ಬೆಂಗಳೂರು: ಇನ್ಸ್ಟಾಗ್ರಾಮ್ನಲ್ಲಿ ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಅವಹೇಳನ ಕಾರಿ ಬರಹ ಪ್ರಕಟಿಸಿದ್ದ ಯುವಕನನ್ನು ಕೊಡಿಗೇಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ನಿಲೋಯ್ ಮಂಡಲ್ ಬಂಧಿತ ಆರೋಪಿ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ “ನೇಟಿವ್ ಬೆಂಗ ಳೂರಿಯನ್ಸ್” ಎಂಬ ಪೇಜ್ ಒಂದರಲ್ಲಿ ‘ಕರ್ನಾಟಕದ ಕುರಿತು ಕೆಟ್ಟದಾಗಿ ಅವಹೇಳನ ಮಾಡಿದ್ದಲ್ಲದೇ, ಉತ್ತರ ಭಾರತದವರು ಬೆಂಗಳೂರಿನಿಂದ ಹೊರಟು ಹೋದರೆ ಬೆಂಗಳೂರಿಗರು ಕಾಡು ಜನರಿಗೆ ಸಮವಾಗುತ್ತಾರೆ’ ಎಂದು ಅತಿರೇಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದ. ಅಲ್ಲದೇ ಕನ್ನಡವನ್ನು ಅತ್ಯಂತ ಕೆಟ್ಟ ಭಾಷೆ ಎಂದು ಅವಹೇಳನ ಮಾಡಿದ್ದ. ಈ ಬಗ್ಗೆ ಅನೇಕ ಕನ್ನಡಪರ ಸಂಘಟನೆಗಳು, ಕ್ರಮ ಕೈಗೊಳ್ಳುವಂತೆ, ಕಂಪನಿ ಹಾಗೂ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಯ ಕೀಳು ಅಭಿಪ್ರಾಯದ ವಿರುದ್ಧ ವಿಷಾದ ವ್ಯಕ್ತಪಡಿಸಿದ್ದ ಕಂಪನಿ ಆತನ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿತ್ತು. ಮತ್ತೊಂದೆಡೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಕೊಡಿಗೆಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.