Sunday, 15th December 2024

ರಾಜಕಾರಣಕ್ಕೊಂದು ಮೌಲ್ಯದ ಭಾಷ್ಯ ಬರೆದ ರಾಮಣ್ಣ

ಸ್ಮರಣೆ

ತುರುವೇಕೆರೆ ಪ್ರಸಾದ್

ರಾಜ್ಯ ಕಂಡ ಅಪರೂಪದ ರಾಜಕಾರಣಿ ಮಾ.ನಾ.ರಾಮಣ್ಣನವರು ಗಾಂಧಿಜಿಯವರ ಪಡಿಯಚ್ಚೇ! ವೇಷ, ಭೂಷಣ ಗಳಿಂದ ಹಿಡಿದು ನಡೆ ನುಡಿಯಲ್ಲೂ ಅವರು ಪಕ್ಕಾ ಗಾಂಧಿ ಅನುಯಾಯಿ. ಮಾಯಸಂದ್ರದ ಅವರ ಮನೆ ಒಂದು ರೀತಿಯಲ್ಲಿ ಸಬರ ಮತಿ ಆಶ್ರಮವೇ! ರೌಂಡ್ ದ ಕ್ಲಾಕ್ ರಾಮಣ್ಣನವರು ಜನರ ಕಷ್ಟಗಳಿಗೆ ಕಿವಿಯಾಗುತ್ತಿದ್ದರು. ಅ.೧ಕ್ಕೆ ರಾಮಣ್ಣ ಜನ್ಮಶತಾಬ್ಧಿ ಸಂಭ್ರಮ.

ರಾಜಕೀಯ ಮೂರ್ಖನೊಬ್ಬನ ಕೊನೆಯ ಆಶ್ರಯತಾಣ ಎಂಬ ಮಾತೊಂದಿದೆ. ಅದು ಸತ್ಯವಲ್ಲ, ರಾಜಕಾರಣ ಸತ್ಯವಂತರಿಗೂ ಸಲ್ಲುತ್ತದೆ. ರಾಜಕಾರಣ ಎಂಬುದನ್ನು ಒಂದು ಅತ್ಯಂತ ಪವಿತ್ರವೃತ್ತಿಯಾಗಿ ಸ್ವೀಕರಿಸಿ ನಿಷ್ಠೆಯಿಂದ ಆತ್ಮಾಭಿಮಾನದಿಂದ ಜೀವಿಸಬ ಹುದು ಎಂಬುದಕ್ಕೆ ಮೇಲ್ಪಂಕ್ತಿಯಾಗಿ ನಿಲ್ಲುವವರು ತುಮಕೂರು ಜಿಲ್ಲೆ ತುರುವೇಕೆರೆಯ ಮಾಯಸಂದ್ರದ ಕೀರ್ತಿಶೇಷ ಶಾಸಕ ಎಂ.ಎನ್.ರಾಮಣ್ಣ.

ಶ್ರೀಮತಿ ಲಕ್ಷ್ಮೀದೇವಮ್ಮ ಮತ್ತು ಶ್ರೀ ನಾರಾಸಿ ದೇವರಯ್ಯ ಅವರ ಐದನೇ ಪುತ್ರನಾಗಿ ೧೯೨೩ರ ಮಾರ್ಚ್ ೩ರಂದು ಜನಿಸಿದ ರಾಮಣ್ಣನವರು ಗಾಂಧೀಜಿಯವರ ಗಾಢ ಪ್ರಭಾವ ಕ್ಕೊಳಗಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ತಮ್ಮ ೧೬ನೇ ವಯಸ್ಸಿನಲ್ಲಿಯೇ ಕಾಂಗ್ರೆಸ್ ಸೇರಿ ಸ್ವಾತಂತ್ಯ್ರ ಚಳುವಳಿಗೆ ದುಮುಕಿದರು. ತಾಳಕೆರೆ ಸುಬ್ರಹ್ಮಣ್ಯಂ ನೇತೃತ್ವ ದಲ್ಲಿ ಅರಣ್ಯ ಸತ್ಯಾಗ್ರಹ, ಪಾನನಿರೋಧ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ರಾಮಣ್ಣನವರು ೧೦ ತಿಂಗಳ ಕಾಲ ಸೆರೆವಾಸವನ್ನೂ ಅನುಭವಿಸಿದರು.

ರಾಮಣ್ಣನವರು ದಿಢೀರನೆ ಯಾರದ್ದೋ ಕೃಪಾಕಟಾಕ್ಷದಿಂದಲೋ, ವಂಶಪಾರಂಪರ್ಯವಾಗಿಯೋ ರಾಜಕೀಯದ ಫಲಾನು ಭವಿ ಗಳಾದವರಲ್ಲ. ಅಪಾರ ಪರಿಶ್ರಮದಿಂದ ಹಂತ ಹಂತವಾಗಿ ರಾಜಕೀಯದ ಓಣಿಗಳನ್ನು ಹುಡುಕದೆ ಛಲದಿಂದ ಏಣಿ ಹತ್ತಿದವರು. ಪಂಚಾಯ್ತಿಯಿಂದ ಹಿಡಿದು ಸಹಕಾರ ಸಂಘಗಳು, ಜಿಲ್ಲಾ ಸಹಕಾರ ಬ್ಯಾಂಕ್, ರೆಗ್ಯುಲೇಟೆಡ್ ಮಾರ್ಕೆಟ್, ಕರ್ನಾಟಕ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್, ವಯಸ್ಕರ ಶಿಕ್ಷಣ ಮಂಡಳಿ, ರೇಷ್ಮೆ ಮಂಡಳಿ ಹೀಗೆ ಹಲವು ಸಂಸ್ಥೆಗಳಲ್ಲಿ ದುಡಿದ ಅನುಭವದ ಮೂಲಕ ಸಹಕಾರೀ ಸೇವೆಯ ಪರಂಪರೆಯನ್ನು ರಾಜಕೀಯದ ಒರೆಗಲ್ಲಿಗೆ ಹಚ್ಚಿದವರು. ೧೯೬೭ರಲ್ಲಿ ಶಾಸಕ
ರಾಗಿ ಆಯ್ಕೆಯಾದ ರಾಮಣ್ಣನವರ ಆದ್ಯತೆಯ ವಿಷಯಗಳು ಒಂದೆರಡಲ್ಲ.

ಬರಪರಿಹಾರಕ್ಕೆ ಶಾಶ್ವತ ಮಾರ್ಗೋಪಾಯಗಳು, ಶಿಕ್ಷಣ ವ್ಯವಸ್ಥೆಯ ಸುಧಾರಣೆ, ಸಾಮಾನ್ಯರಿಗೆ ಆಹಾರ, ವಸತಿ,ಆರೋಗ್ಯ ಈ ಮೂರೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ಪ್ರಾಮಾಣಿಕ ಕಾಳಜಿ, ರೈತರ ಹಿತಾಸಕ್ತಿ ಇವೆಲ್ಲಾ ಒಬ್ಬ ಜನಪ್ರತಿನಿಧಿ ಯಾಗಿ ರಾಮಣ್ಣನವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ.

ರಾಮಣ್ಣನವರ ಒಟ್ಟಾರೆ ಬದುಕನ್ನು ಮೂರು ರೀತಿಯಲ್ಲಿ ವಿಶ್ಲೇಷಿಸಬಹುದು. ಒಂದು ರಾಜಕೀಯ ಬದ್ದತೆ, ಎರಡು ಪ್ರಜಾ ಸತ್ತಾತ್ಮಕ ಸಾಮಾಜಿಕ ಕಾಳಜಿ ಮತ್ತು ವೈಯಕ್ತಿಕ ಆದರ್ಶಗಳು. ರಾಜಕೀಯ ಎನ್ನುವುದು ಲಕ್ಷ ಲಕ್ಷ ಹಣ ಹೂಡಿ ಕೋಟಿಕೋಟಿ ಹಣ ಬಾಚುವ ದಂದೆಯಾಗಿರುವ ಈ ಹೊತ್ತಿನಲ್ಲಿ ರಾಮಣ್ಣನವರ ಪರಿಶುದ್ಧ ರಾಜಕೀಯ ಜೀವನ ಅತ್ಯಂತ ಮಹತ್ವದ್ದು ಎನಿಸುತ್ತದೆ, ಇವತ್ತು ರಾಜಕೀಯ, ಸೇವೆ ಎಂಬುದೆಲ್ಲಾ ಆತ್ಮಸಾಕ್ಷಿಗಿಂತ ಹೆಚ್ಚಾಗಿ ಒಂದು ಪಾಲಿಸಿ ಮ್ಯಾಟರ್, ರಾಜಕೀಯ ಅಜೆಂಡಾ, ಪಾರ್ಟಿ ಪ್ರನಾಳಿಕೆ ಎನಿಸುವಷ್ಟರ ಮಟ್ಟಿಗೆ ಹತಾಶ ಸ್ಥಿತಿ ತಲುಪಿದೆ.

ಶಾಸಕರ ಅನುದಾನದಲ್ಲೋ, ಕಾಲ ಕಾಲಕ್ಕೆ ರೂಪುಗೊಳ್ಳುವ ಹಣಕಾಸು ಯೋಜನೆಗಳಿಂದಲೋ ಒಂದಿಷ್ಟು ಕಾಮಗಾರಿಗಳಿಗೆ ಹಣ ಒದಗಿಯೇ ಒದಗುತ್ತದೆ. ಇದಕ್ಕೆ ರಾಜಕಾರಣಿಗಳು ಹೆಚ್ಚಿನ ಪ್ರಯತ್ನವನ್ನೇನೂ ಹಾಕಬೇಕಿಲ್ಲ. ಆದರೆ ಇಂತಹ ಜನಪರ ಕಾರ್ಯಕ್ರಮಗಳ ಮೂಲಕ ಕ್ಷೇತ್ರ ಬೆಳೆದಂತೆ ರಾಜಕೀಯ ವ್ಯಕ್ತಿಯಾದವನು ಹೇಗೆ ಬೌದ್ಧಿಕವಾಗಿ, ಸಾಮಾಜಿಕವಾಗಿ ಬೆಳೆದ ಎನ್ನುವುದೂ ಮುಖ್ಯವಾಗುತ್ತದೆ. ಅವನ ವ್ಯಕ್ತಿತ್ವ, ಘನತೆಯೊಂದಿಗೇ ಕ್ಷೇತ್ರದ ಅಭಿವೃದ್ಧಿಯ ಗುಣಮಟ್ಟವೂ ಎತ್ತರೆತ್ತರಕ್ಕೆ ಬೆಳೆಯುತ್ತದೆ.

ಇದೊಂದು ಭೌತಿಕ ಅಭಿವೃದ್ದಿ ಎನ್ನುವುದಕ್ಕಿಂತ ಬೌದ್ಧಿಕ, ಸಾಂಸ್ಕೃತಿಕ, ಜನಾಂಗೀಯ ಅಭಿವೃದ್ದಿ. ಭೌಗೋಳಿಕ ಅಂಶಗಳ ಅಭಿವೃದ್ಧಿಯ ಜೊತೆ ಜೊತೆಗೇ ಜನಜೀವನದ ಸುಧಾರಣೆಯೂ ಆಗಬೇಕು. ರಾಜಕಾರಣದಲ್ಲಿ ಇಂತಹ ಅಭಿವೃದ್ಧಿಗಳನ್ನು ಕಾಣುವುದು ತುಂಬಾ ಅಪರೂಪ. ಆದರೆ ಸುಮಾರು ೫೦ ವರ್ಷಗಳ ಹಿಂದೆ ರಾಮಣ್ಣನವರ ಕಾಲದಲ್ಲಿ ಇಂತಹ ಒಂದು ಅಭಿವೃದ್ಧಿಯನ್ನು ನಮ್ಮೂರು ಕಂಡಿತ್ತು ಎನ್ನುವುದೊಂದು ಅತ್ಯಂತ ಹೆಮ್ಮೆಯ ಸಂಗತಿ. ಕ್ಷೇತ್ರದ ಅಭಿವೃದ್ಧಿ ಎಷ್ಟಾಗುತ್ತದೋ ಬಿಡುತ್ತದೆ, ಆದರೆ ರಾಜಕೀಯ ವ್ಯಕ್ತಿಗಳ ಅಭಿವೃದ್ಧಿಯಂತೂ ಖಂಡಿತಾ ಆಗಿರುತ್ತದೆ.

ಐದು ವರ್ಷಗಳಲ್ಲಿ ರಾಜಕಾರಣಿಗಳ ಆಸ್ತಿ ಹತ್ತಾರು ಪಟ್ಟು ಹೆಚ್ಚಾಗಿರುತ್ತದೆ. ನಾಲ್ಕಾರು ಕಾರುಗಳು ಬಂದಿರುತ್ತವೆ. ಹತ್ತಾರು
ಬಾರ್‌ಗಳು ಅವರ ಸಂಬಂಧಿಕರ ಹೆಸರಲ್ಲಿರುತ್ತವೆ. ಹೊಸ ಮನೆ, ಫಾರಂ ಹೌಸ್‌ಗಳು, ಮನೆ ತುಂಬಾ ಚಿನ್ನ, ಬೇನಾಮಿ ಆಸ್ತಿ ಇವೆಲ್ಲಾ ಇಂದಿನ ರಾಜಕಾರಣದ ಅಪಸವ್ಯಗಳು. ಆದರೆ ರಾಮಣ್ಣನವರು ಮನೆ ಕಟ್ಟಲಿಲ್ಲ, ಆಸ್ತಿ ಮಾಡಲಿಲ್ಲ, ಮನೆಯವರಿಗೆ ತಮ್ಮ ಶಿಫಾರಸ್ಸು ಉಪಯೋಗಿಸಿ ಕೆಲಸ ಕೊಡಿಸಲಿಲ್ಲ, ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದೂ ಮುಟ್ಟದಿರು, ಓ ಅನಂತವಾಗಿರು ಎಂಬ ಕುವೆಂಪು ಅವರ ಕವಿವಾಣಿಗೆ ತಕ್ಕಂತೆ ತಮ್ಮ ಧೀಮಂತಿಕೆ, ಸರಳತೆಯಿಂದ ಮೌಲ್ಯಕಟ್ಟ ಲಾಗದ ಅನಂತದ ಶ್ರೇಷ್ಠತೆಯನ್ನು ಪಡೆದರು.

ಅಧಿಕಾರಕ್ಕೆ ಅಂಟಿ ಕೂರದೇ ಅದನ್ನೊಂದು ವೇಷವನ್ನಾಗಿ ತೊಟ್ಟು ತಮ್ಮ ಪಾತ್ರ ಮುಗಿದ ನಂತರ ಸೀದಾ ಕಳಚಿಟ್ಟು ನಿರುಮ್ಮಳ ರಾಗಿ ಹೊರಟು ಹೋದರು. ಶಾಸಕರಾದಾಗ ಅವರು ಅಂದಿನ ಕಾಲಕ್ಕೇ ಒಬ್ಬ ವ್ಯಕ್ತಿ ಒಂದು ಹುದ್ದೆ ತತ್ವ ವನ್ನು ಸ್ವಯಂ ಪ್ರೇರಿತ ರಾಗಿ ಅಳವಡಿಸಿಕೊಂಡು ಡಿಸಿಸಿ ಬ್ಯಾಂಕ್ ಹಾಗೂ ಜಿಲ್ಲಾ ಸಗಟು ವ್ಯಾಪಾರಿ ಸಹಕಾರಿ ಬ್ಯಾಂಕ್‌ಗಳ ಅಧ್ಯಕ್ಷ, ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟದ್ದೇ ಇದಕ್ಕೊಂದು ಉದಾಹರಣೆ. ಶಾಂತವೇರಿ ಗೋಪಾಲಗೌಡ, ರಾಮಕೃಷ್ಣ ಹೆಗಡೆ, ನಿಜ ಲಿಂಗಪ್ಪ ನವರ ಸಾಲಿಗೆ ರಾಮಣ್ಣ ನವರೂ ಈ ಕಾರಣಗಳಿಗಾಗಿ ಖಂಡಿತಾ ಸೇರುತ್ತಾರೆ.

ಇನ್ನು ಪ್ರಜಾಸತ್ತಾತ್ಮಕ ಸಾಮಾಜಿಕ ಕಾಳಜಿಯ ವಿಷಯಕ್ಕೆ ಬಂದರೆ ರಾಮಣ್ಣನವರು ಶಾಸಕರಾಗುವ ಮುಂಚೆ ಮತ್ತು ಶಾಸಕ ರಾದ ನಂತರದ ಎರಡೂ ಅವಧಿಯಲ್ಲಿ ನಿರಂತರ ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡು ಬಂದಿದ್ದರು. ೧೯೬೫ರಲ್ಲಿ ತೀವ್ರ ಬರ ಕಾಣಿಸಿ ಕೊಂಡಾಗ ರಾಮಣ್ಣನವರು ಜಿಲ್ಲಾ ಸಗಟು ವ್ಯಾಪಾರಿ ಸಹಕಾರ ಬ್ಯಾಂಕ್ ಮುಖಾಂತರ ಇಡೀ ಜಿಲ್ಲೆಯಲ್ಲಿ ಜನರಿಗೆ ಆಹಾರ ವಿತರಿಸುವ ಒಂದು ಹೊಸ ವ್ಯವಸ್ಥೆಯನ್ನೇ ರೂಪಿಸಿದ್ದರು.

ಶಾಸನ ಸಭೆ ಗಳಲ್ಲಿ ಅವರು ಪಡಿತರ ಅಕ್ಕಿಯ ಪ್ರಮಾಣ ಕಡಿಮೆ ಯಾಗುತ್ತಿರುವ ಬಗ್ಗೆ ಪದೇ ಪದೇ ಸರ್ಕಾರದ ಗಮನ ಸೆಳೆದಿ ದ್ದರು. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ದರ ಏರಿಸಿರುವ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಿಗುತ್ತಿದ್ದ ಶಿಕ್ಷಣದಲ್ಲಿನ ತಾರತಮ್ಯ ನೀತಿಯನ್ನು ಕಟುವಾಗಿ ಟೀಕಿಸಿ ಅಂದೇ ಗ್ರಾಮೀಣ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ದರು.

ಇದೆಲ್ಲಾ ಪ್ರಜಾಸತ್ತಾತ್ಮಕ ಕಳಕಳಿ ಎನ್ನಲು ಕಾರಣವೆಂದರೆ ರಾಮಣ್ಣನವರು ಅಧಿಕಾರ ವಿಕೇಂದ್ರೀಕರಣದ ಪರ ಇದ್ದರು. ಸಣ್ಣ ಸಣ್ಣ ಹಂತಗಳಲ್ಲೂ ಅವರು ಪ್ರಜಾಸತ್ತಾತ್ಮಕತೆಯ ತತ್ವ, ಸಿದ್ಧಾಂತಗಳಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದರು. ಹಾಗಾಗಿಯೇ ಡಿಸಿಸಿ ಬ್ಯಾಂಕ್‌ಗೆ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಿಸಲು ಹೊರಟಾಗ ಅವರು ಅದನ್ನು ವಿರೋಧಿಸಿ ಚುನಾಯಿತ ಆಡಳಿತ ಮಂಡಳಿಯನ್ನೇ ಉಳಿಸಿದರು. ಸರ್ಕಾರಕ್ಕೆ ಸಮಾನಾಂತರ ಕೆಲಸ ಮಾಡುತ್ತಿದ್ದ ಮಠ ಮಂದಿರಗಳ ಪ್ರಾಮಾಣಿಕ ಖಾಸಗಿ
ಶಾಲೆಗಳ ಬೆನ್ನಿಗೆ ನಿಂತರು.

ಇನ್ನು ವ್ಯಕ್ತಿಯಾಗಿ ರಾಮಣ್ಣನವರು ಗಾಂಧೀಜಿಯವರ ಪಡಿಯಚ್ಚೇ! ವೇಷ, ಭೂಷಣಗಳಿಂದ ಹಿಡಿದು ನಡೆ ನುಡಿಯಲ್ಲೂ ಅವರು ಪಕ್ಕಾ ಗಾಂಧಿ ಅನುಯಾಯಿ. ಮಾಯಸಂದ್ರದ ಅವರ ಮನೆ ಒಂದು ರೀತಿಯಲ್ಲಿ ಸಬರಮತಿ ಆಶ್ರಮವೇ! ಅಲ್ಲಿ ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ ನೆಲೆ ನಿಂತಿದ್ದಳು. ದಿನದ ೨೪ ಗಂಟೆಯೂ ಅಲ್ಲಿ ಸೇವಾ ಚಟುವಟಿಕೆಗಳು, ದಾಸೋಹ ನಡೆಯುತ್ತಿತ್ತು. ಕಷ್ಟ ಸುಖ ಹೇಳಿಕೊಳ್ಳಲು ಬಂದವರು, ಅಽಕಾರಿಗಳು ಹೀಗೇ ರೌಂಡ್ ದ ಕ್ಲಾಕ್ ರಾಮಣ್ಣನವರು ಜನರ ಕಷ್ಟಗಳಿಗೆ ಕಿವಿಯಾಗುತ್ತಿ
ದ್ದರು.

ರೈತರ ಹೆಗಲ ಮೇಲೆ ಕೈ ಹಾಕಿಕೊಂಡು ಆತ್ಮೀಯವಾಗಿ ಮಾತಾಡಿಸಿ ಅಧಿಕಾರಿಗಳನ್ನು ಕರೆಸಿ ಅವರ ಕೆಲಸ ಮಾಡಿಸಿ ಕೊಡುತ್ತಿದ್ದರು. ಇಷ್ಟೇ ಅಲ್ಲ, ವ್ಯಾಸಂಗಕ್ಕೆ ಕಷ್ಟವಿದ್ದ ಹಲವು ಬಡ ಮಕ್ಕಳಿಗೂ ಇವರ ಮನೆಯೇ ವಿದ್ಯಾರ್ಥಿನಿಲಯ. ರಾತ್ರಿ ವೇಳೆ ಅಕಸ್ಮಾತ್ ಬಸ್ ತಪ್ಪಿಹೋದ ಪ್ರಯಾಣಿಕರಿಗೆ ಚಿಂತೆಯೇ ಇರಲಿಲ್ಲ, ತಮ್ಮೂರ ಶಾಸಕರ ಮನೆಯೇ ಅವರ ತಂಗುದಾಣ! ಬೆಳಿಗ್ಗೆ ಪಕ್ಷದ ಕಾರ್ಯಕರ್ತರು, ಹಿಂಬಾಲಕರಿಂದ ಗಿಜಗುಡುತ್ತಾ ಸಂಜೆ ಬೀಗ ಜಡಿದುಕೊಳ್ಳುವ ಈಗಿನ ರಾಜಕೀಯದವರ ಮನೆಗಳಲ್ಲಿ? ರಾಮಣ್ಣನವರ ಮನೆ ಯೆಲ್ಲಿ? ಹೋಲಿಸಲಾದರೂ ಸಾಧ್ಯವಾ? ರಾಮಣ್ಣ ನವರ ಸರಳತೆ, ಶ್ರೇಷ್ಠತೆ, ಜನೋಪಕಾರಿ ಗುಣ ಕಾಲದೇಶಗಳ ಹಂಗಿಲ್ಲದ್ದು, ಯಾವುದಕ್ಕೂ ಸಾಟಿ ಇಲ್ಲದ್ದು.

ರಾಮಣ್ಣನವರು ಹುಟ್ಟಿ ೧೦೦ ವರ್ಷಗಳಾಯಿತು. ಈ ಸವಿನೆನಪಿಗೆ ಅವರ ಹುಟ್ಟೂರು ಮಾಯಸಂದ್ರದಲ್ಲಿ ಒಂದು ಜನ್ಮಶತಾಬ್ಧಿ ಸಮಾರಂಭವನ್ನು ಅವರ ಅಭಿಮಾನಿಗಳು ಅ.೧ರಂದು ಭಾನುವಾರ ಹಮ್ಮಿಕೊಂಡಿದ್ದಾರೆ. ರಾಜಕೀಯ ಕುಲಗೆಟ್ಟು ಹೋಗಿದೆ ಎಂದು ಸಜ್ಜನರು ದೂರವಿರುವ ಕಾಲದಲ್ಲೂ ಸಾಮಾನ್ಯರೂ ರಾಜಕೀಯ ಕ್ಷೇತ್ರದಲ್ಲಿ ಸಾರ್ಥಕ ಕೆಲಸ ಮಾಡಬಹುದು ಎಂಬ ಆಶಾಭಾವನೆಗೆ ಸ್ಪೂರ್ತಿಯಾಗಿದ್ದಾರೆ.

ಅಧಿಕಾರವಿಲ್ಲದೆಯೂ ಜನಸೇವೆ ಮಾಡಬಹುದಾದ ಹಲವು ಕ್ಷೇತ್ರಗಳನ್ನು,ಮಾದರಿಗಳನ್ನು ಗುರುತಿಸಿಕೊಟ್ಟು ಹೋಗಿದ್ದಾರೆ. ಅಽಕಾರ, ಸ್ಥಾನ ಎಲ್ಲವನ್ನೂ ಕಳಚಿಕೊಂಡು ಸರಳ ಜೀವನಶೈಲಿಯಿಂದ ಒಬ್ಬ ವ್ಯಕ್ತಿಯಾಗಿ ಹೇಗೆ ಧನ್ಯತೆ, ಸಾರ್ಥಕತೆಯನ್ನು ಪಡೆಯಬಹುದು ಎಂಬುದಕ್ಕೂ ಅನುಕರಣೀಯ ಮಾದರಿಯಾಗಿದ್ದಾರೆ. ಒಂದು ಶತಮಾನ ಹಲವು ಮೈಲಿಗಲ್ಲುಗಳಿಗೆ ಸಾಕ್ಷಿ ಯಾಗುತ್ತದೆ.

ರಾಮಣ್ಣನವರಂತಹ ಒಂದು ಮೈಲಿಗಲ್ಲು ಸಾಧನೆಯ ಶಿಲ್ಪವಾಗಿ ಜನರ ಮನಸ್ಸುಗಳಲ್ಲಿ ಅರಳಿ ನಿಲ್ಲುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಮೌಲ್ಯಗಳನ್ನು ವರ್ಗಾಯಿಸುವ ವಂಶವಾಹಿನಿಯಲ್ಲದ ಸಾಮಾಜಿಕ ತಂತಾಗಿ ಉಳಿಯುತ್ತದೆ.