬೇಕೆಂಬ ಆಶಯ ಬಳಗದ ಸದಸ್ಯರದ್ದು. ಹೀಗಾಗಿ ಕನ್ನಡ ನಾಡಿನ ವಿವಿಧ ಕ್ಷೇತ್ರಗಳ ಸಿದ್ಧ-ಪ್ರಸಿದ್ಧರನ್ನು ಈ ಸಂಭ್ರಮದಲ್ಲಿ ಭಾಗಿಯಾಗುವಂತೆ ಮಾಡಿದೆ ಕನ್ನಡ ಬಳಗ. ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಮುಖ್ಯ ಸಂಪಾದಕ ರವಿ ಹೆಗಡೆ, ಶಿಕ್ಷಣತಜ್ಞ ಗುರುರಾಜ ಕರ್ಜಗಿ, ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ಪಾವಗಡದ ರಾಮಕೃಷ್ಣ ಸೇವಾಶ್ರಮದ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಸ್ವಾಮಿ ಜಪಾನಂದ
ಮಹಾರಾಜ್ ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಇವರು ಮಾತ್ರವಲ್ಲದೆ, ಲಂಡನ್ ಮಹಾನಗರದ ಮೇಯರ್, ಭಾರತೀಯ ಹೈಕಮಿಷನ್‌ನ ರಾಯಭಾರಿಗಳು ಹಾಗೂ ಲಂಡನ್ನಿನ ಭಾರತೀಯ ವಿದ್ಯಾಭವನದ
ಮುಖ್ಯಸ್ಥ ನಂದಕುಮಾರ್ ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ಮರಣ ಸಂಚಿಕೆಯ ಬಿಡುಗಡೆ
ತಾಯ್ನಾಡಿನಿಂದ ಸಾಕಷ್ಟು ದೂರವಿರುವ ವಿದೇಶಿ ನೆಲದಲ್ಲಿ ಕಸ್ತೂರಿಯ ಕಂಪನ್ನು ಬೀರುವ ಮಹದೋದ್ದೇಶದೊಂದಿಗೆ ಮೈದಳೆದ ‘ಕನ್ನಡ ಬಳಗ’ವನ್ನು ಪಾಲಿಸಿ
ಪೋಷಿಸಿ ತಲೆಯೆತ್ತಿ ನಿಲ್ಲುವಂತೆ ಮಾಡಿರುವ, ನಿಜಾರ್ಥದಲ್ಲಿ ಸ್ವಯಂಸೇವಕರಂತೆ ದುಡಿಯುತ್ತಿರುವ ಹಲವು ಹಿರಿಯ ಜೀವಗಳು ಮತ್ತು ವಿವಿಧ ಕ್ಷೇತ್ರಗಳ ಸಾಧಕ
ರನ್ನು ಈ ಸಂಭ್ರಮದ ಸಂದರ್ಭದಲ್ಲಿ ಗೌರವಿಸಲಾಗುವುದು. ಮಾತ್ರವಲ್ಲ, ನಾಡಿನ ಹತ್ತು ಹಲವು ಗಣ್ಯರು, ಪ್ರತಿಭಾವಂತ ಅನಿವಾಸಿ ಕನ್ನಡಿಗರು ಅಕ್ಷರ ತೋರಣ
ಕಟ್ಟಿರುವ ‘ಸಂಭ್ರಮ’ ಎಂಬ ಹೆಸರಿನ ಸ್ಮರಣ ಸಂಚಿಕೆಯೂ ಇದೇ ವೇಳೆ ಬಿಡುಗಡೆಯಾಗಲಿದೆ.

ಕನ್ನಡಿಗರ ಪ್ರತಿಭೆ, ಅಸ್ಮಿತೆಯನ್ನು ಒಂದಿಡೀ ವಿಶ್ವದ ಮುಂದೆ ಅನಾವರಣಗೊಳಿಸುವ ಇಂಥ ಕಾರ್ಯ ಕ್ರಮ ವಿದೇಶಿ ನೆಲದಲ್ಲಿ ಜರುಗುತ್ತಿರುವುದು ಹೆಮ್ಮೆಯ ಸಂಗತಿ.

ಒಂದಿಷ್ಟು ಇತಿಹಾಸ

ಪ್ರಪ್ರಥಮ ವಿಶ್ವಕನ್ನಡ ಸಮ್ಮೇಳನವನ್ನು ವಿದೇಶಿ ನೆಲದಲ್ಲಿ ಆಯೋಜಿಸಿದ ಹೆಗ್ಗಳಿಕೆ ಯುನೈಟೆಡ್ ಕಿಂಗ್‌ಡಂನ ಕನ್ನಡ ಬಳಗದ್ದು. ೧೯೮೮ರ ಆಗಸ್ಟ್ ೨೭ರಿಂದ ೨೯ರವರೆಗೆ ನಡೆದ ಈ ಸಮ್ಮೇಳನವನ್ನು ಉದ್ಘಾಟಿಸಿದ್ದು ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿಯವರು. ಈ ಕಾರ್ಯಕ್ರಮದಲ್ಲಿ ರಾಜಕಾರಣಿಗಳಾದ ಜೆ.ಎಚ್. ಪಟೇಲ್, ಎಂ.ಪಿ. ಪ್ರಕಾಶರು ಮಾತ್ರವಲ್ಲದೆ, ‘ಕಡಲತೀರದ ಭಾರ್ಗವ’ ಎಂದೇ ಹೆಸರಾದ ಖ್ಯಾತ ಸಾಹಿತಿ ಶಿವರಾಮ ಕಾರಂತ, ಪ್ರಸಿದ್ಧ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್, ಕನ್ನಡ ಚಲನಚಿತ್ರ ತಾರೆಯರಾದ ಶ್ರೀನಾಥ್, ಶಂಕರ್‌ನಾಗ್, ಗೀತಾ, ಶ್ರೀನಿವಾಸ ಪ್ರಭು ಮತ್ತು ಅವರ ರಂಗತಂಡ, ಖ್ಯಾತ ಸುಗಮ ಸಂಗೀತ ಸಂಯೋಜಕ ಹಾಗೂ ಗಾಯಕ ಸಿ.ಅಶ್ವಥ್ ಭಾಗವಹಿಸಿಆ ಸಂದರ್ಭವನ್ನು ಅವಿಸ್ಮರಣೀಯ ವಾಗಿಸಿದರು.

ಇವರಷ್ಟೇ ಅಲ್ಲದೆ, ಯುರೋಪ್, ಅಮೆರಿಕ, ಆಸ್ಟ್ರೇಲಿಯಾ, ಇಸ್ರೇಲ್, ನ್ಯೂಜಿಲೆಂಡ್ ಮತ್ತು ಯುನೈಟೆಡ್ ಕಿಂಗ್‌ಡಂನ ಸಾವಿರಾರು ಅನಿವಾಸಿ ಕನ್ನಡಿಗರೂ ಈ ವೇಳೆ ಪಾಲ್ಗೊಂಡು ಕಸ್ತೂರಿ ಕನ್ನಡದ ಕಂಪನ್ನು ಮನದಣಿಯೆ ಆಸ್ವಾದಿಸಿದರು.

ಸಂಕಷ್ಟದಲ್ಲೂ ಬದ್ಧತೆ
ಎರಡು ವರ್ಷಗಳ ಹಿಂದೆ ಕೋವಿಡ್ ಮಹಾಮಾರಿಯು ಒಂದಿಡೀ ಜಗತ್ತನ್ನು ಅಪ್ಪಳಿಸಿ ಜನರನ್ನು ಹೈರಾಣು ಮಾಡಿದಾಗಲೂ ಹೊಣೆಗಾರಿಕೆಯಿಂದ ಹಿಂದೆ ಸರಿಯ
ದಿದ್ದುದು ‘ಕನ್ನಡ ಬಳಗ’ದ ಬದ್ಧತೆಗೊಂದು ಸಾಕ್ಷಿ. ಈ ಸಂಕಷ್ಟದ ಕಾಲಘಟ್ಟದಲ್ಲಿ ಕೂಡ ಬಳಗದ ವತಿಯಿಂದ ಸಾಕಷ್ಟು ಆನ್‌ಲೈನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ವೇಳೆ, ‘ಡ್ರಾಮಾಟಿಕ್ಸ್’ ತಂಡವು ‘ಬೀಚಿ ಹಾಸ್ಯ ರಸಾಯನ’ ನಾಟಕವನ್ನು ಪ್ರಸ್ತುತ ಪಡಿಸಿದರೆ, ಪ್ರೊ. ಎಂ.ಜಿ. ಈಶ್ವರಪ್ಪ ಅವರು ಮಹಾಶರಣೆ ಅಕ್ಕಮಹಾದೇವಿಯ ಬಗೆಗೆ ಮಾತನಾಡಿ ಹಲವು ಅಮೂಲ್ಯ ಮಾಹಿತಿಗಳನ್ನು ಹಂಚಿಕೊಂಡರು. ಇವಷ್ಟೇ ಅಲ್ಲದೆ, ಯೋಗ ಮತ್ತಿತರ ಕಾರ್ಯಕ್ರಮ ಗಳನ್ನೂ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು ಎಂಬುದು ಗಮನಾರ್ಹ.

ಹೀಗೆ ಬರೋಬ್ಬರಿ ೪೦ ವರ್ಷಗಳಿಂದ ವಿದೇಶಿ ನೆಲದಲ್ಲಿ ಕನ್ನಡದ ತೇರನ್ನು ಯಶಸ್ವಿಯಾಗಿ ಎಳೆಯುತ್ತಿರುವ, ತನ್ಮೂಲಕ ತಾಯಿ ಭುವನೇಶ್ವರಿಯ ವೈಭವಕ್ಕೆ
ಕೊಡುಗೆ ನೀಡುತ್ತ ಬಂದಿರುವ ಯುನೈಟೆಡ್ ಕಿಂಗ್ ಡಮ್‌ನ ‘ಕನ್ನಡ ಬಳಗ’ ನಿಜಾರ್ಥದಲ್ಲಿ ಹೆಮ್ಮೆಯ ಸಂಘಟನೆಯೇ ಸರಿ. ವಿಶ್ವದ ಹಲವು ದೇಶಗಳಲ್ಲಿ ಹಂಚಿ
ಹೋಗಿರುವ ಅನಿವಾಸಿ ಕನ್ನಡಿಗರು ೨ ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಒಂದೆಡೆ ಸೇರಲಿದ್ದಾರೆ ಮತ್ತು ಹೀಗೆ ಬರುತ್ತಿರುವವರಲ್ಲಿ ವೈದ್ಯರು, ಲೆಕ್ಕಪರಿ
ಶೋಧಕರು, ಎಂಜಿನಿಯರ್‌ಗಳು, ವಕೀಲರು, ಉದ್ದಿಮೆ ದಾರರು ಮತ್ತು ಬ್ಯಾಂಕ್ ಉದ್ಯೋಗಿಗಳು ಹೀಗೆ ವಿವಿಧ ಕಾರ್ಯಕ್ಷೇತ್ರಗಳ ಕನ್ನಡಿಗ ಸಾಧಕರು ಸೇರಿದ್ದಾರೆ ಎಂಬುದು ಸಂತಸದ ಸಂಗತಿ.

(ಲೇಖಕರು ಪತ್ರಕರ್ತರು)